Manassina gayagalu yaake sulabhavagi gunavagalla

 

ಲಿಪ್ಯಂತರ:

ನೀವು ನಿಮ್ಮದೇ ಮನಸ್ಸನ್ನು ನೋಡಿಕೊಂಡರೆ, ’ನಾನು’ ಅಂತ ನೀವು ಅಂದುಕೊಂಡಿರೋ ನಿಮ್ಮದೇ ವ್ಯಕ್ತಿತ್ವವನ್ನು ನೋಡಿಕೊಂಡರೆ, ಸಾಮಾನ್ಯವಾಗಿ, ನೀವು ವ್ಯಕ್ತಿತ್ವ ಅಂತ ಏನನ್ನು ಕರೀತೀರೋ, ಅದು ಮೂಲಭೂತವಾಗಿ ವಿವಿಧ ಹಂತಗಳ constipation ಅಂದರೆ ಬದ್ಧತೆಯಷ್ಟೆ (ನಗು). "ನನಗಿದು ಇಷ್ಟ ಇಲ್ಲ, ನನಗಿದನ್ನ ತಡ್ಕೊಳ್ಳಕ್ಕಾಗಲ್ಲ. ಇದನ್ನ ಮಾಡಕ್ಕಾಗಲ್ಲ. ಅದನ್ನ ಮಾಡಕ್ಕಾಗಲ್ಲ. ನನಗಿದೇ ಇಷ್ಟ, ಅದನ್ನ ಇಷ್ಟಪಡಕ್ಕಾಗಲ್ಲ" - ವಿವಿಧ ಹಂತಗಳ ಬದ್ಧತೆ. ಈ ಬದ್ಧತೆಯನ್ನು ಉಂಟುಮಾಡೋದು ಏನು? ದೈಹಿಕವಾಗಿ ಮಲಬದ್ಧತೆ ಉಂಟಾಗುವುದು ಒಂದು ಅಂಗಾಂಗದ ಸಂಕುಚನೆಯಿಂದ. ಇಲ್ಲಿ ಅದು ಮನಸ್ಸು ಮತ್ತು ಪ್ರಜ್ಞೆಯ ಸಂಕುಚನೆ. ಅವು ಹಿಡಿದಿಡಲ್ಪಡುತ್ತವೆ. ಜೀವವು ಸರಾಗವಾಗಿ ಹರಿಯುವುದಿಲ್ಲ. ಜೀವವು ನಿರ್ಬಂಧಿತವಾಗುತ್ತದೆ, ಏಕೆಂದರೆ, ನಿಮಗೆ ಜೀವನವನ್ನು ಅನುಭವಿಸುವ ಸಾಮರ್ಥ್ಯವಿರುವುದು ನಿಮ್ಮ ಉಪಕರಣಗಳಾದ ಶರೀರ ಮತ್ತು ಮನಸ್ಸುಗಳ ಮೂಲಕ ಮಾತ್ರ. ನಿಮ್ಮ ಶರೀರ ಅಥವಾ ಮನಸ್ಸು ಯಾವುದಾದರೂ ರೀತಿಯಲ್ಲಿ ಸಂಕುಚಿತವಾದರೆ, ಜೀವನವನ್ನು ಅನುಭವಿಸುವ ನಿಮ್ಮ ಸಾಮರ್ಥ್ಯವೂ ನಿರ್ಬಂಧಿತವಾಗುತ್ತದೆ.
ಇದು ಹಲವು ರೀತಿಗಳಲ್ಲಿ ಆಗುತ್ತದೆ. ನಿಮಗೆ ಆಶ್ಚರ್ಯವಾಗಬಹುದು. ನೀವು ಆ ವಿಷಯಗಳನ್ನು ಮೀರಿ ಹೋಗಿದ್ದೀರಿ ಎಂದು ನಿಮಗೆ ಅನಿಸಬಹುದು. ಆದರೆ ನಿಜವಾಗಿ... ಉದಾಹರಣೆಗೆ, ನಮಗೆ ಹತ್ತು ವರ್ಷವಾಗಿದ್ದಾಗ, ನಿಮ್ಮ ಮಾಮ, ನಿಮ್ ಅಂಕಲ್, ನಿಮ್ಮ ಮಾಮ ನಿಮಗೇನೋ ಹೇಳಿದ್ದರು - ನಿಮ್ಮನ್ನು ಪೆದ್ದ ಅಂತ ಕರೆದಿದ್ದರು. ನಿಮಗೀಗ ವಯಸ್ಸು ಐವತ್ತಾಗಿದೆ. ಆದರೆ ನಲವತ್ತು ವರ್ಷಗಳ ಹಿಂದೆ ಅವರು ಪೆದ್ದ ಅಂತ ಕರೆದಿದ್ದು ನಿಮಗಿನ್ನೂ ಕಿರಿಕಿರಿ ಉಂಟುಮಾಡುತ್ತೆ. ಅವರ ಮುಖ ನೋಡಿದಾಗ ತಕ್ಷಣ "ನನ್ನನ್ನು ಪೆದ್ದ ಅಂದಿದ್ರು" ಅಂತ ನೆನಪಾಗುತ್ತೆ. ಹೀಗೆ ಏನೇನೋ ಇವೆ. ನೀವು ವಹಿಸಿಕೊಂಡಿರೋ ಪಾತ್ರಗಳು, ಅಂದ್ರೆ ನಿಮ್ಮ ವ್ಯಕ್ತಿತ್ವವು ಗಟ್ಟಿಗಟ್ಟಿಯಾದಷ್ಟು, ನೀವು ನಿಮ್ಮ ಮೇಲೆ ಜಾಸ್ತಿ ಜಾಸ್ತಿ ಗಾಯಗಳನ್ನು ಹೊಂದಿರುತ್ತೀರಿ. ಮತ್ತು ಇವು ದೇಹದ ಗಾಯಗಳಂತೆ ಗುಣವಾಗುವುದಿಲ್ಲ. ಅವು ನೀವೇ ಎಳೆದುಕೊಂಡ ಬರೆಗಳಾಗಿರುವುದರಿಂದ, ನೀವವನ್ನು ನಿಮ್ಮ ಬದುಕಿನ ಅನುಭವದ ಬ್ಯಾಡ್ಜ್ ಗಳ ತರಹ ಹೊತ್ತುಕೊಂಡು ತಿರುಗುತ್ತಿದ್ದೀರಿ. ಹಾಗಾಗಿ ಅವು ಮಾಗುವುದಿಲ್ಲ. ಇದರಿಂದಾಗಿ, "ನನಗಿವರು ಇಷ್ಟ, ನನಗವರು ಕಷ್ಟ, ನನಗಿವರು ಪಂಚಪ್ರಾಣ, ನನಗವರನ್ನ ಕಂಡ್ರೆ ಆಗಲ್ಲ, ನನಗವರನ್ನ ಕಂಡರೆ ಮೈ ಉರಿಯುತ್ತೆ" - ಇದೆಲ್ಲಾ ಆಗಿದೆ.
ಮುಂದಿನ ೨೪ ಘಂಟೆಗಳ ಕಾಲ ನೀವಿದನ್ನು ಮಾಡಬೇಕು - ಈ ಮಾಮಂದಿರು, ಗೆಳೆಯರು, ವೈರಿಗಳು, ಯಾರೇ ಇರಲಿ - ಅವರಿಗೆ ನೀವು "ನಿಮ್ಮನ್ನು ಪ್ರೀತಿಸುತ್ತೇನೆ" ಎಂದೇನೂ ಹೇಳಬೇಕಾಗಿಲ್ಲ. ನಿಮ್ಮೊಳಗೆ ನೀವು ಎಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸುವ ಒಂದು ಮನಸ್ಥಿತಿಗೆ ಬರಬೇಕು. ಯಾರೋ ಏನೋ ಹೇಳಿದರು, ಯಾರೋ ಏನೋ ಮಾಡಿದರು, ಯಾರೋ ನಿಮ್ಮ ಕಾಲಿನ ಮೇಲೆ ಕಾಲಿಟ್ರು, ಯಾರೋ ತಲೆ ಮೇಲೆನೇ ಕಾಲಿಟ್ಟುಬಿಟ್ರು - ೨೪ ಘಂಟೆಗಳು, ಇದೊಂದು ಸಣ್ಣ prescription, ಬರೀ ೨೪ ಘಂಟೆಗಳು, ಎಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸುವ ಒಂದು ಮನಸ್ಥಿತಿಗೆ ಬನ್ನಿ. ನಿಮ್ಮ ಮಾನಸಿಕ ಸಂಗತಿಗಳು, ಭಾವನಾತ್ಮಕ ಸಂಗತಿಗಳು, ಶಾರೀರಿಕ ಸಂಗತಿಗಳು, ಪ್ರತಿಯೊಂದು ಸಂಗತಿ... ಮತ್ತು ಸಾಮಾಜಿಕ ಸಂಗತಿಗಳು - ಎಲ್ಲವನ್ನೂ ಅದು ಇದ್ದ ಹಾಗೆಯೇ ಸ್ವೀಕರಿಸಿಬಿಡಿ. ನೀವು ಯಾರೊಂದಿಗೂ ಏನನ್ನೂ ಮಾಡಬೇಕಾಗಿಲ್ಲ, ಬರೀ ನಿಮ್ಮೊಳಗೆ ಅಷ್ಟೆ. ನೀವು ಬರೀ ಇಷ್ಟನ್ನು ಮಾಡಿದರೆ, ಜೀವನವು ಒಂದು ಮಹತ್ತಾದ ಪರಿಮಾಣಕ್ಕೇರುತ್ತೆ.