ನಾನು ಯುವಕನಾಗಿದ್ದಾಗ, ನಾನು ಸಾವಿರಾರು ಪದ್ಯಗಳನ್ನು ಬರೆದಿದ್ದೇನೆ ಏಕೆಂದರೆ ನಾನು ಬಹಳ ದೂರದಲ್ಲಿ ಒಂದು ಜಮೀನಿನಲ್ಲಿ ವಾಸಿಸುತ್ತಿದ್ದೆ. ನಾನೇಕೆ ಅಲ್ಲಿಗೆ ಹೋದೆ ಎಂದರೆ, ನಾನಾಗ ಹ್ಯಾಂಗ್ ಗ್ಲೈಡರ್‌ಗಳನ್ನು ಹಾರಿಸುತ್ತಿದ್ದೆ ಮತ್ತು ನನಗೆ ಪರ್ವತದ ಇಳಿಜಾರಿನ ಅಗತ್ಯವಿತ್ತು ಮತ್ತು ಅಲ್ಲಿ ಒಂದು ಕೆರೆ ಸಹ ಇತ್ತು. ಆದ್ದರಿಂದ, ನಾನು ನನ್ನದೇ ರೀತಿಯ ಸ್ವಂತ ದೋಣಿಯೊಂದನ್ನು ಮಾಡಿಕೊಂಡಿದ್ದೆ. ಸರೋವರ ಮತ್ತು ಪರ್ವತ ನನ್ನನ್ನು ಆಕರ್ಷಿಸಿದ್ದವು, ಆದರೆ ಆ ಜಾಗ ತುಂಬಾ ದೂರದಲ್ಲಿತ್ತು. ನನ್ನನ್ನು ನೋಡಲು ಎಂದೂ ಯಾರೂ ಅಲ್ಲಿಗೆ ಬರಲಿಲ್ಲ. ನಾನು ಒಬ್ಬನೇ ಇದ್ದೆ, ಹಾಗಾಗಿ ಜೀವನವನ್ನು ಅನ್ವೇಷಿಸುವ ನನ್ನ ರೀತಿ ಕವಿತೆಯ ರೂಪವನ್ನು ಪಡೆಯಿತು, ಏಕೆಂದರೆ ಗದ್ಯದಲ್ಲಿ ಬರೆಯುವಷ್ಟು ಶಿಕ್ಷಣವನ್ನು ನಾನು ಪಡೆದಿರಲಿಲ್ಲ. ಆ ಸಮಯದಲ್ಲಿ ನಾನು ಬಹಳಷ್ಟು ಬರೆದಿದ್ದೇನೆ. ಇಂದಿಗೂ ಸಹ ಬರೆಯುತ್ತಲೇ ಇದ್ದೇನೆ ಮತ್ತು ಸದ್ಯಕ್ಕೆ, ನನ್ನ ಕವಿತೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ನಾವಿದ್ದೇವೆ.

ಉಪ್ಪಿನ ಬೊಂಬೆ

ಸತ್ಯವನು ಅರಸುತ್ತ
ಅಲೆದಾಡಿದೆ ಹಿಂದೆ ಮುಂದೆ

ಶಿಖರಗಳ ನಾ ಏರಿಳಿದೆ
ಪುಣ್ಯನದಿಗಳಲಿ ಸಂತರೊಡನೆ ಮುಳುಗೆದ್ದೆ

ಯಾವುದೇ ದಿಕ್ಕಿರಲಿ, ಕುರುಡರೇ ತೋರಿರಲಿ 
ಆಸೆ ಉತ್ಸಾಹದಲಿ ಪಯಣಿಸಿದೆ

ಅಲೆದೆ ಅದರ ಪರಿಮಳದ ಸುಳಿವಿದ್ದಲ್ಲೆಲ್ಲ
ಆದರೆ ತಿರುಗಿದೆ ಸುತ್ತು ಸುತ್ತುಗಳನ್ನಷ್ಟೆ

ಇಲ್ಲದವನ ಅರಿಯಲು ಹೊರಟು ಕಳೆದಿರುವೆ ಜನುಮಗಳನೆ
ಆದರೆ ತಾಪದಲಿ ಹುಡುಕಾಟ ಸಾಗಿತ್ತು ಬಿಡದೆ

ಮೀನು ತಿಮಿಂಗಿಲಗಳಿಗೂ ಗೊತ್ತಿರದ ಆಳ
ನಾವೆಂತು ಅಳೆಯುವೆವೋ ಅನಂತ ಕಡಲಾಳ

ಉಪ್ಪೊಂದೇ ತಾನಾಗುವುದು ಕಡಲು
ಉಪ್ಪಿನಾ ಬೊಂಬೆ ನಾನಾದೆ, ಒಂದೆ ಮುಳುಗಿನಲಿ ನಾನೇ ಕಡಲಾದೆ! 

 

"ನಾನೇಕೆ ಅಸ್ತಿತ್ವದೊಂದಿಗೆ ವಿಲೀನವಾಗಬೇಕು?" ಇದೊಂದು ಕಲ್ಪನೆಯಲ್ಲ; ಅಸ್ತಿತ್ವವಿರುವ ರೀತಿಯೇ ಹೀಗೆ. ನೀವು ವಿಲೀನವಾಗುತ್ತೀರಿ ಎನ್ನುವುದನ್ನು, ಒಂದೋ ನೀವೀಗಲೇ ಅರ್ಥಮಾಡಿಕೊಳ್ಳುತ್ತೀರಿ ಅಥವಾ ಮುಂದೊಂದು ದಿನ ನಾವು ನಿಮ್ಮನ್ನು ಸಮಾಧಿ ಮಾಡಿದಾಗ ತಿಳಿದುಕೊಳ್ಳುತ್ತೀರಿ. ಈ ತಕ್ಷಣವೇ ನೀವಿದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು. ಈಗಲೇ ನಿಮಗಿದು ಅರ್ಥವಾದರೆ, ನೀವು ನಿಮ್ಮ ಜೀವನವನ್ನು ಆನಂದಿಸಬಹುದು. ಇಲ್ಲದಿದ್ದರೆ, ನಿಮಗದು ಗೊತ್ತಾದ ನಂತರ ನಾವು ನಮ್ಮ ಜೀವನವನ್ನು ಆನಂದದಿಂದ ಕಳೆಯುತ್ತೇವೆ. ನೀವು ನಿಮ್ಮ ಬಗ್ಗೆಯೇ ಅತಿಯಾಗಿ ತುಂಬಿಹೋಗಿದ್ದರೆ, ನಿಮ್ಮ ಸುತ್ತಲಿನ ಜನರು ನಿಮ್ಮನ್ನು ಹೂಳಿದ ನಂತರ ತಮ್ಮ ಜೀವನವನ್ನು ಆನಂದಿಸುತ್ತಾರೆ, ಮತ್ತು ಆಗ, ನೀವು ಎಲ್ಲದರ ಭಾಗ ಎಂಬ ಸತ್ಯವು ನಿಮ್ಮ ಅರಿವಿಗೆ ಬರುತ್ತದೆ. ಆದರೆ ನೀವು ಈಗಲೇ ಆ ಅರಿವಿನೊಂದಿಗೆ ಜೀವಿಸಿದರೆ, ನೀವೂ ಸಂತೋಷದಿಂದಿರುತ್ತೀರಿ ಮತ್ತು ನಿಮ್ಮ ಸುತ್ತಮುತ್ತಲ ಜನರೂ ಸಹ ಸಂತೋಷದಿಂದಿರುತ್ತಾರೆ; ಹಾಗಿದ್ದಾಗ ಅದು ಅದ್ಭುತವಾಗಿರುತ್ತದೆ.

"ನಾನು ಯಾವುದರ ಜೊತೆ ವಿಲೀನವಾಗಬೇಕು?" ನಾವಿಲ್ಲಿ ಹಂತ ಹಂತವಾಗಿ ಸಾಗೋಣ. ಒಮ್ಮೆಲೇ ಅಸ್ತಿತ್ವದೊಂದಿಗೆ ವಿಲೀನಗೊಳ್ಳುವುದು ತುಂಬಾ ದೊಡ್ಡ ವಿಷಯ, "ನಾನು ಎಲ್ಲಿಗೆ ಹೋಗುತ್ತೇನೆ, ಏನಾಗುತ್ತದೆ?" ಎಂಬ ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸಬಹುದು. ನೀವು ಎಲ್ಲಿಗೂ ಹೋಗುವುದಿಲ್ಲ; ನಿಮ್ಮ ಇರುವಿಕೆ ಕೊನೆಯಾಗುತ್ತದೆ ಅಷ್ಟೆ. "ಒಂದು ಉಪ್ಪಿನ ಬೊಂಬೆ ಕಡಲಿಗೆ ಬಿದ್ದರೆ, ಅದು ಎಲ್ಲೋ ಹೋಗುವುದಿಲ್ಲ; ಅದರ ಇರುವಿಕೆ ಕೊನೆಯಾಗುತ್ತದೆ. ಇದು ನೀವು ತೆಗೆದುಕೊಳ್ಳಬಹುದಾದ ತುಂಬಾ ದೊಡ್ಡ ಹೆಜ್ಜೆಯೆಂದು ನಿಮಗನಿಸುವ ಕಾರಣಕ್ಕಾಗಿಯೇ ಈ ಪ್ರಕ್ರಿಯೆಯನ್ನು ರಚಿಸಲಾಗಿದೆ. ಮೊದಲು ನೀವು ನಿಮ್ಮ ಗುರುವಿನೊಂದಿಗೆ ವಿಲೀನಗೊಳ್ಳಿ, ಏಕೆಂದರೆ ನೀವು ನೀವಾಗಿಯೇ ಕಡಲೊಳಕ್ಕೆ ಧುಮುಕುವುದಿಲ್ಲ. ನೀವು ಅವನಲ್ಲಿ ವಿಲೀನವಾಗಿ; ಅವನು ಹೇಗಿದ್ದರೂ ನಿಮ್ಮನ್ನು ಕಡಲಿಗೆ ಎಸೆಯುತ್ತಾನೆ.
 

Love & Grace