ಸದ್ಗುರುಗಳು ಒ೦ದು ಬಾರಿಗೆ ಎಷ್ಟು ಚಟುವಟಿಕೆಗಳನ್ನು ಮಾಡಬಹುದು? – ಯೂತ್ ಅ೦ಡ್ ಟ್ರುಥ್

ಒಬ್ಬ ಮನುಷ್ಯ ಒ೦ದು ಸಮಯದಲ್ಲಿ ಎಷ್ಟು ಕೆಲಸಗಳನ್ನು ಮಾಡಬಹುದು? ಏಕ ಕಾಲದಲ್ಲಿ ಬಹಳಷ್ಟು ಕೆಲಸಗಳನ್ನು ನಿರ್ವಹಿಸಲು ಏನು ಬೇಕು ಎನ್ನುವುದರ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
 

ಒಬ್ಬ ಮನುಷ್ಯ ಒ೦ದು ಸಮಯದಲ್ಲಿ ಎಷ್ಟು ಕೆಲಸಗಳನ್ನು ಮಾಡಬಹುದು? ಏಕ ಕಾಲದಲ್ಲಿ ಬಹಳಷ್ಟು ಕೆಲಸಗಳನ್ನು ನಿರ್ವಹಿಸಲು ಏನು ಬೇಕು ಎನ್ನುವುದರ ಬಗ್ಗೆ ಸದ್ಗುರುಗಳು, ದೆಹಲಿಯ SRCC ಕಾಲೇಜಿನಲ್ಲಿ ಸೆಪ್ಟೆ೦ಬರ್ 4, 2018ರ೦ದು ನಡೆದ ಯೂತ್ ಅ೦ಡ್ ಟ್ರುಥ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ.

Youth and Truth event with Sadhguru at SRCC, Delhi on 4 Sep 2018.

 

ಲಿಪ್ಯ೦ತರ

 

ಪ್ರಶ್ನೆ: ನೀವು ಒಂದೇ ಸಮಯದಲ್ಲಿ ಹದಿನಾಲ್ಕು ಬೇರೆ ಬೇರೆ ಚಟುವಟಿಕೆಗಳನ್ನು ಮಾಡುತ್ತೀರೆ೦ದು ಹೇಳುತ್ತಿದ್ದಿರಿ. ದೇಹ ಮತ್ತು ಮನಸ್ಸಿನ ಮೇಲೆ ಅಂತಹ ಪರಿಣತಿಯನ್ನ ನಾವು ಹೇಗೆ ಸಾಧಿಸಬಹುದು ಎ೦ದು ತಿಳಿಯಲು ನಮಗೆ ಬಹಳ ಕುತೂಹಲವಿದೆ.

ಸದ್ಗುರು: ನಿಮ್ಮಲಿರುವ ಯಕೃತ್ತು, ಎಷ್ಟು ಸ್ತರಗಳಲ್ಲಿ ಈಗ ಕೆಲಸ ಮಾಡ್ತಿದೆ ಅಂತ ನಿಮಗೆ ತಿಳಿದಿದ್ಯ? ನಿಮ್ಮ ಯಕೃತ್ತು ಏನು ಮಾಡ್ತಿದ್ಯೋ, ಅದು ನಿಮ್ಮ ಮೆದುಳು ಮಾಡ್ತಿರೋದಕ್ಕಿಂತ ಬಹಳ ಸಂಕೀರ್ಣವಾದ ಕೆಲಸಗಳನ್ನ ಮಾಡ್ತಿದೆ ಅಂತ ನಿಮಗೆ ಗೊತ್ತಿದ್ಯ? ಮೆದುಳು ಇಲ್ದಿರೋ ಯಕೃತ್ತು ಇಷ್ಟು ಕೆಲಸ ಮಾಡ್ಬೇಕಾದರೆ, ಮೆದುಳಿರೋ ನಾವು ಎಷ್ಟೆಲ್ಲಾ ಮಾಡಬಹುದು? ಚಟುವಟಿಕೆಗಳು ಕೂಡ ಒಂದು ಭಾಗ, ಹೌದು ಆದರೆ,ನಾನು ನಿರ್ದಿಷ್ಟವಾಗಿ ಚಟುವಟಿಕೆಗಳ ಬಗ್ಗೆ ಮಾತಾಡ್ತಿರ್ಲಿಲ್ಲ. ನೋಡಿ, ನಾವಿದನ್ನು ಅರ್ಥ ಮಾಡ್ಕೊಬೇಕು. ನಾವಿರೋದು ತಿರುಗುತ್ತಿರೋ ಭೂಮಿಯ ಮೇಲೆ, ಗುಂಡಾಗಿರೋ ಭೂಮಿಯ ಮೇಲೆ.

ಸಾಮಾನ್ಯವಾಗಿ ಜನರಿಗೆ ಇದು ತಿಳಿಯೋದು ಅವರಿಗೆ ಅಮಲೇರಿದಾಗ ಅಥ್ವಾ ಅವರಿಗೆ ಯಾವುದೋ ಕಾಯಿಲೆ ಬಂದಾಗ ಮಾತ್ರ. ಆದರೆ, ಇದೆಂತಹ ಸಂಕೀರ್ಣವಾದ ಪ್ರಕ್ರಿಯೆ ಅಂತ ನಿಮಗೆ ಗೊತ್ತಿದ್ಯ? ತಿರುಗುತ್ತಿರುವ, ಗುಂಡಗಿರುವ ಮತ್ತು ಅಯಸ್ಕಾಂತ ಶಕ್ತಿ ಯಾವಾಗಲೂ ಕೆಲಸ ಮಾಡುತ್ತಿರುವ ಈ ಭೂಮಿಯ ಮೇಲೆ ನಡೆದಾಡೋದು ಎ೦ತಹ ಸಂಕೀರ್ಣವಾದ ಪ್ರಕ್ರಿಯೆ ಅಂತ ನಿಮಗೆ ತಿಳಿದಿದ್ಯ? ನೀವು, ಒಂದು ಚಿಕ್ಕ ಮಗುವನ್ನ, ಒಂದು ವರ್ಷದ ಮಗುವನ್ನ ಕೇಳಿದರೆ, ಅದು ನಿಮಗೆ ತೋರಿಸತ್ತೆ, ನಡೆಯೋದು ಎಷ್ಟು ಕಷ್ಟ ಅಂತ. ನೀವು ನೋಡಿರಬೇಕಲ್ವ? ಆದರೆ, ನೀವು ನಡೆಯೋದನ್ನ ಕಲಿತು, ಸರಿಯಾಗಿ ನಡೆದಾಡಲು ಶುರುಮಾಡಿದಾಗ, ನೀವದನ್ನು ಬಹಳ ಸುಲಭವೆಂದು ಪರಿಗಣಿಸ್ತೀರಿ – ನಿಮಗೆ ನಡೆಯೋದಕ್ಕೆ ಬೇಜಾರಾಗಿ, ಕಾರ್, ಬೈಕ್ ಓಡಿಸಬೇಕೆಂತ ಅನಿಸುತ್ತದೆ. ನಡೆಯೋದು ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆ. ಬರೀ ಹದಿನಾಲ್ಕಲ್ಲ – ನಿಮ್ಮ ಮಂಡಿಗಳು, ನಿಮ್ಮ ಮೆದುಳು, ನಿಮ್ಮ ದೇಹದೊಳಗಿನ ರಕ್ತ ಇವೆಲ್ಲಾ ಇಂತಹ ಸಾವಿರಾರು ಬೇರ್ಬೇರೆ ಕ್ರಿಯೆಗಳನ್ನು ನಿಮ್ಮ ದೇಹದಲ್ಲಿ ಮಾಡುತ್ತಲೇ ಇವೆ. ಇವುಗಳನ್ನು ನೀವು ಪ್ರಜ್ಞಾಪೂರ್ವಕವಾಗಿ ನಿರ್ವಹಿಸೋದಕ್ಕೆ ಸಾಧ್ಯವಾದರೆ ಮಾತ್ರ ನಿಮಗೆ ಸಾವಿರಾರು ಕೆಲಸಗಳನ್ನ ಮಾಡಲಿಕ್ಕಾಗತ್ತೆ. ನೀವೀಗಲೂ ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಿದ್ದೀರಿ, ಆದರೆ, ಪ್ರಜ್ಞಾಪೂರ್ವಕವಾಗಿ ನೀವಿದನ್ನ ನಿರ್ವಹಿಸಿದರೆ, ನಿಮಗೆ ಸಾವಿರಾರು ಕೆಲಸಗಳನ್ನ ಒಟ್ಟಿಗೆ ಮಾಡೋದಿಕ್ಕಾಗತ್ತೆ. 

 

ನಾನು ಮನಸ್ಸಿನ ವಿವಿಧ ಆಯಾಮಗಳ ಬಗ್ಗೆ ಮಾತಾಡ್ತಿದ್ದೆ. ಇವುಗಳನ್ನ ನೀವು ನಿರ್ವಹಿಸೋ ಅಗತ್ಯವಿಲ್ಲ – ನೀವಿದನ್ನ ಆರಂಭಿಸಿ ಬಿಟ್ಟು ಬಿಟ್ಟರೆ, ಅದು ತನ್ನ ಪಾಡಿಗೆ ತಾನು ತನ್ನ ಕೆಲಸವನ್ನು ಮಾಡಿಕೊಂಡು ಹೋಗತ್ತೆ. ಪಕ್ಕದ ಮನೆ ಹುಡುಗಿಯ ಬಗ್ಗೆ ಯೋಚಿಸಬೇಕೆಂದರೆ, ನೀವು ಆ ಪ್ರಕ್ರಿಯೆಯನ್ನು ಶುರುಮಾಡಬೇಕೇ? ಬೇಡ. ಒಂದು ಬಾರಿ ಅವಳನ್ನು ನೋಡಿದ ಮೇಲೆ, ಆ ಸೆಳೆತದಿ೦ದಾಗಿ, ಅದು ತಾನಾಗಿಯೇ  ನಡೆದುಕೊಂಡುಹೋಗತ್ತೆ. ನೀವು ಹತ್ತು ಬೇರ್ಬೇರೆ ವಿಷಯಗಳಿಗೆ ಸೆಳೆಯಲ್ಪಟ್ಟರೆ, ನಿಮ್ಮ ಮನಸ್ಸು ಹತ್ತು ಬೇರ್ಬೇರೆ ಮಾರ್ಗಗಳನ್ನ ಸೃಷ್ಟಿಸಿ, ಅವುಗಳನ್ನು ನಡೆಸಿಕೊಂಡು ಹೋಗೋ ಸಾಮರ್ಥ್ಯವನ್ನ ಹೊಂದಿದೆ. 


ಗಣಿತದ ಒಂದು ಕಠಿಣವಾದ ಸಮಸ್ಯೆ, ಒಂದು ಸಂವೇದನೆ, ಸಂಗೀತ, ಒಂದು ರಾಗ, ಇದು, ಅದು ಅಂತ ನೂರಾರು ಸಂಗತಿಗಳನ್ನು ಒಂದೇ ಬಾರಿಗೆ ಮನಸ್ಸು ನಿರ್ವಹಿಸತ್ತೆ – ಯಾಕ೦ದ್ರೆ ಮಾನವರ ಮೆದುಳು ಅಷ್ಟು ಸಂಕೀರ್ಣವಾಗಿರೋ ಕಾರಣದಿಂದ. ಈ ಸಂಕೀರ್ಣತೆಯನ್ನು ನೀವು ಕಡಿವಾಣವಿಲ್ಲದ ಆಲೋಚನೆಗಳು ಮತ್ತು ಭಾವನೆಗಳಿಂದ ನಿಮ್ಮನ್ನ ನೀವು ಹುಚ್ಚಾರಾಗಿಸಿಕೊಳ್ಳಲು ಬಳಸಬಹುದು ಅಥವಾ ಯಾರಿಗೂ ಕಲ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಅದನ್ನ ನೀವು ಬಳಸಿಕೊಳ್ಬಹುದು.ಈ ಮನಸ್ಸು ಅದ್ಭುತವಾದ ರೀತಿಯಲ್ಲಿ ಕಾರ್ಯ ನಿರ್ವಹಿಸ್ಬಹುದು. ಅಗತ್ಯವಾದ ತರಬೇತಿಯನ್ನ ಅದಕ್ಕೆ ಕೊಟ್ಟರೆ, ನೀವು ಏನನ್ನಾದರನ್ನು ಸೃಷ್ಟಿಸಬಹುದು. ಯಾರಾದರು ನಡೆದುಹೋಗುತ್ತಿದ್ದರೆ, ಅವರು ನಡೆಯೋ ರೀತಿಯನ್ನು ನೋಡಿದಾಗ, ಅವರು ದೈಹಿಕವಾಗಿ ಗಟ್ಟಿಮುಟ್ಟಾಗಿದ್ದಾರ ಇಲ್ವ ಅಂತ ಗೊತ್ತಾಗತ್ತಲ್ವ? ಅದೇ ರೀತಿಯಲ್ಲಿ, ಮನಸ್ಸಿನ ಮೇಲೆ ಕೆಲಸ ನಡೆದಿದೆಯೋ ಇಲ್ವೋ, ನಿಮ್ಮ ಪ್ರಾಣಶಕ್ತಿಯ ಮೇಲೆ ಕೆಲಸ ನಡೆದಿದೆಯೋ ಇಲ್ವೋ ಅನ್ನೋದು ಪ್ರತ್ಯಕ್ಷವಾಗಿ ಕಾಣೋ ಅಂತದ್ದು. ಬಹಳಷ್ಟು ಜನರಿಗೆ ಇದು ಕಾಣದಿರಬಹುದು ಆದರೆ ಗಮನವಿಟ್ಟು ನೋಡಿದರೆ, ನಿಮಗೆ ಕಂಡೇ ಕಾಣುತ್ತದೆ. 

ಈಗ, ಜನರಿಗಿರೋ ಸಮಸ್ಯೆಯಿದು – ನಿಮಗೆ ಕೊಟ್ಟಿರೋದು ಒಂದು ಅದ್ಭುತವಾದ ಸೂಪರ್ ಕಂಪ್ಯೂಟರ್ – ಈ ಮಾನವ ವ್ಯವಸ್ಥೆಯು, ಭೂಮಿಯ ಮೇಲಿನ ಅತ್ಯಂತ ಸಂಕೀರ್ಣವಾಗಿ ಅಭಿವೃದ್ಧಿಗೊಳಿಸಲಾದ ಯಂತ್ರ. ಅದರ “users manual” - ಅನ್ನ ಓದಿದ್ದೀರ?
ಇಲ್ವ? ಯಾವಾಗ ಓದುತ್ತೀರ? ನಿಮ್ಮ ಕೊನೆ ಘಳಿಗೆಯಲ್ಲೇ? ಜನ ಸಾಯೋ ಘಳಿಗೆಯಲ್ಲಿ ಭಗವದ್ಗೀತೆಯನ್ನ ಓದೋ ಪೆದ್ದತನವನ್ನ ನೋಡ್ದಾಗ, “users manual”-ನ ಕೊನೇ ದಿನ ಓದ್ತಾ ಇದ್ದೀರ, ಏನ್ ಪ್ರಯೋಜ್ನ ಅಂತ ಹೇಳ್ತೀನಿ. ನೀವೊಂದು ಫೋನ್ ಕೊಂಡ್ಕೊಂಡಾಗ, “users manual”-ನ ಮೊದಲ ಮೂರು ದಿನದೊಳಗೆ ಓದಬೇಕೋ ಆಥವಾ ಮೂರು ವರ್ಷದ ನಂತರ, ಫೋನ್ ಮಾರೋ ಸಮಯದಲ್ಲಿ ಓದಬೇಕೋ? ಮೊದಲ ಮೂರು ದಿನದೊಳಗೆ ಓದಬೇಕು, ಅಲ್ವ?

ನಾನು ಧರ್ಮಗ್ರಂಥಗಳನ್ನು ಓದಿ ಅಂತ ಹೇಳ್ತಿಲ್ಲ. ನಮ್ಮ ದೇಹವು ಜೀವಂತ ಗ್ರಂಥ – ಈ ಗ್ರಂಥವನ್ನು ಓದುವಷ್ಟು, ಇದರ ಸ್ವಭಾವವನ್ನು ಅರ್ಥಮಾಡಿಕೊಳ್ಳುವಷ್ಟು, ಇದರ ಸಂಪೂರ್ಣ ಸಾಧ್ಯತೆಯನ್ನು ಅರಿತು, ಅದರ ಬಗ್ಗೆ ವಿಚಾರ ಮಾಡುವಷ್ಟು ನೀವು ಸಮರ್ಥರಾಗಬಾರದೇ? ನಮ್ಮ ಜೀವನವಿರೋದು ಯಾವುದರ ಬಗ್ಗೆಯೂ ಅಲ್ಲ, ನಮ್ಮ ಜೀವನವಿರುವುದು ನಮ್ಮ ಬಗ್ಗೆಯೇ. ಇದರ ಬಗ್ಗೆ ಯಾವುದೇ ಆಯ್ಕೆಯಿಲ್ಲ. ನೀವು ನಿಮ್ಮ ಜೀವನವನ್ನು ಇನ್ಯಾವುದಕ್ಕೋ ಗುಲಾಮನನ್ನಾಗಿ ಮಾಡಿ, ನಿಮ್ಮ ಜೀವನವಿರುವುದು ಅದರ ಬಗ್ಗೆ ಎಂದು ಯೋಚಿಸುತ್ತೀರಷ್ಟೆ. ಆದರೆ, ನಿಜವಾಗಿಯೂ ನಿಮ್ಮ ಜೀವನವಿರುವುದು ನಿಮ್ಮ ಬಗ್ಗೆಯೇ. 

ನಿಮ್ಮ ಪ್ರಕಾರ, ನಿಮ್ಮ ಜೀವನವು ನಿಮ್ಮ ಶಿಕ್ಷಣದ ಬಗ್ಗೆಯೆಂದು ಯೋಚಿಸುತ್ತೀರಿ – ಇಲ್ಲ, ನಿಮ್ಮ ಜೀವನವಿರುವುದು ನಿಮ್ಮ ಬಗ್ಗೆಯೇ. ನಿಮಗೆ ಬೇಕಿರುವುದು “ನಿಮ್ಮ ಬಗೆಗಿನ ಶಿಕ್ಷಣ”, ನಿಮಗೆ ಬೇಕಿರುವುದು “ನೀವು ಉತ್ತಮರಾಗಬೇಕು” ಎನ್ನುವುದು. ನಿಮಗೆ ಬೇಕಿರುವುದು “ನೀವು ಪ್ರೀತಿಯ ಅನಭವವನ್ನು ಹೊಂದಬೇಕು” ಎನ್ನುವುದು. ನಿಮಗೆ ಬೇಕಿರುವುದು “ನೀವು ತೃಪ್ತಿಪಡಬೇಕು” ಎನ್ನುವುದು – ಬೇರೆಲ್ಲವೂ ಬರೀ ಸಹಾಯಕ ವಿಷಯಗಳು, ಇದು (ನೀವು) ನಿಜವಾದ ವಿಷಯ. 

ಇದು ಸತ್ಯವಾದ ವಿಷಯವಾದರೆ, ಇದಕ್ಕೆ ನೀವು ಸ್ವಲ್ಪ ಪ್ರಮಾಣದ ಗಮನವನ್ನ ನೀಡಬೇಕಲ್ವ? ಗಮನ ಕೊಡೋದು ಅಂದ್ರೆ ಕನ್ನಡಿ ಮುಂದೆ ನಿಂತು ನಿಮ್ಮನ್ನ ನೀವೆ ಕೊನೆ ಇಲ್ದಿರೋ ರೀತಿಯಲ್ಲಿ ನೋಡಿಕೊಳ್ಳೋದಲ್ಲ. ಈ ಮಾನವ ಶರೀರವನ್ನು ಹೇಗೆ ಮಾಡಲಾಗಿದೆ ಅನ್ನುವ ಎಲ್ಲಾ ಆಯಾಮಗಳ ಕಡೆಗೆ ಗಮನ, ಈ ಜೀವವು ಕಾರ್ಯ ನಿರ್ವಹಿಸೋದಕ್ಕೆ ಬೇಕಾಗಿರೋದು ಏನು ಅನ್ನುವುದರ ಕಡೆಗೆ ಗಮನ ಕೊಡ್ಬೇಕಲ್ವ. ಇದು ತಿಳಿದರೆ, ಹದಿನಾಲ್ಕೇನು, ಇನ್ನೂ ಹೆಚ್ಚಿನ ಕೆಲಸಗಳನ್ನು ನೀವು ಒಟ್ಟಿಗೆ ಮಾಡ್ಬಹುದು. 
 

 
 
 
 
  0 Comments
 
 
Login / to join the conversation1