ಅಸಾಧಾರಣ ವಿದ್ವತ್ತು. ಬಹುಭಾಷಾಭಿಜ್ಞತೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಭಾರತದ ಹೆಮ್ಮೆಯ ಅಧ್ಯಾತ್ಮಿಕ ಬೆಳಕೇ ಶ್ರೀ ಶಂಕರ ಭಗವತ್ಪಾದರು. ತೀರ ಚಿಕ್ಕ ವಯಸ್ಸಿನಲ್ಲಿಯೇ ಅವರು ತೋರಿದ ಜ್ಞಾನ ಮತ್ತು ಬೌದ್ಧಿಕ ಶಕ್ತಿಯಿಂದ ಅವರು ಮನುಕುಲದ ದೇದಿಪ್ಯಮಾನ ಬೆಳಕಾದರು. ಇಂಥದ್ದೊಂದು ಅಗಾಧ ದೈತ್ಯ ಪ್ರತಿಭೆಯ ಜನ್ಮವು ಹೇಗಾಯಿತು? ಆಯುಷ್ಯದ ಕೆಲವೇ ವರ್ಷಗಳಲ್ಲಿ ಭಾರತದ ಉದ್ದಗಲಕ್ಕೂ ಪಯಣಿಸಿದರು. ದಕ್ಷಿಣದ ತುದಿಯಿಂದ ಭಾರತದ ಹೃದಯಸ್ಥಾನಕ್ಕೆ ಅಲ್ಲಿಂದ ಉತ್ತರಕ್ಕೆ - ಮತ್ತು ಪೂರ್ವ ಪಶ್ಚಿಮವನ್ನೂ ಕ್ರಮಿಸಿದರು. ಈ ಶಕ್ತಿ, ಈ ಅಭಿರುಚಿ, ಈ ಜ್ಞಾನ ಎಲ್ಲಿಂದ ಬಂತು? ಒಂದು ಪ್ರಮುಖ ಮತ್ತು ಸಾಂಕೇತಿಕ ಸಾಧ್ಯತೆಯೆಂದರೆ - ಶ್ರೀ ಶಂಕರರು ಬಂದದ್ದು "ಕಾಲಡಿ" ಎಂಬ ಚಿಕ್ಕ ಊರಿನಿಂದ. "ಕಾಲಡಿ" ಯ ಅಕ್ಷರಶಃ ಅರ್ಥ- ಕಾಲ ಕೆಳಗೆ, ಪಾದದಡಿ. ನಾವು ದಕ್ಷಿಣದವರು- ಭಾರತಮಾತೆಯ ಪಾದದಡಿಯಲ್ಲಿದ್ದೇವೆ, ಮತ್ತದು ನಮಗೆ ಬಹಳಷ್ಟನ್ನು ನೀಡಿದೆ. ಬಾಗುವಿಕೆ, ನಮಸ್ಕರಿಸುವ ವಿನೀತತೆಯಿಂದಲೇ ನಾವು ಔನ್ನತ್ಯವನ್ನು ಸಾಧಿಸಬಹುದಾಗಿದೆ. ಇದೇ ನಮ್ಮ ದೇಶದ ಮತ್ತು ನಮ್ಮ ಸಂಸ್ಕೃತಿಯ ಮೂಲಭೂತ ಪ್ರಕೃತಿಯಾಗಿದೆ.

ಇದೇ ಈ ನೆಲದ, ಸಂಸ್ಖೃತಿಯ ಲಕ್ಷಣ. ಎಲ್ಲಕ್ಕೂ ತಲೆಬಾಗು, ಆ ಮೂಲಕ ಉತ್ಕರ್ಷಿಸು.

ಮಹಾಭಾರತದಲ್ಲೊಂದು ಸುಂದರವಾದ ಕತೆಯಿದೆ. ಬಹುಶಃ ನಿಮಗೂ ಅದು ತಿಳಿದಿರಬಹುದು. ಕುರುಕ್ಷೇತ್ರ ಯುದ್ಧಕ್ಕೂ ಮುನ್ನ, ಶ್ರೀಕೃಷ್ಣನ ಸಹಾಯ ಯಾಚಿಸಲು ಅರ್ಜುನ ಮತ್ತು ದುರ್ಯೋಧನರಿಬ್ಬರೂ ಹೋಗುತ್ತಾರೆ. ಮಲಗಿದ್ದ ಶ್ರೀಕೃಷ್ಣನ ತಲೆಯ ಬಳಿ ದುರ್ಯೋಧನನೂ, ಪಾದದ ಬಳಿ ಅರ್ಜುನನೂ ನಿಂತ ಆ ಕ್ಷಣವೇ ಯುದ್ಧದ ನಿರ್ಣಾಯಕ ಅಂಶವಾಗುತ್ತದೆ. ಅಂದಿನ ಮಧ್ಯಾಹ್ನ ಅರ್ಜುನನ ಶ್ರೀಕೃಷ್ಣನ ಪಾದದೆಡೆಗೆ ವಿನೀತನಾಗಿ ನಿಂತ ಆ ಬಾಗುವಿಕೆಯೆ ಯುದ್ಧದ ಗೆಲುವಿನ ಮುನ್ನುಡಿಯಾಗುತ್ತದೆ. ಇದೇ ಈ ನೆಲದ, ಸಂಸ್ಖೃತಿಯ ಲಕ್ಷಣ. ಎಲ್ಲಕ್ಕೂ ತಲೆಬಾಗು, ಆ ಮೂಲಕ ಉತ್ಕರ್ಷಿಸು.

ದುಷ್ಟತನದಿಂದ ಔನ್ನತ್ಯಕ್ಕೇರಲಾಗುವುದಿಲ್ಲ, ವಿನೀತತೆಯಿಂದ ಅದನ್ನು ಸಾಧಿಸಬಹುದಾಗಿದೆ

ಭಾರತವೆಂದರೆ- ದೈವಿಕತೆಗೆ ತಲೆಬಾಗುವುದು. ನಾವು ರೂಢಿಸಿಕೊಂಡು ಬಂದಿರುವ ಚರಣಗಳಿಗೆರಗುವ ಕ್ರಿಯೆ ನಮ್ಮ ಧಾರ್ಮಿಕತೆ, ಧರ್ಮನಿಷ್ಠೆ, ಶ್ರದ್ಧೆಯೇ ಹೊರತು ಢಾಂಭಿಕತೆಯದ್ದಲ್ಲ. ದೈವ, ಮಾನವ, ಸ್ತ್ರೀ, ಶಿಶು, ಪ್ರಾಣಿ, ಪಕ್ಷಿ, ಮರ ಅಥವಾ ಕಲ್ಲುಬಂಡೆಯೇ ಆಗಿರಲಿ, ನಾವು ಎಲ್ಲಕ್ಕೂ ತಲೆಬಾಗುವುದನ್ನು ಅರಿತಿದ್ದೇವೆ. ಬ್ರಹ್ಮ ತತ್ವದ ಕಾಲಡಿಗೆ ಎರಗುವುದರಿಂದಲೇ ನಾವು ಜ್ಞಾನಿಗಳಾದೆವು, ಔನ್ನತ್ಯಕ್ಕೇರಿದೆವು, ಮತ್ತು ಬಹುಕಾಲದ ತನಕ ವಿಶ್ವವನ್ನು ಬೆಳಗುವ ಜ್ಞಾನದ ಬೆಳಕಾದೆವು.

ಒಬ್ಬ ಜ್ಞಾನಿಗೂ ಅಜ್ಞಾನಿಗೂ ಇರುವ ವ್ಯತ್ಯಾಸವೆಂದರೆ ಜ್ಞಾನಿಯು ತನ್ನ ಮಿತಿಯ ಬಗ್ಗೆ, ಅಜ್ಞಾನದ ಬಗ್ಗೆ ಅರಿವು ಹೊಂದಿರುತ್ತಾರೆ. ಒಬ್ಬ ಅಜ್ಞಾನಿಗೆ ಆ ಅರಿವಿರುವುದಿಲ್ಲ. ನಾನು ಯಾರೆಂಬುದರ ಅಜ್ಞಾನದ ಅರಿಯುವಿಕೆಯೇ ಜ್ಞಾನಾತ್ಮಕ ತಿಳುವಳಿಕೆಯಾಗಿದೆ. ಗಿಡಮರಗಳು, ಹುಲ್ಲಿನೊಂದು ಎಸಳು, ಒಂದು ಚಿಕ್ಕ ಅಣು - ಸೃಷ್ಟಿಯ ಈ ಯಾವುದರ ಕುರಿತಾದರೂ ನಿಮಗೆ ಪೂರ್ತಿ ತಿಳುವಳಿಕೆಯಿದೆಯೇ? ಇಲ್ಲ. ನಿಮ್ಮ ಅರಿವು ಮತ್ತು ಗ್ರಹಿಕೆ, ಈ ಮಟ್ಟದಲ್ಲಿರುವಾಗ, ನಿಮ್ಮ ನಡೆ ಈ ಜಗತ್ತಿನಲ್ಲಿ ಹೇಗಿರಬೇಕು? ಮೃದುವಾಗಿ, ಒಂದಿಷ್ಟು ಸರಳವಾಗಿ, ವಿನಯಪೂರ್ವಕವಾಗಿ ಸುತ್ತಲಿನ ಎಲ್ಲವುಗಳ ಬಗ್ಗೆಯೂ ಪ್ರೀತಿ ಮತ್ತು ಗೌರವಪೂರ್ವಕವಾಗಿ, ಕೊನೆಗೆ ಪ್ರೀತಿಯಲ್ಲವಾದರೂ ಒಂದಿಷ್ಟು ಬೆರಗು, ಅಚ್ಚರಿ? ಏಕೆಂದರೆ ಸೃಷ್ಟಿಯ ಏನೊಂದನ್ನೂ ನೀವು ಒಂದು ಅಣುವಿನಷ್ಟೂ ಅರಿತಿರಲಾರಿರಿ.

ಕೇವಲ ಇಷ್ಟು ಅರಿವಿನಿಂದ ನಡೆಯಿರಿ. ನಿಮಗೇ ಅರಿಯದಂತೆ ನಿಮ್ಮ ನಡೆ ಅಧ್ಯಾತ್ಮಕತೆಯೆಡೆಗೆ ಸಾಗುವುದರಿಂದ ನೀವು ತಪ್ಪಿಸಿಕೊಳ್ಳಲಾರಿರಿ. ಯಾವ ಶಿಕ್ಷಣವೂ ಬೇಡ, ತನ್ನಷ್ಟಕ್ಕೆ ತಾನೇ ಪ್ರಕ್ರಿಯೆಯಾಗುವುದು. ಹಾಗಾಗಿಯೇ ಪೌರ್ವಾತ್ಯ ಸಂಸ್ಕೃತಿಯಲ್ಲಿ ಯಾವಾಗಲೂ ನೀವು ಕಂಡದ್ದಕ್ಕೆಲ್ಲಾ ಕೈ ಮುಗಿಯುವಿರಿ, ತಲೆಬಾಗುವಿರಿ. ಬಂಡೆಯಾಗಿರಬಹುದು, ಪ್ರಾಣಿಯಾಗಿರಬಹುದು, ಮನುಷ್ಯನಾಗಿರಬಹುದು. ನಿಮಗೆದುರಾಗುವ ಈ ಭೂಮಿಯ ಎಲ್ಲದರೆಡೆಗೂ, ಸೇವಿಸುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ, ಎದುರಾಗುವ ಪ್ರತಿ ವ್ಯಕ್ತಿ, ನಿಮ್ಮೊಂದಿಗೆ ಸಂಬಂಧವೇರ್ಪಡುವ ಎಲ್ಲದರೊಂದಿಗೂ , ನಿಮ್ಮ ಮನಸ್ಸು ಮತ್ತು ಶರೀರದಿಂದ, ಒಂದಿಷ್ಟು ಗೌರವದಿಂದ, ಬೆರಗಿನಿಂದ, ಭಕ್ತಿಯಿಂದ ನೀವು ಗಮನಿಸಿದ್ದೇ ಆದರೆ, ನೀವು ಭಾಗಿಯಾಗುವ ಎಲ್ಲದರಲ್ಲೂ ನಿಮಗೆ ಯಶಸ್ಸು ಕಟ್ಟಿಟ್ಟದ್ದು.

ಸಾವಿರಾರು ವರ್ಷಗಳ ಹಿಂದೆಯೇ, ಶ್ರೀ ಶಂಕರರಿಗೂ ಬಹಳಷ್ಟು ಮುನ್ನವೇ, ಆದಿಯೋಗಿಯಿಂದ ಮೊದಲ್ಗೊಂಡು ಅನೇಕ ಯೋಗಿಗಳು, ಪವಾಡಪುರುಷರು, ಸಾಧುಸಂತರು, ಇದನ್ನು ಅನೇಕ ವಿಧದಲ್ಲಿ ತಿಳಿಸಿದ್ದಾರೆ. ಭಾರತದ ಉದ್ದಗಲಕ್ಕೂ ಈ ಅಸಾಧಾರಣ ಜ್ಞಾನವನ್ನು ಸರಳವಾಗಿ, ಸುಸ್ಪಷ್ಟತೆಯೊಂದಿಗೆ ತಿಳಿಸಿದ ರೀತಿಯಿಂದಲೇ ಶ್ರೀ ಶಂಕರ ಭಗವತ್ಪಾದರು ಅಸಾಮಾನ್ಯರಾಗಿ ನಿಲ್ಲುತ್ತಾರೆ. ಈ ಎಲ್ಲಾ ಜ್ಞಾನಭಂಢಾರವೂ, ಈ ಭೌದ್ಧಿಕತೆಯೂ ಕೇವಲ ನಂಬಿಕೆ ಅಥವಾ ಶ್ರದ್ಧೆಯಿಂದ ಬಂದದ್ದಲ್ಲ. ಅದು ಸಾಕ್ಷಾತ್ಕರಿಸಿಕೊಂಡದ್ದು, ಸಿದ್ಧಿಸಿಕೊಂಡದ್ದು ಎನ್ನುವ ಅಂಶ ಇಂದಿನ ಜಗತ್ತಿಗೆ ಮಹತ್ವದ್ದಾಗುತ್ತದೆ. ಮೂಲಭೂತ ಮಾನವ ಸಹಜ ತರ್ಕ ಮತ್ತು ಪ್ರಕೃತ ವೈಜ್ಞಾನಿಕ ಸಂಶೋಧನೆಗಳೊಂದಿಗೆ ಸಮೀಕರಣದ ಹೊರತೂ ಆಧ್ಯಾತ್ಮಿಕ ನಡೆಯನ್ನು ಜನರು ಒಪ್ಪಲಾರರು. (ಪ್ರಶ್ನಿಸಿಯಾರು). ಮುಂದಿನ ಜನಾಂಗ ಅತಾರ್ಕಿಕ ಹಾಗೂ ಅವೈಜ್ಞಾನಿಕವಾದುದೆಲ್ಲವನ್ನೂ ನಿರಾಕರಿಸುವುದು ಸಹಜವೇ ಆಗಿದೆ.

ರಾಷ್ಟ್ರದ ಸಂಪತ್ತು. ಭವಿಷ್ಯದ ಭಾಗ್ಯದ ಬೆಳಕು

ಈ ನಿಟ್ಟಿನಲ್ಲಿ, ಶ್ರೀ ಶಂಕರರು ಇಂದಿಗೆ ಬಹಳ ಪ್ರಸ್ತುತರಾಗುತ್ತಾರೆ. ಅವರು ಹೇಳಿದುದರ ಕುರಿತು ಒಂದಷ್ಟು ತಪ್ಪು ಗ್ರಹಿಕೆಯಾಗಿದೆ. ಆ ತಪ್ಪು ತಿಳುವಳಿಕೆಯನ್ನು ನಿವಾರಿಸುವುದು ಶಂಕರರೆಡೆಗಿನ ನಮ್ಮ ಜವಾಬ್ದಾರಿಯೆಂದುಕೊಂಡಿದ್ದೇವೆ. ಅನೇಕರು ಹೇಳುತ್ತಾರೆ, "ಇದೇನು ಶಂಕರರು ಎಲ್ಲಾ ಮಾಯೆಎನ್ನುತ್ತಾರಲ್ಲ" ಎಂದು. ಮಾಯೆಎಂದರೆ ಅಸ್ತಿತ್ವದಲ್ಲಿಯೇ ಇಲ್ಲ ಎಂಬ ಅವರ ಗ್ರಹಿಕೆ ನಿಜವಲ್ಲ. ಶಂಕರರ ಮಾಯೆಎಂಬ ಪದದ ಅರ್ಥ ಅಸ್ತಿತ್ವದಲ್ಲಿಲ್ಲ ಎಂದಲ್ಲ. ಮಾಯೆಎಂದರೆ ಭ್ರಮೆ, ಅಂದರೆ ನೀವದನ್ನು ಇರುವಂತೆಯೆ ನೋಡುತ್ತಿಲ್ಲ ಎಂದರ್ಥ. ಇದೀಗ ನೀವು ನಿಮ್ಮ ಶರೀರವನ್ನು ನೋಡುತ್ತಿರುವಿರಿ. ಆದರೆ ನೀವು ಸೇವಿಸುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಇವೆಲ್ಲವೂ ನಿಮ್ಮ ಶರೀರದ ಪ್ರತಿಕಣಕಣದಲ್ಲೂ ದಿನದಿನವೂ ಬದಲಾವಣೆಗಳನ್ನು ತರುತ್ತವೆ. ಪ್ರತಿ ಕೋಶಗಳೂ ಅದರ ಪ್ರತ್ಯೇಕ ಲಕ್ಷಣಕ್ಕನುಗುಣವಾಗಿ ಕೆಲವು ದಿನಗಳಲ್ಲಿಯೋ, ವರ್ಷಗಳ ಅಂತರಲ್ಲಿಯೋ ಪುನರ್ನಿರ್ಮಾಣಗೊಳ್ಳುತ್ತವೆ. ಇದರರ್ಥ ಕ್ಷಣಕ್ಷಣಕ್ಕೂ ನಿಮ್ಮ ಶರೀರವು ನವ್ಯತೆಗೊಳಪಡುತ್ತದೆ. ಆದರೆ ನಿಮ್ಮ ಅನುಭವಕ್ಕೆ ಇದು ಬಾರದೆ ಅದೇ ಶರೀರವೆಂದು ಅನಿಸುತ್ತದೆ. ಇದೇ ಮಾಯೆ’.

ಈ ಸಂಸ್ಕೃತಿಯನ್ನೇ, ಈ ಮಹತ್ತನ್ನೇ ನಾವೀಗ ಉಳಿಸಬೇಕಾಗುತ್ತದೆ. ಇದೇ ನಮ್ಮ ಅಂತಃಶ್ಶಕ್ತಿಯಾಗಿದೆ.

ಹಾಗೆಯೇ, ನೀವು ಅಸ್ತಿತ್ವವನ್ನು ಕಾಣುವ ಬಗೆ, ನಿಮ್ಮ ಪಂಚೇಂದ್ರಿಯಗಳಿಂದ ಜಗತ್ತನ್ನು ಗ್ರಹಿಸುವ ರೀತಿ ನಿಮ್ಮ ದಾರಿಯನ್ನು ತಪ್ಪಿಸಬಹುದು. ಇದೇ ಭ್ರಮೆ. ಇದು ಮರೀಚಿಕೆಯ ರೀತಿ. ನೀವೊಂದು  ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದೀರಿ.. ಕೆಲವೊಮ್ಮೆ ದೂರದಲ್ಲಿ ನೀರಿರುವಂತೆ ಕಾಣುತ್ತದೆ. ನೀವಲ್ಲಿಗೆ ತಲುಪಿದಾಗ ಖಂಡಿತವಾಗಿ ನೀರಿರುವುದಿಲ್ಲ. ಇದರರ್ಥ ಅಲ್ಲೇನೂ ಇರಲಿಲ್ಲ ಎಂದಲ್ಲ. ಬೆಳಕಿನ ವಕ್ರೀಭವನ ಕ್ರಿಯೆಯು ಅಲ್ಲೊಂದು ಭ್ರಮೆಗೆ ಕಾರಣವಾಗಿರುತ್ತದೆ. ನಮ್ಮ ಕಾಣ್ಕೆಗೆ ಗೋಚರಿಸುವ ಒಂದು ವಸ್ತು ಅಥವಾ ವಿಷಯ ಬೇರೆಯೇ ಆಗಿರಬಹುದು. ನಾನುಎಂದು ನೀವೇನನ್ನು ಗ್ರಹಿಸುವಿರೋ ಅದು ವಾಸ್ತವವಾಗಿ ಎಲ್ಲವೂ ಆಗಿರುವುದು. ಇದೇ ಮಾಯೆ’. ಯಾವುದು ನಿಮ್ಮಿಂದ ಹೊರತಾದುದು ಎಂದು ನಿಮಗೆ ಗೋಚರವಾದಂತೆ ತೋರುವುದು ವಾಸ್ತವವಾಗಿ ನೀವೇ ಆಗಿರುವುದು. ಯಾವುದನ್ನು ಎಲ್ಲವೂಎಂದುಕೊಂಡಿರುತ್ತೀರೊ ಅದೂ ವಾಸ್ತವವಲ್ಲ. ಅದನ್ನೇ ಆದಿ ಶಂಕರಾಚಾರ್ಯರು ಮಾಯೆಎಂದು ಉಲ್ಲೇಖಿಸಿದ್ದು. ಸ್ವಯಂಅರಿವಿನಿಂದ ಇಡೀ ಬ್ರಹ್ಮಾಂಡದ ಅರಿಮೆಯಾಗುವುದೆಂದೂ ಶ್ರೀ ಶಂಕರರು ಹೇಳಿದ್ದಾರೆ. ಅಂತೆಯೇ ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡೂ ಒಂದೇ ಎಂದು (ಬ್ರಹ್ಮ ಮತ್ತು ಬ್ರಹ್ಮಾಂಡವು ಒಂದೇ ಎಂಬ ಅದ್ವೈತ ತತ್ವ) ಶ್ರೀ ಶಂಕರರು ಹೇಳಿದ್ದಾರೆ. ಇಂದು, ಧೀರ್ಘ ಕಾಲದ ಹಗ್ಗಜಗ್ಗಾಟದ ನಂತರ ಸಮಸ್ತ ಬ್ರಹ್ಮಾಂಡವೂ ಮೂಲಭೂತವಾದ ಒಂದೇ ಕಣ ಅಥವಾ ಚೈತನ್ಯದಿಂದ ಸೃಷ್ಟಿಯಾಗಿದೆ ಎಂದು ಆಧುನಿಕ ಭೌತ ವಿಜ್ಞಾನವು ಹೇಳುತ್ತಿದೆ. ಯಾವುದನ್ನು ಅತ್ಯಂತ ಸ್ಪಷ್ಟತೆಗಳಿಂದ ಹಿಂದಿನ ಋಷಿಮುನಿಗಳು ಮತ್ತು ಶ್ರೀ ಶಂಕರರು ಪ್ರಚುರಪಡಿಸಿದ್ದರೋ ಅದಕ್ಕೆ ಸಮಾನಾಂತರವಾಗಿಯೇ ಆಧುನಿಕ ವಿಜ್ಞಾನವೂ ಹೊರಳಿಕೊಂಡಿದೆ.

ಇದೇ ಆಧ್ಯಾತ್ಮಿಕ ಜ್ಞಾನವೇ ಇಂದು ಗಿರಿಪರ್ವತಗಳೆಡೆಯಿಂದ ಜನಮಾನಸವನ್ನೂ ದೇಶದ ಹೃದಯವನ್ನು ತಲುಪಬೇಕಾಗಿದೆ. ಸೃಷ್ಟಿಯೆಡೆಗೆ ತಲೆಬಾಗುವ, ಈ ವಿನೀತ ಭಾವನೆಯೇ ನಮಗೆ ಬಹಳಷ್ಟನ್ನು ನೀಡಿದೆ. ಈ ಸಂಸ್ಕೃತಿಯನ್ನೇ, ಈ ಮಹತ್ತನ್ನೇ ನಾವೀಗ ಉಳಿಸಬೇಕಾಗುತ್ತದೆ. ಇದೇ ನಮ್ಮ ಅಂತಃಶ್ಶಕ್ತಿಯಾಗಿದೆ. ಇದೇ ನಮ್ಮ ನಡೆಯಾಗಿದೆ. ಇದೇ ನಮ್ಮ ವಿಶ್ವಸೃಷ್ಟಿಯ ಅರಿವಿನ ಮಾರ್ಗದ ಮುನ್ಸೂಚಿಯಾಗಿದೆ. ಇದರ ಅರಿವೇ ನಮ್ಮ ರಾಷ್ಟ್ರದ ಅತ್ಯುನ್ನತ ಸಂಪತ್ತಾಗಿದೆ.. ನಮ್ಮ ದೇಶದ ಭವ್ಯ ಭವಿತವ್ಯವಾಗಿದೆ. ಇದೊಂದು ಜ್ಞಾನದ ಅರಿವಿನಿಂದಲೇ ಇಡೀ ವಿಶ್ವವೇ ನಮ್ಮೆಡೆಗೆ ಮಾರ್ಗದರ್ಶನಕ್ಕಾಗಿ ಅರಸುವ ಕಾಲ ಬರುತ್ತದೆ.

ಶ್ರೀ ಶಂಕರರ ದರ್ಶನವನ್ನು ನಮ್ಮ ದೇಶದಲ್ಲೂ, ಜಗತ್ತಿನಲ್ಲೂ ಪುನಃ ಪ್ರಕಾಶಿಸುವಂತೆ ಮಾಡೋಣ.