ಸದ್ಗುರುಗಳು ಸೃಷ್ಟಿ ಮತ್ತು ಸೃಷ್ಟಿಕರ್ತನ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ, "ಜನರು ಸೃಷ್ಟಿಕರ್ತನು ಶ್ರೇಷ್ಠ ಆದರೆ ಸೃಷ್ಟಿ ಕೀಳು ಎಂದು ತಪ್ಪಾಗಿ ಪರಿಗಣಿಸುತ್ತಾರೆ. ದೇವರ ಬಗ್ಗೆ ನಮಗಿರುವ ಕಲ್ಪನೆ ನಮ್ಮ ಸುತ್ತಲಿರುವುದರ ಮೇಲೆ ಆಧಾರಿತವಾಗಿರುತ್ತದೆ ಹಾಗೂ ಬಹಳಷ್ಟು ಜನರಿಗೆ ದೇವರೆಂದರೆ ತಮ್ಮದೇ ಒಂದು ಉತ್ಪ್ರೇಕ್ಷೆಯಾಗಿರುತ್ತದೆ. ಸೃಷ್ಟಿಯ ಮೂಲವನ್ನು ಅನುಭವಿಸಬಹುದೇ ಹೊರತು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ."

Devaru Endarenu?

ಲಿಪ್ಯಂತರ:

ಸದ್ಗುರು: ಜೀವಾತ್ಮ ಪವಿತ್ರವಾದದ್ದು ಜನ್ರಿಗೆ, ಆದ್ರೆ ಶರೀರ ಗಲೀಜು, ಅದು ಹೇಗೆ ಸಾಧ್ಯ? ಅಲ್ವಾ? ನಾವು ಅದನ್ನೇ ಅಲ್ವಾ ಮಾಡ್ಕೊಂಡು ಬಂದಿರೋದು? ದೇವ್ರು ಪವಿತ್ರ, ಸೃಷ್ಟಿ ಗಲೀಜು ಅಂತ ಹೇಳೋದು. ಅದು ಹೇಗೆ ಸಾಧ್ಯ?

ದೇವ್ರು ಎಂಬ ಯೋಚನೆ ನಿಮಗ್ ಬಂದಿದ್ದೇ ನೀವು ಸೃಷ್ಟಿಯನ್ನ ನೋಡಿದ್ರಿಂದ, ಅಲ್ವಾ? ನೀವು ಹುಟ್ಟಿದಾಗ, ಕಣ್ತೆರ್ದು ಸುತ್ತಮುತ್ತ ನೋಡ್ದಾಗ, ಎಷ್ಟೊಂದು ಸೃಷ್ಟಿ. ನೀವ್ ಇಲ್ಲಿಗ್ ಬರೋ ಮೊದ್ಲು ಎಷ್ಟೊಂದೆಲ್ಲ ಆಗ್ ಹೋಗ್ ಬಿಟ್ಟಿದೆ, ಖಂಡಿತವಾಗ್ಲೂ ನೀವದನ್ ಸೃಷ್ಟಿಸ್ಲಿಲ್ಲ, ಆದ್ರಿಂದ ನೀವ್ ಯೋಚಿಸಿದ್ರಿ "ಒಬ್ಬ ಸೃಷ್ಟಿಕರ್ತ ಇರ್ಬೇಕು". ನೀವು ಸೃಷ್ಟಿಕರ್ತನ್ ಪರಿಕಲ್ಪನೆಗೆ ಬರೋದು ಹೀಗೆ, ಅಲ್ವಾ?

ಸೃಷ್ಟಿಕರ್ತ ಇರ್ಬೇಕು ಅಂತ ಯೋಚಿಸಿದ್ ತಕ್ಷಣ, ನೀವು ಮನುಷ್ಯ ರೂಪದಲ್ಲಿರೋದ್ರಿಂದ, ನೀವು ಅಂದ್ಕೊಂಡ್ರಿ ಅದೊಂದು ದೊಽಽಡ್ಡ ಮನುಷ್ಯನಾಗಿರ್ಬೇಕು ಅಂತ. ನನ್ನಂತ ಸಣ್ಣ ಮನುಷ್ಯ ಇದನ್ನೆಲ್ಲಾ ಮಾಡೋದ್ ಸಾಧ್ಯವಿಲ್ಲ, ಆದ್ರಿಂದ ಅದು ದೊಽಽಡ್ ಮನುಷ್ಯನಾಗಿರ್ಬೇಕು. ಬರೀ ಎರಡು ಕೈಗಳು ಹೇಗೆ ಇಷ್ಟೆಲ್ಲಾ ಸೃಷ್ಟಿಯನ್ನ ಮಾಡೋದಿಕ್ಕೆ ಸಾಧ್ಯ? ಖಂಡಿತವಾಗ್ಲೂ ಎಂಟು ಕೈಗಳು ಇರ್ಬೇಕು. ಅಲ್ವಾ? ಇದೇ ಅಲ್ವಾ ಆಗಿರೋದು? ನೀವೊಂದು ಎಮ್ಮೆಯಾಗಿದ್ದಿದ್ರೆ ನೀವು ನಿಜವಾಗ್ಲೂ ದೇವ್ರು ಅಂದ್ರೆ ಒಂದ್ ದೊಽಽಡ್ ಎಮ್ಮೆ ಅಂತ ಅಂದ್ ಕೊಳ್ತಿದ್ರಿ. ಹೌದಾ ಅಲ್ವಾ? ಹೋಗಿ ಒಂದ್ ಎಮ್ಮೇನ ಕೇಳ್ ನೋಡಿ. ಅದು ಪಟ್ಟು ಹಿಡಿಯುತ್ತೆ ದೇವ್ರು ಒಂದ್ ದೊಡ್ ಎಮ್ಮೆನೇ ಅಂತ. ಬಹುಶಃ ನಾಲ್ಕು ಕೊಂಬಿನದ್ದು. (ನಗು)

ನಿಮ್ಗೆ ಇದಿ ಅಮೀನ್ ಗೊತ್ತಾ? ಇದಿ ಅಮೀನ್ ಕೇಳ್ಪಟ್ಟಿದ್ದೀರಾ? ಉಗಾಂಡಾದವ್ರು? ಇದಿ ಅಮೀನ್ ಘೋಷಿಸಿದ್ರು "ದೇವ್ರು ಕಪ್ಪು". ನಾನದನ್ನ ಒಪ್ಕೊಳ್ತೀನಿ. ಒಬ್ಬ ಬಿಳಿ ವ್ಯಕ್ತಿ ಬಿಳಿ ದೇವ್ರನ್ನ ಇಟ್ಕೊಳ್ಬಹುದಾದ್ರೆ, ಕಪ್ಪು ವ್ಯಕ್ತಿ ಕಪ್ಪು ದೇವ್ರನ್ನ ಯಾಕೆ ಇಟ್ಕೊಳ್ಬಾರ್ದು? ಆದ್ರೆ ಅವ್ರಿಬ್ರೂ ತಪ್ಪು ತಿಳ್ಕೊಂಡಿದ್ದಾರೆ, ನಮಗ್ಗೊತ್ತು ದೇವ್ರು ಕಂದು ಬಣ್ಣಾಂತ. (ನಗು) ಯಾಕಂದ್ರೆ ಅವ್ನು ನಮ್ಗೆ ಭೇಟಿ ಕೊಟ್ಟಿದಾನೆ ಗೊತ್ತಾ! (ನಗು)

ಸ್ವಲ್ಪ ಸಮಯದ ಹಿಂದೆ ನಾನು ಟೆನೆಸ್ಸೀ ನ ನಾಶ್‌ವಿಲ್ ನಲ್ಲಿ ಕೆಲವು ಜನ್ರೊಂದಿಗೆ ಮಾತ್ನಾಡ್ತಾ ಇದ್ದೆ. ಮತ್ತು ಅವ್ರಿಗೆ ಒಂದ್ ಜೋಕ್ ಹೇಳ್ತಾ ಇದ್ದೆ. ಆ ಜೋಕ್ ನಲ್ಲಿ ನಾನು ದೇವ್ರನ್ನ "ಅವನು" ಅಂತ ಕರ್ದೆ. ತಕ್ಷಣ ಕೆಲವ್ ಹೆಂಗಸರು ಎದ್ದು ನಿಂತು "ನೀವು ದೇವ್ರು ಗಂಡಸು ಅಂತ ನಂಬ್ತೀರಾ?" ನಂಗೊತ್ತಾಯ್ತು ಇದೆಲ್ಲಿಗ್ ಹೋಗ್ತಿದೇಂತ, ನಾನಂದೆ "ನೋಡಿ.." (ನಗು) "ನೋಡಿ, ನಾನು ನಿಮ್ಗೆ ಒಂದ್ ಜೋಕ್ ಹೇಳ್ತಾ ಇದ್ದೀನಿ ಅಷ್ಟೆ" "ಅದೆಲ್ಲಾ ಬೇಡ, ನೀವು ’ಅವನು’ ಅಂದ್ರಿ. ನೀವು ದೇವ್ರು ಗಂಡಸು ಅಂತ ನಂಬ್ತೀರಾ?" ಅವ್ರು ಜೋಕನ್ನೂ ಕೂಡ ತುಂಬ ಸೀರಿಯಸ್ಸಾಗ್ ತಗೊಳ್ತಾರೆ.

ಈಗ ಹೆಂಗಸ್ರು ವಾದಮಾಡ್ತಾ ಇದ್ದಾರೆ ದೇವ್ರು ಹೆಂಗಸಾಗಿರ್ಬಹುದು ಅಂತ. ಇಂತಹ ತೊಂದರೆಗಳು ಇರೋದು ಆ ಸಮಾಜಗಳಲ್ಲಿ ಮಾತ್ರ. ಭಾರತದಲ್ಲಿ ನಮ್ ಬಳಿ ಪುರುಷ ದೇವ್ರು, ಸ್ತ್ರೀ ದೇವ್ರು, ದನ ದೇವ್ರು, ಕಪಿ ದೇವ್ರು ಎಲ್ಲಾವೂ ಇವೆ. ಎಲ್ಲಾ ತರದ್ದು. ನೆಲದಲ್ಲಿ ತೆವ್ಳೋಂತಾದ್ದು, ಸರ್ದಾಡೋಂತಾದ್ದು, ಹಾರೋಂತಾದ್ದು. (ನಗು) ಯಾಕಂದ್ರೆ ನಾವು ಭವಿಷ್ಯದ ಈ ಎಲ್ಲಾ ತೊಂದ್ರೆಗಳನ್ನ ಮುಂಚೇನೇ ತಿಳ್ಕೊಂಡಿದ್ವಿ. (ನಗು)

ನೋಡಿ ಪುರುಷ್ರು ಜಗತ್ತಿನ ಅತ್ಯಂತ ಪ್ರಬಲ ಶಕ್ತಿಯಾಗಿದ್ದಾಗ, ಸಹಜವಾಗಿಯೇ ದೇವ್ರೂ ಪುರುಷನೇ ಆಗಿದ್ದ. ಈಗ ಮಹಿಳೆಯರೂ ಸಶಕ್ತರಾಗ್ತಿದ್ದಾರೆ, ಹಾಗಾಗಿ ಮಹಿಳೆಯರು ಪ್ರಶ್ನಿಸ್ತಿದ್ದಾರೆ "ದೇವ್ರು ಯಾಕೆ ಹೆಂಗಸಾಗಿರ್ಬಾರ್ದು?" ಒಂದ್ ವೇಳೆ ನಾಳೆ ನಾಯಿಗಳು ತುಂಬ ಪ್ರಬಲವಾಗ್ಬಿಟ್ರೆ, ಆಗ್ಲೇ ಅದು ಆಗ್ತಾ ಇದೆ (ನಗು), ಆಗ ನಾಯಿಗಳು ಕೇಳುತ್ವೆ "ದೇವ್ರು ನಾಯಿ ಯಾಕಾಗಿರ್ಬಾರ್ದು?" ಸ್ಪೆಲ್ಲಿಂಗ್ ಗಳೂ ಕೂಡಾ ತುಂಬ ಹತ್ರದಲ್ಲಿದೆ ಅಲ್ವಾ? (ನಗು) ನಿಮ್ಗಿಂತ್ಲೂ ಹತ್ರದಲ್ಲಿದೆ ಅದು ದೇವ್ರಿಗೆ, ಅಲ್ವಾ?

ಹಾಗಾಗಿ ದೇವ್ರ ಬಗೆಗಿನ ನಿಮ್ ಪರಿಕಲ್ಪನೆ ನಿಮ್ಮದೇ ರೂಪದ ಒಂದು ಉತ್ಪ್ರೇಕ್ಷೆ ಅಷ್ಟೆ.

ನೋಡಿ, ನಿಮಗೆ ನಿಮ್ಮನ್ನೇ ಸರಿಯಾಗಿ ವ್ಯಾಖ್ಯಾನಿಸೋದಿಕ್ಕೆ define ಮಾಡೋಕ್ಕಾಗೋದಿಲ್ಲ. ಅಲ್ವಾ? ನೀವು ನಿಮ್ ಬಗ್ಗೆ ಏನೇ ನಿರೂಪಣೆ ಕೊಟ್ಕೊಂಡ್ರೂ ಅದು ತಪ್ಪೇ ಆಗಿರುತ್ತೆ. ಯಾವ್ದೇ ತರದ ವ್ಯಾಖ್ಯಾನವನ್ನ ನೀವು ನಿಮ್ ಬಗ್ಗೆ ಕೊಟ್ಕೊಂಡ್ರೂ, ಅದು ಇದನ್ನ ವರ್ಣಿಸೋದಕ್ಕೆ ಸಾಲೋದಿಲ್ಲ.

ಸೃಷ್ಟಿಯ ಈ ಒಂದು ಸಣ್ಣ ತುಣುಕೇ ಹೀಗಿರೋವಾಗ, ಸೃಷ್ಟಿಯ ಮೂಲಕ್ಕೇ ನೀವು ಹೇಗೆ ವ್ಯಾಖ್ಯಾನವನ್ನ ನಿರೂಪಣೆಯನ್ನ ನೀಡ್ತೀರಿ? ನಿಮ್ಗೆ ಅದನ್ನ ವ್ಯಾಖಾನಿಸೋದಕ್ಕಾಗಲ್ಲ, ಅರ್ಥ ಮಾಡ್ಕೊಳ್ಳೋದಿಕ್ಕಾಗಲ್ಲ. ನಿಮ್ಗೆ ಅದ್ರಲ್ಲಿ ಕರಗಿ ವಿಲೀನವಾಗ್ಬಹುದಷ್ಟೇ. ಅದನ್ನು ಅನುಭವಿಸಬಹುದು. ಆದ್ರೆ ಅದನ್ನ ಯಾವತ್ತೂ ನಿಮ್ಗೆ ಬುದ್ಧಿಯಿಂದ ತಿಳ್ಕೊಳ್ಳೋದಿಕ್ಕಾಗೋದಿಲ್ಲ. ಅದ್ರಲ್ಲಿ ನಿಮ್ಗೆ ತಿಳಿವಳಿಕೆಯನ್ನ ಕಂಡ್ ಕೊಳ್ಳೋದಿಕ್ಕಾಗಲ್ಲ. ದೇವ್ರ ಬಗ್ಗೆ ನಿಮ್ಗೆ ಏನೆಲ್ಲಾ ತಿಳಿವಳಿಕೆಗಳು ಇವೆಯೋ ಅವೆಲ್ಲಾ ಬರೀ ಅಸಂಬದ್ಧ, ಸಾಂಸ್ಕೃತಿಕ ಅಸಂಬದ್ಧತೆಗಳು. ನೀವು ಯಾವ ತರದ ಸಂಸ್ಕೃತಿಗೆ ಒಳಪಟ್ಟಿದೀರೋ ನಿಮ್ ದೇವ್ರು ಆ ತರದ್ದಾಗಿರುತ್ತೆ. ಅಲ್ವಾ?

ಅದನ್ನು ಕೇವಲ ಅನುಭವಿಸ್ಬಹುದು. ಅನುಭವ ಅಂದ್ರೆ ನೀವದನ್ನ ತಿನ್ಬಹುದು ಅಥವಾ ಹಿಡ್ಕೊಳ್ಬಹುದು ಅಂತ ಅಲ್ಲ. ಅದ್ರಲ್ಲಿ ಕರಗಿ ವಿಲೀನವಾಗೋದ್ರಿಂದ ಮಾತ್ರ ನೀವದನ್ನ ಅನುಭವಿಸ್ಬಹುದು. ಬೇರೆ ದಾರಿನೇ ಇಲ್ಲ. ಹಾಗಾಗಿ ನಾವು ವಿಲೀನವಾಗೋದಿಕ್ಕೆ ಉಪಾಯಗಳನ್ನ ಹುಡುಕ್ತಾ ಇದ್ದೀವಿ ಅಷ್ಟೆ. ಆಗ ನಾವು ನಮಗಿಂತ ಎಷ್ಟೋ ಮಹತ್ತಾದದ್ದನ್ನ ಅನುಭವಿಸ್ಬಹುದು.