ಪ್ರಶ್ನೆ: ಸದ್ಗುರು ಪ್ರತಿದಿನ ನಾನು ನನ್ನ ಸುತ್ತಲೂ ಬಹಳಷ್ಟು ಖಾಯಿಲೆ ಮತ್ತು ಸಂಕಟಗಳನ್ನು ನೋಡುತ್ತಿರುತ್ತೇನೆ. ಅನೇಕ ಬಾರಿ, ಒಬ್ಬ ಮನುಷ್ಯ ಈ ರೀತಿಯಾಗಿ ಸಂಕಟವನ್ನೇಕೆಪಡಬೇಕು ಎಂಬ ವಿಷಯ ನನ್ನನ್ನು ಬಾಧಿಸುತ್ತದೆ. ಒಬ್ಬ ಮನುಷ್ಯ ಒಳ್ಳೆಯ ಆರೋಗ್ಯವನ್ನು ಅನುಭವಿಸುತ್ತಿರುತ್ತಾನೆ ಮತ್ತು ಇನ್ನೊಬ್ಬ ಅನಾರೋಗ್ಯದಿಂದ ಸಂಕಟಪಡುತ್ತಿರುತ್ತಾನೆ. ಯಾಕೆ ಅನಾರೋಗ್ಯ ಉಂಟಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತೀರಾ? ಅದು ಏನು ಮತ್ತು ಅದು ಎಲ್ಲಿಂದ ಬರುತ್ತದೆ?


ಸದ್ಗುರು: ಅನಾರೋಗ್ಯಕ್ಕೆ ಹಲವಾರು ಆಯಾಮಗಳಿವೆ. ಅನಾರೋಗ್ಯವೆಂದರೆ ನೀವು ಆರಾಮವಾಗಿಲ್ಲವೆಂದರ್ಥ. ನಿಮ್ಮ ಶರೀರಕ್ಕೆ ಹೇಗೆ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ತಿಳಿಯದಿದ್ದರೆ, ಜೀವಶಕ್ತಿಗಳು ಕ್ಷೋಭೆಗೊಳಗಾಗುತ್ತವೆ. ಉದಾಹರಣೆಗೆ, ಆಸ್ತಮಾ ಇರುವವರು ನಮ್ಮ ಈಶ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧ್ಯಾನ ಮತ್ತು ಕ್ರಿಯೆಗಳನ್ನು ಮಾಡಲು ಪ್ರಾರಂಭಿಸಿದಾಗ, ಹಲವರಿಗೆ ಅಸ್ತಮ ವಾಸಿಯಾಗುತ್ತದೆ. ಇದು ಏಕೆಂದರೆ ಕ್ರಿಯೆಯನ್ನು ಸ್ವಲ್ಪ ದಿನ ಅಭ್ಯಾಸ ಮಾಡಿದಾಗ ಅವರ ಜೀವಶಕ್ತಿಗಳು ಹೆಚ್ಚು ಸಂಘಟಿತವಾಗುತ್ತವೆ. ಇನ್ನು ಕೆಲವರಿಗೆ, ಅಸ್ತಮಾ ಭಾಗಶಃ ಹೋಗಬಹುದು. ಇದು ಏಕೆಂದರೆ ಅಸ್ತಮಾದ ಒಂದು ಭಾಗ ಕ್ಷೋಭೆಗೊಂಡ ಜೀವಶಕ್ತಿಯಿಂದ ಉಂಟಾಗಿರುತ್ತದೆ. ಇನ್ನೊಂದು ಭಾಗ ಆಳವಾದ ಕರ್ಮದ ಕಾರಣದಿಂದ ಉಂಟಾಗುತ್ತದೆ. ಇನ್ನು ಕೆಲವರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದಕ್ಕೆ ಕಾರಣ ಖಾಯಿಲೆಗೆ ಅತ್ಯಂತ ಬಲವಾದ ಕರ್ಮದ ಕಾರಣಗಳಿರುವುದು. ಬದಲಾಗದ ಹೊರಗಿನ ಪರಿಸ್ಥಿತಿಗಳೂ ಇದಕ್ಕೆ ಕಾರಣವಿರಬಹುದು.

ಅನಾರೋಗ್ಯವೆಂದರೆ ನೀವು ಆರಾಮವಾಗಿಲ್ಲವೆಂದರ್ಥ. ನಿಮ್ಮ ಶರೀರಕ್ಕೆ ಹೇಗೆ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ತಿಳಿಯದಿದ್ದರೆ, ಜೀವಶಕ್ತಿಗಳು ಕ್ಷೋಭೆಗೊಳಗಾಗುತ್ತವೆ.

ಕರ್ಮ ಹೇಗೆ ಅನಾರೋಗ್ಯವನ್ನು ಉಂಟುಮಾಡುತ್ತದೆ? ಪ್ರಾರಬ್ಧ ಎನ್ನುವುದೊಂದಿದೆ, ಹಾಗೆಂದರೆ ಈ ಜನ್ಮಕ್ಕೆ ಹಂಚಿಕೆಯಾದ ಕರ್ಮ. ಪ್ರಾರಬ್ಧ ಕರ್ಮ ನಿಮ್ಮ ಮನಸ್ಸು, ಶರೀರ ಮತ್ತು ಇಂದ್ರಿಯ ಜ್ಞಾನದಲ್ಲಿ ಅಡಕವಾಗಿರುತ್ತದೆ, ಆದರೆ ಅದರ ಆಳವಾದ ದಾಖಲೆ ಜೀವಶಕ್ತಿಯಲ್ಲಿರುತ್ತದೆ. ಮಾಹಿತಿಯು ಜೀವಶಕ್ತಿಯಲ್ಲಿ ದಾಖಲಾಗುವುದು ಹೇಗೆ? ಇದು ನನಗೆ ಒಂದು ಜೀವಂತ ಅನುಭವವಾಗಿದೆ. ಇದು ವೈಜ್ಞಾನಿಕವಾಗಿ ಅನ್ವೇಷಿಸಲ್ಪಟ್ಟಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಎಂದೋ ಒಂದು ದಿನ ವಿಜ್ಞಾನವು ಇದನ್ನು ತಿಳಿಯುವ ಮಾರ್ಗವನ್ನು ಕಂಡು ಹಿಡಿದುಕೊಳ್ಳುತ್ತದೆ ಎಂಬುದು ನನಗೆ ಗೊತ್ತು. ಒಂದು ಕಾಲದಲ್ಲಿ ನಾವು ದಾಖಲಿಸಿಡಬೇಕು ಎನ್ನುವುದನ್ನು ಕಲ್ಲಿನ ಮೇಲೆ ಕೆತ್ತಿ ಇಡುತ್ತಿದ್ದೆವು. ಅಲ್ಲಿಂದ, ನಾವು ಪುಸ್ತಕಗಳಲ್ಲಿ ಬರೆದಿಡುವುದನ್ನು ಕಲಿತೆವು ಮತ್ತು ಈಗ ಡಿಸ್ಕ್‍ಗಳಲ್ಲಿ ಮತ್ತು ಚಿಪ್‍ಗಳಲ್ಲಿ ಮಾಹಿತಿಯನ್ನು ಶೇಖರಿಸಿಡುತ್ತಿದ್ದೇವೆ. ಒಂದು ಸಾವಿರ ಕಲ್ಲಿನ ಬಂಡೆಗಳ ಮೇಲೆ ಬರೆದಿಡುವುದನ್ನು ಒಂದು ಪುಸ್ತಕದಲ್ಲಿ ಬರೆದಿಡಬಹುದು. ಒಂದು ಸಾವಿರ ಪುಸ್ತಕಗಳಲ್ಲಿ ಬರೆದಿಡಬಹುದಾದದ್ದನ್ನು ಒಂದು ಡಿಸ್ಕ್‍‍ನಲ್ಲಿ ಶೇಖರಿಸಿಡಬಹುದು. ಒಂದು ಸಾವಿರ ಡಿಸ್ಕ್‍ಗಳಲ್ಲಿ ಶೇಖರಿಸಿಡಬಹುದಾದದ್ದನ್ನು ಒಂದು ಸಣ್ಣ ಚಿಪ್ನಲ್ಲಿ ಇಡಬಹುದು. ಮುಂದೊಂದು ದಿನ, ಲಕ್ಷಾಂತರ ಚಿಪ್‍ಗಳಲ್ಲಿ ಶೇಖರಿಸಿಡಬಹುದಾದ ಮಾಹಿತಿಯನ್ನು ಸ್ವಲ್ಪ ಶಕ್ತಿಯಲ್ಲಿ ಶೇಖರಿಸಿಡಬಹುದು. ಅದು ಸಾಧ್ಯ ಎಂದು ನನಗೆ ಗೊತ್ತು ಯಾಕೆಂದರೆ ನನ್ನಲ್ಲಿ ಯಾವಾಗಲೂ ಆಗುತ್ತಿರುತ್ತದೆ, ಮತ್ತು ಅದು ಎಲ್ಲರಲ್ಲೂ ಆಗುತ್ತಿರುತ್ತದೆ. ಜೀವಶಕ್ತಿಯು ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಪ್ರತಿಯೊಬ್ಬರ ಜೀವಶಕ್ತಿ ಅಥವಾ ಪ್ರಾಣಶಕ್ತಿಯು ಒಂದೇ ರೀತಿಯಲ್ಲಿ ವರ್ತಿಸುವುದಿಲ್ಲ. ಅದು ಕರ್ಮ ಬಂಧನದಂತೆ ಕೆಲಸ ಮಾಡುತ್ತಿರುತ್ತದೆ. ಅತ್ಯಂತ ಆಳವಾದ ದಾಖಲೀಕರಣ ಜೀವಶಕ್ತಿಯಲ್ಲಿರುತ್ತದೆ. ಇದು ಕರ್ಮದ ಸಂಗ್ರಹಗಳಿದ್ದಂತೆ. ನೀವು ಮನಸ್ಸನ್ನು ಕಳೆದುಕೊಂಡರೂ, ಅದು ಇನ್ನೂ ಶರೀರದಲ್ಲೇ ಇರುತ್ತದೆ. ನೀವು ನಿಮ್ಮ ಶರೀರವನ್ನು ಕಳೆದುಕೊಂಡರೂ, ಅದು ಇನ್ನೂ ಜೀವಶಕ್ತಿಯಲ್ಲಿರುತ್ತದೆ.

ಜೀವಶಕ್ತಿಯ ಹಂಚಿಕೆಗಳನ್ನು ಉಪಯೋಗಿಸಿ ಮುಗಿಸುವುದು

ಜೀವಶಕ್ತಿಗೆ ಹಂಚಿಕೆಯ ವ್ಯವಸ್ಥೆಗಳಿರುತ್ತವೆ. ಇದರಲ್ಲಿ ಅನೇಕ ಸಂಕೀರ್ಣತೆಗಳಿರುತ್ತವೆ ಆದರೆ ಅದನ್ನು ಸರಳವಾಗಿ ಹೇಳುವುದಾದರೆ, ಚಟುವಟಿಕೆಗೆ ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿ ಹಂಚಿಕೆಯಾರುತ್ತದೆ, ಭಾವನಗಳಿಗೆ ಒಂದಷ್ಟು ಶಕ್ತಿ ಹಂಚಿಕೆಯಾಗಿರುತ್ತದೆ, ಇನ್ನೊಂದಷ್ಟು ಶಕ್ತಿ ನಿಮ್ಮ ಆಲೋಚನಾ ಪ್ರಕ್ರಿಯೆಗೆ ಮತ್ತು ಮತ್ತೊಂದಷ್ಟು ಶಕ್ತಿ ನಿಮ್ಮೊಳಗಿನ ಅನುಭವಾತ್ಮಕ ಆಯಾಮಕ್ಕೆ ಹಂಚಿಕೆಯಾಗಿರುತ್ತದೆ. ಜನರು ಇಂದು ಜೀವಿಸುತ್ತಿರುವ ರೀತಿಯಲ್ಲಿ, ಅವರ ಭಾವನೆಗಳು ಪೂರ್ತಿಯಾಗಿ ಅಭಿವ್ಯಕ್ತಿಯನ್ನು ಪಡೆಯುತ್ತಿಲ್ಲ. ಜೀವಶಕ್ತಿಯ ಆ ಭಾಗ, ಅಭಿವ್ಯಕ್ತಗೊಳ್ಳದ ಭಾವನೆ, ಬೇರೇನೂ ಆಗುವುದಿಲ್ಲ. ಅದು ಒಂದೋ ಭಾವನಾತ್ಮಕ ಅಭಿವ್ಯಕ್ತಿಯನ್ನು ಪಡೆಯಬೇಕು ಅಥವಾ ಒಳಮುಖಗೊಂಡು ನಿಮ್ಮೊಳಗೆ ಹುಚ್ಚು ಕೆಲಸಗಳನ್ನು ಮಾಡಬೇಕು. ಆದ್ದರಿಂದಲೇ ಪಾಶ್ಚಾತ್ಯದೇಶಗಳಲ್ಲಿ ಅಷ್ಟೊಂದು ಮಾನಸಿಕ ಸಮಸ್ಯೆಗಳು.

ಆಧುನಿಕ ಮನಸ್ಸು ಹಿಂದೆಂದೂ ಇಲ್ಲದ ಒಂದು ರೀತಿಯ ಚಿತ್ತ ವಿಕೃತಿಯಿಂದ ಬಳಲುತ್ತಿದೆ ಏಕೆಂದರೆ ಮನುಷ್ಯನು ತನ್ನ ಶರೀರವನ್ನು ಬಳಸುವುದನ್ನು ದೊಡ್ಡ ಪ್ರಮಾಣದಲ್ಲಿ ನಿಲ್ಲಿಸಿ ಬಿಟ್ಟಿದ್ದಾನೆ.

ಮೂವರು ಅಮೆರಿಕನ್ನರಲ್ಲಿ ಒಬ್ಬರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಹೇಳಲಾಗುತ್ತದೆ. ಇದಕ್ಕಿರುವ ಮುಖ್ಯ ಕಾರಣಳಲ್ಲಿ ಒಂದು ಆ ಸಂಸ್ಕೃತಿಗಳಲ್ಲಿ ಭಾವನಾತ್ಮಕ ಅಭಿವ್ಯಕ್ತಿಗೆ ಅವಕಾಶವಿಲ್ಲದಿರುವಿಕೆ. ಅಲ್ಲಿ ಭಾವನಾತ್ಮಕವಾದ ಯಾವುದೇ ಸಂಗತಿಗಳನ್ನು ಒಂದು ದೌರ್ಬಲ್ಯವೆಂದು ತಿಳಿಯಲಾಗಿದೆ, ಹಾಗಾಗಿ ಅದನ್ನು ದಮನಿಸಿಡಲಾಗಿದೆ. ಜಗತ್ತಿನಲ್ಲಿ ಶೇಕಡಾ ತೊಂಭತ್ತರಷ್ಟು ಅಥವಾ ಇನ್ನೂ ಹೆಚ್ಚಿನ ಪ್ರಮಾಣದ ಜನರು, ತಮ್ಮ ಭಾವನೆಗಳನ್ನು ಪೂರ್ತಿಯಾಗಿ ಅಭಿವ್ಯಕ್ತಿಸುವ ಮಾರ್ಗವನ್ನು ಕಂಡುಕೊಳ್ಳುವುದಿಲ್ಲ. ಅವರು ತಮ್ಮ ಪ್ರೀತಿ, ದುಃಖ, ಸಂತೋಷಗಳ ಬಗ್ಗೆ ಹೆದರುತ್ತಾರೆ- ಅವರು ಪ್ರತಿಯೊಂದಕ್ಕೂ ಹೆದರುತ್ತಾರೆ. ಜೋರಾಗಿ ನಗುವುದು ಒಂದು ಸಮಸ್ಯೆ, ಜೋರಾಗಿ ಅಳುವುದು ಒಂದು ಸಮಸ್ಯೆ – ಎಲ್ಲವೂ ಒಂದು ಸಮಸ್ಯೆ. ಅವರು ಇದನ್ನು “ಆಧುನಿಕ ಸಂಸ್ಕೃತಿ” ಎಂದು ಕರೆಯುತ್ತಾರೆ. ಇದು ನಿರ್ಬಂಧಿತ ಸಂಸ್ಕೃತಿ ಎಂದು ನಾನು ಕರೆಯುತ್ತೇನೆ, ಇದು ನಿಮ್ಮನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತದೆ. ನಿಮ್ಮ ಭಾವನೆಗಳು ಪೂರ್ತಿಯಾಗಿ ಅಭಿವ್ಯಕ್ತಿಯನ್ನು ಕಂಡುಕೊಳ್ಳದಿದ್ದರೆ, ಆ ಶಕ್ತಿಯು ನಿಮ್ಮೊಳಗೆ ತಿರುಗಿ ನಿಮಗೆ ಅಪಾರವಾದ ಹಾನಿಯನ್ನುಂಟುಮಾಡುತ್ತದೆ.

ಇನ್ನೊಂದು ಅಂಶವೆಂದರೆ ಆಧುನಿಕ ಜೀವನ ಶೈಲಿಯಲ್ಲಿ ಚಟುವಟಿಕೆಯ ಮಟ್ಟ ನಾಟಕೀಯವಾಗಿ ಕಡಿಮೆಯಾಗಿದೆ. ಜನರು ತಮ್ಮ ಶರೀರವನ್ನು ಮೊದಲು ಉಪಯೋಗಿಸಿದಂತೆ ಉಪಯೋಗಿಸುತ್ತಿಲ್ಲ. ಆದರೆ ಭೌತಿಕ ಶರೀರವು ಇಂದಿಗೂ ಸಹ ನಿಮ್ಮಲ್ಲಿ ಪ್ರಧಾನವಾದ ಭಾಗವಾಗಿದೆ, ಹಾಗಾಗಿ ಪ್ರಾರಬ್ಧ ಕರ್ಮದ ಅತಿ ಹೆಚ್ಚಿನ ಪ್ರಮಾಣ ಚಟುವಟಿಕೆಗೆ ಹಂಚಿಕೆಯಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಇದರ ಪ್ರಮಾಣ ವ್ಯತ್ಯಾಸವಾಗಬಹುದು, ಆದರೆ ಸಾಮಾನ್ಯವಾಗಿ ಇದು ಹೀಗೆ ಇರುತ್ತದೆ. ಈ ಬಳಕೆಯಾಗದ ಶಕ್ತಿ ಅಲ್ಲೇ ಇದ್ದರೆ, ಅದು ಸುಲಭವಾಗಿ ರೋಗವನ್ನು ಉಂಟುಮಾಡಬಲ್ಲುದು. ಆಧುನಿಕ ಮನಸ್ಸು ಹಿಂದೆಂದೂ ಇಲ್ಲದ ಒಂದು ರೀತಿಯ ಚಿತ್ತ ವಿಕೃತಿಯಿಂದ ಬಳಲುತ್ತಿದೆ ಏಕೆಂದರೆ ಮನುಷ್ಯನು ತನ್ನ ಶರೀರವನ್ನು ಬಳಸುವುದನ್ನು ದೊಡ್ಡ ಪ್ರಮಾಣದಲ್ಲಿ ನಿಲ್ಲಿಸಿ ಬಿಟ್ಟಿದ್ದಾನೆ. ನೀವು ತೀವ್ರವಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ನಿಮ್ಮ ನರವಿಕಾರಗಳು ಬಳಕೆಯಾಗಿ ಹೋಗುತ್ತದೆ ಏಕೆಂದರೆ ಅಲ್ಲಿ ನಿಮ್ಮ ನರಗಳ ಶಕ್ತಿ ಬಳಕೆಯಾಗುತ್ತದೆ. ಆದರೆ ಆಧುನಿಕ ಮನುಷ್ಯನು ಹಿಂದೆಂದಿಗಿಂತಲೂ ಹೆಚ್ಚು ನಿಷ್ಕ್ರಿಯತೆ ಮತ್ತು ಚಿತ್ತವಿಕಾರಕ್ಕೆ ಒಳಗಾಗುತ್ತಿದ್ದಾನೆ. ದೈಹಿಕ ಚಟುವಟಿಕೆಗೆ ಹಂಚಿಕೆಯಾಗಿರುವ ಶಕ್ತಿಯು ಬಳಕೆಯಾಗರುವುದರಿಂದ ಪ್ರತಿಯೊಬ್ಬರೂ ಒಂದು ಹಂತದ ಚಿತ್ತ ವಿಕಾರಕ್ಕೆ ಒಳಗಾಗುತ್ತಿರುವುದು ಸಮಾಜದಲ್ಲಿ ಒಂದು ಸಹಜ ಸಂಗತಿಯಾಗಿ ಬಿಟ್ಟಿದೆ. ದೈಹಿಕ ಚಟುವಟಿಕೆ ಅತ್ಯಂತ ಕಡಿಮೆಯಾಗಿರುವುದರಿಂದ ಅದು ಬಂಧಿಯಾಗಿಬಿಟ್ಟಿದೆ. ಉನ್ನತ ಮಟ್ಟದ ಚಟುವಟಿಕೆಯಲ್ಲಿ ತೊಡಗಿರುವ ಜನರನ್ನು ನೀವು ನೋಡಿದರೆ- ಉದಾಹರಣೆಗೆ ಪರ್ವತಾರೋಹಣದಂತಹ ಕ್ರೀಡೆಗಳಲ್ಲಿ ತೊಡಗಿರುವವರಲ್ಲಿ – ದೈಹಿಕ ಚಟುವಟಿಕೆಯಲ್ಲಿ ಶಕ್ತಿಯು ಪೂರ್ತಿಯಾಗಿ ಉಪಯೋಗವಾಗುವುದರಿಂದ ಒಂದು ವಿಭಿನ್ನ ಮಟ್ಟದ ಸಮತೋಲನ ಮತ್ತು ಶಾಂತಿಯನ್ನು ನೀವು ಕಾಣಬಹುದು. ನೀವು ಅಂತಹ ಮನುಷ್ಯ ಲೈಂಗಿಕತೆ ಮತ್ತು ಇತರೆ ದೈಹಿಕ ವಾಂಛೆಗಳಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕಾಣುವುದಿಲ್ಲ ಏಕೆಂದರೆ ಅವರ ಶಕ್ತಿಯ ಒಂದು ಅಂಶ ಪೂರ್ತಿಯಾಗಿ ಅಭಿವ್ಯಕ್ತಿಯನ್ನು ಪಡೆದುಕೊಂಡಿರುತ್ತದೆ.

ಈ ನಿಷ್ಕ್ರಿಯತೆ ಒಂದು ಫಲಿತಾಂಶವೆಂದರೆ ಅನಾರೋಗ್ಯ; ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಚಟುವಟಿಕೆಯ ಕೊರತೆ ಮತ್ತು ಬಂಧಿತವಾದ ಶಕ್ತಿಯು ಪ್ರಕ್ಷುಬ್ಧತೆಯನ್ನು ಉಂಟುಮಾಡುತ್ತದೆ. ಶರೀರದಲ್ಲಿನ ಉದ್ರಿಕ್ತತೆ ಕೆಲವರಲ್ಲಿ ದೈಹಿಕ ಅನಾರೋಗ್ಯವಾಗಿ ಬದಲಾಗಬಹುದು. ಇತರರಲ್ಲಿ, ಅದು ಅನಾರೋಗ್ಯವಾಗದೇ ಇರಬಹುದು ಆದರೆ ಅದು ಉದ್ರಿಕ್ತಗೊಂಡಿರುತ್ತದೆ ಮತ್ತು ಅಸೌಖ್ಯದ ಸ್ಥಿತಿಯಲ್ಲಿರುತ್ತದೆ. ಅವರ ಜೀವಶಕ್ತಿಗಳು ಯಾವಾಗಲೂ ಒಳಗೇ ಹೋರಾಡುತ್ತಿರುತ್ತವೆ. ಅವು ಸುಮ್ಮನೆ ಕುಳಿತುಕೊಳ್ಳುವುದೂ ಇಲ್ಲ. ನೀವು ಜನರನ್ನು ಗಮನಿಸಿದರೆ, ಅವರು ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವ ರೀತಿಯು ಅವರು ಆರಾಮವಾಗಿಲ್ಲವೆಂಬುದನ್ನು ತೋರಿಸುತ್ತದೆ. ಅವರಲ್ಲಿ ಕೇವಲ ರೂಢಿಸಿಕೊಂಡಿರುವ ಘನತೆಯನ್ನು ಅಳವಡಿಸಿಕೊಂಡಿರುತ್ತಾರೆ – ಹೇಗೆ ನಡೆಯಬೇಕು, ಹೇಗೆ ನಿಂತುಕೊಳ್ಳಬೇಕು ಮತ್ತು ಹೇಗೆ ಕುಳಿತುಕೊಳ್ಳಬೇಕು. ಆದರೆ ನೀವು ಈ ರೀತಿಯಲ್ಲಿ ನಿಮ್ಮ ಚಲನೆಗಳಲ್ಲಿ ಅಸೌಖ್ಯವನ್ನು ತೆಗೆದುಹಾಕಿದರೆ, ಅದು ನಿಮ್ಮ ಜೀವಶಕ್ತಿಯಲ್ಲಿ ಒತ್ತಡವನ್ನು ಸೃಷ್ಟಿಸುತ್ತಾ ಹೋಗುತ್ತದೆ ಏಕೆಂದರೆ ಅದು ಅಭಿವ್ಯಕ್ತಿಯನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ಅದು ಸುಲಭವಾಗಿ ಅಭಿವ್ಯಕ್ತಗೊಳ್ಳಬಹುದಾದ ಇನ್ನೊಂದು ಆಯಾಮಕ್ಕೆ ಬದಲಾಗುತ್ತದೆ, ಹಾಗಾಗಿ ಅನಾರೋಗ್ಯವುಂಟಾಗುತ್ತದೆ ಏಕೆಂದರೆ ಶಕ್ತಿಯು ಅಂತರ್ಮುಖಗೊಳ್ಳುತ್ತದೆ.

ನಮ್ಮ ಬ್ರಹ್ಮಚಾರಿಗಳು ಅಷ್ಟೊಂದು ಕೆಲಸದಲ್ಲಿ ತೊಡಗಿಕೊಂಡಿರುವುದಕ್ಕೆ ಇದು ಒಂದು ಕಾರಣ. ಯಾರಾದರೂ ಅವರ ಚಟುವಟಿಕೆಯ ಮಟ್ಟವನ್ನು ನೋಡಿದರೆ ಆಧ್ಯಾತ್ಮಿಕ ಸಾಧನೆಗೆ ಬಂದವರು ದಿನಕ್ಕೆ ಇಪ್ಪತ್ತು ಘಂಟೆಗಳ ಕಾಲ ಯಾಕೆ ಕೆಲಸ ಮಾಡುತ್ತಿದ್ದಾರೆ ಎಂದು ಆಶ್ಚರ್ಯಪಡುತ್ತಾರೆ. ಆಧ್ಯಾತ್ಮಿಕತೆ ಎಂದರೆ ಒಂದು ಮರದ ಕೆಳಗೆ ತೂಕಡಿಸುವುದು ಎಂದು ಜನರ ಮನಸ್ಸಿನಲ್ಲಿರುವ ಭಾವನೆಯಾಗಿದೆ. ಇದು ಹಾಗಲ್ಲ. ಅವರ ಕೆಲಸ ಅವರ ಆಧ್ಯಾತ್ಮಿಕ ಬೆಳವಣಿಗೆಯ ಭಾಗವಾಗಿದೆ. ಇದಕ್ಕೆ ಕಾರಣವೇನೆಂದರೆ, ಅವರು ತಮ್ಮ ಪ್ರಾರಬ್ಧ ಕರ್ಮದ ರೂಪದಲ್ಲಿ ಹಂಚಿಕೆಯಾಗಿರುವ ಎಲ್ಲಾ ಶಕ್ತಿಯನ್ನೂ ಬಳಸಿ ಮುಗಿಸಲಿ ಎನ್ನುವುದು ನನ್ನ ಉದ್ಧೇಶ. ಒಂದೈದು ವರ್ಷಗಳಲ್ಲಿ ಅವರು ಈ ಕರ್ಮವನ್ನು ಬಳಸಿ ಮುಗಿಸಿದರೆ, ನಂತರ ಚಟುವಟಿಕೆಯ ಅಗತ್ಯವಿರುವುದಿಲ್ಲ. ಆಗ ಚಟುವಟಿಕೆಯು ಒಂದು ಆಯ್ಕೆಯ ವಿಷಯವಾಗಿರುತ್ತದೆ, ನಿರ್ಬಂಧಿತವಾಗಿರುವುದಿಲ್ಲ. ನೀವು ಈಗ ಅವರಿಗೆ ಸುಮ್ಮನೆ ಕುಳಿತುಕೊಳ್ಳಲು ಹೇಳಿದರೆ, ಅವರು ಸಮ್ಮನೆ ಕುಳಿತುಕೊಳ್ಳುತ್ತಾರೆ. ಅಲ್ಲೇನೂ ಪ್ರಯಾಸವಿರುವುದಿಲ್ಲ.

ಚಟುವಟಿಕೆಯಿಂದ ಧ್ಯಾನದ ಕಡೆಗೆ

ನಾವು ಅದನ್ನೇ ಭಾವ ಸ್ಪಂದನ ಮತ್ತು ಸಂಯಮದಂತಹ ಉನ್ನತ ಕಾರ್ಯಕ್ರಮಗಳಲ್ಲಿ ಮಾಡುತ್ತಿದ್ದೇವೆ. ತೀವ್ರವಾದ, ಬೆನ್ನು ಮುರಿಯುವಷ್ಟು ಕೆಲಸಗಳ ಮೂಲಕ ಚಟುವಟಿಕೆಗೆ ಹಂಚಿಕೆಯಾಗಿರುವ ಶಕ್ತಿಯನ್ನು ಸಾಧಾರಣ ಜೀವನದಲ್ಲಿ ವ್ಯಯಿಸುವುದಕ್ಕಿಂತ ಶೀಘ್ರವಾಗಿ ಬಳಸಿ ಮುಗಿಸುತ್ತೀರಿ. ಇದು ನಿಮಗೆ ನಿಶ್ಚಲವಾಗಿ ಕುಳಿತುಕೊಳ್ಳುವ ಅವಕಾಶವನ್ನು ನೀಡುತ್ತದೆ. ನಂತರ ಧ್ಯಾನ ನಿಮ್ಮ ಸಹಜ ಗುಣವಾಗುತ್ತದೆ. ಚಟುವಟಿಕೆಗೆ ಹಂಚಿಕೆಯಾದ ಶಕ್ತಿ ಬಳಕೆಯಾಗದಿದ್ದರೆ, ನೀವು ಒಂದು ಕಡೆ ಕುಳಿತುಕೊಳ್ಳಲಾಗುವುದಿಲ್ಲ ಏಕೆಂದರೆ ಶಕ್ತಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತದೆ.

ಶರೀರ, ಮನಸ್ಸು, ಭಾವನೆ ಮತ್ತು ಜೀವಶಕ್ತಿಗಳು ಹದಗೊಳ್ಳಬೇಕು ಮತ್ತು ಅವುಗಳು ಬಳಕೆಯಾಗಬೇಕು.

ಅನಾರೋಗ್ಯಕ್ಕೆ ಇನ್ನಿತರ ಆಯಾಮಗಳೂ ಇವೆ. ನಿಮ್ಮ ಶಕ್ತಿಗಳು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಅನಾರೋಗ್ಯವನ್ನುಂಟು ಮಾಡುವುದಕ್ಕೆ ಕರ್ಮದ ಕಾರಣಗಳಿವೆ. ಜನರು ಕರ್ಮದ ಕಾರಣಗಳಿಂದ ಅನಾರೋಗ್ಯಕ್ಕೊಳಗಾದರೆ, ಅದು ಬೇರೆ ವಿಷಯ, ಆದರೆ ಜಗತ್ತಿನ ಬಹುತೇಕ ಜನರು ಅನಾರೋಗ್ಯಕ್ಕೊಳಗಾಗಬೇಕಾಗಿಲ್ಲ. ಇಂದು, ವೈದ್ಯಕೀಯ ವಿಜ್ಞಾನವು ಹಿಂದೆಂದಿಗಿಂತ ಬಹಳಷ್ಟು ಮುಂದುವರಿದಿದೆ, ಆದರೂ ಜನರು ಅನಾರೋಗ್ಯದಿಂದ ಮುಕ್ತರಾಗಿಲ್ಲ. ದೈಹಿಕ ಮತ್ತು ಮಾನಸಿಕ ಶಕ್ತಿಗಳೆರಡೂ, ಅವು ಎರಡೂ ದೊಡ್ಡ ಹಂಚಿಕೆಗಳಾದರೂ, ಉಪಯೋಗವಾಗುತ್ತಿಲ್ಲ. ಉಪಯೋಗವಾಗುತ್ತಿರುವ ಏಕೈಕ ಸಂಗತಿಯೆಂದರೆ ಮಾನಸಿಕಶಕ್ತಿ – ಅಂದರೆ ಆಲೋಚನೆಗೆ ಹಂಚಿಕೆಯಾಗಿರುವ ಶಕ್ತಿ. ಉದಾಹರಣೆಗೆ, ನಿಮ್ಮ ದೇಶದ ಆಯವ್ಯಯಕ್ಕೆ ಒಂದಷ್ಟು ಹಣ ಹಂಚಿಕೆಯಾಗಿದೆ ಎಂದು ಭಾವಿಸಿಕೊಳ್ಳೋಣ: ಶಿಕ್ಷಣಕ್ಕೆ ಇಷ್ಟು, ಅಭಿವೃದ್ಧಿಗೆ ಇಂತಿಷ್ಟು, ಉದ್ಯಮಕ್ಕೆ ಇಷ್ಟು, ಮತ್ತು ಇಂಧನಕ್ಕೆ ಇಷ್ಟು ಅಂತೆಲ್ಲಾ ಹಂಚಿಕೆಯಾಗಿದೆ ಎಂದುಕೊಳ್ಳೋಣ. ಇಂಧನ ಕ್ಷೇತ್ರಕ್ಕೆ ಮುಖ್ಯವಾಗಿ ಒಂದಷ್ಟು ಹಣ ಹಂಚಿಕೆಯಾಗಿ, ಅದು ಬಳಕೆಯಾಗಲಿಲ್ಲವಾದರೆ, ನಿಮ್ಮ ಆರ್ಥಿಕತೆಗೆ ಧಕ್ಕೆಯಾಗುತ್ತದೆ. ಶರೀರದಲ್ಲಿ ಆಗುತ್ತಿರುವುದೂ ಅದೇ. ಶರೀರ, ಮನಸ್ಸು, ಭಾವನೆ ಮತ್ತು ಜೀವಶಕ್ತಿಗಳು ಹದಗೊಳ್ಳಬೇಕು ಮತ್ತು ಅವುಗಳು ಬಳಕೆಯಾಗಬೇಕು. ಆಗ ಮಾತ್ರ ಜೀವನ ಎಲ್ಲಾ ಹಂತಗಳಲ್ಲೂ ದೃಢವಾಗಿ ನಿಲ್ಲುತ್ತದೆ ಮತ್ತು ಸಮತೋಲಿತ ಸಾಮರಸ್ಯದಿಂದ ಸಾಗುತ್ತದೆ.

Editor’s Note: Excerpted from Mystic’s Musings. Not for the faint-hearted, this book deftly guides us with answers about reality that transcend our fears, angers, hopes, and struggles. Sadhguru keeps us teetering on the edge of logic and captivates us with his answers to questions relating to life, death, rebirth, suffering, karma, and the journey of the Self. Download the sample pdf or purchase the ebook.