ಮಗುವಿನ ಅನಾರೋಗ್ಯವು ಪೋಷಕರಿಗೆ ಯಾವಾಗಲೂ ಒಂದು ದುಃಸ್ವಪ್ನವೇ ಸರಿ. ರೈತರಾದ ಪೊನ್ಮುತ್ತು ರವರು ಇದಕ್ಕೆ ಹೊರತಾಗಿರಲಿಲ್ಲ. ಆಗಾಗ್ಗೆ ಬರುತ್ತಿದ್ದ ಕಾಯಿಲೆಗಳು ಅವರ ಮಕ್ಕಳ ಆರೋಗ್ಯದ ಮೇಲೆ ಭಾರಿ  ಪರಿಣಾಮವನ್ನುಂಟು ಮಾಡುತ್ತಿದ್ದವು; ಇದರಿಂದ ಅವರು ಮತ್ತು ಅವರ ಹೆಂಡತಿ ಆತಂಕಕ್ಕೊಳಗಾಗಿದ್ದರು. ಅವರ ಮಕ್ಕಳ ನೋವು ಮತ್ತು ಸಂಕಟಗಳು ಕೇವಲ ಒಂದು ಅಂಶವಾಗಿತ್ತು. ಆಸ್ಪತ್ರೆಯ ಖರ್ಚು ವೆಚ್ಚದಿಂದ ಪೊನ್ಮುತ್ತು ಅವರ ತೊಂದರೆಗಳು ಹೆಚ್ಚಾಗಿದ್ದವು. ತರಕಾರಿ ಕೃಷಿಕರಾಗಿದ್ದರಿಂದ, ಒಳ್ಳೆಯ ವ್ಯಾಪಾರವಾದ ದಿನವೂ, ಅವರಿಗೆ ಮನೆ ನಡೆಸಲು ಸಾಕಷ್ಟು ಹಣವಿರುತ್ತಿರಲಿಲ್ಲ. ಮಕ್ಕಳಿಗೆ ಅನಾರೋಗ್ಯ ಬಾಧಿಸಿದಾಗ, ಅವರು ಮತ್ತವರ ಹೆಂಡತಿ ಹೇಗೋ ಕಷ್ಟ ಪಟ್ಟು ಹಣ ಹೊಂದಿಸುತ್ತಿದ್ದರು.

Ponmuthu | Saving India's Farmers by Saving India's Soils

 

ಈ ಅನಾರೋಗ್ಯದ ಕಾರಣ ದೂರವೇನೂ ಇರಲಿಲ್ಲ. ವಾಸ್ತವವಾಗಿ, ಅವರ ಮಕ್ಕಳ ಅನಾರೋಗ್ಯಕ್ಕೆ ಕಾರಣ ಪೊನ್ಮುತ್ತು ಅವರ ಸ್ವಂತ ಕೈಗಳೇ ಆಗಿದ್ದವು. "ನನ್ನ ಜಮೀನಿನಲ್ಲಿ ಕೀಟನಾಶಕಗಳನ್ನು ನಾನೇ ಸಿಂಪಡಿಸುತ್ತಿದ್ದೆ" ಎಂದು ಪೊನ್ಮುತ್ತು ವಿವರಿಸುತ್ತಾರೆ. "ನಾನು ಮನೆಗೆ ಹಿಂದಿರುಗಿದಾಗ, ನಾನು ಸರಿಯಾಗಿ ಕೈ ತೊಳೆದಿದ್ದರೂ, ನನ್ನ ಮಕ್ಕಳೊಂದಿಗೆ ಆಟವಾಡುವಾಗ ಅಥವಾ ಅವರಿಗೆ ಆಹಾರವನ್ನು ತಿನಿಸುವಾಗ ನನಗೆ ಈ ಆಲೋಚನೆ ಯಾವಾಗಲೂ ಇರುತ್ತಿತ್ತು." ಪೊನ್ಮುತ್ತು ಅವರ ಕೈಗಳೇ ತಪ್ಪಿತಸ್ಥರಾಗಿದ್ದರೂ ಅವರ ಕೈಗಳನ್ನು ಕಟ್ಟಿ ಹಾಕಿದಂತಿತ್ತು. "ನಾನು ಪರಿಹಾರವನ್ನು ಹುಡುಕುತ್ತಲೇ ಇದ್ದೆ" ಎಂದವರು ಹೇಳುತ್ತಾರೆ. "ಆದರೆ ಯಾವುದೇ ದಾರಿ ಕಾಣುತ್ತಿರಲಿಲ್ಲ."

ಮಾರಾಣಾಂತಿಕ ಸಿಂಪಡಣೆಗಳು

ಭಾರತದಲ್ಲಿ, ಕೃಷಿಯ ಪ್ರಮುಖ ಮಾದರಿ ರಾಸಾಯನಿಕ ಆಧಾರಿತವಾಗಿದೆ. ಮಣ್ಣಿಗೆ ರಸಗೊಬ್ಬರಗಳನ್ನು ಹೇರಳವಾಗಿ ಹಾಕಲಾಗುತ್ತದೆ ಮತ್ತು ಕೀಟನಾಶಕಗಳನ್ನು ಇತಿಮಿತಿಯಿಲ್ಲದೇ ಸಿಂಪಡಿಸಲಾಗುತ್ತದೆ. ರೈತರ ಹಣಕಾಸಿನ ಪರಿಸ್ಥಿತಿ ಎಷ್ಟು ಹದಗೆಟ್ಟಿರುತ್ತದೆಯೆಂದರೆ, ವೆಚ್ಚವನ್ನು ಕಡಿಮೆಮಾಡಿಕೊಳ್ಳಲು ಅವರೇ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಸುರಕ್ಷಾಕವಚ ಮತ್ತು ಕೈಗವಸುಗಳಂತಹ ವಸ್ತುಗಳ ಬಗ್ಗೆ ಅವರಿಗೆ ತಿಳಿದಿರುವುದೂ ಇಲ್ಲ.

Farmer spraying fertilizer | Saving India’s Farmers by Saving India’s Soils

 

ಹೊಲಗದ್ದೆಗಳಿಗೆ ಇಂತಹದೆಲ್ಲಾ ಮಾಡುವುದು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡುತ್ತದೆ ಎಂದಾಗಿ ಜನರು ಯೋಚಿಸಬಹುದು. ದುರದೃಷ್ಟವಶಾತ್, ಸತ್ಯವು ಬೇರೆಯೇ ಆಗಿದೆ. ಈ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚು. ಮೊದಲ ಕೆಲವು ವರ್ಷಗಳು ಬೆಳೆ ಇಳುವರಿ ಅಧಿಕವಾಗಿದ್ದರೂ, ಮಣ್ಣು ತನ್ನೆಲ್ಲಾ ಶಕ್ತಿಯನ್ನು ಶೀಘ್ರದಲ್ಲೇ ಕಳೆದುಕೊಳ್ಳುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಹೀಗಾದಾಗ ಇದು ಇಳುವರಿಯನ್ನು ಹೆಚ್ಚಿಸಲು ರೈತರು ಮತ್ತಷ್ಟು ರಾಸಾಯನಿಕಗಳನ್ನು ಮಣ್ಣಿನಲ್ಲಿ ಹಾಕಲು ನಿರ್ಬಂಧಿಸುತ್ತದೆ, ಇದರಿಂದಾಗಿ ವೆಚ್ಚವು ಮತ್ತಷ್ಟು ಹೆಚ್ಚಾಗುತ್ತದೆ. 

ರಾಸಾಯನಿಕಗಳಿಗೆ ಕೀಟಗಳು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತವೆ, ಹೀಗಾದಾಗ ಹೆಚ್ಚು ಅಥವಾ ವಿಭಿನ್ನ ಕೀಟನಾಶಕಗಳ ಅಗತ್ಯವಿರುತ್ತದೆ. ಪ್ರತಿ ಋತುವಿನಲ್ಲಿ ಆದಾಯ ಇಳಿಮುಖವಾಗುತ್ತದೆ, ಆದರೆ ರೈತರ ವೆಚ್ಚ ಹೆಚ್ಚಾಗುತ್ತದೆ. ಸ್ವಲ್ಪ ಸಮಯದಲ್ಲೇ, ರೈತರು ಬಂಜರು ಭೂಮಿ, ಸಾಲದ ಜೊತೆ ಸಿಲುಕಿ ಹತಾಶ ಭವಿಷ್ಯವನ್ನು ಎದುರು ನೋಡುವವರಾಗುತ್ತಾರೆ. ಇಂತ ಪರಿಸ್ಥಿತಿ ಇದ್ದಾಗ, 1995 ರಿಂದ ಭಾರತದಲ್ಲಿ 300,000 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಅಚ್ಚರಿಯ ವಿಷಯವೇನಲ್ಲ. 

ಸೆಗಣಿಯ ರಾಶಿ!

ಆದರೆ ಕೃಷಿಯನ್ನು ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಮತ್ತು ದೊಡ್ಡ ಪ್ರಮಾಣದ ರೈತರ ಆತ್ಮಹತ್ಯೆಯ ಪ್ರಕರಣಗಳು ಇತ್ತೀಚಿನ ವಿದ್ಯಮಾನವಷ್ಟೆ. ಹಾಗಾಗಿ, ಕೃಷಿ ಒಂದು ಉದ್ಯಮವಾಗುವುದಕ್ಕೆ ಮುನ್ನ, ರೈತರು ಇದನ್ನು ಹಿಂದೆ ಹೇಗೆ ನಿಭಾಯಿಸುತ್ತಿದ್ದರು? ಉತ್ತರ ಸೆಗಣಿಯಲ್ಲಿದೆ.

"ಮೇಲ್ಮಣ್ಣಿನಲ್ಲಿ ಇಂಗಾಲದ ಅಂಶವು 100 ಗ್ರಾಂ ಮಣ್ಣಿಗೆ 2%-ರಷ್ಟಿರಬೇಕು. ಆದರೆ ದೇಶದ ಧಾನ್ಯಕಣಜವಾದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಮೇಲ್ಮಣ್ಣಿನಲ್ಲಿ ಇಂಗಾಲದ ಅಂಶ ಕೇವಲ 0.05%-ರಷ್ಟಿದೆ.” ಎಂದು ಲಾಲ್ ಹೇಳುತ್ತಾರೆ.

ಇದಕ್ಕೆ ಇಂದಿನ ದಿನಗಳಲ್ಲಿ ಸಾವಯವ ಕೃಷಿ ಅಥವಾ ನೈಸರ್ಗಿಕ ಕೃಷಿ ಎಂದು ಕರೆಯಲಾಗುತ್ತದೆಯಾದರೂ, ವಾಸ್ತವದಲ್ಲಿ ಅದು ಸೆಗಣಿಯಷ್ಟೇ. ಹಸುವಿನ ಸಗಣಿ, ಮೇಕೆಯ ಸಗಣಿ ಇತ್ಯಾದಿಗಳನ್ನು ಒಳಗೊಂಡಿರುವ ಪ್ರಾಣಿಗಳ ತ್ಯಾಜ್ಯ. ಸರಿಯಾದ ರೀತಿಯಲ್ಲಿ ಇವುಗಳನ್ನು ಮಣ್ಣಿಗೆ ಹಾಕಿದಾಗ ಇದು ಮಣ್ಣನ್ನು ಬಹಳ ಫಲವತ್ತಾಗಿಸುತ್ತದೆ. ಮರಗಳ ಎಲೆಗಳು ಮತ್ತು ಕೊಂಬೆಗಳಂತಹ ತ್ಯಾಜ್ಯವೂ ಇದನ್ನು ಮಾಡುತ್ತದೆ. ಪ್ರಾಣಿ ಮತ್ತು ಸಸ್ಯ ತ್ಯಾಜ್ಯವು ಮಣ್ಣಿಗೆ ಇತರ ಅಂಶಗಳ ಜೊತೆಗೆ ಅತ್ಯಗತ್ಯವಾದ ಇಂಗಾಲವನ್ನು ಸೇರಿಸುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸುವುದಲ್ಲದೆ ಮಣ್ಣಿನ ನೀರಿನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನೂ ಸಹ ಸುಧಾರಿಸುತ್ತದೆ. 

ಅಮೇರಿಕಾದ ಓಹಿಯೋ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗದ ಗಣ್ಯ ಪ್ರಾಧ್ಯಾಪಕರು ಮತ್ತು ಯುಎನ್‌ಯು-ಫ್ಲೋರ್ಸ್‌ನ ಸಲಹಾ ಸಮಿತಿಯ ಮುಖ್ಯಸ್ಥರಾದ ರತನ ಲಾಲ್ ರವರು ಭಾರತದ ಕೃಷಿ ಪದ್ಧತಿಯಲ್ಲಿನ ಸಮಸ್ಯೆಗಳನ್ನು ವಿವರಿಸುತ್ತಾರೆ. ರೈತರು ಬೆಳೆ ಕಟಾವು ಮಾಡಿ, ಒಣ ಹುಲ್ಲನ್ನು ಭೂಮಿಗೆ ಹಾಕುವ ಬದಲು ಸುಡುವ ಅಭ್ಯಾಸವನ್ನು ಉಲ್ಲೇಖಿಸಿ, "ಇಳುವರಿಯ ನಂತರ ಭೂಮಿ ಏನನ್ನೂ ಮರಳಿ ಪಡೆಯುವುದಿಲ್ಲ, ಮಣ್ಣು ಬರಡಾಗುತ್ತಿದೆ" ಎಂದು ಅವರು ಹೇಳುತ್ತಾರೆ.  "ಮೇಲ್ಮಣ್ಣಿನಲ್ಲಿ ಇಂಗಾಲದ ಅಂಶವು 100 ಗ್ರಾಂ ಮಣ್ಣಿಗೆ 2%-ರಷ್ಟಿರಬೇಕು. ಆದರೆ ದೇಶದ ಧಾನ್ಯಕಣಜವಾದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಮೇಲ್ಮಣ್ಣಿನಲ್ಲಿ ಇಂಗಾಲದ ಅಂಶ ಕೇವಲ 0.05%-ರಷ್ಟಿದೆ ”ಎಂದು ಲಾಲ್ ಹೇಳುತ್ತಾರೆ.

ಯಾವುದೇ ವೆಚ್ಚವಿಲ್ಲದ ಬದಲಾವಣೆಗಳು

ಮಣ್ಣು ವಿಜ್ಞಾನದ ಇಂತಹ ಸೂಕ್ಷ್ಮತೆಗಳು ಪೊನ್ಮುತ್ತು-ರವರಿಗೆ ಬಹಳವಾಗಿ ಅಗತ್ಯವಿದ್ದರೂ, ಅದು ಅವರಿಗೆ ಲಭ್ಯವಿರಲಿಲ್ಲ. ಭಾರತದಲ್ಲಿ ಹಲವಾರು ಕೃಷಿ ಸಂಶೋಧನಾ ಸಂಸ್ಥೆಗಳಿದ್ದರೂ, ವಿಜ್ಞಾನವು ರೈತರ ಬಳಿ ತಲುಪುವಷ್ಟರಲ್ಲಿ ಎಲ್ಲೋ ಚದುರಿಹೋಗಿ ಕಳೆದುಹೋಗಿಬಿಡುತ್ತದೆ.

First Subhash Palekar Natural Farming training program, Dec 10, 2015, organised by Project GreenHandsFirst Subhash Palekar Natural Farming training program, Dec 10, 2015, organised by Project GreenHandsFirst Subhash Palekar Natural Farming training program, Dec 10, 2015, organised by Project GreenHands

 

ಹಸಿರು ಕೈಗಳ ಯೋಜನೆ (ಪ್ರಾಜೆಕ್ಟ್ ಗ್ರೀನ್‌ಹ್ಯಾಂಡ್ಸ್ - ಪಿಜಿಹೆಚ್ ) ಸೇರಿದಂತೆ  ಹಲವಾರು ಸಂಸ್ಥೆಗಳು ನೈಸರ್ಗಿಕ ಕೃಷಿ ವಿಧಾನಗಳನ್ನು ಭಾರತದ ಹೊಲಗದ್ದೆಗಳಿಗೆ ಮರಳಿ ತರಲು ಕಾರ್ಯೋನ್ಮುಖವಾಗಿವೆ.  2015 ರಲ್ಲಿ ಪಿಜಿಹೆಚ್ ಆಯೋಜಿಸಿದ್ದ ಸುಬಾಶ್ ಪಾಲೇಕರ್ ಅವರ ನೈಸರ್ಗಿಕ ಕೃಷಿ ಕುರಿತಾಗಿನ ಕಾರ್ಯಾಗಾರದಲ್ಲಿ ಪೊನ್ಮುತ್ತು ರವರು ಭಾಗವಹಿಸಿದ್ದರು. ಶ್ರೀ. ಪಾಲೇಕರ್ ಅವರ ವಿಧಾನವು ರಾಸಾಯನಿಕ ಮುಕ್ತ, ನೈಸರ್ಗಿಕ ಕೃಷಿಯನ್ನು ಒಳಗೊಂಡಿದ್ದು, ಅದರಿಂದ ರೈತನಿಗೆ ಯಾವ ವೆಚ್ಚವೂ ಇರುವುದಿಲ್ಲ. ಇದು ರೈತರು ತಮ್ಮ ಜಮೀನಿನ ಹೊರಗಿರುವ ಯಾವುದನ್ನೂ ಅವಲಂಬಿಸದೇ ಇರುವ ಸಮಗ್ರ ಕೃಷಿ ವಿಧಾನವಾಗಿದೆ.

First Subhash Palekar Natural Farming training program, Dec 10, 2015, organised by Project GreenHandsFirst Subhash Palekar Natural Farming training program, Dec 5, 2015, organised by Project GreenHandsFirst Subhash Palekar Natural Farming training program, Dec 10, 2015, organised by Project GreenHands

 

ಮಣ್ಣಿನ ಆರೋಗ್ಯವನ್ನು ಉಳಿಸಿಕೊಳ್ಳಲು ಮತ್ತು ಸುಧಾರಿಸಲು, ಕೀಟಗಳನ್ನು ನಿಯಂತ್ರಿಸಲು ಮತ್ತು ಇಳುವರಿಯನ್ನು ಹೆಚ್ಚಿಸಲು ನೈಸರ್ಗಿಕ ವಿಧಾನಗಳನ್ನು ಬಳಸಲಾಗುತ್ತದೆ, ಅಲ್ಲದೆ ರೈತರು ತಮ್ಮದೇ ಬೀಜಗಳನ್ನು ಬೆಳಸಲು ಮತ್ತು ಹಸುವಿನ ಸಗಣಿ, ಹಸುವಿನ ಮೂತ್ರ ಮತ್ತು ಇತರ ವಸ್ತುಗಳನ್ನು ಬಳಸಿ ನೈಸರ್ಗಿಕ ರಸಗೊಬ್ಬರಗಳನ್ನು ಉತ್ಪಾದಿಸುವುದಕ್ಕೂ ಸಾಧ್ಯವಾಗುತ್ತದೆ. ಶ್ರೀ ಪಾಲೇಕರ್ ಅವರ ಪ್ರಕಾರ, ಈ ಕೃಷಿ ವಿಧಾನ ಬಳಸಿದಾಗ, ಮೂವತ್ತು ಎಕರೆ ಕೃಷಿ ಪ್ರದೇಶಕ್ಕೆ ಒಬ್ಬ ರೈತನಿಗೆ ಬೇಕಿರುವುದು ಒಂದು ಸ್ಥಳೀಯ ದೇಶಿ ತಳಿಯ ಹಸುವಷ್ಟೆ.

ಬದಲಾವಣೆಗಳ ಮಹಾಪೂರ!

ಫಲಿತಾಂಶಗಳು ಎಲ್ಲರಿಗೂ ನೋಡಲು ಕಣ್ಣೆದುರೇ ಇವೆ. ಶ್ರೀ ಪಾಲೇಕರ್ ಅವರ ವಿಧಾನಗಳು ದೇಶಾದ್ಯಂತ ಯಶಸ್ವಿಯಾಗಿದ್ದು ಅವರ ಪ್ರಯತ್ನಗಳಿಗೆ 2016 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪೊನ್ಮುತ್ತು ಅವರು ತಮ್ಮ ಕೃಷಿಗಾರಿಕೆಯ ವಿಧಾನವನ್ನು ಬದಲಾಯಿಸಿದ ನಂತರ ಹೆಚ್ಚು ಸಂತೋಷಭರಿತರಾಗಿದ್ದಾರೆ. 

"ನನ್ನ ಮಕ್ಕಳು ನನ್ನದೇ ಹೊಲದಿಂದ ರಾಸಾಯನಿಕವಾಗಿ ಬೆಳೆದ ತರಕಾರಿಗಳನ್ನು ತಿಂದಾಗ, ಅವರು ಅನಾರೋಗ್ಯದಿಂದ ನರಳುತ್ತಿದ್ದರು. ಈಗ ಸಾವಯವವಾಗಿ ಬೆಳೆದ ತರಕಾರಿಗಳನ್ನು ತಿಂದು ಅವರು ತುಂಬಾ ಆರೋಗ್ಯವಾಗಿದ್ದಾರೆ ಮತ್ತವರಿಗೆ ಕಾಯಿಲೆಗಳೇ ಬರುತ್ತಿಲ್ಲ."

ಅವರು ಅನುಸರಿಸುವ ನೈಸರ್ಗಿಕ ಕೃಷಿಯ ಕಾರ್ಯವಿಧಾನವನ್ನು ಪೊನ್ಮುತ್ತು ಅವರು ವಿವರಿಸುತ್ತಾರೆ, “ನಾನು ಈರುಳ್ಳಿ ಬೆಳೆಯುತ್ತೇನೆ, ಮತ್ತು ಮಧ್ಯಂತರ ಬೆಳೆಯಾಗಿ ಮೂಲಂಗಿ, ಬೀಟ್ರೂಟ್ ಮತ್ತು ಮೆಣಸಿನಕಾಯಿಯನ್ನು ಬೆಳೆಯುತ್ತೇನೆ. ನಾನು ಸರದಿ ಬೆಳೆ ಬೆಳೆಯುವಿಕೆಯನ್ನೂ (ರಿಲೇ ಕ್ರಾಪಿಂಗ್) ಕೂಡ ಮಾಡುತ್ತೇನೆ, ಆದ್ದರಿಂದ ಮೂಲಂಗಿ ಕಟಾವಿಗೆ ಸಿದ್ಧವಾದಾಗ, ಟೊಮೆಟೊ ಹಣ್ಣಾಗಲು ಆರಂಭವಾಗಿರುತ್ತದೆಯಷ್ಟೆ.  ವರ್ಷದುದ್ದಕ್ಕೂ ನನಗೆ ಆದಾಯವಿದೆಯೆಂದು ಇದು ಖಚಿತಪಡಿಸುತ್ತದೆ. ರಿಲೇ ಕ್ರಾಪಿಂಗ್ ವಿಧಾನದಿಂದ, ಕೀಟಗಳ ಹಾವಳಿ ಮತ್ತು ಬೆಳೆಗಳು ರೋಗದಿಂದ ಪ್ರಭಾವಿತವಾಗುವ ಸಾಧ್ಯತೆಯು ಕಡಿಮೆಯಿರುತ್ತದೆ.” ಈ ಪ್ರಯೋಜನಗಳಲ್ಲದೆ, ಸಾವಯವ ಉತ್ಪನ್ನಗಳ ಅಂಗಡಿಗಳಲ್ಲಿ ಅವರ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನೂ ಸಹ ಪಡೆಯುತ್ತಿದ್ದಾರೆ.     

"ನನ್ನ ಮಕ್ಕಳು ನನ್ನದೇ ಹೊಲದಿಂದ ರಾಸಾಯನಿಕವಾಗಿ ಬೆಳೆದ ತರಕಾರಿಗಳನ್ನು ತಿಂದಾಗ, ಅವರು ಅನಾರೋಗ್ಯದಿಂದ ನರಳುತ್ತಿದ್ದರು. ಈಗ ಸಾವಯವವಾಗಿ ಬೆಳೆದ ತರಕಾರಿಗಳನ್ನು ತಿಂದು ಅವರು ತುಂಬಾ ಆರೋಗ್ಯವಾಗಿದ್ದಾರೆ ಮತ್ತವರಿಗೆ ಕಾಯಿಲೆಗಳೇ ಬರುತ್ತಿಲ್ಲ. ನಿಜ ಹೇಳಬೇಕೆಂದರೆ, ಕಳೆದ ಒಂಬತ್ತು ತಿಂಗಳಲ್ಲಿ, ಆಸ್ಪತ್ರೆಯ ಖರ್ಚುಗಳೇ ಇರಲಿಲ್ಲ.”

ಆಶಾಕಿರಣ

ಇತರ ಫಾರ್ಮ್-ಗಳಲ್ಲಿಯೂ ಇದೇ ರೀತಿಯ ಪವಾಡಗಳು ನಡೆಯುತ್ತಿವೆ! ಸಣ್ಣ ಈರುಳ್ಳಿ ಫಾರ್ಮ್ ಹೊಂದಿರುವ ದೇವಿಯವರು ಹೇಳುತ್ತಾರೆ, “ಪಾಲೇಕರ್‌ಜಿ ರೂಪದಲ್ಲಿ ಆಶಾಕಿರಣ ನನ್ನ ಜೀವನದಲ್ಲಿ ಪ್ರವೇಶಿಸಿತು. ನಾನು ರಾಸಾಯನಿಕ ಗೊಬ್ಬರವನ್ನು ಬಳಸಿ ವ್ಯವಸಾಯದಲ್ಲಿ ತೊಡಗಿದ್ದಾಗ, 70 ದಿನಗಳ ಈರುಳ್ಳಿ ಬೆಳೆಗಾಗಿ, ಹದಿಮೂರು ಬಾರಿ ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಹಾಕುತ್ತಿದ್ದೆ. ನನಗೆ ಲಾಭವೇನೂ ದಕ್ಕುತ್ತಿರಲಿಲ್ಲ, ಏಕೆಂದರೆ ಖರ್ಚುವೆಚ್ಚಗಳು ನನ್ನ  ಆದಾಯಕ್ಕೆ ಸಮನಾಗಿರುತ್ತಿತ್ತು. ನಿಜ ಹೇಳಬೇಕೆಂದರೆ, ಕೆಲವೊಮ್ಮೆ ನಾನು ಇತರ ಮೂಲಗಳಿಂದ ಹಣವನ್ನು ವ್ಯವಸಾಯಕ್ಕಾಗಿ ಬಳಸಬೇಕಿತ್ತು.” ಕೃಷಿಯು ಅವರಿಗೆ ಯೋಗ್ಯವಾದ ವೃತ್ತಿಯೇ ಅಥವಾ ಅದನ್ನವರು ಬಿಡಬೇಕೇ ಎಂದು ದೇವಿ ಆಗಾಗ್ಗೆ ಯೋಚಿಸುತ್ತಿದ್ದದರಲ್ಲಿ ಆಶ್ಚರ್ಯವಿರಲಿಲ್ಲ.

Devi, Farmer

 

ಆದರೆ ನೈಸರ್ಗಿಕ ಕೃಷಿ ಅದನ್ನೆಲ್ಲಾ ಬದಲಾಯಿಸಿದೆ. ಪೊನ್ಮುತ್ತು ಅವರಂತೆ ಹೆಚ್ಚಿನ ಆದಾಯವನ್ನು ಪಡೆಯುವುದರ ಜೊತೆಗೆ, ದೇವಿಯವರು ಇತರ ಪ್ರಯೋಜನಗಳ ಬಗ್ಗೆಯೂ ಸಹ ಹೇಳುತ್ತಾರೆ. “ಈರುಳ್ಳಿಯನ್ನು ರಾಸಾಯನಿಕ ವಿಧಾನಗಳನ್ನು ಬಳಸಿ ಬೆಳೆಸಿದಾಗ, ಅದು 15 ದಿನಗಳಲ್ಲಿ ಕೊಳೆಯಲು ಆರಂಭಿಸುತ್ತದೆ. ಆದರೆ ನೈಸರ್ಗಿಕ ವಿಧಾನಗಳೊಂದಿಗೆ, ಇದು 4 ತಿಂಗಳವರೆಗೆ ಕೆಡದೇ ಇರುತ್ತದೆ. ನೀರಿನ ಅವಶ್ಯಕತೆ ಮತ್ತು ನೀರಿನ ವೆಚ್ಚವೂ ಕಡಿಮೆಯಾಗಿದೆ. ಬೆಳೆಗಳಿಗೆ ನೀರುಣಿಸಲು ವಿಳಂಬವಾದರೂ ಸಹ, ಗಿಡಗಳು ಮೊದಲಿನಂತೆ ಬಾಡಿ ಹಾಳಾಗುವುದಿಲ್ಲ.” ದೇವಿಯವರ ಫಾರ್ಮ್ ಆ ಪ್ರದೇಶದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. “ಚಾಲಕರಾಗಿರುವ ನನ್ನ ಪತಿ ಈಗ ತಮ್ಮ ಬಿಡುವಿನ ವೇಳೆಯಲ್ಲಿ ಫಾರ್ಮ-ನಲ್ಲಿ ಕೆಲಸ ಮಾಡಲು ಬಹಳ ಉತ್ಸುಕರಾಗಿದ್ದಾರೆ. ನಾವು ಬಳಸುತ್ತಿರುವ ವಿಧಾನಗಳನ್ನು ನೋಡಲು ಅನೇಕ ಜನರು ನನ್ನ ಫಾರ್ಮ್-ಗೆ ಬರುತ್ತಿದ್ದಾರೆ.”

ಕ್ರಿಮಿಕೀಟಗಳೇ ತೊಲಗಿಹೋಗಿ!

ಮಣ್ಣಿನ ಫಲವತ್ತತೆಯನ್ನು ಸುಧಾರಿಸುವುದರ ಜೊತೆಗೆ, ಕ್ರಿಮಿಕೀಟಗಳ ಹಾವಳಿಯನ್ನು ಎದುರಿಸಲು ನೈಸರ್ಗಿಕ ಕೃಷಿ ವಿಧಾನವು ಬಹಳ ಪರಿಣಾಮಕಾರಿ. ನೈಸರ್ಗಿಕ ಕೃಷಿ ಜಗತ್ತಿಗೆ ಹೊಸದಾಗಿ ಕಾಲಿಟ್ಟಿರುವ ಜಗದೀಶ್ ವಿವರಿಸುತ್ತಾರೆ, “ ಥ್ರಿಪ್ಸ್ ಎನ್ನುವುದು ಥೈಸನೊಪ್ಟರ ವರ್ಗದ ಒಂದು ಕ್ರಿಮಿ; ಗಿಡದ ಎಳೆಯದಾದ ಎಲೆಗಳು ಮತ್ತು ಮೊಗ್ಗುಗಳನ್ನು ತಿನ್ನುವ ಮಿಲಿಮೀಟರ್ ಗಾತ್ರದ ಈ ಕ್ರಮಿಯದು ರಾಸಾಯನಿಕ ಕೃಷಿಯಲ್ಲಿ ಸಾಮಾನ್ಯ ಸಮಸ್ಯೆ. ಕೀಟನಾಶಕವನ್ನು ಬಳಸದಿದ್ದರೆ, ಬೆಳೆಗಳನ್ನು ಥ್ರಿಪ್ಸ್‌ಗಳಿಂದ ಉಳಿಸಲು ಸಾಧ್ಯವಿಲ್ಲ ಎನ್ನುವುದು ಚಾಲ್ತಿಯಲ್ಲಿರುವ / ಸಾಮಾನ್ಯವಾದ ನಂಬಿಕೆ.” ಆದರೆ ಜಗದೀಶ್ ರವರು ತಮ್ಮ ಈರುಳ್ಳಿ ಬೆಳೆಯನ್ನು ನೈಸರ್ಗಿಕ ಕೃಷಿ ವಿಧಾನವು ಶಿಫಾರಸು ಮಾಡುವ ಬೇವಿನ ಬೀಜದ ದ್ರಾವಣವನ್ನು ಬಳಸಿ ಥ್ರಿಪ್ಸ್ ಹಾವಳಿಯಿಂದ ಮುಕ್ತರಾಗಿರಿಸಿದ್ದಾರೆ.

Jagadeesh, farmer

 

ನೈಸರ್ಗಿಕ ಕೃಷಿ ಕೀಟಗಳನ್ನು ದೂರವಿಡಲು ಮತ್ತೊಂದು ಕಾರಣದ ಬಗ್ಗೆ ದೇವಿಯವರು ಹೇಳುತ್ತಾರೆ. ನೈಸರ್ಗಿಕ ಕೃಷಿಯು ಏಕತಳಿ ಬೆಳೆಯುವ ಬದಲು ಮಿಶ್ರತಳಿ ಬೆಳೆಯುವುದನ್ನು ಶಿಫಾರಸು ಮಾಡುವುದರಿಂದ,  “ನನ್ನ ಈರುಳ್ಳಿ ಹೊಲದಲ್ಲಿ ರಾಗಿ ಮತ್ತು ಇತರ ಕಿರುಧಾನ್ಯಗಳು ಬೆಳೆಯುತ್ತಿವೆ; ಅವುಗಳನ್ನು ತಿನ್ನಲು ಸಾಕಷ್ಟು ಪಕ್ಷಿಗಳು ಬರುತ್ತವೆ. ಈ ಪಕ್ಷಿಗಳು ಕೀಟಗಳನ್ನೂ ಸಹ ತಿನ್ನುತ್ತವೆ." ಎಂದು ಅವರು ಹೇಳುತ್ತಾರೆ. ರಿಲೇ ಕ್ರಾಪಿಂಗ್‌ನಂತಹ ವಿಧಾನಗಳೂ ಸಹಾಯ ಮಾಡುತ್ತವೆ.

ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಸಾವಯವ ಕೃಷಿ ಪದ್ಧತಿಯು ಕಾರ್ಯಯೋಗ್ಯವಾಗಿದೆ ಎಂದು ರೈತರಿಗೆ ಅನಿಸುತ್ತದೆ. "ನನ್ನ ಮಕ್ಕಳಿಗೆ ಸಾವಯವ ತರಕಾರಿಗಳನ್ನು ತಿನ್ನುವುದು ಸಾಧ್ಯವಾಗುತ್ತಿದೆ ಮತ್ತು ನಾನು ಇದನ್ನು ಜನರಿಗೂ ಒದಗಿಸಲು ಸಮರ್ಥನಾಗಿದ್ದೇನೆಯೆಂದು ನನಗೆ ಸಂತೋಷವಾಗಿದೆ" ಎಂದು ಪೊನ್ಮುತ್ತು ಅವರು ಹೇಳಿದರೆ ನೈಸರ್ಗಿಕ ಕೃಷಿ ಪದ್ಧತಿಯು ಕೃಷಿಯನ್ನು ನೋಡುವ ಪರಿಯನ್ನು ಹೇಗೆ ಬದಲಾಯಿಸಿದೆ ಎಂಬುದರ ಬಗ್ಗೆ ದೇವಿಯವರು ಬೆಳಕು ಚೆಲ್ಲುತ್ತಾರೆ. "ನೈಸರ್ಗಿಕ ಕೃಷಿಯು ಬೇಸಾಯವನ್ನು ಮಾಡಿಯೂ ನಮಗೆ ಯಶಸ್ವಿ ಜೀವನವನ್ನು ನೆಡಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ನೀಡಿದೆ."

ಬನ್ನಿ, ನಮ್ಮ ಮಣ್ಣನ್ನು ಕಾಪಾಡೋಣ

ನಾವು ಮಣ್ಣನ್ನು ಲಘುವಾಗಿ ಪರಿಗಣಿಸುತ್ತೇವೆ, ಆದರೆ ನೆಲದ ಮೇಲ್ಮಣ್ಣಿನ ತೆಳುವಾದ ಪದರವು ನಮ್ಮ ಬಹುತೇಕ ಆಹಾರದ ಬೆಳೆಗಳಿಗೆ ಮೂಲವಾಗಿದೆ. ಅದಿಲ್ಲದಿದ್ದರೆ ಪರಿಣಾಮವೇನಾಗಬಹುದೆಂದು ನೀವು ಊಹಿಸಬಹುದು! ಮತ್ತು ಅದೀಗ ಅಗಾಧ ಪ್ರಮಾಣದಲ್ಲಿ ಇಲ್ಲವಾಗುತ್ತಿದೆ. ಕೆಟ್ಟ ಕೃಷಿ ಪದ್ಧತಿಗಳು ಮಣ್ಣಿನ ಭಾರೀ ಸವೆತಕ್ಕೆ ಕಾರಣವಾಗುತ್ತವೆ - ಕೇವಲ ಭಾರತದಲ್ಲೇ ವರ್ಷಕ್ಕೆ 530 ಕೋಟಿ ಟನ್ ಮಣ್ಣು ಇಲ್ಲವಾಗುತ್ತಿದೆ; ರಾಸಾಯನಿಕ ಆಧಾರಿತ ಕೃಷಿಯ ವಿಷಗಳಷ್ಟೇ ಉಳಿದಿವೆ.

ಮುಂದಿನ ತಲೆಮಾರುಗಳಿಗೆ ಆಹಾರ ಭದ್ರತೆಯಿರಬೇಕೆಂದು ನಮ್ಮಿಚ್ಛೆಯಾಗಿದ್ದರೆ, ನಮ್ಮ ಮಣ್ಣಿನ ಗುಣಮಟ್ಟವನ್ನು ಕಾಪಾಡುವುದು ಅತ್ಯಗತ್ಯ. "ಕದ್ದು ಓಡಿಹೋಗು" ಪ್ರಕ್ರಿಯೆಯ ಬದಲು, ವ್ಯವಸಾಯವು ಸುಸ್ಥಿರ ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸುವ ನೈಸರ್ಗಿಕ ಕೃಷಿ ವಿಧಾನಗಳು ಇದಕ್ಕೆ ಪರಿಹಾರ ಸೂಚಿಯಾಗಿದೆ.

ನಮ್ಮ ಮಣ್ಣನ್ನು ಉಳಿಸುವುದು ಈಶ ಫೌಂಡೇಶನ್ನಿನ ರ‍್ಯಾಲೀ ಫಾರ್ ರಿವರ್ಸ್ ಉಪಕ್ರಮದ ಭಾಗವಾಗಿದೆ. ರ‍್ಯಾಲೀ ಫಾರ್ ರಿವರ್ಸ್‌ನ ಕರಡು ನೀತಿ, ರೈತರಿಗೆ ಹೆಚ್ಚು ಲಾಭದಾಯಕವಾಗುವ ಮತ್ತು  ಮಣ್ಣು ಹಾಗೂ ನದಿಗಳಿಗೆ ಪ್ರಯೋಜನಕಾರಿಯಾಗುವ ನೈಸರ್ಗಿಕ, ಮರ ಆಧಾರಿತ ಕೃಷಿಗೆ ಪರಿವರ್ತಿತವಾಗಲು ರೈತರಿಗೆ ಸರ್ಕಾರಗಳು ಬೆಂಬಲ ನೀಡಬೇಕೆಂದು ಶಿಫಾರಸು ಮಾಡಿದೆ. ರ‍್ಯಾಲೀ ಫಾರ್ ರಿವರ್ಸ್ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ ಮತ್ತು ಇದೇ ರೀತಿಯ ಯೋಜನೆಗಳನ್ನು ಜಾರಿಗೆ ತರಲು ಇತರ ಐದು ರಾಜ್ಯಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. 

ನೈಸರ್ಗಿಕ ಕೃಷಿ ಬಗೆಗಿನ ತರಬೇತಿ ಕಾರ್ಯಾಗಾರಗಳು

ಹಸಿರು ಕೈಗಳ ಯೋಜನೆಯಡಿಯಲ್ಲಿನ ಈಶ ಕೃಷಿ ಚಳುವಳಿ ನೈಸರ್ಗಿಕ ಕೃಷಿ ತರಬೇತಿ ಕಾರ್ಯಾಗಾರಗಳನ್ನು ಸಹ ನಡೆಸಿಕೊಡುತ್ತದೆ. ಮುಂದಿನ ಇಂಗ್ಲಿಷ್ / ತಮಿಳು ಕಾರ್ಯಕ್ರಮವು ಫೆಬ್ರವರಿ 2-10, 2019 ರಿಂದ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ನಡೆಯಲಿದೆ. ಇದು ಸುಭಾಷ್ ಪಾಲೇಕರ್ ರವರ ಒಂಬತ್ತು ದಿನಗಳ ನೈಸರ್ಗಿಕ ಕೃಷಿ (ಎಸ್‌ಪಿಎನ್‌ಎಫ್) ಕಾರ್ಯಕ್ರಮವಾಗಲಿದೆ. ಇದನ್ನು ಇಂಗ್ಲಿಷ್‌-ನಲ್ಲಿ ಮತ್ತು ನೇರ ತಮಿಳು ಅನುವಾದದೊಂದಿಗೆ ನಡೆಸಲಾಗುವುದು. ಭಾಗವಹಿಸುವ ರೈತರಿಗೆ ಸಂಪೂರ್ಣ ತರಬೇತಿ ನೀಡಲಾಗುವುದು ಮತ್ತು ಕಾರ್ಯಾಗಾರ ಮುಗಿದ ನಂತರ ತಾವೇ ಈ ಕೃಷಿ ಪದ್ಥತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಪ್ರೋಗ್ರಾಂ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.

ನೀವು ಕೃಷಿಕರಲ್ಲದಿದ್ದು ಮತ್ತು ನಮ್ಮ ಮಣ್ಣು / ನದಿಗಳು / ಮರಗಳು / ಭೂಮಿಯನ್ನು ಉಳಿಸುವಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಬಯಸಿದರೆ, ನೀವು ವಿವಿಧ ಉಪಕ್ರಮಗಳಲ್ಲಿ ಹೇಗೆ ಸ್ವಯಂಸೇವಕರಾಗಬಹುದು ಎಂಬುದನ್ನು ತಿಳಿಯಲು RallyforRivers.org ಮತ್ತು ProjectGreenHands.org ಪುಟಕ್ಕೆ ಭೇಟಿ ನೀಡಿ.

ಮಣ್ಣಿನ ಬಗ್ಗೆ ತಿಳಿಯಿರಿ, ಜೀವನವನ್ನು ಅರಿಯಿರಿ

Know Soil Know Life infographic

 

ನೀವು ಬಳಸುವ ಕೀಟನಾಶಕಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?

ವಿಯೆಟ್ನಾಂ ಯುದ್ಧದಲ್ಲಿ ಕಾಡುಗಳನ್ನು ತೆರವುಗೊಳಿಸಲು ಮತ್ತು ಶತ್ರು ಅಡಗುತಾಣಗಳನ್ನು ಹುಡುಕಲು ಬಳಸಲಾದ ವಿಷಕಾರಿ ರಾಸಾಯನಿಕ “ಏಜೆಂಟ್ ಆರೆಂಜ್” ಅನ್ನು ಈಗ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಸ್ಯನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕವು ಪ್ರಾಸ್ಟೇಟ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಮಲ್ಟಿಪಲ್ ಮೈಲೋಮಾ, ಟೈಪ್-2 ಡಯಾಬಿಟಿಸ್ ಮೆಲ್ಲಿಟಸ್, ಹಾಡ್ಜ್‌ಕಿನ್ ಕಾಯಿಲೆ ಮತ್ತು ಇನ್ನೂ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಶಂಕಿಸಲಾಗಿದೆ.

ಅಮೇರಿಕಾ ಮತ್ತು ಯುರೋಪಿನಲ್ಲಿ ಮದ್ದುಗುಂಡು ಉತ್ಪಾದನಾ ಘಟಕಗಳನ್ನು ಗೊಬ್ಬರ ಮತ್ತು ಕೀಟನಾಶಕ ಉತ್ಪಾದನಾ ಘಟಕಗಳಾಗಿ ಪರಿವರ್ತಿಸಲಾಗಿ, ಅನೇಕ ಕೀಟನಾಶಕಗಳನ್ನು ತಯಾರಿಸಲಾಯಿತು.

ಜೈಕ್ಲಾನ್ ಬಿ, ನಾಜಿಗಳು ತಮ್ಮ ಕುಖ್ಯಾತ ಹತ್ಯಾಕಾಂಡದ ಅನಿಲ ಕೋಣೆಗಳಲ್ಲಿ ಬಳಸಿದ್ದ ರಾಸಾಯನಿಕವನ್ನು ಮೂಲತಃ ಕೀಟನಾಶಕವಾಗಿ ಬಳಸಲು ವಿನ್ಯಾಸಗೊಳಿಸಲಾಗಿತ್ತು. ಇದನ್ನು ಇಂದು ಜಗತ್ತಿನಲ್ಲಿ ಎಲ್ಲಿಯೂ ಬಳಸಲಾಗುವುದಿಲ್ಲ.

ಭಾರತದಲ್ಲಿ ಕೀಟನಾಶಕ ಬಳಕೆಯು 1950 ರಲ್ಲಿ 2330 ಟನ್‌ಗಳಿಂದ 2010-11ರಲ್ಲಿ 81,000 ಟನ್‌ಗಳಿಗೆ ಏರಿದೆ. ಹೀಗಾಗಿ ಆಹಾರ ಸರಪಳಿಯಲ್ಲಿ ಈ ರಾಸಾಯನಿಕಗಳ ಹರಡುವಿಕೆಯನ್ನು ತೀವ್ರವಾಗಿ ಹೆಚ್ಚಿಸಿತು.

ಸ್ವೀಡನ್‌ನಲ್ಲಿ ನಡೆದ ಅಧ್ಯಯನವೊಂದು, ಒಂದು ಕುಟುಂಬ ಸಾವಯವ ಆಹಾರವನ್ನು ಸೇವಿಸಿದಾಗ, ಸಾಂಪ್ರದಾಯಿಕವಾಗಿ ಬೆಳೆದ ಆಹಾರವನ್ನು ಸೇವಿಸುವ ಅವಧಿಗೆ ಹೋಲಿಸಿದಲ್ಲಿ, ದೇಹದಲ್ಲಿನ ಕೀಟನಾಶಕ ಶೇಷಗಳ ಸಾಂದ್ರತೆಯು ಸರಾಸರಿ 6.7 ರಷ್ಟು ಕಡಿಮೆಯಾಗಿರುತ್ತದೆ ಎಂದು ಕಂಡುಕೊಂಡಿದೆ.

Featured Image Courtesy: Farmer at work in maize field in Bihar, India by CimmyT/Flickr