ಸದ್ಗುರುಗಳು ಅಲ್ಲಮ ಪ್ರಭುಗಳ ಬಗ್ಗೆ ಮಾತನಾಡುತ್ತಾರೆ. ಅಲ್ಲಮರು ಶಿವಭಕ್ತಿಯಲ್ಲಿ ಎಷ್ಟು ತನ್ಮಯರಾಗಿದ್ದರೆಂದರೆ, ಅದರಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಕಳೆದುಕೊಂಡುಬಿಟ್ಟಿದ್ದರು ಹಾಗೂ "ಯಾವುದಿಲ್ಲವೋ ಅದು" ಆಗಿಬಿಟ್ಟಿದ್ದರು. ಅವರೊಂದಿಗೆ ಸ್ಪರ್ಧಿಸಲು ಬಂದ ಒಬ್ಬ ಶಕ್ತಿಶಾಲಿ ಯೋಗಿಯೊಂದಿಗಿನ ಅವರ ಜೀವನದ ಒಂದು ರೋಚಕ ಘಟನೆಯನ್ನು ಇಲ್ಲಿ ಸದ್ಗುರುಗಳು ನಿರೂಪಿಸುತ್ತಾರೆ.

Allama Prabhu - Orva Gunaateeta Jnani

ಲಿಪ್ಯಂತರ:

ಸದ್ಗುರು: ಉತ್ತರ ಕರ್ನಾಟಕದಲ್ಲಿ ಒಬ್ರು ಜ್ಞಾನಿಗಳಿದ್ರು. ಅವ್ರನ್ನಿಂದು ವೀರಶೈವ ಪಂಗಡದ ಮೂಲಸ್ತಂಭಗಳಲ್ಲಿ ಒಬ್ಬರೆಂದು ಗೌರವಿಸಿ ಆರಾಧಿಸುತ್ತಾರೆ. ಅವ್ರ್ ಹೆಸ್ರು ಅಲ್ಲಮ ಪ್ರಭು. ಒಮ್ಮೆ ಒಬ್ಬ ಯೋಗಿ ಅಲ್ಲಮನನ್ನು ಹುಡುಕುತ್ತಾ ಬಂದ. ಅಲ್ಲಮನ ಬಗ್ಗೆ ತುಂಬಾ ಕೇಳಿದ್ರಿಂದ ಅವನ್ ಜೊತೆ ಸ್ಪರ್ಧಿಸ್ಬೇಕೆಂದಿದ್ದ. ಬಂದಂತ ಈ ಯೋಗಿಗೆ ವಯಸ್ಸು 200 ವರ್ಷಕ್ಕೂ ಮೇಲಾಗಿತ್ತು. ತುಂಬ ಕಠೋರವಾದ ಯೋಗದಿಂದ ಪಂಚಭೂತಗಳ ಮೇಲೆ ಪ್ರಭುತ್ವವನ್ನ ಪಡೆದು ದೇಹವನ್ನ ಹೇಗ್ ಮಾಡ್ಕೊಂಡಿದ್ದ ಅಂದ್ರೆ ವಯಸ್ಸಾಗೋದನ್ನೇ ನಿಲ್ಸ್ ಬಿಟ್ಟಿದ್ದ. ಇದು ಅವನ್ ಗರ್ವ. ಅವ್ನಿಗ್ಗೊತ್ತಿರೋ ಎಲ್ಲಾರೂ ಸತ್ತು ಹೋಗಿದ್ರು, ಆದ್ರೆ ಇವ್ನು ಯುವಕನ್ ತರ ಬದುಕೇ ಇದಾನೆ, ದೇಹ ಕಲ್ಲಿನ್ ತರ ಇದೆ. ಇವ್ನ್ ಅಲ್ಲಮನ್ ಬಳಿಗ್ ಬಂದ. ಅವ್ರು ಒಂದ್ ನದೀ ತೀರದಲ್ಲಿ ಭೇಟಿಯಾದ್ರು. ಅವ್ನಂದ "ನೋಡು, ನಾನೇ ನಿಜ್ವಾದ ಯೋಗಿ. ಪರೀಕ್ಷೆ ಮಾಡ್ಬೇಕು ಅಂದ್ರೆ ಕತ್ತೀನ ತಗೊಂಡು ನನ್ ತಲೆ ಮೇಲೆ ಹೊಡಿ. ನೋಡು ಏನಾಗುತ್ತೆ ಅಂತ"

ಅಲ್ಲಮ ಸರಿ ಅಂದ್ಬಿಟ್ಟು ಕತ್ತಿ ತಗೊಂಡು ಅವನ್ ತಲೆ ಮೇಲೆ ಜೋರಾಗ್ ಹೊಡ್ದ. ಕತ್ತಿ ಹಾಗೇನೆ ಹಿಂದಕ್ ಚಿಮ್ಮಿತು, ಕಲ್ಲನ್ ಹೊಡ್ದ್ ಹಾಗೆ. ಯೋಗಿ ಅಂದ ಇದು ನನ್ ಶಕ್ತಿ. ಯಾವ್ ಕತ್ತೀಗೂ ನನ್ನನ್ ಸೀಳಕಾಗಲ್ಲ. ನನಗ್ ಸಾವಿಲ್ಲ. ಅವನ್ ಕೇಳ್ದ ’ನಿನಗೇನ್ ಮಾಡಕಾಗತ್ತೆ?’ ಅಲ್ಲಮ ನಕ್ಕು "ನೀನೂ ನನ್ ಮೇಲೆ ಕತ್ತಿ ಚಲಾಯ್ಸು" ಅಂದ. ಯೋಗಿ ಸ್ವಲ್ಪ ಹಿಂಜರ್ದ. ಅಲ್ಲಮ ಕಲ್ಲಿನ್ ತರ ಕಠಿಣವಾಗ್ ಏನೂ ಕಾಣಿಸ್ತಿರ್ಲಿಲ್ಲ. ಸಾಧಾರಣವಾಗೇ ಇದ್ದ. ಅಲ್ಲಮ ಅಂದ. ಚಲಾಯ್ಸು. ಚಿಂತೆ ಮಾಡ್ಬೇಡ. ಅವ್ನ್ ಕತ್ತಿ ತಗೊಂಡು ಬಲವಾಗಿ ಅಲ್ಲಮನ್ ತಲೆ ಮೇಲೆ ಚಲಾಯಿಸ್ದ. ಕತ್ತಿ ಸುಮ್ನೆ ಹಾಗೇ ಹಾದ್ ಹೋಯ್ತು, ಅದು ಗಾಳಿನೋ ಎಂಬಂತೆ, ಮತ್ತು ಕತ್ತಿ ನೆಲಕ್ ಹೊಡೀತು. ಅವ್ನು ಆಯ ತಪ್ಪಿ ಬಿದ್ ಬಿಟ್ಟ. ಅವನ್ ಕೇಳ್ದ "ಇದೇನಿದು?" ಅಲ್ಲಮ ಅಂದ "ಇದು ಅದು ಇದು ಅಲ್ಲ. ಇದು ಶಿವ" ಇದು ಅದು ಇದು ಅಲ್ಲ. ಇದು ಅಥ್ವಾ ಅದು ಆಗಿದ್ರೆ ಅದಿಕ್ಕೆ ಗುಣಗಳಿರುತ್ವೆ. ಇದು ಅದೂ ಅಲ್ಲ ಇದೂ ಅಲ್ಲ. ಇದು ಶಿವ. ಯಾವುದಿಲ್ವೋ ಅದು.