ನಾವು ಕಷ್ಟಪಟ್ಟು ಕೆಲಸ ಮಾಡಿದರೂ ನಾವು ಆಸೆ ಪಟ್ಟಿದ್ದು ನೆರವೇರೋದಿಲ್ಲ ಯಾಕೆ?

 

ಕಷ್ಟಪಟ್ಟು ಕೆಲಸ ಮಾಡುವ ಬಗೆಗಿನ ಪ್ರಶ್ನೆಯೊಂದನ್ನು ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ. ಸಮಾಜವು ಕಷ್ಟಪಡುವುದರಿಂದ ಮಾತ್ರ ನಮಗೆ ಬೇಕಾದ ಫಲಿತಾಂಶ ದೊರಕುವುದು ಎಂದು ತಿಳಿದಿರುವಂತೆ ತೋರುತ್ತದೆ. ಇದು ದುರದೃಷ್ಟಕರ. ಯಾವುದೇ ವಿಷಯದಲ್ಲಿ ಯಶಸ್ಸು ಸಿಗುವುದು ಅದಕ್ಕೆ ಸೂಕ್ತವಾದದ್ದನ್ನು ಮಾಡುವುದರಿಂದ, ಕಷ್ಟಪಡುವುದರಿಂದಲ್ಲ, ಎಂದು ಅವರು ಸ್ಪಷ್ಟಪಡಿಸುತ್ತಾರೆ.

Navu kashtapattu kelasa madidru aase pattiddu neraverodilla eke?

ಲಿಪ್ಯಂತರ:

ಪ್ರಶ್ನೆ: ನಾವು ಕಷ್ಟಪಟ್ಟು ಕೆಲ್ಸ ಮಾಡಿದ್ರೂ ನಾವ್ ಆಸೆ ಪಟ್ಟಿದ್ದು ನೆರವೇರೋದಿಲ್ಲ. ಯಾಕೆ?

ಸದ್ಗುರು: ಬರೀ ಕಷ್ಟಪಟ್ ಮಾಡೋದ್ರಿಂದ ಜಗತ್ತಿನಲ್ ಕೆಲಸಗಳು ನೆರವೇರೋದಿಲ್ಲ. ಇದ್ ಒಂದ್ ದೊಡ್ ಸಮಸ್ಯೆಯಾಗ್ಬಿಟ್ಟಿದೆ. ನೀವ್ ಚಿಕ್ಕವರಾಗಿದ್ದಾಗ್ಲಿಂದ ನಿಮ್ ಅಪ್ಪ-ಅಮ್ಮ ಹೇಳ್ಕೊಟ್ಟಿದ್ದೇನಂದ್ರೆ, ನೀವ್ ಓದೋವಾಗ ಹೇಗ್ ಓದ್ಬೇಕು? ಕಷ್ಟಪಟ್ಟು ಓದ್ಬೇಕು - study hard. ಕೆಲ್ಸ ಮಾಡೋವಾಗ ಹೇಗ್ ಮಾಡ್ಬೇಕು? ಕಷ್ಟಪಟ್ಟು ಮಾಡ್ಬೇಕು - work hard. ಎಲ್ಲವನ್ನೂ ಕಷ್ಟಪಟ್ಟು hard ಆಗಿ ಮಾಡ್ಬೇಕು (ನಗು). ನೀವ್ ಹೀಗೆ hard ಆಗಿ ಮಾಡಿದ್ರೆ (ನಗು) ಏನೂ ಆಗೋದಿಲ್ಲ. ಅದೊಂದ್ ಕತ್ತೆ ಜೀವ್ನ ಆಗ್ಬಿಡತ್ತೆ ಅಷ್ಟೇ. ಬರೀ ಕಷ್ಟ ಪಡೋದು. ಯಾರೂ ನಿಮಗ್ ಹೇಳ್ಲಿಲ್ಲ ನೀವ್ ಸಂತೋಷದಿಂದ ಓದ್ಬೇಕು ಅಂತ. ಯಾರೂ ನಿಮಗ್ ಹೇಳ್ಲಿಲ್ಲ ನೀವ್ ಪ್ರೀತಿಯಿಂದ ಕೆಲ್ಸ ಮಾಡ್ಬೇಕು ಅಂತ. ಎಲ್ರೂ ಹೇಳಿದ್ದು, ಕಷ್ಟಪಟ್ಟು ಮಾಡ್ಬೇಕು ಅಂತಾನೇ. ಅವ್ರು ಅವ್ರ ಬದುಕನ್ನ ಬಹಳ ಕಷ್ಟಕರವಾಗಿಸ್ ಕೊಂಡ್ ಬಿಟ್ಟಿದಾರೆ. ಈಗ ಅವ್ರು ನಿಮ್ಮ ಜೀವನ ಕೂಡ ಕಷ್ಟಕರವಾಗಿರ್ಬೇಕು ಅನ್ನೋದನ್ನ ಖಾತ್ರಿ ಮಾಡ್ಕೊಳ್ತಿದಾರಷ್ಟೆ (ನಗು). ಯಾಕ್ ಕಷ್ಟಪಟ್ ಕೆಲ್ಸ ಮಾಡ್ತೀರಿ? ಏನಕ್ಕಾಗಿ ಕಷ್ಟಪಟ್ಟು ಕೆಲ್ಸ ಮಾಡ್ತಿದೀರಿ? ಹೀಗ್ ಇಷ್ಟೊಂದು ಕಷ್ಟ ಆದ್ರೆ ಅದನ್ನ ಬಿಟ್ಟು ಬಿಡಿ. ನಿಮಗ್ ಅದನ್ನ ಸಂತೋಷವಾಗಿ ಮಾಡೋದಕ್ಕಾದ್ರೆ ಮಾಡಿ, ಇಲ್ಲಾಂದ್ರೆ ಬಿಟ್ ಹಾಕಿ! ಅಲ್ವಾ? ಸರಿ ತಾನೇ? ನಿಮ್ ಕೆಲ್ಸದಲ್ಲಿ ನಿಮ್ಮನ್ ನೀವು ಈ ರೀತಿ ಸಂಕಟಕ್ಕೊಳಪಡಿಸೋದಾದ್ರೆ ಆ ನಿಮ್ ಕೆಲ್ಸದಿಂದ ನಿಮ್ಗಾಗ್ಲೀ ಸುತ್ತಮುತ್ತಲಿನವರಿಗಾಗ್ಲೀ ಏನ್ ಪ್ರಯೋಜನ? ಅದ್ರ ಬದ್ಲು ದೇವಸ್ಥಾನದ್ ಹೊರಗ್ ಕೂತು ಭಿಕ್ಷೆ ಎತ್ತಿ ತಿನ್ನಿ, ಅದೇ ಒಳ್ಳೇದು! ಯಾರಾದ್ರೂ ಒಂದ್ ರೂಪೈ ಎರಡ್ ರೂಪೈ ಹಾಕ್ತಾರೆ, ಅದ್ರಲ್ಲಿ ಏನಾದ್ರೂ ತಿಂದ್ಕೊಳ್ಳಿ; ಅದನ್ನಾದ್ರೂ ಸಂತೋಷದಿಂದ ಮಾಡಿ! ಅಲ್ಲಿ ಸಂತೋಷವಾಗ್ ಕೂತು ಜನ್ರು ನಿಮ್ ಪಾತ್ರೆಗ್ ಏನ್ ಹಾಕ್ತಾರೋ ಅದನ್ ತಿನ್ನಿ. ನೀವು ನಿಮ್ಮನ್ನೇ ಇಷ್ಟೊಂದ್ ಸಂಕಟಕ್ಕೊಳಪಡಿಸ್ತಾ ಇದ್ರೆ, ಖಂಡಿತವಾಗಿಯೂ ನಿಮ್ ಸುತ್ತ ಇರೋರೆಲ್ರನ್ನೂ ಕೂಡಾ ಸಂಕಟಕ್ಕೊಳಪಡಿಸ್ತಾ ಇದ್ದೀರಾ. ಅಲ್ವಾ? ನೀವ್ ಜಗತ್ತಿನಲ್ಲಿ ಹೀಗೆ ದುಃಖಾನ ಹರಡೋದಾದ್ರೆ ನೀವ್ ಏನೂ ಮಾಡ್ದೇ ಇರೋದೇ ಒಳ್ಳೇದು. ನೀವ್ ಜಗತ್ತಿನಲ್ಲಿ ಸಂತೋಷಾನ ಹರಡೋದಾದ್ರೆ ಹೋಗಿ ನಿಮ್ ಕೈಲಿ ಎಷ್ಟಾಗುತ್ತೋ ಅಷ್ಟ್ ಮಾಡಿ. ಈಗ ನೀವ್ ಕಷ್ಟಪಟ್ಟು ಕೆಲ್ಸ ಮಾಡ್ತೀರಾ... ಬರೀ ಕಷ್ಟಪಟ್ಟು ಕೆಲ್ಸ ಮಾಡೋದ್ರಿಂದ ಅದ್ ನಡೆದ್ ಬಿಡ್ಬೇಕು ಅಂತೇನೂ ಇಲ್ಲ, ಅದು ನಡೆಯೋದೂ ಇಲ್ಲ.

ಒಮ್ಮೆ ಏನಾಯ್ತೂಂದ್ರೆ... ನಿಮ್ಗೊಂದ್ ಜೋಕ್ ಹೇಳ್ಲಾ? ಮ್? ಶಂಕರನ್ ಪಿಳ್ಳೈಯ ಹಳೇ ಅಂಬಾಸಿಡರ್ ಕಾರ್ ಸ್ಟಾರ್ಟೇ ಆಗ್ಲಿಲ್ಲ. ಯಾರ್ ಹತ್ರನಾದ್ರೂ ಇನ್ನೂ ಹಳೆ ಅಂಬಾಸಿಡರ್ ಇದ್ಯಾ? (ನಗು) ಮ್, ಇಲ್ವಾ? ಎಲ್ರೂ ಅದನ್ ದಾಟಿ ಹೋಗ್ಬಿಟ್ಟಿದ್ದೀರಿ! (ನಗು) ಅವನ್ ಹಳೇ ಅಂಬಾಸಿಡರ್ ಸ್ಟಾರ್ಟೇ ಆಗ್ಲಿಲ್ಲ. ಅದಕ್ ಅವ್ನು ಮನೇಗ್ ಹೋಗಿ, ಮನೇಲಿದ್ ಬೆಕ್ಕಿನ್ ಮರೀನ ತಂದು, ಅಂಬಾಸಿಡರಿಗೆ ಕಟ್ ಹಾಕಿ ಕೂಗೋದಿಕ್ಕೆ ಶುರು ಮಾಡ್ದ "ಹೋಗು, ಹೋಗು, ಹೈ ಹೈ" ಜನ್ರು ಇದನ್ನ ನೋಡಿ ಅಂದ್ರು "ನಿಂಗೇನು ಹುಚ್ಚೇ? ಈ ಸಣ್ಣ ಬೆಕ್ಕಿನ್ ಮರಿ ಅಂಬಾಸಿಡರ್ ಕಾರ್ ನ ಹೆಂಗ್ ಎಳಿಯುತ್ತೆ? ಸಾಮಾನ್ಯವಾಗಿ ಈ ಕಾರ್ ನ ಮೂವ್ ಮಾಡ್ ಬೇಕೂಂದ್ರೆ ದೇವ್ರೇ ಬರ್ಬೇಕು! (ನಗು) ಏನ್ ಮಾಡ್ತಾ ಇದ್ದೀಯಾ?" ಅದಕ್ಕೆ ಶಂಕರನ್ ಪಿಳ್ಳೈ ಹೇಳ್ದ "ಏಮಾರ್ ಬಿಡ್ ಬೇಡಿ, ನನ್ನತ್ರ ಕುದ್ರೆ ಓಡ್ಸೋ ಚಾಟಿ ಇದೆ" (ನಗು) ನಿಮಗ್ ಅನ್ಸುತ್ತೆ ಎಲ್ಲವನ್ನೂ ಕಷ್ಟಪಟ್ ಮಾಡೋದ್ರಿಂದ ಅದ್ ಸಫಲವಾಗ್ಬಿಡುತ್ತೆ ಅಂತ. ಇಲ್ಲ. ಬರೀ ಕಷ್ಟಪಟ್ ಮಾಡೋದ್ರಿಂದ ಅದ್ ಆಗ್ಬಿಡಲ್ಲ. ನೀವು ಸರಿಯಾದ್ದನ್ನ ಮಾಡ್ಬೇಕು, ಆವಾಗ್ಲೇ ಅದು ಸಫಲವಾಗೋದು, ಅಲ್ವಾ? ನೀವ್ ಸೂಕ್ತವಾದದ್ದನ್ನ ಮಾಡ್ದೇ ಇದ್ರೆ ಅದ್ ಸಫಲವಾಗಲ್ಲ. ಯಶಸ್ವೀ ವ್ಯಕ್ತಿಗಳು ಯಶಸ್ಸನ್ನ ಪಡ್ದಿರೋದು ಕೇವಲ ಕಷ್ಟಪಟ್ಟು ಕೆಲ್ಸ ಮಾಡಿರೋದ್ರಿಂದೇನೂ ಅಲ್ಲ. ಅವ್ರಿಗೆ ಅವ್ರ ಕೆಲಸ್ ದಲ್ಲಿ ಸೂಕ್ತವಾದದ್ದೇನನ್ ಮಾಡೋದು ಅಂತ ಗೊತ್ತಿದೆ. ಅದಕ್ಕೇ ಅವ್ರು ಯಶಸ್ವಿಯಾಗಿರೋದು.

ಇನ್ನೊಂದ್ ಸಲ, ಶಂಕರನ್ ಪಿಳ್ಳೈ ಡ್ರೈನೇಜ್ ಒಳ್ಗಡೆ ಬಿದ್ ಬಿಟ್ಟ. (ನಗು) ಕಲ್ಪಿಸಿಕೊಳ್ಳಿ ನೋಡೋಣ (ನಗು) ಇಲ್ಲಿ ತನಕ (ಕೈಸನ್ನೆ) ಹೊಲಸು. ದಯವಿಟ್ಟು ಕಲ್ಪಿಸ್ ಕೊಂಡ್ ನೋಡಿ. (ನಗು) ಹೊರಗ್ ಬರೋದಿಕ್ಕೆ ಬಹಳ ಪ್ರಯತ್ನಪಟ್ಟ, ಆದ್ರೆ ಆಗ್ಲಿಲ್ಲ. ಸ್ವಲ್ಪ ಹೊತ್ತಿನ್ ನಂತ್ರ ಕಿರಿಚೋದಿಕ್ ಶುರು ಮಾಡ್ದ "ಬೆಂಕಿ ಬೆಂಕಿ ಬೆಂಕಿ!" ನೆರೆಹೊರೆಯವ್ರು ಈ ಕಿರ್ಚಾಟ ಕೇಳಿ ಅಗ್ನಿಶಾಮಕದವ್ರಿಗೆ ಫೋನ್ ಮಾಡಿದ್ರು. ಅಗ್ನಿಶಾಮಕದಳದವ್ರು ಬಂದು ಎಲ್ಲಾ ಕಡೆ ನೋಡಿದ್ರು. ಎಲ್ಲೂ ಬೆಂಕಿ ಇಲ್ಲ. ಆಮೇಲೆ ಅವ್ರಿಗೆ ಡ್ರೈನೇಜ್ ನಲ್ಲಿ ಬಿದ್ದಿದ್ದ ಶಂಕರನ್ ಪಿಳ್ಳೈ ಕಾಣಿಸ್ದ. ಅವನನ್ನ ಹೊರಗ್ ಎಳ್ದು ತೆಗ್ದು ಕೇಳಿದ್ರು "ಯಾಕೆ ಬೆಂಕಿ ಬೆಂಕಿ ಅಂತ ಕಿರಿಚಾಡ್ದೆ?" ಅದಕ್ಕೆ ಶಂಕರನ್ ಪಿಳ್ಳೈ ಮರುಪ್ರಶ್ನಿಸ್ದ "ನಾನು ’ಕಕ್ಕಸು ಕಕ್ಕಸು’ ಅಂತ ಕಿರಿಚಿದ್ದಿದ್ರೆ ನೀವು ಬರ್ತಿದ್ರೇನು?" (ನಗು). [Sadhguru's voice - "You must do the right thing, otherwise it doesn't work"] ಬರೀ ಕಷ್ಟಪಟ್ಟು ಕೆಲ್ಸ ಮಾಡೋದ್ರಿಂದ ಏನೂ ಆಗಲ್ಲ; ನೀವ್ ಸರಿಯಾದದ್ದನ್ನ ಮಾಡ್ಬೇಕು, ಇಲ್ಲಾಂದ್ರೆ ಅದು ಸಫಲವಾಗಲ್ಲ.