‘ಧ್ಯಾನದಿಂದ ಮಹಾಮುದ್ರ’ದೆಡೆಗೆ

ಸದ್ಗುರು: “ಧ್ಯಾನ” ಎಂಬ ಪದವನ್ನು ಎಷ್ಟೋ ವಿಷಯಗಳ ಬಗ್ಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ, ನೀವು ಯಾವುದಾದರೊಂದು ವಿಷಯದ ಬಗ್ಗೆ ಕೇಂದ್ರೀಕರಿಸುತ್ತಿದ್ದರೆ, ನೀವು ಧ್ಯಾನ ಮಾಡುತ್ತಿದ್ದೀರಿ ಎಂದು ಜನ ಹೇಳುತ್ತಾರೆ. ನೀವು ಒಂದೇ ಆಲೋಚನೆಯನ್ನು ನಿರಂತರವಾಗಿ ಯೋಚಿಸುತ್ತಿದ್ದರೆ, ನೀವು ಧ್ಯಾನ ಮಾಡುತ್ತಿದ್ದೀರಿ ಎಂದು ಜನ ಹೇಳುತ್ತಾರೆ. ನೀವು ಒಂದು ಶಬ್ದ, ಮಂತ್ರವನ್ನಷ್ಟೆ ನಿರಂತರವಾಗಿ ಉಚ್ಚರಿಸಿದರೆ ಅದನ್ನೂ ಧ್ಯಾನ ಎಂದು ಕರೆಯುತ್ತಾರೆ. ಅಥವಾ ನಿಮ್ಮ ಸುತ್ತಲೂ ಅಥವಾ ನಿಮ್ಮ ಶಾರೀರಿಕ ವ್ಯವಸ್ಥೆಯೊಳಗೆ ನಡೆಯುತ್ತಿರುವ ವಿಷಯಗಳ ಬಗ್ಗೆ ನೀವು ಮಾನಸಿಕವಾಗಿ ಜಾಗರೂಕರಾಗಿದ್ದರೆ, ಅದನ್ನೂ ಕೂಡ ಧ್ಯಾನ ಎಂದು ಕರೆಯಲಾಗುತ್ತದೆ. 

‘ಶಾಂಭವಿ ಕ್ರಿಯಾ’ ಈ ಯಾವುದೇ ವರ್ಗಕ್ಕೆ ಸೇರಿಲ್ಲ. ಇದಕ್ಕಾಗಿಯೇ ನಾವು ಇದನ್ನು ಮಹಾಮುದ್ರ ಅಥವಾ ಕ್ರಿಯಾ ಎಂದು ಕರೆಯುತ್ತಿದ್ದೇವೆ. ಮುದ್ರ ಎಂದರೇನು? “ಮುದ್ರ” ಎಂಬ ಪದದ ಅರ್ಥ ಅಕ್ಷರಶಃ ಒಂದು ಸೀಲು ಎಂದು, ಭದ್ರಮಾಡಿ ಮುಚ್ಚುವುದು ಎಂದು. ಜಗತ್ತಿನಲ್ಲಿ ಇಂದು, ಹಿಂದೆಂದಿಗಿಂತಲೂ ಹೆಚ್ಚಾಗಿ, ಶಕ್ತಿಯ ಅಪವ್ಯಯವು ಮನುಷ್ಯರಿಗಿರುವ ದೊಡ್ಡ ಸಮಸ್ಯೆ.  ಮಾನವತೆಯ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ನಮ್ಮ ಸಂವೇದನಾ ವ್ಯವಸ್ಥೆಯು ಹೆಚ್ಚು ಪ್ರಚೋದಿಸಲ್ಪಟ್ಟಿದೆ. ಉದಾಹರಣೆಗೆ, ಇಂದು ನಾವು ರಾತ್ರಿಯಿಡೀ ಪ್ರಕಾಶಮಾನವಾದ ದೀಪಗಳೊಂದಿಗೆ ಕುಳಿತುಕೊಳ್ಳಬಹುದು. ಆದರೆ ಇದಕ್ಕಾಗಿ ನಿಮ್ಮ ಕಣ್ಣುಗಳು ಅಣಿಗೊಂಡಿಲ್ಲ - ಅವುಗಳನ್ನು ಹನ್ನೆರಡು ಗಂಟೆಗಳ ಬೆಳಕು ಮತ್ತು ಹನ್ನೆರಡು ಗಂಟೆಗಳ ಕತ್ತಲೆ ಅಥವಾ ಬಹಳ ಕಡಿಮೆ ಬೆಳಕಿನ್ನು ನೋಡಲು ಮಾಡಲಾಗಿದೆ. ಈಗ ನಿಮ್ಮ ಕಣ್ಣುಗಳು ಅತಿಯಾಗಿ ಪ್ರಚೋದಿಸಲ್ಪಟ್ಟಿದೆ.

ಜೀವವ್ಯವಸ್ಥೆಯ ಮೇಲಿನ ಅತಿಯಾದ ಹೊರೆ: ಇಂದ್ರಿಯಗಳ ಅತಿಯಾದ ಪ್ರಚೋದನೆ

ಹಿಂದಿನ ಕಾಲದಲ್ಲಿ, ನಿಮಗೆ ಯಾವುದಾದರೂ ದೊಡ್ಡ ಶಬ್ದ ಕೇಳಬೇಕಿದ್ದರೆ, ಸಿಂಹ ಘರ್ಜಿಸಬೇಕಿತ್ತು, ಆನೆ ಘೀಳಿಡಬೇಕಿತ್ತು, ಅಥವಾ ಇನ್ನೇನೋ ರೋಚಕ ಶಬ್ದಗಳಾಗಬೇಕಿತ್ತು; ಇಲ್ಲದಿದ್ದರೆ ಸುತ್ತಲಿನ ಪರಿಸರದಲ್ಲಿ ಮೌನವಿರುತ್ತಿತ್ತು. ಈಗ ಎಲ್ಲ ಸಮಯದಲ್ಲೂ ಶಬ್ದವಿರುತ್ತದೆ. ನಿಮ್ಮ ಕಿವಿಗಳು ಅತಿ ಹೆಚ್ಚನ್ನು ಒಳತೆಗೆದುಕೊಳ್ಳುತ್ತಿವೆ. ಮುಂಚೆ ವರ್ಣರಂಜಿತವಾದದ್ದನ್ನೇನೋ ನೋಡಲು, ನೀವು ಸೂರ್ಯಾಸ್ತಕ್ಕಾಗಿ ಕಾಯಬೇಕಾಗಿತ್ತು. ಬಂದು ನೋಡಿರೆಂದು ನಿಮ್ಮ ಕುಟುಂಬವನ್ನು ಕರೆಯುವ ಮೊದಲು, ಸೂರ್ಯಾಸ್ತವಾಗಿಬಿಟ್ಟಿರುತ್ತಿತ್ತು. ಈಗ, ನೀವು ಟಿವಿ ಮುಂದೆ ಕುಳಿತರೆ, ಸದಾಕಾಲ ಬೆರಗುಗೊಳಿಸುವಂತಹ, ಎಲ್ಲಾ ರೀತಿಯ ಬಣ್ಣಗಳನ್ನು ನೀವು ಯಾವಾಗಲೂ ನೋಡುತ್ತೀರಿ. 

ಆದ್ದರಿಂದ ಸಂವೇದನಾತ್ಮಕವಾಗಿ ನೀವು ಒಳತೆಗೆದುಕೊಳ್ಳುತ್ತಿರುವುದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಈ ಮಟ್ಟದಲ್ಲಿ ಸಂವೇದನಾತ್ಮಕವಾಗಿ ನೀವು ಒಳತೆಗೆದುಕೊಳ್ಳುತ್ತಿರುವಾಗ, ನೀವು ಇಲ್ಲಿ ಕುಳಿತು “ಆಮ್"," ರಾಮ್” ಅಥವಾ ಇನ್ನೇನಾದರನ್ನೂ ನೀವು ಹೇಳಿದರೆ, ಅದು ಅಂತ್ಯವಿಲ್ಲದೆ, ತ್ವರಿತ ಅನುಕ್ರಮದಲ್ಲಿ ಮುಂದುವರಿಯುತ್ತದೆ. ನೀವು ನಿಮ್ಮೊಳಗೊಂದು ಪ್ರಬಲ ಪ್ರಕ್ರಿಯೆಯನ್ನು ರಚಿಸದ ಹೊರತು, ಇಂದಿನ ಜಗತ್ತಿನಲ್ಲಿ, ಹೆಚ್ಚಿನವರಿಗೆ ಹಗಲುಗನಸು ಕಾಣದೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಶಕ್ತಿಯು ಪೋಲಾಗುವುದನ್ನು ತಪ್ಪಿಸುವುದು 

ಇದಕ್ಕಾಗಿಯೇ ಮಹಾಮುದ್ರ, ಏಕೆಂದರೆ ಅದೊಂದು ಸೀಲು. ಒಮ್ಮೆ ನಿಮ್ಮ ಶಕ್ತಿಗೆ ಸೀಲು ಹಾಕಿ ಭದ್ರ ಮಾಡಿದರೆ, ನಿಮ್ಮ ಶಕ್ತಿಗಳು ತಮ್ಮನ್ನು ತಾವು ವಿಭಿನ್ನವಾದ ದಿಕ್ಕಿನಡೆ ತಿರುಗಿಸುತ್ತವೆ. ಆಗ ಬದಲಾವಣೆಗಳು ಕಾಣಿಸುತ್ತವೆ. ಯಾವುದೇ ಅಭ್ಯಾಸವು ಶಾಂಭವಿ ಮಹಾಮುದ್ರೆಯಂತೆ ಮೊದಲ ದಿನದಿಂದಲೇ ಜನರಲ್ಲಿ ಇಷ್ಟು ಅತ್ಯದ್ಭುತವಾಗಿ ಪರಿಣಾಮವನ್ನುಂಟು ಮಾಡುವುದು ಅಪರೂಪ. ಇದಕ್ಕೆ ಕಾರಣ, ನೀವು ಮಹಾಮುದ್ರೆಯನ್ನು ಸರಿಯಾಗಿ ಮಾಡಿದರೆ, ಸಾಮಾನ್ಯವಾಗಿ ಎಂದಿಗೂ ತಿರುಗದಂತಹ ದಿಕ್ಕಿನಲ್ಲಿ ನಿಮ್ಮ ಶಕ್ತಿಗಳು ತಿರುಗುತ್ತವೆ. ಇಲ್ಲದಿದ್ದರೆ, ವಿವಿಧ ಸಂವೇದನಾ ಒಳಹರಿವುಗಳಿಗೆ ಪ್ರತಿಕ್ರಿಯೆಯಾಗಿ ನಿಮ್ಮ ಶಕ್ತಿಯು ವ್ಯರ್ಥವಾಗುತ್ತದೆ. ಇದು ಹೇಗೆಂದರೆ, ನೀವು ಏನನ್ನಾದರೂ ನೋಡುತ್ತಿದ್ದರೆ, ಸ್ವಲ್ಪ ಸಮಯದ ನಂತರ ನಿಮಗೆ ಸುಸ್ತಾಗುತ್ತದೆ. ನಿಮ್ಮ ಕಣ್ಣುಗಳಿಗೆ ಮಾತ್ರವಲ್ಲ, ನಿಮಗೂ ದಣಿವಾಗುತ್ತದೆ.

ಪ್ರತಿ ಬಾರಿ ನೀವು ಯಾವುದಕ್ಕಾದರೂ ಗಮನವಿತ್ತರೆ, ನೀವು ಶಕ್ತಿಯನ್ನು ಕಳೆದುಕೊಳ್ಳುತ್ತೀರಿ. ಬೆಳಕಿದ್ದಾಗಲೂ, ನೋಡಲು ಶಕ್ತಿ ವ್ಯಯವಾಗುತ್ತದೆ. ಒಂದು ಶಬ್ದವಿದ್ದರೆ, ಕೇಳಲು ಶಕ್ತಿ ವ್ಯಯವಾಗುತ್ತದೆ. ಹೀಗಿರುವುದನ್ನು ನಿಮಗೆ ಲಾಭವಾಗುವ ರೀತಿಯಲ್ಲಿ ನಾವು ಬದಲಿಸಲು ಆಶಿಸುತ್ತೇವೆ. ನಿಮ್ಮನ್ನು ಸರಿಯಾದ ಗ್ರಹಣಶೀಲತೆಯ ಸ್ಥಿತಿಗೆ ಕರೆದೊಯ್ಯುವುದಕ್ಕಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಿಮ್ಮನ್ನೊಂದು ಇಪ್ಪತ್ತೊಂದು ನಿಮಿಷದ ಅಭ್ಯಾಸಕ್ಕೆ ಸಿದ್ಧಪಡಿಸುವುದಕ್ಕಾಗಿಯೇ ನಾವು ಇಷ್ಟು ಸಮಯವನ್ನು ತೆಗೆದುಕೊಳ್ಳುವುದು.

ಗಣನೀಯ ಪರಿಣಾಮದ ವೈಜ್ಞಾನಿಕ ಪುರಾವೆಗಳು 

ಶಾಂಭವಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಇಂದಿನ ಜಗತ್ತಿನಲ್ಲಿ, ನಿಮ್ಮೊಳಗೆ ಏನಾಗುತ್ತಿದೆ ಎನ್ನುವುದು ಸಾಕಷ್ಟು ಒಳ್ಳೆಯ ಸಾಕ್ಷಿಯಲ್ಲ. ಆ ಪರಿಣಾಮಗಳನ್ನು ಪ್ರಯೋಗಾಲಯದಲ್ಲಿ ಅಳೆಯಬೇಕು. ಶಾಂಭವಿ ಅಭ್ಯಾಸ ಮಾಡಿದ ಜನರಿಗೆ ಕಾರ್ಟಿಸೋಲ್ ಜಾಗೃತಿ ಪ್ರತಿಕ್ರಿಯೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಮೆದುಳಿನಿಂದ ಪಡೆದ ನ್ಯೂರೋಟ್ರೋಪಿಕ್ ಅಂಶವಾಗಿರುವ ಬಿಡಿಎನ್‌ಎಫ್ ಕೂಡ ಹೆಚ್ಚಾಗುತ್ತದೆ. 

ಕಾರ್ಟಿಸೋಲ್ ಜಾಗೃತಿ ಪ್ರತಿಕ್ರಿಯೆ ವಿವಿಧ ಹಂತದ ಎಚ್ಚರವನ್ನು ಸೂಚಿಸುತ್ತದೆ. ಜ್ಞಾನೋದಯವನ್ನು ಜಾಗೃತಿ ಎಂದೂ ಕರೆಯುತ್ತಾರೆ. ಏಕೆ? ನಿಮಗೆ ಈಗಾಗಲೇ ಎಚ್ಚರವಾಗಿಲ್ಲವೇ? ಇಲ್ಲ, ನಿಮ್ಮ ಜೀವನದ ಪ್ರತಿ ಕ್ಷಣವೂ ನೀವು ಒಂದೇ ಮಟ್ಟದ ಜಾಗೃತಾವಸ್ಥೆಯಲ್ಲಿಲ್ಲ. ನೀವು ಕನಿಷ್ಠ ತೊಂಬತ್ತು ದಿನಗಳವರೆಗೆ ಶಾಂಭವಿಯನ್ನು ಅಭ್ಯಾಸ ಮಾಡಿದರೆ, ನೀವು ಬೆಳಿಗ್ಗೆ ಎದ್ದ ಮೂವತ್ತು ನಿಮಿಷಗಳ ನಂತರ, ನಿಮ್ಮ ಕಾರ್ಟಿಸೋಲ್ ಜಾಗೃತಿ ಪ್ರತಿಕ್ರಿಯೆ ಸಾಮಾನ್ಯ ವ್ಯಕ್ತಿಗಿಂತ ಹಲವಾರು ಪಟ್ಟು ಹೆಚ್ಚಾಗಿರುತ್ತದೆ.

ಪ್ರಚೋದಕ - ವಿರೋಧಿ, ವೃದ್ದಾಪ್ಯ - ವಿರೋಧಿ, ಒತ್ತಡ - ವಿರೋಧಿ

ಪ್ರಚೋದಕ ಪ್ರವೃತ್ತಿಯು ತುಂಬಾ ಸುಧಾರಿಸುತ್ತದೆ. ತೊಂಬತ್ತು ದಿನಗಳ ಅಭ್ಯಾಸದ ನಂತರ ಜೀವಕೋಶದ ಮಟ್ಟದಲ್ಲಿ ನೀವು ಸುಮಾರು 6.4  ವರ್ಷ ಚಿಕ್ಕವರು ಎಂದು ನಿಮ್ಮ ಡಿಎನ್‌ಎ ತೋರಿಸುತ್ತದೆ. ಇದನ್ನೆಲ್ಲವನ್ನೂ ಜವಾಬ್ದಾರಿಯುತ ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಅತ್ಯಂತ ಅದ್ಭುತವಾದ ವಿಷಯವೆಂದರೆ, ಮೆದುಳು ಸಕ್ರಿಯವಾಗಿದ್ದಾಗಲೂ ನಿಮ್ಮ ಪ್ರಶಾಂತ ಸ್ವಭಾವ ಅನೇಕ ಪಟ್ಟು ಹೆಚ್ಚಾಗುತ್ತದೆ. ಇದು ಶಾಂಭವಿಯ ವಿಶಿಷ್ಟ ಆಯಾಮ. 

ಅಮೇರಿಕಾದಲ್ಲಿ ನಡೆದಿರುವ ಅಧ್ಯಯನಗಳು ಹೆಚ್ಚಾಗಿ ಬೌದ್ಧ ಧ್ಯಾನಗಳ ಬಗ್ಗೆಯೇ ಹೊರತು ಯೋಗದ ಇತರ ಆಯಾಮಗಳ ಬಗ್ಗೆಯಲ್ಲ. ಬೌದ್ಧ ಧ್ಯಾನಗಳ ಒಂದು ಪ್ರಮುಖ ಅಂಶವೆಂದರೆ ಜನರು ಶಾಂತಿ, ಮಾಧುರ್ಯದಿಂದ ಕೂಡಿದವರಾಗುತ್ತಾರೆ; ಅದೇ ಸಮಯದಲ್ಲಿ ಮೆದುಳಿನ ಚಟುವಟಿಕೆ ಕಡಿಮೆಯಾಗುತ್ತದೆ. ಶಾಂಭವಿಯ ಗಮನಾರ್ಹವಾದ ಸಂಗತಿಯೆಂದರೆ ಜನರು ತುಂಬಾ ಶಾಂತಿ, ಮಾಧುರ್ಯದಿಂದ ಕೂಡಿದವರಾಗುತ್ತಾರೆಯಾದರೂ ಅದೇ ಸಮಯದಲ್ಲಿ ಅವರ ಮೆದುಳಿನ ಚಟುವಟಿಕೆಯು ಹೆಚ್ಚಾಗುತ್ತದೆ.

ಸಮಸ್ಯೆಗಳಿಲ್ಲದೆ ಶಾಂತಿ ಮತ್ತು ಸಾಧ್ಯತೆ 

ನಿಮ್ಮ ಮಿದುಳು ಕಾರ್ಯನಿರ್ವಹಿಸುತ್ತಿರಬೇಕು. ಆಧ್ಯಾತ್ಮಿಕತೆಯ ಹೆಸರಿನಲ್ಲಿ, ಸಾಮಾನ್ಯವಾಗಿ ನೀವು ಜನರು “ರಾಮ್, ರಾಮ್” ಅಥವಾ ಇನ್ನಿತರ ಮಂತ್ರಗಳನ್ನು ಹೇಳುತ್ತ ಕುಳಿತಿರುವುದನ್ನು ನೀವು ನೋಡುತ್ತೀರಿ. ನೀವು “ಡಿಂಗ್ ಡಾಂಗ್ ಡಿಂಗ್” ಅನ್ನು ಪುನರಾವರ್ತಿಸುತ್ತಿದ್ದರೂ ಸಹ, ನೀವು ಶಾಂತಯುತವಾಗುತ್ತೀರಿ. ಇದು ಲಾಲಿಹಾಡಿದ್ದ ಹಾಗೆ. ಅದನ್ನು ಯಾರೂ ನಿಮಗಾಗಿ ಹಾಡದಿದ್ದರೂ, ನಿಮಗೆ ನಿವೇ ಅದನ್ನು ಹಾಡಿಕೊಳ್ಳುತ್ತಿದ್ದೀರಿ. ನಿಜ, ಅದು ಸಹಾಯ ಮಾಡುತ್ತದೆ. ಪ್ರತಿಯೊಬ್ಬರೂ ಅಂತಹ ತಂತ್ರಗಳನ್ನು ಬಳಸುತ್ತಿದ್ದಾರೆ. ಅದನ್ನವರು ಅರಿವಿಲ್ಲದೆ ಕಂಡುಕೊಂಡಿದ್ದು, ಮತ್ತು ಅದನ್ನು ಪದೇ ಪದೇ ಹೇಳಿಕೊಳ್ಳುತ್ತಾರೆ. ಅದು ಪವಿತ್ರ ಶಬ್ದವೇ ಆಗಿರಬಹುದು ಅಥವಾ ಅಸಂಬದ್ಧವಾದದ್ದೇ ಆಗಿರಬಹುದು, ನೀವದನ್ನು ಪುನರಾವರ್ತಿಸುತ್ತಿದ್ದರೆ, ಒಂದು ರೀತಿಯ ಮಂದತೆ ಉಂಟಾಗುತ್ತದೆ. ಮಂದತೆಯನ್ನು ಸಾಮಾನ್ಯವಾಗಿ ಶಾಂತಿ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. 

ಈಗ ನಿಮಗಿರುವ ಒಂದೇ ಸಮಸ್ಯೆಯಂದರೆ ನಿಮ್ಮ ಮೇಲ್ಮೆದುಳಿನ ಚಟುವಟಿಕೆ. ಮೇಲ್ಮೆದುಳಿನ ಚಟುವಟಿಕೆಯನ್ನು ಕಡಿಮೆ ಮಾಡಿದರೆ, ನೀವು ಶಾಂತಿಯುತ ಮತ್ತು ಅದ್ಭುತವಾದ ವ್ಯಕ್ತಿಯಾಗುತ್ತೀರಿ, ಆದರೆ ಸಾಧ್ಯತೆಗಳಿಲ್ಲದವರಾಗುತ್ತೀರಿ. ಮೂಲಭೂತವಾಗಿ, ಮಾನವನ ಸಮಸ್ಯೆ ಇದು: ಅವರು ತಮ್ಮ ಸಾಧ್ಯತೆಗಳನ್ನು ಸಮಸ್ಯೆಗಳಾಗಿ ಅನುಭವಿಸುತ್ತಿದ್ದಾರೆ. ನಿಮ್ಮ ಸಾಧ್ಯತೆಯನ್ನು ಇಲ್ಲವಾಗಿಸಿದರೆ, ನಿಮ್ಮ ಅರ್ಧದಷ್ಟು ಮೆದುಳನ್ನು ಇಲ್ಲವಾಗಿಸಿದರೆ, ಖಂಡಿತವಾಗಿಯೂ ಸಮಸ್ಯೆಯಿರುವುದಿಲ್ಲ. ಸಾಧ್ಯತೆಯನ್ನು ಹೆಚ್ಚಿಸಿಯೂ ಸಮಸ್ಯೆಗಳಿಲ್ಲದಿರುವುದು ಶಾಂಭವಿ ಮಹಾಮುದ್ರಯೆ ವೈಶಿಷ್ಟ್ಯತೆಯಾಗಿದೆ. 

 

iecs-banner

ಈ ಲೇಖನದ ಒಂದು ಆವೃತ್ತಿಯನ್ನು ಮೂಲತಃ ಜೂನ್ 2019 ರ ಫಾರೆಸ್ಟ್ ಫ್ಲವರ್ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿತ್ತು.