'ಸೂರ್ಯ ಕ್ರಿಯಾ' ಪ್ರಾಚೀನವಾದಂತಹ ಒಂದು ಪ್ರಭಾವಶಾಲಿ ಯೋಗಾಭ್ಯಾಸವಾಗಿದ್ದು, ಆರೋಗ್ಯ, ಯೋಗಕ್ಷೇಮ ಮತ್ತು ಸಂಪೂರ್ಣ ಆಂತರ್ಯದ ಸೌಖ್ಯಕ್ಕಾಗಿ ರೂಪಿಸಲಾಗಿರುವ ಒಂದು ಸಮಗ್ರವಾದ ಪ್ರಕ್ರಿಯೆಯಾಗಿದೆ.

ಸದ್ಗುರು: ಸೂರ್ಯ ಕ್ರಿಯಾ ನಿಮ್ಮೊಳಗಿನ ಸೂರ್ಯನನ್ನು ಸಕ್ರಿಯಗೊಳಿಸುವಂತಹ ಒಂದು ಪ್ರಬಲವಾದ ಪ್ರಕ್ರಿಯೆ. ಈ ಗ್ರಹದ ಮೇಲೆ ನೀವು ನೋಡುವ ಪ್ರತಿಯೊಂದು ಅಂಶದಲ್ಲೂ ನೀವು ಸೂರ್ಯನನ್ನು ಕಾಣಬಹುದಾಗಿದೆ. ಮೂಲಭೂತವಾಗಿ ಸೌರಶಕ್ತಿಯೇ ಈ ಗ್ರಹವನ್ನು ನಡೆಸುತ್ತಿರುವುದು. ಆದ್ದರಿಂದ, ನಾವು ಸೂರ್ಯ ಕ್ರಿಯಾವನ್ನು ಮಾಡುವ ಮೂಲಕ ನಮ್ಮ ದೇಹದೊಳಗೆ ಸೌರಶಕ್ತಿಯನ್ನು ಉತ್ಪಾದಿಸಲು ಬಯಸುತ್ತಿದ್ದೇವೆ. ಸೂರ್ಯ ನಮಸ್ಕಾರವು ಸೂರ್ಯಕ್ರಿಯಾದ ಸಂಬಂಧಿಯಾಗಿದ್ದು, ಅದು ಸೂರ್ಯ ಕ್ರಿಯಾದಿಂದ ವಿಕಸನಗೊಂಡಂತಹ ಒಂದು ರೀತಿಯ ಅಭ್ಯಾಸವಾಗಿದೆ. ಸೂರ್ಯ ನಮಸ್ಕಾರವು ಹೆಚ್ಚಾಗಿ ಸೂರ್ಯನಿಗೆ ವಂದಿಸುವ ಒಂದು ಪ್ರಕ್ರಿಯೆ. ಆದರೆ ಸೂರ್ಯಕ್ರಿಯಾ ಪ್ರಕ್ರಿಯೆಯು ಹೆಚ್ಚಿನ ಆಧ್ಯಾತ್ಮಿಕ ಉದ್ದೇಶಗಳನ್ನು ಹಾಗೂ ಅತ್ಯಂತ ಪ್ರಬಲವಾದ ಒಳ ಅರ್ಥಗಳನ್ನು ಹೊಂದಿದೆ. ಸೂರ್ಯಕ್ರಿಯಾಗೆ ಇರುವ ಬೇರೆಬೇರೆ ಆಯಾಮಗಳೆಂದರೆ - ಭೌತಿಕವಾಗಿ ಇದೊಂದು ಶಕ್ತಿಯುತವಾದ ಪ್ರಕ್ರಿಯೆ. ನಿಮ್ಮ ಮನಸ್ಸನ್ನು ಅದು ಪಳಗಿಸುವ ರೀತಿಗೆ ಸಮಾನವಾದದ್ದು ಬೇರೊಂದಿಲ್ಲ. ಅದಕ್ಕೆ ಅತೀಂದ್ರಿಯವಾದ ಆಯಾಮಗಳಿವೆ. ಅದು ನಿಮ್ಮ ದೇಹವನ್ನು ಅಂತರಿಕ್ಷದ ಚಟುವಟಿಕೆಗಳಿಗೆ ಹೊಂದಿಸುವಂತಹ ಒಂದು ವಿಧಾನವಾಗಿದೆ. ಕೇವಲ ನಿಮ್ಮ ಭೌತಿಕ ವ್ಯವಸ್ಥೆಯನ್ನು ಮಾತ್ರವಲ್ಲ, ಅದು ನಿಮ್ಮ ಪ್ರಾಣಶಕ್ತಿಯ ವ್ಯವಸ್ಥೆಯನ್ನು ಹಾಗೂ ನಿಮ್ಮ ಮಾನಸಿಕ ಪ್ರಕ್ರಿಯೆಯನ್ನು ಅಂತರಿಕ್ಷದ ಜ್ಯಾಮಿತಿಗೆ ಹೊಂದಿಸುವ ಮೂಲಕ ನಿಮ್ಮನ್ನು ಇಡೀ ಅಸ್ತಿತ್ವದೊಂದಿಗೆ ಹೊಂದಾಣಿಕೆಯಲ್ಲಿರುವಂತೆ ಮಾಡುತ್ತದೆ. ಸೂರ್ಯನ ಪರಿಭ್ರಮಣದ(ಸೋಲಾರ್ ಸೈಕಲ್) ಅವಧಿಯು ಹನ್ನೆರಡು ಕಾಲು ವರ್ಷದಿಂದ ಹನ್ನೆರಡುವರೆ ವರ್ಷಗಳು. ಚಂದ್ರನ ಪರಿಭ್ರಮಣದ ಅವಧಿ 28 ದಿನಗಳು. ನಿಮ್ಮ ಭೌತಿಕ ಚಕ್ರಗಳು ಸೂರ್ಯನ ಪರಿಭ್ರಮಣದ ಅವಧಿಯೊಂದಿಗೆ ಹೊಂದಿಕೊಂಡಿದ್ದರೆ ನಿಮ್ಮ ದೈಹಿಕ ಆರೋಗ್ಯ ಅತ್ಯುತ್ತಮವಾಗಿರುತ್ತದೆ, ನಿಮ್ಮ ಮಾನಸಿಕ ಸಂತುಲನ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಜೀವನ ಅನಾಯಾಸವಾಗಿ ನಡೆಯುತ್ತದೆ. ಯೋಗದ ಉದ್ದೇಶವಿರುವುದು - ನಿಮ್ಮ ದೇಹವು ಸಂಭವನೀಯತೆಗಳಿಗೆ ಒಂದು ದಾರಿಯಾಗಬೇಕೆಂಬುದೇ ವಿನಃ ‘ತಡೆ’ಯಾಗಬೇಕೆಂದಲ್ಲ; ಹಾಗಾಗಬೇಕಾದರೆ ನಿಮ್ಮ ವ್ಯವಸ್ಥೆಯಲ್ಲಿನ ಪ್ರತಿಯೊಂದು ಅಂಶವೂ ಅತ್ಯಂತ ಕನಿಷ್ಠ ಪ್ರತಿರೋಧ ಹಾಗೂ ಕನಿಷ್ಠ ಘರ್ಷಣೆಯೊಂದಿಗೆ ನಡೆಯಬೇಕು. ಹಠ ಯೋಗದ ಉದ್ದೇಶ ಕೇವಲ ನಿಮ್ಮ ಭೌತಿಕ ದೇಹವನ್ನು ತಿದ್ದಿ ತೀಡುವುದು ಮಾತ್ರವಲ್ಲ ಬದಲಿಗೆ ಸಂಪೂರ್ಣ ವ್ಯವಸ್ಥೆಯನ್ನು ತಿದ್ದಿ ತೀಡುವುದಾಗಿದೆ - ಯಾವ ಮಟ್ಟಿಗೆಂದರೆ ಈ ಎಲ್ಲ ಘರ್ಷಣೆಗಳು ಕೊನೆಗೊಂಡು ಅಥವಾ ಮೃದುಗೊಂಡು, ಕೆಲ ಸಮಯದ ನಂತರ ನೀವು ಸುಮ್ಮನೆ ಕುಳಿತರೆ ನಿಮ್ಮೊಳಗೆ ಯಾವುದೇ ಘರ್ಷಣೆಯ ಅರಿವೂ ಇರುವುದಿಲ್ಲ. ಆಗ ನೀವು ಕೇವಲ ಬಾಹ್ಯವನ್ನು ಮಾತ್ರ ನಿಭಾಯಿಸಬೇಕಾಗುತ್ತದೆ, ಇನ್ನೇನೂ ಉಳಿದಿರುವುದಿಲ್ಲ. ಈ ಮಾನವ ದೇಹ ಮತ್ತು ಇದರ ವ್ಯವಸ್ಥೆ ಆಗ ಅಡಚಣೆಯಾಗಿರುವುದಿಲ್ಲ. ಹಾಗಾದಾಗ ಮಾತ್ರವೇ ನೀವು ಬಾಹ್ಯ ಪ್ರಪಂಚವನ್ನು ಅಸಾಧಾರಣವಾದ ಅನಾಯಾಸದೊಂದಿಗೆ ಮತ್ತು ಸಾಮರ್ಥ್ಯದೊಂದಿಗೆ ಎದುರಿಸಬಲ್ಲಿರಿ. ಸೂರ್ಯಕ್ರಿಯಾದ ಬಗ್ಗೆ ಹೇಳುವುದಾದರೆ - ನಮ್ಮ ವ್ಯವಸ್ಥೆಯನ್ನು ಸರಾಗಗೊಳಿಸುವ ದಿಕ್ಕಿನಲ್ಲಿ ಅದೊಂದು ಅಸಾಧರಣವಾದ ಪ್ರಕ್ರಿಯೆ. ಸೌರಮಂಡಲದ ದೊಡ್ಡ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಉಂಟಾಗದೆ ನಮ್ಮ ವ್ಯವಸ್ಥೆಯಲ್ಲಿ ಇಂತಹ ಸರಾಗತೆ ಬರಲು ಸಾಧ್ಯವಿಲ್ಲ. ನೀವು ಯಾರೆಂಬುದರ ವಿಸ್ತಾರವಾದ ದೇಹವೇ ಸೌರವ್ಯೂಹ. ಆದ್ದರಿಂದಲೇ ಇದನ್ನು ಹಠಯೋಗವೆಂದು ಕರೆಯುವುದು.