Nimma Hindina Janmagala sambandhagala bagge kutuuhalave?

ಲಿಪ್ಯಂತರ:

ಪ್ರಶ್ನೆ – ಹಿಂದಿನ ಜನ್ಮಗಳು ಅಂತ ಏನಾದರೂ ಇದ್ರೆ, ಅವುಗಳಿಗೂ ಮತ್ತು ಈ  ಜನ್ಮದಲ್ಲಿರೋ ಜನ್ರಿಗೂ ಸಂಬಂಧ ಇರತ್ತ? ನಾನ್ ಇದನ್ನ ಯಾಕ್ ಕೇಳ್ತ ಇದೀನಿ ಅಂದ್ರೆ, ನನ್ ಹೆಂಡ್ತಿ ಇಲ್ಲಿನ ನಿಮ್ program ಮಾಡಿದ್ಮೇಲೆ, ನನ್ನನ್ನ ಕೇಳಿದ್ಳು, “ನಾನ್ ಹೇಗೆ ನಿಮ್ಮನ್ನ ಮದ್ವೆಯಾದೆ?” ಅಂತ

ಸದ್ಗುರು: "So..." (ನಗು) “ನಾನ್ ಹೇಗಾದ್ರೂ ನಿನ್ನನ್ ಮದ್ವೆಯಾದೆ?” (ನಗು) ನಂಗ್ ಅನ್ಸತ್ತೆ ತುಂಬಾ ಜನ ಆ ಪ್ರಶ್ನೆ ಕೇಳ್ತ ಇದ್ದಾರೆ ಅಂತ (ನಗು). ಯಾರಾದರೂ ಆ ಪ್ರಶ್ನೇನ ಕೇಳ್ತಾ ಇದ್ರೆ, ನಿಮ್ಮನ್ ನೀವೆ ಸ್ವಲ್ಪ ಗಮನಿಸ್ಬೇಕು, ನಿಮ್ ಜೊತೆ ಏನಾಗ್ತ ಇದೆ ಅಂತ. ಅನೇಕ ವರ್ಷಗಳ ನಂತರ, ಯಾರಾದರೂ ಆಶ್ಚರ್ಯ ಪಡ್ತಿದ್ರೆ, ನಾನ್ ನಿನ್ನನ್ನ ಹೇಗಾದ್ರೂ ಮದ್ವೆಯಾದೆ? ಅಂತಂನ್ಕೊಂಡು – ನಿಜವಾಗ್ಲೂ ನೀವು ನಿಮ್ಮನ್ನೇ ಸ್ವಲ್ಪ ಗಮನಿಸ್ಬೇಕು ಹಿಂದಿನ್ ಜನ್ಮಗಳಲ್ಲ, ಈ ಜನ್ಮದಲ್ಲಿ ಹೇಗ್ ಬದುಕ್ತಿದ್ದೀರ ಅಂತ. ನಿಮ್ಮಲ್ಲ್ ಯಾರಾದರೂ ಆಶ್ಚರ್ಯ ಪಟ್ಕೊಂಡ್ರೆ “ನಾನ್ ಹೇಗ್ ನಿನ್ನನ್ನ ಮದ್ವೆಯಾದೆ?” ಅಂತ. ಹಿಂದಿನ್ ಜನ್ಮಗಳ ಬಗ್ಗೆ ಯೋಚಿಸ್ಬೇಡಿ, ಈ ಜನ್ಮದಲ್ಲಿ ಹೇಗ್ ಬದುಕ್ತ ಇದ್ದೀರ ಅಂತ ನೋಡ್ಕೊಳ್ಳಿ. ಇದು ಬಹಳ ಮುಖ್ಯ (ನಗು). 

"So..." ನಂಗ್ ಅನ್ಸತ್ತೆ, ಇದೆಲ್ಲ Bombay talkies ಸಮಸ್ಯೆ ಅಂತ. “ಜನಮ್ ಜನಮ್” ಅಂತ ಏನೇನೋ (ನಗು). ಹೊಸ ಸಿನಿಮಾಗಳಲ್ಲಿ ಅದೆಲ್ಲ ಹೋಗ್ಬಿಟ್ಟಿದೆ ಅಂದ್ಕೊತೀನಿ, ಅಲ್ವಾ? (ನಗು) ನೀವು ಎಪ್ಪತ್ತು ಎಂಬತ್ತರ ದಶಕದ ಸಿನಿಮಾ ನೋಡಿ ಬೆಳದಿರಬೇಕು, ಅದಕ್ಕೆ ಈ ಜನ್ಮ ಜನ್ಮದ ಬಿಸಿನೆಸ್ಸು (ನಗು). ಹೊಸ ಸಿನಿಮ ನೋಡೋ ಈ ಪ್ರಾಯದವರನ್ನ ನೋಡಿ... (ನಗು. "Ok") ಅವರೆಲ್ಲ ಈ ಜನ್ಮ ಜನ್ಮದ business-ನಲ್ಲಿಲ್ಲ, ಅವರ್ ಗಳು ಯೋಚಿಸ್ತಿರೋದು, ಸಂಬಂಧಗಳ expiry date ಬಗ್ಗೆ... (ನಗು) ಆದ್ದರಿಂದ ನಿಮ್ಮ ಸತ್ಯದ ಅನ್ವೇಷಣೆ, commercial ಸಿನೆಮಾದ ಮಾರ್ಗದರ್ಶನದಿಂದ ಆಗ್ತಿದ್ರೆ, ನೀವೇ ತೊಂದರೇನ ಕರೆಸ್ಕೋತ ಇದ್ದೀರ.

ಆದ್ದರಿಂದ ನಿಮ್ಗೆ ಯಾರ್ದಾದ್ರೂ ಜೊತೆಯಲ್ಲಿ ಒಟ್ಟಿಗೆ ಇರ್ಬೇಕು ಅಂದ್ರೆ, ಅದಿಕ್ಕೆ ಬಹಳ ಜನ್ಮಗಳಿಂದ ನಾವು ಜೊತೆ ಜೊತೆಯಾಗಿದ್ವಿ ಅಂತ ನಂಬ್ಕೊಂಡಿರೋದೊಂದೇ ದಾರಿ ಅಂತ ಆದ್ರೆ, ಅದೊಂದು ಬಹಳ ಕೆಟ್ಟದಾದ ರೀತಿ ಒಟ್ಟಿಗೆ ಬದುಕೋದಕ್ಕೆ (ನಗು). ಅಲ್ವಾ? “ಇಲ್ಲಾ, ಬಹಳ ಜನ್ಮಗಳು ನಿನ್ ಜೊತೆ ಇದ್ದೆ, ಅದಕ್ಕೆ ನಿನ್ನೊಟ್ಟಿಗೆ ಇದ್ದೀನಿ” ಅನ್ನೋದು ಬಹಳ ಕೆಟ್ಟದಾದ ರೀತಿ ಒಟ್ಟಿಗೆ ಬಾಳೋದಕ್ಕೆ, ಅಲ್ವಾ? “ನಿನ್ನೊಟ್ಟಿಗೆ ಇರ್ಬೇಕು ಅಂತ ಅನ್ಸತ್ತೆ, ಅದಕ್ಕೆ ಈಗ ನಾನು ನಿನ್ ಜೊತೆ ಇದ್ದೀನಿ”, ಇದೊಂದ್ ಸುಂದರವಾದ ರೀತಿ, ಯಾರೊಂದಿಗಾದ್ರೂ ಇರೋದಿಕ್ಕೆ, ಅಲ್ವಾ? “ನಾನ್ ನಿನ್ ಜೊತೆ ಇದ್ದೀನಿ, ಯಾಕಂದ್ರೆ, ನಿಂಗ್ ಗೊತ್ತ, ಕಳೆದ ಮೂರು ಜನ್ಮ...” (ನಗು) ನಿಮ್ ಜೀವನದಲ್ಲಿ ಇಂತ ಹಾರರ್ ಉಂಟ್ ಮಾಡ್ಕೋಬೇಡಿ! ದಯವಿಟ್ಟು. (ನಗು) ಮೂರು ಜನ್ಮ ಒಟ್ಟಿಗೆ ಇದ್ದೀರ ಅಂದ್ರೆ, ಈಗ ಬೇರೆ ಆಗೋ ಸಮಯ (ನಗು). ಅಲ್ವಾ?

ನನ್ ಬಳಿಗೆ ಯಾವಾಗ್ಲೂ ಬರೋಂತಾವ್ರು ನನ್ನನ್ನ ಯಾವಾಗ್ಲೂ ಈ ಕೆಲ್ಸಕ್ ಹಚ್ತಾರೆ. “ಸದ್ಗುರು, ಹೋದ್ ಜನ್ಮದಲ್ಲಿ ನಾನು ನಿಮ್ ಜೊತೆ ಇದ್ನ?” (ನಗು) ನಿಮ್ಗೆ ಯಾಕಾದ್ರೂ ಅನ್ಸತ್ತೋ, ನಿಮ್ಮನ್ ಏನಾದರೂ ನಾನು ಹೋದ್ ಜನ್ಮದಲ್ಲಿ ನೋಡಿದ್ದಿದ್ರೆ, ಮತ್ತೆ ನಿಮ್ ಮುಂದೆ ಬರ್ತೀನಿ ಅಂತ? (ನಗು) ಹಿಂದೆ ಏನಾಯ್ತು, ನಾನ್ ಹೇಳೋದೇನಂದ್ರೆ, ನಿನ್ನೆ ಏನಾಯ್ತೋ, ಅದಕ್ಕೆ ಯಾವ್ ಪ್ರಾಮುಖ್ಯತೆನೂ ಇಲ್ಲ. ಈವಾಗ ನೀವು ಪ್ರಾಮುಖ್ಯತೆ ಸೃಷ್ಟಿಸೋದಕ್ಕೆ ಪ್ರಯತ್ನ ಮಾಡ್ತ ಇದ್ದೀರ, ಏನಾಗಿ ಹೋಗಿದ್ಯೋ, ಏನಾಗಿರ್ಬಹುದೋ ಅದಿಕ್ಕೆ. ನಿಮ್ಗೆ ಗೊತ್ತ್ ಕೂಡ ಇಲ್ಲ. ಏನಾಗಿದ್ದಿರಬಹುದು ಅಂತ ಇನ್ನೊಂದ್ ಜನ್ಮದಲ್ಲಿ.

ಇದು ಯಾವ್ ತರ ಅಂದ್ರೆ, ಬಹುತೇಕ ಎಲ್ಲರೂ ಅವ್ರ ಸ್ಕೂಲ್ ಅಥವಾ ವಿದ್ಯಾರ್ಥಿ ಜೀವನದ್ ಬಗ್ಗೆ ಮಾತಾಡೋ ತರ. “ಓಹ್! ಅವು, ನನ್ ಜೀವನದ ಬಂಗಾರದಂತ ದಿನಗಳು" ನಮಗ್ ಗೊತ್ತು ಎಂತಹ ಬಂಗಾರದ ದಿನಗಳು ಅವು ಅಂತ. ನೀವ್ ಅಲ್ಲ್ ಇದ್ದಾಗ, ಟೆನ್ಶನ್ ನಲ್ಲಿದ್ರಿ, exams ಅಂದ್ರೆ ಪ್ರಾಣ ಹೋಗೋ ತರ ಭಯ ಪಡ್ತಿದ್ರಿ, teachers ನ ಕಂಡ್ರೆ ಆಗ್ತಾ ಇರ್ಲಿಲ್ಲ, ಸ್ಕೂಲ್ಗ್ ಹೋಗಕ್ ಇಷ್ಟ ಇರ್ಲಿಲ್ಲ. ಅವು ಬಂಗಾರದ ದಿನಗಳು. ಯಾಕಂದ್ರೆ ಈವಾಗ ಅದೆಲ್ಲ ಆಗ್ ಹೋಗಿದೆ (ನಗು). ಇನ್ನೇನ್ ಸ್ಕೂಲ್ಗೆ ಹೋಗ್ಬೇಕಾಗಿಲ್ಲ, ಹಾಗಾಗಿ ಅವು ಬಂಗಾರದಂತವು. ನಂಗ್ ಅನ್ಸತ್ತೆ, ನಿಮ್ ಮದ್ವೆ ಬಗ್ಗೆನೂ ನಿಮ್ಗೆ ಅದೇ ಭಾವನೆ ಇರತ್ತೆ ಅಂತ (ನಗು). ನಿಮ್ ಮದ್ವೆ ಬಿದ್ದ್ ಹೋದ್ ಮೇಲೆ ನಿಮ್ಗ್ ಹಾಗ್ ಅನ್ಸಿದ್ರೆ, ಅದೇನ್ ಪ್ರಯೋಜ್ನ ಇಲ್ಲ. ಜೊತೆಯಲ್ಲಿದ್ದಾಗ ನಿಮ್ಗೆ ಹಾಗ್ ಅನ್ಸಿಸಿದರೆ, ಅದು ಬಹಳ ಒಳ್ಳೇದು. ಅಲ್ವಾ? ಮುಗಿದ್ ಹೋದ್ ಮೇಲೆ, ನಿಮಗ್ ಅನ್ಸತ್ತೆ, “ಓಹ್! ಎಷ್ಟು ಚೆನ್ನಾಗಿತ್ತು, ಆದರೆ.....” (ನಗು) ಅಲ್ವಾ, ಅದ್ ಪ್ರಯೋಜ್ನ ಇಲ್ಲ. ಜೊತೆಯಲ್ಲಿದ್ದಾಗ ಹಂಗ್ ಅನ್ಸಿಸಿದರೆ, ಅದು ಬಹಳ ಒಳ್ಳೇದು.

ಹಾಗಾಗಿ ಆಗ್ ಹೋಗಿರೊದನ್ನ ಕೆದಕ್ತಾ time waste ಮಾಡಬೇಡಿ. ನಾನ್ ಹೇಳ್ತ ಇದ್ದೀನಿ, ಈ ಹಾಳಾದ್ ನೆನಪು ನಿಮ್ಮನ್ನ  ಕುಂಠಿತಗೊಳಿಸ್ತಿದೆ. ಅದು ನಿಮ್ ಮನಸ್ಸನ್ನ ಒಂದು ತೀಕ್ಷ್ಣವಾದ ಉಪಕರಣದ್ ತರ, ಜೀವನದ ಆಯಾಮಗಳನ್ನ ತೆರೆದ್ ಕೊಡೋ ಉಪಕರಣದ್ ತರ ಉಪಯೋಗಿಸೋದಕ್ಕೆ ಬಿಡ್ತ ಇಲ್ಲ. ಇವಾಗ್ ನೀವು (ನಗು), ಬೇರೆಯವರು ಮರೆತ್ ಹೋಗಿರೋ, ಹಿಂದಿನ್ ಪೂರ್ತಿ ಬಾಕಿಯನ್ನ ಎತ್ಕೋ ಬೇಕಂತಿದೀರ. ನಿಮ್ ಗಂಡ ಅಥವಾ ಹೆಂಡ್ತಿ ಜೊತೆ ಸಂಬಂಧ ಕಲ್ಪಿಸೋಕೆ ನಿಮ್ಗೆ ಅದೊಂದೇ ದಾರಿಯಾಗಿದೆ. ಎಂತಹ ಅಸಹ್ಯವಾದ ರೀತಿ ಇದು ಬೇರೆಯವರ್ ಜೊತೆ ಸಂಬಂಧ ಕಲ್ಪಿಸೋಕೆ. ಹಾಗ್ ಮಾಡ್ಬೇಡಿ. 

ಈವಾಗ ನಿಮ್ ಮುಂದೆ ಕೂತಿರೋರಲ್ಲಿ, ಏನಾದರೂ ಗುಣವನ್ನ ನೋಡ್ಬಹುದೇ ಅಂತ ನೋಡಿ, ಅವ್ನು ಅಥವ ಅವ್ಳು, ಈಗ್ ಹೇಗಿದ್ದಾರೆ ಅನ್ನೋದರ ಮೇಲೆ, ಅವ್ರು ಹಿಂದೆ ಹೆಂಗಿದ್ರು ಅನ್ನೋದರ ಮೇಲಲ್ಲ. ಇಂದು ಆಧುನಿಕ ಸಮಾಜದ ವೈಶಿಷ್ಟ್ಯತೆ ಏನು ಅಂದ್ರೆ, ನಾವು ನಿಮ್ಮನ್ನ ಗೌರವಿಸೋದು ನಿಮ್ ತಂದೆ ಯಾರು ಅಂತ ನೋಡಿ ಅಲ್ಲ, ನಿಮ್ಮನ್ನ ಗೌರವಿಸೋದು ನೀವು ಯಾರು ಅಂತ ನೋಡಿ. ಮ್? ನೀವ್ ಯಾರು ಅನ್ನೋದಕ್ಕೆ ಬೆಲೆ ಇದೆ, ಅದು ಗಮನಾರ್ಹವಾದದ್ದು. ಹೌದಲ್ವಾ? ಓಹ್! ನೀನು, ನೀವ್ ಅವ್ರ ಮಗ ಅಲ್ವ, ಇವ್ರ ಮಗಳು ಅಲ್ವ, ಅದು ಮುಖ್ಯ ಅಲ್ಲ. ದುರದೃಷ್ಟ ಅಂದ್ರೆ, ಬಹಳ ಜನ ಇನ್ನೂ ಅದರಲ್ಲೆ ಇದ್ದಾರೆ. ನೀವ್ ಯಾರು ಅನ್ನೋದು ಮುಖ್ಯ. ಅಲ್ವಾ? ಈವಾಗ ನಿಮ್ಮನ್ನ ನೀವ್ ಏನ್ ಮಾಡ್ಕೊಂಡಿದ್ದೀರ ಅನ್ನೋದು ಮುಖ್ಯ. ನಿಮ್ ತಂದೆ ಯಾರು ಅನ್ನೋದು ಮುಖ್ಯ ಅಲ್ಲ. 

ಇದೊಂದು ದೊಡ್ಡ ಬದಲಾವಣೆ, ಜೀತಪದ್ಧತಿಯ ಜೀವನ ವಿಧಾನದಿಂದ ಆಧುನಿಕ ಸಮಾಜಗಳು ಅಂತ ನಾವು ಕರೆಯೋದ್ರ್ ಕಡೆಗೆ. ಸ್ವಲ್ಪ ಅಸ್ತವ್ಯಸ್ತವಾಗಿದೀವಿ, ಆದ್ರೆ ಇದೊಂದು ಗಮನಾರ್ಹವಾದ ಹೆಜ್ಜೆ. ಅಲ್ವಾ? ಹೌದೋ ಅಲ್ವೊ? ನಿಮ್ ತಂದೆ ಯಾರು ಅಂತ ಯಾರೂ ಕೇಳ್ದೆ ಇರೋದು ಒಂದ್ ಮಹತ್ವವಾದ ಹೆಜ್ಜೆ. ನಾನ್ ಯಾರು ಅಂತ ಮಾತ್ರ ನೋಡ್ತಾರೆ. ಇದೊಂದು ದೊಡ್ಡ ಹೆಜ್ಜೆ, ಅಲ್ವಾ? ಆದ್ರೆ, ನೀವೇನಾದ್ರೂ ಐವತ್ತೋ ವರ್ಷದ್ ಹಿಂದೇನೊ, ನೂರ್ ವರ್ಷದ್ ಹಿಂದೇನೊ ಬಂದಿದ್ದರೆ, ಯಾರೂ ನಿಮ್ ಮುಖ ನೋಡಿ, ನೀವ್ ಯಾರು ಅಂತ ಕೇಳ್ತ ಇರ್ಲಿಲ್ಲ. "ಯಾರ್ ನಿಮ್ ತಂದೆ?” ಅಂತಾನೇ ಕೇಳಿರೋರು. ಅಲ್ವಾ? ಅದು ಬದಲಾಗಿದೆ, ಗಮನಾರ್ಹವಾಗಿ ಬದಲಾಗಿದೆ. ಹೀಗಾಗಿ, ಹಿಂದಿನ್ ಜನ್ಮದಲ್ಲಿ ಏನಾಗಿದ್ದೆ ಅನ್ನೋದು ನಿಮ್ ತಂದೆ ಯಾರು ಅಂತ ಕೇಳೋದಕ್ಕಿಂತ ಕೀಳಾದದ್ದು. ಈವಾಗ ನೀವು ಏನಾಗಿದ್ದೀರಿ, ಅದು ಬಹಳ ಮುಖ್ಯವಾದ್ದು. ಅಲ್ವಾ? ಈವಾಗ ನಿಮ್ ಜೀವನದಲ್ಲಿ ನೀವು ಏನ್ ಮಾಡಿದೀರ, ಅದು ಬಹಳ ಮುಖ್ಯವಾದ ವಿಷ್ಯ. ಹಾಗಾಗಿ, ನಿಮ್ ಸಮಯ ಹಾಗೂ ಜೀವನನ ಹಳೇದನ್ ಕೆದಕ್ತಾ ವ್ಯರ್ಥ ಮಾಡ್ಕೋಬೇಡಿ.