ಸದ್ಗುರು:

ಮೂಲಭೂತವಾಗಿ, ನೀವು "ನಾನು" ಎಂದು ಕರೆಯುವುದು, ಅಥವಾ ಮಾನವ ಸಂರಚನೆ ಎಂದು ಕರೆಯುವುದು ಒಂದು ನಿರ್ದಿಷ್ಟವಾದ "ತಂತ್ರಾಂಶ" ಅಥವಾ "ಸಾಫ್ಟ್‌ವೇರ್" ನ ಕೆಲಸವಾಗಿದೆ. ಸಾಫ್ಟ್‌ವೇರ್ ಎಂದರೆ ಒಂದು ಸ್ಮೃತಿಕೋಶ ಎಂದು ನಮಗೆಲ್ಲ ಇಂದು ತಿಳಿದಿದೆ. ಅದು ಒಂದು ಪ್ರತ್ಯೇಕ ಮಾನವ ದೇಹದ ರಚನೆಯಾಗಿರಲಿ ಅಥವಾ ಅಗಾಧವಾದ ಬ್ರಹ್ಮಾಂಡದ ರಚನೆಯೇ ಆಗಿರಲಿ, ಮೂಲಭೂತವಾಗಿ, ಅವು - ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಐದು ಅಂಶಗಳಿಂದ ಮಾಡಲ್ಪಟ್ಟಿವೆ. ಈ ಎಲ್ಲಾ ಐದು ಅಂಶಗಳು ತಮ್ಮದೇ ಆದ ನೆನಪಿನ ಕೋಶವನ್ನು ಹೊಂದಿವೆ. ಅವುಗಳು ತಮ್ಮ ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರಲು ಆ ನೆನಪೇ ಕಾರಣ. ಕೇವಲ ನಿಮ್ಮ ಒಂದು ಆಲೋಚನೆಯಿಂದ, ಒಂದು ಭಾವನೆ ಅಥವಾ ನಿಮ್ಮ ಪ್ರಾಣಶಕ್ತಿಯ ಮೇಲಿನ ಒಂದು ನಿರ್ದಿಷ್ಟವಾದ ಹಿಡಿತದಿಂದ, ನೀವು ಆ ನೆನಪನ್ನು ದೊಡ್ಡ ಮಟ್ಟದಲ್ಲಿ ಪ್ರಭಾವಿಸಬಹುದು. ಎಲ್ಲಿಯವರೆಗೆಂದರೆ - ಅದರ ಬಗ್ಗೆ ಎಲ್ಲವೂ ಬದಲಾಗುವ ಮಟ್ಟಕ್ಕೆ ನೀವದನ್ನು ಕೊಂಡೊಯ್ಯಬಹುದು.

ತೀರ್ಥದ ಹಿಂದಿನ ವಿಜ್ಞಾನ ನಿಮ್ಮ ಒಂದು ಆಲೋಚನೆ ಅಥವಾ ಭಾವನೆಯೊಂದಿಗೆ, ನೀವು ನೀರಿನ ರಾಸಾಯನಿಕ ಸಂಯೋಜನೆಯನ್ನು ಬದಲಾಯಿಸದಂತೆ, ಅದರ ಅಣುಗಳ ರಚನೆಯನ್ನು ಬದಲಾಯಿಸಬಹುದು ಎಂದು ತೋರಿಸಲು ಇಂದು ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ. ಯಾವುದೇ ರೀತಿಯ ರಾಸಾಯನಿಕ ಬದಲಾವಣೆಗಳಿಲ್ಲದೆ, ಅದೇ ನೀರು, ಅದು ಹೊಂದಿರುವ ನೆನಪಿನ ರೀತಿಯನ್ನು ಅವಲಂಬಿಸಿ - ವಿಷವಾಗಬಹುದು ಅಥವಾ ಜೀವನಾಮೃತವಾಗಬಹುದು. ನಾವು ಯಾರೆಂದರವರ ಕೈಯಿಂದ ನೀರು ಕುಡಿಯಬಾರದು ಅಥವಾ ಆಹಾರವನ್ನು ಸೇವಿಸಬಾರದು ಎಂದು ನಮ್ಮ ಅಜ್ಜಿಯಂದಿರು ಹೇಳುತ್ತಿದ್ದರು; ನಮ್ಮನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಜನರಿಂದಲೇ ನಾವದನ್ನು ಯಾವಾಗಲೂ ಸ್ವೀಕರಿಸಬೇಕು.

 

ಇದೇ ಕಾರಣಕ್ಕೆ ಭಾರತದ ಸಾಂಪ್ರದಾಯಿಕ ಮನೆಗಳಲ್ಲಿ, ಜನರು ಹಿತ್ತಾಳೆ ಪಾತ್ರೆಗಳನ್ನು ಇಟ್ಟುಕೊಳ್ಳುತ್ತಾರೆ ಮತ್ತು ಪ್ರತಿದಿನ ಅದನ್ನು ತೊಳೆದು, ಅದಕ್ಕೆ ಪೂಜೆಯನ್ನು ಮಾಡಿದ ನಂತರವೇ ಕುಡಿಯುವ ನೀರನ್ನು ಅದರಲ್ಲಿ ತುಂಬಿಸುತ್ತಾರೆ. ದೇವಸ್ಥಾನಗಳಲ್ಲಿ, ನಿಮಗೆ ಒಂದು ಚಮಚ ನೀರನ್ನು ತೀರ್ಥವೆಂದು ನೀಡುತ್ತಾರೆ, ಮತ್ತದನ್ನು ಒಬ್ಬ ಕೋಟ್ಯಾಧಿಪತಿಯೂ ಸಹ ಅಪೇಕ್ಷಿಸಿ ಬರುತ್ತಾನೆ ಏಕೆಂದರೆ ನೀವು ಆ ನೀರನ್ನು ಎಲ್ಲಿಯೂ ಖರೀದಿಸಲು ಸಾಧ್ಯವಿಲ್ಲ. ಅದು ದೈವವನ್ನು ತನ್ನ ನೆನಪಿನಲ್ಲಿಟ್ಟುಕೊಂಡಿರುವಂತಹ ನೀರು. ತಮ್ಮೊಳಗಿನ ದೈವತ್ವವನ್ನು ಅದು ನೆನಪಿಸುವ ಕಾರಣ, ಜನ ಅದನ್ನು ಕುಡಿಯಲು ಬಯಸುತ್ತಾರೆ.

 

ಇದೆಲ್ಲ ಮೂಢನಂಬಿಕೆ ಎಂದು ನೀವು ಭಾವಿಸಿದ್ದೀರಿ, ಆದರೆ ಈಗ ವಿಜ್ಞಾನಿಗಳೆಲ್ಲ ಅದೇ ಮಾತನ್ನು ಹೇಳುತ್ತಿದ್ದಾರೆ. ಬಲವಂತವಾಗಿ ಪಂಪ್ ಮಾಡಿ, ಪ್ಲಾಸ್ಟಿಕ್ ಪೈಪುಗಳ ಮೂಲಕ ಹಲವು ತಿರುವುಗಳನ್ನು ಪಡೆದು ನಿಮ್ಮ ಮನೆಗೆ ಬಂದು ತಲುಪುವ ನೀರಿನ ಅಣು ಸಂಯೋಜನೆ ಬದಲಾಗಿರುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಎಲ್ಲಾ ಬಾಗುವಿಕೆ ಮತ್ತು ತಿರುವುಗಳೊಂದಿಗೆ, ನೀರಿನಲ್ಲಿ ಹೆಚ್ಚಿನ ನಕಾರಾತ್ಮಕತೆ ಉಂಟಾಗುತ್ತದೆ. ಆದ್ದರಿಂದ, ನೀರಿಗೆ ನೆನಪಿನಶಕ್ತಿಯಿದೆ; ಮತ್ತು, ನಿಮ್ಮ ದೇಹದ 72% - ನಿಮ್ಮ ದೈಹಿಕ ಅಸ್ತಿತ್ವ - ನೀರೇ ಆಗಿದೆ. ನೀವೊಂದು ನೀರಿನ ಬಾಟಲ್ ಎಂದು ಹೇಳಬಹುದು! ಆದ್ದರಿಂದ, ನಿಮಗೆ ಒಂದು ಪಾತ್ರೆಯಲ್ಲಿನ ನೀರನ್ನು ಹಿತಕರವಾಗಿಡಲು ಸಾಧ್ಯವಾದರೆ, ನಿಮ್ಮೊಳಗಿನ ನೀರನ್ನು ಆಹ್ಲಾದಕರ ರೀತಿಯಲ್ಲಿ ಪ್ರಭಾವಿಸಲು ನಿಮಗೆ ಸಾಧ್ಯವಿಲ್ಲವೇ? ಇದೇ ಯೋಗದ ವಿಜ್ಞಾನ. ಭೂತ ಎಂದರೆ ಅಂಶಗಳು, ಮತ್ತು ಭೂತ ಶುದ್ಧಿ ಎಂದರೆ ನಿಮ್ಮ ವ್ಯವಸ್ಥೆಯೊಳಗಿನ ಐದು ಅಂಶಗಳನ್ನು ಶುದ್ಧೀಕರಿಸುವುದು ಎಂದರ್ಥ. ಭೂತ ಶುದ್ಧಿ ಪ್ರಕ್ರಿಯೆಯು ಯೋಗದ ಅತ್ಯಂತ ಮೂಲಭೂತ ಅಂಶವಾಗಿದೆ. ನೀವು ಮಾಡುವ ಯೋಗದ ಪ್ರತಿಯೊಂದು ಅಂಶವೂ ಸಹ ಭೂತ ಶುದ್ಧಿ ಅಭ್ಯಾಸಗಳಿಂದ ಆಯ್ದಂತಹ ಒಂದು ಸಣ್ಣ ಭಾಗವಷ್ಟೆ.

ಭಾರತದ ಭೀಕರ ನೀರಿನ ಪರಿಸ್ಥಿತಿ ನಿಮ್ಮ ಬದುಕುಳಿಯುವಿಕೆಗೆ ನೀರು ಅತ್ಯಗತ್ಯ, ಆದರೆ ಇಂದು, ಭಾರತವು ಎದುರಿಸುತ್ತಿರುವ ನೀರಿನ ಪರಿಸ್ಥಿತಿ ನಿಜವಾಗಿಯೂ ಭೀಕರವಾಗಿದೆ. ಇಂದು ಭಾರತದಲ್ಲಿ ನೀರಿನ ತಲಾವಾರು ಲಭ್ಯತೆ 1947 ಕ್ಕೆ ಬರುತ್ತದೆ. 
ಕೆಲವು ವರ್ಷಗಳ ಹಿಂದೆ ನಾನು ಹಿಮಾಲಯದಲ್ಲಿ ಚಾರಣ ಮಾಡುತ್ತಿದ್ದಾಗ, ಗಂಗಾ ನದಿಯ ಮೇಲೆ ನಿರ್ಮಿಸಲಾದ ತೆಹ್ರಿ ಅಣೆಕಟ್ಟಿಗೆ ನಾನು ಹೋಗಿದ್ದೆ. ನೀರಿನ ಮಟ್ಟ ತುಂಬಾ ಕಡಿಮೆಯಿದ್ದು, ಅದು ಕೇವಲ 21 ದಿನಗಳವರೆಗೆ ಮಾತ್ರ ಸಾಕಾಗುತ್ತದೆ ಎಂದು ನನಗಲ್ಲಿ ತಿಳಿಸಲಾಯಿತು. ಇನ್ನು 21 ದಿನಗಳಲ್ಲಿ ಮಳೆ ಬಾರದೇ ಇದ್ದರೆ, ಆ ವರ್ಷ ಗಂಗಾ ನದಿ ಕೆಳಕ್ಕೆ ಹರಿಯುವುದಿಲ್ಲ. ಗಂಗಾ ನದಿ ಹರಿಯುವುದನ್ನು ನಿಲ್ಲಿಸಿದರೆ ಅದು ಭಾರತೀಯರ ಮನಸ್ಸಿಗೆ ಉಂಟುಮಾಡುವ ಹಾನಿಯನ್ನು ನೀವು ಊಹಿಸಬಲ್ಲಿರಾ? ಗಂಗಾ ನಮಗೆ ಕೇವಲ ಒಂದು ನದಿಯಲ್ಲ. ಗಂಗೆಯನ್ನು ಸಂರಕ್ಷಿಸುವಲ್ಲಿ ಕೆಲವು ಆಧ್ಯಾತ್ಮಿಕ ಗುಂಪುಗಳು ಬಹಳ ಸಕ್ರಿಯವಾಗಿ ತೊಡಗಿಕೊಂಡಿವೆ ಮತ್ತು ಗಂಗೆಯನ್ನು ನಾವು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅವರು ತುಂಬಾ ಆತಂಕ ವ್ಯಕ್ತಪಡಿಸುತ್ತಾರೆ.

ಭಾವನಾತ್ಮಕವಾಗಿ, ಭಾರತೀಯರಿಗೆ, ಗಂಗೆಯು ಅಗಾಧವಾದುದರ ಒಂದು ಸಂಕೇತ. ನಗರದ ಜನ ಹಾಗೆ ಯೋಚಿಸದೇ ಇರಬಹುದು, ಆದರೆ ಒಬ್ಬ ಸಾಮಾನ್ಯ ಭಾರತೀಯನಿಗೆ ಗಂಗೆ ಎಂದರೆ ಜೀವನಕ್ಕಿಂತ ದೊಡ್ಡದಾದದ್ದು - ಅದು ಕೇವಲ ನದಿಯಲ್ಲ, ಅದು ಇನ್ನೂ ಹೆಚ್ಚಿನದ್ದು. ಅದು ನಮಗೆ ಜೀವನದ ಸಂಕೇತವೇ ಆಗಿದೆ. ಮಳೆ ಕೇವಲ ಎರಡು ಅಥವಾ ಮೂರು ವಾರಗಳಷ್ಟು ವಿಳಂಬವಾದರೆ, ಗಂಗಾ ನದಿ ಹರಿಯುವುದಿಲ್ಲ ಎನ್ನುವ ಪರಿಸ್ಥಿತಿಗೆ ನಾವಿಂದು ತಲುಪಿದ್ದೇವೆ. ಅದು ಯಾವುದೇ ವರ್ಷ ಸಂಭವಿಸಬಹುದು. ಆದ್ದರಿಂದ, ವಿಷಯ ಇಷ್ಟೆ: ನಾವು ಪ್ರಜ್ಞಾಪೂರ್ವಕವಾಗಿ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸುತ್ತೇವೆಯೋ, ಅಥವಾ ಪ್ರಕೃತಿಗೇ ಅದನ್ನು ಕ್ರೂರ ರೀತಿಯಲ್ಲಿ ಮಾಡಲು ಬಿಡುತ್ತೇವೆಯೋ? ಇವೆರಡೇ ನಮಗಿರುವ ಆಯ್ಕೆಗಳು. ನಾವು ಜನಸಂಖ್ಯೆಯನ್ನು ಹೆಚ್ಚಿಸಬಾರದು ಎಂಬುದು ನನ್ನ ನೀತಿಯಲ್ಲ. ಒಂದೋ ನಾವದನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಬೇಕು, ಇಲ್ಲವೇ ಪ್ರಕೃತಿಯೇ ಅದನ್ನು ಅತ್ಯಂತ ಕ್ರೂರ ರೀತಿಯಲ್ಲಿ ಮಾಡಲಿದೆ. ನಾವು ಮನುಷ್ಯರಾಗಿದ್ದರೆ, ನಾವದನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಬೇಕು ಮತ್ತು ಅಂತಹ ವಿಪತ್ತುಗಳಿಗೆ ಅವಕಾಶ ಮಾಡಿಕೊಡಬಾರದು.