ದೀಪಾವಳಿ - ಜೀವನದ ಸಂಭ್ರಮಾಚರಣೆ

ಬೆಳಕಿನ ಹಬ್ಬವಾದ ದೀಪಾವಳಿಯನ್ನು ಈ ವರ್ಷ ಅಕ್ಟೋಬರ್ ೧೮ ರಂದು ಆಚರಿಸಲಾಗುತ್ತದೆ. ದೀಪಾವಳಿಯ ಮಹತ್ವವನ್ನು ವಿವರಿಸುತ್ತ ಸದ್ಗುರು ಈ ಹಬ್ಬದ ಸಮಯವನ್ನು ಆನಂದದಿಂದ ಆಚರಿಸುವುದರ ಪರಿಯನ್ನು ತಿಳಿಸಿಕೊಟ್ಟಿದ್ದಾರೆ.
 
Diwali - Life as a Celebration
 
 
 

ಸದ್ಗುರು: ಹಲವು ಸಾಂಸ್ಕೃತಿಕ ಕಾರಣಗಳಿಗಾಗಿ  ದೀಪಾವಳಿಯನ್ನು ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ಕ್ರೂರಿಯಾದ ನರಕಾಸುರ ಎಂಬ ರಾಜನನ್ನು ಈ ದಿನ ಸಂಹಾರ ಮಾಡಿದ್ದರಿಂದಾಗಿ ಇದನ್ನು ಐತಿಹಾಸಿಕವಾಗಿ ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಈ ಗೆಲುವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಆಚರಣೆ ಬಹಳಷ್ಟು ರೀತಿಯಲ್ಲಿ ಶುಭಕರವಾಗಿದೆ. ಸಂಪತ್ತನ್ನು ಬೇಡುವವರಿಗಾಗಿ ಲಕ್ಷ್ಮಿ, ಆರೋಗ್ಯವನ್ನು ಬೇಡುವವರಿಗಾಗಿ ಶಕ್ತಿ ಹಾಗು ವಿದ್ಯೆಯನ್ನು ಬೇಡುವವರಿಗಾಗಿ ಸರಸ್ವತಿಯು ಈ ದಿವಸ ಆಗಮಿಸುತ್ತಾರೆ ಎಂದು ಹೇಳಲಾಗಿದೆ. ಈ ಮಂಗಳ ದಿವಸವು ನಮ್ಮನ್ನು ಯೋಗಕ್ಷೇಮದೆಡೆಗೆ  ಕೊಂಡೊಯ್ಯುವುದು ಎಂದು ಬಣ್ಣಿಸಿರುವ ಪರಿ ಇದು. 

ಎಲ್ಲವನ್ನು ಸಂಭ್ರಮದಿಂದ ಆಚರಿಸುವ ದಾರಿಯಲ್ಲಿ ನೀವು ನಡೆದರೆ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಪೂರ್ತಿಯಾಗಿ ನಿಮ್ಮನ್ನು ತೊಡಗಿಸಿಕೊಳ್ಳುವುದನ್ನು ಕಲಿತುಕೊಳ್ಳಬಹುದು.

ಭಾರತೀಯ ಸಂಸ್ಕೃತಿಯಲ್ಲಿ ೩೬೫ ದಿನ ಕೂಡ ಒಂದಲ್ಲ ಒಂದು ಹಬ್ಬವನ್ನು ಆಚರಿಸುತ್ತಿದ್ದ ಸಮಯವೊಂದಿತ್ತು. ಏಕೆಂದರೆ ಹಬ್ಬಗಳು ಜೀವನವನ್ನು ಸಮೃದ್ಧಿ ಹಾಗು ಉತ್ಸಾಹದಿಂದಿರಿಸುವ ಸಾಧನಗಳು. ಇದು ಹಬ್ಬಗಳ ಆಚರಣೆಯ ಹಿಂದಿರುವ ಪ್ರಮುಖ ಹಾಗು ಅತ್ಯಂತ ಮಹತ್ವದ ಅಂಶ. ಇಡೀ ಸಂಸ್ಕೃತಿಯೇ ಒಂದು ಸಂಭ್ರಮಾಚರಣೆಯಾಗಿತ್ತು. ಒಂದು ವೇಳೆ ಇಂದು ಉಳುಮೆಯ ದಿನವಾದರೆ ಅದೊಂದು ಹಬ್ಬ. ನಾಳೆ ಬಿತ್ತುವ ದಿನವಾದರೆ, ಅದೊಂದು ತರಹದ ಹಬ್ಬ. ನಾಡಿದ್ದು ಕಳೆ ಕೀಳುವ ದಿನವಾದರೆ ಅದು ಇನ್ನೊಂದು ತರಹದ ಹಬ್ಬ. ಕೊಯ್ಲಿನ ದಿನವಂತೂ ಹಬ್ಬವೇ ಹಬ್ಬ. ಅದನ್ನು ನಾವು ಈಗಲೂ ಆಚರಿಸುತ್ತೇವೆ. ಆದರೆ ಸುಮಾರು ೪೦೦-೫೦೦ ವರ್ಷಗಳಿಂದ ನಮ್ಮ ದೇಶದಲ್ಲಿ ಬಡತನ ಆರಂಭವಾಗಿದೆ. ಹಾಗಾಗಿ ದಿನವೂ ಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಸಿಕ್ಕರೆ ಸಾಕು ಎಂದು ಜನ ಯೋಚಿಸಿ ಅಷ್ಟರಲ್ಲೇ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಹಾಗಾಗಿ ಬಹುತೇಕ ಹಬ್ಬಗಳ ಆಚರಣೆ ನಿಧಾನವಾಗಿ ನಿಂತುಹೋದವು. ಈಗ ಕೇವಲ ೩೦-೪೦ ಹಬ್ಬಗಳು ಉಳಿದಿವೆ. ಪ್ರತಿದಿನ ಕಛೇರಿಗಳಿಗೆ ಹೋಗುವುದು ಅಥವಾ ಇನ್ನಾವುದೋ ಕಾರಣಗಳಿಂದಾಗಿ ಉಳಿದಿರುವ ಹಬ್ಬಗಳನ್ನು ಕೂಡ ಸರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವರ್ಷದಲ್ಲಿ ಕೇವಲ ೮-೧೦ ಹಬ್ಬಗಳ ಆಚರಣೆಗಷ್ಟೇ ನಮ್ಮನ್ನು ಸೀಮಿತಗೊಳಿಸಿಕೊಂಡಿದ್ದೇವೆ.

ನಾವು ಇದನ್ನು ಹೀಗೆಯೇ ಬಿಟ್ಟರೆ, ನಮ್ಮ ಮುಂದಿನ ಪೀಳಿಗೆಯವರಿಗೆ ಹಬ್ಬಗಳೇ ಉಳಿಯುವುದಿಲ್ಲ. ಅವರಿಗೆ ಹಬ್ಬವೆಂದರೆ ಏನೆಂದೇ ತಿಳಿಯುವುದಿಲ್ಲ. ಅವರು ಕೇವಲ ದುಡಿಯುವುದು, ತಿನ್ನುವುದು - ಇವಷ್ಟಕ್ಕೇ ಸೀಮಿತವಾಗಿಬಿಡುತ್ತಾರೆ. ಈಗಾಗಲೇ ಈ ಪರಿಸ್ಥಿತಿ ಎಷ್ಟೋ ಜನರ ಜೀವನದಲ್ಲಿ ಸಂಭವಿಸುತ್ತಿದೆ. ಹಬ್ಬದ ದಿನ ರಜೆ ಸಿಗುತ್ತದೆ. ಹಾಗಾಗಿ ತಡವಾಗಿ ಏಳಬಹುದು. ಆಮೇಲೆ ಹೊಟ್ಟೆ ಬಿರಿಯುವಷ್ಟು ಸಿಕ್ಕಿದ್ದನ್ನು ತಿಂದು ಚಿತ್ರಮಂದಿರದಲ್ಲೋ ಅಥವಾ ಮನೆಯಲ್ಲಿ ಚಲನಚಿತ್ರ ನೋಡುವುದು. ಉತ್ತೇಜಕ ಪದಾರ್ಥಗಳನ್ನು ತೆಗೆದುಕೊಂಡಾಗಷ್ಟೇ, ಅವರು ಸ್ವಲ್ಪ ನರ್ತಿಸಬಹುದು. ಇಲ್ಲವೆಂದರೆ ಹಾಡುವುದು, ನರ್ತಿಸುವುದು ಏನೂ ಇಲ್ಲ. ಮೊದಲು ಹೀಗಿರಲಿಲ್ಲ. ಹಬ್ಬದ ದಿನ ಇಡೀ ಊರಿನ ಜನರು ಒಂದು ಕಡೆಗೆ ಸೇರಿ ಒಟ್ಟಿಗೆ ಹಬ್ಬವನ್ನು ಆಚರಿಸುತ್ತಿದ್ದರು. ಹಬ್ಬದ ದಿನ ನಾವು ಬೆಳಗಿನ ಜಾವ ೪ ಗಂಟೆಗೆ ಏಳುತ್ತಿದ್ದೆವು. ಮನೆಯಲ್ಲಿ ಎಲ್ಲರೂ ಬಹಳ ಸಕ್ರಿಯವಾಗಿರುತ್ತಿದರು. ಈ ಸಂಸ್ಕೃತಿಯನ್ನು ಜನರಿಗೆ ಮತ್ತೆ ವಾಪಸ್ ತರಲು, ಈಶ ಫೌಂಡೇಶನ್ ೪ ಪ್ರಮುಖ ಹಬ್ಬಗಳನ್ನು ಆಚರಿಸುತ್ತದೆ - ಪೊಂಗಲ್ ಅಥವಾ ಮಕರ ಸಂಕ್ರಾಂತಿ, ಮಹಾಶಿವರಾತ್ರಿ, ದಸರಾ, ಮತ್ತು ದೀಪಾವಳಿ. 

ಗಂಭೀರವಲ್ಲದ ಸಂಪೂರ್ಣ ತೊಡಗಿಕೊಳ್ಳುವಿಕೆ

ಎಲ್ಲವನ್ನು ಸಂಭ್ರಮದಿಂದ ಆಚರಿಸುವ ದಾರಿಯಲ್ಲಿ ನೀವು ನಡೆದರೆ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಪೂರ್ತಿಯಾಗಿ ನಿಮ್ಮನ್ನು ತೊಡಗಿಸಿಕೊಳ್ಳುವುದನ್ನು ಕಲಿತುಕೊಳ್ಳಬಹುದು. ಬಹಳಷ್ಟು ಮನುಷ್ಯರ ಜೀವನದ ಸಮಸ್ಯೆಯೇ ಇದು. ಯಾವುದಾದರು ವಿಷಯ ಪ್ರಮುಖವೆಂದಾದರೆ ಅದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದು ಮತ್ತು ಅದು ಪ್ರಮುಖವಾಗಿರದಿದ್ದರೆ, ಆ ವಿಷಯವನ್ನು ಬಹಳ ಹಗುರವಾಗಿ ತೆಗೆದುಕೊಂಡು ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳದಿರುವುದು. ಯಾರಾದರು "ಅವರು ಬಹಳ ಗಂಭೀರ ಸ್ಥಿತಿಯಲ್ಲಿದ್ದಾರೆ" ಎಂದು ಹೇಳಿದರೆ ಮುಂದಿನ ಹಂತವೇನು ಎಂದು ನಿಮಗೆ ಗೊತ್ತು. ಬಹಳ ಜನ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರು ಜೀವನದಲ್ಲಿ ಯಾವುದೋ ಒಂದು ಪ್ರಮುಖ ಘಟನೆಯೊಂದನ್ನು ಹೊರತುಪಡಿಸಿ ಮತ್ತೆಲ್ಲವನ್ನು ಕಳೆದುಕೊಂಡಿರುತ್ತಾರೆ. ಏಕೆಂದರೆ ಅವರು ಯಾವುದರಲ್ಲಿಯೂ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಿಲ್ಲ. ಇದೇ ದೊಡ್ಡ ಸಮಸ್ಯೆ. ಆಟದಲ್ಲಿ  ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸದೆ, ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಗಬೇಕು. ಇದೇ ಜೀವನದ ರಹಸ್ಯ. ಹಾಗಾಗಿಯೇ ಜೀವನದ ಎಷ್ಟೋ ಪ್ರಮುಖವಾದ ಘಳಿಗೆಗಳನ್ನು ನಾವು ಹಬ್ಬದಂತೆ ಆಚರಿಸುತ್ತೇವೆ. ಹೀಗಾದಾಗ ನಾವು ಆ ಘಳಿಗೆಗಳ ಅರ್ಥವನ್ನು ಕಳೆದುಕೊಳ್ಳುವುದಿಲ್ಲ.

ನಿಮ್ಮ ಜೀವನದಲ್ಲಿ ಸಂಭ್ರಮಾಚರಣೆಯನ್ನು ತರುವುದೇ ದೀಪಾವಳಿಯ ಗುರಿ. ಆದುದರಿಂದಲೇ ನಿಮ್ಮಲ್ಲಿ ಸ್ವಲ್ಪ ಕಿಚ್ಚನ್ನು ಹಚ್ಚಲು ಪಟಾಕಿಗಳು. ಕೇವಲ ಒಂದು ದಿನ ಮಜಾ ಮಾಡಿ ಹೋಗುವುದು ಇದರ ಉದ್ದೇಶವಲ್ಲ. ಈ ಆಚರಣೆ ನಮ್ಮ ಜೀವನದಲ್ಲಿ ಎಂದೆಂದೂ ನಡೆಯಬೇಕು. ನಾವು ಸುಮ್ಮನೆ ಕುಳಿತರೂ, ನಮ್ಮೊಳಗಿನ ಚೈತನ್ಯ, ಹೃದಯ, ಮನಸ್ಸು, ಮತ್ತು ನಮ್ಮ ದೇಹ ಪಟಾಕಿಯು ಸಿಡಿಯುವಂತೆ ಕಿಚ್ಚಿನಿಂದ ಕೂಡಿರಬೇಕು. ನೀವು ಒಂದೊಮ್ಮೆ ಠುಸ್ ಪಟಾಕಿಯಾದರೆ, ನಿಮಗೆ ಪ್ರತಿ ದಿನ ಹೊರಗಿನ ಪಟಾಕಿ ಬೇಕಾಗುತ್ತದೆ.

ಸಪ್ರೇಮ ಆಶೀರ್ವಾದಗಳೊಂದಿಗೆ,