ಕರ್ಮ, ನೆನಪು ಮತ್ತು ಶಿವನ ಮೂರನೇ ಕಣ್ಣು

 

ಸದ್ಗುರು ಇಲ್ಲಿ ನೆನಪಿನ ಗುಣಲಕ್ಷಣದ ಬಗ್ಗೆ ಮಾತನಾಡುತ್ತಾರೆ. ಅದು ಬರೀ ನಮ್ಮ ಮನಸ್ಸಿಗೆ ಸಂಬಂಧಪಟ್ಟ ವಿಷಯವಲ್ಲ, ಬದಲಾಗಿ ನಮ್ಮ ದೇಹವೂ ಕೂಡ ನೆನಪುಗಳಿಂದಲೇ ಆಗಿದೆ ಎಂದು ಉದಾಹರಣೆಗಳೊಂದಿಗೆ ವಿವರಿಸುತ್ತಾರೆ. ಅದಕ್ಕೆ ನಾವು ಸಾಂಪ್ರದಾಯಿಕವಾಗಿ "ಕರ್ಮ" ಎಂದು ಕರೆಯುವುದಕ್ಕಿರುವ ಸಂಬಂಧವನ್ನು ತೋರಿಸಿ, ಅದರಿಂದ ಹೊರಬರುವ ಮಾರ್ಗವನ್ನು ಸೂಚಿಸುತ್ತಾರೆ. ಈ ನಿಟ್ಟಿನಲ್ಲಿ ಶಿವನ ಮೂರನೇ ಕಣ್ಣಿನ ವಿಶೇಷತೆಯನ್ನು ತಿಳಿಯಪಡಿಸುತ್ತಾರೆ.

Karma, Nenapu Mattu Shivana Moorane Kannu

ಲಿಪ್ಯಂತರ:

ಸದ್ಗುರು: ಇದೆಲ್ಲದರ್ ಸಾರಾಂಶ ಏನಂದ್ರೆ... ಮೊದಲ್ನೇದಾಗಿ ನಾವ್ ಏನ್ ತಿಳ್ಕೊಳ್ಬೇಕಂದ್ರೆ, ಅಸ್ತಿತ್ವ ಯಾವ್ ರೀತಿ ನಡೀತಾ ಇದೆ ಅನ್ನೋದು. ಒಂದೋ ನೀವಿದನ್ ಗಮನಿಸ್ಬಹುದು, ಅಥ್ವಾ ಒಂದ್ ಪರಮಾಣೂನ ಗಮನಿಸ್ಬಹುದು, ಅಥ್ವಾ ಬ್ರಹ್ಮಾಂಡವನ್ನ ಗಮನಿಸ್ಬಹುದು. ಬ್ರಹ್ಮಾಂಡವನ್ನ ನೋಡ್ಬೇಕೂಂದ್ರೆ, ಅದು ಜಟಿಲವಾದ್ದು, ಅದು ಕಷ್ಟ ಯಾಕಂದ್ರೆ ನಿಮ್ಮತ್ರ ಬಾಲ್ಕನಿ ಸೀಟ್ ಇಲ್ಲ. ಅಲ್ವಾ. ಅದೇನೂ ಸ್ಟೇಡಿಯಮ್ ತರ ಅಲ್ಲ ನೀವು ಒಂದ್ ಕಡೆ ಕೂತು ಇಡೀ ಬ್ರಹ್ಮಾಂಡವನ್ನ ನೋಡೋದಿಕ್ಕೆ. ಅದ್ ಬಹಳ ಕಷ್ಟ. ಅದನ್ ನೀವ್ ಭಾಗ ಭಾಗವಾಗಿ ಮಾತ್ರ ನೋಡ್ಬಹುದು. ನಿಮ್ಗೆ ಒಂದ್ ಪರಮಾಣು, atom ನೋಡ್ಬೇಕೂಂದ್ರೆ... ಯಾರೂ ಪರಮಾಣೂನ ನೋಡೇ ಇಲ್ಲ, ಗೊತ್ತಾ ನಿಮ್ಗೆ? ಗೊತ್ತಾ ನಿಮ್ಗೆ? ಸೂಪರ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲೂ ಕೂಡ ಪರಮಾಣೂನ್ ನೋಡಕ್ಕಾಗಲ್ಲ. ಅದ್ರ್ ಚಟುವಟಿಕೆಯನ್ನ ಗಮನ್ಸಿದೀವಿ, ಆದ್ರೆ ನಾವ್ ಪರಮಾಣೂನ ನೋಡಿಲ್ಲ. ಆದ್ರ್ ಅದನ್ನ ಒಡ್ದ್ ಬಿಟ್ಟಿದೀವಿ! ನಾವು ನೋಡೋಕ್ ಆಗ್ದೇ ಇರೋದನ್ ಕೂಡ ನಾವ್ ಒಡ್ದ್ ಹಾಕ್ತೀವಿ. ಇದ್ರ್ ಬಗ್ಗೆ ತುಂಬಾ ಹೆಮ್ಮೆ ಪಟ್ಕೋತೀವಿ ಇತ್ತೀಚಿಗೆಲ್ಲ. ಏನನ್ ಬೇಕಿದ್ರೂ ಒಡ್ದ್ ಹಾಕ್ತೀವಿ ನಾವು. ಜೋಡ್ಸೋಕ್ಕಾಗುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಏನನ್ ಬೇಕಿದ್ರೂ ಒಡ್ದ್ ಹಾಕ್ತೀವಿ. ನೋಡೋಕ್ ಆಗ್ದೇ ಇದ್ರೂ ಒಡ್ದ್ ಹಾಕ್ತೀವಿ.

ಈಗ ನಿಮಗ್ ಏನ್ ಕಾಣ್ಸುತ್ತೆ ಮತ್ತು ಏನ್ ಕಾಣ್ಸಲ್ಲ ಅನ್ನೋದೇ ಬಹಳ tricky ವಿಷ್ಯ. ಹೇಗಂದ್ರೆ. ನಿಮಗ್ ನೋಡಕ್ಕಾಗೋವಂತಾದ್ ಯಾವ್ದು? ಈಗ, ನನ್ ಕೈ ಕಾಣಿಸ್ತಿದ್ಯಾ?

ಸಭಿಕರು: Yes.

ಸದ್ಗುರು: Yes. ನನ್ ಕೈ ನಿಮಗ್ ಕಾಣ್ಸ್ ತಿರೋದು ಯಾಕಂದ್ರೆ ನನ್ ಕೈ ಬೆಳಕನ್ನ ತಡಿಯುತ್ತೆ. ನನ್ ಕೈ ಬೆಳಕನ್ನ ತಡೀದೇ ಇದ್ದಿದ್ರೆ, ತನ್ ಮೂಲಕ ಹೋಗೋದಿಕ್ಕೆ ಬಿಟ್ಟಿದ್ದಿದ್ರೆ, ಈ ಕೈ ನಿಮಗ್ ಕಾಣ್ಸಲ್ಲ. ಅಲ್ವಾ? ಅಂದ್ರೆ, ನಿಮ್ ಕಣ್ಣುಗಳಿಗ್ ನೋಡೋಕ್ಕಾಗೋದು ಬೆಳಕನ್ನ ಯಾವ್ದೆಲ್ಲ ತಡಿಯುತ್ತೋ ಅವನ್ ಮಾತ್ರ. ತನ್ ಮೂಲ್ಕ ಬೆಳಕನ್ನ ಹಾಯೋದಿಕ್ಕೆ ಬಿಡೋವಂತವನ್ನ ನಿಮ್ಗ್ ನೋಡಕ್ಕಾಗಲ್ಲ. ನಿಮಗ್ ಲೈಟ್ ನೇ ನೋಡಕ್ಕಾಗಲ್ಲ ನಿಜ್ವಾಗಿ. ಇಲ್ಲಿರೋ ಬೆಳಕು ಕಾಣ್ತಿದ್ಯಾ ನಿಮ್ಗೆ? ಇಲ್ಲ. ಯಾವುದು ಬೆಳಕನ್ನ ತಡಿಯುತ್ತೋ ಅದನ್ ಮಾತ್ರ ನೋಡೋಕ್ಕಾಗುತ್ ನಿಮ್ಗೆ. ಬೆಳಕನ್ನ ತಡೀದೇ ಇರೋವಂತದನ್ನ ನೋಡಕ್ಕಾಗಲ್ಲ. ಮ್ಚ್. ಇದ್ ಚೆನ್ನಾಗಿಲ್ಲ. ಅಲ್ವಾ? ನಿಮಗ್ ಎಲ್ಲವನ್ನೂ ನೋಡಕ್ಕಾಗ್ ಬೇಕು, ಬೆಳಕನ್ನ ಹಾಯೋದಿಕ್ಕೆ ಬಿಡೋವಂತವನ್ನ ಕೂಡ, ಯಾಕಂದ್ರೆ ಅವು ಮುಖ್ಯವಾದ್ ವಿಷ್ಯಗಳು. ಆದ್ರೆ ಈಗ, ನಿಮ್ ಕಣ್ಣುಗಳಿಗೆ ತರಬೇತಿಯಾಗಿದೆ. ಬೆಳಕನ್ನ ತಡಿಯೋವಂತವನ್ನ ಮಾತ್ರ ಅವಕ್ಕೆ ನೋಡಕ್ಕಾಗುತ್ತೆ.

ಹಾಗಾಗಿ ಜೀವನವನ್ನ ಅದು ಇದ್ದ ಹಾಗೇನೇ ನೋಡೋ ಇಡೀ ಪ್ರಕ್ರಿಯೆ ಏನಂದ್ರೆ, ಮೊದಲ್ನೇದಾಗಿ, ಕಣ್ಣೊಂದನ್ನ ಬೆಳ್ಸ್ ಕೊಳೋದು, ಯೋಚನಾರಹಿತ ಕಣ್ಣು, ಯೋಚನೆಗಳಿಂದ ಮುಕ್ತವಾದ ಕಣ್ಣು. ಯೋಚನೆಗಳಿಂದ ಮುಕ್ತ ಅಂದಾಗ ನನ್ನರ್ಥ ಅದು ನೆನಪಿನ ಕೊಳೆಯಿಂದ ಮುಕ್ತವಾಗಿದೆ. ಈಗ, ಈ ಎರಡ್ ಕಣ್ಣುಗಳು ನೆನಪುಗಳಿಂದ ಬಹಳಾನೇ ಹೇರಲ್ಪಟ್ಟಿವೆ. ನೀವಿದನ್ ನೋಡ್ಬಹುದು. ನೀವ್ ಹೀಗೆ ಒಂದ್ ಜನ್ರ್ ಗುಂಪನ್ನ ನೋಡಿದ್ರೆ, ಸುಮ್ನೆ ಹಾಗೇ ಕಣ್ಣು ಹಾಯ್ಸಿದ್ರೆ, ಈ ನೂರಾರು ಜನ್ರಲ್ಲಿ ಒಂದ್ ಮುಖ ನಿಮಗ್ ಪರಿಚಿತವಾಗಿದ್ರೆ, ಒಮ್ಮೆಗೆ ಆ ಮುಖ ಎದ್ದು ಕಾಣ್ಸುತ್ತೆ. ಗಮನ್ಸಿದೀರಾ ಇದನ್ನ? ಗಮನ್ಸಿದೀರಾ ಇದನ್ನ? ನೀವ್ ರಸ್ತೆನಲ್ ಹೋಗ್ತಾ ಇರ್ತೀರ, ಅಲ್ಲಿ ನೂರಾರು ಜನ್ರ್ ಇದಾರೆ, ಅದ್ರಲ್ ನಿಮ್ ಸ್ನೇಹಿತ್ರ್ ಇದಾರೆ. ನೀವ್ ಅಲ್ಲಿ ನೋಡಿದ್ರೆ, ಆ ಸ್ನೇಹಿತ್ರ್ ಮುಖ ಮಾತ್ರ ಎಲ್ರಿಗಿಂತ್ಲೂ ಹೆಚ್ಚು ಸ್ಪಷ್ಟವಾಗ್ ಕಾಣ್ಸುತ್ತೆ, ಯಾಕಂದ್ರೆ ಈ ಕಣ್ಣು ನೆನಪಿನ್ ಮೇಲೆ ಕೆಲ್ಸ ಮಾಡುತ್ತೆ. ನಿಮಗ್ ಜಾಸ್ತಿ ನೆನಪುಗಳು ಇದ್ದಷ್ಟು ಅದು ಚೆನ್ನಾಗಿ ನೋಡತ್ತೆ. ನೆನಪುಗಳೇ ಇಲ್ಲಾಂದ್ರೆ, ಅದಿಕ್ ನೋಡೋದಿಕ್ಕೇ ಆಗಲ್ಲ.

ನೆನಪು ಅಂದ್ರೆ ಶೇಖರಿಸಿಟ್ಟಂತ ಗತಕಾಲ. ನೆನಪು ಅಂದ್ರೆ ಮಾಹಿತಿ. ನೆನಪು ಅಂದ್ರೆ ಈಗ ಇಲ್ದೇ ಇದ್ರೂ ಈಗ ಇರೋ ತರ ವರ್ತಿಸೋವಂತದು. ನೆನಪುಗಳು ವಾಸ್ತವಕ್ಕಿಂತ್ಲೂ ಹೆಚ್ಚು ನಿಜ. ಅಲ್ವಾ? ಹೌದಾ ಅಲ್ವಾ? ನೋಡಿ, ಇದನ್ ಅರ್ಥ ಮಾಡ್ಕೊಳ್ಳಿ, ನಿಮ್ ಜೀವ್ನದ್ ಎಲ್ಲಾ ಸಂಗತಿಗಳು ನೆನಪಿನಿಂದ್ಲೇ ನಡೆಸಲ್ಪಡ್ತಾ ಇದೆ. ಬರೀ ನಿಮ್ ಕಂಪ್ಯೂಟರ್ ಪೆನ್ ಡ್ರೈವ್ ಅಲ್ಲ (ನಗು) - ನಿಮ್ ಜೀವನ್ದಲ್ಲಿ ಎಲ್ಲವೂ. ನಾನು ನೆನಪು ಅಂದಾಗ, ನೀವು ಇಲ್ಲಿ ಇಟ್ಕೊಂಡಿರೋದು ಮಾತ್ರ ಅಲ್ಲ. ನಿಮ್ ಇಡೀ ಶರೀರಾನೇ ನೆನಪಿನ ಶರೀರ. ನೀವು ಒಂದ್ ಬಾಳೆಹಣ್ ತಿಂದ್ರೆ ಅದು ಗಂಡ್ಸಿನ್ ಶರೀರ ಆಗತ್ತೆ, ಅದೇ ಅವ್ರ್ ತಿಂದ್ರೆ ಅದು ಹೆಂಗ್ಸಿನ್ ಶರೀರ ಆಗತ್ತೆ. ಇದ್ ಹೀಗಾಗೋದು, ನಿಮ್ ಶರೀರ ಇಟ್ ಕೊಂಡಿರೋ ನೆನಪಿನಿಂದ. ಅಲ್ವಾ? ಈ ಶರೀರ ಮತ್ತು ಆ ಶರೀರದಲ್ಲಿರೋ ಮಾಹಿತಿ ಬೇರೆ ಬೇರೆ. ಅದೇ ಬಾಳೆಹಣ್ಣು, ಗಂಡ್ಸ್ ಆಗತ್ತೆ, ಅದೇ ಬಾಳೆಹಣ್ಣು ಹೆಂಗ್ಸ್ ಆಗತ್ತೆ. ಹೌದಾ ಅಲ್ವಾ? ಮ್?

ಸಭಿಕರು: ಹೌದು.

ಸದ್ಗುರು: ಅಥ್ವಾ ನೀವ್ ಬೇರೆ ಬೇರೆ ತರ ಬಾಳೆಹಣ್ ತಿಂತಾ ಇದೀರಾ? (ನಗು) ಅದೇ ತಿನಿಸು, ನೀವ್ ತಿಂದ್ರೆ ಒಂದ್ ತರ ಆಗುತ್ತೆ. ಒಬ್ನಲ್ಲಿ ಅದು ಕಪ್ಪು ಚರ್ಮ ಆಗ್ತಾ ಇದೆ. ಇನ್ನೊಬ್ನಲ್ಲಿ ಬಿಳಿ ಚರ್ಮ ಆಗ್ತಾ ಇದೆ. ಹೇಗೆ? ನೀವ್ ಹೊಂದಿರೋ ನೆನಪ್ನಿಂದ. ನಿಮಗ್ ನೆನಪಿದ್ಯಾ, ನಿಮ್ ಅಜ್ಜನ್ ಅಜ್ಜನ್ ಅಜ್ಜನ್ ಅಜ್ಜ ಹೇಗಿದ್ರೂಂತ? ಇಲ್ಲ, ಆದ್ರೆ ಅವ್ರ್ ಮೂಗು ನಿಮ್ ಮುಖದ್ ಮೇಲೆ ಕೂತಿದೆ. (ನಗು) ನಿಮ್ ದೇಹಕ್ ನೆನಪಿದೆ. ಅಲ್ವಾ? ನಿಮಗ್ ಅವ್ರ್ ಹೇಗಿದ್ರೂಂತ ಕಲ್ಪನೇನೇ ಇಲ್ಲ, ಆದ್ರೆ ನಿಮ್ ದೇಹ ಈವತ್ಗೂ ನೆನಪಿಟ್ಕೊಂಡಿದೆ. ಲಕ್ಷ ವರ್ಷಗಳ ಹಿಂದೆ ನಿಮ್ ಪೂರ್ವಜರು ಹೇಗಿದ್ರು ಅನ್ನೋದು ಅದಕ್ಕಿನ್ನೂ ನೆನಪಿದೆ. ಅಲ್ವಾ? ಹಾಗಿದ್ರೆ ನೀವು ’ನನ್ ಶರೀರ’ ಅಂತ ಕರೆಯೋದು ಬರೀ ಒಂದು ನೆನಪುಗಳ ಶರೀರ. ಹಾಗೂ ಕಣ್ಣುಗಳು ನೆನಪುಗಳಿಂದ ಹೇರಲ್ಪಟ್ಟಿವೆ. [Sadhguru - An eye which is loaded with memory, an eye which is corrupted with memory, cannot see anything the way it is] ನೆನಪುಗಳಿಂದ ಹೇರಲ್ಪಟ್ಟಿರೋ ಕಣ್ಣಿಗೆ, ನೆನಪುಗಳಿಂದ ಕಳಂಕಿತವಾದ ಕಣ್ಣಿಗೆ, ಏನನ್ನೂ ಕೂಡ ಅದ್ ಇದ್ದ್ ಹಾಗೆ ನೋಡಕಾಗಲ್ಲ. ಎಲ್ಲವನ್ನೂ ಅನುಕೂಲಕ್ ತಕ್ಕ ಹಾಗ್ ಮಾತ್ರ ನೋಡತ್ತೆ, ಯಾಕಂದ್ರೆ ಸಾಫ್ಟ್ ವೇರ್ ಒಳ್ಗಡೆಯಿಂದ್ ಕೆಲ್ಸ ಮಾಡ್ತಾ ಇರತ್ತೆ. ಅದ್ ಏನನ್ನೂ ಕೂಡ ನಿಮ್ಗೆ ಇದ್ದ ಹಾಗೆ ನೋಡಕ್ಕ್ ಬಿಡಲ್ಲ. ಇದನ್ನೇ ನಾವು ಸಾಂಪ್ರದಾಯಿಕವಾಗಿ ಕರೆಯೋದು ’ಕರ್ಮ’ ಅಂತ.

ಅದ್ ನಿಮ್ ಶರೀರದಲ್ಲಿದೆ. ಅದ್ ನಿಮ್ ಪ್ರಾಣಶಕ್ತಿಯಲ್ಲಿದೆ. ಅದ್ ನಿಮ್ ಶರೀರದ್ ರಾಸಾಯನಿಕ ಕ್ರಿಯೆಗಳಲ್ಲಿವೆ, ಅದ್ ನಿಮ್ ಮೆದುಳ್ನಲ್ಲಿದೆ, ಅದ್ ನಿಮ್ ಮನಸ್ನಲ್ಲಿದೆ, ಎಲ್ಲಾದ್ರಲ್ಲೂ ಇದೆ. ನೀವ್ ಹೊಂದಿರೋ ಪ್ರಾಣಶಕ್ತಿಯಲ್ಲೇ ನೆನಪುಗಳಿವೆ. ನೀವ್ ನೋಡ್ಬಹುದು, ಪ್ರತಿಯೊಬ್ಬನ ಪ್ರಾಣಶಕ್ತಿ ಇನ್ನೊಬ್ನದ್ ಗಿಂತ ಬೇರೇ ರೀತಿ ವರ್ತಿಸುತ್ತೆ. ಯಾಕಂದ್ರೆ, ಅದು ಒಂದ್ ತರದ ನೆನಪುಗಳನ್ನು ಹೊಂದಿದೆ. ನಿಮಗ್ ಇದನ್ನ ತೊಡ್ದ್ ಹಾಕ್ಬೇಕೂಂದ್ರೆ, ಅದ್ ಬಹಳ ದೀರ್ಘವಾದ್ ಪ್ರಕ್ರಿಯೆ. ನೀವ್ ಇದನ್ನ ತೊಡ್ದ್ ಹಾಕಿದ್ರೆ, ಬಿಡಿಬಿಡಿಯಾಗ್ಬಿಡುತ್ತೆ ನಿಮ್ಮ ವ್ಯಕ್ತಿತ್ವ ಮತ್ತು ನಿಮ್ ಶರೀರ. ಇನ್ನೊಂದ್ ವಿಧಾನ ಏನಂದ್ರೆ, ಅದ್ರಿಂದ ಒಂದ್ ಅಂತರವನ್ನ ಉಂಟುಮಾಡೋದು. ಅದನ್ನ ಸ್ವಲ್ಪ ದೂರ ಹಿಡ್ಕೋಳೋದು. ಅದ್ರ್ ಜೊತೆ ಆಡ್ಬೇಕೂಂದಾಗ ಆಡೋದು, ಆಫ್ ಮಾಡ್ಬೇಕೂಂದಾಗ ಆಫ್ ಮಾಡೋದು. ಇದಿಕ್ಕೆ ಒಂದ್ ಬಾಹ್ಯದ ನೋಟದ ಅಗತ್ಯವಿದೆ.

ಈಗ ನಿಮ್ ಕಿವಿಗಳು ನೆನಪುಗಳಿಂದ ಹೇರಲ್ಪಟ್ಟಿವೆ, ಕಣ್ಣುಗಳು ನೆನಪುಗಳಿಂದ ಹೇರಲ್ಪಟ್ಟಿವೆ, ನಿಮ್ ನಾಲ್ಗೆ ನೆನಪುಗಳಿಂದ ಹೇರಲ್ಪಟ್ಟಿದೆ. ಯಾಕೆ... (ನಗು) ಕರ್ನಾಟಕದಲ್ಲಿ ಹುಟ್ದವ್ರು ಉತ್ತರಭಾರತಕ್ಕೆ ಹೋದ್ರೆ ಊಟ ರುಚಿ ಅನ್ಸಲ್ಲ ಅಂದ್ರೆ ನಿಮ್ ನಾಲ್ಗೆ ನೆನಪುಗಳಿಂದ ಹೇರಲ್ಪಟ್ಟಿದೆ. ಹೌದಾ ಅಲ್ವಾ? ನೀವೀ ಕಷ್ಟಾನಾ ಅನುಭವಿಸಿಲ್ವಾ? ನೀವ್ ಉತ್ತರಕ್ ಹೋದ್ರಿ, ಅಲ್ಲವ್ರು [Sadhguru - ಆಲೂ ಬಾಜೀ, ಆಲೂ (ನಗು) ಆಲೂ ಮಟರ್, ಆಲೂ ಪಾಲಕ್, ಆಲೂ ಪರೋಟಾ, ಆಲೂ ಆಲೂ..] ಆಲೂ ಆಲೂ ಅಂತಂದ್ರು. ನಿಮ್ಗಲ್ಲಿ ಇರಕ್ಕಾಗ್ಲಿಲ್ಲ. (ನಗು) ಯಾಕಂದ್ರೆ, ನಿಮ್ ನಾಲ್ಗೆ ನೆನಪುಗಳಿಂದ ಹೇರಲ್ಪಟ್ಟಿದೆ, ಅದಿಕ್ಕೆ ಹಳೇದೇ ಬೇಕು, ಇಲ್ಲಾಂದ್ರೆ ಅದು ಸಂಕಟ ಪಡತ್ತೆ. ಹಾಗಾಗಿ, "ನೆನಪುಗಳಿಂದ ಹೇರಲ್ಪಡೋದು" ಅನ್ನೋದ್ರ ಅರ್ಥ ಏನಂದ್ರೆ, ಭೂತಕಾಲದ ಒಂದ್ ಗೂಡು ನಿಮ್ಮನ್ನ ಸೆರೆಹಿಡ್ದಿದೆ. ಅದು ನಿಮ್ಮನ್ನ ವರ್ತಮಾನಕ್ಕೆ ಬರೋದಿಕ್ಕೂ ಸಹ ಬಿಡಲ್ಲ. ಭೂತಕಾಲದ ಒಂದ್ ಗೂಡು ನಿಮ್ಮನ್ನ ಸೆರೆಹಿಡ್ದಿದೆ, ಮತ್ ನೀವ್ ಹಾಗ್ ಆಗೋದಿಕ್ಕೆ ಬಿಡ್ತೀರಾ ಯಾಕಂದ್ರೆ ಅದು ಸುರಕ್ಷಿತ ಅನ್ಸುತ್ತೆ, ಒಂದ್ ಗೂಡನ್ನ ನಿರ್ಮಿಸುತ್ತೆ. ಅದ್ರಲ್ಲಿ safety ಇದೆ, ಆದ್ರೆ safety ಯಲ್ಲಿ ಸೆರೇನೂ ಇದೆ. ನೀವು ನಿಜ್ವಾಗ್ಲೂ ಸುರಕ್ಷಿತರು, ನಿಮ್ಮನ್ನ ಒಂದ್ ತಿಜೋರಿನಲ್ಲಿ ಕೂಡ್ ಹಾಕಿದ್ರೆ! ಅಲ್ವಾ? ಆದ್ರೆ ತೊಂದ್ರೆ ಏನೂಂದ್ರೆ ನಿಮಗ್ ಹೊರಗ್ ಬರಕಾಗಲ್ಲ. ಅದೇ ತೊಂದ್ರೆ.

ನೀವೇ ಕಟ್ಟಿದ ಗೋಡೆಗಳು, ಆತ್ಮರಕ್ಷಣೆಗೇಂತ, ಅವು ಆತ್ಮಬಂಧನದ ಗೋಡೆಗಳೂ ಆಗುತ್ತೆ. ಇದು ಜೀವನದ್ ರೀತಿ. ಬೀಗ ಒಳ್ಗಡೆಯಿಂದ ಹಾಕ್ತೀರೋ ಹೊರ್ಗಡೆಯಿಂದ ಹಾಕ್ತೀರೋ, ಎರಡೂ ಒಂದೇ. ನೀವು ಬಾಗ್ಲು ತೆರೀದೇ ಇದ್ರೆ, ಯಾರೋ ಹೊರಗ್ನಿಂದ ನಿಮ್ಮನ್ ಕೂಡ್ ಹಾಕಿದಾರೋ, ಅಥ್ವಾ ನೀವೇ ಒಳ್ಗಡೆಯಿಂದ ಬೀಗಹಾಕಿದೀರೋ, ವ್ಯತ್ಯಾಸ ಇಲ್ಲ, ನೀವ್ ಹೇಗಿದ್ರೂ ಬಂಧಿಸಲ್ಪಟ್ಟಿದೀರಾ, ಅಲ್ವಾ? ಯಾರೋ ಹೊರಗ್ನಿಂದ ಬೀಗ ಹಾಕಿದ್ರೆ, ಕನಿಷ್ಟ ಪಕ್ಷ ನೀವು ದೂರ್ಬಹುದು, ಕಿರಿಚಾಡ್ಬಹುದು. ನೀವ್ ಒಳ್ಗಡೆನಿಂದ ಬೀಗ ಹಾಕ್ಕೊಂಡಿದೀರ, ನೀವ್ ಬರೀ ಕೊರಗ್ಬಹುದು ಅಷ್ಟೆ. ಕಿರಿಚಾಡಕ್ಕೂ ಆಗಲ್ಲ. ಯಾರ್ ಮೇಲೆ ಕಿರಿಚಾಡ್ತೀರಾ? (ನಗು) ಹಾಗಾಗಿ ನಾವು ಈಗ ವಿಶ್ಲೇಷಿಸ್ತಾ ಇರೋ ವಿಷ್ಯ ಏನಂದ್ರೆ, ನೆನಪುಗಳು ಎಲ್ಲಾ ಹಂತಗಳಲ್ಲಿ ತಮ್ಮ ಅಚ್ಚೊತ್ತುತ್ತವೆ. ಪಂಚಭೂತಗಳವರೆಗೂನೂ.

ಇಲ್ಲಿ ಕಾರ್ಯನಿರ್ವಹಿಸ್ತಾ ಇರೋ ಪಂಚಭೂತಗಳು ಏನಿವೆ, ಅಲ್ಲಿಂದ ಸ್ವಲ್ಪ ಆಮೇಲ್ನಿಂದ ನೆನಪಿನ ಕೆಲ್ಸ ಶುರು ಆಗತ್ತೆ. ಹಾಗಾಗಿ ನಾವು ಕರ್ಮ ಅಂದಾಗ, ಅದೇನೂ ಒಂದ್ ಸರಳವಾದ ಫಾರ್ಮುಲಾ ಅಲ್ಲ. ಅಥ್ವಾ ಜನ್ರು ಕರ್ಮ ಸಿದ್ಧಾಂತ ಅಂತ ಹೇಳ್ತಾರೆ. ನಾವ್ ಯಾವ್ದೇ ಸಿದ್ಧಾಂತದ್ ಬಗ್ಗೆ ಮಾತಾಡ್ತಿಲ್ಲ. ನಾವು ವಾಸ್ತವದ್ ಬಗ್ಗೆ ಮಾತಾಡ್ತಾ ಇದೀವಿ. ಕರ್ಮ ಅಂದ್ರೆ ನೆನಪುಗಳು. ಕಾರ್ಯ ಮತ್ತು ನೆನಪುಗಳು. ಹಿಂದಿನ್ ಕಾರ್ಯಗಳು ಅಸ್ತಿತ್ವದಲ್ಲಿರೋದು ನೆನಪಿನ್ ರೂಪದಲ್ಲಿ ಮಾತ್ರ, ಅಲ್ವಾ? ಅಲ್ವಾ? ನೆನಪೂಂದ್ರೆ ನೀವು ಇಲ್ಲಿ ಇಟ್ಕೊಂಡಿರೋದು ಮಾತ್ರ ಅಲ್ಲ, ದೇಹದ ಪ್ರತಿಯೊಂದು ಕಣವೂ ಅದ್ರದ್ದೇ ನೆನಪುಗಳನ್ನ ಹೊಂದಿದೆ. ಯಾಕೆ ಒಂದ್ ಪರಮಾಣು ಇನ್ನೊಂದಿಕ್ಕಿಂತ ಬೇರೆ ತರ ವರ್ತಿಸುತ್ತೆ, ಮೂಲವಸ್ತು ಒಂದೇ ಆಗಿದ್ರೂನೂ, ಅಂದ್ರೆ ಅದ್ರಲ್ಲಿ ನೆನಪುಗಳಿವೆ. ಹೈಡ್ರೋಜನ್ ಪರಮಾಣುಗೆ ಒಂದ್ ತರ ನೆನಪುಗಳಿವೆ. ಆಕ್ಸಿಜನ್ ಪರಮಾಣುಗೆ ಇನ್ನೊಂದ್ ತರ ನೆನಪುಗಳಿವೆ. ಅವನ್ನ ನೀವು ಮಿಕ್ಸ್ ಮಾಡ್ದೇ ಇದ್ರೆ, ಅವು ಅದೇ ತರ ವರ್ತಿಸುತ್ವೆ. ಅದು ಒಂದ್ ಸಣ್ ವೃತ್ತದಲ್ಲಿದೆ. ನೀವು ಸ್ವಲ್ಪ ದೊಡ್ ವೃತ್ತದಲ್ಲೀದೀರ. ಬ್ರಹ್ಮಾಂಡವು ಬಹಳ ದೊಡ್ ವೃತ್ತದಲ್ಲಿದೆ. [Sadhguru - But the same memory rules all of it] ಆದ್ರೆ ಎಲ್ಲವನ್ನೂ ನೆನಪುಗಳೇ ಆಳ್ತಾ ಇದೆ.

ಹಾಗಾಗಿ ನಾವು ಕರ್ಮ ಅಂದಾಗ, ನಾವು ಯಾವ್ದೋ ಒಂದ್ ಪರಿಕಲ್ಪನೆ ಅಥ್ವಾ ಸಿದ್ಧಾಂತದ್ ಬಗ್ಗೆ ಮಾತಾಡ್ತಿಲ್ಲ. ನಾವು ನಿಮ್ ರೂಪದಲ್ಲಿ ಅಭಿವ್ಯಕ್ತವಾಗ್ತಿರೋ ಆ ವಾಸ್ತವಿಕತೆಯ ಬಗ್ಗೆ ಮಾತಾಡ್ತಿದೀವಿ. ನಿಮ್ ಶರೀರದ್ ಆಕಾರಾನೇ ನೆನಪುಗಳಿಂದಾಗಿರೋದು. ಒಂದ್ ಪಕ್ಷಿ ಮಾವಿನ್ ಹಣ್ಣು ತಿಂದ್ರೆ, ಅದು ಪಕ್ಷಿಯಾಗುತ್ತೆ. ಒಂದ್ ಹುಳ ಮಾವಿನ್ ಹಣ್ಣು ತಿಂದ್ರೆ, ಅದು ಹುಳವಾಗುತ್ತೆ. ನೀವ್ ಮಾವಿನ್ ಹಣ್ಣು ತಿಂದ್ರೆ, ಅದು ಮನುಷ್ಯನಾಗುತ್ತೆ. ಅದೇ ಮಾವಿನ್ ಹಣ್ಣು, ಏನೆಲ್ಲಾ ಆಗ್ತಾ ಇದೆ, ದೇಹಗಳು ಹೊಂದಿರೋ ನೆನಪುಗಳನ್ ಅವಲಂಬ್ಸ್ ಕೊಂಡು. ಅಲ್ವಾ? ಈಗ ಒಂದ್ ಬೀಜವನ್ನ ತಗೊಳಿ. ನೀವು ಬೇರೆ ಬೇರೆ ಬೀಜಗಳನ್ನ ಅದೇ ಮಣ್ಣಿನಲ್ಲಿ ಹಾಕಿದ್ರೆ ಇಲ್ಲಿ ಮಾವಿನ್ ಮರವನ್ನ ನೆಟ್ರೆ, ಇಲ್ಲಿ ಆಪಲ್ ಮರವನ್ನ ನೆಟ್ರೆ, ಮಣ್ಣು ಅದೇ ಇದು ಆಪಲನ್ನೇ ಹುಟ್ಸುತ್ತೆ, ಇದು ಮಾವಿನ್ ಹಣ್ಣನ್ನೇ ಹುಟ್ಸುತ್ತೆ. ನನಗ್ಗೊತ್ತು ಇತ್ತೀಚೆಗೆ ಒಂದ್ ಪೇಪರ್ನಲ್ಲಿ ಫೋಟೋ ಬಂದಿತ್ತು... ಹಲಸಿನ ಹಣ್ಣು ಬಾಳೆ ಹಣ್ಣಾಗ್ ಬಿಟ್ಟಿತ್ತು. ಅದು ಬಿಡಿ. ನೋಡಿದ್ರಾ ನೀವು ಅದನ್ನ? ನೀವೇನು ಬೆಂಗ್ಳೂರ್ ನವ್ರಾ ಅಥ್ವಾ ದೇವನಹಳ್ಳೀನವ್ರಾ? (ನಗು) ಇಲ್ವಾ? ನೋಡ್ಲಿಲ್ವಾ ನೀವದನ್ನ? ಒಂದ್ ಬಾಳೇಹಣ್ಣಿನ ಗೊನೆ ಏನೋ ಕಾರಣದಿಂದ ಹಲಸಿನಹಣ್ಣಿನಿಂದ ಹೊರಗ್ ಬರ್ತಾ ಇದೆ (ನಗು). ಅದು ಅಸಹಜ. ಅದಾಗಿರೋದು ಏನೋ ಗೊಂದಲದಿಂದ. ಆ ಗೊಂದಲವನ್ನ ಯಾರ್ ಮಾಡಿದ್ರು ಅಂತ ಗೊತ್ತಿಲ್ಲ (ನಗು). ಆದ್ರೆ ಅದೇ ಮಣ್ಣಿನಲ್ಲಿ ನೀವು ಆಪಲ್ ಬೀಜ ಮತ್ತು ಮಾವಿನ ಗೊರಟೆಯನ್ನ ಹಾಕಿದ್ರೆ, ಇದು ಆಪಲನ್ನೇ ಕೊಡುತ್ತೆ, ಇದು ಮಾವಿನ್ ಹಣ್ಣನ್ನೇ ಕೊಡುತ್ತೆ. ಯಾಕಂದ್ರೆ ಬೀಜ ಅನ್ನೋದು ಒಂದ್ ಪ್ರಮಾಣದ ನೆನಪು. ಅಲ್ವಾ? ಅದು ಒಂದ್ ಗಿಡದ್ ಬೀಜ ಆಗಿರ್ಬಹುದು, ಅಥ್ವಾ ನಿಮ್ ತಾಯಿಯ ಗರ್ಭವನ್ನ ಹೊಕ್ಕಿದಂತಹ ನಿಮ್ ತಂದೆಯವ್ರ ಜೀವಾಣು ಆಗಿರ್ಬಹುದು, ಎಲ್ಲವೂ ಬರೀ ನೆನಪು ನೆನಪು ನೆನಪು. ಅಲ್ವಾ? ಇದು ಕರ್ಮ, ಮತ್ತದು ಬಹಳ ಹಿಂದೆ ಹೋಗುತ್ತೆ. ಪಂಚಭೂತಗಳವರೆಗೆ, ಎಲ್ಲವೂ ನೆನಪುಗಳು. ಬರೀ ಶುದ್ಧವಾದ ಪಂಚಭೂತಗಳು ಮಾತ್ರ ನೆನಪುಗಳಿಂದ ಮುಕ್ತವಾಗಿವೆ.

ಹಾಗಾಗಿ ನಾವು ಪ್ರಾರಂಭದಲ್ಲೇ ಹೇಳ್ತೀವಿ "ಭೂತೇಶ" ಅಂತ. ಯಾಕಂದ್ರೆ ಅದೇ ಎಲ್ಲಕ್ಕಿಂತ್ಲೂ ಪ್ರಮುಖವಾದ ಅಂಶ ಅವ್ನು ಪಂಚಭೂತಗಳ ಮೇಲೆ ಪ್ರಭುತ್ವವನ್ನ ಸಾಧಿಸ್ದ ಅಂತ. ನಾವದಿಕ್ಕೇ ಅವ್ನಿಗೆ ತಲೆಬಾಗೋದು. ಅವ್ನು ಪಂಚಭೂತಗಳ ಮೇಲೆ ಪ್ರಭುತ್ವವನ್ನ ಸಾಧಿಸಿದ್ದರಿಂದ್ಲೇ ಅವ್ನಿಗೆ ಒಂದ್ ಕಣ್ಣಿದೆ ನೆನಪೇ ಇಲ್ಲದಂತದ್ದು. ಕಳಂಕರಹಿತವಾದಂತ ಕಣ್ಣು. ಅದು ಎಲ್ಲವನ್ನೂ ಅದ್ ಇದ್ ಹಾಗೇನೇ ನೋಡತ್ತೆ. ಹಾಗಾಗಿ ಯೋಗ ಮೂಲಭೂತವಾಗಿ ಏನಂದ್ರೆ, ನೆನಪಿನಿಂದ ಕಳಂಕಿತವಾಗ್ದೇ ಇರೋ ಕಣ್ಣನ್ನ ಪಡೆಯೋದು. ಅದು ಬರೀ ನೋಡುತ್ತೆ ಅಷ್ಟೆ. ಅದು ನೋಡೋದು ನಿಮ್ ನೆನಪು ತಿರುಚಿರೋ ವಿಷ್ಯಗಳನ್ನಲ್ಲ. ಅದು ಎಲ್ಲವನ್ನೂ ಅದ್ ಇದ್ ಹಾಗೇನೇ ನೋಡತ್ತೆ ಅಷ್ಟೆ. ಈ ಕಣ್ಣು ಬೆಳಕನ್ನು ತಡೀದೇ ಇರೋವಂತ ಸಂಗತಿಗಳನ್ನೂ ನೋಡುತ್ತೆ. ಈಗ ಈ ಕಣ್ಣುಗಳಿಗೆ ಬೆಳಕನ್ನು ತಡೀತಿರೋವಂತವನ್ನ ಮಾತ್ರ ನೋಡಕ್ಕಾಗುತ್ತೆ. ನೀವು ಬೆಳಕನ್ನ ತಡೀದೇ ಇರೋವಂತದನ್ನ ನೋಡೋದಿಕ್ಕೆ ಪ್ರಾರಂಭಿಸಿದ್ರೆ, ಅದ್ರರ್ಥ ಕಣ್ಣಿನ ಇನ್ನೊಂದು ಆಯಾಮ ಸಕ್ರಿಯವಾಗ್ತಾ ಇದೆ ಅಂತ.

 
 
  0 Comments
 
 
Login / to join the conversation1