ಬರುವ ಕೋಪದಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಪ್ರಶ್ನೆಯೊಂದನ್ನು ಉತ್ತರಿಸುತ್ತಾ ಸದ್ಗುರುಗಳು ಸ್ಪಷ್ಟಪಡಿಸುತ್ತಾರೆ - ಕೋಪವೆಂಬುದು ಎಲ್ಲೋ ಕೂತಿರುವ ಒಂದು ವಸ್ತುವಲ್ಲ ನಾವು ಅದನ್ನು ತಪ್ಪಿಸಲು. ಕೋಪವು ಒಂದು ಸಮಸ್ಯೆಯಾಗಿರುವುದಕ್ಕೆ ಮೂಲಭೂತ ಕಾರಣವೇನೆಂದರೆ ನಮ್ಮ ಮನಸ್ಸು ನಮ್ಮ ಆದೇಶಗಳನ್ನು ಸ್ವೀಕರಿಸುತ್ತಿಲ್ಲ. ನಾವು ಸರಿಪಡಿಸಬೇಕಾದುದು ಅದನ್ನು ಎಂದು ನಮಗೆ ತಿಳಿ ಹೇಳುತ್ತಾರೆ.

Baro kopadinda tappisikolluvudu hege?

ಲಿಪ್ಯಂತರ:

Participant: ಸ್ವಾಮೀಜಿ, ಜೀವನ ಅಂದ್ರೆ ಏನು? ಕೋಪ ಬಂದಾಗ ಅದ್ರಿಂದ ತಪ್ಸ್-ಕೊಳ್ಳೋದ್ ಹೇಗೆ?

Sadhguru: ಕ್ಷಮಿಸಿ, ಏನ್ಕೇಳಿದ್ರಿ?

Participant: ಜೀವನ ಅಂದ್ರೆ ಏನು?

Sadhguru: ಜೀವನ ಅಂದ್ರೆ ಏನು?

Participant: ಹೌದು!

Sadhguru: ಓಹ್ (ನಗು) ಮತ್ತೆ, ಎರಡನೇ ಪ್ರಶ್ನೆ ಏನು?

Participant: ಕೋಪದಿಂದ ತಪ್ಸ್-ಕೊಳ್ಳೋದ್ ಹೇಗೆ?

ಕೋಪದಿಂದ ತಪ್ಸ್-ಕೊಳ್ಳೋದ್ ಹೇಗೆ? ನೋಡಿ. ನೀವು ಕೊಯಮತ್ತೂರ್ ರಸ್ತೆಗಳಲ್ಲಿ ಗಾಡಿ ಡ್ರೈವ್ ಮಾಡ್ತಿದೀರಿ ಅಂದ್ರೆ, ಹೇಗ್ ಹೇಗೋ ಹಾಕಿರೋ ಡಿವೈಡರ್ಗಳ್ನ ತಪ್ಪಿಸ್ಬೇಕು; ಕೆಟ್ಟ ಡ್ರೈವರ್ಗಳನ್ ತಪ್ಪಿಸ್ಬೇಕು; ಕುಡಿದ್ ಅಮಲ್ನಲ್ಲಿ ರಸ್ತೆ ದಾಟ್ತಿರೋರನ್ನ ತಪ್ಪಿಸ್ಬೇಕು. ರಸ್ತೆ ದಾಟ್ತಿರೋ ಮಕ್ಕಳನ್ನ ತಪ್ಪಿಸ್ಬೇಕು. ಇಂಥದ್ ಎಲ್ಲದ್ರಿಂದ ತಪ್ಪಿಸ್ಕೋಬೇಕು.

ಆದ್ರೆ ನೀವು ಕೊಯಮತ್ತೂರ್ ರಸ್ತೇಲಿ ಗಾಡಿ ಓಡಿಸ್ತಿರೋವಾಗ, ಚಂದ್ರನ್ನ ತಪ್ಪಿಸ್ಬೇಕಾ? ನಿಮ್ಮನ್ ಕೇಳ್ತಾ ಇದೀನಿ. ಚಂದ್ರನ್ನ ತಪ್ಪಿಸ್ಬೇಕಾ? ಇಲ್ಲ. ಯಾಕಂದ್ರೆ ಚಂದ್ರ ರಸ್ತೆ ಮೇಲೆ ಇಲ್ಲ. ಹೌದಲ್ವಾ. ಅದೇ ತರಹ, ನಿಮಗೀಗ ಕೋಪ ಬಂದಿದ್ಯಾ? ಇಲ್ಲ. ಹಾಗಾದ್ರೆ ಅದ್ರಿಂದ ಯಾಕೆ ತಪ್ಸ್-ಕೋಬೇಕು? ತಪ್ಸ್-ಕೋಬೇಕಾಗಿಲ್ಲ. ವಿಷ್ಯ ಏನಂದ್ರೆ ನೀವು ಕೋಪಾನ ಒಂದು ವಸ್ತುವನ್ನಾಗಿ ನೋಡ್ತಿದೀರ. ಕೋಪ ಒಂದ್ ವಸ್ತುವಲ್ಲ. ನೀವು ಕೋಪಗೊಳ್ತೀರಿ. ನೀವು ಕೋಪಗೊಳ್ತೀರಿ. ಕೋಪ ಎಲ್ಲೋ ಕೂತಿಲ್ಲ; ನೀವ್ ಅದಕ್ ಹೋಗಿ ಡಿಕ್ಕಿ ಹೊಡಿಯೋದಿಕ್ಕೆ. ಅಂಥದ್ದೇನೂ ಇಲ್ಲ. ನೀವು ಕೋಪಗೊಳ್ತೀರಿ. ಕೋಪ ಮಾಡ್ಕೊಂಡಾಗ ನಿಮಗೆ ಅದು ಹಿತ ಅನ್ಸುತ್ತ ಅಹಿತ ಅನ್ಸುತ್ತ? ಅಹಿತ ಅನ್ಸುತ್ತೆ. ಬೇರೆಯವರಿಗ್ ಖಂಡಿತವಾಗ್ಲೂ ಹಿತವಾಗಿರಲ್ಲ. ನಿಮಗೂ ಅದು ಹಿತವಾಗಿರಲ್ಲ. ಇವತ್ತಿನ ವೈದ್ಯಕೀಯ ವಿಜ್ಞಾನ ಸಾಬೀತು ಮಾಡಿದೆ, ನೀವು ಕೋಪಗೊಂಡಾಗ ನಿಮಗ್ ನೀವೇ ವಿಷ ಹಾಕ್ಕೊತಿದೀರಾ ಅಂತ. ನಮ್ಗಳಿಗೆ ಇದು ಗೊತ್ತೇ ಇತ್ತು. ಈಗ ರಾಸಾಯನಿಕ ಪರೀಕ್ಷೆಗಳು ತೋರ್ಸ್ತಿವೆ ಕೋಪ ಮಾಡ್ಕೊಂಡಾಗ ನಿಮಗೆ ನೀವು ವಿಷ ಹಾಕ್ಕೋತೀರಾ ಅಂತ. ಶರೀರದಲ್ಲೇ ವಿಷ ಉತ್ಪತ್ತಿ ಆಗತ್ತೆ ಅಂತ, ಕೋಪಗೊಳ್ಳೋದ್ರಿಂದ.

ಆದ್ರೆ ನಿಮಗೆ ನೀವೇ ಯಾಕೆ ವಿಷ ಹಾಕ್ಕೋತೀರಾ? ಅರಿವಲ್ಲಿ ಮಾಡ್ತಿರೋ ಕೆಲಸ ಅಲ್ಲ ಅದು. ನಿಮಗೆ ನೀವೇ ಹಾನಿ ಮಾಡ್ಕೊತಿದೀರಾ; ನಿಮಗ್ ನೀವೇ ಅಹಿತವಾದ್ದನ್ನ ಮಾಡ್ಕೋತಿದೀರ. ಯಾಕಂದ್ರೆ, ನಿಮ್ಮ ಮನಸ್ಸು ನಿಮ್ಮಿಂದ ಆದೇಶ ತೊಗೊತಾ ಇಲ್ಲ. ಅಲ್ವಾ. ನಿಮ್ಮಿಂದ ಅದು ಆದೇಶ ತೊಗೋತಿಲ್ಲ. ನಿಮ್ ಮನಸ್ಸು ನೀವ್ ಹೇಳಿದ ಹಾಗೇ ಕೇಳೋದಾಗಿದ್ದಿದ್ರೆ, ನೀವು ಅದಿಕ್ಕೆ ಆನಂದವಾಗಿರು ಅಂತ ಹೇಳ್ತಿದ್ರಿ. ಅಲ್ವಾ. ಕೋಪಗೊಳ್ಳು ಅಂತ ಹೇಳ್ತಿರ್ಲಿಲ್ಲ. ಆದ್ರೆ ಈಗ ನೀವು ಶಾಂತವಾಗಿರ್ಬೇಕು ಅಂದಾಗ ಮನಸ್ಸು ಕೋಪ ಮಾಡ್ಕೋತಿದೆ. ಯಾಕಂದ್ರೆ ಅದು ನಿಮ್ಮಿಂದ ಆದೇಶ ತೊಗೋತಾ ಇಲ್ಲ. ನಿಮ್ ಮನಸ್ಸು ನಿಮ್ಮಿಂದ ಆದೇಶ ತೊಗೋತಾ ಇಲ್ಲಾ ಅಂತಾದ್ರೆ, ನೀವು ಅದಕ್ಕೆ ಇನ್ನೊಂದ್ ಸ್ವಲ್ಪ ಗಮನ ಕೊಡ್ಬೇಕು. ಅದು ನಿಮ್ಮಿಂದ ಆದೇಶಗಳನ್ನ ಯಾಕ್ ತೊಗೋತಾ ಇಲ್ಲ?

ನೀವು ಇದನ್ನ ಅರ್ಥ ಮಾಡ್ಕೊಂಡ್ರೆ ನೀವು ಕೋಪದಿಂದ ತಪ್ಪಿಸ್ಕೊಳೋ ಅಗತ್ಯ ಇಲ್ಲ. ಯಾಕಂದ್ರೆ ಕೋಪ ಅನ್ನೋದು ಅಲ್ಲೆಲ್ಲೋ ಕೂತ್ಕೊಂಡು ನಿಮ್ ಕಡೆ ಬರ್ತಾ ಇಲ್ಲ. ನೀವು ಕೋಪಗೊಳ್ತಾ ಇದೀರ. ದುಃಖಗೊಳ್ತಾ ಇದೀರ. ಸಂಕಟಗೊಳ್ತಾ ಇದೀರ. ಇದೆಲ್ಲಾ ನಿಮಗೆ ಯಾಕೆ ಆಗ್ತಿದೆ ಅಂದ್ರೆ ನೀವು ನಿಮ್ ಅಂತಕರಣವನ್ನ ನಿಮ್ ಹಿಡಿತಕ್ಕೆ ತೊಗೊಳ್ಳೋದಿಕ್ಕೆ ಏನೂ ಮಾಡಿಲ್ಲ. ಅದು ಆಕಸ್ಮಿಕವಾಗಿ ಆಗ್ತಿದೆ. Chance ನಿಂದ. ಬಾಹ್ಯ ಪರಿಸ್ಥಿತಿಗಳು ಚೆನ್ನಾಗಿದ್ರೆ ನೀವೂ ಖುಷಿಯಾಗಿರ್ತೀರ. ಬಾಹ್ಯ ಪರಿಸ್ಥಿತಿಗಳು ಚೆನ್ನಾಗಿಲ್ಲಾಂದ್ರೆ ನೀವೂ ಖುಷಿಯಾಗಿರಲ್ಲ. ಹೀಗಲ್ಲ ಮನುಷ್ಯನ ಜೀವನ ಇರಬೇಕಾದ್ದು.

ಮನುಷ್ಯನ್ ಜೀವನ ಹೇಗಿರ್ಬೇಕು ಅಂದ್ರೆ, ನಾನು ಚೆನ್ನಾಗಿದ್ರೆ ನನ್ನ ಸುತ್ತಾನೂ ಎಲ್ಲಾ ಚೆನ್ನಾಗ್ ಆಗತ್ತೆ. ಜೀವನ ಅಂದ್ರೆ ಹೀಗ್ ಇರಬೇಕು ಅಲ್ವಾ. ಆದರೆ ಇವಾಗ ನನ್ ಸುತ್ತಲಿನ ಪ್ರಪಂಚ ಹೇಗಿರುತ್ತೋ ನಾನೂ ಹಾಗೇ ಆಗ್ತಿದೀನಿ. ಇಲ್ಲ. ಮನುಷ್ಯನ ಪ್ರಜ್ಞೆ ಪರಿಸ್ಥಿತಿಗಳನ್ನ ನಿರ್ಮಿಸ್ಬೇಕು. ಆದರೆ ಈಗ ಪರಿಸ್ಥಿತಿಗಳು ಮನುಷ್ಯನ ಪ್ರಜ್ಞೆಯನ್ನ ನಿರ್ಮಿಸ್ತಿವೆ. ಇದು ಜೀವನ ರೂಪಿಸಿಕೊಳ್ಳೋ ಸರಿಯಾದ್ ರೀತಿ ಅಲ್ಲ.