ದೇಹಕ್ಕೆ ಬೇಕಾಗಿರೋದು ನಿದ್ರೆ ಅಲ್ಲ, ವಿಶ್ರಾಂತಿ ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ನೀವು ಎಚ್ಚರವಾಗಿದ್ದಾಗ ಆರಾಮವಾಗಿದ್ದರೆ ನಿಮ್ಮ ನಿದ್ರೆಯ ಕಾಲಾವಧಿ ಕಡಿಮೆಗೊಳ್ಳುತ್ತದೆ. ಆದ್ದರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಡಿ, ಜೀವನದ ಗುಣಮಟ್ಟವನ್ನು ಹೆಚ್ಚಿಸಿ ಎಂದು ಸಮಸ್ಯೆಯ ಮೂಲಕ್ಕೆ ಬೆಳಕು ಚೆಲ್ಲುತ್ತಾರೆ. ನೀವು ಚೆನ್ನಾಗಿ ಬದುಕುತ್ತಿದ್ದರೆ ಚೆನ್ನಾಗೇ ಮಲಗುತ್ತೀರಿ!

Nidre chennagi bartilla andre en Madli?

ಲಿಪ್ಯಂತರ:

ಪ್ರಶ್ನೆ: ನಿದ್ದೆ ಮಾಡೋ ಸಮಯ ಕಡಿಮೆ ಮಾಡ್ಕೊಳೋದು ಹೇಗೆ ಹಾಗೂ ನಿದ್ದೆಯ ಗುಣಮಟ್ಟಾನ ಹೆಚ್ಚಿಸ್ಕೊಳೋದು ಹೇಗೆ?

ಸದ್ಗುರು: ನೋಡಿ ನಿದ್ದೆ ಅನ್ನೋದು ಅವಶ್ಯಕ ಅಲ್ಲ ಜೀವನ್ದಲ್ಲಿ. ದೇಹಕ್ಕೆ ಬೇಕಾಗಿರೋದು ವಿಶ್ರಾಂತಿ. ನಿದ್ದೆ ಅನ್ನೋದು ಒಂತರಹದ್ ವಿಶ್ರಾಂತಿ ಅಷ್ಟೆ. ತುಂಬಾ ಜನ ಅಂದ್ಕೊಳ್ಳೋದಿಕ್ ಶುರು ಮಾಡಿದಾರೆ ತಮಿಳ್ನಾಡ್ನಲ್ಲಿ ಯಾರಾದ್ರೂ "ರೆಸ್ಟ್ ಪನ್ನಿಕ್ಕಿರಾಂಗ" ಅಂದ್ರೆ ಅದ್ರರ್ಥ ನಿದ್ದೆ ಮಾಡ್ತಿದ್ದಾರೆ ಅಂತ (ನಗು). ಹಾಗೇನಾಗ್ಬೇಕಿಲ್ಲ. ಕೂತ್ಕೊಂಡು ವಿಶ್ರಮಿಸ್ಬಹುದು ಅಲ್ವೇ? ಅಲ್ವೇ? ನಿಂತ್ಕೊಂಡು ಕೂಡ ವಿಶ್ರಮಿಸ್ಬಹುದು. ಸ್ವಲ್ಪ ಓಡಿ ಸುಮ್ನೆ ನಿಂತ್ಕೊಂಡ್ರೆ ವಿಶ್ರಾಂತಿ ಅಂತನ್ಸಲ್ವಾ? ಸ್ವಲ್ಪ ನಿಂತ್ಕೊಂಡು ಕೂತ್ಕೊಂಡ್ರೆ ವಿಶ್ರಾಂತಿ ಅಂತನ್ಸಲ್ವಾ? ವಿಶ್ರಾಂತಿಗೆ ತುಂಬಾ ದಾರಿಗಳಿವೆ. ಮುಖ್ಯವಾದ ವಿಚಾರ ಏನಂದ್ರೆ, ವಿಶ್ರಾಂತಿ ಅಂದ್ರೆ ನಿಮ್ಮ energy equation ಬದಲಾಯಿಸೋದು -- ಶಕ್ತಿಯ ಖರ್ಚು ಕಡಿಮೆ ಮಾಡೋದು ಮತ್ತು ಉತ್ಪಾದನೇನ ಅದೇ ಮಟ್ಟದಲ್ ಇರಿಸೋದು. ಒಂದ್ ಸ್ವಲ್ಪ ಹೊತ್ತಾದ್ಮೇಲೆ, ನೀವು ಚೇತರಿಸ್ಕೊಂಡಂಗೆ ಅನ್ಸುತ್ತೆ. ಯಾಕಂದ್ರೆ ಖರ್ಚು ಕಡಿಮೆ ಆಗಿದೆ. ಮುಖ್ಯವಾಗಿ ನೀವು energy equation manage ಮಾಡ್ತಾ ಇದೀರ.

ತೀವ್ರವಾದ್ ಚಟುವಟಿಕೇನಲ್ ತೊಡಗಿದ್ರೆ, ಖರ್ಚು ಜಾಸ್ತಿ ಇರತ್ತೆ. ಉತ್ಪಾದಿಸ್ತಿರೋದು ಸಾಲಲ್ಲ, ಸ್ವಲ್ಪ ಹೊತ್ತಾದ್ಮೇಲೆ ಸುಸ್ತಾಗ್ತೀರಾ ಏಕೆಂದ್ರೆ ಖರ್ಚು ಜಾಸ್ತಿ ಆಗಿದೆ. ಅದೇ ನೀವು ಖರ್ಚನ್ನ ಕಡಿಮೆ ಮಾಡಿ ಉತ್ಪಾದನೆ ಜಾಸ್ತಿ ಮಾಡಿದ್ರೆ, ಸ್ವಲ್ಪ ಹೊತ್ತಾದ್ಮೇಲೆ ಚೇತರಿಸ್ಕೊತೀರಾ. ನೀವು ಓಡ್ತಿದ್ದೀರಾ ಅನ್ಕೋಳಿ, ಒಂದ್ ಮೈಲಿ ಓಡಿದ್ರೆ, ಆಮೇಲೆ ಒಂದ್ ಹೆಜ್ಜೇನೂ ಇಡಕ್ಕಾಗಲ್ಲ. ಓಹ್ ನಿಮ್ಮಲ್ಲಿ ತುಂಬಾ ಜನ isha marathon ಗಳನ್ನ ಓಡ್ತಿದ್ದೀರಾ, Isha Vidya marathons. ಸರಿ 42 ಕಿಲೋಮೀಟರ್ ಆದ್ಮೇಲೇ. ಯಾವಾಗ್ಲೋ. ಒಂದೋ ಎರಡೋ ಮೈಲಿ ಆದ್ಮೇಲೆ ನಿಮ್ಗೆ ಇನ್ನೊಂದ್ ಹೆಜ್ಜೇನೂ ಇಡಕ್ಕಾಗ್ದಿದ್ದಾಗ, ಏನೂ ತಿನ್ಬೇಡಿ, ಏನೂ ಕುಡೀಬೇಡಿ. ಸುಮ್ನೆ 10 ನಿಮಿಷ ಕೂತ್ಕೊಳಿ. ಮತ್ತೆ ಚೇತರಿಸ್ಕೋತೀರಾ ಅಲ್ವಾ? ನೀವು ಮಾಡಿದ್ ಏನಂದ್ರೆ ಖರ್ಚು ಕಡಿಮೆ ಮಾಡಿ ಉತ್ಪಾದನೇನ ಹಾಗೇ ಇರಿಸಿದ್ದೀರಾ. ಈಗೇನಂದ್ರೆ ಖರ್ಚನ್ನ ಕಡಿಮೆ ಮಾಡೋದಲ್ದೆ ಉತ್ಪಾದನೇನೂ ಜಾಸ್ತಿ ಮಾಡೋದಿಕ್ಕೆ ದಾರಿಗಳಿವೆ.

ನೀವು ಒಂದ್ ಮಟ್ಟದ ಆರಾಮದ್ ಸ್ಥಿತಿಗ್ ಬಂದ್ರೆ... ಆರಾಮ ಅಂದ್ರೆ, ತುಂಬಾ ಜನಕ್ಕೆ ಇದು ಎಂದಿಗೂ ಅರ್ಥ ಆಗೋಂತಾದ್ದಲ್ಲ. ಏಕೆಂದ್ರೆ ತುಂಬಾ ಜನ ಆರಾಮವಾಗಿಲ್ಲ. ನೀವು ಪೂರ್ತಿ ಆರಾಮದಲ್ಲಿ ಇದ್ರೆ, ನಿಮ್ ವ್ಯವಸ್ಥೆ ಪೂರ್ತಿ ಆರಾಮದಲ್ಲಿದ್ರೆ, ಎಲ್ಲಾನೂ ಆರಾಮದಲ್ಲಿದ್ರೆ, ಅದು ಯಾವಾಗ್ಲೂ ವಿಶ್ರಾಂತಿಯಲ್ಲೇ ಇರತ್ತೆ. ಇಡೀ ದಿನ ವಿಶ್ರಾಂತಿಯಲ್ಲಿದ್ರೆ, ಮಧ್ಯಾಹ್ನ ನೀವು ಮಲಗಿದ್ರೆ, ರಾತ್ರಿ ಜಾಸ್ತಿ ನಿದ್ದೆ ಬರಲ್ಲ ಅಲ್ವೇ? ಅಲ್ವೇ? ಓಹ್ ನೀವು ಆಗ್ಲೇ ಪ್ರಯೋಗ ಮಾಡಿ ನೋಡ್ತಿದೀರಾ? ಮಧ್ಯಾಹ್ನ ನೀವು ಮಲಗಿದ್ರೆ, ರಾತ್ರಿ ಹೆಚ್ಚು ನಿದ್ದೆ ಬರಲ್ಲ -- ಹುಶಾರಿಲ್ದೇ ಇದ್ರೆ ಅಥ್ವಾ ಏನಕ್ಕೋ ತುಂಬ ಸುಸ್ತಾಗಿದ್ರೆ ಬರುತ್ತಷ್ಟೆ.

ದಿನದ ಹೊತ್ತೆ ಚೆನ್ನಾಗ್ ವಿಶ್ರಮಿಸಿರೋದ್ರಿಂದ ರಾತ್ರಿ ನಿದ್ದೆ ಬರಲ್ಲ. ಹಾಗಾಗಿ ನಿದ್ದೇನೇ ಅಗತ್ಯ ಅಂತೇನಿಲ್ಲ. ನೀವಿಲ್ಲಿ ಕೂತಿದ್ದಾಗ ಕೂಡ ದೇಹ ವಿಶ್ರಾಂತಿಯಲ್ಲಿದ್ರೆ, ನೀವ್ ನೋಡ್ತೀರಿ ನಿಮ್ ನಿದ್ದೆ ಸಮಯ ಕಡಿಮೆ ಆಗುತ್ತೆ. ನಿದ್ದೆ ಗುಣಮಟ್ಟ ಹೆಚ್ಚಿಸ್ಕೊಳೋದು ಹೇಗೆ? ನಿದ್ದೆ ಗುಣಮಟ್ಟ ಹೆಚ್ಚಿಸ್ಕೊಳಕ್ ಹೋಗ್ಬೇಡಿ. ಆದರ್ಶವಾದ ಜೀವನ ಅಂದ್ರೆ ನಾನ್ ನಿದ್ದೇನೇ ಮಾಡ್ ಬಾರ್ದು. ಆದ್ರೆ ಅದು ಈಗ ಸಾಧ್ಯವಿಲ್ಲ, ದೇಹದಲ್ಲಿ ಇನ್ನೂ ಸ್ವಲ್ಪ ಜಡತ್ವ ಇದೆ, ಅದಕ್ಕೆ ಆದಷ್ಟು ಕಡಿಮೆ ಮಲಗತ್ತೆ, ಮಿಕ್ಕಿದ ಸಮಯ ಅದು ಆರಾಮದಲ್ಲಿದೆ. ಹೀಗೆ ಆರಾಮದಲ್ಲಿ ಇಟ್ಕೊಂಡ್ರೆ, ದೇಹಕ್ಕೆ ನಿದ್ದೆ ಮಾಡ್ಬೇಕೂಂತ ಅನ್ಸೋದೇ ಇಲ್ಲ, ದೇಹಕ್ಕೆ ಸಿಕ್ಕಾಪಟ್ಟೆ ಆಯಾಸ ಆಗೋವರ್ಗು. ಹೀಗೆ ದೇಹ ಎಂದೂ ನಿದ್ದೇನ ಕೇಳ್ತಾನೇ ಇಲ್ಲ, ಅದು ಕೇಳೋದು ವಿಶ್ರಾಂತೀನ ಮಾತ್ರ. ನಿಮಗಿಲ್ಲಿ ನೆಮ್ಮದಿಯಾಗಿ ಕೂತ್ಕೊಳಕ್ಕೆ ಬರ್ದಿದ್ರೆ, ಅದು ಹೀಗೆ ವಿಶ್ರಮಿಸುತ್ತೆ. ಹೀಗೆ. ನೀವು ಇಲ್ಲಿ ಪೂರ್ತಿ ಆರಾಮವಾಗಿ ಕೂತ್ಕೊಂಡ್ರೆ, ಅದು ಗಂಟೆಗಟ್ಲೆ ಕೂತಿರತ್ತೆ ನಿದ್ದೆಗ್ ಬೀಳ್ದೇನೆ. ಇಲ್ಲಾಂದ್ರೆ ಹೀಗೆ ಮಾತ್ರ ಅದಕ್ಕೆ ವಿಶ್ರಮಿಸೋದಿಕ್ಕೆ ಬರೋದು. ಅದಕ್ಕೆ ನಿದ್ದೆಯ ಗುಣಮಟ್ಟ ಹೆಚ್ಚಿಸ್ಕೊಳಕ್ಕೆ ಹೋಗ್ಬೇಡಿ, ಆ ತರಹ ಏನೂ ಇಲ್ಲ. ದೇಹಾನ ಆರಾಮವಾಗಿ ಇಟ್ಕೋಳೋದುನ್ನ ಕಲೀರಿ, ಪ್ರಜ್ಞಾಪೂರ್ವಕವಾಗಿ.

ಈಗ ಇಲ್ಲಿ ಕೂತಿದ್ದಾಗ, ನೀವು ಮಾಡ್ಬಹುದಾದ ಒಂದು ಸಣ್ಣ ಸಂಗತಿ ಅಂದ್ರೆ, ಕೂತ್ಕೊಂಡು, ಇಲ್ಲಿ ಬಂದು ಕೂತ್ಕೊಂಡು, ಸುಮ್ನೆ ನಿಮ್ ಗಮನಾನ ನೆತ್ತಿಯ ಮೇಲಿಂದ ಕಾಲ್ಬೆರಳ್ ಗಳವರೆಗೆ ಚಲಿಸಿ. ಗಮನ್ಸಿ ಎಲ್ಲಾನೂ ಆರಾಮವಾಗಿ, ಸಡಿಲವಾಗಿ, ನೆಮ್ಮದಿಯಾಗಿ ಇದ್ಯಾ ಅಂತ. ಅಥವಾ ನೀವು ಹೀಗೆ ಕೂತಿದ್ದೀರಾ ಅಂತ. (ನಗು). ಕೂತಿದ್ದಾಗ ಇದನ್ನ ವಿಶ್ರಾಂತಿಗೆ ತನ್ನಿ, ನಿಮಗ್ ಎಷ್ಟಾಗತ್ತೋ ಅಷ್ಟು. ದೇಹದ್ ಎಲ್ಲಾ ವಿಷ್ಯಾನೂ ನಿಮ್ ಪ್ರಜ್ಞೆಯೊಳಗಿಲ್ಲ. ಎಷ್ಟಾಗತ್ತೋ ಅಷ್ಟು ಪ್ರಜ್ಞಾಪೂರ್ವಕವಾಗಿ ಆರಾಮಕ್ಕೆ ತನ್ನಿ. ನೀವ್ ನೋಡ್ತೀರಿ, ನೀವು 10 ಗಂಟೆಗೆ ಮಲ್ಗೋವ್ರಾಗಿದ್ರೆ, ಇಲ್ಲಿ ಒಂದ್ ಗಂಟೆ ಆರಾಮದಲ್ಲಿ ಕೂತಿದ್ರೆ, ನಿಮ್ ನಿದ್ದೆ ಅರ್ಧ ಗಂಟೆ ಕಾಲ ಮುಂದಕ್ಕೋಗುತ್ತೆ. 10 ಗಂಟೆಗೆ ನಿದ್ದೆ ಬರಲ್ಲ. ಸಹಜವಾಗೇ ಎಚ್ಚರವಾಗಿರ್ತೀರ. ಆದ್ರಿಂದ, ನಿದ್ದೆ ಗುಣಮಟ್ಟ ಹೆಚ್ಚಿಸ್ಕೊಳೋದರ ಬದಲು, ನಿಮ್ಮ ಬದುಕಿನ ಗುಣಮಟ್ಟ ಹೆಚ್ಚಿಸ್ಕೊಳಿ.

ಬದುಕಿನ ಗುಣಮಟ್ಟ ಹೆಚ್ಚಿಸ್ಕೊಳೋದೂಂದ್ರೆ, ಜೀವನದಲ್ಲಿ ಏನೇ ಇರ್ಲಿ, ಏನಾದ್ರು ಮಾಡ್ತಿರ್ಬೋದು ನೀವು, ಸುಮ್ನೆ ಉಸಿರಾಡೋದ್ರಿಂದ ಹಿಡಿದು ಎಷ್ಟೇ ಕ್ಲಿಷ್ಟವಾದ ಕೆಲ್ಸ ಇರ್ಬಹುದ್, ಆ ಕೆಲಸದ ಗುಣಮಟ್ಟ ಹೆಚ್ಚಾಗಲ್ಲ ನೀವು ಅದನ್ನ ಆರಾಮವಾಗಿ ಮಾಡದಿದ್ರೆ. ಹೌದಲ್ವೇ? ಮ್? ಏನನ್ನಾದ್ರೂ ಪೂರ್ತಿ ಆರಾಮವಾಗಿ ಮಾಡಿದ್ರೆ ಮಾತ್ರ... ನೀವು ಸೈಕಲ್ ಓಡಿಸ್ತಿದೀರ ಅಂದ್ಕೊಳಣ. ನೀವು ಈ ತರ ಓಡ್ಸಿದ್ರೆ ಸಂತೋಷವಾಗಿ ಓಡ್ಸ್ ತಿದೀರ ಅನ್ನಕ್ಕಾಗಲ್ಲ. ಅದೇ ನೀವು ತೀರಾನೇ ಆರಾಮವಾಗಿ ಓಡ್ಸ್ ತಿದ್ರೆ, ನಿಮ್ಮ ಕೈಗಳನ್ನ ತೆಗೆದ್ರೂ ಸಹ ಅದು ನೇರಾನೇ ಹೋಗತ್ತೆ. ನಿಮಗೆ ಹೋಗ್ಬೇಕಾದಂಗೆ. ನೀವು ಆರಾಮ್ವಾಗಿದೀರ. ನೀವು ಆರಾಮ್ವಾಗಿರೋದ್ರಿಂದ ಸೈಕಲ್ ಓಡ್ಸೋ ಗುಣಮಟ್ಟ ಹೆಚ್ಚಾಯಿತು. ಅಲ್ವೇ? ಈಯೆರಡು ವಿಚಾರಗಳಿಗೆ ಸಂಬಂಧ ಇದೆ. ಆದ್ರಿಂದ ಬದುಕಿನ ಗುಣಮಟ್ಟ ಹೆಚ್ಚಿಸ್ಕೊಂಡ್ರೆ, ಸಹಜವಾಗೇ ನಿದ್ದೆಯ ಸಮಯ ಕಡಿಮೆ ಆಗತ್ತೆ. ಅದೇ ನಿಮ್ ಬದುಕಿನ ಗುಣಮಟ್ಟ ತಗ್ಗಿದ್ರೆ, ಯಾವ್ ಕೆಲ್ಸಾನೂ ಆರಾಮವಾಗಿ ಮಾಡಕ್ಕಾಗಲ್ಲ. ಆವಾಗ್ಲೂ ನಿದ್ದೆ ಬರಲ್ಲ. ಆದ್ರೆ ಒತ್ತಡದಿಂದಾಗಿ ನಿದ್ದೆ ಬರಲ್ಲ. ಆರಾಮವಾಗಿ ಇದ್ದಿದ್ರಿಂದ ಬರಲ್ಲ ಅಂತಲ್ಲ. ತುಂಬಾ ಒತ್ತಡಕ್ಕೊಳಪಟ್ಟಿರೋದ್ರಿಂದ ನಿದ್ದೆ ಬರಲ್ಲ. ಹೀಗ್ ಮಾಡಿದ್ರೆ ನೀವು ಜಾಸ್ತಿ ಕಾಲ ಬದುಕಲ್ಲ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ಸಿಗದಿದ್ರೆ, ಅದು ಸಾಯತ್ತೆ. ಹಾಳಾಗುತ್ತೆ. ಏನೋ ಒಂದು ಹಾಳಾಗುತ್ತೆ.

ನೀವು ಆರಾಮ, ಅಂದ್ರೆ ease ನಲ್ಲಿ ಇರ್ದಿದ್ರೆ, ಅದರರ್ಥ ನೀವು disease ನಲ್ಲಿದ್ದೀರಾ ಅಂತ (ನಗು). ಆ ಕಡೆಗ್ ಹೋಗ್ತಿದ್ದೀರಾ. Disease ನಲ್ಲಿರೋದು ಅಂದ್ರೆ ಅನಾರೋಗ್ಯಕ್ಕೊಳಗಾಗೋದು. ಅದೇ ನೀವು deceased ಅಂದ್ರೆ ಸತ್ತೋದ್ರಿ ಅಂತರ್ಥ. (ನಗು) ಆದ್ರಿಂದ Disease ಕಡೆ ಹೋಗ್ಬೇಡಿ. Ease ನತ್ತ ಹೋಗಿ. ನೀವು ಸಂಪೂರ್ಣವಾಗಿ ಆರಾಮವಾಗಿದ್ರೆ, ನಿದ್ದೆಯ ಸಮಯ ಕಡಿಮೆಯಾಗತ್ತೆ. ನಿದ್ದೆಯ ಗುಣಮಟ್ಟ ಚೆನ್ನಾಗೆ ಇರತ್ತೆ ಏಕೆಂದ್ರೆ ಬದುಕಿನ ಗುಣಮಟ್ಟ ಚೆನ್ನಾಗಿರತ್ತೆ. ನಿಮಗೆ ನಿದ್ದೆಯ ಗುಣಮಟ್ಟ ಮಾತ್ರ ಹೆಚ್ಚಿಸ್ಕೋಬೇಕು -- ಜೀವನ ಹಾಗೆ ನಡಿಯಲ್ಲ. ಬೆಳಗ್ಗೆ ಚೆನ್ನಾಗ್ ಎದ್ರೆ, ರಾತ್ರಿ ಚೆನ್ನಾಗಿ ಮಲ್ಗೆ ಮಲಗ್ತೀರಾ (ನಗು). ಇದನ್ನ ಜನ್ರಿಗ್ ಕೊಡೋದಿಕ್ಕೆ ಬಹಳಷ್ಟು ಪದ್ಧತಿಗಳಿವೆ, ಪೌರ್ವಾತ್ಯ ದೇಶಗಳಲ್ಲಿ, ವಿಶೇಷವಾಗಿ ಭಾರತದಲ್ಲಿ. ಇದನ್ನೆಲ್ಲ ನಮ್ ಬದುಕಿನಲ್ಲಿ ಹೆಣೆಯಲಾಗಿದೆ. ಈಗೀಗ ಅವನ್ನೆಲ್ಲ ಬಿಟ್ ಬಿಡ್ತಿದ್ದಾರೆ, ಎಲ್ರೂ modern ಆಗ್ತಿರೋದ್ರಿಂದ. ಆಧುನಿಕತೆ ಅಂದ್ರೆ ಯಾವಾಗ್ಲೂ ಗಡಿಬಿಡಿಯಲ್ಲಿರೋದು, ಸದಾ ಒತ್ತಡದಲ್ಲಿರುವುದು, ಕಿರಿಕಿರಿ ಪಟ್ಕೊಳೋದು, ಕಳವಳದಲ್ಲಿರೋದು -- ಹೀಗಿದ್ರೆ ನೀವು modern ಅಂದ್ಕೊಂಡ್ ಬಿಟ್ಟೀದೀರ. ಇಲ್ಲಾಂದ್ರೆ ಇವನ್ನೆಲ್ಲ ನಮ್ ಜೀವನ್ದಲ್ಲಿ ಹೆಣೆಯಲಾಗಿತ್ತು. ಬೆಳಗ್ಗೆ ಎದ್ದಾಗಲಿಂದ ರಾತ್ರಿ ಮಲಗೋವರ್ಗು, ಏನೇನ್ ಮಾಡ್ಬೇಕು, ಹೇಗೆ ನಿಮ್ಮನ್ನ ನೀವು ತೊಡಗಿಸ್ಕೊಬೇಕು, ಎಲ್ಲಾನು ನಿಶ್ಚಿತವಾಗಿತ್ತು. ಪೀಳಿಗೆಯ ಪ್ರಾರಂಭದವರೆಗೂ ಎಲ್ಲರಿಗೂ ಅದ್ರ್ ಅರಿವಿತ್ತು. ಎಲ್ಲರೂ ಒಮ್ಮೆಗೇ english educated ಆಗ್ಬಿಟ್ಟು, ಆಧುನಿಕರಾಗಿ tense ಆಗ್ಬಿಟ್ರು (ನಗು). ಇದಕ್ಕೆ ಆಚಾರ ವಿಚಾರ ಅಂತಿದ್ರು. ಏನೇನ್ ಮಾಡ್ಬೇಕು ಏನೇನ್ ಮಾಡ್ಬಾರ್ದು, ಬೆಳಗ್ಗಿನಿಂದ ರಾತ್ರಿವರೆಗೂ ಪ್ರತಿಯೊಂದೂ, ಬದುಕಿನ ಎಲ್ಲ ವಿಷಯಗಳು, ಹೇಗ್ ಮಾಡೋದು ಅಂತ. ಹಂಗ್ ಮಾಡಿದ್ರೆ ಪ್ರತಿಯೊಂದು ಸಾಧ್ಯವಾದಷ್ಟು ಆರಾಮವಾಗೇ ನಡಿಯುತ್ತೆ. ‍ಯಾರ್ಯಾರಿಗೆ ತಮ್ ಜೀವನವನ್ನ ಯೋಗ ಮತ್ತು ಅಧ್ಯಾತ್ಮಕ್ಕೆ ಸಮರ್ಪಣೆ ಮಾಡಕ್ಕಾಗಲ್ವೋ, ಅವ್ರಿಗೆ ದೈನಂದಿನ ಬದುಕಿನಲ್ಲೇ ಇವುಗಳನ್ನ ಹೆಣೆಯಲಾಗಿತ್ತು. ಕನಿಷ್ಠ ಪಕ್ಷ ಇಷ್ಟು ಆರಾಮವನ್ನ ತಿಳ್ಕೊಳ್ಲಿ ಅಂತ - ಬೆಳಗ್ಗೆ ಸಂತೋಷವಾಗ್ ಎದ್ದು ರಾತ್ರಿ ಆರಾಮ್ವಾಗಿ ಮಲಗ್ತೀರಾಂತ. ಈವತ್ತಿಗೂ ಭಾರತದಲ್ಲಿ ಮಾತು ಹೇಳ್ತಾರೆ. ಯಾರಾದ್ರೂ "ನನ್ ಬದುಕ್ನಲ್ಲಿ, ಹೀಗಾಯಿತು, ಹಾಗಾಯಿತು" ಅಂತಂದ್ರೆ, ಜನ ಹೇಳ್ತಾರೆ, "ಏನೇ ಆಗ್ಲಿ, ನನಗ್ ಕಣ್ ಮುಚ್ಚಿದ್ರೆ ನಿದ್ದೆ ಚೆನ್ನಾಗೆ ಬರತ್ತೆ". ಹ್ಮ್? "ಅವ್ನು ತುಂಬಾ ಹಣ ಮಾಡಿರ್ಬೋದು, ಆದ್ರೆ ನಾನು ಚೆನ್ನಾಗ್ ನಿದ್ದೆ ಮಾಡ್ತೀನಿ" (ನಗು). ಕೇಳಿದ್ದೀರಲ್ಲ? ಜನ ಹೇಳ್ತಾರೆ. ಇದೊಂದು ವಾಡಿಕೆ ಮಾತು. "ನಿದ್ದೆ ಚೆನ್ನಾಗೆ ಬರತ್ತೆ" ಅಂದ್ರೆ "ಜೀವನ ಚೆನ್ನಾಗಿದೆ" ಅಂತ. ಚೆನ್ನಾಗಿ ಬದುಕ್ತಿರೋದ್ರಿಂದಾನೆ ಚೆನ್ನಾಗಿ ಮಲಗ್ತಿದ್ದೀನಿ. ಚೆನ್ನಾಗಿ ಬದುಕ್ತಿಲ್ದಿದ್ರೆ, ಚೆನ್ನಾಗಿ ಮಲಗಕ್ಕಾಗಲ್ಲ. ಆದ್ರಿಂದ ನಿದ್ದೆಯ ಗುಣಮಟ್ಟ ಹೆಚ್ಚಿಸ್ಕೊಳಕ್ ಹೋಗ್ಬೇಡಿ. ಬದುಕಿನ ಗುಣಮಟ್ಟ ಹೆಚ್ಚಿಸ್ಕೊಳಿ, ಆಗ ನೀವು ಸಹಜವಾಗೇ ಚೆನ್ನಾಗ್ ಮಲಗ್ತೀರಾ.