ನೀವು ನಿಮ್ಮೊಳಗಿರುವ ಸ್ವರ್ಗ ಮತ್ತು ನರಕಗಳನ್ನು ನಾಶಮಾಡದೇ, ನೀವು ಸತ್ಯದ ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಸದ್ಗುರು ಹೇಳುತ್ತಾರೆ.  ಅವರು ಈ ಪ್ರಕ್ರಿಯೆಯನ್ನು ಮೊಟ್ಟೆಯೊಡೆಯುವ ಪ್ರಕ್ರಿಯೆಗೆ ಹೋಲಿಸುತ್ತಾರೆ – ಅದು ಒಡೆದಾಗ, ನೀವು ಅದರ ಒಳಗೆ ಹೋಗುವುದಿಲ್ಲ, ಆದರೆ ಏನೋ ಒಂದು ಹೊಸತು ಹೊರಬರುತ್ತದೆ.

ಸದ್ಗುರು: ಪ್ರಪಂಚದಾದ್ಯಂತ ಮಾನವ ಸಮಾಜಗಳನ್ನು ನಿಯಂತ್ರಿಸುವ ಸಲುವಾಗಿ ಸ್ವರ್ಗ ಮತ್ತು ನರಕಗಳ ಪರಿಕಲ್ಪನೆಯನ್ನು ಪ್ರಚಾರ ಮಾಡಲಾಯಿತು.  ಅವರಿಗೆ ವ್ಯಕ್ತಿಗಳನ್ನು ಅಥವಾ ನಿರ್ದಿಷ್ಟ ಜನರ ಗುಂಪನ್ನು ನಿಯಂತ್ರಸಲು ಸಾಧ್ಯವಾಗದಿದ್ದಾಗ, “ನಾನು ನಿನಗೆ ಇಲ್ಲಿ ಶಿಕ್ಷೆ ನೀಡಲು ಸಾಧ್ಯವಾಗದಿದ್ದರೆ, ಅಲ್ಲಿ ನಿನಗೆ ಶಿಕ್ಷೆ ಆಗುತ್ತದೆ. ನೀವು ಮಾಡಿದ ಒಳ್ಳೆಯ ಕೆಲಸಗಳಿಗೆ ನಾವು ಇಲ್ಲಿ ಪ್ರತಿಫಲವನ್ನು ನೀಡಲು ಸಾಧ್ಯವಾಗದಿದ್ದರೆ, ನಿಮಗೆ ಅಲ್ಲಿ ಸಿಗುತ್ತದೆ” ಎಂಬ ಉಪಾಯವನ್ನು ಸೃಷ್ಟಿಸಿದರು.

ಆದರೆ, ಸತ್ಯ ಎನ್ನುವುದು ಅಸ್ತಿತ್ವದ ಹೊರತಾಗಿದ್ದರೆ, ಅಲ್ಲಿಗೆ ಹೋಗುವುದು ಅಷ್ಟೇನೂ ಮುಖ್ಯವಾಗಿರುತ್ತಿರಲಿಲ್ಲ.  ನಾವು “ಅಸತೋಮಾ ಸದ್ಗಮಯ” ಎಂದು ಹೇಳಿದಾಗ ಅಸತ್ಯದಿಂದ ಸತ್ಯದೆಡೆಗೆ ಎಂದು ಅದರರ್ಥ.  ಇದು ನಿಜವಾಗಿಯೂ ಒಂದು ಪ್ರಯಾಣವಲ್ಲ.  “ಪ್ರಯಾಣ” ಎಂಬ ಪದವು, ಅಲ್ಲಿ ಅಂತರವಿದೆ ಎಂಬ ಭಾವನೆಯನ್ನು ನೀಡುತ್ತದೆ.  ಆದರೆ ಅಲ್ಲಿ ನೀವು ಸಾಗಬೇಕಾದ ದೂರವಿಲ್ಲ.  ಜ್ಞಾನವು ದೂರದಲ್ಲೆಲ್ಲೋ ಇಲ್ಲ, ನೀವು ತಿಳಿದುಕೊಳ್ಳಬೇಕಾದದ್ದು ಅಲ್ಲೆಲ್ಲೋ ಬೆಟ್ಟದ ಮೇಲೆ ಇಲ್ಲ, ಅದು ನಿಮ್ಮೊಳಗಿದೆ.

ಒಳಗಿನ ಸ್ವರ್ಗ ಮತ್ತು ನರಕ 

’ಯೋಗ’ವು ಖಂಡಿಸುವ ಮೊದಲನೇ ವಿಷಯವೆಂದರೆ ಸ್ವರ್ಗ ಮತ್ತು ನರಕದ ಪರಿಕಲ್ಪನೆ. ಎಲ್ಲಿಯವರೆಗೂ ಸ್ವರ್ಗ ಮತ್ತು ನರಕಗಳು ಇರುತ್ತವೆಯೋ ಆಂತರಿಕ ಶ್ರೇಯಸ್ಸಿನ ತಂತ್ರಜ್ಞಾನ ಮತ್ತು ಮಾನವರು ಮುಕ್ತಿಯ ಕಡೆಗೆ ಸಾಗುವ ಪ್ರಕ್ರಿಯೆಯು ಅರ್ಥಹೀನ ಎನಿಸುತ್ತದೆ ಏಕೆಂದರೆ ನೀವು ಹೋಗಲು ಎರಡು ಸ್ಥಳಗಳು ಮಾತ್ರ ಇವೆ – ಒಂದೋ ನೀವು ಒಳ್ಳೆಯ ಸ್ಥಳಕ್ಕೆ ಹೋಗುತ್ತೀರಿ ಅಥವಾ ಕೆಟ್ಟ ಸ್ಥಳಕ್ಕೆ ಹೋಗುತ್ತೀರಿ ಅಷ್ಟೆ.  ನೀವು ಹೇಗಾದರೂ ಮಾಡಿ ಒಳ್ಳೆಯ ಸ್ಥಳಕ್ಕೆ ಟಿಕೆಟ್ ಪಡೆದುಕೊಂಡರೆ, ನೀವು ಹೇಗೆ ಜೀವಿಸುವುದು ಎಂಬ ಬಗ್ಗೆ ಚಿಂತಿಸಬೇಕಾಗಿಲ್ಲ.  ಮಾನವಕುಲ ಈವರೆಗೆ ಅತ್ಯಂತ ಒರಟಾಗಿ ಜೀವಿಸಿದೆ, ಅದಕ್ಕೆ ಮುಖ್ಯ ಕಾರಣ ಮತಧರ್ಮಗಳ ಸಹಕಾರ.  ಮತಗಳು ‘ನೀವು ಏನು ಮಾಡಿದರೂ ಪರವಾಗಿಲ್ಲ, ನೀವು ಇಂತಿಂತಾ ಸಂಗತಿಗಳನ್ನು ನಂಬಿದರೆ ಸಾಕು, ಒಳ್ಳೆಯ ಸ್ಥಳಕ್ಕೆ ನಿಮಗೆ ಟಿಕೆಟ್ ಸಿಗುವುದು ನಿಶ್ಚಿತ’ ಎಂದು ಹೇಳುತ್ತವೆ.

ಒಂದು ಪೂರ್ಣಪ್ರಮಾಣದ ಸ್ವರ್ಗ ಅಥವಾ ನರಕವನ್ನು ಸೃಷ್ಟಿಸಲು ಬೇಕಾದ ಸಾಮಗ್ರಿ ನಿಮ್ಮ ಸುತ್ತಲೇ ನೇತಾಡುತ್ತಿದೆ, ನಿಮ್ಮ ಶಕ್ತಿಗಳು ಕೆಲಸ ಮಾಡುವ ರೀತಿಯಲ್ಲೇ ಅದು ಇದೆ.

ನೀವು ನಿಮ್ಮೊಳಗೆ ಕೆಲಸ ಮಾಡುತ್ತಿರುವ ಸ್ವರ್ಗ ಮತ್ತು ನರಕಗಳನ್ನು ನಾಶಗೊಳಿಸದಿದ್ದರೆ, ನಿಜವಾಗಿಯೂ ಸತ್ಯದ ಕಡೆಗೆ ಯಾವ ಪಯಣವೂ ಇರುವುದಿಲ್ಲ.  ಇದೀಗ, ನಿಮ್ಮ ಶರೀರ ಮತ್ತು ಮನಸ್ಸು ಒಂದೋ ಸ್ವರ್ಗವನ್ನು ಅಥವಾ ನರಕವನ್ನು ಸೃಷ್ಟಿಸುತ್ತಿರಬಹುದು; ಅವು ಎರಡನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿವೆ.  ನೀವೆಲ್ಲಿದ್ದರೂ, ಅವುಗಳು ಒಂದೋ ಸ್ವರ್ಗವನ್ನು ಅಥವಾ ನರಕವನ್ನು ತಯಾರಿಸುತ್ತಿರುತ್ತವೆ.

ಮನಸ್ಸಿನ ವಿವೇಚನಾ ಸ್ವಭಾವ ಹೇಗೆಂದರೆ ನೀವು ನರಕವನ್ನು ತಯಾರಿಸಿ, ಅದು ಅತಿಯಾದ ಹಿಂಸೆಯಾದಾಗ, ನೀವದನ್ನು ಸ್ವಲ್ಪ ಹಿಂದೆಕ್ಕೆ ಕೊಂಡೊಯ್ಯುತ್ತೀರಿ.  ನೀವು ಸ್ವರ್ಗವನ್ನು ತಯಾರಿಸಿ, ಅದು ಚೆನ್ನಾಗಿರುತ್ತದೆ, ಆದರೆ ನಿಮಗೆ ವಾಸ್ತವದೊಂದಿಗೆ ಸಂಪರ್ಕ ತಪ್ಪಿಹೋಗುತ್ತದೆ ಮತ್ತು ವಾಸ್ತವ ನಿಮಗೆ ಅಘಾತ ನೀಡಿದಾಗ ನೀವು ಅದನ್ನು ಸ್ವಲ್ಪ ಹಿಂದಕ್ಕೆ ಕೊಂಡೊಯ್ಯುತ್ತೀರಿ. ಆದರೆ ನೀವು ಮರಣಿಸಿದಾಗ(ಶರೀರವನ್ನು ಕಳೆದುಕೊಂಡಾಗ), ನಿಮ್ಮ ವಿವೇಚನಾ ಸಾಮರ್ಥ್ಯವೂ ಕಳೆದುಹೋಗುತ್ತದೆ.  ಆನಂತರ, ಸ್ವರ್ಗವನ್ನು ಸೃಷ್ಟಿಸಲು ತೊಡಗಿದ ಮನಸ್ಸು ಸ್ವರ್ಗವನ್ನು ಸೃಷ್ಟಿಸುತ್ತಲೇ ಹೋಗುತ್ತದೆ, ಅನೇಕ ಪಟ್ಟು ಸಂತೋಷವನ್ನು ಸೃಷ್ಟಿಸುತ್ತದೆ.  ನರಕವನ್ನು ಸೃಷ್ಟಿಸುವಲ್ಲಿ ವ್ಯಸ್ತವಾದ ಮನಸ್ಸು ಅನೇಕ ಪಟ್ಟು ನರಕವನ್ನೇ ಸೃಷ್ಟಿಸುತ್ತದೆ ಏಕೆಂದರೆ ಅಲ್ಲಿ ನಿಮ್ಮ ವಿವೇಕ - ಯಾವುದಾದರೂ ಸಂಗತಿ ಅತಿಯಾದಾಗ ಹಿಂದೆಕ್ಕೆ ಹೋಗುವ ಸಾಮರ್ಥ್ಯ -ಇರುವುದಿಲ್ಲ. 

ಒಂದು ಪೂರ್ಣಪ್ರಮಾಣದ ಸ್ವರ್ಗ ಅಥವಾ ನರಕವನ್ನು ಸೃಷ್ಟಿಸಲು ಬೇಕಾದ ಸಾಮಗ್ರಿ ನಿಮ್ಮ ಸುತ್ತಲೇ ನೇತಾಡುತ್ತಿದೆ, ನಿಮ್ಮ ಶಕ್ತಿಗಳು ಕೆಲಸ ಮಾಡುವ ರೀತಿಯಲ್ಲೇ ಅದು ಇದೆ. ಅದು ಯಾವಾಗಲೂ ಇಲ್ಲೇ ಇರುತ್ತದೆ, ಆದರೆ ಇದು ಸ್ವರ್ಗದ ಪ್ರಪಂಚ ಅಥವಾ ನರಕದ ಪ್ರಪಂಚವಾಗಿರಬಹುದು. ನಿಮ್ಮ ಸ್ವಂತ ವಿವೇಚನೆಯಿಂದ ಯೋಚಿಸಿದಾಗ, ನಿಮ್ಮ ತೀರ್ಪು, ’ನಾನು ನರಕವನ್ನು ನಾಶಮಾಡುತ್ತೇನೆ, ಸ್ವರ್ಗವನ್ನು ಕಾಪಾಡಿಕೊಳ್ಳುತ್ತೇನೆ’ ಎಂದಿರುತ್ತದೆ. ಆದರೆ ಅದು ಎಂದಿಗೂ ಸಂಭವಿಸುವುದಿಲ್ಲ ಏಕೆಂದರೆ ಎರಡನ್ನೂ ಕಟ್ಟುವ ಸಾಮಗ್ರಿಗಳು ಒಂದೇ ಆಗಿರುತ್ತವೆ: ಒಂದೇ ರೀತಿಯ ಸ್ಥಳವು ಕೆಲವರಿಗೆ ಭಾವಪರವಶತೆಯ ಕೋಣೆಗಳಾಗಿವೆ, ಕೆಲವರಿಗೆ ಅವು ಚಿತ್ರಹಿಂಸೆಯ ಕೋಣೆಗಳಾಗಿವೆ, ಮತ್ತು ಯಾವುದೇ ಕ್ಷಣ ಅದು ಒಂದರಿಂದ ಇನ್ನೊಂದಕ್ಕೆ ಬದಲಾಗಬಹುದು. ಇದು ಲೈಟ್ ಸ್ವಿಚ್‌ನಂತಿದೆ. ಎರಡು ರೀತಿಯ ಬಣ್ಣದ ದೀಪಗಳನ್ನು - ಬಿಳಿ ಮತ್ತು ನೀಲಿ ಬೆಳಕು – ಇರುವ ಕೋಣೆಯೊಳಗೆ ನೀವು ನೀಲಿ ದೀಪಗಳನ್ನು ಆನ್ ಮಾಡಿದರೆ, ಅದು ಒಂದು ರೀತಿಯಲ್ಲಿ ಭಾಸವಾಗುತ್ತದೆ. ನೀವು ಬಿಳಿ ಬೆಳಕನ್ನು ಆನ್ ಮಾಡಿದಾಗ, ಇದ್ದಕ್ಕಿದ್ದಂತೆ ಅದು ಬೇರೆ ಸ್ಥಳದಂತೆ ಭಾಸವಾಗುತ್ತದೆ. ಆದರೆ ಕತ್ತಲೆಯಲ್ಲಿ, ಯಾರಾದರೂ ಸ್ವಿಚ್ ಆನ್ ಮಾಡಲು ಮುಂದಾದಾಗ, ಬಿಳಿ ಬಣ್ಣಕ್ಕೆ ಬದಲಾಗಿ ನೀವು ನೀಲಿ ಬಣ್ಣವನ್ನು ಆನ್ ಮಾಡಬಹುದು, ನೀಲಿ ಬಣ್ಣಕ್ಕೆ ಬದಲಾಗಿ ನೀವು ಬಿಳಿ ಬಣ್ಣವನ್ನು ಆನ್ ಮಾಡಬಹುದು. ಖಂಡಿತವಾಗಿಯೂ ಹೀಗಾಗಬಹುದು..

ದೀಪಗಳನ್ನು ಆರಿಸುವುದು!

ನರಕವನ್ನು ಇಲ್ಲವಾಗಿಸಿ ಸ್ವರ್ಗವನ್ನು ಮಾತ್ರ ಇಟ್ಟುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.  ಆದರೆ ನೀವು ಯಾವಾಗಲೂ ಆನಂದದಿಂದ ಇರಬಹುದು, ಅದಕ್ಕೆ ಕಾರಣ ನಿಮ್ಮ ಮನಸ್ಸಿನಲ್ಲಿ ನರಕದ ಸಾಧ್ಯತೆ ಹೊಂಚುಹಾಕುತ್ತಿಲ್ಲವೆಂದಲ್ಲ, ಬದಲಾಗಿ ನಿಮ್ಮ ವಿವೇಚನಾ ಪ್ರಕ್ರಿಯೆಯನ್ನು ಬಲಗೊಳಿಸುವುದರಿಂದ. ನರಕವು ಸಂಪೂರ್ಣ ನಾಶವಾಗದಂತೆ ನೀವು ಎಚ್ಚರವಹಿಸಬಹುದು.  ಅದು ಅಸಾಧ್ಯವೆಂದಲ್ಲ, ಆದರೆ ನೀವು ಅದರ ಬಗ್ಗೆ ಜಾಗರೂಕರಾಗಿದ್ದೀರಿ.  ಈ ಜಾಗೃತಿಯ ಸಾಮರ್ಥ್ಯ ಒಂದು ನಿರ್ದಿಷ್ಟ ಹಂತದವರೆಗೆ ಮಾತ್ರ ಸಾಧ್ಯವಾಗುತ್ತದೆ.  ಆದರೆ ಇದು ಅಥವಾ ಅದನ್ನು ಮಾಡುವ ಸಾಮರ್ಥ್ಯವುಳ್ಳ ಎಲ್ಲಾ ಸಾಮಗ್ರಿಗಳನ್ನು ನೀವು ತೆಗೆದುಹಾಕಿದರೆ, ಆಗ ನೀವು ಒಂದು ಕತ್ತಲ ಕೋಣೆಯಲ್ಲಿ ಕುಳಿತುಕೊಳ್ಳುತ್ತೀರಿ, ಅಲ್ಲಿ ಬಿಳಿಯ ಬೆಳಕೂ ಇರುವುದಿಲ್ಲ ಅಥವಾ ನೀಲಿ ಬೆಳಕೂ ಇರುವುದಿಲ್ಲ.  ಅಂದರೆ ನೀವು ಬೆಳಕಿನ ಅಗತ್ಯವಿಲ್ಲದ ದಿಕ್ಕಿನೆಡೆಗೆ ತಿರುಗಿದ್ದೀರಿ.  ಕಣ್ಣುಗಳನ್ನು ತೆರೆದು ಎಲ್ಲಿಗಾದರೂ ಹೋಗುವವನಿಗೆ ಮಾತ್ರ ಬೆಳಕು ಮುಖ್ಯವಾಗುತ್ತದೆ.  ತನ್ನ ಕಣ್ಣುಗಳನ್ನು ಮುಚ್ಚಿ ತನ್ನೊಳಗೇ ಎಲ್ಲೋ ಇರುವವನಿಗೆ ಬೆಳಕಿನ ಅಗತ್ಯವಿಲ್ಲ.  ಅವನಿಗೆ ಬೆಳಕು ಒಂದು ಕಿರಿಕಿರಿಯಷ್ಟೆ.

ಚಿಪ್ಪನ್ನು ಒಡೆಯುವುದು

ಹಾಗಾಗಿ ಅಸತ್ಯದಿಂದ ಸತ್ಯದೆಡೆಗೆ ಸಾಗುವ ಪ್ರಕ್ರಿಯೆ ನಿಜವಾಗಿಯೂ ಭೌಗೋಳಿಕ ಅಂತರವನ್ನು ಕ್ರಮಿಸುವ ಕುರಿತಾದದ್ದಲ್ಲ. ಇದು ಒಂದು ಮೊಟ್ಟೆಯ ಚಿಪ್ಪಿನಂತೆ – ಈಗ ನೀವು ಚಿಪ್ಪಿನ ಹೊರಗೆ ಇದ್ದೀರಿ.  ನೀವು ಅಂತರ್ಮುಖರಾದರೆ, ನೀವು ಮೊಟ್ಟೆಯನ್ನು ಟಕ್, ಟಕ್, ಟಕ್, ಎಂದು ಒಡೆಯಲು ಶುರು ಮಾಡಿದ್ದೀರಿ ಎಂದರ್ಥ. ಮೊಟ್ಟೆ ಒಡೆದಾಗ ನೀವು ಒಳಗೆ ಹೋಗುವುದಾಗಿ ಭಾವಿಸಿಕೊಂಡಿದ್ದಿರಿ, ಹಾಗಲ್ಲ, ಕೋಳಿಮರಿ ಹೊರಗೆ ಬರುತ್ತದೆ – ಅದೇ ಇಲ್ಲಿನ ವಿಷಯ.  ನೀವಿಲ್ಲಿ ಒಳಗೆ ಹೋಗಲು ಬಯಸಿ ಕುಳಿತಿದ್ದೀರಿ.  ನೀವದನ್ನು ಒಡೆದಾಗ, ಯಾರೂ ಒಳಗೆ ಹೋಗುವುದಿಲ್ಲ, ಆದರೆ ಒಂದು ಹೊಸ ಸಾಧ್ಯತೆ ಹೊರಬರುತ್ತದೆ.  ಆದ್ದರಿಂದಲೇ ಯೋಗದಲ್ಲಿ ಸಹಸ್ರಾರವನ್ನು ಸಾವಿರ ದಳಗಳುಳ್ಳ ಹೂ ಹೊರಗೆ ಬಂದಿರುವಂತೆ ಸಂಕೇತಿಸಲಾಗಿದೆ. ನೀವು ಚಿಪ್ಪನ್ನು ಒಡೆದಾಗ, ನೀವು ಕಲ್ಪಿಸಿಕೊಳ್ಳಲಾಗದಂತಹದ್ದು ಹೊರ ಬರುತ್ತದೆ.

ಅಸತ್ಯದಿಂದ ಸತ್ಯದೆಡೆಗೆ ಸಾಗುವ ಪ್ರಕ್ರಿಯೆ ನಿಜವಾಗಿಯೂ ಭೌಗೋಳಿಕ ಅಂತರವನ್ನು ಕ್ರಮಿಸುವ ಕುರಿತಾದದ್ದಲ್ಲ.

ನೀವು ಈ ಚಿಪ್ಪನ್ನು ಒಡೆಯಬೇಕೆಂದರೆ, ಅದನ್ನು ನೀವೇ ಮಾಡಲಾಗದು ಏಕೆಂದರೆ ಅದು ನೀವು.  ನೀವೇ ನಿಮ್ಮನ್ನು ಒಡೆಯುವುದು ಹೇಗೆ ? ನಿಮಗೆ ಇನ್ನೂ ಅಷ್ಟು ಧೈರ್ಯವಿಲ್ಲ.  ಮನಸ್ಸು ಹೇಳಬಹುದು, “ಸರಿ, ಅದನ್ನು ಒಡೆಯೋಣ, ಒಂದು ಕೋಳಿಮರಿ ಹೊರಗೆ ಬರುತ್ತೆ”  ಇಲ್ಲ, ನಿಮಗೆ ಎಂದಿಗೂ ಅದನ್ನು ಒಡೆಯುವ ಧೈರ್ಯ ಬರುವುದಿಲ್ಲ.

ಇದರಿಂದಲೇ ನೀವು ಹೊರಗಿನ ಸುತ್ತಿಗೆಯೊಂದನ್ನು ಅರಸುತ್ತಿರುವುದು, ಅದನ್ನು ಸಾಮಾನ್ಯವಾಗಿ ಅನುಗ್ರಹ ಎಂದು ಹೇಳಲಾಗುತ್ತದೆ.  ಅದು ನಿಮ್ಮ ಕಡೆ ಆಕರ್ಷಿತವಾಗುವಂತೆ ನೀವು ನಿಮ್ಮನ್ನು ತಯಾರು ಮಾಡಿಕೊಳ್ಳುತ್ತೀರಿ.  ಒಂದು ಮಗುವಿನ ಹಲ್ಲು ಸಡಿಲವಾದಾಗ, ಅದು “ಅದನ್ನು ಮುಟ್ಟಬೇಡ, ಮುಟ್ಟಬೇಡ” ಎಂದು ಹೇಳುತ್ತಿರುತ್ತದೆ,  ಆದರೆ ತಂದೆ ತಾಯಿ “ಅದನ್ನು ನೋಡೋಣ, ನೋಡೋಣ” ಎನ್ನುತ್ತಿರುತ್ತಾರೆ ಮತ್ತು ಆಮೇಲೆ ಚಕ್! ಅಷ್ಟೆ! ಹಲ್ಲು ನಿಮ್ಮ ಕೈಯಲ್ಲಿರುತ್ತದೆ, ಮತ್ತು ಮಗು ಹಲ್ಲು ಹೋಯಿತು ಎಂದು ಸಂತೋಷಪಡುತ್ತದೆ.   ಒಂದು ಹಲ್ಲು ಹೋದಾಗ ಅದರ ಅನುಭವ ನಿಮಗೆ ನೆನಪಿದೆಯೇ? ನೋವು ಹೊರಟುಹೋಗಿರುತ್ತದೆ ಮತ್ತು ಅಲ್ಲೊಂದು ಖಾಲಿತನದ ಅನುಭವವಾಗುತ್ತಿರುತ್ತದೆ.  ನೀವು ಅದರ ಜೊತೆ ಸ್ವಲ್ಪ ದಿನ ಆಟವಾಡಿರುತ್ತೀರಿ, ಆದರೆ ಅದನ್ನು ನೀವಾಗಿಯೇ ತೆಗೆದುಹಾಕಲು ಸಾಧ್ಯವಾಗುತ್ತಿರುವುದಿಲ್ಲ.  ಹಾಗಾಗಿ ನಾವು ಆ ಕ್ಷಣಕ್ಕಾಗಿ ಕಾಯುತ್ತಿರುತ್ತೇವೆ.  ’ಯೋಗ ಸಾಧನೆ’ ಎಂದರೆ ಇದೇ – ನೀವು ಬಾಯಿ ತೆರೆಯುವಂತೆ ಮಾಡುವುದು.  ಅದು ಅಷ್ಟು ಸುಲಭವಲ್ಲ, ತಿಳಿಯಿತೇ!