ಒಂದು ಅದ್ಭುತ ದ್ವಿದಳ ಧಾನ್ಯವಾದ ಹುರುಳಿಯು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದನ್ನು ನೋಡೋಣ. ಜತೆಗೆ ಅದರಿಂದ ಮಾಡಬಹುದಾದ ಪಾಕ ವಿಧಾನವೂ ಇದೆ!

ನಿಮಗೆ ಕೇಸರಿ, ಉದ್ದು ಮತ್ತು ಹೆಸರು ಬೇಳೆಗಳ ನಿಕಟ ಪರಿಚಯವಿರಬಹುದು, ಆದರೆ ಆಹಾರಾಸಕ್ತರು ಸಹ ಕೆಲವು ವೇಳೆ ಹುರುಳಿಯನ್ನು ಮರೆಯುತ್ತಾರೆ. ಹೆಚ್ಚು ಪ್ರಚಾರವಿಲ್ಲದ ಈ ದ್ವಿದಳ ಧಾನ್ಯಕ್ಕೆ ಇಂಗ್ಲೀಷ್‌ನಲ್ಲಿ horse gram ಎಂದು ಏಕೆ ಹೇಳುತ್ತಾರೆಂದರೆ, ಅದನ್ನು ಕುದುರೆ ಮತ್ತು ಹಸುಗಳಿಗೆ ಮುಖ್ಯ ಆಹಾರವಾಗಿ ನೀಡುತ್ತಾರೆ ಮತ್ತು ಅದನ್ನು ಕನ್ನಡದಲ್ಲಿ ಹುರುಳಿ ಎನ್ನುತ್ತಾರೆ.

ಹುರುಳಿಯು ಆಗ್ನೇಯ ಏಷ್ಯಾದ ಉಪಖಂಡ ಹಾಗೂ ಉಷ್ಣವಲಯವಾದ ಆಫ್ರಿಕಾದ ಸ್ಥಳೀಯ ಬೆಳೆಯಾಗಿದೆ. ಭಾರತದಲ್ಲಿ ಬಹಳ ಹಿಂದಿನ ಕಾಲದಿಂದಲೂ ಹುರುಳಿಯನ್ನು ವ್ಯಾಪಕವಾಗಿ ಬೆಳೆದು ಬಳಸುತ್ತಾರೆ. US ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಈ ದ್ವಿದಳ ಧಾನ್ಯ ಸಸ್ಯವನ್ನು ಅದರ ಅತ್ಯುತ್ತಮ ಪೌಷ್ಠಿಕತೆಯ ವೈಶಿಷ್ಟ್ಯತೆ, ಶುಷ್ಕ ತಾಳಿಕೆ ಹಾಗೂ ಸಾಮಾನ್ಯ ಗಟ್ಟಿತನದ ಗುಣಗಳನ್ನು ಗಮನಿಸಿ ಅದೊಂದು ಭವಿಷ್ಯದ ಸಂಭಾವ್ಯ ಆಹಾರದ ಮೂಲವಾಗುತ್ತದೆಂದು ಗುರುತಿಸಿದ್ದಾರೆ.

ಹುರುಳಿಯು ಈ ಪೃಥ್ವಿಯ ಮೇಲೆ ದೊರೆತಿರುವ ಅತಿ ಹೆಚ್ಚು ಪ್ರೊಟಿನ್ ಯುಕ್ತ ದ್ವಿದಳ ಧಾನ್ಯವಾಗಿದೆ. ಅದು ಬಹಳ ಹೆಚ್ಚು ಬಲಯುತವಾಗಿದೆ. ಅದಕ್ಕಾಗಿಯೇ ಅದನ್ನು ರೇಸುಕುದುರೆಗಳಿಗೆ ತಿನ್ನಿಸುತ್ತಾರೆ.

ಈ ಮುಖ್ಯವಾದ ಹಾಗೂ ಕಡಿಮೆ ಬಳಕೆಯ ಉಷ್ಣವಲಯದ ಬೆಳೆಯನ್ನು ಹೆಚ್ಚಾಗಿ ಖುಷ್ಕಿ ಜಮೀನಿನಲ್ಲಿ ಬೆಳೆಸಲಾಗುತ್ತದೆ ಹಾಗೂ ಈಗಿನ ದಿನಗಳಲ್ಲಿ ಹೆಚ್ಚು ಪ್ರಚಾರದಲ್ಲಿ ಅದು ಇಲ್ಲದಂತಾಗಿದೆ. ಆದರೆ, ಅದರ ಪ್ರಖ್ಯಾತಿಯನ್ನು ವಿಸ್ತರಿಸಲು ಸಿದ್ಧವಾಗಿದೆ! 

ಹುರಳಿ: ಒಂದು ಪರಿಪೂರ್ಣ ಪೌಷ್ಟಿಕ ಆಹಾರ

ಹುರುಳಿ ತಾನಾಗಿಯೇ ಒಂದು ಉತ್ಕೃಷ್ಟ ಆಹಾರವಾಗಿದೆ. ಅದರ ಗುಣಮಟ್ಟವು ನಿರ್ವಿವಾದವಾಗಿ ಅದ್ಭುತವಾಗಿದೆ. ಅದು:

  • ಹೆಚ್ಚು ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಪ್ರೊಟಿನ್‌ನಿಂದ ಕೂಡಿದೆ. ದ್ವಿದಳ ಧಾನ್ಯಗಳಲ್ಲಿಯೇ ಅದು ಅತಿ ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ ಹಾಗೂ ಅತಿ ಹೆಚ್ಚು ಸಸ್ಯಗಳ ಮೂಲದ ಪ್ರೊಟಿನ್ ಅನ್ನು ಹೊಂದಿದೆ.
  • ಕಡಿಮೆ ಕೊಬ್ಬು ಹಾಗೂ ಹೆಚ್ಚು ಶರ್ಕರ ಪಿಷ್ಟ (carbohydrate) ದಿಂದ ಕೂಡಿದೆ.
  • ಕಡಿಮೆ ಮೇದಸ್ಸು (lipid) ಮತ್ತು ಸೋಡಿಯಂನಿಂದ ಕೂಡಿದೆ. ಅದರ ಜೀರ್ಣಕಾರಿ ಪಿಷ್ಟವು ಮಧುಮೇಹ ಮತ್ತು ಸ್ಥೂಲಕಾಯರಿಗೆ ಸೂಕ್ತ ಆಹಾರವಾಗಿದೆ.

ಇವೆಲ್ಲವೂ ಒಳ್ಳೆಯ ಭರವಸೆಗಳನ್ನು ನೀಡುತ್ತಿದೆಯಲ್ಲವೇ? ನಾವಿನ್ನೂ ಪ್ರಾರಂಭದಲ್ಲಿದ್ದೇವೆ. ಮುಂದೆ ಸಾಗೋಣ.

Click Image to Enlarge
Embed this infographic

Infographic - The Benefits of Horsegram

ಹುರುಳಿಯ ಲಾಭಗಳು: ಹುರುಳಿಯು ಆಹಾರವೋ ಅಥವಾ ಔಷಧವೋ?

ಕಚ್ಚಾ ಹುರುಳಿಯು Polyphenols, Flavonoids ಹಾಗೂ ಪ್ರೊಟಿನ್‌ಗಳಿಂದ ಸಮೃದ್ಧವಾಗಿದೆ. ಮತ್ತೊಂದು ರೀತಿಯಲ್ಲಿ ಹೇಳಬೇಕಾದರೆ, ಅದು ನಿಮ್ಮ ಶರೀರವನ್ನು ತರುಣರಂತೆ ಶಕ್ತಿ ಉತ್ಸಾಹಗಳಿಂದಿರಿಸುತ್ತದೆ! ಇನ್ನೇನು ಬೇಕಾಗಿದೆ? Indian Institute of Chemical Technologyಯ ವಿಜ್ಞಾನಿಗಳು, ಸಂಸ್ಕರಿಸದ ಕಚ್ಚಾ ಹುರುಳಿಯ ಬೀಜಗಳು, ಶರ್ಕರ ಪಿಷ್ಟದ ಜೀರ್ಣವನ್ನು ನಿಧಾನಗೊಳಿಸಿ, insulin ನಿರೋಧ ಶಕ್ತಿಯನ್ನು ಕಡಿಮೆಗೊಳಿಸಿ, ಊಟವಾದನಂತರ ಹೆಚ್ಚಾಗುವ ಮಧುಮೇಹವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಕಂಡುಕೊಂಡರು. ಇದು ಮತ್ತೊಂದು ಮಧುಮೇಹ ಸ್ನೇಹೀ ಆಹಾರವಾಗಿದೆ.

ಹುರುಳಿಯಿಂದ ಉಂಟಾಗುವ ಆರೋಗ್ಯದ ಲಾಭಗಳು ಅಗಣಿತವಾಗಿವೆ. ನೀವು ಯಾವುದೇ ಅನಾರೋಗ್ಯವನ್ನು ಹೆಸರಿಸಿ, ಅದರ ಮೇಲೆ ಹುರುಳಿ - ಶಕ್ತಿಯು ಕಾರ್ಯವೆಸಗುತ್ತದೆ! ಪಾರಂಪರಿಕ ವೈದ್ಯ ಗ್ರಂಥಗಳು, ಆಸ್ತಮಾ, ಬ್ರಾಂಕೈಟಿಸ್, ಪಾಂಡುರೋಗ, ಮೂತ್ರ ಸೋರಿಕೆ, ಮೂತ್ರ ಪಿಂಡದ ಕಲ್ಲುಗಳು ಹಾಗೂ ಹೃದಯರೋಗಗಳಲ್ಲಿ ಹುರುಳಿಯ ಉಪಯೋಗವನ್ನು ವಿವರಿಸುತ್ತವೆ. ಕಾಮಾಲೆ ಅಥವಾ ಸ್ರಾವರೋಧ (water retention) ಗಳಿಂದ ನರಳುತ್ತಿರುವವರಿಗೆ ಆಯುರ್ವೇದ ಪಾಕಪದ್ಧತಿಯು, ಹುರುಳಿಯನ್ನು ಶಿಫಾರಸ್ ಮಾಡುತ್ತದೆ. ಸಂಧಿವಾತ, ಉದರದಲ್ಲಿನ ಹುಳುಗಳು, ಕಣ್ಣಿನ ಸೋಂಕು ಹಾಗೂ ಮೂಲವ್ಯಾಧಿಗಳು ಹುರುಳಿಯ ಮುಂದೆ ಹೆದರಿ ಓಡುವುದು.

ಹುರುಳಿಯು ಸ್ರಾವ ರೋಧಕ ಮತ್ತು ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಅದು ಶ್ಲೇಷ್ಮವನ್ನು ತೆಗೆಯುವಲ್ಲಿ, ಜ್ವರ ಮತ್ತು ಕೊಲೆಸ್ಟೆರೋಲ್ (cholesterol) ನಿಯಂತ್ರಣದಲ್ಲಿ ಸಹಾಯಕ. ಕೆಲವು ಅಧ್ಯಯನಗಳ ಪ್ರಕಾರ, ಹುರುಳಿಯ ಮೇದಸ್ಸಿನ ಸತ್ತ್ವವು (lipid extracts) ಜಠರವೃಣದ ಚಿಕಿತ್ಸೆಯಲ್ಲಿ ನೆರವಾಗುತ್ತದೆ, ಹಾಗೂ ಈ ಚಮತ್ಕಾರಿ ದ್ವಿದಳ ಧಾನ್ಯ ಸಸ್ಯವು (legumes) ದೇಹದಲ್ಲಿ ತುಂಬಿರುವ ವಾಯುವನ್ನು (flatulence) ಕಡಿಮೆಗೊಳಿಸುತ್ತದೆ ಹಾಗೂ ಸ್ತ್ರೀಯರ ಋತು ಚಕ್ರದ ಹಲವಾರು ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.

ಆಶ್ಚರ್ಯವಲ್ಲವೇ?

ಮತ್ತಿನ್ನೂ!

ಹೆಚ್ಚು ಹುರುಳಿಯ ಸೇವನೆಯಿಂದ, ಅದರಲ್ಲಿ ಫೀನಾಲ್ (phenol - ಅಲ್ಪ ಪ್ರಮಾಣದಲ್ಲಿ ಪೂತಿನಾಶಕ ಹಾಗೂ ಸೋಂಕು ನಿರೋಧಕ ಗುಣವಿರುವುದು) ಅಂಶವಿರುವುದರಿಂದ, ಅದು ಕೊಬ್ಬನ್ನು ಆಕ್ರಮಣ ಮಾಡುವ ಸಾಮರ್ಥ್ಯ ಹೊಂದಿದ್ದು, ವಾಸ್ತವವಾಗಿ ಸ್ಥೂಲಕಾಯತೆಯ ನಿರ್ವಹಣೆಯಲ್ಲಿ ನೆರವಾಗುತ್ತದೆ.

ದೇಹದಲ್ಲಿ ಉಷ್ಣ  ಮತ್ತು ಶಕ್ತಿಯನ್ನು ಉತ್ಪಾಧಿಸುವ ಸಾಮರ್ಥ್ಯ ಹುರುಳಿಗಿದೆ. ಆದ್ದರಿಂದ ಅದು ದೇಹವನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ.

ಈಗ ಹುರುಳಿಯು ನಿಮ್ಮ ಮಿತ್ರನಾಗುವುದಕ್ಕೆ ಶುರುವಾಗಿದೆಯೆಂದು ತಿಳಿಯುತ್ತೇವೆ. ಅದು ಈ ಪೃಥ್ವಿಗೂ ಹೇಗೆ ಮಿತ್ರನೆಂಬುದನ್ನು ಅದರ ಹಸಿರು ಶಕ್ತಿಯ ಕೆಲವು ವಾಸ್ತವಾಂಶಗಳಿಂದ ತಿಳಿದುಕೊಳ್ಳೋಣ.

ಬೇಸಾಯಕ್ಕೆ ಹುರುಳಿಯ ಪ್ರಸ್ತುತತೆ

ಭೂಮಿಯ ಸವೆತವನ್ನು ನಿವಾರಿಸುತ್ತದೆ: ಬಳ್ಳಿಯ ಶೀಘ್ರವಾಗಿ ಬೆಳೆದು ಸ್ವಲ್ಪ ಸಮಯದಲ್ಲಿಯೇ ದಪ್ಪವಾಗುತ್ತದೆ ಮತ್ತು ದಟ್ಟವಾಗುತ್ತದೆ. ಹೀಗೆ ಅದು ಭೂಸವೆತವನ್ನು ನಿವಾರಿಸುತ್ತದೆ. ಹುರುಳಿಯು ಕಡಿಮೆ ಖನಿಜಗಳಿರುವ ಇಳಿಜಾರಿನ ಭೂಮಿಯಲ್ಲಿನ ಒಂದು ಅಮೂಲ್ಯ ಬೆಳೆಯಾಗಿದೆ.

ಬರ ಸಹಿಷ್ಣುತೆ: ಹುರುಳಿಯು ಅಸಾಧಾರಣವಾಗಿ ಗಡುಸಾಗಿರುತ್ತದೆ ಹಾಗೂ ಅದು ಜಲಕ್ಷಾಮ ಸಹಿಷ್ಣುತೆಯನ್ನು ಹೊಂದಿರುತ್ತದೆ. ಅದು ಸ್ವಲ್ಪ ದೀರ್ಘವಾದ ಬರ ಪರಿಸ್ಥಿತಿಯನ್ನೂ ತಡೆದು ಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, ಹಾಗಾಗಿ ರೈತನಿಗೆ ಕೆಲಸ ಕಡಿಮೆಯಾಗುತ್ತದೆ. ತಂತ್ರಜ್ಞಾನ ಅಥವಾ ನೀರಾವರಿಯ ಸೌಲಭ್ಯವಿಲ್ಲದಿರುವ ಒಣಭೂಮಿಯಲ್ಲಿ ಹುರುಳಿ ಬೆಳೆಗೆ ಆದ್ಯತೆ ನೀಡಲಾಗುತ್ತದೆ. ಕಡಿಮೆ ಫಲವತ್ತಾದ ಭೂಮಿಗಳಲ್ಲಿ ಬೇರೆ ರೀತಿಯ ಬೆಳೆಗಳು ವಿಫಲವಾದಾಗ ಹುರುಳಿಯನ್ನು ಬೆಳೆಸಬಹುದು. ಭೂಮಿಯ ಮರುಪಯೋಗ (reclamation) ಯೋಜನೆಗೆ ಇದೊಂದು ನಿದರ್ಶನವಾಗುತ್ತದೆ.

ಈ ಎಲ್ಲ ಸಂಯೋಜಿತ ಅಂಶಗಳು, ಇದೊಂದು ಮಹತ್ವದ ಬೆಲೆ ಪರಿಣಾಮಕಾರಿ (cost-effective) ಆಹಾರ ಮೇವು, ಇಂಧನ ಪೂರಕ (fuel supplement) ಹಾಗೂ ಗೊಬ್ಬರದ ಮೂಲವಾಗುತ್ತದೆ.

ಗಿಡ ಮರಗಳ ಆಶ್ರಯದ ಬೆಳೆ: ಹುರುಳಿಯು ಅಷ್ಟಾಗಿ ಗಮನ ಸೆಳೆಯದಿರುವ ಒಂದು ದ್ವಿದಳ ಧಾನ್ಯ ಸಸ್ಯವೆಂದು ಕಾರಣಸಮೇತ ಈಗಾಗಲೇ ಹೇಳಿದ್ದೇವೆ. ದಕ್ಷಿಣ ಭಾರತದ ಪ್ಲಾಂಟೇಷನ್‌ಗಳ ಅಡಿಕಾಡಿನಲ್ಲಿ ಬೆಳೆಯುವ ಒಂದು ಒಳ್ಳೆಯ ಬೆಳೆಯಾಗಿ ಇದು ಪ್ರಯೋಜನಕಾರಿಯಾಗಿದೆ. ಹೋಲಿಕೆಯ ದೃಷ್ಟಿಯಿಂದ ಇದಕ್ಕೆ ಕಡಿಮೆ ಬೆಳಕು ಸಾಕಾಗುವುದರಿಂದ, ಇದು ಮರಗಳ ಕೆಳಗೆ ಸುಲಭವಾಗಿ ಬೆಳೆಯುತ್ತದೆ ಹಾಗೂ ಒಣಗಿದಾಗಲೂ ಮಣ್ಣಿನ ಗುಣವನ್ನು ಅಧಿಕಗೊಳಿಸುತ್ತದೆ.

ಮೇವು / ಗ್ರಾಸ: ಹುರುಳಿಯು ಪ್ರಾಣಿಗಳಿಗೆ ಉತ್ಕೃಷ್ಟ ಗುಣದ ಮೇವನ್ನು ಒದಗಿಸುತ್ತದೆ. ೩೦-೪೦% ಪೌಷ್ಟಿಕತೆಯನ್ನು ಹಿಡಿದಿಟ್ಟುಕೊಳ್ಳುವ ಇದರ ಕಾಂಡ ಮತ್ತು ದಿಂಡುಗಳನ್ನು ಪ್ರಾಣಿಗಳ ಗ್ರಾಸಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಹುರುಳಿಯು ಯಾವ ವಿಧದಲ್ಲಿಯೂ ತ್ಯಾಜ್ಯವೆನಿಸುವುದಿಲ್ಲ.

ಹೀಗೆ ಹುರುಳಿಯು ನಿಮ್ಮನ್ನೇ ಅಲ್ಲದೆ, ಭೂತಾಯಿ ಮತ್ತು ಪ್ರಾಣಿಗಳನ್ನೂ ಪೋಷಿಸುತ್ತದೆ. ಆಶಾದಾಯಕವಾಗಿ ಈ ಮಹಾಸಾಹಸಿ (super hero) ನಿಮ್ಮ ಹೃದಯಗಳನ್ನು ಗೆದ್ದು ಶೀಘ್ರವಾಗಿಯೇ ನಿಮ್ಮ ಅಡುಗೆ ಮನೆಯನ್ನು ಸೇರುತ್ತದೆ.

ಹುರುಳಿಯ ಪಾಕ ವಿಧಾನ

ಇದನ್ನು ಹೇಗೆ ಸೇವಿಸವುದೆಂದು ನಿಮಗೆ ಆಶ್ಚರ್ಯವಾಗಿದ್ದರೆ, ಇಲ್ಲಿ ಎರಡು ಸಲಹೆಗಳಿವೆ. ನೀವು ಸದ್ಗುರುಗಳ ಸಲಹೆ ಮತ್ತು ಸೂಚನೆಗಳನ್ನು ಅನುಸರಿಸಿ, ಹುರುಳಿಯನ್ನು ಮೊಳಕೆ ಬರಿಸಿ ಸೇವಿಸಬಹುದು ಅಥವಾ ಸವಿಯಾದ ಬಿಸಿ ಸೂಪ್ ಅನ್ನು ತಯಾರಿಸಿ ಸೇವಿಸಬಹುದು.

ಸದ್ಗುರು: ಹೆಚ್ಚಿನ ಯುರೋಪಿಯನ್ ಜನರಿಗೆ ಹುರುಳಿಯನ್ನು ಜೀರ್ಣಿಸಿಕೊಳ್ಳುವ ಸಾಧ್ಯತೆ ಇಲ್ಲದಿದ್ದಲ್ಲಿ, ಅದನ್ನು ಮೊಳಕೆಯೊಡಿಸಿ ಸೇವಿಸಿದಾಗ ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಒಂದು ಬಿಳಿ ಬಟ್ಟೆಯಲ್ಲಿ ಹುರುಳಿಯನ್ನು ಹಾಕಿ ಅದನ್ನು ನೀರಿನಲ್ಲಿ 6 ರಿಂದ 8 ಗಂಟೆಯವರೆಗೆ ನೆನೆಸಿಟ್ಟು, ಅನಂತರ ಆ ಹುರುಳಿಯನ್ನು ಬಟ್ಟೆಯಲ್ಲಿ ಕಟ್ಟಿ ಮುಚ್ಚಿಡಿ, ಸುಮಾರು ಮೂರು ದಿವಸಗಳಲ್ಲಿ ಅದು ಮೊಳಕೆಯೊಡೆಯುತ್ತದೆ, ಆ ಮೊಳಕೆಯು ಬೀಜದಿಂದ ಸುಮಾರು ಅರ್ಧ ಅಂಗುಲ ಮೇಲೆ ಬಂದಾಗ, ಅದನ್ನು ಹಾಗೆಯೇ ಸೇವಿಸಬಹುದು. ಅದನ್ನು ಚೆನ್ನಾಗಿ ಜಿಗಿದು ತಿನ್ನಬೇಕು, ಅದು ದೇಹಕ್ಕೆ ಬಹಳ ಒಳ್ಳೆಯದು.

ಹುರುಳಿಯು ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೆಚ್ಚು ಉಷ್ಣತೆಯುಂಟಾದರೆ, ಮೊಳಕೆಯೊಡೆದ ಹೆಸರುಕಾಳನ್ನು ಸೇವಿಸಿ ಸಮತೋಲನಗೊಳಿಸಬಹುದು, ಅದು ಶರೀರವನ್ನು ತಂಪಾಗಿರಿಸುತ್ತದೆ.

ಹುರುಳಿಯ ಸೂಪ್ (soup)

ಬೇಕಾದ ಸಾಮಾಗ್ರಿಗಳು

ಹುರುಳಿ ½ ಕಪ್, ಹುಣಸೇ ಹಣ್ಣಿನ ಪೇಸ್ಟ್ ೨ ರಿಂದ ೩ ಟೀ ಸ್ಪೂನ್‌ಗಳು, ಕಾಳು ಮೆಣಸು 1 ಚಮಚ, ಸಾಸುವೆ ½ ಚಮಚ, ಕರಿಬೇವು 1 ಎಸಳು, ಕೊತ್ತಂಬರಿ ಸೊಪ್ಪು 1 ಅಥವಾ 2 ಎಸಳು, ರುಚಿಗೆ ತಕ್ಕಂತೆ ಉಪ್ಪು, ಎಣ್ಣೆ 3 ಚಮಚ.

ಮಾಡುವ ವಿಧಾನ

  • ಹುರುಳಿಯನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಪ್ರೆಷರ್ ಕುಕ್ಕರ್‌ನಲ್ಲಿ ಮೆತ್ತಗಾಗುವರೆಗೆ ಬೇಯಿಸಿ. 
  • ನೀರನ್ನು ಬಸಿದು ಆ ನೀರನ್ನು ಪಕ್ಕಕ್ಕಿಟ್ಟುಕೊಳ್ಳಿ (ನೀರಿನ ಬಣ್ಣ ಚಾಕೊಲೆಟ್ ಬಣ್ಣದಂತಿರುತ್ತದೆ)
  • ಹುರಿದ ಸಾಸುವೆ, ಜೀರಿಗೆ ಮತ್ತು ಕಾಳು ಮೆಣಸನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ 
  • ಬೇಯಿಸಿದ ಹುರುಳಿಯಲ್ಲಿ ಅರ್ಧವನ್ನು ಅರೆದಿಟ್ಟುಕೊಳ್ಳಿ 
  • ಬಾಣಲಿಯಲ್ಲಿ ಎಣ್ಣೆಹಾಕಿ ಕರಿಬೇವಿನ ಎಲೆಗಳನ್ನು ಹುರಿದುಕೊಳ್ಳಿ 
  • ಅದಕ್ಕೆ ಹುಣಿಸೆಹಣ್ಣಿನ ಪೇಸ್ಟ್, ಹುರುಳಿಯನ್ನು ಬೇಯಿಸಿದ, ಶೋಧಿಸಿದ ನೀರು, ಹುರಿದ ಪುಡಿ, ಅರೆ ಹುರುಳಿ ಮತ್ತು ಉಪ್ಪನ್ನು ಸೇರಿಸಿ.
  • ಸಾಕಷ್ಟು ನೀರನ್ನು ಹಾಕಿ ತುಂಬಾ ಗಟ್ಟಿಯಲ್ಲದ ರಸವನ್ನು ತಯಾರಿಸಿಕೊಳ್ಳಿ.
  • ಮಿಕ್ಕ ಹುರುಳಿಯನ್ನು ಸೇರಿಸಿ, ಬೆರೆಸಿ. 
  • ಅದನ್ನು ಒಲೆಯ ಮೇಲಿಂದ ತೆಗೆಯಿರಿ.
  • ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ.
  • ಅದನ್ನು ಚಪಾತಿ ಅಥವಾ ಅನ್ನದ ಜೊತೆಗೆ ಸೇವಿಸಿ ಆನಂದಿಸಿರಿ!

ಹುರಳಿಕಾಳು ನಿಮಗೆ ಹೇಗನಿಸಿತು, ಮತ್ತು ಅದು ನಿಮಗೆ ಒಗ್ಗಿತೋ ಇಲ್ಲವೋ ಎಂದು ತಿಳಿಸಿರಿ!

ಸಂಪಾದಕರ ಟಿಪ್ಪಣಿ: ಆರೋಗ್ಯಕರ ಆಹಾರದ ಸೂಚನೆಗಳಿಗಾಗಿ, ನಮ್ಮ ebooklet Food Body ಓದಿರಿ. ನಿಮ್ಮ ಇಚ್ಛೆಗನುಗುಣವಾಗಿ ಪಾವತಿಸಿ. (ಉಚಿತವಾಗಿ ಓದಲು ’೦’ ಆಯ್ಕೆ ಮಾಡಿ) 

Image courtesy: Kollu soup by creativelycarvedlife