ಮಹಾಶಿವರಾತ್ರಿ 2019-ರಂದು ಸಾಧನಪಾದ ಕಾರ್ಯಕ್ರಮದ ಸಮಾಪನೆ

ಸುಮಾರು 7 ತಿಂಗಳ ತೀವ್ರತರವಾದ ಸಾಧನೆಯ ನಂತರ, ಮೊದಲ ಸಾಧನಪಾದ ಕಾರ್ಯಕ್ರಮವು ಮಹಾಶಿವರಾತ್ರಿಯಂದು ಪರಿಸಮಾಪ್ತಿಗೊಂಡಿತು. ಸದ್ಗುರುಗಳು ಇಲ್ಲಿ ಆಂತರಿಕ ಬೆಳವಣಿಗೆಗೆ ಸಮಯವನ್ನು ವಿನಿಯೋಗಿಸುವುದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾರೆ ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
 

2018-ರ ಗುರು ಪೌರ್ಣಮಿಯಂದು ಈಶ ಯೋಗ ಕೇಂದ್ರದಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರೊಂದಿಗೆ ಆರಂಭವಾದ ಮೊದಲ ಸಾಧನಪಾದ ಕಾರ್ಯಕ್ರಮವು ಮಹಾಶಿವರಾತ್ರಿ 2019-ರಂದು ಅಂತ್ಯಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಯೋಗಾಭ್ಯಾಸಗಳು ಮತ್ತು ಸ್ವಯಂ-ಸೇವೆಯನ್ನು ಒಳಗೊಂಡಂತಹ ತೀವ್ರವಾದ ಸಾಧನೆಯಿಂದ ಕೂಡಿದ ದಿನಚರಿಯನ್ನು ಅನುಸರಿಸುತ್ತ ಏಳು ತಿಂಗಳುಗಳ ಕಾಲ ಯೋಗ ಕೇಂದ್ರದಲ್ಲಿ ತಂಗಿದ್ದರು.

 

This month, the participants were surprised by a long-awaited session with Sadhguru, filled with laughter and tears of joy.

ಸದ್ಗುರು: ನೀವೆಲ್ಲರೂ ಈ ಸಾಧನಪಾದವನ್ನು ಅದ್ಭುತವಾಗಿ ಮಾಡಿದ್ದೀರಿ. ನಾನಿದನ್ನು ಬಹಳವಾಗಿ ಶ್ಲಾಘಿಸುತ್ತೇನೆ. ಯುವಜನರು ಅವರು ಮಾಡಬಾರದಂತಹ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಈ ಕಾಲದಲ್ಲಿ, ಆ ವಯೋಮಾನದಲ್ಲಿರುವ ಅನೇಕರನ್ನು ಇಲ್ಲಿ ನೋಡುತ್ತಿರುವುದು ಅದ್ಭುತವೇ ಸರಿ. ನಾನು ಬೆಳೆದು ದೊಡ್ಡವನಾಗುತ್ತಿದ್ದಾಗ, ನನ್ನ ಸುತ್ತಲಿದ್ದ ಹಲವರು ಅನೇಕ ವೈವಿಧ್ಯಮಯ ವಿಷಯಗಳಲ್ಲಿ ತೊಡಗಿಕೊಂಡಿದ್ದರು. ನನ್ನ ಒಳಗೇ ಏನಾದರೂ ಮಾಡಬೇಕೆಂದು ಹಂಬಲಿಸುತ್ತಿದ್ದ ಏಕೈಕ ಹುಚ್ಚ ನಾನೊಬ್ಬನೇ ಆಗಿದ್ದೆ. ಎಲ್ಲರಿಗೂ ಕೇವಲ ಬೇರೆಯವರೊಂದಿಗೆ ಏನನ್ನೋ ಮಾಡಬೇಕೆಂಬ ಇಚ್ಛೆಯಿತ್ತು. ಹಾಗಾಗಿ, ಈ ರೀತಿ ನಿಮ್ಮೆಲ್ಲರನ್ನೂ ಇಲ್ಲಿ ನೋಡುತ್ತಿರುವುದು ನನಗೆ ತುಂಬ ಸಂತಸವನ್ನು ತಂದಿದೆ.

ನೀವು ಸದಾ ಕಾಲ ನಿಮ್ಮ ಮಾನವೀಯತೆಯನ್ನು ಜೀವಂತವಾಗಿರಿಸಿಕೊಂಡರೆ, ನಾನು ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮೊಂದಿಗೆ ಹೆಜ್ಜೆ ಹಾಕುತ್ತೇನೆ - ಆದರೆ ನೀವದನ್ನು ಸದಾ ಜೀವಂತವಾಗಿರಿಸಿಕೊಳ್ಳಬೇಕು. ಬೇರೆಲ್ಲಾ ಜೀವಿಗಳು ತಮ್ಮ ಸಹಜಪ್ರವೃತ್ತಿಯಿಂದ ಬದುಕುತ್ತವೆ. ಅವು ತಮ್ಮ ಸಹಜಪ್ರವೃತ್ತಿಯ ಕಾರಣ, ಸದಾಕಾಲ ತಮ್ಮದೇ ಆದ ರೀತಿಯಲ್ಲಿ ತಮ್ಮ ಗಡಿಗಳನ್ನು ಸ್ಥಾಪಿಸುತ್ತಿರುತ್ತವೆ. ಮನುಷ್ಯನೆಂದರೆ, ಅವನು ಅಥವಾ ಅವಳು, ತನ್ನ ಪರಿಮಿತಿಯನ್ನು ಪ್ರಜ್ಞಾಪೂರ್ವಕವಾಗಿ ಅಳಿಸಿಹಾಕಬಹುದು ಎಂದರ್ಥ - ಅವರು ಗಡಿಯಿಲ್ಲದೆ ಬದುಕಬಲ್ಲರು. ದೈಹಿಕ ಕಾರಣಗಳಿಗಾಗಿ, ನಾವು ವಾಸಿಸುತ್ತಿರುವ ಪ್ರಪಂಚದ ಸ್ವರೂಪದಿಂದಾಗಿ, ನಾವು ನಮ್ಮ ಸುತ್ತ ಬೇಲಿಯನ್ನು ಹಾಕಿಕೊಳ್ಳಬಹುದು. ಆದರೆ ನಮ್ಮ ಹೃದಯಗಳಲ್ಲಿ ಯಾವುದೇ ಗಡಿಗಳಿಲ್ಲ.

ಹಾಗಾಗಿ, ದಯವಿಟ್ಟು, ಇದನ್ನು ನಿಮಗೋಸ್ಕರ ನಿಜವಾಗಿಸಿಕೊಳ್ಳುವುದು ಹೇಗೆಂದು ನೋಡಿ. ಸಾಧನಪಾದ ಅವಧಿಯು ಮುಗಿದರೆ, ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಸಾಧನ ಎಂದರೆ ಉಪಕರಣ. ಈ ದೇಹ, ಮನಸ್ಸು ಮತ್ತು ಪ್ರಾಣಶಕ್ತಿ ನಮ್ಮ ಉಪಕರಣಗಳು. ನಮ್ಮ ಬಳಿ ನಿಜವಾಗಿಯೂ ಇರುವ ಉಪಕರಣಗಳೆಂದರೆ ಇವುಗಳು ಮಾತ್ರ. ಇವು ಚುರುಕು ಮತ್ತು ಪರಿಣಾಮಕಾರಿಯಾಗದಿದ್ದರೆ ಜೀವನವು ಅಸಹ್ಯವಾಗುತ್ತದೆ. ನಿಮ್ಮ ಬಳಿ ಹಣ, ಸಂಪತ್ತು ಮತ್ತಿತರ ಅನೇಕ ವಿಷಯಗಳಿರಬಹುದು, ಆದರೆ ಈ ಜೀವವು ದೊಡ್ಡದಾದ ರೀತಿಯಲ್ಲಿ ಇರದಿದ್ದರೆ, ಆ ಎಲ್ಲ ವಿಷಯಗಳು ಉಪದ್ರವಗಳಷ್ಟೆ. ಸಾಧನೆಯ ಅರ್ಥವಿದು: ನಿಮ್ಮ ದೇಹ, ಮನಸ್ಸು ಮತ್ತು ಪ್ರಾಣಶಕ್ತಿಯನ್ನು ಒಂದು ಶಕ್ತಿಶಾಲಿಯಾದ ಉಪಕರಣದಂತೆ ಮಾಡಿಕೊಳ್ಳುವುದು. ನಾವು ಉಪಕರಣಗಳನ್ನು ಬಳಸಲು ಕಲಿಯಬೇಕಿದೆ. ನೀವು ಈ ಉಪಕರಣಗಳನ್ನು ಬಳಸಲು ಕಲಿತರೆ, ಸಹಜವಾಗಿಯೇ ನೀವು ನಿಮ್ಮ ಗಡಿಗಳನ್ನು ಅಳಿಸಿಹಾಕುತ್ತೀರಿ. ನೀವು ನಿಮ್ಮ ಗಡಿಗಳನ್ನು ಅಳಿಸಿಹಾಕಿದ್ದರೆ ಮತ್ತು ನಿಮ್ಮ ಬಳಿ ಶಕ್ತಿಶಾಲಿಯಾದ ಉಪಕರಣಗಳಿದ್ದರೆ ಈ ಭೂಮಿಯಲ್ಲಿ ನೀವೊಂದು ಅದ್ಭುತಶಕ್ತಿಯಾಗುತ್ತೀರಿ. ಅದನ್ನೇ ನಾವು ನೋಡಲು ಇಷ್ಟಪಡುವುದು, ಅದನ್ನು ಸಾಧ್ಯವಾಗಿಸೋಣ.

ಮೊಟ್ಟಮೊದಲನೆಯ ಸಾಧನಪಾದ ಕಾರ್ಯಕ್ರಮವು ಅಂತ್ಯಗೊಳ್ಳುತ್ತಿರುವಂತೆಯೇ, ಅದರಲ್ಲಿ ಪಾಲ್ಗೊಂಡವರ ಪಯಣವನ್ನು ಮೆಲುಕುಹಾಕುತ್ತಾ, ಅವರು ಮಹಾಶಿವರಾತ್ರಿ ಮತ್ತು ಸಂಯಮ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಂತೆಯೇ, ಈಶ ಯೋಗ ಕೇಂದ್ರದಲ್ಲಿ ಅವರ ಕೊನೆಯ ಕೆಲ ತಿಂಗಳುಗಳ ಬಗ್ಗೆ ತಿಳಿದುಕೊಳ್ಳೋಣ.

ಕೈವಲ್ಯಪಾದಕ್ಕೆ ಕಾಲಿಡುತ್ತಿದ್ದಂತೆ, ಕಳೆದ ಏಳು ತಿಂಗಳುಗಳು ಹೇಗೆ ಒಂದು ಸಂತೋಷಕರವಾದ ಜೀವನವನ್ನು ನಡೆಸಲು ಭದ್ರ ಬುನಾದಿಯನ್ನು ರಚಿಸಿವೆ ಎನ್ನುವುದರ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಪರ್ಯಾಲೋಚಿಸುತ್ತಾರೆ. 

ಸಂಕೇತ್, ಭಾರತ - ಮಹಾಶಿವರಾತ್ರಿ ಸಮನ್ವಯ ತಂಡಕ್ಕೆ ಸೇರ್ಪಡೆ

ತೀವ್ರ ಚಟುವಟಿಕೆ ಮತ್ತು ಸಂಪೂರ್ಣ ನಿಶ್ಚಲತೆ! ಸಾಧನಪಾದದಲ್ಲಿರುವಾಗ ಈ ಎರಡು ಅಂಶಗಳನ್ನು ಅನುಭವಿಸುವುದು ನನ್ನ ಕನಸು. ಮಹಾಶಿವರಾತ್ರಿಗಾಗಿ ಸ್ವಯಂ-ಸೇವೆಯಲ್ಲಿ ನಿರತವಾಗಿರುವ ಕಳೆದ ಕೆಲವು ವಾರಗಳಲ್ಲಿ ನಾನು ಆ ದಿಕ್ಕಿನಲ್ಲಿ ಹೋಗುತ್ತಿರುವುದನ್ನು ಕಂಡು ನನಗೆ ತುಂಬಾ ಖುಷಿಯಾಗಿದೆ. ಸಾಂಪ್ರದಾಯಿಕ ಯೋಗ ಕಾರ್ಯಾಗಾರದಲ್ಲಿ ಭಾಗವಹಿಸುವವರ ಪರಿಚಯ, ಮತ್ತು ಅವರನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರಿಗೆ ಬೆಂಬಲ ನೀಡುತ್ತಿರುವುದು ನನಗೊಂದು ಅದ್ಭುತ ಅನುಭವವನ್ನು ತಂದುಕೊಟ್ಟಿದೆ.

ಸ್ಟೀವನ್, ಜರ್ಮನಿ - ಸಾಧನಾಪಾದ ಕಾರ್ಯಕ್ರಮವನ್ನು ಸೇರಿಕೊಂಡ ಕಾರಣ

ಎಲ್ಲರೂ ಏನೋ ಒಂದನ್ನು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ನನಗೆ ಅದನ್ನು ಮಾಡಲು ಇಷ್ಟವಿರಲಿಲ್ಲ. ಹಾಗಾಗಿ ನಿಜವಾಗಿಯೂ ಬದಲಾವಣೆಯನ್ನುಂಟುಮಾಡುವ ಏನನ್ನಾದರೂ ಮಾಡಬೇಕು ಎನ್ನುವ ಇಚ್ಛೆಯಿತ್ತು. ಸಾಧನಪಾದದ ಮೂಲಕ ಊಟ, ದಿನಿಸಿ ಅಥವಾ ಯಾವುದರ ಬಗ್ಗೆಯೂ ಯೋಚಿಸದೆಯೇ, ನಮ್ಮಷ್ಟಕ್ಕೆ ನಮಗೆ ಇರಲು ಅವರು ಇಲ್ಲಿ ಸ್ಥಳಾವಾಕಾಶವನ್ನು ಮಾಡಿಕೊಡುತ್ತಿದ್ದಾರೆ. ನೀವಿಲ್ಲಿ ಹಾಗೆ ಸುಮ್ಮನೆ, ಸ್ವಯಂ-ಸೇವೆಯನ್ನು ಮಾಡುತ್ತ, ಆನಂದದಿಂದ ಇರಬಹುದು.

ಅನಿರುದ್ಧ್, ರಷ್ಯಾ - ಕೃತಜ್ಞತೆಯ ಅರ್ಥವನ್ನು ಅರಿಯುವುದು

ನನ್ನ ಸೇವೆಯ ಭಾಗವು ದಕ್ಷಿಣಭಾರತದ ಪ್ರವಾಸ ಯಾತ್ರೆಗಾಗಿ ರಷ್ಯಾದಿಂದ ಬಂದಿರುವಂತಹ ಒಂದು ದೊಡ್ಡ ಗುಂಪಿನೊಂದಿಗೆ ಜೊತೆಯಾಗಿರುವುದಾಗಿತ್ತು. ಈ ಪ್ರಯಾಣದಲ್ಲಿ ಅವರ ಜೊತೆಯಿರುವುದು ನನ್ನನ್ನು ಹೆಚ್ಚು ಸಂತೋಷಭರಿತನನ್ನಾಗಿ ಮಾಡಿದೆ, ಏಕೆಂದರೆ ಊಟ ಅಥವಾ ನಿದ್ರೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲದೆ ನನ್ನ ಸಂಪೂರ್ಣ ಸಮಯವನ್ನು ಅವರ ಅನುಭವವನ್ನು ಹೆಚ್ಚಿಸಲು ನಾನೇನು ಮಾಡಬಹುದು ಎನ್ನುವುದಕ್ಕಾಗಿ ವಿನಿಯೋಗಿಸಬಹುದಾಗಿತ್ತು.

ಈ ಕಾರ್ಯಕ್ರಮದ ಭಾಗವಾಗಲು ಸಿಕ್ಕ ಅವಕಾಶಕ್ಕಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ. ನನ್ನಲ್ಲಿ ಸದಾಕಾಲ ಉಳಿಯುವಂತಹ ಒಂದು ವಿಷಯವೆಂದರೆ, ಅದು ಕೃತಜ್ಞತೆಯೆಂಬ ಪದದ ಅರ್ಥ.

ಪೌಲೀನ, ಮೆಕ್ಸಿಕೊ - ಸಂಭ್ರಮಾಚರಣೆ ಮತ್ತು ಹಳೆಯ ರೀತಿಗಳನ್ನು ಬಿಟ್ಟುಬಿಡುವುದು

ಭಾರತದ ಸಂಸ್ಕೃತಿಯ ಬಗ್ಗೆ ನನಗೆಂತಹ ಅಭಿಮಾನವೆಂದರೆ, ನಾನು ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ ಎಂದು ನನಗೆ ಖಾತ್ರಿಯಾಗಿದೆ! ಭಾರತ, ಒಂದು ದೇಶವಾಗಿ, ಒಂದು ರಾಷ್ಟ್ರವಾಗಿ - ಪ್ರತಿಯೊಂದು ಋತುವಿಗೆ, ಪ್ರತಿಯೊಂದು ದೇವರಿಗೆ, ಪ್ರಾಣಿಗೆ, ಸಸ್ಯಸಂಕುಲಕ್ಕೆ ಮತ್ತು ಎಲ್ಲದಕ್ಕಾಗಿಯೂ ಜನ ಬದುಕನ್ನು ಬಹಳಷ್ಟು ರೀತಿಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ.

ನನಗೆ ಸಾಧನಪಾದವೆಂದರೆ ಮುಕ್ತಿ - ಹಳೆಯ ರೀತಿಗಳಿಂದ ಮುಕ್ತಿ. ಮುಂಚೆ, ನಾನು ಎಲ್ಲಾ ಸಮಯದಲ್ಲೂ ಒತ್ತಡ, ಖಿನ್ನತೆಯಲ್ಲಿರುತ್ತಿದ್ದೆ ಅಥವಾ ಕೋಪಗೊಂಡಿರುತ್ತಿದ್ದೆ, ಎಲ್ಲದಕ್ಕೂ ಆತಂಕ ಪಡುತ್ತಿದ್ದೆ. ಸಾಧನಪಾದ ನನ್ನನ್ನು ಅದೆಲ್ಲದರಿಂದ, ಆ ನಿರಂತರವಾದ ಆತಂಕದ ಸ್ಥಿತಿಯಿಂದ ಮುಕ್ತಗೊಳಿಸಿದೆ.

ನೋರಾ, ಜರ್ಮನಿ / ಐರ್ಲೆಂಡ್ - ಆಶಾಭಂಗದಿಂದ ಪರಮಾನಂದದ ಕಡೆಗೆ

ನಾನು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿದ್ದೆ, ಬೇರೆ ಬೇರೆ ದೇಶಗಳಲ್ಲಿ ವಾಸ ಮಾಡುತ್ತಿದ್ದೆ. ಹಾಗಾಗಿ, ಯಾವಾಗಲೂ ಚಡಪಡಿಸುತ್ತಾ ಅವಿಶ್ರಾಂತಳಾಗಿರುತ್ತಿದೆ.

ಮುಂಚೆ ನನಗೆ ತಿಳಿದಿರದಿದ್ದ, ನನ್ನಲ್ಲಿದ್ದ ಬಹುದೊಡ್ಡ ಸಮಸ್ಯೆಯೆಂದರೆ, ನನಗಿದ್ದ ಉದ್ವೇಗ. 

ಹಾಗಾಗಿ ಈ ಏಳು ತಿಂಗಳ ಸಾಧನಪಾದ ನಿಜವಾಗಿಯೂ ನನಗೆ ಅದ್ಭುತವಾಗಿತ್ತು. ಮತ್ತು ನನಗೆ ಇಲ್ಲಿ ದೊರಕಿದ ಸಂತೋಷ, ಸ್ಪಷ್ಟತೆ ಮತ್ತು ಸಮತೋಲನದ ಭಾವ ನಿಜಕ್ಕೂ ನಂಬಲಾಗದ್ದು.

ಸಾಧನಪಾದ 2018-ರಲ್ಲಿ ಭಾಗವಹಿಸಿದ್ದವರ ಮುಂದಿನ ಹೆಜ್ಜೆಯೇನು?

ಇಲ್ಲಿನ ಅನುಭವದ ಸ್ಫೂರ್ತಿಯನ್ನು ಪಡೆದ ಕೆಲವರು, ಸದ್ಗುರುಗಳ ಮುಂಗಾಣ್ಕೆಯನ್ನು ನೆರವೇರಿಸಲು ಮತ್ತು ಸಾಧನಪಾದದ ಸಮಯದಲ್ಲಿ ಸ್ಥಾಪಿತವಾದ ಅನುಭವವನ್ನು ಆಳಗೊಳಿಸಿಕೊಳ್ಳಲು ಆಶ್ರಮದಲ್ಲಿ ಪೂರ್ಣಾವಧಿಯ ಸ್ವಯಂ-ಸೇವಕರಾಗಿ ಉಳಿಯಲಿದ್ದಾರೆ. ಇತರರು ಆಶ್ರಮದ ಚಟುವಟಿಕೆಗಳನ್ನು ಹೊರಗಿನಿಂದ ಬೆಂಬಲಿಸಲು ಯೋಜಿಸುತ್ತಿದ್ದಾರೆ ಅಥವಾ ಸಾಧನಪಾದ 2019 ಕಾರ್ಯಕ್ರಮವನ್ನು ಬೆಂಬಲಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ.

ಸಾಧನಪಾದ 2019-ಕ್ಕೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ!

ಈ ವರ್ಷ ಹೆಚ್ಚಿನ ಜನರಿಗೆ ಈ ಸಾಧ್ಯತೆಯು ಲಭ್ಯವಾಗುವಂತೆ ಸದ್ಗುರುಗಳು ದೊಡ್ಡ ಪ್ರಮಾಣದಲ್ಲಿ ಸಾಧನಪದವನ್ನು ರೂಪಿಸಿದ್ದಾರೆ. ಈ ಕಾರ್ಯಕ್ರಮವು ಗುರು ಪೌರ್ಣಮಿಯಂದು (ಜುಲೈ 2019) ಪ್ರಾರಂಭವಾಗಿ ಮಹಾಶಿವರಾತ್ರಿಯಂದು (ಫೆಬ್ರುವರಿ 2020) ಕೊನೆಗೊಳ್ಳುತ್ತದೆ.

ಹೆಚ್ಚಿನ ಮಾಹಿತಿಗಾಗಿ: + 91-83000 98777

Register Now