ಇಂದು ಜಗತ್ತಿನಲ್ಲಿ ಥೈರಾಯ್ಡ್ ಅಸಮತೋಲನವು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವುದರ ಹಿಂದಿನ ಕಾರಣದತ್ತ ಸದ್ಗುರುಗಳು ಈ ಲೇಖನದಲ್ಲಿ ಗಮನಹರಿಸುತ್ತಾರೆ.


ಪ್ರಶ್ನೆ: ಸದ್ಗುರು, ಇತ್ತೀಚಿನ ದಿನಗಳಲ್ಲಿ, ಅನೇಕ ಜನ ಥೈರಾಯ್ಡ್ ಸಮಸ್ಯೆಗಳಿಂದ, ಹೈಪರ್ ಅಥವಾ ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿದ್ದಾರೆ. ನಾವು ಅಯೋಡಿನ್‌ಯುಕ್ತ ಉಪ್ಪನ್ನು ಸೇವಿಸುತ್ತಿದ್ದರೂ ಸಹ, ಥೈರಾಯ್ಡ್ ಸಮಸ್ಯೆಗಳು ಇನ್ನೂ ಚಾಲ್ತಿಯಲ್ಲಿವೆ. ಈ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವೇನು? ಇದು ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತೆ ಒತ್ತಡದಿಂದ ಕೂಡಿದ ಜೀವನಶೈಲಿಗೆ ಸಂಬಂಧಿಸಿದೆಯೇ? ನಾವು ಹಠ ಯೋಗ, ಅಥವಾ ಕ್ರಿಯಾ ಮಾಡುವ ಮೂಲಕ ಅಥವಾ ಈಶ ಯೋಗ ಕೇಂದ್ರದಂತಹ ಪ್ರತಿಷ್ಠಾಪಿತ ಪವಿತ್ರ ಸ್ಥಳಗಳಲ್ಲಿ ವಾಸಿಸುವ ಮೂಲಕ ಈ ಪರಿಸ್ಥಿತಿಗಳಿಂದ ಹೊರಬರಬಹುದೇ? ಅವುಗಳಿಂದ ಹೊರಬರಲು ನಾವು ಏನೇನು ಮಾಡಬಹುದು?

ಸದ್ಗುರು: ಹಠ ಯೋಗದ ಅಭ್ಯಾಸದೊಂದಿಗೆ ಬಹಳಷ್ಟು ಜನ ತಮ್ಮ ತೊಂದರೆಗಳಿಂದ ಹೊರಬಂದಿದ್ದಾರೆ ಎಂದು ನಾನು ಭಾವಿಸುತ್ತೇನೆ, ಅದರ ಬಗ್ಗೆ ಯಾವುದೇ ಸಂಶಯವಿಲ್ಲ. ಪವಿತ್ರೀಕರಿಸಿದ ಸ್ಥಳದಲ್ಲಿರುವುದು ಖಂಡಿತವಾಗಿಯೂ ಅದಕ್ಕೆ ಅನುಕೂಲಕರವಾಗುತ್ತದೆ. ಆದರೆ, ಥೈರಾಯ್ಡ್ ಅಸಮತೋಲನ ಇಷ್ಟು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ, ನಾವು ಇದನ್ನು ಅರ್ಥಮಾಡಿಕೊಳ್ಳಬೇಕು - ನೀವು ಥೈರಾಯ್ಡ್ ಎಂದು ಕರೆಯುತ್ತಿರುವುದು - ಯೋಗದಲ್ಲಿ, ನಾವು ಆ ರೀತಿಯ ಗ್ರಂಥಿಗಳನೆಲ್ಲಾ ಪರಿಗಣಿಸುವುದಿಲ್ಲ, ಆದರೆ ವೈದ್ಯಕೀಯವಾಗಿ, ನೀವು ಥೈರಾಯ್ಡ್ ಎಂದು ಕರೆಯುತ್ತಿರುವುದು ನಿಮ್ಮೊಳಗೆ ಸ್ರವಿಸುವ ಒಂದು ಹಾರ್ಮೋನ್ ಆಗಿದೆ, ಮತ್ತು ಅದು ನಿಮ್ಮ ದೇಹ ವ್ಯವಸ್ಥೆಯನ್ನು ಪ್ರತಿದಿನವೂ ಸರಿಹೊಂದಿಸಲು ಪ್ರಯತ್ನಿಸುತ್ತಿದೆ. ನಿಮ್ಮಲ್ಲಿ ಜೀರ್ಣಕ್ರಿಯೆ ಎಷ್ಟಾಗಬೇಕು, ಎಷ್ಟು ಶಕ್ತಿಯನ್ನು ಉತ್ಪಾದಿಸಬೇಕು, ಎಷ್ಟು ಕೊಬ್ಬನ್ನು ತಯಾರಿಸಬೇಕು, ಎಷ್ಟು ಸ್ನಾಯುಗಳನ್ನು ನಿರ್ಮಿಸಬೇಕು ಎಂಬಿತ್ಯಾದಿ ಎಲ್ಲವನ್ನೂ ಅದು ನಿರ್ಣಯಿಸುತ್ತಿದೆ ಅಷ್ಟೆ, ಅದು ನಿಮ್ಮ ಭೌತಿಕ ರಚನೆಯನ್ನು ಸರಿಹೊಂದಿಸಲು ಪ್ರಯತ್ನಿಸುತ್ತಿದೆ.

ನಿಮ್ಮ ದೈಹಿಕ ರಚನೆಯು ನಿಮ್ಮ ಮಾನಸಿಕ ರಚನೆಯೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ. ಇಂದು, ನೀವಿಲ್ಲಿ ಕುಳಿತು ಪರ್ವತದ ಬಗ್ಗೆ ಯೋಚಿಸಿದರೆ, ನಿಮ್ಮ ಗ್ರಂಥಿಯ ಕಾರ್ಯ ಒಂದು ನಿರ್ದಿಷ್ಟ ರೀತಿಯಲ್ಲಿ ಸಂಭವಿಸುತ್ತದೆ ಎನ್ನುವುದನ್ನು ನಿಮಗೆ ತೋರಿಸಲು ಇಂದು ಸಾಕಷ್ಟು ಪುರಾವೆಗಳಿವೆ. ಅದೇ ನೀವೊಂದು ಹುಲಿಯ ಬಗ್ಗೆ ಯೋಚಿಸಿದರೆ, ಅದು ಇನ್ನೊಂದು ರೀತಿಯಲ್ಲಿ ಸಂಭವಿಸುತ್ತದೆ, ಮತ್ತು ನೀವೊಂದು ಸಾಗರದ ಬಗ್ಗೆ ಯೋಚಿಸುತ್ತೀರೆಂದರೆ ಅದು ಇನ್ನೊಂದು ರೀತಿಯಲ್ಲಿ ನಡೆಯುತ್ತದೆ, ನೀವು ಒಬ್ಬ ಪುರುಷ ಅಥವಾ ಮಹಿಳೆಯ ಬಗ್ಗೆ ಯೋಚಿಸುತ್ತೀರಾದರೆ, ಅದು ಇನ್ನೊಂದು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇವಲ ಒಂದು ಆಲೋಚನೆ - ಬೇರಿನ್ನೇನೂ ಇಲ್ಲ, ಪರ್ವತದೊಂದಿಗೆ ಸಂಪರ್ಕವಿಲ್ಲ, ಹುಲಿಯೊಂದಿಗೆ ಯಾವುದೇ ಸಂಪರ್ಕವಿಲ್ಲ, ಪುರುಷ, ಮಹಿಳೆ ಅಥವಾ ಸಾಗರದೊಂದಿಗೆ ಯಾವುದೇ ಸಂಪರ್ಕವಿಲ್ಲ - ಕೇವಲ ನಿಮ್ಮ ಒಂದು ಆಲೋಚನೆ ನಿಮ್ಮ ಗ್ರಂಥಿಗಳ ಕಾರ್ಯವನ್ನು ಏರುಪೇರಾಗಿಸುತ್ತದೆ. ನಿಮ್ಮ ದೇಹ ವ್ಯವಸ್ಥೆ  ನಿಮ್ಮನ್ನು ಸುಸ್ಥಿತಿಯಲ್ಲಿರಿಸಲು, ಎಲ್ಲವನ್ನೂ ಸರಿಹೊಂದಿಸಿಡಲು ಎಷ್ಟು ಸೂಕ್ಷ್ಮವಾಗಿ ಪ್ರಯತ್ನಿಸುತ್ತಿದೆ ಎನ್ನುವುದನ್ನು ನಾನಿಲ್ಲಿ ಹೇಳುತ್ತಿದ್ದೇನೆ.

ನಿಮ್ಮಲ್ಲಿನ ಸಮಸ್ಯೆ ಎಂದರೆ ನಿಮಗೆ ಎತ್ತಿನ ಗಾಡಿ ಬೇಕಿತ್ತು ಆದರೆ ನಿಮಗೆ ಉತ್ಕೃಷ್ಟವಾದ ಆಕಾಶನೌಕೆಯನ್ನು ನೀಡಲಾಗಿದೆ. ನೀವು ಮಾಡುವ ಪ್ರತಿಯೊಂದು ಸಣ್ಣ ವಿಷಯವೂ ಬಹಳಷ್ಟು ವಿಧಗಳಲ್ಲಿ ಅದರ ಮೇಲೆ ಪರಿಣಾಮ ಬೀರುತ್ತದೆ. ನೀವು ಸುಮ್ಮನೆ ಅದನ್ನು ಮುಟ್ಟಿದರೆ ಸಾಕು, ಅದು ಉತ್ಕರ್ಷಕ್ಕೆ ಹೋಗುತ್ತದೆ, ಮತ್ತು ನಿಮ್ಮ ವ್ಯವಸ್ಥೆಯಲ್ಲಿ ಅನೇಕಾನೇಕ ಸಂಗತಿಗಳು ನಡೆಯುತ್ತವೆ. ಕೇವಲ ಒಂದು ಮರವನ್ನು ನೋಡಿ ನೀವದರ ಬಗ್ಗೆ ಯಾವುದೋ ಒಂದು ತೀರ್ಮಾನಕ್ಕೆ ಬಂದರೆ, ನಿಮ್ಮ ದೇಹ ಅನೇಕ ವಿಧದ ರಾಸಾಯನಿಕ ಮತ್ತು ಇತರ ರೀತಿಯ ವ್ಯತ್ಯಾಸಗಳನ್ನು ಅನುಭವಿಸುತ್ತದೆ. ನಿಮ್ಮ ಗ್ರಂಥಿಗಳ ಕಾರ್ಯನಿರ್ವಹಣೆಗಳು ಬದಲಾಗುತ್ತವೆ.

ನೀವು ಎಲ್ಲಿದ್ದರೂ ಸಹ, ನೀವು ಮುಂಬೈ, ಅಥವಾ ನ್ಯೂಯಾರ್ಕ್, ಅಥವಾ ಲಂಡನ್‌ ಎಲ್ಲೇ ಇರಲಿ - ನೀವು ಬದುಕುತ್ತಿರುವ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ ನೋಡಿ. ಸಾಮಾಜಿಕವಾಗಿ, ನೀವು ಆ ವಿಷಯಗಳಿಗೆ ಒಗ್ಗಿಕೊಂಡಿರಬಹುದು. ಆದರೆ ನೀವು ಯಾವ ರೀತಿಯ ವಾತಾವರಣದಲ್ಲಿ ಬದುಕುತ್ತಿದ್ದೀರಿ, ಏನಾಗುತ್ತಿದೆ ಎನ್ನುವುದನ್ನು ಗಮನಿಸಿ ನೋಡಿ. ಅವುಗಳಲ್ಲಿ ಯಾವುದೂ ಸಹ ಈ ಜೀವಕ್ಕೆ ಅನುಕೂಲಕರವಾಗಿಲ್ಲ. ನೀವು ಆ ವಿಷಯಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಬಹುದು, ಬಹುಶಃ ಈಗ ನಿಮಗೆ ಆ ನಗರಗಳಿಂದ ಹೊರಗೆ ಬದುಕಲು ಸಾಧ್ಯವಿಲ್ಲದೇ ಇರಬಹುದು, ಅದು ಬೇರೆ ವಿಷಯ, ಆದರೆ ನಿಮ್ಮೊಳಗಿನ ಜೀವವು ಆ ರೀತಿಯ ವಾತಾವರಣವನ್ನು ಬಯಸುತ್ತಿಲ್ಲ. ಆದ್ದರಿಂದಲೇ ನಿಮ್ಮೊಳಗೆ ಆಗುತ್ತಿರುವ ವ್ಯತ್ಯಾಸಗಳ ಸಂಖ್ಯೆ ನಿಮ್ಮ ಪರವಾಗಿ ಇಲ್ಲ. ಗ್ರಂಥಿಗಳ ಅಸಮರ್ಪಕ ಕ್ರಿಯೆ ಕೇವಲ ಒಂದು ಪ್ರಕಟಣೆಯಷ್ಟೆ. ನಿಮ್ಮ ದೇಹ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಸರಿಹೊಂದಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಒಂದು ಗ್ರಂಥಿಯೆಂದರೆ, ಅದು ಥೈರಾಯ್ಡ್. ಇದನ್ನು ಸುಲಭವಾಗಿ ಗಮನಿಸಬಹುದಾಗಿದೆ, ಮೊದಲನೆಯದಾಗಿ, ಕೇವಲ ಅದರ ಅಡಚಣೆಯಿಂದಾಗಿ ನಿಮ್ಮ ಶಾರೀರಿಕ ಮತ್ತು ಮಾನಸಿಕ ನಿಯತಾಂಕಗಳು ಸ್ವಲ್ಪಮಟ್ಟಿಗೆ ಏರುಪೇರಾಗುತ್ತವೆ.

ಅದರ ಮತ್ತೊಂದು ಆಯಾಮವೆಂದರೆ ನಿಮ್ಮೊಳಗೆ ಉಂಟಾಗುವ  ಕ್ಷೋಭೆಗಳು - ನಿಮ್ಮದೇ ಸ್ವಂತ ಮಾನಸಿಕ ಸೃಷ್ಟಿಗಳು. ಸಮಸ್ಯೆಗೆ ಮತ್ತೊಂದು ಆಯಾಮವೆಂದರೆ ನಿಮ್ಮೊಳಗೆ ಯಾವ ರೀತಿಯ ಆಹಾರ ಸೇರುತ್ತಿದೆ ಎನ್ನುವುದಾಗಿದೆ. ಇಂದು ನೀವು ರಾಸಾಯನಿಕಗಳಿಂದ ಮುಕ್ತವಾದ ಯಾವುದೇ ಆಹಾರವನ್ನು ತಿನ್ನಲು ಸಾಧ್ಯವೇ ಇಲ್ಲದಂತಾಗಿದೆ. ನೀವು ಸಾವಯವ ಆಹಾರವನ್ನು ಸೇವಿಸುತ್ತಿದ್ದರೆ, ಅದರಲ್ಲಿ ಸ್ವಲ್ಪ ಮಟ್ಟಿಗಿನ ಸಾವಯವ ರಾಸಾಯನಿಕಗಳನ್ನು ಬಳಸಲಾಗುತ್ತಿರುವುದು ಸಹಜ ಎನ್ನುವ ಪರಿಸ್ಥಿತಿಗೆ ಬಂದಿದೆ. ಕಾಡಿನಲ್ಲಿ ಸಹಜವಾಗಿ ಬೆಳೆದ ಏನನ್ನಾದರೂ ಸುಮ್ಮನೆ ಕಿತ್ತು ತಿನ್ನುವುದು ತುಂಬಾ ಕಷ್ಟವಾಗಿದೆ. ಹಾಗೆ ತಿನ್ನಲು ಸಾಮರ್ಥ್ಯವಿರುವ ಜನರ ಸಂಖ್ಯೆಯೂ ಈಗ ತೀರಾ ಕಡಿಮೆ. ಎಲ್ಲವೂ ಇಂದು ಮಾರುಕಟ್ಟೆಯಿಂದಲೇ ಬರುತ್ತಿದೆ. ಮತ್ತು ಮಾರುಕಟ್ಟೆಗೆ ಬರುವುದೆಲ್ಲಾ ಕೇವಲ ಹೆಚ್ಚು ಪ್ರಮಾಣದ ಬಗ್ಗೆಯಾಗಿದೆಯೇ ಹೊರತು, ಏನು ಬರುತ್ತಿದೆ ಮತ್ತು ಅದರ ಗುಣಮಟ್ಟ ಏನು ಎನ್ನುವ ಬಗ್ಗೆಯಾಗಿಲ್ಲ.

ನಮ್ಮ ದೇಶದಲ್ಲಿ ಈಗ ಈ ಎಲ್ಲಾ ವಿಷಯಗಳು ಹೊರಟುಹೋಗಿವೆ, ಚಿಂತಿಸಬೇಡಿ. ನನ್ನ ಅಜ್ಜಿ ಪ್ರತಿದಿನ ಮನೆಮುಂದೆ ತರಕಾರಿಯನ್ನು ಕೊಳ್ಳುತ್ತಿದ್ದರು… ತರಕಾರಿ ಮಾರುವವರು ಬುಟ್ಟಿ ತುಂಬ ತಾಜಾ ಸೊಪ್ಪು ತರಕಾರಿಗಳನ್ನು ಆಗಷ್ಟೇ ಕಿತ್ತುಕೊಂಡು ಬೆಳಗ್ಗೆ 7:30, 8:00 ರ ಹೊತ್ತಿಗೆ ಮನೆ ಬಾಗಿಲಿಗೆ ಬರುತ್ತಿದ್ದರು. ಅವರು ಬಂದಾಗ ಅಜ್ಜಿ ಅವನ್ನೆಲ್ಲಾ ನೋಡುತ್ತಿದ್ದಳು. ಅವಳು ಅದನ್ನು ಖರೀದಿಸುವಾಗ, ತರಕಾರಿ ಮಾರುವವನಿಗೆ ಅವುಗಳನ್ನು ಮುಟ್ಟಲು ಬಿಡುತ್ತಿರಲಿಲ್ಲ. ಅವರೇ ಅದನ್ನು ಕಿತ್ತು ಸ್ವಚ್ಛವಾಗಿ ತೆಗೆದುಕೊಂಡು ಬಂದಿದ್ದರೂ ಸಹ ಅದು ಸಮತೋಲನಕ್ಕೆ ಹೋಗಬೇಕಾದರೆ ಮತ್ತು ಅವಳು ಒಂದೊಂದೇ ತರಕಾರಿಗಳನ್ನು ಆಯ್ಕೆ ಮಾಡಬೇಕಾದರೆ, ಯಾರಿಗೂ ಅವನ್ನು ಮುಟ್ಟಲವಳು ಬಿಡುತ್ತಿರಲಿಲ್ಲ. "ನೀವು ನನ್ನ ತರಕಾರಿಗಳನ್ನು ಮುಟ್ಟಬೇಡಿ." ಎನ್ನುತ್ತಿದ್ದಳು. ಇದು ಬ್ಯಾಕ್ಟೀರಿಯಾವನ್ನು ದೂರವಿಡುವ ಬಗ್ಗೆಯಲ್ಲ. ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ತಿನ್ನುವ ತರಕಾರಿಗಳನ್ನು ಬೇರೊಬ್ಬ ವ್ಯಕ್ತಿ ಮುಟ್ಟುವುದನ್ನು ಅವಳು ಬಯಸುತ್ತಿರಲಿಲ್ಲ. ಅವಳು ಅದನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮುಟ್ಟುತ್ತಿದ್ದಳು, ಅದನ್ನು ಪ್ರೀತಿಯಿಂದ ನೇವರಿಸುತ್ತಿದ್ದಳು, ಮುದ್ದಾಡುತ್ತಿದ್ದಳು, ಅಕ್ಕರೆಯಿಂದ ನೋಡುತ್ತಿದ್ದಳು ಮತ್ತು ನಂತರ ಅದನ್ನು ಕತ್ತರಿಸಿ ಅಡುಗೆ ಮಾಡುತ್ತಿದ್ದಳು.

ಇದೆಲ್ಲ ತಮಾಷೆಯೆಂದು ಭಾವಿಸಬೇಡಿ. ನಿಮ್ಮ ಜೀವನದಲ್ಲಿ ಈ ಎಲ್ಲ ವಿಷಯಗಳು ಕಾಣೆಯಾಗಿದ್ದರೆ, ನಿಮ್ಮ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀವು ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಅವನ್ನು ಸಮತೋಲನಕ್ಕೆ ತರಲು ಯಾವುದೇ ಮಾರ್ಗವಿಲ್ಲ. ನೀವವುಗಳನ್ನು ಅಡಗಿಸಬಹುದೇ ಹೊರತು, ಅವನ್ನು ಸರಿಯಾದ ಸಮತೋಲನಕ್ಕೆ ತರಲು ಸಾಧ್ಯವಿಲ್ಲ, ಏಕೆಂದರೆ ಪ್ರತಿದಿನ ಅವು ವಿಭಿನ್ನವಾಗಿರುತ್ತವೆ, ಪ್ರತಿ ಕ್ಷಣವೂ ವಿಭಿನ್ನವಾಗಿರುತ್ತವೆ. ಇದೇ ಸರಿದೂಗಿಸುವಿಕೆಯ ಪ್ರಕ್ರಿಯೆ, ಮತ್ತಿದು ಅತ್ಯಂತ ಸಕ್ರಿಯವಾದಂತಹ ಸರಿಹೊಂದಿಸುವ ಪ್ರಕ್ರಿಯೆಯಾಗಿದೆ. ನೀವದನ್ನು ಕೊಂದು, ಮಾತ್ರೆಗಳನ್ನು ತೆಗೆದುಕೊಂಡು ಹೇಗೋ ನಿರ್ವಹಿಸುತ್ತೀರಿ ಅಷ್ಟೆ. ಹಾಗಾದಾಗ ನೀವು ಸ್ವಲ್ಪ ಮಟ್ಟಿಗೆ ಕೆಟ್ಟುಹೋದ ಯಂತ್ರದಂತಾಗುತ್ತೀರಿ. ಈ ಅಸಮರ್ಪಕ ಕ್ರಿಯೆಯೊಂದಿಗೆ, ನಿಮ್ಮ ಕೆಟ್ಟುಹೋದ ಯಂತ್ರ ಹಲವು ವಿಧಗಳಲ್ಲಿ ಸ್ವರೂಪವನ್ನು ಪಡೆದು ವ್ಯಕ್ತವಾಗುತ್ತದೆ. ಮತ್ತು ನೀವು ದೊಡ್ಡ ಮಟ್ಟದಲ್ಲಿ ಜೀವಿಸಿದಾಗ ಮಾತ್ರ ಅದು ನಿಮ್ಮ ಅರಿವಿಗೆ ಬರುತ್ತದೆ. ನೀವು ಸಂಕುಚಿತವಾಗಿ ಬದುಕುತ್ತಿರುವಾಗ, ಅದರ ಸಮಸ್ಯೆಗಳು ಅಷ್ಟಾಗಿ ತೋರ್ಪಡಿಸಿಕೊಳ್ಳುವುದಿಲ್ಲ.

ಇದು ಹೇಗೆಂದರೆ, ನಿಮ್ಮ ಕಾರಿನ ಟೈರ್ ಪಂಚರ್ ಆಗಿದ್ದರೂ ಸಹ, ಇಪ್ಪತ್ತು ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ, ಹೇಗೋ ನೀವು ನಿಮ್ಮ ಮನೆ ಸೇರಸಬಹುದು. ಕಾರಿನಲ್ಲಿನ ಕೆಲವು ಭಾಗಗಳು ಹರಿದು, ಮುರಿದು ಹೋಗುತ್ತವೆ ಆದರೆ ನೀವದನ್ನು ಹಾಗೋ ಹೀಗೋ ಓಡಿಸಿಕೊಂಡು ಹೋಗಬಹುದು. ಅದೇ ನೀವು ಗಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲಿ ಅದನ್ನು ಓಡಿಸುತ್ತಿದ್ದರೆ ಮತ್ತು ಆಗ ಅದರ ಟೈರ್ ಪಂಚರ್ ಆಗಿಬಿಟ್ಟರೆ, ನೀವು ರಸ್ತೆಯಿಂದ ಹಾರಿಹೋಗುತ್ತೀರಿ ಎನ್ನುವುದು ನಿಮಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ, ಇದೂ ಸಹ ಹಾಗೆ. ಮೇಲೆ ಹೇಳಿದ ಎಲ್ಲಾ ವಿಷಯಗಳನ್ನು ನೀವು ಚೆನ್ನಾಗಿ ನೋಡಿಕೊಂಡರೆ, ನೀವು ನಿಮ್ಮ ಜೀವನವನ್ನು ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಪುನರುಜ್ಜೀವನಗೊಳಿಸಿದಾಗ, ಅದು ಸರಾಗವಾಗಿ ಸಾಗುತ್ತದೆ. ಆದರೆ ಆ ಸಮತೋಲನವನ್ನು ತರದೇ ನೀವು ನಿಮ್ಮ ಜೀವನವನ್ನು ವರ್ಧಿಸಲು ಹೋದರೆ, ಅದು ವಿಲಕ್ಷಣಕ್ಕೆ ತಿರುಗುವುದನ್ನು ನೀವು ನೋಡುತ್ತೀರಿ. ಪ್ರತಿದಿನ ನಿಮ್ಮ ಸುತ್ತಲೂ ಹಾಗೆ ನಡೆಯುವುದನ್ನು ನೀವು ನೋಡುತ್ತೀರಿ.

ಆದ್ದರಿಂದ, ನಿಮ್ಮ ಜೀವನದಲ್ಲಿ ಅಷ್ಟೆಲ್ಲಾ ಬದಲಾವಣೆಗಳನ್ನು ತರಲು, ನಗರವನ್ನು ತೊರೆದು ಕಾಡಿನಲ್ಲಿ ವಾಸಿಸಲು ನಿಮಗೆ ಸಾಧ್ಯವಿಲ್ಲ. ಇಲ್ಲಿನ ವಾತಾವರಣವನ್ನು ಬಿಟ್ಟು ಹೋಗಲು ನಿಮಗೆ ಸಾಧ್ಯವಿಲ್ಲ. ಕನಿಷ್ಠಪಕ್ಷ ಆ ವಿಷಯಗಳು ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರದಂತೆ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಬೇಕು. ನಿಮ್ಮ ನಗರದ ಜೀವನಶೈಲಿ ಹೇಗಾದರೂ ನಿಮ್ಮ ಮೇಲೆ ಪರಿಣಾಮ ಬೀರಿಯೇ ತೀರುತ್ತದೆ. ಆದರೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದೇ ಪ್ರಶ್ನೆ? ಕನಿಷ್ಠ ನಿಮ್ಮ ಮನೆಯೊಳಗಾದರೂ ಕೆಲವು ಸಸ್ಯಗಳನ್ನು ಬೆಳೆಸಿ ಅವುಗಳೊಂದಿಗೆ ಬದುಕಿ. ಅದಕ್ಕೆ ಸ್ಥಳವಿಲ್ಲದಿದ್ದರೆ, ನಿಮ್ಮ ಕೋಣೆಯಲ್ಲೇ ಅವನ್ನು ತಂದಿರಿಸಿ. ಅದೂ ಸಾಧ್ಯವಿರದಿದ್ದರೆ ನಿಮ್ಮ ಕೋಣೆಯ ಅರ್ಧದಷ್ಟು ಮೇಲ್ಚಾವಣಿಯನ್ನು ತೆಗೆದುಬಿಡಿ. “ಓಹ್, ಆದರೆ ಮೇಲೆ ಇನ್ನೊಂದು ಮಹಡಿ ಇದೆ, ಸದ್ಗುರು”. ಹಾಗಿದ್ದರೆ ಸರಿ, ಒಂದು ಗೋಡೆಯನ್ನೇ ಬೀಳಿಸಿಬಿಡಿ, ಮತ್ತು ಅದರಿಂದ ಸ್ವಲ್ಪ ಸೂರ್ಯನ ಬೆಳಕಾದರೂ ನಿಮ್ಮ ಬಳಿ ಬರಲಿ. ಹೌದು. ಎಲ್ಲವನ್ನೂ ಮುಚ್ಚಿ ಕೇವಲ ಒಂದು ಹವಾನಿಯಂತ್ರಣ ಯಂತ್ರವನ್ನು ಮನೆಯಲ್ಲಿ ಸದಾಕಾಲ ಬುರ್ರ್.... ಎಂದು ಓಡಿಸುತ್ತಿರಬಾರದು.

ಇದು ಒಂದು ವಿಷಯ. ನಿಮ್ಮ ಸುತ್ತಲಿನ ಶಬ್ದ ಹಾಗೂ ಕಂಪನಗಳು ಈ ದೇಹವನ್ನು ಸಂಪೂರ್ಣವಾಗಿ ವಿಲಕ್ಷಣಗೊಳಿಸುತ್ತಿವೆ. ಸದಾಕಾಲ ಯಾವುದೋ ಒಂದು ಯಂತ್ರ ಬರ್ರ್... ಎನ್ನುತ್ತಿರುತ್ತದೆ. ನಾನು ಹೊರದೇಶಗಳಿಗೆ ಹೋದಾಗ, ವಿಶೇಷವಾಗಿ ಅಮೇರಿಕ, ಯುರೋಪಿನಲ್ಲಿ, ಎಲ್ಲ ಸಮಯದಲ್ಲೂ ಏನಾದರೊಂದು ಝೇಂಕರಿಸುತ್ತಲೇ ಇರುತ್ತದೆ, ನಿರಂತರವಾಗಿ! ಹೆಚ್ಚಿನ ಜನರಿಗೆ ಇದರ ಅರಿವೇ ಇಲ್ಲ ಆದರೆ ಅದು ಅವರ ಮೇಲೆ ಪರಿಣಾಮವನ್ನು ಬೀರುತ್ತಿರುತ್ತದೆ. ಇಂದು ಜನರು ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರಿಸುತ್ತಿದ್ದಾರೆ ಎಂದರೆ, ಅವರು ಅವರ ನೈಸರ್ಗಿಕ ವಾಸಸ್ಥಾನದಲ್ಲಿ ವಾಸಿಸುತ್ತಿಲ್ಲ ಎಂದರ್ಥ. ಅವರು ನಿದ್ರಿಸುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಷ್ಟೆ.

ಆದ್ದರಿಂದ, ನಿಮ್ಮನ್ನು ನೀವು ರೋಗದಿಂದ ರಕ್ಷಿಸಿಕೊಳ್ಳಲು, ಮಾನಸಿಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು, ಎಲ್ಲಾ ರೀತಿಯ ಅಸಮತೋಲನಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ, ನೀವು ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ನಿದ್ರಿಸುತ್ತಿದ್ದೀರಿ. ಅಂದರೆ ನೀವು ನಿಮ್ಮ ಜೀವನದ ಅರ್ಧ ಸಮಯ ಸತ್ತಿದ್ದೀರಿ ಎಂದರ್ಥ. ಸಾವು ಯಾವಾಗಲೂ ಒಂದು ಉತ್ತಮ ಪರಿಹಾರವಾಗಿದೆ, ಆದರೆ ನಾವು ಹುಡುಕುತ್ತಿರುವ ಪರಿಹಾರ ಅದಲ್ಲ. ನಾವು ಜೀವನಕ್ಕಾಗಿ ಒಂದು ಪರಿಹಾರವನ್ನು ಹುಡುಕುತ್ತಿದ್ದೇವೆ, ಅಂತಿಮ ಪರಿಹಾರಕ್ಕಾಗಲ್ಲ. ನೀವು ಏನನ್ನಾದರೂ ಕೊನೆಗಾಣಿಸಿದರೆ, ಅದನ್ನು ನಿವಾರಿಸಿದಂತೆ, ಅಲ್ಲವೇ? ಹೌದು, ಆದರೆ ಅದು ನಮಗೆ ಬೇಕಾದ ರೀತಿಯಲ್ಲಿ ಆಗಿರುವುದಿಲ್ಲ ಅಷ್ಟೆ. ನಮಗೆ ಇಲ್ಲಿರಬೇಕು ಎಂಬ ಹಂಬಲ, ಜೀವಂತವಾಗಿ ಮತ್ತು ಅತ್ಯುತ್ತಮ ರೀತಿಯಲ್ಲಿ!

ಆದ್ದರಿಂದ ಇದು ಸಂಭವಿಸಬೇಕಾದರೆ, ನೀವು ಮಲಗುವ ಸ್ಥಳದಲ್ಲಿ ಒಂದೆರಡು ಗಿಡಗಳನ್ನು ತಂದಿಟ್ಟುಕೊಳ್ಳಿ. ಇದು ನಿಮಗೆ ವಿಲಕ್ಷಣವಾಗಿ ಕಾಣಿಸಬಹುದು ಎಂದು ನನಗೆ ತಿಳಿದಿದೆ. ನೀವು ನಡೆಯುವಾಗ, ಮನುಷ್ಯ ಜೀವವನ್ನು ಹೊರತುಪಡಿಸಿ ಬೇರೆ ಜೀವಗಳ ಬಗ್ಗೆಯೂ ನೀವು ಸದಾ ಜಾಗೃತರಾಗಿರಬೇಕು. ಹೆಚ್ಚಿನ ಜನರಿಗೆ ಮನುಷ್ಯರ ಬಗ್ಗೆಯೇ ಗಮನವಿರುವುದಿಲ್ಲ, ಆದ್ದರಿಂದ ನಾನು ನಿಮಗೆ ನೆನಪಿಸುತ್ತಿದ್ದೇನೆ, ನೀವು ಜೀವಂತವಾಗಿರುವ ಎಲ್ಲದರ ಬಗ್ಗೆಯೂ ಜಾಗೃತರಾಗಿರಬೇಕು. ಒಂದು ಮರ, ಒಂದು ಗಿಡ, ಒಂದು ಹುಲ್ಲುಕಡ್ದಿ, ಹಾರುತ್ತಿರುವ ಮಿಡತೆ ಮತ್ತು ನೀವು ಇಷ್ಟಪಡದ ಜನ, ಎಲ್ಲಾ ರೀತಿಯ ವಸ್ತು ಮತ್ತು ವಿಷಯಗಳಿಗೆ ನೀವು ಜಾಗೃತರಾಗಿರಬೇಕು. ನೀವು ಎಲ್ಲದಕ್ಕೂ ಜೀವಂತವಾಗಿರಬೇಕು.

“ಓಹ್, ನಾನು ಮರವನ್ನು ಪ್ರೀತಿಸುತ್ತೇನೆ” ಎಂದು ನೀವು ತೋರಿಸಿಕೊಂಡು ಓಡಾಡಬೇಕಿಲ್ಲ! ನೀವು ಮರವನ್ನು ಪ್ರೀತಿಸಬೇಕಾಗಿಲ್ಲ, ಅದರಿಂದ ನೀವು ಪೋಷಿಸಲ್ಪಡಬೇಕು, ಮತ್ತದು ಬದುಕುವ ಏಕೈಕ ಮಾರ್ಗ. ನೀವು ಇಷ್ಟಪಡುತ್ತೀರೋ ಇಲ್ಲವೋ, ಆದರೆ ಇದೀಗ ಅದು ನಿಮ್ಮನ್ನು ಪೋಷಿಸುತ್ತಿದೆ. ಪ್ರಜ್ಞಾಪೂರ್ವಕವಾಗಿ ನೀವದನ್ನು ಮಾಡಿದರೆ, ನಿಮ್ಮಲ್ಲಿ ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಸುತ್ತಲಿರುವ ಎಲ್ಲದಕ್ಕೂ, ತಾರತಮ್ಯ ಮಾಡದಂತೆ ಜೀವಂತವಾಗಿರುವುದು ಮತ್ತು ಸ್ಪಂದಿಸುವುದು ನಿಮ್ಮ ಥೈರಾಯ್ಡ್ ಸಮಸ್ಯೆಗಳನ್ನು ನಿವಾರಿಸಬಹುದು. ಸಹಜವಾಗಿ, ಬೆಳಿಗ್ಗೆ ಹಠ ಯೋಗವಿದೆ, ಕ್ರಿಯಾಗಳಿವೆ, ಈ ಎಲ್ಲಾ ವಿಷಯಗಳು ಖಂಡಿತವಾಗಿಯೂ ಸಹಾಯ ಮಾಡುತ್ತವೆ. ಮತ್ತು ಶಕ್ತಿಯುತವಾದ ಪ್ರತಿಷ್ಠಾಪಿತ ಸ್ಥಳಗಳಿವೆ, ಹೀಗೆ ಅನೇಕ ವಿಷಯಗಳು ನಿಮ್ಮ ನೆರವಿಗಿವೆ.

ಒಂದು ಮುಖ್ಯ ಕಾರಣವೆಂದರೆ, ತಂತ್ರಜ್ಞಾನ ಬೆಳೆದಂತೆಲ್ಲಾ ಮನುಷ್ಯರು ಅತಿ ಕಡಿಮೆ ಕ್ರಿಯಾಶೀಲರಾಗುತ್ತಿದ್ದಾರೆ. ಒಂದು ದಿನದಲ್ಲಿ, ಹಿಂದಿನ ತಲೆಮಾರಿನ ಜನರಿಗೆ ಹೋಲಿಸಿದರೆ ನಾವೆಲ್ಲರೂ ಎಷ್ಟು ದೈಹಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದ್ದೇವೆ ಎಂದರೆ - ಅದು ತೀರಾ ಕಡಿಮೆ. ಇಷ್ಟು ಕಡಿಮೆ ಮಟ್ಟದ ಚಟುವಟಿಕೆಯೊಂದಿಗೆ, ನಮ್ಮ ದೇಹ ವ್ಯವಸ್ಥೆಯಲ್ಲಿ ಸಮತೋಲನವನ್ನು ಉಳಿಸಿಕೊಳ್ಳುವುದು ಕಷ್ಟ. ಆದ್ದರಿಂದ ನಿಮ್ಮಲ್ಲಿ ಸ್ವಲ್ಪ ಮಟ್ಟಿಗಿನ ಅಸಮತೋಲನ ಉಂಟಾದಾಗ, ಮಲಗಲು ಹೋಗಬೇಡಿ. ಎದ್ದು ಕ್ರಿಯಾಶೀಲರಾಗಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಎಲ್ಲೆಲ್ಲಿ ಹುರುಪು ಮತ್ತು ಸಂತೋಷದಿಂದ ಕೂಡಿದ ಚಟುವಟಿಕೆ ನಡೆಯುತ್ತಿರುತ್ತದೋ, ನೀವು ಆ ಚಟುವಟಿಕೆಯೊಳಕ್ಕೆ ಜಿಗಿಯಿರಿ ಮತ್ತು ಅನಾರೋಗ್ಯದಿಂದ ನೀವು ಬಳಲುತ್ತಿದ್ದರೆ ಇನ್ನೂ ಹೆಚ್ಚಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಏಕೆಂದರೆ ನೀವು ನಿಮ್ಮ ಸಮಸ್ಯೆಗೆ ಹಿಂತಿರುಗಿದ ಕ್ಷಣ, ನೀವದನ್ನು ನಿಜವಾಗಿಯೂ ಸಶಕ್ತಗೊಳಿಸುತ್ತಿದ್ದೀರಿ ಎಂದರ್ಥ. ನೀವು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದು ಬೇರೆ ವಿಷಯ, ಇಲ್ಲದಿದ್ದರೆ, ಮೂಲಭೂತವಾಗಿ, ವಿವಿಧ ರೀತಿಯ ಗ್ರಂಥಿಗಳ ಅಸಮರ್ಪಕ ಕಾರ್ಯನಿರ್ವಹಣೆಗೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೇ ಒಂದು ಸರಳ ಪರಿಹಾರವಾಗಿದೆ.

ಮತ್ತು ಚಟುವಟಿಕೆಯನ್ನು ಹೆಲ್ತ್ ಬ್ಯಾಂಡ್ ಕಟ್ಟಿಕೊಂಡು ಮಾಡಬೇಡಿ. ಹತ್ತು ಹೆಜ್ಜೆ, ಹನ್ನೆರಡು ಹೆಜ್ಜೆ – ಹೀಗೆ ಲೆಕ್ಕಹಾಕುತ್ತಾ ಮಾಡಬೇಡಿ - ಅದು ಚಟುವಟಿಕೆ ಮಾಡುವ ವಿಧಾನವಲ್ಲ ಮತ್ತು ಹಾಗೆ ಮಾಡುವುದರಿಂದ ನೀವು ಇನ್ನೂ ಹೆಚ್ಚಿನ ಅನಾರೋಗ್ಯಕ್ಕೆ ಒಳಗಾಗಬಹುದು. ಸರಳವಾಗಿ, ಸಂತೋಷದಿಂದ ಏನನ್ನಾದರೂ ಮಾಡುವುದನ್ನು, ಸಂತೋಷದಿಂದ ಜೀವಂತವಾಗಿರುವುದನ್ನು ಕಲಿಯಿರಿ. ಸುಮ್ಮನೆ ಒಂದೆಡೆ ಕುಳಿತು ಉತ್ಸಾಹದಿಂದ ಜೀವಂತವಾಗಿರುವುದು ಹೇಗೆಂದು ನಿಮಗೆ ತಿಳಿದಿಲ್ಲದಿದ್ದರೆ, ಹೋಗಿ ಆಟವಾಡಿ…, ಸುಮ್ಮನೆ ಓಡಿ. ನೀವು ನಡೆಯುತ್ತಿರುವಾಗ ಒಂದು ಮಿಡತೆಯನ್ನು ಅನುಕರಿಸಿ. ಏಕೆ ಪ್ರಯತ್ನಿಸಬಾರದು? ನೀವು ಎಂದಿಗೂ ಹಾಗೆ ಮಾಡೇ ಇಲ್ಲವೇ? ಇದೇ ನಿಮ್ಮೊಂದಿಗಿನ ಸಮಸ್ಯೆ. ನೀವು ಹಾಗೆ ನಡೆಯುತ್ತಿರುವುದನ್ನು ನೋಡಲು ನಾನು ಬಯಸುತ್ತೇನೆ. ನೀವು ಹುಲ್ಲಿನ ಮೇಲೆ ಮಿಡತೆಯಂತೆ ಚುಕ್, ಚುಕ್, ಚುಕ್, ಚುಕ್, ಚುಕ್ ಎಂದು ಹಾರಿ ಹಾರಿ ನಡೆಯಿರಿ. ಆಗ ನಿಮ್ಮಲ್ಲಿ ಎಷ್ಟು ಜೀವಂತಿಕೆ ತುಂಬುತ್ತದೆ ಎಂಬುದನ್ನು ನೀವೇ ನೋಡುತ್ತೀರಿ.

ಮೂಲಭೂತವಾಗಿ, ನಿಮ್ಮ ಮೊದಲ ಸಮಸ್ಯೆ ಏನೆಂದರೆ ನೀವು ನಿಮ್ಮ ಜೀವನದ ಬಗ್ಗೆ ಅತ್ಯಂತ ಗಂಭೀರವಾಗಿದ್ದೀರಿ. ಆದ್ದರಿಂದ, ನಾವು ನಿಮಗೆ ಇದನ್ನು ಮತ್ತೆ ನೆನಪಿಸಬೇಕಾಗಿದೆ - ನೀವು ಹೇಗಿದ್ದರೂ ಒಂದು ದಿನ ಸಾಯುತ್ತೀರಿ, ಅದರ ಬಗ್ಗೆ ಅಷ್ಟು ಗಂಭೀರವಾಗಿರಬೇಡಿ. ಏಕೆಂದರೆ ಜೀವನ ಒಂದೇ ಒಂದು ಕ್ಷಣದಲ್ಲಿ ಮುಗಿದುಹೋಗಬಹುದು. ನೀವು ಅದರ ಮೇಲಿನ ನಿಮ್ಮ ಹಿಡಿತವನ್ನು ಸಡಿಲಗೊಳಿಸಬೇಕು. ಈಗ ನೀವು ನಿಮ್ಮ ಹಿಡಿತವನ್ನು ಸಡಿಲಿಸಿದರೆ, ಆ ಕೊನೇ ಕ್ಷಣ ವಿಭಿನ್ನವಾಗಿರುತ್ತದೆ. ಈಗಲೇ ನೀವು ಹಿಡಿತವನ್ನು ಸಡಿಲಗೊಳಿಸಿದರೆ, ಜೀವನವು ನಿಮಗೆ ಅದ್ಭುತವಾದ ರೀತಿಯಲ್ಲಿ ಸಂಭವಿಸುತ್ತದೆ.