ಚೆನ್ನೈನ ಐ.ಐ.ಟಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗದವರೊಂದಿಗೆ ಮಾತನಾಡುತ್ತಾ ಸದ್ಗುರುಗಳು, ಬಾಹ್ಯ ಸನ್ನಿವೇಶಗಳು ಹೇಗೇ ಇದ್ದರೂ ಹೇಗೆ ನಮ್ಮ ಸಂತೋಷ ಮತ್ತು ಆನಂದವನ್ನು ಕಾಪಾಡಿಕೊಳ್ಳುವುದು ಎಂಬ ಪ್ರಶ್ನೆಯೊಂದನ್ನು ಉತ್ತರಿಸುತ್ತಾರೆ.

Anandavaagi badukodu hege?

ಲಿಪ್ಯಂತರ:

ಪ್ರಶ್ನೆ: ನಮಸ್ಕಾರ ಗುರುಗಳೇ, ಒಂದ್ ಸಾರಿ ನಿಮ್ಮ ಉಪನ್ಯಾಸದಲ್ಲಿ, "ಆನಂದ ನಮ್ಮನ್ನವಲಂಬಿಸಿರುತ್ತೆ, ಆದರೆ ಸಂತೋಷ ಬೇರೆಯವರನ್ನವಲಂಬಿಸಿರುತ್ತೆ" ಅಂತ ಹೇಳಿದ್ರಿ. ಇದನ್ನ ನಾನು ಸ್ವಲ್ಪ ಸಮಯ ಪ್ರಾಕ್ಟೀಸ್ ಮಾಡ್ ನೋಡ್ದೆ. ಆದ್ರೆ ಆನಂದದ ಕೆಲವು ಕ್ಷಣಗಳನ್ನ ನನಗೆ ಹೆಚ್ಚು ಹೊತ್ತು ಉಳಿಸಿಕೊಳ್ಳಕ್ಕಾಗ್ಲಿಲ್ಲ. ನನ್ ಕೆಲಸದಲ್ಲಿ ನಾನು ಸಂಪೂರ್ಣವಾಗಿ ತಲ್ಲೀನಳಾಗಿದ್ದಾಗ ಮಾತ್ರ ಆನಂದದಿಂದ ಇರೋದಿಕ್ಕೆ ಸಾಧ್ಯವಾಯಿತು. ಆದ್ರೆ ಬೇರೆಯವರು ನನ್ನ ಕೆಲಸಾನಾ ಗುರ್ತಿಸಿದ ಕೂಡ್ಲೇ ಆನಂದ ಮಾಯವಾಗಿಬಿಡುತ್ತೆ. ಆದ್ದರಿಂದ ನನ್ ಪ್ರಶ್ನೆ ಏನೆಂದರೆ ಆನಂದ ನಮ್ಮೊಳಗೆ ಯಾವಾಗ್ಲೂ ಇರೋಹಾಗೆ ಮಾಡೋದು ಹೇಗೆ? ಜೊತೆಗೆ ಆನಂದ ಮತ್ತು ಸಂತೋಷಗಳ ಮಧ್ಯೆ ಇರೋ ವ್ಯತ್ಯಾಸಾನ ಕೂಡಾ ದಯವಿಟ್ಟು ಇನ್ನೊಮ್ಮೆ ಬಿಡಿಸಿ ಹೇಳಿದ್ರೆ ಒಳ್ಳೆದಿತ್ತು.

ಸದ್ಗುರು: ಒಂದು ವೇಳೆ ನಾನೀಗ ನಿಮಗೆ ಹೇಳಿದ್ರೆ... ಸರಿ, ನಾನಲ್ಲ, ನಿಮ್ಮ ಡೀನ್ ಹೇಳಿದ್ರು ಅಂತಿಟ್ಕೊಳ್ಳಿ. ನಾಳೆಯಿಂದ ನೀವೆಲ್ರೂ ಯಾವ್ ತರದ್ ಬಟ್ಟೆ ಹಾಕ್ಕೋಬೇಕು ಅಂತ. ತಕ್ಷಣ ಕಾಲೇಜಿನಲ್ಲಿ ಸ್ಟ್ರೈಕ್ ಶುರುವಾಗ್ಬಿಡುತ್ತೆ. ನಿಮ್ಮ ಡೀನ್ ಅಲ್ಲಿಗೇ ಬಿಡದೆ, "ಎಲ್ರೂ ಬೆಳಿಗ್ಗೆ ಬರೀ ನಾಲ್ಕು ಇಡ್ಲಿನೇ ತಿನ್ಬೇಕು" ಅಂದ್ರೆ? "ಎಲ್ರೂ ಬೆಳಿಗ್ಗೆ 5 ಘಂಟೆಗೇ ಏಳಬೇಕು" ಅಂದ್ರೆ? ಹೀಗೆ ಒಂದ್ ಹತ್ತು ರೂಲ್ಸ್ಗಳನ್ನ, ದೈಹಿಕ ಶ್ರಮ ಇರೋದನ್ನ, ನಿಮ್ ಮೇಲೆ ಹೇರಿದ್ರು ಅಂತಿಟ್ಕೊಳ್ಳಿ. ಆಗ ನಿಮ್ಗೆ ಅವ್ರು ನಿಮ್ಮನ್ನ ಗುಲಾಮರನ್ನಾಗಿ ಬದಲಾಯಿಸುತ್ತಿದ್ದಾರೆ ಅಂತ ಅನ್ನಿಸ್ ಬಿಡುತ್ತೆ. ಆಗ ನೀವು ನಿಮ್ಮ ಸ್ವಾತಂತ್ರ್ಯಕ್ಕಾಗಿ ಕೂಗಾಡಿ ಗಲಾಟೆ ಮಾಡ್ತೀರಿ. ಹೌದ್ ತಾನೇ? ಆದ್ರೆ ಸ್ವಲ್ಪ ಯೋಚನೆ ಮಾಡಿ. ಬೇರೆಯವರು ನಿಮ್ಮ ಹೊರ್ಗಡೆ ಇರೋಂತದನ್ನ ನಿರ್ಧರಿಸಿದ್ರೆ, ಅದು ನಿಮಗೆ ಗುಲಾಮಗಿರಿ ಅನ್ಸುತ್ತೆ; ಆದ್ರೆ ಯಾರೋ, ’ನಿಮ್ಮೊಳಗೆ’ ಏನಾಗಬೇಕು ಅನ್ನೋದನ್ನ ನಿರ್ಣಯಿಸ್ತಾ ಇದಾರೆ! ಅದು ಗುಲಾಮಗಿರಿಯಲ್ವಾ? ನೀವು ಸಂತೋಷವಾಗಿದ್ದೀರೋ ಇಲ್ವೋ ಅನ್ನೋದನ್ನ ಬೇರೆಯವರು ನಿರ್ಧರಿಸ್ತಿದಾರೆ. ಇದು ಗುಲಾಮಗಿರಿಯಲ್ವಾ? ನೀವು ಶಾಂತವಾದ್ ವ್ಯಕ್ತೀನೋ ಅಲ್ವೋ ಅನ್ನೋದನ್ನ ಇನ್ಯಾರೋ ನಿರ್ಧರಿಸಿದ್ರೆ, ಇದು ಗುಲಾಮಗಿರಿಯಲ್ವಾ?

ನಿಮ್ಮೊಳಗೆ ಏನು ನಡೆಯುತ್ತೋ ಅದನ್ನ ಬೇರೆಯವ್ರು ನಿರ್ಧರಿಸಿದ್ರೆ ಅದು ಗುಲಾಮಗಿರಿಯ ಪರಮಾವಧಿ, ಅಲ್ವಾ? ಆದ್ರೆ ಎಲ್ರೂ ಹಾಗೆಯೇ ಇರೋದ್ರಿಂದ ಇದೇ ಸಹಜ ಅಂತ ಅನ್ಸುತ್ತೆ. ಆದ್ರೆ ಅಲ್ಲ. ಅದು ಸಹಜ ಅಲ್ಲ. ಎಲ್ರೂ ಅದೇ ರೀತಿ ಇದಾರೆ ಅನ್ನೋ ಕಾರಣಕ್ಕೆ ಅದು ಸಹಜವಾಗೋಲ್ಲ. ಈ ಮನುಷ್ಯ ಅಂದ್ರೆ, ಪ್ರಪಂಚ 100 ಪರ್ಸೆಂಟ್ ನೀವ್ ಅಂದ್ಕೊಂಡ್ ಹಾಗೆ ನಡೆಯೋದಿಲ್ಲ, ಯಾವತ್ತೂ ನಡೆಯೋದಿಲ್ಲ. ನಡೀಬಾರ್ದು ಕೂಡ. ಯಾಕೆಂದ್ರೆ ಎಲ್ಲ ನಿಮಗ್ ಬೇಕಾದ ಹಾಗೇನೇ ನಡೆದ್ ಬಿಟ್ರೆ, ನಾನೆಲ್ಲಿಗ್ ಹೋಗ್ಲಿ? ನನಗ್ ಖುಶಿನೇ ಎಲ್ಲ ನೀವಂದ್ ಕೊಂಡಂಗ್ ನಡೀತಿಲ್ಲ ಅಂತ. ಈಗ ನೀನಿನ್ನೂ ವಿದ್ಯಾರ್ಥಿ ತಾನೆ... ನೀನಿನ್ನೂ ವಿದ್ಯಾರ್ಥಿ... ಹಾಗಾದ್ರೆ ಹೆಚ್ಚುಕಮ್ಮಿ 60-70 ಪರ್ಸೆಂಟ್ ನೀನಂದ್ಕೊಂಡ ಹಾಗೆ ನಡೀತಿವೆ ಅಂತ ಅನ್ಕೋತೀನಿ. ನಾಳೆ ನೀನು ಮದುವೆಯಾದಾಗ ಸಂಖ್ಯೆ ತಲೆಕೆಳಗಾಗ್ಬಿಡತ್ತೆ (ನಗು, ಚಪ್ಪಾಳೆ). ನಮಗ್ಗೊತ್ತಿಲ್ಲ. ಅದು ಯಾವ ರೀತಿ ಹೋಗ್ಬಹುದು ಅಂತ ಹೇಳಕ್ಕಾಗಲ್ಲ. ಹಾಗಾದ್ರೆ... ಪ್ರಪಂಚ 100 ಪರ್ಸೆಂಟ್ ನೀನಂದ್ಕೊಂಡ್ ಹಾಗೆ ನಡೆಯೋದಿಲ್ಲ, ನಡೀಬಾರ್ದು ಕೂಡ. ನೀನು ಮಶೀನ್ಗಳ ಜೊತೆ ಬದುಕ್ತಿದ್ರೆ, ಹಾಗ್ ಆಗ್ಬಹುದೇನೋ. ಆದರೆ ಮಶೀನ್ಗಳೂ ಕೂಡ ಕೈ ಕೊಡುತ್ತೆ, ಅಲ್ವಾ? ಅವೂ ಪ್ರತಿದಿನ ಏನಾದ್ರೂ ಒಂದ್ ತೊಂದರೆ ಕೊಡುತ್ತಿಲ್ವ? ಕೊಡ್ತಿವೆ.

ಹಾಗಾದ್ರೆ ಹೊರಗಿಂದು ಯಾವತ್ಗೂ 100 ಪರ್ಸೆಂಟ್ ನಿಮ್ಗೆ ಬೇಕಾದ ಹಾಗೆ ನಡೆಯೋದಿಲ್ಲ. ಈಗ ನಿಮ್ ಸಂತೋಷ, ನಿಮ್ ಆನಂದ... ಇಷ್ಟೆಲ್ಲ ಪದಗಳು ಯಾಕೆ? ನಮ್ಮ ಅನುಭವಗಳು ’ಚೆನ್ನಾಗಿರುತ್ತೆ ಅಥವಾ ಕೆಟ್ಟದಾಗಿರುತ್ವೆ’. ಚೆನ್ನಾಗಿರೋದಿಕ್ಕೆ ತುಂಬ ಹೆಸ್ರುಗಳಿವೆ - ಶಾಂತಿ, ಸಂತೋಷ, ಹರ್ಷ, ಆನಂದ, ಪರಮಾನಂದ. ಅದೇ ರೀತಿ ಕೆಟ್ಟದಾಗಿದ್ರೆ  ಒತ್ತಡ, ತಳಮಳ, ಭಯ, ಚಿಂತೆ, ಹುಚ್ಚು ಹೀಗೆ ಏನೇನೋ ಹೆಸ್ರುಗಳಿವೆ... ಚೆನ್ನಾಗಿರೋದು ವರ್ಸಸ್ ಕೆಟ್ಟದಾಗಿರೋದು...

ಒಂದ್ ವೇಳೆ ನಿಮ್ ಆನಂದ ನಿಮ್ ಸುತ್ತ ಇರೋದರ ಮೇಲೇ ಅವಲಂಬಿತವಾಗಿದ್ರೆ, ನೀವು ಸದಾ ಆನಂದವಾಗಿರೋ ಸಾಧ್ಯತೆಗಳು ಬಹಳ ಕಡಿಮೆ, ಅಲ್ವಾ? ಸ್ವಾಭಾವಿಕವಾಗಿಯೇ ಅದು ಸಾಧ್ಯವಿಲ್ಲ. ನೀವು ಇದು ಮತ್ತು ಅದರ ಮಧ್ಯ ಒಂದು ಅಂತರಾನ ಉಂಟುಮಾಡಿದ್ರೆ ಮಾತ್ರ ಅದು ಸಾಧ್ಯ. ಬಹಳ ಜನ್ರು ಏನಾದ್ರು ಅವರಂದ್ಕೊಂಡ ಹಾಗೆ ನಡೀದಿದ್ದಾಗ ಮೇಲ್ಗಡೆಗೆ ನೋಡ್ತಾರೆ. ಊಪರ್-ವಾಲಾ...? ಮ್ ಅಲ್ವಾ? ಇಡೀ ಜಗತ್ತೇ ಮೇಲ್ಗಡೆ ನೋಡ್ತಾ ಇದೆ.

ಮೇಲೆ ನೋಡೋದು... ನೋಡೀ, ನಮ್ ಗ್ರಹ ದುಂಡ್ಗಿದೇ. ಗೊತ್ತು ತಾನೇ? ನಮ್ ಗ್ರಹ ದುಂಡಗಿದೆ. ಮತ್ತು ನೀವು ಉತ್ತರ ಧ್ರುವದ ಮೇಲೇನೂ ಕೂತ್ಕೊಂಡಿಲ್ಲ, ನೀವು ಚೆನ್ನೈನಲ್ಲಿ ಕೂತಿದ್ದೀರ. ಅದೂ ಅಲ್ದೆ ಗ್ರಹ ಸುತ್ತುತ್ತಾನೂ ಇದೆ. ಹಾಗಾದ್ರೆ ನೀವ್ ಮೇಲ್ ನೋಡಿದ್ರೆ ಯಾವಾಗ್ಲೂ ತಪ್ಪು ದಿಕ್ಕಿನಲ್ಲೇ ನೋಡ್ತೀರಾ, ಅಲ್ವಾ? ಬಹುಶಃ ಯಾವುದೋ ಒಂದು ಕ್ಷಣದಲ್ಲಿ, ಗ್ರೀನ್ವಿಚ್ ಮೀನ್ ಟೈಮ್ ಜೀರೋ ಕ್ಷಣದಲ್ಲಿ, ನೀವು ಮೇಲೆ ನೋಡ್ದಾಗ ಸ್ವರ್ಗದ್ ಕಡೆ ನೋಡಿರಬಹುದು. ಉಳಿದ ಸಮಯ ನೀವು ತಪ್ಪಾದ ದಿಕ್ಕಿನಲ್ಲೇ ನೋಡ್ತಾ ಇದ್ದೀರಾ. ಅಲ್ವಾ?

ಹಾಗಾಗಿ ಬ್ರಹ್ಮಾಂಡದಲ್ಲಿ ಯಾರಿಗಾದ್ರೂ ಗೊತ್ತಿದ್ಯಾ ಮೇಲೆ ಯಾವುದು, ಕೆಳಗೆ ಯಾವುದು ಅಂತ? ಯಾರ್ಗಾದ್ರೂ ಗೊತ್ತಾ? ಹ್ಮ್? ಎಲ್ಲಾದ್ರೂ ಬರ್ದಿದ್ಯಾ "This Side Up" ಅಂತ? ಮೇಲೆ ಕೆಳಗೆ ಯಾವ್ದೂಂತ ಯಾರಿಗೂ ಗೊತ್ತಿಲ್ಲ. ಅದೊಂದ್ ಊಹೆ ಅಷ್ಟೆ. ಅಲ್ವಾ? ಉತ್ತರ, ದಕ್ಷಿಣ ಯಾವುದೂಂತ ನಿಮಗ್ ನಿಜವಾಗ್ಲೂ ಗೊತ್ತಾ? ನಿಜವಾದ ಉತ್ತರ ದಕ್ಷಿಣ ಯಾವ್ದೂ ಅಂತ ಗೊತ್ತಾ? ನಮ್ ಅನುಕೂಲಕ್ಕೋಸ್ಕರ ನಾವದನ್ನ ಮಾಡ್ಕೊಂಡಿದ್ದೇವೆ. ಅಲ್ವಾ ? ಹೌದೋ ಅಲ್ವೋ?

ಪೂರ್ವ ಪಶ್ಚಿಮ ಯಾವುದು ಗೊತ್ತಾ? ಇಲ್ಲ. ಮುಂದೆ ಹಿಂದೆ ಯಾವುದು ಗೊತ್ತಾ? ಗೊತ್ತಿಲ್ಲ. ಇದ್ಯಾವುದೂ ನಿಮಗ್ ಗೊತ್ತಿಲ್ಲ. ಈಗ ನೀವು ಖಚಿತವಾಗಿ ಹೇಳ್ಬಹುದು ಅಂದ್ರೆ ಅದು ಒಂದೇ -- ಯಾವುದು ಹೊರಗೆ ಯಾವುದು ಒಳಗೆ ಅನ್ನೋದು. ಇದು ಒಂದು ಖಚಿತ, ಅಲ್ವಾ? ಇದು ಒಳಗೆ, ಇದು ಹೊರಗೆ. ಇದೊಂದೇ ನಿಮ್ಗೆ ಗೊತ್ತಿರೋದು. ಯಾವುದು ಹೊರಗೆ, ಯಾವುದು ಒಳಗೆ, ಇದಷ್ಟೆ ನಿಮಗೆ ಗೊತ್ತಿರೋದು. ಒಂದು ವೇಳೆ ನಿಮಗೊಂದು ದಿನ ಜ್ಞಾನೋದಯ ಆದ್ರೆ ಅದನ್ನೂ ಕಳ್ಕೊಂಡ್ ಬಿಡ್ತೀರಿ! ಹೌದು... ನನಗಾಗಿದ್ದು ಅದೇನೇ. ನಂಗೀಗ ಗೊತ್ತಿಲ್ಲ ಯಾವುದು ಒಳಗೆ, ಯಾವುದು ಹೊರಗೆ, ಯಾವುದು ನಾನು, ಯಾವುದು ನಾನಲ್ಲ ಅಂತ, ಅದಕ್ಕೇ ನಾನು ಎಲ್ಲಾ ಕಡೆ ಇರೋದು. ನಾನು ಇದಾ ಅಥವಾ ಅದಾ ಅಂತನೂ ಗೊತ್ತಿಲ್ಲ ನಂಗೆ.

ಈಗ ನೀವು ಒಳಗೆ ಮತ್ತು ಹೊರಗೆ ಯಾವ್ದೂಂತ ಗೊತ್ತಿದೆ ಅಂದ್ರಿ. ಇದನ್ನ ಸ್ವಲ್ಪ ಆಳವಾಗಿ ನೋಡೋಣ. ಎಲ್ರಿಗೂ ನಾನು ಕಾಣ್ತಾ ಇದೀನಾ? ಕಾಣಿಸ್ತಿದೀನಾ? ನಾನಿರೋ ಜಾಗಾನ ತೋರ್ಸಿ. ಬೆರಳು ತೋರ್ಸಿ. ಕಾಣಿಸ್ತಿದೀನಾ? ಇಲ್ಲ ತಪ್ಪು. ನಾನೊಬ್ಬ ಯೋಗಿ, ಗೊತ್ತಿಲ್ವ ನಿಮ್ಗೆ? ನಿಮ್ಮ್ ಉತ್ತರ ತಪ್ಪು.

ಬೆಳಕು ನನ್ ಮೇಲೆ ಬಿದ್ದು, ಪ್ರತಿಫಲಿಸಿ ನಿಮ್ಮ ಕಣ್ಣಿನ ಪರದೇಲಿ ಚಿತ್ರವನ್ನ ಉಲ್ಟಾ ಮಾಡಿ... ಕಥೆ ಗೊತ್ತು ತಾನೇ ನಿಮ್ಗೆ? ಹಾಗಿದ್ರೆ ನನ್ನನ್ನ ಎಲ್ಲಿ ನೋಡ್ತಾ ಇದ್ದೀರಾ? ನಿಮ್ಮೊಳಗೇ. ನನ್ನ್ ಮಾತ್ಗಳನ್ನ ಎಲ್ಲಿ ಕೇಳುಸ್ಕೋತಿದೀರಾ? ನಿಮ್ಮೊಳಗೇ. ಇಡೀ ಪ್ರಪಂಚನಾ ನೋಡಿರೋದು ಎಲ್ಲಿ? ನಿಮ್ಮೊಳಗೇನೇ. ನಿಮ್ಮಿಂದ ಹೊರಗೆ ಏನನ್ನಾದರೂ ಅನುಭವಿಸಿದೀರಾ? ನಿಮಗೆ ಇಲ್ಲೀವರೆಗೆ ಆಗಿರೋ ಅನುಭವಗಳೆಲ್ಲ -- ಕತ್ತಲು ಬೆಳಕು ಆಗಿದ್ದು ನಿಮ್ಮೊಳಗೆ, ನೋವು ನಲಿವು ಆಗಿದ್ದು ನಿಮ್ಮೊಳಗೆ, ಸುಖ ದುಃಖ ಆಗಿದ್ದು ನಿಮ್ಮೊಳಗೆ. ನೀವು ಯಾವಾಗ್ಲಾದ್ರು ನಿಮ್ಮಿಂದ ಆಚೆಗೆ ಏನನ್ನಾದ್ರೂ ಅನುಭವಿಸಿದೀರಾ? ಇಲ್ಲ.  ನಾನು ನಿಮ್ಮನ್ ಕೇಳ್ತಾ ಇರೋದೇನಂದ್ರೆ, ನಿಮ್ಮೊಳ್ಗಡೆ ಆಗ್ತಾ ಇರೋದು ಹೇಗಾಗ್ಬೇಕು ಅಂತ ಯಾರು ನಿರ್ಧರಿಸಬೇಕು? ನಿಮ್ಮೊಳಗೇ ಆಗ್ತಾ ಇರೋದು ಹೇಗಾಗ್ಬೇಕು ಅಂತ ಯಾರು ನಿರ್ಧರಿಸಬೇಕು? ಬೇರೆಯವರಾ? ಖಂಡಿತವಾಗಿಯೂ ನೀವೇ ನಿರ್ಧರಿಸಬೇಕು. ಅಲ್ವಾ?

ನಿಮ್ಮೊಳಗೆ ನಡೀತಾ ಇರೋದನ್ನ ನೀವೇ ನಿರ್ಧರಿಸಿದ್ರೆ, ನಿಮ್ ಬದುಕಿನ ಎಲ್ಲಾ ಅನುಭವಗಳನ್ನ ನೀವೇ ನಿರ್ಧರಿಸ್-ದಂಗಾಗತ್ತೆ, ಬೇರೆ ಯಾರೂ ಅಲ್ಲ. ಅಲ್ವಾ? ನಿಮ್ ಸುತ್ತಲಿನಘಟನೆಗಳನ್ನನೀವು ನಿರ್ಧರಿಸದೇ ಇರಬಹುದು, ಆದರೆ ನಿಮ್ ಬದುಕಿನ ಅನುಭವ ಹೇಗಿದೆ ಅನ್ನೋದನ್ನ 100 ಪರ್ಸೆಂಟ್ ನೀವು ನಿರ್ಧರಿಸ್ಬಹುದು...  ಇದನ್ನ ನಿಮ್ಮ ಕೈಗ್ ತೊಗೊಂಡ್ರೆ. ನೀವದನ್ನ ಹಾಗೇ ಬಿಟ್ಟರೆ ಯಾರೆಂದರೆ ಅವರು ಅದನ್ನ ನಿರ್ಧರಿಸ್ತಾರೆ. ಪ್ರಜ್ಞಾಪೂರ್ವಕವಾಗ್ ಏನಲ್ಲ. ಅವರೂ ನಿಮ್ ಹಾಗೇನೇ, ಆಕಸ್ಮಿಕವಾಗಿ.