ಶಿವ ಯಾರು: ಮಾನವನೇ? ಕಾಲ್ಪನಿಕ ಕಥಾನಾಯಕನೇ? ಅಥವಾ ದೇವರೇ?

ಶಿವ ಯಾರು: ಮಾನವನೇ? ಕಾಲ್ಪನಿಕ ಕಥಾನಾಯಕನೇ? ಅಥವಾ ದೇವರೇ?

ಶಿವ – ಈ ವ್ಯಕ್ತಿತ್ವದ ಕುರಿತು ಅನೇಕ ಕತೆಗಳು, ದಂತಕತೆಗಳು, ಪುರಾಣಗಳು ಪ್ರಚಲಿತದಲ್ಲಿದೆ. ಅವನು ದೇವರೆ ಅಥವಾ
ಜನಸಮುದಾಯದ ಸಂಘಟಿತ ಕಲ್ಪನೆಯೇ? ಅಥವಾ ಅರಸುವ ಸಾಧಕರಿಗೆ ಮಾತ್ರ ಗೋಚರಿಸುವ ಆಳವಾದ ಸತ್ಯವೇ? ಯಾರು ಶಿವ?

ಸದ್ಗುರು:: ‘ಶಿವ’ ಎಂಬುದು ಎರಡು ಮೂಲಭೂತ ಮಗ್ಗಲುಗಳನ್ನು ನಿರ್ದೇಶಿಸುತ್ತದೆ. ‘ಶಿವ’ ಎನ್ನುವ ಪದದ ಅಕ್ಷರಶಃ ಅರ್ಥವೆಂದರೆ ‘ಯಾವುದು ಇಲ್ಲವೋ ಅದು’ ಎಂದು. ಇಂದು ಆಧುನಿಕ ವಿಜ್ಞಾನವೂ ಕೂಡ ಎಲ್ಲವೂ ಶೂನ್ಯದಿಂದಲೇ ಸೃಷ್ಟಿಯಾಗುತ್ತವೆ ಮತ್ತು ಶೂನ್ಯದಲ್ಲಿಯೇ ಲೀನವಾಗುತ್ತದೆ ಎಂಬ ಅಂಶವನ್ನು ಸಾದರಪಡಿಸಿದೆ. ಅಸ್ತಿತ್ವದ ತಳಹದಿ ಮತ್ತು ಬ್ರಹ್ಮಾಂಡದ ಮೂಲಭೂತ ಗುಣವು ಅಗಾಧ ಶೂನ್ಯವೇ. ಆಕಾಶಗಂಗೆಗಳು (galaxies) ಒಂದು ಅತಿ ಚಿಕ್ಕ ಸಂಭವವಷ್ಟೇ, ಕೇವಲ ಚಿಟಿಕೆಯಷ್ಟು. ಉಳಿದದ್ದೆಲ್ಲಾ ವಿಶಾಲವಾದ ಶೂನ್ಯ ಆಕಾಶ – ಇದನ್ನು ಶಿವ ಎಂದು ನಿರ್ದೇಶಿಸಲಾಗುತ್ತದೆ. ಇದೇ ಬ್ರಹ್ಮಾಂಡದ ಉಗಮಸ್ಥಾನ ಮತ್ತು ಇದೇ ಎಲ್ಲವನ್ನೂ ಸೆಳೆದು ನುಂಗುವ ಅಂತಿಮ ಸತ್ಯವೂ ಕೂಡ. ಎಲ್ಲವೂ ’ಶಿವ’ನಿಂದ ಬರುತ್ತದೆ, ಮತ್ತು ’ಶಿವ’ನಲ್ಲಿ ವಿಲೀನಗೊಳ್ಳುತ್ತದೆ.

Shiva illustration - Who is Shiva?

ಹಾಗಾಗಿ ‘ಶಿವ’ ನನ್ನು ವರ್ಣಿಸುವುದು ಒಂದು ಅಸ್ತಿತ್ವದಂತಲ್ಲ, ಬದಲಾಗಿ ಒಂದು ನಾಸ್ತಿತ್ವದಂತೆ; ಬೆಳಕಂತಲ್ಲ, ಬದಲಾಗಿ ಕತ್ತಲೆಯಂತೆ. ದೃಷ್ಟಿಯ ಗುಣವನ್ನು ಹೊಂದಿರುವ ಕಣ್ಣುಗಳಿರುವ ಕಾರಣದಿಂದ ಮಾನವನು ಬೆಳಕನ್ನು ಅತಿಯಾಗಿ ಕೊಂಡಾಡುತ್ತಾ ಬಂದಿದ್ದಾನೆ. ಇಲ್ಲವಾದಲ್ಲಿ ಯಾವಾಗಲೂ ಇರುವ ವಿಷಯವೆಂದರೆ ಅದು ಕತ್ತಲೇ. ಬೆಳಕು ಸೀಮಿತವಾದುದು. ಅದು ಯಾವ ಮೂಲದ್ದಾದರೂ ಸರಿ, ವಿದ್ಯುತ್ ಬಲ್ಬ್ ಆದರೂ ಸರಿ, ಅಥವಾ ಸೂರ್ಯನಾದರೂ ಸರಿ, ಕೊನೆಗೊಮ್ಮೆ ತಮ್ಮ ಬೆಳಕೀಯುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಬೆಳಕು ಶಾಶ್ವತವಲ್ಲ. ಬೆಳಕು ಪರಿಮಿತವಾದದ್ದು, ಕಾರಣ ಅದು ಸಂಭವಿಸುತ್ತದೆ ಮತ್ತು ಕೊನೆಗೊಳ್ಳುತ್ತದೆ. ಬೆಳಕಿಗಿಂತ ಕತ್ತಲು ಅಗಾಧವಾದ ಸಾಧ್ಯತೆಯನ್ನು ಉಳ್ಳದ್ದು. ಅದಕ್ಕಾಗಿ ಏನು ಹೊತ್ತಿ ಉರಿಯಬೇಕಾಗಿಲ್ಲ. ಅದು ಶಾಶ್ವತವಾದದ್ದು. ಎಲ್ಲೆಲ್ಲೂ ಇರುವಂತದ್ದು. ಎಲ್ಲವನ್ನೂ ಆವರಿಸಿಕೊಂಡಿರುವಂತಹದ್ದು ಅದೊಂದೇ.

ಆದರೆ, ನಾನೊಂದು ವೇಳೆ “ಪವಿತ್ರವಾದ ಕಗ್ಗತ್ತಲು” ಎಂದೇನಾದರೂ ಹೇಳಿದರೆ ನಾನೊಬ್ಬ ಭೂತಾರಾಧಕ ಅಥವಾ ವಾಮಾಚಾರಿ ಎಂದು ಜನರು ಅಂದುಕೊಳ್ಳುತ್ತಾರೆ. ಪಶ್ಚಿಮದ ಕೆಲವೊಂದು ಪ್ರಾಂತ್ಯಗಳಲ್ಲಿ ಶಿವನನ್ನು ಒಬ್ಬ ಆಸುರೀ ವ್ಯಕ್ತಿಯೆಂದು ಪ್ರಚುರಪಡಿಸಲಾಗಿದೆ. ಆದರೆ ನಾವಿದನ್ನು ಒಂದು ವಿಚಾರ ಅಥವಾ ಸಂಗತಿ ಎಂದು ಪರಿಗಣಿಸಿದರೆ, ಸೃಷ್ಟಿಯ ಪ್ರಕ್ರಿಯೆಯ ಬಗ್ಗೆ ಇದಕ್ಕಿಂತ ಹೆಚ್ಚು ವಿವೇಕಯುತವಾದ ವಿಚಾರವು ಭೂಮಿಯ ಮೇಲಿಲ್ಲ. ನಾನು ‘ಶಿವ’ ಎಂದು ಉಲ್ಲೇಖಿಸದೇ, ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ವದಾದ್ಯಂತ ವಿಜ್ಞಾನಿಗಳಿಗೆ ಇದನ್ನು ವಿವರಿಸುವಾಗ ಅವರು ಅಚ್ಚರಿಯಿಂದ “ಇದು ತಿಳಿದಿತ್ತೇ? ಯಾವಾಗ?” ಎಂದು ಹುಬ್ಬೇರಿಸುತ್ತಾರೆ. ನಾವಿದನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ಅರಿತಿದ್ದೇವೆ. ಅಪ್ರಜ್ಞಾಪೂರ್ವಕವಾಗಿಯೇ ಭಾರತದ ಪ್ರತಿಯೊಬ್ಬ ಶ್ರೀಸಾಮಾನ್ಯನೂ ಇದನ್ನು ಅರಿತಿದ್ದಾನೆ. ಇದರ ಹಿಂದಿನ ವೈಜ್ಞಾನಿಕ ಸಂಗತಿಗಳ ಅರಿವಿಲ್ಲದೆಯೇ ಅವರು ಇದರ ಕುರಿತು ಮಾತನಾಡುತ್ತಾರೆ.

ಆದಿಯೋಗಿ……

ಇನ್ನೊಂದು ದೃಷ್ಟಿಯಲ್ಲಿ ‘ಶಿವ’ ಎಂದಾಗ ನಾವು ನಿರ್ದೇಶಿಸುವುದು ಓರ್ವ ನಿರ್ದಿಷ್ಟ ಯೋಗಿಯನ್ನು – ಆದಿಯೋಗಿಯನ್ನು, ಅಂದರೆ ಮೊಟ್ಟಮೊದಲನೆಯ ಯೋಗಿಯನ್ನು. ಆತನು ಆದಿಗುರುವೂ ಹೌದು. ನಮಗಿಂದು ತಿಳಿದಿರುವ ಯೋಗವಿಜ್ಞಾನದ ಮೂಲ ಪುರುಷನೇ ಅವನು. ಯೋಗವೆಂದರೆ ತಲೆಕೆಳಗಾಗಿ ನಿಲ್ಲುವುದೋ ಅಥವಾ ಉಸಿರು ಬಿಗಿಹಿಡಿಯುವುದೋ ಅಲ್ಲ. ಜೀವದ ಸೃಷ್ಟಿಯ ಕುರಿತು ಹಾಗೂ ಅದನ್ನು ಅದರ ಪರಮ ಸಾಧ್ಯತೆಯ ಕಡೆಗೆ ಕೊಂಡೊಯ್ಯುವುದೆಂತು ಎಂಬ ಕುರಿತು ತಿಳಿಯಲು ಬೇಕಾದ ಅಗತ್ಯ ವಿಜ್ಞಾನ ಮತ್ತು ತಂತ್ರಜ್ಞಾನವೇ ‘ಯೋಗ’.

ಯೋಗ ವಿಜ್ಞಾನದ ಪ್ರಥಮ ಜ್ಞಾನದೀಕ್ಷೆಯು ಹಿಮಾಲಯದಲ್ಲಿ ಕೇದಾರನಾಥ ಕ್ಷೇತ್ರದಿಂದ ಕೆಲವು ಮೈಲುಗಳ ದೂರದಲ್ಲಿರುವ ಹಿಮಾಚ್ಛಾದಿತ ಕಾಂತಿ ಸರೋವರದ ದಡದಲ್ಲಿ ನಡೆಯಿತು. ಅಲ್ಲಿ ಆದಿಯೋಗಿಯು ಸಪ್ತರ್ಷಿಗಳೆಂದು ನಾವಿಂದು ಕರೆಯುವ ಏಳು ಮಂದಿ ಶಿಷ್ಯರಿಗೆ ಈ ಆಂತರ್ಯದ ತಂತ್ರಜ್ಞಾನವನ್ನು ಕ್ರಮಬದ್ಧವಾಗಿ ಬೋಧಿಸಲು ತೊಡಗಿದನು. ಇದು ನಡೆದದ್ದು ಮತಧರ್ಮಗಳು ಹುಟ್ಟುವ ಎಷ್ಟೋ ಹಿಂದೆ. ಸರಿಪಡಿಸಲು ಹೆಚ್ಚುಕಮ್ಮಿ ಅಸಾಧ್ಯವೆನಿಸುವಷ್ಟು ಮಟ್ಟಿಗೆ ಮಾನವತೆಯನ್ನು ವಿಭಾಗಿಸಿ ಚೂರುಚೂರಾಗಿಸಿರುವ ಜಾತಿಧರ್ಮಗಳನ್ನು ಮಾನವ ಸಮಾಜವು ಸೃಷ್ಟಿಸುವ ಸಾಕಷ್ಟು ಮೊದಲೇ ಮಾನವ ಪ್ರಜ್ಞೆಯನ್ನು ಔನ್ನತ್ಯಕ್ಕೇರಿಸಲು ಅಗತ್ಯವಾದ ಪ್ರಬಲ ಉಪಕರಣಗಳನ್ನು, ಅಂದರೆ ಯೋಗ ವಿಜ್ಞಾನವನ್ನು ಆದಿಯೋಗಿಯು ಪ್ರಚುರಪಡಿಸಿದನು.

ಎರಡೂ ಒಂದೇ…..

ಆದ್ದರಿಂದ ‘ಶಿವ’ ಎಂಬುದು ‘ಯಾವುದಿಲ್ಲವೋ ಅದು’ ಮತ್ತು ‘ಆದಿಯೋಗಿ’ ಎರಡನ್ನೂ ಪ್ರತಿನಿಧಿಸುತ್ತದೆ. ಕಾರಣ ಹಲವೊಂದು ರೀತಿಯಲ್ಲಿ ಅವೆರಡೂ ಸಮಾನಾರ್ಥಕವಾಗಿದೆ. ಅಸ್ತಿತ್ವವಾದ ಈ ಆದಿಯೋಗಿ ಮತ್ತು ಅಸ್ತಿತ್ವದ ಆ ಮೂಲಭೂತ ತತ್ತ್ವವಾದ ಆ ನಾಸ್ತಿತ್ವ (ಶೂನ್ಯ) ಎರಡೂ ಒಂದೇ. ಏಕೆಂದರೆ ’ಯೋಗಿ’ಯೆಂದರೆ ಸಮಸ್ತ ಅಸ್ತಿತ್ವವೇ ತಾನು ಎಂಬುದನ್ನು ಅನುಭವಿಸಿದವನು. ಅಸ್ತಿತ್ವವೇ ನೀವೆಂದು ಒಂದು ಕ್ಷಣಕ್ಕಾದರೂ ಅನುಭವಪೂರ್ವಕವಾಗಿ ನೀವು ಅರಿಯಬೇಕಾದರೆ ‘ಶೂನ್ಯ’ ಸ್ಥಿತಿಯನ್ನು ನೀವು ತಲುಪಲೇಬೇಕಾಗುವುದು. ಏನೂ ಆಗಿರದ ಶೂನ್ಯವು ಮಾತ್ರ ಎಲ್ಲವನ್ನೂ ಹಿಡಿದಿಟ್ಟುಕೊಳ್ಳುವುದು. ಏನೋ ಒಂದು ಆಗಿರುವುದು ಎಲ್ಲವನ್ನೂ ಹಿಡಿದಿಟ್ಟುಕೊಳ್ಳಲಾರದು. ಒಂದು ಪಾತ್ರೆಯಿಂದ ಸಮುದ್ರವನ್ನು ಹಿಡಿದಿಡಲು ಅಸಾಧ್ಯ. ಆದರೆ ಭೂಗ್ರಹ ಸಮುದ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ ಭೂಗ್ರಹಕ್ಕೆ ಸೌರಮಂಡಲವನ್ನು ಹಿಡಿದಿಡಲು ಅಸಾಧ್ಯ. ಸೌರಮಂಡಲವೂ ಕೆಲವೇ ಗ್ರಹಗಳನ್ನು ಮತ್ತು ಸೂರ್ಯನನ್ನು ಒಳಗೊಳ್ಳಬಹುದೇ ಹೊರತು ಪೂರ್ತಿ ಬ್ರಹ್ಮಾಂಡವನ್ನಲ್ಲ. ಹೀಗೆ ಹಂತಹಂತವಾಗಿ ಮುಂದೆ ಹೋದರೆ ‘ಶೂನ್ಯ’ ಮಾತ್ರವೇ ಎಲ್ಲವನ್ನು ಹಿಡಿದಿಡಬಲ್ಲದು ಎಂಬುದು ಅಂತ್ಯದಲ್ಲಿ ನಿಮಗೆ ಅರಿವಾಗುವುದು. ‘ಯೋಗ’ ಎಂದರೆ ಒಂದುಗೂಡುವಿಕೆ – ಸಂಯೋಗ, ಸೇರುವುದು ಎಂದರ್ಥ. ಸಮಸ್ತ ಅಸ್ತಿತ್ವದ ‘ಸಂಯೋಗ’ವನ್ನು ಅನುಭವಿಸಿದವನೇ ‘ಯೋಗಿ’. ಹಾಗಾದರೆ ಅವನು ಒಂದು ಕ್ಷಣಕ್ಕಾದರೂ ಸಮಸ್ತ ಅಸ್ತಿತ್ವವನ್ನು ಒಳಗೊಂಡಿರುವ ಶೂನ್ಯವಾಗಿದ್ದನು ಎಂದರ್ಥ.

‘ಶಿವ’ನನ್ನು ನಾವು ಏನೂ ಅಲ್ಲದ ಸ್ಥಿತಿಯಾಗಿ ಮತ್ತು ಒಬ್ಬ ’ಯೋಗಿ’ ಯಾಗಿ ನೋಡಿದಾಗ, ಒಂದು ರೀತಿಯಲ್ಲಿ ಎರಡೂ ಒಂದೇ ಆದರೂ, ಅವು ಬೇರೆ ಬೇರೆ ವಿಷಯಗಳು. ಭಾರತವು ಜನಪದ ಸಂಸ್ಕೃತಿಯಾಗಿರುವುದರಿಂದ, ನಾವು ಬಲು ಸುಲಭವಾಗಿ ಇದರಿಂದ ಅದಕ್ಕೂ, ಅದರಿಂದ ಇದಕ್ಕೂ ಹೊರಳಿಕೊಳ್ಳುತ್ತೇವೆ. ಒಂದು ಕ್ಷಣ ಶಿವನನ್ನು ‘ಪರಮ ಸತ್ಯ’ದಂತೆ ಮತ್ತು ಮುಂದಿನ ಕ್ಷಣ ಮಾನವ ರೂಪದಲ್ಲಿ ಯೋಗದ ಸಂಪೂರ್ಣ ಜ್ಞಾನವನ್ನು ನೀಡಿದ ಯೋಗಿಯಾಗಿ ನೋಡುತ್ತೇವೆ.

ಶಿವ ಯಾರು ಅಲ್ಲ!..?

ದುರದೃಷ್ಟವಶಾತ್ ಇಂದು ಬಹಳಷ್ಟು ಜನರ ಪಾಲಿಗೆ ಕ್ಯಾಲೆಂಡರಿನ ಚಿತ್ರ ರೂಪದಲ್ಲಿಯೇ ಶಿವನನ್ನು ಪರಿಚಯಿಸಲಾಗುತ್ತಿದೆ. ಕ್ಯಾಲೆಂಡರಿನ ಶಿವ ನೀಲಿ ಬಣ್ಣದ, ದುಂಡು ಕೆನ್ನೆಯುಳ್ಳ ಆಕಾರದಲ್ಲಿ ಕಾಣಲ್ಪಡುತ್ತಾನೆ. ಕಾರಣ ಚಿತ್ರಕಾರನ ಕಲ್ಪನೆಯ ಮೂಸೆಯಲ್ಲಿ ಆಕೃತಿ ತಳೆದ ಶಿವನ ರೂಪಿಗೆ ಚಿತ್ರಕಾರನ ಸೀಮಿತ ಅನುಭವದ ಮುಖಾಕೃತಿಯ ರೂಪದರ್ಶಿಯೇ ಆಧಾರವಾಗಿರುತ್ತದೆ. ನೀವು ಕೇಳಿದರೆ, ಅದೇ ಮುಖಾಕೃತಿಗೆ ಕೈಯಲ್ಲೊಂದು ಕೊಳಲನ್ನಿತ್ತು ಅದು ಕೃಷ್ಣನ ಚಿತ್ರನೆಂದಾನು. ರಾಮನ ಚಿತ್ರವನ್ನು ಕೇಳಿದರೆ ಅದನ್ನೇ ಬಿಲ್ಲು ಬಾಣದ ಸಮೇತ ತೋರಿಸಿಯಾನು. ಶಿವನ ಚಿತ್ರವನ್ನು ಬೇಡಿದರೆ ತಲೆಯ ಮೇಲೊಂದು ಚಂದ್ರನನ್ನು ಪ್ರತಿಷ್ಠಾಪಿಸಿದರೆ ಆಯಿತು! ಅದನ್ನೇ ಶಿವನೆಂದಾನು, ಅಷ್ಟೇ.

ಯೊಗ ಸಂಸ್ಕೃತಿಯಲ್ಲಿ – ಶಿವನನ್ನು ದೇವರಂದು ನೋಡಲಾಗುವುದಿಲ್ಲ. ಹಿಮಾಲಯದ ಪರ್ವತಪ್ರದೇಶಲ್ಲಿ ನೆಲೆಸಿದ, ಈ ದೇಶದ ಉದ್ದಗಲಕ್ಕೂ ಸಂಚರಿಸಿದ ಒಬ್ಬ ವ್ಯಕ್ತಿ ಅವನು. ಮಾನವ ಪ್ರಜ್ಞೆಯ ಅತ್ಯುನ್ನತ ಸ್ಥಿತಿಯ ಸಾಧ್ಯತೆಗಾಗಿ ಯೋಗ ಸಂಸ್ಕೃತಿಯನ್ನು ಪರಿಚಯಿಸಿದ ಕಾರಣಪುರುಷನಾದ ಅವನನ್ನು ಅಲಕ್ಷಿಸುವುದು ಅಸಂಭವ. ಮಾನವ ಶರೀರಯಂತ್ರದ ಉನ್ನತ ಸಾಧ್ಯತೆಗಳನ್ನು ಸಾಧಿಸುವ ಪ್ರತಿ ಮಾರ್ಗಗಳನ್ನೂ ಸಾವಿರಾರು ವರ್ಷಗಳ ಹಿಂದೆಯೇ ಶೋಧಿಸಲಾಗಿತ್ತು. ಅದರ ಸೂಕ್ಷ್ಮತೆ, ಸಂಕೀರ್ಣತೆಗಳು ನಂಬಲಸಾದ್ಯ. ಅಂದಿನ ಜನಾಂಗ ಅಷ್ಟು ಮುಂದುವರೆದ ಜನಾಂಗವಾಗಿತ್ತೆ ಎಂಬ ಪ್ರಶ್ನೆ ಅಪ್ರಸ್ತುತವಾಗುತ್ತದೆ. ಕಾರಣ ಯೋಗ ಸಂಸ್ಕೃತಿಯು ನಿರ್ದಿಷ್ಟ ನಾಗರಿಕತೆಯಿಂದ ಅಥವಾ ಚಿಂತನಾಶಕ್ತಿಯಿಂದ ಬಂದಿದ್ದಲ್ಲ. ಅದು ಆಂತರಿಕ ಸಾಕ್ಷಾತ್ಕಾರದಿಂದ ಬಂದದ್ದು. ಅದು ಆತನ ಸುತ್ತಮುತ್ತ ಏನು ನಡೆಯುತ್ತಿತ್ತು ಎಂದುಬನ್ನು ಅವಲಂಬಿಸಿರಲಿಲ್ಲ. ಅದು ಆತನ ಸ್ವ-ಸಾಕ್ಷಾತ್ಕಾರದ ಹೊರಹರಿವಾಗಿತ್ತು. ಮಾನವ ಶರೀರ ಯಂತ್ರದ ಪ್ರತಿಯೊಂದು ಕಣದ ಮೂಲಕವೂ ತಲುಪಬಹುದಾದ ಅತ್ಯುನ್ನತ ಸ್ಥಿತಿಯ ಸಾಧ್ಯತೆಗಳ ಕುರಿತು ಸಾಕಷ್ಟು ವಿವರಣೆಯನ್ನು ವಿಷದವಾಗಿ ಯೋಗಪುರುಷನು ನೀಡಿದ್ದಾನೆ. ಅಷ್ಟು ಸುಂದರ ಹಾಗೂ ಪ್ರಬುದ್ಧವಾಗಿ ತೋರಿಸಿದ ಈ ವಿಜ್ಞಾನದ ಒಂದೇ ಒಂದು ಅಂಶವನ್ನೂ ನಾವು ಬದಲಾಯಿಸುವಂತಿಲ್ಲ, ಮಾರ್ಪಡಿಸುವಂತಿಲ್ಲ. ನೀವು ಮಾಡಬಹುದಾದುದು ಇಷ್ಟೇ – ಜೀವಮಾನ ಪೂರ್ತಿ ಅದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬಹುದು.

Adiyogi – Source of Yoga

ಆದಿಯೋಗಿ – ಯೋಗದ ಮೂಲ

ಸುಮಾರು 15,000 ವರ್ಷಗಳಿಗೂ ಹಿಂದೆ, ಎಲ್ಲಾ ಮತಧರ್ಮಗಳು ಹುಟ್ಟುವ ಮುನ್ನವೇ, ಆದಿಯೋಗಿ, ಮೊದಲ ಯೋಗಿ, ಹಿಮಾಲಯದಲ್ಲಿ ಕಾಣಿಸಿಕೊಂಡನು.

ಅವನು, ಒಂದೋ ಭಾವಪರವಶನಾಗಿ ನರ್ತಿಸುತ್ತಿದ್ದನು ಅಥವಾ ಅಚಲನಾಗಿ ಕುಳಿತಿರುತ್ತಿದ್ದನು. ಅವನು ಹಾಗೆ ಕುಳಿತಿರುವಾಗ ಅವನು ಜೀವಂತವಿದ್ದಾನೆ ಎಂದು ಊಹಿಸಲು ಇದ್ದ ಒಂದೇ ಗುರುತೆಂದರೆ ಅವನ ಕಣ್ಣಿಂದ ಉದುರುತ್ತಿದ್ದ ಆನಂದಬಾಷ್ಪ. ಯಾರಿಗೂ ಕಲ್ಪಿಸಿಕೊಳ್ಳಲೂ ಆಗದಿದ್ದುದನ್ನು ಅವನು ಅನುಭವಿಸುತ್ತಿದ್ದಾನೆಂಬುದು ಸ್ಪಷ್ಟವಾಗಿತ್ತು. ಜನರು ಆಸಕ್ತಿಯಿಂದ ಅವನ ಸುತ್ತ ನೆರೆದರು, ಆದರೆ ಅವನು ಅವರನ್ನು ಗಮನಿಸದ ಕಾರಣ, ಏಳು ಅತ್ಯಾಸಕ್ತಿಯ ಸಾಧಕರನ್ನು ಹೊರತುಪಡಿಸಿ, ಮಿಕ್ಕವರೆಲ್ಲರೂ ಅಲ್ಲಿಂದ ಹೊರಟುಹೋದರು. “ದಯವಿಟ್ಟು, ನಿನಗೇನು ತಿಳಿದಿದೆಯೋ, ಅದನ್ನು ನಾವು ತಿಳಿಯಬೇಕು.” ಎಂದು ಅವರು ಅವನ ಬಳಿ ಗೋಗರೆದರು. ಅವರ ಧೃಡನಿಷ್ಠೆಯನ್ನು ಕಂಡು, ಆದಿಯೋಗಿಯು ಅವರಿಗೆ ಕೆಲ ಪೂರ್ವಸಿದ್ಧತೆಯ ಸಾಧನೆಗಳನ್ನು ಕಲಿಸಿಕೊಟ್ಟು ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟನು. ಆದಿಯೋಗಿ ಅವರನ್ನು ನಿರ್ಲಕ್ಷಿಸುತ್ತಿರುವಂತೆಯೇ, 84 ವರ್ಷಗಳ ಕಾಲ ಆ ಏಳು ಸಾಧಕರು ಏಕನಿಷ್ಠರಾಗಿ ಸಾಧನೆಯನ್ನು ಮಾಡಿದರು. ಕೊನೆಗೆ ಬೇಸಿಗೆಯ ಅಯನ ಸಂಕ್ರಾತಿಯ ದಿನದಂದು, ದಕ್ಷಿಣಾಯನದ ಪ್ರಾರಂಭದಲ್ಲಿ, ಆದಿಯೋಗಿಯ ಗಮನ ಆ ಏಳು ಸಾಧಕರ ಮೇಲೆ ಬಿದ್ದಿತು. ಜ್ಞಾನವನ್ನು ಸ್ವೀಕರಿಸಲು ಅವರ ಪಾತ್ರತೆಯು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಮುಂದಿನ 28 ದಿನಗಳ ಕಾಲ ಅವರನ್ನು ನಿಕಟವಾಗಿ ಅವಲೋಕಿಸಿದ ನಂತರ, ಇಂದು ಗುರು ಪೌರ್ಣಮಿ ಎಂದು ಕರೆಯಲಾಗುವ ಹುಣ್ಣಿಮೆಯ ದಿನದಂದು, ಅವನು ಮೊದಲ ಗುರು, ಆದಿ ಯೋಗಿಯಾಗಿ ಪರಿವರ್ತಿತನಾದನು. ಇಂದಿನ ಕಾಲದಲ್ಲಿ ಸಪ್ತರ್ಷಿಗಳೆಂದು ಪ್ರಸಿದ್ಧರಾಗಿರುವ ಅವನ ಏಳು ಶಿಷ್ಯರಿಗೆ ಕಾಂತಿ ಸರೋವರದ ದಡದಲ್ಲಿ, ಆದಿಯೋಗಿಯು ಯೋಗ ವಿಜ್ಞಾನವನ್ನು ವ್ಯವಸ್ಥಿತವಾಗಿ ಪ್ರತಿಪಾದಿಸಲು ಆರಂಭಿಸಿದನು.

ಮನುಷ್ಯರು ತಮ್ಮ ಮಿತಿಗಳನ್ನು ಮೀರಿ, ಅವರ ಪರಮ ಸ್ವರೂಪವನ್ನು ತಲುಪಲು ಆದಿಯೋಗಿಯು 112 ವಿಧಾನಗಳನ್ನು ಪ್ರತಿಪಾದಿಸಿದನು. ಆದಿಯೋಗಿ ನೀಡಿದ್ದು ವ್ಯಕ್ತಿಗತ ಪರಿವರ್ತನೆಯ ಸಾಧನೆಗಳು – ಜಗತ್ತನ್ನು ರೂಪಾಂತರಗೊಳಿಸುವುದಕ್ಕೆ ವ್ಯಕ್ತಿಗತ ಪರಿವರ್ತನೆಯೊಂದೇ ದಾರಿ. ಮಾನವಕಲ್ಯಾಣ ಮತ್ತು ಮುಕ್ತಿಗೆ ಅವನು ನೀಡಿದ ಮೂಲಭೂತ ಸಂದೇಶವಿದು: “ಅಂತರ್ಮುಖರಾಗುವುದೊಂದೇ ಬಿಡುಗಡೆಯ ದಾರಿ.” ವ್ಯಕ್ತಿನಿಷ್ಠ ವಿಜ್ಞಾನದ ಮೂಲಕ ಮಾನವಕಲ್ಯಾಣವನ್ನು ವೈಜ್ಞಾನಿಕವಾದ ರೀತಿಯಲ್ಲಿ ನಾವು ಉದ್ದೇಶಿಸುವ ಸಮಯ ಬಂದಿದೆ.

Shiva - The Adiyogi

Online Treasure Hunt