ಪ್ರೀತಿಯ ಸದ್ಗುರು, ಸೂರ್ಯ ಕ್ರಿಯಾದ ದೀಕ್ಷೆಯನ್ನು ಪಡೆಯುವುದರ ಮಹತ್ವವೇನು ಮತ್ತು ಅದರಿಂದ ಮಾನವ ಜೀವವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳೇನು?

ನಿಮ್ಮ ಶರೀರವು ಒಂದು ಅಡ್ಡಿಯಾಗಿರದೆ ಒಂದು ಸಾಧ್ಯತೆಯಾಗುವಂತೆ ಮಾಡುವುದೇ ಯೋಗದ ಉದ್ದೇಶ. ಅದು ಸಾಧ್ಯವಾಗಬೇಕಾದರೆ, ನಿಮ್ಮ ಶರೀರದಲ್ಲಿ ನಡೆಯುವ ಕ್ರಿಯೆಗಳೆಲ್ಲವೂ ಅತ್ಯಂತ ಕಡಿಮೆ ಪ್ರತಿರೋಧದಿಂದ ನಡೆಯಬೇಕು, ಅತಿ ಕಡಿಮೆ ಘರ್ಷಣೆಯಿಂದ ನಡೆಯಬೇಕು. ನಮ್ಮ ಯಂತ್ರವಿಜ್ಞಾನದ ತಿಳುವಳಿಕೆಯ ದೃಷ್ಟಿಯಿಂದ ನೋಡಿದಾಗಲೂ, ಕನಿಷ್ಠ ಘರ್ಷಣೆಯಿಂದ ನಡೆಯುವ ಯಂತ್ರವನ್ನೇ ನಾವು ನಿಜವಾಗಿಯೂ ಒಳ್ಳೆಯ ಯಂತ್ರ ಎಂದು ಪರಿಗಣಿಸುವುದು. ಘರ್ಷಣೆ ಹೆಚ್ಚಿದಷ್ಟೂ ಅದು ಅಸಮರ್ಥ ಯಂತ್ರವಾಗುತ್ತದೆ. ಅದರಲ್ಲಿ ಘರ್ಷಣೆಯಿಲ್ಲದಿದ್ದರೆ, ಅದೊಂದು ಅತ್ಯುತ್ತಮವಾದ ಯಂತ್ರ ಎಂದರ್ಥ. ನೀವು ಘರ್ಷಣೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದರೆ, ಯಂತ್ರದ ಸವೆತ ಅತ್ಯಂತ ಕಡಿಮೆಯಾಗುತ್ತದೆ. ಅದೇ ರೀತಿ, ಈ ಶರೀರದ ಸವೆತ ಗಣನೀಯವಾಗಿ ಕಡಿಮೆಯಾಗಬೇಕಾದರೆ, ನಾವು ಗಮನ ನೀಡಬೇಕಾದ ಮೊದಲ ವಿಷಯವೆಂದರೆ, ನಾವು ಯಾರಾಗಿದ್ದೇವೋ ಅದರ ವಿವಿಧ ಆಯಾಮಗಳ ನಡುವೆ ಘರ್ಷಣೆಯಿಲ್ಲದಂತೆ ಮಾಡವುದಾಗಿದೆ.

ಹುಟ್ಟಿನಿಂದ ಬಂದ ಯಾವುದೇ ರೀತಿಯ ನ್ಯೂನತೆಗಳಾಗಲಿ, ಜೀವನ ಪ್ರಕ್ರಿಯೆಯಲ್ಲಿ ನೀವು ಪಡೆದುಕೊಂಡ ಯಾವುದೇ ರೀತಿಯ ನ್ಯೂನತೆಗಳಾಗಲಿ, ಎಲ್ಲವೂ ನಯಗೊಳಿಸಲ್ಪಡುತ್ತದೆ. ಈ ಸ್ಥಿತಿಯನ್ನು ತರಲು, ಅನೇಕ ವಿಧಾನಗಳಿವೆ. ಸೂರ್ಯ ಕ್ರಿಯಾ ಆ ನಿಟ್ಟಿನಲ್ಲಿ ಒಂದು ಶಕ್ತಿಯುತವಾದ ಪ್ರಕ್ರಿಯೆಯಾಗಿದೆ.

ನಿಮಗೆ ಒಂದು ದೈಹಿಕ ಆಯಾಮವಿದೆ, ಮತ್ತದು ಶೇಖರಣೆಯಾದಂತಹ ಒಂದು ಆಯಾಮವಾಗಿದೆ. ನಿಮಗೊಂದು ಮಾನಸಿಕ ಆಯಾಮವಿದ್ದು, ಅದೂ ಸಹ ಬಹುತೇಕ ಶೇಖರಣೆಗೊಂಡಂತಹ ಆಯಾಮವಾಗಿದೆ. ದೈಹಿಕ ಆಯಾಮವು ಈ ಜನ್ಮದಲ್ಲಿ ಸಂಗ್ರಹಿಸಿಕೊಂಡದ್ದಾಗಿದೆ. ನಿಮ್ಮ ಮಾನಸಿಕ ಆಯಾಮವು ಹಲವಾರು ಜನ್ಮಗಳಿಂದ ನೀವು ಗಳಿಸಿದ ಅಥವಾ ಸಂಗ್ರಹಿಸಿದಂತಹ ಆಯಾಮವಾಗಿದೆ. ಮತ್ತು ನಮ್ಮಲ್ಲಿ ಕರ್ಮದ ಒಂದು ಆಯಾಮವಿದ್ದು, ಅದು ಬಹಳಷ್ಟು ದೊಡ್ಡದಾದ ಶೇಕರಣೆಯಾಗಿದೆ ಮತ್ತು ಹೆಚ್ಚು ಸಂಕೀರ್ಣವಾದುದ್ದಾಗಿದೆ. ಮತ್ತು ನಮ್ಮೊಳಗೆ ಶಕ್ತಿಯ ಆಯಾವೊಂದಿದ್ದು ಅದು ಒಳಗಿನಿಂದ ಬೆಳೆದು ಬಂದಿರುತ್ತದೆ, ಮತ್ತದು ನಮ್ಮೊಳಗೆ ನಡೆಯುವ ಜೀವನ ಪ್ರಕ್ರಿಯೆಯಿಂದ ನಮಗೆ ನೀಡಲ್ಪಟ್ಟಿರುವುದಾಗಿದೆ. ಮತ್ತು ಪರಿಶುದ್ಧವಾಗಿ ಬ್ರಹ್ಮಾಂಡದ ಸ್ವಭಾವದ್ದಾದ ಕೆಲವು ಆಯಾಮಗಳಿದ್ದು, ಅವು ಅಭೌತಿಕವಾದುದ್ದಾಗಿವೆ.

ಈ ಎಲ್ಲಾ ಅಂಶಗಳ ಸಂಯೋಜನೆಯಾದ ಈ ಜೀವ ಅಥವಾ ಈ ಮಾನವ ಯಂತ್ರವು ಘರ್ಷಣೆಯಲ್ಲಿಲ್ಲದಂತೆ ಮಾಡಲು ನಾವು ಹಲವಾರು ಹಂತಗಳಲ್ಲಿ ಇದನ್ನು ಸುಲಲಿತಗೊಳಿಸಬೇಕು. ಒಂದು ವಿಷಯವೆಂದರೆ, ಮೂಲಭೂತವಾದ ಘರ್ಷಣೆ - ಜನ ಇಂದು ಎಲ್ಲೆಡೆ ಅನುಭವಿಸುತ್ತಿರುವ ಅತ್ಯಂತ ಪ್ರಾಥಮಿಕ ಹಂತದ ತಿಕ್ಕಾಟ. ಅವರು ಒತ್ತಡದ ಬಗ್ಗೆ ಮಾತನಾಡುತ್ತಿದ್ದಾರೆ. ಒತ್ತಡ ಎನ್ನುವುದು ಅತ್ಯಂತ ಪ್ರಾಥಮಿಕ ವಿಷಯ. ನೀವೊಂದು ಇಂಜಿನ್ ಅನ್ನು ಕೀಲೆಣ್ಣೆ ಹಾಕದೇ ಓಡಿಸಲು ಪ್ರಯತ್ನಿಸಿ, “ನನ್ನ ಕಾರು ಸರಿಯಾಗಿ ಕೆಲಸ ಮಾಡುತ್ತಿಲ್ಲ” ಎಂದ ಹಾಗಾಯ್ತು. ನೀವೊಬ್ಬ ಮೆಕಾನಿಕ್ ಬಳಿ ಹೋಗಿ “ನನ್ನ ಕಾರಿನಲ್ಲೇನೋ ಸಮಸ್ಯೆಯಿದೆ’ ಎಂದು ಹೇಳಿದರೆ, ಅವನದನ್ನು ಪರಿಶೀಲಿಸಿ, ನೀವದನ್ನು ಕೀಲೆಣ್ಣೆ ಹಾಕದೇ ಓಡಿಸುತ್ತಿದ್ದೀರ ಎಂಬ ವಿಷಯವನ್ನು ಗಮನಿಸಿದಾಗ “ಅಯ್ಯೋ ಮೂರ್ಖ! ನೀನು ಚಾಲಕನಾಗಲು ಯೋಗ್ಯನಲ್ಲ” ಎಂದು ಹೇಳಿಬಿಡುತ್ತಾನೆ.

ಇದೂ ಹಾಗೆಯೇ. ‘ನಾನು ಒತ್ತಡದಲ್ಲಿದ್ದೇನೆ’ ಎಂದರೆ ನಿಮ್ಮ ಮನಸ್ಸು ಒಂದು ತಿಕ್ಕಾಟದ ಸ್ಥಿತಿಯಲ್ಲಿದೆ, ನಿಮ್ಮೊಳಗೆ ಮಾನಸಿಕ ತಿಕ್ಕಾಟ ನಡೆಯುತ್ತಿದೆ ಎಂದರ್ಥ. ಇದು ಅತ್ಯಂತ ಮೂಲಭೂತ ಹಂತದ ಘರ್ಷಣೆಯಾಗಿದೆ, ಆದರೆ ನಮ್ಮೊಳಗೆ ಇನ್ನೂ ಹಲವಾರು ಸಂಕೀರ್ಣ ಹಂತಗಳ ಅಥವಾ ಆಳವಾದ ಆಯಾಮಗಳ ಘರ್ಷಣೆಗಳಿವೆ. ನಿಮ್ಮ ಕರ್ಮ ಶರೀರ ಮತ್ತು ನಿಮ್ಮ ಭೌತಿಕ ಶರೀರ ಎರಡೂ ಹೊಂದಿಕೊಳ್ಳದಿದ್ದರೆ, ನಿಮ್ಮಲ್ಲಿ ಒಂದು ವಿಭಿನ್ನ ರೀತಿಯ ಘರ್ಷಣೆ ಸೃಷ್ಟಿಯಾಗುತ್ತದೆ. ಇದಕ್ಕೆ ಕಾರಣವೇನು? ಅದು ಹೀಗಾಗಬಹುದು – ನಿಮಗೆ ಒಂದು ನಿರ್ದಿಷ್ಟ ರೀತಿಯ ಕರ್ಮ ಶರೀರವಿರುತ್ತದೆ, ಆದರೆ ನಿಮಗೆ ಸೂಕ್ತವಾಧ ಗರ್ಭ ಸಿಕ್ಕಿರುವುದಿಲ್ಲ – ಆಗ ನಿಮ್ಮ ಕರ್ಮ ಶರೀರವು ನಿಮ್ಮ ಭೌತಿಕ ಶರೀರದೊಂದಿಗೆ ತಿಕ್ಕಾಟದಲ್ಲಿರುತ್ತದೆ. ಅದನ್ನು ನಿಭಾಯಿಸುವುದು ಸಣ್ಣ ವಿಷಯವೇನಲ್ಲ. ಅದಕ್ಕೆ ಸಾಕಷ್ಟು ಶ್ರಮಪಡಬೇಕಾಗುತ್ತದೆ. ಅದೊಂದು ಸಂಕೀರ್ಣ ರೀತಿಯಾದಂತಹ ಘರ್ಷಣೆಯಾಗಿದೆ.

ಇಲ್ಲದಿದ್ದರೆ, ನಿಮ್ಮ ಚೈತನ್ಯ ಶರೀರ ನಿಮ್ಮ ಭೌತಿಕ ಶರೀರಕ್ಕೆ ಹೊಂದಿಕೊಳ್ಳದೇ ಇರಬಹುದು. ಕೆಲವು ನಿರ್ದಿಷ್ಟ ರೀತಿಯ ಜನ ಆ ಸಂಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಇದು ಸ್ವಲ್ಪಮಟ್ಟಿಗೆ ಅವರ ಸಂಸ್ಕೃತಿಗೆ ಸಂಬಂಧಿಸಿರಬಹುದು. ಮತ್ತು ವಾತಾವರಣ, ಅಂದರೆ ಪರಿಸರಮಾಲಿನ್ಯಕ್ಕೆ ಸಂಬಂಧಿಸಿರಬಹುದು, ಅಥವಾ ನೀವು ಜೀವಿಸುವ ನೆಲದೊಂದಿಗೆ, ಅಂದರೆ ಆ ನೆಲ ಹೊಂದಿರುವ ನೆನಪಿಗೆ ಸಂಬಂಧಿಸಿದ್ದಾಗಿರಬಹುದು. ಅದಕ್ಕೆ ಇನ್ನೂ ಹಲವಾರು ಆಯಾಮಗಳಿವೆ.

ಇನ್ನೂ ಇತರ ರೀತಿಯ ತಿಕ್ಕಾಟಗಳಿರಬಹುದು - ನಿಮ್ಮ ಮಾನಸಿಕ ರಚನೆ ಮತ್ತು ನಿಮ್ಮ ದೈಹಿಕ ರಚನೆಗಳ ನಡುವೆ ಹೊಂದಾಣಿಕೆ ಇಲ್ಲದಿರಬಹುದು. ಹೀಗೆ, ನಿಮ್ಮ ಪ್ರತಿಯೊಂದು ಭಾಗ, ಪ್ರತಿಯೊಂದು ಆಯಾಮವು ಸುಲಲಿತವಾಗಿ ನಡೆಯಬಹುದು ಅಥವಾ ಅಪಾರವಾದ ತಿಕ್ಕಾಟದೊಂದಿಗೆ ನಡೆಯಬಹುದು. ಹಠಯೋಗದ ಉದ್ದೇಶ, ಕೇವಲ ಭೌತಿಕ ಶರೀರವನ್ನಷ್ಟೇ ಅಲ್ಲದೆ, ಇಡೀ ಜೀವ ವ್ಯವಸ್ಥೆಯನ್ನು ಎಲ್ಲ ರೀತಿಯ ಘರ್ಷಣೆಗಳನ್ನು ಮೀರಿ ಮೃದುವಾಗುವಂತೆ ತೀಡುವುದಾಗಿದೆ. ಮತ್ತು ಸ್ವಲ್ಪ ಕಾಲದ ನಂತರ ನೀವಿಲ್ಲಿ ಕುಳಿತುಕೊಂಡರೆ, ನಿಮ್ಮೊಳಗೆ ಯಾವ ಘರ್ಷಣೆಯ ಅನುಭವವೂ ಇಲ್ಲವಾಗಬೇಕು. ನಿಮಗೆ ನಿಭಾಯಿಸಲಿಕ್ಕೆ ಹೊರಗಿನ ವ್ಯವಹಾರವಷ್ಟೆ ಇರುತ್ತದೆ, ಮತ್ತಿನ್ನೇನೂ ಇರುವುದಿಲ್ಲ. ಅದು ಹಾಗಾದಾಗ ಮಾತ್ರ, ನೀವು ಹೊರಗಿನ ವ್ಯವಹಾರವನ್ನು ಅದ್ಭುತವಾದ ಸಾಮರ್ಥ್ಯ ಮತ್ತು ನಿರಾಯಾಸದಿಂದ ನಿಭಾಯಿಸಬಹುದು.

ಹಾಗಾಗಿ, ನಿರ್ದಿಷ್ಟ ಅಭ್ಯಾಸದ ಮೂಲಕ ನೀವು ಸೃಷ್ಟಿಸಿದ ಹೊಸ ಸಾಧ್ಯತೆಗಳು ಬಹಳ ಕಾಲ ಸುಪ್ತವಾಗಿ ಉಳಿಯುವುದನ್ನು ತಡೆಯಲು ದೀಕ್ಷೆಯನ್ನು ನೀಡಲಾಗುತ್ತದೆ

ಸೂರ್ಯ ಕ್ರಿಯಾ ಆ ದಿಸೆಯಲ್ಲಿ ಒಂದು ಅದ್ಭುತವಾದ ಪ್ರಕ್ರಿಯೆಯಾಗಿದ್ದು, ಅದು ಶರೀರದಲ್ಲಿ ಮೃದುತ್ವವನ್ನು ತರುತ್ತದೆ. ಜೀವವ್ಯವಸ್ಥೆಯ ಈ ಮೃದುತ್ವವು ಅಥವಾ ನಿಮ್ಮೊಳಗಿನ ಸ್ನಿಗ್ಧತೆಯ ಅನುಭವವು ಬೃಹತ್ ಜೀವವ್ಯವಸ್ಥೆಯಾದ ಸೌರವ್ಯೂಹದೊಂದಿಗೆ ನೀವು ಹೊಂದಾಣಿಕೆಯಲ್ಲಿಲ್ಲದಿದ್ದರೆ ಸಾಧ್ಯವಾಗುವುದಿಲ್ಲ. ನಿಮ್ಮ ಜೀವ ವ್ಯವಸ್ಥೆಯ ದೊಡ್ಡದಾದ ಪ್ರತಿರೂಪವೇ ಸೌರವ್ಯೂಹವಾಗಿದೆ.

ಸೂರ್ಯ ಕ್ರಿಯಾ ನೀವು ಯಾರಾಗಿದ್ದೀರೋ ಅದರ ಆವರ್ತಗಳನ್ನು ಸುದೀರ್ಘಗೊಳಿಸುತ್ತದೆ; ನಿಮ್ಮ ಶಕ್ತಿವ್ಯವಸ್ಥೆಯ ಆವರ್ತಗಳನ್ನು ಸೂರ್ಯನ ಆವರ್ತಗಳಿಗೆ ಸಮವಾಗುವಂತೆ ಹೆಚ್ಚಿಸಬೇಕು. ಅದು ಹನ್ನೆರಡು ವರ್ಷ, ಮೂರು ತಿಂಗಳು ಮತ್ತು ಕೆಲವು ದಿನಗಳು ತೆಗೆದುಕೊಳ್ಳುವ ಆವರ್ತವಾಗಿದೆ. ನಿಮ್ಮ ಜೀವವ್ಯವಸ್ಥೆ, ನಿಮ್ಮ ಶಕ್ತಿವ್ಯವಸ್ಥೆ ಕರಾರುವಕ್ಕಾಗಿ ಅದೇ ಆವರ್ತವನ್ನು ಪಡೆಯಬೇಕು. ನೀವು ಅದೇ ಸಮಯವನ್ನು ತೆಗೆದುಕೊಂಡರೆ, ನಿಮ್ಮ ಆವರ್ತಗಳು ಸೂರ್ಯನ ಆವರ್ತಕ್ಕೆ ಹೊಂದಿಕೊಂಡರೆ, ಆಗ ನಿಮ್ಮ ಜೀವವ್ಯವಸ್ಥೆಯು ಯಾವುದೇ ರೀತಿಯ ತಿಕ್ಕಾಟವಿಲ್ಲದೇ ಕೆಲಸ ಮಾಡುವುದನ್ನು ನೀವು ನೋಡುತ್ತೀರಿ. ಹುಟ್ಟಿನಿಂದ ಬಂದ ಯಾವುದೇ ರೀತಿಯ ನ್ಯೂನತೆಗಳಾಗಲಿ, ಜೀವನ ಪ್ರಕ್ರಿಯೆಯಲ್ಲಿ ನೀವು ಪಡೆದುಕೊಂಡ ಯಾವುದೇ ರೀತಿಯ ನ್ಯೂನತೆಗಳಾಗಲಿ, ಎಲ್ಲವೂ ನಯಗೊಳಿಸಲ್ಪಡುತ್ತದೆ. ಈ ಸ್ಥಿತಿಯನ್ನು ತರಲು, ಅನೇಕ ವಿಧಾನಗಳಿವೆ. ಸೂರ್ಯ ಕ್ರಿಯಾ ಆ ನಿಟ್ಟಿನಲ್ಲಿ ಒಂದು ಶಕ್ತಿಯುತವಾದ ಪ್ರಕ್ರಿಯೆಯಾಗಿದೆ.

ನೀವು ದೀಕ್ಷೆಯನ್ನು ಪಡೆಯುವ ಮೊದಲು, ಆವರ್ತದ ಒಂದು ನಿರ್ದಿಷ್ಟ ಭಾಗ ನಿಮ್ಮೊಳಗೆ ವ್ಯಕ್ತವಾಗುವಂತೆ ಮಾಡುವುದು ನಮ್ಮ ಉದ್ದೇಶ. ಸೂರ್ಯ ಕ್ರಿಯಾದ ದೀಕ್ಷೆ ಬಹಳ ಸರಳವಾಗಿರುತ್ತದೆ; ಏಕೆಂದರೆ ನೀವು ನಿಮ್ಮ ಶರೀರದಲ್ಲಿ ಒಂದು ನಿರ್ದಿಷ್ಟ ಹಂತದ ಜ್ಯಾಮಿತಿಯನ್ನು ಸಾಧಿಸಿದ್ದರೆ, ಅದಕ್ಕೆ ಬೇಕಾಗುವುದು ನೀವು ಸೃಷ್ಟಿಸಿಕೊಂಡಂತಹ ಹೊಸ ಜ್ಯಾಮಿತಿಯಷ್ಟೆ. ಶರೀರದಲ್ಲಿರುವ ನೂರ ಹದಿನಾಲ್ಕು ಚಕ್ರಗಳಲ್ಲಿ, ನೀವು ಕೇವಲ ಇಪ್ಪತ್ತೊಂದು ಸಕ್ರಿಯ ಚಕ್ರಗಳನ್ನು ಹೊಂದಿದ್ದರೆ, ನೀವೊಂದು ಸಂಪೂರ್ಣವಾದ ಜೀವನವನ್ನು ನಡೆಸಬಹುದು. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ನೀವು ಒಂದು ಪರಿಪೂರ್ಣ ಜೀವನವನ್ನು ಸಾಗಿಸಬಹುದು. ಹೊಸದಾಗಿ ತೆರೆದುಕೊಂಡಂತಹ ಜೀವವ್ಯವಸ್ಥೆಯೊಳಗೆ ಶಕ್ತಿಯನ್ನು ತುಂಬುವುದೇ ದೀಕ್ಷೆಯ ಉದ್ದೇಶವಾಗಿದೆ. ನೀವು ಇಪ್ಪತ್ತೊಂದು ಚಕ್ರಗಳನ್ನು ಪೂರ್ತಿಯಾಗಿ ಸಕ್ರಿಯಗೊಳಿಸಿದರೆ, ನೀವು ಸಂಪೂರ್ಣ ಜೀವನವನ್ನು ನಡೆಸಬಹುದು. ಬಹುತೇಕ ಜನರಲ್ಲಿ ಅಷ್ಟು ಚಕ್ರಗಳೂ ಸಹ ಸಕ್ರಿಯವಾಗಿರುವುದಿಲ್ಲ. ಇಪ್ಪತ್ತೊಂದು ಚಕ್ರಗಳು ಸಂಪೂರ್ಣವಾಗಿ ಹದಗೊಂಡಿದ್ದು, ಸಕ್ರಿಯ ಹಾಗೂ ಚೈತನ್ಯಶೀಲವಾಗಿದ್ದರೆ, ಆ ಒಬ್ಬ ವ್ಯಕ್ತಿಯು ತನ್ನೊಳಗೆ ಅತ್ಯಂತ ಚುರುಕಾದ, ಕ್ರಿಯಾಶೀಲವಾದ ಹಾಗೂ ಪರಿಪೂರ್ಣವಾದ ಜೀವನವನ್ನು ನಡೆಸುತ್ತಾನೆ.

ಆದರೆ, ಹಠಯೋಗ ಅಥವಾ ನಿರ್ದಿಷ್ಟವಾಗಿ ಸೂರ್ಯ ಕ್ರಿಯಾದ ಮೂಲಕ ನಿಮ್ಮ ಜೀವವ್ಯವಸ್ಥೆಯು ಸರಿಯಾಗಿ ಅನುವುಗೊಂಡು ಹೆಚ್ಚಿನ ಚಕ್ರಗಳು ತೆರೆದುಕೊಂಡರೆ, ಅವು ತೆರೆದುಕೊಂಡರೂ ಸಹ ಸಚೇತನಗೊಂಡಿರದೇ ಇರಬಹುದಾದ ಸಾಧ್ಯತೆಗಳಿರುತ್ತವೆ. ಏಕೆಂದರೆ ಅವು ಕ್ರಮಬದ್ಧವಾಗಿ ತೆರೆದುಕೊಂಡಿಲ್ಲದೇ ಇದ್ದಿರಬಹುದು. ಅವು ಬೇರೆ ಬೇರೆ ಸ್ಥರಗಳಲ್ಲಿ ತೆರೆದುಕೊಳ್ಳಬಹುದು ಮತ್ತು ಶರೀರವ್ಯವಸ್ಥೆಯ ಉಳಿದ ಭಾಗ ಆ ಬಿಂದುಗಳ ಮೂಲಕ ಶಕ್ತಿಯನ್ನು ಹರಿಸಲು ಸಾಧ್ಯವಾಗದಿರಬಹುದು.

ಹಾಗಾಗಿ, ನಿರ್ದಿಷ್ಟ ಅಭ್ಯಾಸದ ಮೂಲಕ ನೀವು ಸೃಷ್ಟಿಸಿದ ಹೊಸ ಸಾಧ್ಯತೆಗಳು ಬಹಳ ಕಾಲ ಸುಪ್ತವಾಗಿ ಉಳಿಯುವುದನ್ನು ತಡೆಯಲು ದೀಕ್ಷೆಯನ್ನು ನೀಡಲಾಗುತ್ತದೆ ಏಕೆಂದರೆ ಅದು ಬಹಳ ಕಾಲ ಸುಪ್ತವಾಗಿದ್ದುಬಿಟ್ಟರೆ ನೀವು ಸಾಧನೆಯನ್ನು ಮುಂದುವರೆಸಲು ಬೇಕಾದ ಉತ್ಸಾಹವನ್ನು ಕಳೆದುಕೊಂಡುಬಿಡಬಹುದು. ನೀವು ಯಾವುದೇ ಫಲಿತಾಂಶಗಳಿಲ್ಲದೆ ಅಥವಾ ಫಲಿತಾಂಶಗಳನ್ನು ನಿರೀಕ್ಷಿಸದೆ ಸಾಧನೆಯನ್ನು ಮುಂದುವರೆಸಿದರೆ, ಫಲಿತಾಂಶಗಳು ಬಂದೇ ಬರುತ್ತವೆ ಮತ್ತು ನೀವೊಂದು ನಿರ್ದಿಷ್ಟ ಮಟ್ಟದ ಮುಕ್ತತೆಗೆ ಬರುತ್ತೀರಿ, ಆಗ ನಾವು ನಿಮ್ಮ ಸಾಧನೆಯಿಂದಾಗಿ ತೆರೆದುಕೊಂಡಂತಹ ಆ ಕೇಂದ್ರಗಳಿಗೆ ಶಕ್ತಿಯನ್ನು ತುಂಬಬಹುದು. ಅದೇ ದೀಕ್ಷೆಯ ಉದ್ದೇಶ. ಭೌತಿಕ ತಿಳುವಳಿಕೆಯ ದೃಷ್ಟಿಯಿಂದ ನೋಡಿದರೆ, ಅದೊಂದು ಸರಳ ಪ್ರಕ್ರಿಯೆಯಾಗಿರುತ್ತದೆ, ಆದರೆ ಚೆನ್ನಾಗಿ ತಿಂದು, ಬಹಳಷ್ಟು ಗದ್ದಲವನ್ನುಂಟುಮಾಡುವ ಮೂಲಕ ದೀಕ್ಷೆಯ ಆ ದಿನವನ್ನು ನಾವು ಅದ್ಧೂರಿಯಾಗಿ ಆಚರಿಸಲೂಬಹುದು!

Love & Grace

ಈ ಲೇಖನವು ಹಠಯೋಗ ಶಿಕ್ಷಕ ತರಬೇತಿ ಕಾರ್ಯಕ್ರಮದ ಶಿಬಿರಾರ್ಥಿಗಳೊಂದಿಗೆ ಇತ್ತೀಚೆಗೆ ನಡೆದ ಸತ್ಸಂಗದಿಂದ ತೆಗೆದುಕೊಂಡ ಆಯ್ದಭಾಗ

ಸಂಪಾದಕರ ಟಿಪ್ಪಣಿ : ಹಠಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠಯೋಗದ ವಿಸ್ತೃತ ಅನ್ವೇಷಣೆಯಾಗಿದ್ದು, ಇಂದಿನ ಜಗತ್ತಿನಲ್ಲಿ ಬಹುತೇಕ ಇಲ್ಲವಾಗಿರುವ ಈ ಪ್ರಾಚೀನ ವಿಜ್ಞಾನದ ವಿವಿಧ ಆಯಾಮಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಗಳು ಉಪಯೋಗ, ಅಂಗಮರ್ದನ, ಸೂರ್ಯಕ್ರಿಯಾ, ಸೂರ್ಯಶಕ್ತಿ, ಯೋಗಾಸನಗಳು ಮತ್ತು ಭೂತಶುದ್ಧಿ, ಮತ್ತಿತರ ಶಕ್ತಿಯುತ ಯೋಗಾಭ್ಯಾಸಗಳನ್ನು ಅನ್ವೇಷಿಸುವ ಅದ್ವಿತೀಯ ಅವಕಾಶವಾಗಿದೆ.

Find Hatha Yoga Program Near You