ನಮ್ಮ ರಾಷ್ಟ್ರ ಮೂಲಭೂತವಾಗಿ ಕೃಷಿ ಸಂಸ್ಕೃತಿಯದ್ದಾಗಿದ್ದು, ಬಹುಶಃ ಈ ಭೂಮಿ ಮೇಲಿನ ಅತ್ಯಂತ ದೀರ್ಘಾವಧಿಯ ಕೃಷಿ ಇತಿಹಾಸವನ್ನು ಹೊಂದಿದೆ. ಮತ್ತು ನಮ್ಮ ಜಾನುವಾರುಗಳು, ವಿಶೇಷವಾಗಿ ಹಸು ಹಾಗೂ ಎತ್ತುಗಳು, ನಮ್ಮ ಆಹಾರ, ನಮ್ಮ ಮಣ್ಣು ಮತ್ತು ನಮ್ಮ ಜೀವನವನ್ನು ನಿರ್ಮಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಇಂದು, ಅನೇಕ ವಿಷಯಗಳು ಬದಲಾಗಿರಬಹುದು, ಆದರೆ ನಮ್ಮ ಮಣ್ಣನ್ನು ಸಮೃದ್ಧಗೊಳಿಸಲು ನಮಗೆ ಈ ಪ್ರಾಣಿಗಳ ಅಗತ್ಯವಿನ್ನೂ ಇದ್ದೇ ಇದೆ. ಒಂದು ಕಾಲದಲ್ಲಿ ನಮ್ಮ ಭಾರತ ದೇಶವು ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು ಸ್ಥಳೀಯ ಜಾನುವಾರು ತಳಿಗಳನ್ನು ಹೊಂದಿತ್ತು. ಆದರೆ ಇಂದು, ಅವುಗಳಲ್ಲಿ ಮೂವತ್ತೇಳು ತಳಿಗಳು ಮಾತ್ರ ಬದುಕುಳಿದಿವೆ - ಇನ್ನುಳಿದವು ಅಳಿದುಹೋಗಿವೆ. ಕನಿಷ್ಠಪಕ್ಷ ಉಳಿದಿರುವ ತಳಿಗಳನ್ನಾದರೂ ನಾವು ಸಂರಕ್ಷಿಸಬೇಕಾಗಿರುವುದು ಬಹಳ ಮುಖ್ಯ. ಈ ತಳಿಗಳೆಲ್ಲಾ ತುಂಬ ವೇಗವಾಗಿ ನಶಿಸಿಹೋಗುತ್ತಿವೆ ಎನ್ನುವುದನ್ನು ನಾವು ಜನರ ಅರಿವಿಗೆ ತರಬೇಕಾಗಿದೆ. ಈಗ ನಾವವುಗಳನ್ನು ಉಳಿಸದೇ ಹೋದರೆ, ಅವು ಹೆಚ್ಚು ಕಾಲ ಉಳಿಯುವುದಿಲ್ಲ.

ಆರೋಗ್ಯದ ವಿಷಯದಲ್ಲಿ, ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಮಕ್ಕಳು ಚೆನ್ನಾಗಿ ಬೆಳೆಯಲು ಮತ್ತು ನಮ್ಮ ಭೂಮಿಯನ್ನು ಫಲವತ್ತಾಗಿಸಲು, ಈ ಸ್ಥಳೀಯ ತಳಿಗಳು ಬಹಳ ಮುಖ್ಯ.

ನಾವೇಕೆ ಈ ಸ್ಥಳೀಯ ತಳಿಗಳನ್ನು ಉಳಿಸಿಕೊಳ್ಳಬೇಕು? ಈ ಹಸುಗಳಿಂದ ದೊರೆಯುವ ಹಾಲು, ಮತ್ತು ಅವುಗಳ ಸಗಣಿ ಹಾಗೂ ಅವುಗಳ ಮೂತ್ರವೂ ಸಹ ನಮ್ಮ ಕೃಷಿಯಲ್ಲಿ ಬಹಳ ಉಪಯುಕ್ತವೆಂದು ಇಂದು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿದೆ. ಇವುಗಳ ಹಾಲು ವಿಶೇಷ ಗುಣವನ್ನು ಹೊಂದಿದ್ದು, A2 ಪ್ರೋಟೀನ್‌ಅನ್ನು ಹೊಂದಿದೆ. ಪ್ರಪಂಚದ ಇತರ ಭಾಗಗಳಲ್ಲಿನ ಹೆಚ್ಚಿನ ತಳಿಗಳು A1 ಪ್ರೋಟೀನ್ ಇರುವ ಹಾಲನ್ನು ಹೊಂದಿರುತ್ತವೆ ಮತ್ತಿದು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಆರೋಗ್ಯದ ವಿಷಯದಲ್ಲಿ, ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಮಕ್ಕಳು ಚೆನ್ನಾಗಿ ಬೆಳೆಯಲು ಮತ್ತು ನಮ್ಮ ಭೂಮಿಯನ್ನು ಫಲವತ್ತಾಗಿಸಲು, ಈ ಸ್ಥಳೀಯ ತಳಿಗಳು ಬಹಳ ಮುಖ್ಯ. ನಾವು ಈ ಸತ್ಯವನ್ನು ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವವ ಜನರನ್ನೂ ಒಳಗೊಂಡಂತೆ, ಎಲ್ಲರ ಅರಿವಿಗೂ ತರಬೇಕಾಗಿದೆ.

ದುರದೃಷ್ಟವಶಾತ್, ಕಳೆದ ಮೂವತ್ತು-ಮೂವತ್ತೈದು ವರ್ಷಗಳಲ್ಲಿ, ವಿದೇಶಿ ಹಸುಗಳು ಉನ್ನತ ಗುಣಮಟ್ಟದವು ಎಂಬ ಕಲ್ಪನೆಯನ್ನು ನಾವು ಎಲ್ಲಿಂದಲೋ ಪಡೆದುಕೊಂಡುಬಿಟ್ಟಿದ್ದೇವೆ. ಆದರೆ ಇಂದು, ದೇಶೀ ಹಸುಗಳು, ಹಾಲು ಕೊಡುವ ಮತ್ತು ಕೆಲಸ ಮಾಡುವ ಪ್ರಾಣಿಗಳಾಗಿ ಬಹಳ ಉತ್ತಮ ಗುಣಮಟ್ಟವನ್ನು ಹೊಂದಿವೆ ಎಂದು ನಮಗೆ ಸಾಬೀತು ಪಡಿಸಲು ಸಾಕಷ್ಟು ವಿಜ್ಞಾನವಿದೆ. ಈ ಜಾನುವಾರುಗಳು ಹಿಂದಿನಿಂದಲೂ ನಮ್ಮ ಸಂಸ್ಕೃತಿ, ನಮ್ಮ ಮನೆ, ಮತ್ತು ನಮ್ಮ ಕುಟುಂಬಗಳ ಭಾಗವೇ ಆಗಿವೆ. ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಜನ ನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ - ಅವರು ಜಾನುವಾರುಗಳನ್ನು ಸಾಕುವ ಪ್ರಶ್ನೆಯೇ ಇಲ್ಲ. ಆದರೆ ಕನಿಷ್ಠಪಕ್ಷ ವರ್ಷಕ್ಕೊಂದು ಬಾರಿ, ನಮ್ಮೊಂದಿಗೆ ಕೆಲಸ ಮಾಡುವ ಪ್ರಾಣಿಗಳಿಗೆ ನಮ್ಮ ಕೃತಜ್ಞತೆಯ ಅಭಿವ್ಯಕ್ತಿಯಾಗಿ ಸಂಕ್ರಾಂತಿ, ಸುಗ್ಗಿ ಅಥವಾ ಮಾಟ್ಟು ಪೊಂಗಲ್‌ ಹಬ್ಬವನ್ನು ಆಚರಿಸಲಾಗುತ್ತದೆ.

ಸದ್ಯಕ್ಕೆ, ಈಶ ಯೋಗ ಕೇಂದ್ರದಲ್ಲಿ ಸುಮಾರು ಇನ್ನೂರ ಐವತ್ತು ದೇಶೀ ತಳಿಯ ಹಸುಗಳಿವೆ. ಇನ್ನೂ ಉಳಿದುಕೊಂಡಿರುವ ಎಲ್ಲಾ ಮೂವತ್ತೇಳು ತಳಿಗಳ ಮಾದರಿಗಳನ್ನು ಹೇಗೆ ಮತ್ತು ಎಲ್ಲಿಂದ ತಂದು ಸಾಕುವುದು ಮತ್ತು ಅವುಗಳ ಸಂತತಿಯನ್ನು ಹೇಗೆ ಮುಂದುವರಿಸುವುದು ಎಂಬುದರ ಕಡೆಗೆ ನಾವು ಗಮನ ಹರಿಸುತ್ತಿದ್ದೇವೆ. ಸ್ಥಳೀಯ ರೈತರನ್ನೂ ಸಹ ಈ ದಿಕ್ಕಿನಲ್ಲಿ ಪ್ರೋತ್ಸಾಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಪ್ರಾದೇಶಿಕವಾಗಿ, ನಾವು ಸಾವಯವ ಕೃಷಿಯನ್ನು ಉತ್ತೇಜಿಸುತ್ತಿರುವ ಕಡೆಗಳಲ್ಲಿಯೇ, ನಮ್ಮ ಭಾರತೀಯ ಗೋವಿನ ತಳಿಗಳನ್ನೂ ಸಹ ನಾವು ಪರಿಚಯಿಸುತ್ತಿದ್ದೇವೆ. ಸದ್ಯಕ್ಕೆ ಇದಿನ್ನೂ ಚಿಕ್ಕ ಮಟ್ಟದಲ್ಲಿ ಮಾತ್ರ ನಡೆಯುತ್ತಿದ್ದು, ದೊಡ್ಡ ಮಟ್ಟದಲ್ಲಿ ಇದನ್ನು ಮಾಡಲು ಒಂದು ದೂರದೃಷ್ಟಿಯಂತೂ ಖಂಡಿತವಾಗಿ ಇದೆ. ದೇಶದ ಪ್ರತಿಯೊಂದು ಪ್ರದೇಶದಲ್ಲೂ, ಸ್ಥಳೀಯ ತಳಿಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಯಾವುದಾದರೊಂದು ರೀತಿಯ ಸಂಘಸಂಸ್ಥೆ ಇರಲೇಬೇಕು ಎನ್ನುವುದು ನನ್ನ ಅಭಿಪ್ರಾಯ. ನಾವು ನಮ್ಮ ಜಾನುವಾರುಗಳನ್ನು ಮರಳಿ ನಮ್ಮ ಬದುಕಿನ ಭಾಗವಾಗಿ ತರಬೇಕಾಗಿದೆ. ಮತ್ತಿದು ನಾವು ಮಾಡಬೇಕಾಗಿರುವ ಅತ್ಯಂತ ಮುಖ್ಯವಾದ ಕೆಲಸ.
 

Love & Grace