ಮಂತ್ರದ ಶಕ್ತಿ

ಇಂದು ಆಧುನಿಕ ವಿಜ್ಞಾನವು ಇಡೀ ಅಸ್ತಿತ್ವವು ಶಕ್ತಿಗಳ ಕಂಪನವೆಂದು ಸಂದೇಹಕ್ಕೆ ಆಸ್ಪದವಿಲ್ಲದಂತೆ ನಿಮಗೆ ಸಾಬೀತುಪಡಿಸಿದೆ. ಎಲ್ಲಿ ಕಂಪನವಿರುತ್ತದೆಯೋ, ಅಲ್ಲಿ ಶಬ್ದವಿರಲೇಬೇಕು. ಹಾಗಾಗಿ, ಯೋಗ ವಿಜ್ಞಾನದಲ್ಲಿ ನಾವು ಸಂಪೂರ್ಣ ಅಸ್ತಿತ್ವವನ್ನು ನಾದಬ್ರಹ್ಮ ಎನ್ನುತ್ತೇವೆ. ಸಮಸ್ತ ಅಸ್ತಿತ್ವ ಶಬ್ದದ ಸಂಕೀರ್ಣ ಸಂಯೋಜನೆಯಾಗಿದೆ. ಈ ಸಂಕೀರ್ಣ ಸಮ್ಮಿಲನದ ಶಬ್ದಗಳ ಪೈಕಿ, ಕೆಲ ಶಬ್ದಗಳು ಪ್ರಮುಖವಾದವು. ಈ ಪ್ರಮುಖ ಶಬ್ದಗಳನ್ನು ಮಂತ್ರಗಳು ಎಂದು ಉಲ್ಲೇಖಿಸಲಾಗುತ್ತದೆ. ನೀವೊಂದು ಹಜಾರ ಅಥವಾ ಕೋಣೆಯಲ್ಲಿ ಬಂಧಿತರಾಗಿದ್ದು, ನಿಮ್ಮ ಜೀವನವೆಲ್ಲಾ ಈ ಸ್ಥಳದಲ್ಲಿ ಕಳೆದಿದ್ದೀರಿ ಎಂದೆಣಿಸೋಣ. ಈಗ ನಿಮಗೆ ಈ ಕೋಣೆಯ ಕೀಲಿಕೈ ಸಿಕ್ಕರೆ, ನಿಮಗೆ ಕೀಲಿಕೈಯನ್ನು ಹಾಕುವ ಜಾಗವು ತಿಳಿದು, ಕೀಲಿಕೈಯನ್ನು ಹಾಕಿ ಮುಚ್ಚಿದ ಬಾಗಿಲನ್ನು ತೆರೆದಾಗ, ಅದು ನಿಮಗೆ ಒಂದು ಸಂಪೂರ್ಣವಾದ ಹೊಸ ಜಗತ್ತನ್ನು ತರೆಯುತ್ತದೆ. ನಿಮಗೆ ಈ ಕೀಲಿಕೈಯನ್ನು ಎಲ್ಲಿ ಹಾಕಬೇಕೆಂದು ತಿಳಿದಿಲ್ಲದಿದ್ದರೆ, ನೀವದನ್ನು ನೆಲದೊಳಗೋ ಅಥವಾ ಛಾವಣಿಯೊಳೊಗೋ ಹಾಕಿದರೆ, ನೀವೆಲ್ಲಿಗೂ ಹೋಗುವುದಿಲ್ಲ. ಒಂದು ಕೀಲಿಕೈ ಲೋಹದ ಚಿಕ್ಕ ತುಂಡಷ್ಟೆ, ಆದರೆ ನಿಮಗೆ ಅದನ್ನೆಲ್ಲಿ ಹಾಕಬೇಕು, ಹೇಗೆ ತಿರುಗಿಸಬೇಕೆಂದು ತಿಳಿದಿದ್ದರೆ, ಅದು ನಿಮಗಾಗಿ ಒಂದು ಸಂಪೂರ್ಣವಾದ ವಿಭಿನ್ನ ಆಯಾಮವನ್ನೇ ತೆರೆಯಬಲ್ಲದು.

ಈ ದೈವತ್ವವನ್ನು ತಿಳಿಯುವುದು ಮತ್ತು ಅನುಭವಿಸುವುದರ ಅರ್ಥವಿದು: ನಮ್ಮ ಶಕ್ತಿಯನ್ನು ಉನ್ನತ ಸಾಧ್ಯತೆಗಳಿಗೆ ವಿಕಸನಗೊಳಿಸುವುದು; ನಮ್ಮ ಶಕ್ತಿಗಳನ್ನು ನಮ್ಮೊಳಗೆಯೇ ಸೂಕ್ಷ್ಮ ಆಯಾಮಗಳಿಗೆ ವಿಕಸನಗೊಳಿಸುವುದು. ಮಹಾಶಿವರಾತ್ರಿಯ ಸಮಯದಲ್ಲಿ, ಭೂಮಿಯ ಉತ್ತರ ಗೋಳಾರ್ಧದಲ್ಲಿ ಮನುಷ್ಯರಲ್ಲಿ ಶಕ್ತಿಯ ನೈಸರ್ಗಿಕವಾದ ಉತ್ಕರ್ಷ ಉಂಟಾಗುತ್ತದೆ. ಶಕ್ತಿಯ ಈ ಮೇಲ್-ಸ್ಫರಣವನ್ನು ಬಳಸಿಕೊಳ್ಳಲು ನಮ್ಮ ಬೆನ್ನುಹುರಿಯನ್ನು ನೇರವಾಗಿರಿಸಿಕೊಂಡಿರಬೇಕು. ಅಡ್ಡವಾಗಿದ್ದ ಬೆನ್ನೆಲುಬು ಲಂಬವಾಗಿ ಬದಲಾದದ್ದು ಜೀವಿಗಳ ವಿಕಾಸಾತ್ಮಕ ಪ್ರಕ್ರಿಯೆಯಲ್ಲಿ ಒಂದು ದೊಡ್ಡ ಹಂತವೆಂದು ಜೀವಶಾಸ್ತ್ರಜ್ಞರು ಸೂಚಿಸಿದ್ದಾರೆ. ಇದಾದ ನಂತರವೇ ಬುದ್ಧಿಶಕ್ತಿಯು ವಿಕಸನಗೊಂಡಿದ್ದು. ಈ ರಾತ್ರಿಯಂದು ಬೆನ್ನುಹುರಿಯನ್ನು ರಾತ್ರಿಯಡಿ ನೇರವಾಗಿರಿಸಿಕೊಳ್ಳಲು ನೀವು ಸಿದ್ಧರಿದ್ದರೆ, ನೀವು ಮಲಗದೆ ಎಚ್ಚರವಾಗಿರಲು ನಾವು ಸಾಧ್ಯವಿರುವುದನ್ನೆಲ್ಲ ಮಾಡುತ್ತೇವೆ. ಸರಿಯಾದ ಮಂತ್ರಗಳು ಮತ್ತು ಧ್ಯಾನದಿಂದ, ಮಹಾಶಿವರಾತ್ರಿಯ ರಾತ್ರಿಯುದ್ದಕ್ಕೂ ಆಗುವ ಶಕ್ತಿಯ ನೈಸರ್ಗಿಕ ಉತ್ಕರ್ಷವನ್ನು ಬಳಸಿಕೊಂಡು ನಾವು ದೈವೀಕ ಚೈತನ್ಯಕ್ಕೆ ಒಂದು ಹೆಜ್ಜೆ ಹತ್ತಿರವಾಗಬಹುದು.

ತರ್ಕಬದ್ಧರಾಗಿರುವವರು ಸಹಜವಾಗಿಯೇ ಕೇವಲ ಒಂದು ಮಂತ್ರದ ಉಚ್ಛಾರಣೆಯಿಂದ ಏನಾಗಬಹುದೆಂದು ಯೋಚಿಸುತ್ತಾರೆ. ಯೋಗ ಪುರಾಣ ಸಂಗ್ರಹದಲ್ಲಿ ಒಂದು ಅದ್ಭುತವಾದ ಕಥೆಯಿದೆ. ಒಂದು ದಿನ, ಮಹಾನ್ ಯೋಗಿಯೊಬ್ಬ ಶಿವನ ಬಳಿ ಬಂದು, “ಏಕೆ ನಿನ್ನ ಭಕ್ತರೆಲ್ಲ ಮಂತ್ರವನ್ನು ನಿಲ್ಲದೆ ಒದುರುತ್ತಿದ್ದಾರೆ? ಅವರು ಮಾಡುತ್ತಿರುವುದಾದರೂ ಏನು? ಈ ಅಸಂಬದ್ಧವನ್ನು ನಿಲ್ಲಿಸುವಂತೆ ನೀನಾದರೂ ಏಕೆ ಹೇಳಬಾರದು?” ಎಂದು ಕೇಳುತ್ತಾನೆ.

ಶಿವ ಅವನನ್ನು ನೋಡಿ, “ನೀನು ಒಂದು ಕೆಲಸ ಮಾಡು.” ಎಂದು ಹೇಳಿ ಅಲ್ಲೇ ನೆಲದ ಮೇಲೆ ತೆವಳುತ್ತಿದ್ದ ಒಂದು ಹುಳದತ್ತ ಬೆರಳು ಮಾಡಿ ತೋರಿಸಿ, “ಅದರ ಹತ್ತಿರ ಹೋಗಿ, ‘ಶಿವ ಶಂಭೋ’ ಮಂತ್ರವನ್ನು ಹೇಳು, ನೋಡೋಣ ಏನಾಗುತ್ತದೆಯೆಂದು” ಎಂದು ಹೇಳಿದ. ಆ ಜ್ಞಾನಯೋಗಿಯು ಅಸಡ್ಡೆಯಿಂದ ಸರಿ ಎಂದು ಹೇಳಿ, ಹುಳದ ಬಳಿ ಹೋಗಿ, “ಶಿವ ಶಂಭೋ” ಎಂದ. ಆ ಹುಳ ಅಲ್ಲೇ ಸತ್ತು ಬಿದ್ದಿತು. ಜ್ಞಾನಯೋಗಿಗೆ ಆಶ್ಚರ್ಯವಾಗಿ, “ಇದೇಕೆ ಹೀಗಾಯ್ತು, ಬರೀ ಈ ಮಂತ್ರೋಚ್ಛಾರಣೆಯಿಂದ ಹುಳ ಸತ್ತು ಹೋಯಿತಲ್ಲ.” ಎಂದು ಹೇಳಿದ. ಶಿವನ ನಕ್ಕು, ಒಂದು ಚಿಟ್ಟೆಯನ್ನು ತೋರಿಸಿ ಹೀಗಂದ, “ಆ ಚಿಟ್ಟೆಯಲ್ಲಿ ಗಮನವಿರಿಸಿ ‘ಶಿವ ಶಂಭೋ’ ಎಂದು ಹೇಳು.” ಅದಕ್ಕೆ ಜ್ಞಾನಯೋಗಿ ಹೇಳಿದ, “ಇಲ್ಲ, ನನಗೆ ಈ ಚಿಟ್ಟೆಯನ್ನು ಸಾಯಿಸುವ ಆಸೆಯಿಲ್ಲ.” ಶಿವನೆಂದ, “ಪ್ರಯತ್ನಿಸು.” ಜ್ಞಾನಯೋಗಿಯು ಚಿಟ್ಟೆಯನ್ನು ನೋಡಿ, ‘ಶಿವ ಶಂಭೋಃ’ ಎಂದು ಹೇಳಿದ. ಆ ಚಿಟ್ಟೆಯು ಸತ್ತು ಬಿದ್ದಿತು. ಆ ಜ್ಞಾನಯೋಗಿಗೆ ಭಯವಾಗಿ, “ಮಂತ್ರವನ್ನು ಹೇಳುವುದರಿಂದ ಈ ಫಲಿತಾಂಶ ದೊರಕಿದರೆ, ಇದನ್ನು ಹೇಳಲು ಯಾರಾದರೂ ಏತಕ್ಕಾಗಿ ಇಚ್ಛಿಸುತ್ತಾರೆ?” ಎಂದು ಕೇಳಿದ. ಶಿವ ನಗುತ್ತಲೇ ಕಾಡಿನಲ್ಲಿ ಜಿಗಿದಾಡುತ್ತಿದ್ದ ಸುಂದರವಾದ ಜಿಂಕೆಯನ್ನು ತೋರಿಸಿ, “ಆ ಜಿಂಕೆಯಲ್ಲಿ ಗಮನವಿರಿಸಿ, ‘ಶಿವ ಶಂಭೋಃ’ ಎಂದು ಹೇಳು.” ಎಂದ. “ಇಲ್ಲ, ಈ ಜಿಂಕೆಯನ್ನು ಕೊಲ್ಲುವುದು ನನಗೆ ಇಷ್ಟವಿಲ್ಲ.” ಎಂದ. ಶಿವನೆಂದ, “ಪರವಾಗಿಲ್ಲ, ಹೇಳು.” ಆ ಜ್ಞಾನಯೋಗಿಯು, ‘ಶಿವ ಶಂಭೋ’ ಎಂದು ಹೇಳಿದ. ಆ ಜಿಂಕೆಯು ಸತ್ತು ಬಿದ್ದಿತು. ಇದನ್ನು ಕಂಡು ಆ ಯೋಗಿಯು ಸಂಪೂರ್ಣವಾಗಿ ವ್ಯಾಕುಲಿತನಾಗಿ, “ಈ ಮಂತ್ರದ ಉದ್ದೇಶವೇನು? ಇದು ಎಲ್ಲವನ್ನೂ ಕೊಲ್ಲುತ್ತಿದೆಯಷ್ಟೆ.” ಎಂದನು

ಅದೇ ಸಮಯದಲ್ಲಿ ಒಬ್ಬ ತಾಯಿ ತನ್ನ ನವಜಾತ ಶಿಶುವಿಗೆ ಶಿವನ ಆಶೀರ್ವಾದ ಪಡೆಯಲು ಅಲ್ಲಿಗೆ ಬಂದಳು. ಶಿವ ಜ್ಞಾನಯೋಗಿಯನ್ನು ನೋಡಿ, “ಈ ಮಗುವಿಗಾಗಿ ನೀನು ಮಂತ್ರವನ್ನು ಹೇಳು” ಎಂದು ಹೇಳಿದ. ಇದನ್ನು ಕೇಳಿ ಆ ಜ್ಞಾನಯೋಗಿಯು, “ಇಲ್ಲ, ನನಗೆ ಅಂತಹುದೆಲ್ಲ ಮಾಡಲು ಇಷ್ಟವಿಲ್ಲ. ನನಗೆ ಆ ಮಗುವನ್ನು ಕೊಲ್ಲಲು ಇಷ್ಟವಿಲ್ಲ.” ಆದಕ್ಕೆ ಶಿವ ಅವನನ್ನು ಒತ್ತಾಯಿಸಿ, ಪ್ರಯತ್ನಿಸಲು ಹೇಳಿದ. ಜ್ಞಾನಯೋಗಿಯು ಬಹಳ ಆತಂಕದಿಂದ ಆ ಮಗುವಿನ ಬಳಿ ಬಂದು ‘ಶಿವ ಶಂಭೋ’ ಎಂದ. ಆ ಮಗುವು ಎದ್ದು ಕುಳಿತು, “ನಾನು ಒಂದು ಹುಳವಾಗಿದ್ದೆ, ಒಂದು ಮಂತ್ರದಿಂದ ನನ್ನನ್ನು ಚಿಟ್ಟೆಯಾಗಿ ಮಾಡಿದೆ. ಇನ್ನೊಂದು ಮಂತ್ರದಿಂದ ನನ್ನನ್ನು ಒಂದು ಜಿಂಕೆಯಾಗಿ ಮಾಡಿದೆ. ನಂತರ ಇನ್ನೊಂದು ಮಂತ್ರದಿಂದ ನನ್ನನ್ನು ಮನುಷ್ಯನನ್ನಾಗಿ ಮಾಡಿದೆ. ಇನ್ನೊಂದು ಬಾರಿ ಮಂತ್ರವನ್ನು ಹೇಳು, ನಾನು ದೈವತ್ವವನ್ನು ಪಡೆಯಬೇಕು.” ಎಂದು ಹೇಳಿತು.

– ಸದ್ಗುರಗಳ ಮಹಾಶಿವರಾತ್ರಿ 2010 ರ ಪ್ರವಚನದ ಒಂದು ತುಣುಕು