ನಾವು ನಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದಷ್ಟೂ, ಭೂತ ಕಾಲದ ಪ್ರಭಾವದ ಸಂಕೋಲೆಯಲ್ಲಿ ನಮ್ಮನ್ನು ನಾವು ಬಂಧಿಸಿಕೊಳ್ಳುತ್ತೀವಿ. ಈ ಹೊರೆಯನ್ನು ಪಕ್ಕಕ್ಕಿಡುವುದು ಸಾಧ್ಯವಾದರೆ, ನಾವು ಬದುಕು ಮತ್ತು ಸಾವನ್ನು ಸಲೀಸಾಗಿ ಹಾದುಹೋಗಬಹುದು ಎಂದು ಸದ್ಗುರುಗಳು ಹೇಳುತ್ತಾರೆ.

ಸದ್ಗುರು: ಈಗ, ನೀವು "ನಾನು" ಎಂದು ಕರೆಯುವುದು, ನಿಮ್ಮ ಮನಸಿನಲ್ಲಿ ನೀವು ಸಂಗ್ರಹಿಸಿರುವ ಕೆಲವು ಮಾಹಿತಿ ಅಷ್ಟೇ. ನೀವು “ನಾನು ಒಳ್ಳೆಯ ವ್ಯಕ್ತಿ,” “ನಾನು ಕೆಟ್ಟ ವ್ಯಕ್ತಿ,” “ನಾನು ಅಹಂಕಾರಿ,” “ನಾನು ಸೌಮ್ಯ,” ಅಥವಾ ಇನ್ನೇನಾದರೂ ಹೇಳಿದಾಗ, ಇವು ಮನಸ್ಸಿನ ಕೆಲವು ಅನಿಸಿಕೆಗಳಷ್ಟೇ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಭೂತಕಾಲದ ಸಂಗ್ರಹಣೆ - ನೀವು ನಿಮ್ಮ ಗತಕಾಲದ ಮೂಲಕ ಬದುಕುತ್ತಿದ್ದೀರಿ. ಹಿಂದಿನದನ್ನು ತೆಗೆದುಬಿಟ್ಟರೆ, ಬಹುಪಾಲು ಜನರು ಕಳೆದುಹೋಗುತ್ತಾರೆ. ಎಲ್ಲವೂ ಅವರ ಹಿಂದಿನದನ್ನು ಅವಲಂಬಿಸಿರುತ್ತದೆ. ವ್ಯಕ್ತಿತ್ವ ಗತಕಾಲದ್ದು. ಆದ್ದರಿಂದ ವ್ಯಕ್ತಿತ್ವ ಎಲ್ಲಿಯವರೆಗೆ ಮುಖ್ಯವಾಗಿರುತ್ತದೋ, ಅದರರ್ಥ, ಹಿಂದಿನ ಕ್ಷಣ ಎಲ್ಲವನ್ನೂ ಆಳುತ್ತಾ ಇದೆ ಎಂದು ಅಷ್ಟೇ. ಈಗಿನ ಕ್ಷಣ ಮುಖ್ಯವಾಗಿ ಉಳಿದಿಲ್ಲ.

ನೀವು ಹೊತ್ತು ಒಯ್ಯುವ ವ್ಯಕ್ತಿತ್ವ ಸತ್ತು ಹೋಗಿರುವ ವ್ಯಕ್ತಿತ್ವ. ನಿಮ್ಮ ಹೆಗಲ ಮೇಲೆ ಮೃತ ದೇಹವನ್ನು ಹೊತ್ತುಕೊಂಡಾಗ, ನೀವು ತುಂಬಾ ದೂರ ಹೋಗಲು ಸಾಧ್ಯವಿಲ್ಲ. ಮತ್ತು ನೀವು ಸ್ಮಶಾನದ ಕಡೆಗೆ ಮಾತ್ರ ಹೋಗಬಹುದಷ್ಟೇ. ನೀವು ಮೃತ ದೇಹವನ್ನು ಹೆಚ್ಚು ಹೊತ್ತು ಹೊತ್ತುಕೊಂಡರೆ, ನೀವು ಭಯಾನಕ ವಾಸನೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಿಮ್ಮ ವ್ಯಕ್ತಿತ್ವವು ಬಲವಾಗಿದ್ದಷ್ಟೂ, ಹೆಚ್ಚು ದುರ್ವಾಸನೆಯನ್ನು ಹೊಂದಿರುತ್ತದೆ.

ಹಿಂದಿನದನ್ನು ಹಿಂದೆ ಬಿಟ್ಟುಬಿಡುವುದು

ನೀವು ನಿಮ್ಮ ಗತಕಾಲವನ್ನು ತೊರೆದಾಗ ಮಾತ್ರ ಜೀವನದಲ್ಲಿ ಹೆಚ್ಚು ದೂರ ಹೋಗಬಹುದು. ಇದು ಹಾವು ಅದರ ಪೊರೆಯನ್ನು ಕಳಚಿಕೊಳ್ಳುವ ಹಾಗೆ. ಒಂದು ಕ್ಷಣ ಅದು ದೇಹದ ಒಂದು ಭಾಗ, ಮುಂದಿನ ಕ್ಷಣ ಅದನ್ನು ಬಿಟ್ಟು ಹಾವು ಹಿಂತಿರುಗಿ ಕೂಡಾ ನೋಡದೆ ಮುಂದೆ ಹೋಗುತ್ತದೆ. ಪ್ರತಿ ಕ್ಷಣವೂ ಜನರು ಚರ್ಮವನ್ನು ಬಿಟ್ಟು ಹೋದ ಹಾವಿನಂತೆ ಇದ್ದರೆ, ಆಗ ಮಾತ್ರ ಬೆಳವಣಿಗೆ ಇರುತ್ತದೆ. ಹಿಂದಿನ ಭಾರವನ್ನು ಹೊತ್ತುಕೊಳ್ಳದೇ ಜೀವಿಸುವವರು ನಿಜವಾದ ಪಾಪವಿಲ್ಲದವರು. ಪಾಪವಿಲ್ಲದವರು ಎಂದರೆ, ಅವರು ತಮ್ಮ ಜೀವನದಲ್ಲಿ ಏನೂ ಮಾಡಲಿಲ್ಲವೆಂದಲ್ಲ. ಏನೂ ಮಾಡಲಿಲ್ಲ ಎನ್ನುವುದರ ಅರ್ಥ ಸತ್ತಂತೆ ಇರುವುದು. ಅವರು ಜೀವನವನ್ನು ತಿಳಿದುಕೊಳ್ಳಲು ಒಬ್ಬ ವ್ಯಕ್ತಿ ಏನೆಲ್ಲಾ ಮಾಡಬಹುದೋ, ಅದೆಲ್ಲವನ್ನೂ ಮಾಡಿದರು, ಆದರೆ ಅವರ ಕೆಲಸಗಳು ಯಾವುದೇ ಶೇಷ ಉಳಿಸಲಿಲ್ಲ, ಅಥವಾ ಅವರು ತಾವು ಮಾಡಿದ ಕೆಲಸಗಳಿಂದ ಯಾವುದೇ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲಿಲ್ಲ.

ಹಿಂದಿನ ಕ್ಷಣವನ್ನು ಈ ಕ್ಷಣಕ್ಕೆ ತರದವರು ಮಾತ್ರವೇ ಎಲ್ಲದರಿಂದ ಮುಕ್ತರು.

ನೀವು ಶುಕ ಮುನಿಗಳ ಬಗ್ಗೆ ಕೇಳಿದ್ದೀರಾ? ಅವರು ವ್ಯಾಸಪುತ್ರರು. ಶುಕ ಒಬ್ಬ ಪರಿಶುದ್ಧ ಜೀವಿ, ನಿಜವಾದ ಪಾಪವಿಲ್ಲದ ಜೀವಿ. ಒಂದು ದಿನ, ಅವರು ಬೆತ್ತಲೆಯಾಗಿ ಕಾಡಿನಲ್ಲಿ ಅವರ ಪಾಡಿಗೆ ನಡೆದು ಹೋಗುತ್ತಿದ್ದರು. ದಾರಿಯಲ್ಲಿನ ಒಂದು ಸರೋವರದಲ್ಲಿ, ಕೆಲವು ಜಲಕನ್ಯೆಯರು ಅಥವಾ ಅಪ್ಸರೆಯರು ಸ್ನಾನ ಮಾಡುತ್ತಿದ್ದರು. ಅಲ್ಲಿ ಅವರುಗಳಷ್ಟೇ ಇದ್ದುದರಿಂದ, ಎಲ್ಲರೂ ಒಟ್ಟಿಗೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದರು ಮತ್ತು ನೀರಿನಲ್ಲಿ ಆಡುತ್ತಿದ್ದರು. ಶುಕ ಮುನಿಗಳು ಸರೋವರದ ಮುಂದಿನಿಂದ ಹಾದುಹೋಗುವಾಗ, ಅವರನ್ನು ನೋಡಿದರು ಮತ್ತು ತಮ್ಮ ಪಾಡಿಗೆ ಮುಂದುವರೆದರು. ಆ ಹೆಂಗಸರು ನಾಚಿಕೆಪಡಲಿಲ್ಲ, ಅಥವಾ ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸಲಿಲ್ಲ. ಅವರು ತಮ್ಮ ಆಟವನ್ನು ಮುಂದುವರೆಸಿದರು.

ಶುಕನನ್ನು ಹುಡುಕುತ್ತ, ಅವರ ತಂದೆಯಾದ ವ್ಯಾಸರು ಹಿಂದೆ ಹಿಂದೆ ಬಂದರು. ಅವರು ಎಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ವೃದ್ಧರು ಮತ್ತು ಒಬ್ಬ ಮಹಾಋಷಿ. ಶುಕರನ್ನು ಹಿಂಬಾಲಿಸುತ್ತಾ ಅವರೂ ಸರೋವರದ ಹತ್ತಿರ ಬಂದರು. ಹೆಂಗಸರು ವ್ಯಾಸರನ್ನು ನೋಡಿದ ತಕ್ಷಣ ತಮ್ಮ ಬಟ್ಟೆಯ ಕಡೆ ಓಡಿದರು. ವ್ಯಾಸ ಅವರನ್ನು, “ನಾನು ವಯಸ್ಸಾದ ವ್ಯಕ್ತಿ, ಮತ್ತು ನಾನು ಸರಿಯಾಗಿ ಬಟ್ಟೆ ಧರಿಸಿದ್ದೇನೆ. ಆದರೆ ನನ್ನ ಮಗ ಯುವಕ ಮತ್ತು ಬೆತ್ತಲೆಯಾಗಿದ್ದಾನೆ. ಅವನು ನಿಮ್ಮ ಹತ್ತಿರ ಬಂದಾಗ, ನೀವು ಗೊಂದಲಕ್ಕೊಳಗಾಗಲಿಲ್ಲ, ಆದರೆ ನಾನು ಬಂದಾಗ, ನೀವು ಈ ರೀತಿ ವರ್ತಿಸುತ್ತಿದ್ದೀರಿ. ಏಕೆ? ” ಎಂದು ಕೇಳಿದರು. ಅಪ್ಸರೆಯರು ಹೇಳಿದರು, “ಶುಕ ಯಾವುದೇ ಲೈಂಗಿಕ ಗುರುತನ್ನು ಹೊಂದಿಲ್ಲ. ನಮಗೆ ಏನೂ ಅನಿಸಲಿಲ್ಲ. ಅವನು ಒಂದು ಮಗುವಿನಂತೆ.”

ಹಿಂದಿನ ಕ್ಷಣವನ್ನು ಈ ಕ್ಷಣಕ್ಕೆ ಕೊಂಡು ತರದ ವ್ಯಕ್ತಿ ಮಾತ್ರ ಎಲ್ಲದರಿಂದ ಮುಕ್ತನಾಗಿರುತ್ತಾನೆ. ಮತ್ತು ಆ ಗುಣವು ಎಲ್ಲೆಡೆ ಎಲ್ಲರ ಅನುಭವಕ್ಕೆ ಬರುತ್ತದೆ. ನಿಮ್ಮನ್ನು ಭೇಟಿಯಾದ ಕೆಲವೇ ಕ್ಷಣಗಳಲ್ಲಿ, ಜನರು ತಮ್ಮ ಹೆತ್ತವರು, ತಮ್ಮ ಸಂಗಾತಿಯನ್ನೂ ಸಹ ನಂಬದ ಮಟ್ಟಕ್ಕೆ ನಿಮ್ಮನ್ನು ನಂಬುತ್ತಾರೆ, ಏಕೆಂದರೆ ನೀವು ಹಿಂದಿನ ಭಾರವನ್ನು ನಿಮ್ಮೊಂದಿಗೆ ಹೊತ್ತೊಯ್ಯುತ್ತಿಲ್ಲ.

ದುರ್ವಾಸನೆ ತೊಲಗಲಿ

ನೀವು ಭೂತಕಾಲವನ್ನು ನಿಮ್ಮೊಂದಿಗೆ ಕೊಂಡೊಯ್ಯುತ್ತಿದ್ದರೆ, ನೀವೂ ಸಹ ಬೇರೆಯವರಂತೆ ವಾಸನೆ ಹೊಂದಿರುತ್ತೀರಿ. ಇಡೀ ಜಗತ್ತು ವ್ಯಕ್ತಿತ್ವಗಳ ವಾಸನೆಯಿಂದ ಗಬ್ಬು ನಾರುತ್ತಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಬಲವಾದ ವಾಸನೆ ಅಥವಾ ವ್ಯಕ್ತಿತ್ವ ಇದೆ. ಇವೆಲ್ಲಾ ವಿಶ್ವದಲ್ಲಿರುವ ಬಗೆ ಬಗೆಯ ದುರ್ವಾಸನೆಗಳು, ಮತ್ತು ಅವು ಸದಾಕಾಲ ಘರ್ಷಣೆಗೊಳಗಾಗುತ್ತಿರುತ್ತವೆ. ನಿಮ್ಮ ಎಲ್ಲಾ ಕೋಪ, ದ್ವೇಷ, ಅಸೂಯೆ, ಭಯ - ಎಲ್ಲವೂ ಹಿಂದಿನದನ್ನು ಆಧರಿಸಿದವು. ನೀವು ಭೂತ ಮತ್ತು ಭವಿಷ್ಯ ಎರಡನ್ನೂ ಹೊತ್ತ ಕ್ಷಣದಿಂದ, ನೀವು ನಿಜವಾದ ಕತ್ತೆಯಾಗುತ್ತೀರಿ, ಏಕೆಂದರೆ ಹೊರೆ ಅಂತಹದು. ಆ ಭಾರವನ್ನು ಹೊತ್ತುಕೊಂಡು ಯಾರಾದರೂ ತನ್ನ ಜೀವನವನ್ನು ಬುದ್ಧಿವಂತಿಕೆಯಿಂದ ಬದುಕಲು ಯಾವುದೇ ಮಾರ್ಗವಿಲ್ಲ.

ಈ ವಾಸನೆಯನ್ನು ಹೊತ್ತುಕೊಳ್ಳದೇ ಸಾಗಿದಾಗ, ನೀವು ಈ ಅಸ್ತಿತ್ವವನ್ನು ಮೀರಬಹುದು. ನೀವು ಯಾವುದೇ ಪ್ರಯತ್ನವಿಲ್ಲದೆ ಸಂಸಾರ ಸಾಗರವನ್ನು ದಾಟಬಹುದು. ಬೇರೆಯವರಿಗೆ ದೊಡ್ಡ ಪ್ರಯತ್ನವೆಂದು ತೋರುತ್ತಿರುವುದು ನಿಮಗೆ ಯಾವುದೇ ಪ್ರಯತ್ನವಿಲ್ಲದೆ ನಡೆಯುತ್ತದೆ. ಈ ಜಗತ್ತಿನಲ್ಲಿ ಸಲೀಸಾಗಿ ಹಾದುಹೋಗುವುದು ಮಾತ್ರವಲ್ಲ, ಜೀವನ ಮತ್ತು ಸಾವಿನ ಪ್ರಕ್ರಿಯೆಯನ್ನು ಕೂಡ ಸಲೀಸಾಗಿ ಹಾದು ಹೋಗಬಹುದು.

ಸಂಪಾದಕರ ಟಿಪ್ಪಣಿ: “ಮಿಸ್ಟಿಕ್ ಮ್ಯೂಸಿಂಗ್ಸ್” ಎಂಬ ಆಂಗ್ಲ ಪುಸ್ತಕದಿಂದ ಆಯ್ದ ಭಾಗ. ಉಚಿತ ಮಾದರಿ ಪುಸ್ತಕ ಓದಿ ಅಥವಾ ಈ-ಬುಕ್ ಖರೀದಿಸಿ. ಈ ಪುಸ್ತಕವು ನಮ್ಮ ಭಯ, ಕೋಪಗಳು, ಭರವಸೆಗಳು ಮತ್ತು ಹೋರಾಟಗಳನ್ನು ಮೀರಿದ ವಾಸ್ತವದ ಬಗ್ಗೆ ಉತ್ತರಗಳನ್ನು ಚತುರವಾಗಿ ಮಾರ್ಗದರ್ಶಿಸುತ್ತದೆ. ಸದ್ಗುರುಗಳು ನಮ್ಮನ್ನು ತರ್ಕದ ಅಂಚಿನಲ್ಲಿಟ್ಟುಕೊಳ್ಳುತ್ತಾರೆ ಮತ್ತು ಜೀವನ, ಸಾವು, ಪುನರ್ಜನ್ಮ, ಸಂಕಟ, ಕರ್ಮ ಮತ್ತು ಜೀವದ ಪ್ರಯಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರ ಉತ್ತರಗಳೊಂದಿಗೆ ನಮ್ಮನ್ನು ಆಕರ್ಷಿಸುತ್ತಾರೆ.