ನವದೆಹಲಿಯ ಲೇಡಿ ಇರ್ವಿನ್ ಕಾಲೇಜಿನಲ್ಲಿ ನಡೆಸಲಾದ ಒಂದು ಹೊಸ ಅಧ್ಯಯನವು ಈಶಾದ ಓಂಕಾರ ಧ್ಯಾನವನ್ನು ಅಭ್ಯಾಸ ಮಾಡುವ ಕ್ರೀಡಾಪಟುಗಳಲ್ಲಿ ದೇಹದ ಜಲಸಂಚಯನ ಮಟ್ಟಗಳ ಬಗ್ಗೆ ಹೆಚ್ಚಿನ ಅರಿವು ಇರುವುದನ್ನು ಗುರುತಿಸಿದೆ. 2011 ರಲ್ಲಿ ಎರಡು ತಿಂಗಳುಗಳ ಕಾಲ ನಡೆಸಲಾದ ಈ ಅಧ್ಯಯನವು ಡಾ.ಪೃತಿ ರಿಷಿ ಲಾಲ್ ಅವರ ಕ್ಲಿನಿಕಲ್ ಮತ್ತು ಕ್ರೀಡಾ ಪೋಷಣೆಯಲ್ಲಿ ನಡೆಸಿದ ಸಂಶೋಧನೆಯ ಒಂದು ಭಾಗವಾಗಿದ್ದು, ಅಮೇರಿಕದ ಇಲಿನಾಯ್ಸ್‌ನಲ್ಲಿ ನಡೆದ ಆಹಾರ ಅಧ್ಯಯನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅದನ್ನು ಪ್ರಸ್ತುತಪಡಿಸಲಾಗಿದೆ. ಮಿಸ್. ಆಂಚಲ್ ಅಗರ್ವಾಲ್ ಅವರ ಮಾಸ್ಟರ್ಸ್ ಪ್ರಬಂಧದಲ್ಲಿಯೂ ಪ್ರಕಟವಾದ ಈ ಅಧ್ಯಯನವು, ಭಾರತೀಯ ಕ್ರೀಡಾ ಪ್ರಾಧಿಕಾರದ “ಕಮ್ ಅಂಡ್ ಪ್ಲೇ” ಯೋಜನೆಯಡಿಯಲ್ಲಿ ತರಬೇತಿ ಪಡೆಯುತ್ತಿರುವ ಯುವ ಪುರುಷ ಹಾಕಿ ಆಟಗಾರರ ನೀರು-ಕುಡಿಯುವ ಅಭ್ಯಾಸವನ್ನು ಸುಧಾರಿಸುವತ್ತ ಗಮನಹರಿಸಿದೆ.

ಓಂಕಾರ ಏಕೆ?

ಮಿಸ್.ಅಗರ್ವಾಲ್ ಮತ್ತು ಡಾ.ಲಾಲ್ ಅವರು ಕ್ರೀಡಾಪಟುಗಳಿಗೆ ಆಟದ ಸಮಯದಲ್ಲಿ ಸಾಕಷ್ಟು ನೀರು ಕುಡಿಯುವ ಅಗತ್ಯತೆಯ ಬಗ್ಗೆ ತರಬೇತಿ ನೀಡಿದ್ದರೂ ಸಹ, ಹೆಚ್ಚಿನ ಆಟಗಾರರು ಆಟದ ಸಮಯದಲ್ಲಿ ನಿರ್ಜಲೀಕರಣದಿಂದ ಬಳಲುತ್ತಿದ್ದರು, ಮತ್ತದು ಅವರ ಕಾರ್ಯಕ್ಷಮತೆ ಮತ್ತು ದೈಹಿಕ ಸಾಮರ್ಥ್ಯಗಳ ಕುಗ್ಗುವಿಕೆಗೆ ಕಾರಣವಾಗಿತ್ತು, ಜೊತೆಗೆ ಗಮನಾರ್ಹವಾದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೂ ಸಹ ಕಾರಣವಾಗಿತ್ತು.

ಡಾ.ಲಾಲ್ ಹೇಳುವ ಪ್ರಕಾರ, “ಆಟಗಾರರಿಗೆ ದೇಹದ ನೀರಿನ ಅಗತ್ಯತೆಗಳ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಅವರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ಮತ್ತು ಅನುಭವದ ಕಲಿಕೆಯನ್ನು ನೀಡಲಾಗಿದೆ. ವಾಸ್ತವವಾಗಿ, ನಾವು ಅವರ ದೇಹದ ಜಲಸಂಚಯನ ಜ್ಞಾನದ ಬಗ್ಗೆ ಲಿಖಿತ ಪರೀಕ್ಷೆಯನ್ನು ನೀಡಿದಾಗ, ಅವರಲ್ಲಿ ಹೆಚ್ಚಿನವರು 100% ಅಂಕಗಳನ್ನು ಗಳಿಸಿದರು. ಅವರೇನು ಮಾಡಬೇಕೆಂದು ಅವರಿಗೆ ತಿಳಿದಿತ್ತು, ಆದರೆ ಅವರದನ್ನು ಮಾಡುತ್ತಿರಲಿಲ್ಲ. ತಿಳುವಳಿಕೆ ಮತ್ತು ನಡವಳಿಕೆಯಲ್ಲಿನ ನಿಜವಾದ ಬದಲಾವಣೆಯ ನಡುವೆ ಒಂದು ಸಂಪರ್ಕದ ಅಗತ್ಯವಿತ್ತು. ದೇಹದ ಬಾಯಾರಿಕೆಯ ಮಟ್ಟವನ್ನು ತಿಳಿದುಕೊಳ್ಳಲು ಒಂದು ಪ್ರಜ್ಞಾಪೂರ್ವಕವಾದ ಅರಿವಿನ ಅವಶ್ಯಕತೆಯಿತ್ತು. 
ಓಂಕಾರ ಅದಕ್ಕೆ ಉತ್ತರವಾಗಬಹುದೇ?

ಓಂಕಾರ ಧ್ಯಾನದ ಶಾರೀರಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಸಂಶೋಧನೆ ಈಗಾಗಲೇ ಪರಿಶೋಧಿಸಿದೆ. ಮಿಸ್ ಅಗರ್ವಾಲ್ ಮತ್ತು ಡಾ.ಲಾಲ್ ಅವರು ಈಶಾದಲ್ಲಿ ನೀಡಲಾಗುವ ಓಂಕಾರ ಧ್ಯಾನವನ್ನು ಬೇರೆಡೆ ಹೇಳಿಕೊಡಲಾಗುವ ಧ್ಯಾನಕ್ಕೆ ಹೋಲಿಸಿ, ಅವುಗಳ ನಡುವೆ ಇರುವ ವ್ಯತ್ಯಾಸವನ್ನು ಹೀಗೆ ವಿವರಿಸುತ್ತಾರೆ. “ಇತ್ತೀಚಿನ ಒಂದು ಭಾರತೀಯ ಅಧ್ಯಯನವು ’ಓಂ’ ಅನ್ನು ಏಕಾಕ್ಷರ ಎಂದು ವಿವರಿಸಿದೆ. ಈಶ ಸಂಸ್ಥೆ ಅದನ್ನು ’ಆ’, ’ಊ’ ಮತ್ತು ’ಮ್’ ಎಂದು ತ್ರೈ-ಅಕ್ಷರವಾಗಿ ಹೇಳಿಕೊಡುತ್ತದೆ” ಎಂದು ಹೇಳುತ್ತಾರೆ. ಶಾಂಭವಿ ಮಹಾಮುದ್ರೆಯ ಸಕಾರಾತ್ಮಕ ಪರಿಣಾಮಗಳ ಕುರಿತು ನಡೆಸಿದ ಅಧ್ಯಯನಗಳನ್ನು ಉಲ್ಲೇಖಿಸುತ್ತಾ, “ಓಂ ಅನ್ನು ಒಳಗೊಂಡಿರುವ ಯೋಗಾಭ್ಯಾಸಗಳು ಮೆದುಳಿನ ಕಾರ್ಯವನ್ನು ಸುಧಾರಿಸುತ್ತವೆ” ಎಂದು ಇತ್ತೀಚೆಗೆ ವರದಿಯಾಗಿದೆ. “ಆಟಗಾರರ ದೇಹ ಜಲಸಂಚಯನ ಅಧ್ಯಯನದಲ್ಲಿ, ಜ್ಞಾನ ಮತ್ತು ನಡವಳಿಕೆಯ ನಡುವೆ ಅಂತರವನ್ನು ನಿವಾರಿಸುವ ಸಾಧನವಾಗಿ ಓಂಕಾರ ಧ್ಯಾನವನ್ನು ಸಂಶೋಧಕರುಗಳು ಆಯ್ಕೆಮಾಡಲು ಇದೊಂದು ಕಾರಣವಾಗಿದೆ” ಎಂದವರು ವಿವರಿಸುತ್ತಾರೆ.

ಪ್ರಾಯೋಗಿಕ ಅಧ್ಯಯನದ ಸಮಯದಲ್ಲಿ, 30 ಆಟಗಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು: ಮೊದಲನೇ ಗುಂಪು - ಸಾಕಷ್ಟು ನೀರಿನ ಬಳಕೆಯ ಬಗ್ಗೆ ಈಗಾಗಲೇ ಬಳಕೆಯಲ್ಲಿರುವ ಶಿಕ್ಷಣವನ್ನು ಪಡೆದವರು. ಮತ್ತು ಎರಡನೆಯದು - ತರಬೇತಿಯನ್ನು ಪಡೆಯುವುದರೊಂದಿಗೆ ಓಂಕಾರ ಧ್ಯಾನವನ್ನು 21 ದಿನಗಳವರೆಗೆ ಪ್ರತಿದಿನ 21 ನಿಮಿಷಗಳು ಅಭ್ಯಾಸ ಮಾಡುವಂತಹ ಪ್ರಾಯೋಗಿಕ ಗುಂಪು. 21 ದಿನಗಳ ಅವಧಿಯ ಕೊನೆಯಲ್ಲಿ, ಪರೀಕ್ಷೆಗಳು ತೋರಿಸಿದ್ದೇನೆಂದರೆ, ಆಟದ ನಂತರ, ಓಂಕಾರ ಧ್ಯಾನವನ್ನು ಅಭ್ಯಾಸ ಮಾಡಿದ ಆಟಗಾರರ ನೀರಿನ ಮಟ್ಟವು ಮೊದಲನೇ ಗುಂಪಿಗೆ ಹೋಲಿಸಿದರೆ ಗಮನಾರ್ಹವಾಗಿ ಆರೋಗ್ಯಕರವಾಗಿತ್ತು ಎನ್ನುವುದಾಗಿತ್ತು. ಹೃದಯ ಬಡಿತ ಮತ್ತು ದೈಹಿಕ ಚುರುಕುತನವನ್ನು ಅಳೆಯುವ ಪರೀಕ್ಷೆಗಳಲ್ಲೂ ಸಹ ಇದು ಉತ್ತಮ ಕಾರ್ಯಕ್ಷಮತೆಗೆ ಕಾರಣವಾಯಿತು. ಆಟಗಾರರು ತಮ್ಮೊಳಗೆ ಸಂತೋಷ, ಶಾಂತಿ ಮತ್ತು ಹೆಚ್ಚಿನ ಗಮನವನ್ನು ಹೊಂದಿರುವುದಾಗಿ ಹೇಳಿದರು.

"ಅಧ್ಯಯನದಲ್ಲಿ ಭಾಗವಹಿಸಿದ ಆಟಗಾರರಲ್ಲಿ ಅನೇಕರು ನನ್ನ ಬಳಿ ಬಂದು, ಅವರ ಆಟದ ಪ್ರದರ್ಶನದ ಹೊರತಾಗಿ, ಅವರು ಇತರ ಪ್ರಯೋಜನಗಳನ್ನೂ ಸಹ ಅನುಭವಿಸುತ್ತಿದ್ದಾರೆಂದು ಹಂಚಿಕೊಂಡರು. ಭಾಗವಹಿಸಿದವರಲ್ಲಿ ಒಬ್ಬರು, ತಮ್ಮ ಮನೆಯಲ್ಲಿ ಎಲ್ಲರೊಂದಿಗೆ ಉತ್ತಮವಾದ ಸಂಬಂಧಗಳನ್ನು ನಿಭಾಯಿಸುತ್ತಿರುವುದಾಗಿ ಹೇಳಿದರು. ಅಧ್ಯಯನದ ಸಮಯದಲ್ಲಿ ಆಟಗಾರರು ಸಾಕಷ್ಟು ಪ್ರಬುದ್ಧರಾಗಿರುವುದು ಕಂಡುಬಂತು. ಈ ಅಧ್ಯಯನವು ಸಾಧ್ಯತೆಗಳ ಸಂಪೂರ್ಣ ಹರವನ್ನು ತೆರೆಯಿತು. ಈಶ ನೀಡುವ ಧ್ಯಾನಗಳ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಈಗಾಗಲೇ ಎರಡು ಅಧ್ಯಯನಗಳನ್ನು ಯೋಜಿಸಿದ್ದೇವೆ ”ಎಂದು ಡಾ.ಲಾಲ್ ಹೇಳುತ್ತಾರೆ.

Photo no.1 courtesy of DeaPeaJay@Flickr

For further details about the study, contact iii.research@ishafoundation.org or 91-9442504607.

Isha Foundation also offers Isha Kriya, a free online meditation. Try it out here

ಸಂಪಾದಕರ ಟಿಪ್ಪಣಿ: ಈ ಲೇಖನವನ್ನು ಈಶ ಹಠಯೋಗ ಶಾಲೆಯ 21 ವಾರಗಳ ಹಠ ಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಸದ್ಗುರುಗಳು ನೀಡಿದ ಪ್ರವಚನದಿಂದ ಆಯ್ದುಕೊಳ್ಳಲಾಗಿದೆ. ಈ ಕಾರ್ಯಕ್ರಮವು ಯೋಗ ವ್ಯವಸ್ಥೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಮತ್ತು ಹಠಯೋಗವನ್ನು ಕಲಿಸಿಕೊಡುವ ಪ್ರಾವೀಣ್ಯತೆಯನ್ನು ಪಡೆಯಲು ಸರಿಸಾಟಿಯಿಲ್ಲದ ಅವಕಾಶವನ್ನು ನೀಡುತ್ತದೆ. ಮುಂದಿನ 21 ವಾರಗಳ ಕಾರ್ಯಕ್ರಮವು ಜುಲೈ 16, 2019 ರಿಂದ ಪ್ರಾರಂಭವಾಗಿ ಡಿಸೆಂಬರ್ 11, 2019 ರಂದು ಕೊನೆಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ, www.ishahathayoga.com ಅಥವಾ info@ishahatayoga.com ಗೆ ಭೇಟಿ ನೀಡಿ