Laingikate-preeti-aase-evellavugala-tathyavishte

ಲಿಪ್ಯಂತರ:

ಪ್ರಶ್ನೆ: ಕೆಲವು ತಿಂಗಳ ಹಿಂದೆ, ಕೆಲವು ವಿಜ್ಞಾನಿಗಳು ಕ್ಯಾಲಿಫೋರ್ನಿಯಾದಲ್ಲಿ ಕೆಲವು ಬೌದ್ಧ ಸನ್ಯಾಸಿಗಳ ಮೇಲೆ ಪ್ರಯೋಗ ನಡೆಸಿದ್ರು. ಜಪ ಮತ್ತು ಧ್ಯಾನದ ಸಮಯದಲ್ಲಿ ಅವರ ಮೆದುಳಿನ ಚಟುವಟಿಕೆಯನ್ನ ಮಾಪನ ಮಾಡ್ತಿದ್ರು. ಆಗ ಅವರ ಮೆದುಳಿನಿಂದ ಭಾರೀ ಪ್ರಮಾಣದಲ್ಲಿ ಗಾಮಾ ತರಂಗಗಳು ಹೊರಸೂಸ್ತಿರೋದನ್ನ ಗಮನಿಸಿದ್ರು. ಮತ್ತು ಶಾಂತಿ, ಪ್ರೇಮ, ಅನುಕಂಪ ಇತ್ಯಾದಿಗಳಿಗೆ ಸಂಬಂಧಪಟ್ಟ ಮೆದುಳಿನ ಕೇಂದ್ರಗಳು ಬಹಳ ಸಕ್ರಿಯವಾಗಿದ್ವು. ಅಂತದ್ದನ್ನ ಅವರು ಈ ಹಿಂದೆ ಡ್ರಗ್ಸ್ ತಗೋಳೋರಲ್ಲಿ ಮಾತ್ರ ನೋಡಿದ್ರು. ಅವರು ಕೊನೆಗೆ ಜಪ ಮತ್ತು ಧ್ಯಾನ ಒಂದ್ ರೀತಿಯ ಮೆದುಳಿನ ವ್ಯಾಯಾಮ ಅನ್ನೋ ತೀರ್ಮಾನಕ್ಕೆ ಬಂದ್ರು. ಈ ಪ್ರಯೋಗದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಮತ್ತು ಇದರಲ್ಲಿ ಮೆದುಳಿನ ಪಾತ್ರದ ಬಗ್ಗೆ ನಿಮಗೇನು ಅನ್ಸುತ್ತೆ? 


ಸದ್ಗುರು: ಕೆಲವು ವಿಜ್ಞಾನಿಗಳು ಕಪ್ಪೆಗಳ ಮೇಲೆ ಪ್ರಯೋಗ ನಡೆಸ್ತಿದ್ರು. ಕಪ್ಪೆಗಳು ಕುಪ್ಪಳಿಸೋ ರೀತಿಯ ಮೇಲೆ. ಮೊದಲು ಒಂದು ಕಾಲನ್ನ ಕತ್ತರಿಸಿದ್ರು. ಈ ಕಪ್ಪೆಗಳು, ಮರಗಪ್ಪೆಗಳು, ಮೊದಲು 20 ಫೀಟ್ ಜಿಗೀತಾ ಇದ್ವು. ಒಂದ್ ಕಾಲು ತುಂಡರಿಸಿದಾಗ ಅವು ಬರೀ 15 ಫೀಟ್ ಜಿಗಿದ್ವು. ಆಮೇಲೆ ಎರಡು ಕಾಲುಗಳನ್ನ ಕತ್ತರಿಸಿದ್ರು. ಆಗ 10 ಫೀಟ್ ಜಿಗಿದ್ವು. ಮೂರು ಕಾಲುಗಳನ್ನ ಕತ್ತರಿಸಿದ್ರು. ಒಂದ್ ಕಾಲ್ನೊಂದಿಗೆ ಅದು ಬರೀ 5 ಫೀಟ್ ಜಿಗೀತು. ಆಮೇಲೆ ನಾಲ್ಕನೇ ಕಾಲನ್ನೂ ಕತ್ತರಿಸಿದ್ರು. ಆಮೇಲೆ ತೀರ್ಮಾನಕ್ಕೆ ಬಂದ್ರು. ನೀವು ಕಪ್ಪೆಯ ನಾಲ್ಕೂ ಕಾಲುಗಳನ್ನ ಕತ್ತರಿಸಿದಾಗ, ಅದು ಕಿವುಡಾಗುತ್ತೆ (ನಗು).
ಸುಮ್ನೆ ಮೇಲ್ಮೈಯನ್ನ ನೋಡೋದೇ ಎಲ್ಲ ಅಲ್ಲ. ಇದು ನೀವು ನಿಮ್ಮ ಅಂತರಾಳದಿಂದ ತಿಳ್ಕೋಬೇಕಾದ ವಿಷಯ. ಮೆದುಳು ಶರೀರ ಅಷ್ಟೆ. ಅಲ್ವಾ? ಮೆದುಳು ಶರೀರಾನೇ, ಅಲ್ವಾ? ಶರೀರದಲ್ಲಿ ಆ ಬದಲಾವಣೆಗಳಾಗ್ತಿರೋದು, ಬೇರೆ ಯಾವುದ್ರದ್ದೋ ಪರಿಣಾಮವಾಗಿ. ಈ ಪರಿಣಾಮ, ಆಗ್ತಾ ಇರೋ ವಿಷ್ಯದ ಮೂಲಕಾರಣ ಅಲ್ಲ. ಕೆಲವು ಭಾವನೆಗಳು ಮತ್ತಿತರ ಸಂಗ್ತಿಗಳು ತೆರೆದುಕೊಳ್ತಿವೆ ಮತ್ತು ಹೆಚ್ಚು ಶಾಂತಿ, ಕರುಣೆ, ಪ್ರೇಮ ಎಲ್ಲ ವ್ಯಕ್ತವಾಗ್ತಿವೆ. ಇದು ಕರುಣೆಯ ಬಗ್ಗೆ ಅಲ್ಲ, ಪ್ರೇಮದ ಬಗ್ಗೆ ಅಲ್ಲ, ಇವು ಯಾವುದರ ಬಗ್ಗೆನೂ ಅಲ್ಲ.
ನೋಡಿ, ಇದನ್ನ ಅರ್ಥ ಮಾಡ್ಕೊಳಿ. ನಿಮಗೆ ನಿಮ್ಮ ದೇಹವನ್ನ ಹೇಗಿಟ್ಕೋಬೇಕು ಅಂತಿಷ್ಟ? ಸವಿಯಾಗೋ, ಕಹಿಯಾಗೋ? ಸವಿಯಾಗಿ. ನಿಮ್ಮ ದೇಹದ ಅನುಭವ ತುಂಬ ಸವಿಯಾಗಿದ್ರೆ, ಅದು ಆರೋಗ್ಯವಾಗಿರುತ್ತೆ, ಮತ್ತು ಸುಖಕರವಾಗಿರುತ್ತೆ. ನಿಮ್ಮ ಮನಸ್ಸು ತುಂಬ ಸವಿಯಾಗಿದ್ರೆ, ಅದು ಸಂತೋಷದಲ್ಲಿರುತ್ತೆ. ನಿಮ್ಮ ಭಾವನೆಗಳು ತುಂಬ ಸವಿಯಾಗಿದ್ರೆ, ಅದು ಪ್ರೇಮ, ಕರುಣೆಗಳಿಂದ ತುಂಬಿರುತ್ತೆ. ನಿಮ್ಮ ಪ್ರಾಣಶಕ್ತಿಗಳು ತುಂಬ ಸವಿಯಾಗಿದ್ರೆ, ಅದು ಆನಂದವಾಗಿರುತ್ತೆ.
ನೀವಿಲ್ಲಿ ಕಲಿಯೋ ಎಲ್ಲಾ ಅಭ್ಯಾಸಗಳು ನೀವು ಅನ್ನಿಸಿಕೊಂಡಿರೋ ಈ ಎಲ್ಲಾ ಆಯಾಮಗಳಲ್ಲಿ ಒಂದು ಸವಿಯಾದ ಅನುಭವವನ್ನ ಉಂಟುಮಾಡೋದಿಕ್ಕೆ ಪ್ರಯತ್ನಿಸ್ತಿವೆ. ಅದರಿಂದ, ಭೌತಿಕ ಶರೀರ ಬದಲಾಗುತ್ತೆ, ಮನಸ್ಸು, ಭಾವನೆಗಳು ಬದಲಾಗುತ್ತಿವೆ. ಆದರೆ ಸವಿಯ ಅನುಭವ ಆಗ್ತಿರೋದು ಅದ್ರಿಂದ ಅಲ್ಲ. ಅವು ಬರೀ ಪರಿಣಾಮಗಳಷ್ಟೆ. ಸದ್ಯದಲ್ಲಿ ನೀವು ಪ್ರೇಮವನ್ನ ತುಂಬಾ ವೈಭವೀಕರಿಸಿದ್ದೀರಿ. ಯಾಕಂದ್ರೆ ನಿಮಗೆ ಅದಕ್ಕಿಂತ ಹೆಚ್ಚಿನದು ಇನ್ನೂ ಗೊತ್ತಾಗಿಲ್ಲ. ಜನ್ರು ಬಹಳಾನೇ ಮಾತಾಡ್ತಿದಾರೆ, ಪ್ರೇಮವೇ ಅತ್ಯುನ್ನತವಾದದ್ದು ಅನ್ನೋ ತರ. ಅಲ್ವಾ? ಯಾಕಂದ್ರೆ, ಬಹುಶಃ ಅದು ಅವರು ತಮ್ ಜೀವನ್ದಲ್ಲಿ ಅನುಭವಿಸಿದ ಅತ್ಯಂತ ಸವಿಯಾದ ಸಂಗತಿ. ಪ್ರೇಮ ಅಂದ್ರೆ ಏನು? ಯಾರೋ ಒಬ್ಬರೊಂದಿಗೆ ಒಂದಾಗುವ ಹಾತೊರೆತ. ಅಲ್ವಾ? ಹೌದ್ ತಾನೆ? ಹೌದಾ ಅಲ್ವಾ? ಏನೋ ಒಂದರ ಜೊತೆ ಒಂದಾಗೋ ಈ ಹಾತೊರೆಯುವಿಕೆಯನ್ನ, ನೀವು ಭಾವನೆಗಳ ಹಂತದಲ್ಲಿ ಪ್ರೇಮ ಅಂತೀರಿ. ಈ ಹಾತೊರೆಯುವಿಕೆ ಯಾವಾಗ್ಲೂ ಇದೆ. ಆದ್ರೆ ಪ್ರೇಮ ಯಾವತ್ತೂ ಪರಿಪೂರ್ಣತೆಯನ್ನ ಪಡೆಯಲ್ಲ. ಹಾತೊರೆಯುವಿಕೆ ಉಳಿದುಬಿಡುತ್ತೆ. ನೀವು ಹಾತೊರೆಯುವಿಕೆಯನ್ನ ತೀವ್ರಗೊಳಿಸಿದ್ರೆ, ಅದು ಬಹಳ ಸಂಕಟವನ್ನು ಕೊಡುತ್ತೆ. ಒಂದುಗೂಡುವಿಕೆಯ ಕ್ಷಣಗಳಲ್ಲಿ ತುಂಬ ಸುಖ ಸಿಗುತ್ತೆ. ಆದ್ರೆ ಅಗಲುವಿಕೆಯ ಕ್ಷಣಗಳಲ್ಲಿ ತುಂಬ ಚಿತ್ರಹಿಂಸೆಯಾಗಿರುತ್ತೆ. ಅಲ್ವಾ? ಹಾಗಲ್ವಾ? ಹೌದಾ ಅಲ್ವಾ? ಅವರಿಗೆ ಒಂದುಗೂಡುವಿಕೆಯ ಕ್ಷಣಗಳ ಅನುಭವವಾಗಿದೆ. ಅವರಿಗೆ ಅದು ಎಷ್ಟು ಮೌಲ್ಯವುಳ್ಳದ್ದಂದ್ರೆ, ಅದರ ಜೊತೆ ಬರೋ ಎಲ್ಲ ಚಿತ್ರಹಿಂಸೆಗೂ ಅವರು ತಯಾರಾಗಿದಾರೆ. ಹೌದಾ ಅಲ್ವಾ? ಕೆಲವು ಕ್ಷಣಗಳ ಒಂದಾಗುವಿಕೆ. ಅದಕ್ಕಾಗಿ ಅವರು ಎಲ್ಲ ಚಿತ್ರಹಿಂಸೆಗೂ ತಯಾರಾಗಿದಾರೆ. ಆ ಬೆಲೆ ತೆರೋದಿಕ್ಕೆ ಅವ್ರು ಸಿದ್ಧ.
ಮೂಲಭೂತವಾಗಿ ನಿಮ್ಮೊಳಗೆ ಏನಾಗ್ತಿದೆ ಅಂದ್ರೆ, ನಿಮ್ಮೊಳಗೆ ಏನೋ ಒಂದಿದೆ. ಅದಕ್ಕೆ ನೀವೀಗ ಇರೋದಿಕ್ಕಿಂತ ಒಂದ್ ಸ್ವಲ್ಪ ಹೆಚ್ಚು ಬೇಕು. ಅಲ್ವಾ? ಹಾಗಲ್ವಾ? ಇದು ಆಸೆ ಪಡೋ ಪ್ರಕ್ರಿಯೆ. ನಿಜ್ವಾಗಿ ನಿಮ್ಮ ಆಸೆ ಯಾವುದರ ಬಗ್ಗೇನೂ ಅಲ್ಲ.. ನಿಮ್ಮ ಆಸೆ ಏನಂದ್ರೆ, ಅದಿಕ್ಕೆ ತನ್ನನ್ನ ವಿಸ್ತರಿಸ್ಕೊಳ್ಬೇಕು. ನೀವೆಲ್ಲಿದ್ರೂ ಅದಿಕ್ಕೆ ಸಾಲಲ್ಲ. ಸ್ವಲ್ಪ ಜಾಸ್ತಿ ಬೇಕು, ಸ್ವಲ್ಪ ಜಾಸ್ತಿ, ಸ್ವಲ್ಪ ಜಾಸ್ತಿ. ಈ ಒಂದಾಗುವಿಕೆ, ಅಥವಾ ಎಲ್ಲವನ್ನೂ ನಿಮ್ಮದೇ ಭಾಗವಾಗಿ ಒಳಗೂಡಿಸಿಕೊಳ್ಳುವ ಹಂಬಲ, ಅದು ಬಹಳ ಸಾಧಾರಣವಾದ ದೈಹಿಕ ಅಭಿವ್ಯಕ್ತಿಯನ್ನು ಪಡೆದ್ರೆ, ಅದು ಲೈಂಗಿಕತೆ. ಲೈಂಗಿಕತೆಯಲ್ಲಿ ನೀವು ಏನ್ ಮಾಡ್ತಿದೀರ ಅಂದ್ರೆ, ಯಾರೋ ಒಬ್ಬರೊಂದಿಗೆ ಒಂದಾಗೋದಿಕ್ಕೆ ಬಹಳ ಆತುರತೆಯಿಂದ ಪ್ರಯತ್ನಿಸ್ತಿದೀರಿ. ನೀವು ಎಷ್ಟು ಕಷ್ಟ ಪಟ್ರೂ ಅದು ಆಗಲ್ಲ. ಕೆಲವು ಕ್ಷಣಗಳಲ್ಲಿ ಒಂದಾದಂತೆ ಅನಿಸಬಹುದು. ಆದರೆ ಮುಂದಿನ್ ಕ್ಷಣ ಎರಡೂ ಬೇರೆ ಬೇರೆ. ಅಲ್ವಾ? ಇದನ್ನು ನೀವು ಮಾನಸಿಕವಾಗಿ ಪ್ರಯತ್ನಿಸಿದ್ರೆ, ಸಾಮಾನ್ಯವಾಗಿ ಅದನ್ನ ದುರಾಸೆ, ಆಕ್ರಮಣ, ಮಹತ್ವಾಕಾಂಕ್ಷೆ ಅಂತೀವಿ. ಎಲ್ಲವನ್ನೂ ನಿಮ್ಮ ಅಂಶವಾಗಿಸಿಕೊಳ್ಳಬೇಕು, ಪ್ರಪಂಚವನ್ನೇ ಆಕ್ರಮಿಸ್ಬೇಕು ನಿಮಗೆ. ಅದು ಭಾವನಾತ್ಮಕ ಅಭಿವ್ಯಕ್ತಿಯನ್ನ ಪಡೆದ್ರೆ, ಅದನ್ನು ಪ್ರೇಮ ಅಂತೀವಿ. ಅದು ಪ್ರಜ್ಞಾಪೂರ್ವಕವಾದ ಅಭಿವ್ಯಕ್ತಿಯನ್ನ ಪಡೆದ್ರೆ, ಅದನ್ನ ಯೋಗ ಅಂತೀವಿ.
ಹಾತೊರೆಯುವಿಕೆ ಅದೇ, ಎಲ್ಲವನ್ನೂ ನಿಮ್ಮ ಅಂಶವಾಗಿಸಿಕೊಳ್ಬೇಕು. ಯಾಕಂದ್ರೆ, ನೀವೇನಾಗಿದ್ದೀರೋ ಅದು ಸಾಕಾಗ್ತಿಲ್ಲ. ಅಲ್ವಾ? ಇನ್ನೊಬ್ಬರನ್ನು ನಿಮ್ಮ ಭಾಗವಾಗಿಸ್ಕೊಳ್ಬೇಕಾಗಿರೋದು ಯಾಕೆ? ನೀವ್ ಹೇಗಿದ್ದೀರೋ ಅದು ಸಾಕನ್ನಿಸ್ತಿಲ್ಲ. ಅದಕ್ಕೆ, ಅಲ್ವಾ? ಹೌದ್ ತಾನೇ? ಉತ್ಕಟವಾದ ಹಾತೊರೆತವಿದೆ ಬೇರೆಯವ್ರ ಜೊತೆ ಒಂದಾಗೋಕೆ. ಯಾಕಂದ್ರೆ ನೀವಿರೋ ರೀತಿ ಸಾಕಾಗ್ತಿಲ್ಲ. ಒಂದ್ವೇಳೆ ನೀವು ಪರಿಪೂರ್ಣತೆಯನ್ನ ಹೊಂದಿದೀರಿ ಅಂದ್ಕೊಳಿ. ಇಲ್ಲಿ ಕೂತೇ ನೀವು ಎಷ್ಟು ಪರಿಪೂರ್ಣರು ಅಂದ್ರೆ, ಸ್ವಭಾವತಃ ನೀವು ಪರಮಾನಂದದಲ್ಲಿದೀರಿ. ಆಗ ಬೇರೆಯವ್ರ ಜೊತೆ ಒಂದಾಗೋದಿಕ್ಕೆ ಹಂಬಲಿಸ್ತೀರ?
ಬೇರೆಯವರ ಜೊತೆ ಕೆಲವು ಕ್ಷಣಗಳ ಕಾಲ ಒಂದಾದಾಗ ಸ್ವಲ್ಪ ಆನಂದವನ್ನ ನೀವು ಅನುಭವಿಸಿದ್ರಿಂದ, ಅದರ ಬೆನ್ನು ಹಿಂದೆ ಬಿದ್ದೀದೀರಿ. ಅಲ್ವಾ? ಹಾಗೇ ತಾನೇ? ನೀವು ಹೋಗ್ತಿರೋದು ಪ್ರೇಮದ ಹಿಂದೆ ಅಲ್ಲ. ಪ್ರೇಮದಿಂದಾಗಿ ನೀವು ಕೆಲವು ಕ್ಷಣಗಳ ಆನಂದವನ್ನ ಪಡೆದ್ರಿ, ನೀವು ಹೋಗ್ತಿರೋದು ಅದರ ಹಿಂದೆ. ಹೌದ್ ತಾನೇ? ಅಲ್ವಾ? ಹಾಗೇನೆ ನಿಮ್ಮ ಗುರಿ ಮಹತ್ವಾಕಾಂಕ್ಷೆ ಅಲ್ಲ. ಮಹತ್ವಾಕಾಂಕ್ಷೆಯಿಂದಾಗಿ, ಏನೋ ಸಾಧನೆ ಮಾಡ್ದಾಗ, ಏನನ್ನೋ ನಿಮ್ಮದಾಗಿಸಿಕೊಂಡಾಗ, ಸ್ವಲ್ಪ ಆನಂದದ ಅನುಭವವಾಯ್ತು. ನೀವು ಹೋಗ್ತಿರೋದು ಅದರ ಹಿಂದೆ. ಹೌದ್ ತಾನೆ? ಹಾಗೆನೇ ನಿಮ್ಮ ಗುರಿ ಲೈಂಗಿಕತೆಯಲ್ಲ. ಲೈಂಗಿಕತೆಯ ಸಮಯದಲ್ಲಿ ಕೆಲವು ಕ್ಷಣಗಳ ಆನಂದವನ್ನ ಪಡಿದ್ರಿ. ನೀವು ಹೋಗ್ತಿರೋದು ಅದರ ಹಿಂದೆ. ಅಲ್ವಾ?
ಹಾಗಾಗಿ ನೀವು ಅರಸ್ತಾ ಇರೋದು ಆನಂದ. ನೀವು ಅರಸ್ತಿರೋದು ಲೈಂಗಿಕತೆಯಲ್ಲ, ನೀವು ಅರಸ್ತಿರೋದು ಮಹತ್ವಾಕಾಂಕ್ಷೆ ಅಥವಾ ವಸ್ತುಗಳಲ್ಲ. ನೀವು ಅರಸ್ತಿರೋದು ಪ್ರೇಮವಲ್ಲ. ಇವೆಲ್ಲಾ ಆನಂದವನ್ನ ಕ್ಷಣಕಾಲ ಹೊಂದೋ ಬೇರೆ ಬೇರೆ ವಿಧಾನಗಳಾಗಿವೆ ಅಷ್ಟೆ. ನಿಮ್ಮ ಅನುಭವಕ್ಕೆ ಬಂದಿರೋ ಈ ಕೆಲವು ಕ್ಷಣಗಳ ಆನಂದ, ಅದು ಸಾಕಾಗ್ತಿಲ್ಲ ಅಂತ ಗೊತ್ತಾಗಿದೆ ನಿಮ್ಗೆ. ಅಲ್ವಾ? ಹಾಗಾಗಿ ಅದನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸೋ ಸಮಯ ಬಂದಿದೆ. ಇನ್ನಾದ್ರೂ ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕು ತಾನೆ?
ಅದಕ್ಕೆ ಪತಂಜಲಿ... ನಾನಿದನ್ನ ಮೊದಲ್ನೇ ದಿನಾನೇ ಹೇಳ್ದೆ ಅಂದ್ಕೋತೀನಿ. ಪತಂಜಲಿ ಮಹರ್ಷಿ ಯೋಗಸೂತ್ರವನ್ನ ಬರ್ದಾಗ, ಅವ್ರದನ್ನ ವಿಚಿತ್ರ ರೀತಿಯಲ್ಲಿ ಪ್ರಾರಂಭಿಸಿದ್ರು. ಯೋಗ ಸೂತ್ರಗಳ ಮೊದಲ್ನೇ ಸೂತ್ರ "ಮತ್ತೀಗ ಯೋಗ". ಅರ್ಧ ವಾಕ್ಯ. ಜೀವನದ ಮೇಲಿನ ಅಷ್ಟು ಮಹಾನ್ ಕೃತಿ, ಅರ್ಧ ವಾಕ್ಯದೊಂದಿಗೆ ಶುರುವಾಗುತ್ತೆ. ಯಾಕಂದ್ರೆ ನಿಮಗಿನ್ನೂ ಅನ್ಸುತ್ತೆ, ಹೊಸ girlfriend ಸಿಕ್ಬಿಟ್ರೆ ಜೀವನದಲ್ಲಿ ಎಲ್ಲಾ ಸರಿಹೋಗ್ಬಿಡತ್ತೆ ಅಂತ. ಸಂಬಳದಲ್ಲಿ ಬಡ್ತಿ ಸಿಕ್ಕಿದ್ರೆ ಎಲ್ಲಾ ಸರಿಹೋಗ್ಬಿಡತ್ತೆ ಅಂತ ನಿಮಗೆ ಅನ್ನಿಸ್ತಿದ್ರೆ, ಹೊಸ ಮನೆ ಅಥ್ವಾ ಹೊಸ ಕಾರ್ ಕೊಂಡ್ ಕೊಂಡ್ರೆ ಎಲ್ಲಾ ಸರಿಹೋಗ್ಬಿಡತ್ತೆ ಅಂತ ನಿಮಗೆ ಅನ್ನಿಸ್ತಿದ್ರೆ, ಯೋಗದ ಸಮಯ ಇನ್ನೂ ಬಂದಿಲ್ಲ ಅಂತರ್ಥ. ಅದನ್ನೆಲ್ಲ ನೋಡ್ಬಿಟ್ಟಿದೀರಿ, ಅದು ಕೆಲ್ಸ ಮಾಡಲ್ಲ ಅಂತ ಗೊತ್ತಾಗಿದೆ, ಆಗ ಯೋಗ. ನೀವಾ ಹಂತಕ್ಕೆ ಬಂದಿದೀರ? (ನಗು)