Nimma manassu swasthavagideye?

ಲಿಪ್ಯಂತರ:

ಪ್ರಶ್ನೆ: ಸದ್ಗುರು ನಮಸ್ಕಾರಂ, ನಿಮ್ಮ ಹಿಂದಿನ ಪ್ರವಚನಗಳಲ್ಲಿ ನೀವು ಹೇಳಿದ್ರಿ 30 ಪ್ರತಿಶತ ಖಾಯಿಲೆಗಳು ದೇಹದ್ದು, ಮಿಕ್ಕಿದ್ದೆಲ್ಲ ಮನಸ್ಸಿನ ಸೃಷ್ಟಿ ಅಂತ. ನನ್ನ ಪ್ರಶ್ನೆ ಏನಂದ್ರೆ ನಮಗೆ ಖಾಯಿಲೆಗಳು ಬಂದಿದ್ದ ಪಕ್ಷದಲ್ಲಿ ಅದು ಮನಸ್ಸಿನ ಸೃಷ್ಟಿನಾ ಅಥವಾ ದೇಹದ್ದಾ ಅಂತ ಹೇಗೆ ಗೊತ್ತಾಗತ್ತೆ? ಅದೇನಾದ್ರು ಮನಸ್ಸಿನ ಒತ್ತಡದಿಂದ ಉಂಟಾದ ದೈಹಿಕ ಖಾಯಿಲೆಯಾಗಿದ್ದಲ್ಲಿ, ಅದರ ಹಿಂದೆ ಇರೋ ಭಾವನೆಗಳು ಮತ್ತು ಆಲೋಚನೆಗಳು ಎಂಥವು? ಅದನ್ನ ತಿಳಿಯೋದು ಹೇಗೆ ಮತ್ತು ಸಾಧ್ಯವಾದಲ್ಲಿ ಅದನ್ನ ಸರಿಪಡಿಸೋದು ಹೇಗೆ? ಧನ್ಯವಾದ.

ಸದ್ಗುರು: ಒಂದ್ವೇಳೆ ನಿಮ್ಮ ಬಲಗೈ ಮೇಲೆದ್ದು ಹುಚ್ ಹುಚ್ಚಾಗಿ ಏನೇನೋ ಮಾಡಿ, ನಿಮಗೆ ಹೊಡೆದು, ಕಣ್ಣಿಗೆ ಚುಚ್ಚಿದ್ರೆ (ನಗು ), ನಿಮಗೆ ಖಾಯಿಲೆ ಇದ್ಯಾ ಇಲ್ವಾ? ಇದೆ ಅಲ್ವಾ? ಖಂಡಿತ ಇದೆ. ನಿಮ್ಮ ಮನಸ್ಸು ಮಾಡ್ತಿರೋದು ಇದನ್ನೇ ಅಲ್ವಾ? ಮೇಲೇಳತ್ತೆ, ಎಗರಾಡುತ್ತೆ, ತೊಂದರೆ ಕೊಡತ್ತೆ, ಚುಚ್ಚತ್ತೆ, ಅಳೋ ಹಾಗೆ ಮಾಡತ್ತೆ, ನರಳೋ ಹಾಗೆ ಮಾಡತ್ತೆ. ನಿಮಗೆ ಖಾಯಿಲೆ ಇದೆಯೋ ಇಲ್ವೋ?

ಒಂದ್ವೇಳೆ ನಿಮ್ಮ ಕೈ ನಿಮಗೆ ಚುಚ್ತಿದ್ರೆ, ಗುದ್ದುತಿದ್ರೆ, ಹೊಡೀತಿದ್ರೆ ಖಂಡಿತವಾಗ್ಲೂ ನಿಮಗೆ ಖಾಯಿಲೆ ಇದೆ, ಅಲ್ವೇ? ಹೌದು. ಹಾಗಾದ್ರೆ ನಿಮ್ಮ ಯೋಚನೆಗಳು ಭಾವನೆಗಳು ಪ್ರತಿದಿನ ನಿಮ್ಮನ್ನ ಚುಚ್ತಿದ್ರೆ, ಕತ್ ಹಿಸುಕ್ತಿದ್ರೆ, ನರಳಾಟ ಕೊಡ್ತಿದ್ರೆ, ನಿಮಗೆ ಖಾಯಿಲೆ ಇಲ್ವಾ ಅಂತ ಕೇಳ್ತಿದ್ದೀನಿ? ಹ್ಮ್? ನಾನ್ ನಿಮ್ ಹೇಳಿಕೆ ಪ್ರಕಾರಾನೇ ಹೋಗ್ತಿದ್ದೀನಿ. (ನಗು)

ಹಾಗಾಗಿ ಈ ಖಾಯಿಲೆ ಇರೋದ್ರಿಂದ, ಅದು ಭೌತಿಕ ಶರೀರದಲ್ಲಿ ಹಲವು ರೀತಿಗಳಲ್ಲಿ ಅಭಿವ್ಯಕ್ತವಾಗತ್ತೆ. ಇದ್ರ್ ಬಗ್ಗೆ ಎರಡು ಮಾತೇ ಇಲ್ಲ. ಪ್ರತಿಯೊಂದು ಆಲೋಚನೆ, ಮನಸ್ಸಿನಲ್ಲಿನ ಪ್ರತಿಯೊಂದು ಕಂಪನ, ಯಾವ ಥರದ ಕಂಪನ ಉಂಟ್ ಮಾಡ್ತೀರಿ ಅನ್ನೋದರ ಆಧಾರದ ಮೇಲೆ, ನಿಮ್ಮ ಶರೀರದ ಸಂಪೂರ್ಣ ಕೆಮಿಸ್ಟ್ರಿ ಬದಲಾಗ್ತಿದೆ. ಇವೆಲ್ಲವನ್ನೂ ಮಾಪನ ಮಾಡಿದಾರೆ. ಈಗ ನೀವಿಲ್ಲಿ ಕೂತು ಹುಲಿಗಳ ಬಗ್ಗೆ ಯೋಚಿಸಿದ್ರೆ, ನಿಮಗೆ ಒಂಥರದ ಕೆಮಿಸ್ಟ್ರಿ ಇರುತ್ತೆ, ರಾಸಾಯನಿಕ ಬದಲಾವಣೆ ಆಗತ್ತೆ. ಹೂವುಗಳ ಬಗ್ಗೆ ಯೋಚಿಸಿದ್ರೆ ಮತ್ತೊಂಥರ ರಾಸಾಯನಿಕ ಬದಲಾವಣೆ ಆಗತ್ತೆ. ಇವೆಲ್ಲವನ್ನೂ ಮಾಪನ ಮಾಡಲಾಗಿದೆ. ಆದ್ರಿಂದ ಪ್ರತಿಯೊಂದು ಆಲೋಚನೆಯಿಂದ, ನಿಮ್ಮ ಇಡೀ ರಾಸಾಯನಿಕ ವ್ಯವಸ್ಥೆ ಬದಲಾಗ್ತಿದ್ರೆ, ನಿಮ್ಮ ಮನಸ್ಸು ಈ ಸ್ಥಿತಿಯಲ್ಲಿದ್ರೆ, ಇಲ್ಲಿ ಯಾವ ಥರದ ರಸಾಯನ ಮಾಡ್ತಿದ್ದೀರಿ ಗೊತ್ತಾ? ನೀವೊಬ್ಬ ಕಳಪೆ ರಸಾಯನ! ಬರಿ ಕಳಪೆಯಲ್ಲ, ವಿಷಮಯ ಕೂಡ.

ಇಂಥ ವಿಷಮಯ ರಸಾಯನದಲ್ಲಿ ನೀವು ದಿನನಿತ್ಯ ಮುಳುಗ್ತಿದ್ರೆ, ಸೌಖ್ಯ ಅನ್ನೋದು ಹೇಗೆ ಗೊತ್ತಾಗತ್ತೆ? ಅದು ಹಂಗೆಲ್ಲ ಆಗಲ್ಲ. ಇವತ್ತಿನ ದಿನ, ಪ್ರಪಂಚದಲ್ಲಿ ನಮಗೆ ಹೆಚ್ಚು ನಿಯಂತ್ರಣ ಇಲ್ಲ — ನಾವು ಏನನ್ ತಿಂತೀವಿ, ಏನನ್ ಕುಡೀತಿವಿ, ಏನನ್ ಉಸಿರಾಡ್ತೀವಿ ಅನ್ನೋದ್ರ್ ಬಗ್ಗೆ. ಎಲ್ಲವೂ ಒಂದ್ ಮಟ್ಟಿಗೆ ವಿಷಮಯವಾಗಿವೆ. ಆಧುನಿಕ ಸಮಾಜಗಳು ರೋಗಗಳು ಸ್ವಾಭಾವಿಕ ಅಂತ ಅಂದ್ಕೊಳೋದಿಕ್ಕೆ ಶುರು ಮಾಡಿವೆ, ಇದೊಂದು ಗಂಭೀರವಾದ ತಪ್ಪು. ಹಿಂದಿನ ಕಾಲದ ಸಮಾಜಗಳು ಯಾವಾಗ್ಲೂ ಖಾಯಿಲೆಯನ್ನು ಒಂದು ದೋಷದಂತೆ ನೋಡ್ತಿದ್ರು. ಮನುಷ್ಯ ಇರ್ಬೇಕಾಗಿರೋದು ಹಾಗಲ್ಲ. ಒಬ್ಬ ಮನುಷ್ಯ ಯಾವುದೇ ಖಾಯಿಲೆಯ ಸ್ಥಿತಿಯಲ್ಲಿ ಇರ್ಬಾರ್ದು, ಏಕೆಂದ್ರೆ ಖಾಯಿಲೆ ಅಂದ್ರೆ ಮೂಲಭೂತವಾಗಿ ಏನೋ ತಪ್ಪಾಗಿದೆ ಅಂತ. ಆದ್ರೆ ಆಧುನಿಕ ಸಮಾಜ ಇದನ್ನ ಒಂದು ಸಹಜ ಸಂಗತಿ ಅಂತ ನೋಡೋದಿಕ್ಕೆ ಪ್ರಾರಂಭಿಸಿದೆ. ಏಕೆಂದ್ರೆ, ಒಂದು ಬಹುದೊಡ್ಡ ಉದ್ಯಮವೇ ನಡೀತಿದೆ, ನಿಮ್ಮ ರೋಗದ ಮೇಲೆ (ನಗು). ತುಂಬಾ ದೊಡ್ಡ ಉದ್ಯಮ. ಪ್ರಪಂಚದ ಎರಡನೇ ಅತಿದೊಡ್ಡ ಉದ್ಯಮವೇ pharmaceuticals ಅಂದ್ರೆ ಔಷಧಿಯದ್ದು.

ಹಾಗಾಗಿ, ಪ್ರಪಂಚದ ಎರಡನೇ ಅತಿದೊಡ್ಡ ಉದ್ಯಮವೇ pharmaceuticals ಅಂತಂದ್ರೆ, ಜಗತ್ತಿನಲ್ಲಿ ಸಿಕ್ಕಾಪಟ್ಟೆ ಕಳಪೆ ರಸಾಯನ ಇದೆ ಅಂತರ್ಥ (ನಗು) ಅಲ್ವಾ? ಪ್ರತಿದಿನ ಏನಾದ್ರು ಒಂದನ್ನ ಇದಕ್ಕೆ ಹಾಕ್ಬೇಕು ಇದನ್ನ ಸರಿಯಾಗಿಡಕ್ಕೆ (gestures). ಇಲ್ಲ, ನಿಮಗೆ ಬೇಕಿದ್ರೆ ನೀವಿದನ್ನ ಬಹಳ ಚೆನ್ನಾಗಿರೋ ರಸಾಯನವನ್ನಾಗಿ ಮಾಡಬೋದು. ನಿಮ್ ಕೆಮಿಸ್ಟ್ರಿ ಅತ್ಯದ್ಭುತವಾದ ಸ್ಥಿತಿಯಲ್ಲಿದ್ರೆ, ಆನಂದವಾಗಿರೋದು ಸ್ವಾಭಾವಿಕ. ಇದನ್ನ ನೀವು ಮಾಡಿದ್ರೆ, ನನ್ನ ನಂಬಿ, ಪ್ರಪಂಚದಿಂದ 70 ಪರ್ಸೆಂಟ್ ಖಾಯಿಲೆಗಳು ಮಾಯವಾಗಿ ಬಿಡುತ್ತೆ. ಮಿಕ್ಕಿದ 30 ಪರ್ಸೆಂಟ್... ನೋಡಿ ಹಲವಾರು ಹೊರಗಿನ ಪ್ರಭಾವಗಳಿವೆ, ಅವು ಯಾವಾಗ್ಲೂ ನಿಮ್ಮ ನಿಯಂತ್ರಣದಲ್ಲಿರಲ್ಲ. ನಿಮಗ್ ಅದನ್ನ ನಿಯಂತ್ರಿಸಕ್ಕೆ ಆಗಲ್ಲ, ಸ್ವಲ್ಪ ಮಟ್ಟಿಗೆ ಮಾಡ್ಬಹುದು ಅಷ್ಟೆ. ಆದ್ರಿಂದ ನೀವು ಸತತವಾಗಿ ನಿಮ್ಮೊಳಗೆ ಅಸಹ್ಯವಾದ ಕೆಮಿಸ್ಟ್ರಿ ಯನ್ನ ಸೃಷ್ಟಿಸ್ತಿದ್ರೆ, ನಿಮ್ಮೊಳಗಿನ ಜೀವಕ್ಕೆ ಹೇಗೆ ಗೊತ್ತಾಗ್ಬೇಕು, ನೀವು ಸೌಖ್ಯವನ್ನ ಹಂಬಲಿಸ್ತಿದೀರಾ ಅಂತ? ಹೇಗೆ? ಇದು ಅನ್ಯಾಯ (ನಗು). ನಿಮ್ಮೊಳಗಿರೋ ಜೀವಕ್ಕೆ ಅನ್ಸತ್ತೆ, "ಇವನಿಗೆ ಖಾಯಿಲೆಗಳೇ ಇಷ್ಟ" ಅಂತ, ಮತ್ತು ಅದನ್ನೇ ಕೊಡತ್ತೆ. ಅಲ್ವಾ? ನಿಮಗ್ ನೀವು ಒಳಗಿಂದಾನೇ ವಿಷ ಹಾಕ್ತಿದ್ರೆ... ಈಗಿದಕ್ಕೆ ಸಾಕಷ್ಟು ಪುರಾವೆಯಿದೆ, ನಿಮ್ಮ ಪ್ರತಿ ಆಲೋಚನೆ ಮತ್ತು ಭಾವನೆಗಳಿಗೆ ನಿಮ್ಮ ಶರೀರದ ರಾಸಾಯನಿಕ ಸಂಯೋಜನೆ ಬದಲಾಗ್ತಿದೆ ಅಂತ. ನೀವು ಒಳಗಿಂದಾನೇ ವಿಷ ಉಂಟ್ ಮಾಡ್ಕೋತಿದ್ದು, ಚೆನ್ನಾಗಿ ಜೀವಿಸ್ಬೇಕು ಅಂದ್ರೆ, ಅದು ಹೇಗೆ ಸಾಧ್ಯ? ಜೀವನ ಆ ತರ ನಡಿಯಲ್ಲ. ನೀವು ಸರಿಯಾದ ಸಂಗ್ತಿಗಳನ್ನ ಮಾಡ್ದಿದ್ರೆ, ಸರಿಯಾದ ಸಂಗ್ತಿಗಳು ನಿಮ್ ಜೊತೆ ನಡಿಯಲ್ಲ.