ಜೀವನವನ್ನು ಇದು – ಅದು, ಒಳ್ಳೆಯದು - ಕೆಟ್ಟದ್ದು ಎಂದೆಲ್ಲಾ ವಿಭಜಿಸಿದಾಗ, ಮೌನ ಎಂದರೆ ಏನು ಎಂದು ಅರ್ಥವಾಗುವುದಿಲ್ಲ- ಹೇಗೆ ಎಂದು ಸದ್ಗುರುಗಳು ವಿವರಿಸುತ್ತಾರೆ. ಯೋಗದ ಮೂಲ ಉದ್ದೇಶವೇ ಈ ದ್ವಂದ್ವವನ್ನು ನಾಶ ಮಾಡುವುದು. ಈ ಕಾರಣಕ್ಕಾಗಿಯೇ ಆದಿಯೋಗಿಯಾದ ಶಿವನನ್ನು ವಿನಾಶಕ ಎಂದು ಕರೆಯುತ್ತಾರೆ.

ಸದ್ಗುರು: ಜನರಿಗೆ ಒಳ್ಳೆಯದನ್ನು ಹೇಳಿ ಕೊಟ್ಟ ಶಿಕ್ಷಕರು ಇದ್ದಾರೆ. ಕೆಟ್ಟದ್ದನ್ನು ಹೇಳಿಕೊಟ್ಟವರೂ ಇದ್ದಾರೆ. ಆದರೆ ಇನ್ನೂ ಕೆಲವು ಗುರುಗಳು ಒಳ್ಳೆಯದು ಮತ್ತು ಕೆಟ್ಟದ್ದೆರಡನ್ನೂ ಧ್ವಂಸ ಮಾಡಿ, ಯಾವುದೇ ಒಳ್ಳೆಯ ನೀತಿಗಳಾಗಲೀ ಅಥವಾ ಅಹಂ ನಿಂದ ಹುಟ್ಟುವ ಕೆಟ್ಟ ಆಲೋಚನೆ ಮತ್ತು ಭಾವನೆಗಳ ಪ್ರಭಾವ ಇಲ್ಲದೇ ಜೀವನ ಹೇಗೆ ಇರಬೇಕೋ ಹಾಗೇ ಇರಲು ಬಿಟ್ಟಿದ್ದಾರೆ. ಆಗಲೇ ನಮಗೆ ಆಂತರ್ಯದ ಮೌನ ಅರ್ಥವಾಗುವುದು. ಒಳ್ಳೆಯವರೂ ಮೌನವಾಗಿ ಇರಲು ಆಗುವುದಿಲ್ಲ, ಕೆಟ್ಟವರೂ ಮೌನವಾಗಿರಲು ಆಗುವುದಿಲ್ಲ. ಒಳಿತು-ಕೆಡುಕು ಯಾವುದಕ್ಕೂ ಗಮನ ಕೊಡದೆ, ಜೀವನ ಪ್ರಕ್ರಿಯೆಗಳಿಗಷ್ಟೇ ಗಮನ ಕೊಡುವವರು ಮಾತ್ರ ನಿಜವಾಗಿ ಮೌನವಾಗಿರಲು ಸಾಧ್ಯ.

ಇದು ಮತ್ತು ಇದು

ಮೌನವೆಂದರೆ, ಹಕ್ಕಿಗಳ ಚಿಲಿ-ಪಿಲಿ, ನಿಸರ್ಗದ ನಾದಗಳು ನಿಮಗೆ ಕೇಳಿಸುವುದಿಲ್ಲ ಎಂದಲ್ಲ. ಮೌನವೆಂದರೆ, ಆಂತರ್ಯದಲ್ಲಿ ಸದ್ದು ಮಾಡುವುದನ್ನು ನಿಲ್ಲಿಸುವುದು ಎಂದು ಅರ್ಥ. ನೀವು ಎಲ್ಲದರಲ್ಲಿಯೂ ಇದು ಮತ್ತು ಅದು ಎಂದು ಬೇಧಭಾವ ಶುರು ಮಾಡಿದಾಗಲೇ ಶಬ್ದ ಉಂಟಾಗುವುದು. ಇದು-ಅದು ಇದ್ದಾಗ ಮೌನಕ್ಕೆ ಜಾಗವಿಲ್ಲ.ಯಾವಾಗ ಇದು –ಇದಾಗೇ ಇರುತ್ತದೋ ಆಗಲೇ ಮೌನಕ್ಕೆ ಜಾಗ.

ಮೌನವೆಂದರೆ ‘ನಾನು’ ಸದ್ದು ಮಾಡುವುದನ್ನು ನಿಲ್ಲಿಸಿದ್ದೇನೆ ಎಂದಷ್ಟೇ ಅರ್ಥ.

ಎಲ್ಲಾ ಕಡೆಯೂ ಒಂದೇ ಪ್ರಶ್ನೆ ಬರುತ್ತಿರುತ್ತದೆ: “ನಾನು ಎಷ್ಟರ ಮಟ್ಟಿಗೆ ಆಧ್ಯಾತ್ಮವನ್ನು ಅನುಸರಿಸಬೇಕು?” ಎಂದು. ನೀವೆಷ್ಟೇ ಮಾಡಿದರೂ ತೊಂದರೆಯಲ್ಲಿಯೇ ಇರುತ್ತೀರಿ. ನೀವು ಇದು ಎಂದರೆ ಇದನ್ನೇ ಮಾಡಬೇಕು. ಬೇರೆಲ್ಲವೂ ಅದರಲ್ಲೇ ಇರಬೇಕು, ಆಗ ಸರಿಯಾಗುತ್ತದೆ. ನೀವು ಇದು-ಅದು ಎಂದೆಲ್ಲಾ ಮಾಡಲು ಶುರು ಮಾಡಿದರೆ, ಗೊಂದಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ- ಆಗ ಖಂಡಿತ ಏನೂ ಕೆಲಸ ಮಾಡುವುದಿಲ್ಲ. ಜನರಿಗೆ ಒಳಿತು-ಕೆಡುಕಿನ ಬಗ್ಗೆ ಹೇಳುತ್ತಿದ್ದವರು, ಆ ರೀತಿ ಏಕೆ ಹೇಳುತ್ತಿದ್ದರೆಂದರೆ, ಆ ಕ್ಷಣದಲ್ಲಿ ಸಮಾಜವು ಎಷ್ಟು ವಿಚಲಿತವಾಗಿತ್ತೆಂದರೆ, ಸ್ವಲ್ಪವಾದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಂದಾಣಿಕೆ ತಂದು, ಜನರನ್ನು ಅವರ ಗೊಂದಲಗಳಿಂದ ಹೊರ ತರಲು ವಿರುದ್ಧವಾಗಿ ಹೇಳಿಕೊಡುತ್ತಿದ್ದರು.

ಯಾವಾಗ ಜನರಿಗೆ “ಕಣ್ಣಿಗೆ ಕಣ್ಣು” ಎಂಬ ಧೋರಣೆಯನ್ನು ಕಲಿಸಲಾಗುತ್ತಿತ್ತೋ, ಆಗ ಅವರೊಬ್ಬರು ಬಂದು, “ಒಂದು ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆಯನ್ನೂ ಕೊಡು” ಎಂದು ಹೇಳಿದ್ದೇಕೆಂದರೆ, ಆ ಸಮಯದಲ್ಲಿ ಜನರು ಸಿಕ್ಕಿಹಾಕಿಕೊಂಡಿದ್ದ ಬಲೆಯನ್ನು ನಾಶಪಡಿಸಲು. ಜನ ಅವರನ್ನು ಇನ್ನೂ ಸ್ವಲ್ಪ ಕಾಲ ಬದುಕಲು ಬಿಟ್ಟಿದ್ದರೆ, ಅಗತ್ಯವಿದ್ದಾಗ ಹೇಗೆ ಕೆಲವರ ಮುಖದ ಮೇಲೆ ಬಾರಿಸಬೇಕು ಎಂಬುದನ್ನೂ ಹೇಳಿಕೊಡುತ್ತಿದ್ದರೇನೋ. ಅಥವಾ ಅವರು ನಿಜವಾಗಿ ಏನು ಅಗತ್ಯವಿತ್ತೋ ಅದನ್ನಷ್ಟೇ ಹೇಳಿಕೊಟ್ಟಿರಬಹುದು. ಇತರ ಭಾಗಗಳನ್ನು ಜನರು ಹೇಗಿದ್ದರೂ ಕಲಿಯುತ್ತಿದ್ದರು.

ಪ್ರತಿಯೊಂದು ಒಳ್ಳೆಯ ಭಾವನೆಯು ಬೇರೆ ಬೇರೆ ಹಂತಗಳ ಪೂರ್ವಾಗ್ರಹಕ್ಕೆ ಕಾರಣವಾಗುತ್ತದೆ. ಒಂದು ಸಲ ನೀವು ಇದು ಒಳ್ಳೆಯದು, ಇನ್ನೊಂದು ಕೆಟ್ಟದು ಎಂದು ಗುರುತಿಸುತ್ತೀರೋ, ಆಗಲೇ ನಿಮ್ಮ ಗ್ರಹಣಾ ಶಕ್ತಿ ಸಂಪೂರ್ಣವಾಗಿ ತಲೆಕೆಳಗಾಗುತ್ತದೆ. ಅದರಿಂದ ಪಾರಾಗಿ ಹೊರಬರುವುದು ನಿಮಗೆ ಅಸಾಧ್ಯ. ನೀವು ಎಷ್ಟೇ ಕಷ್ಟ ಪಟ್ಟರೂ ನಿಮ್ಮ ದೃಷ್ಟಿಕೋನ ಬದಲಾಗುವುದಿಲ್ಲ. ಇದನ್ನೆಲ್ಲಾ ಅಳಿಸಿ ಹಾಕಲು ನಾವು ಯೋಗವನ್ನು ಸೃಷ್ಟಿಸಿದೆವು. ಆದ್ದರಿಂದಲೇ ಯೋಗ ಗುರುವಾದ ಶಿವನನ್ನು ನಾವು ವಿನಾಶಕನೆಂದು ಹೇಳುತ್ತೇವೆ. ಮೊದಲು ನಿಮಗೆ ಅದ್ಭುತವಾಗಿ ಕಂಡು ನಂತರ ನಿಮ್ಮನ್ನು ಗೊಂದಲದಲ್ಲಿ ಸಿಕ್ಕಿಸುವ ಇವುಗಳನ್ನೆಲ್ಲಾ ನಾಶ ಮಾಡುವುದೇ ಯೋಗದ ಮೂಲ ಉದ್ದೇಶ.

ಶಿವನು ಯೋಗವನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸಿದ್ದಾನೆ. ಒಂದು ಹಂತದಲ್ಲಿ ಬಹಳ ನಿಕಟವಾಗಿರುವಂತೆ ತಿಳಿಸಿದ್ದಾನೆ. ಅವನು ಪಾರ್ವತಿಗೆ, “ನೀನು ನನ್ನ ತೊಡೆಯ ಮೇಲೆ ಕುಳಿತುಕೋ, ಅಷ್ಟೇ, ಅದೇ ಯೋಗ” ಎಂದು. ಇದು ಒಬ್ಬ ಪುರುಷ ಸ್ತ್ರೀಯನ್ನು ತನ್ನ ತೊಡೆಯ ಮೇಲೆ ಸೆಳೆದುಕೊಳ್ಳಲು ಒಂದು ಉಪಾಯದಂತೆ ಅನ್ನಿಸುತ್ತದೆ. ಆದರೆ ಅದು ಹಾಗಲ್ಲ, ಏಕೆಂದರೆ ಅವನು ಆಕೆಯನ್ನು ಸುಮ್ಮನೆ ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳಲಿಲ್ಲ. ಇಲ್ಲಿ ಅವನು ತನ್ನದೇ ಒಂದು ಭಾಗವನ್ನು ಕೊಟ್ಟು, ಆಕೆಯನ್ನು ತನ್ನದೇ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾನೆ. ಅವಳು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದಾಗ, ಅವನು ಹೀಗೆ ಹೇಳುತ್ತಾನೆ “ನೀನೇನೂ ಯೋಚನೆ ಮಾಡಬೇಡ, ಸುಮ್ಮನೆ ಇಲ್ಲಿ ಕುಳಿತುಕೋ ಅಷ್ಟೇ. ಸುಮ್ಮನೆ ನನ್ನ ತೊಡೆಯ ಮೇಲೆ ಕುಳಿತುಕೋ, ಎಲ್ಲವೂ ತನ್ನಿಂತಾನೇ ಆಗುತ್ತದೆ” ಎಂದು. ಆದರೆ, ಬೇರೆಯವರಿಗೆ, ನಿಜವು ಲಕ್ಷಾಂತರ ಮೈಲಿಗಳ ಆಚೆ ಇರುವಂತೆ, ಬಹಳ ವಿಸ್ತೃತವಾದ ವಿಧಾನಗಳನ್ನು ಹೇಳಿ ಕೊಟ್ಟಿದ್ದಾನೆ. ಎಷ್ಟೊಂದು ಲಕ್ಷಾಂತರ ಜಟಿಲವಾದ ಹಂತಗಳನ್ನು ದಾಟಬೇಕಾಗುತ್ತದೆ. ನೋಡಿ, ಒಬ್ಬನೇ ಮನುಷ್ಯ ಎರಡೂ ರೀತಿಯಲ್ಲಿ ಮಾತನಾಡುತ್ತಾನೆ.

ಸತ್ಯಕ್ಕೆ ಯಾವುದೇ ವ್ಯಾಖ್ಯಾನದ ಅಗತ್ಯವಿಲ್ಲ

ಇದರಲ್ಲಿನ ಅತೀ ಸುಂದರವಾದ ಭಾಗವೇನೆಂದರೆ, ಶಿವ ಸತ್ಯದ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ, ಅವನು ತನ್ನ ಮುಂದೆ ಕುಳಿತಿರುವ ಜನರನ್ನು ಉದ್ದೇಶಿಸಿ ಹೇಳುತ್ತಿದ್ದಾನೆ, ಏಕೆಂದರೆ ಸತ್ಯವನ್ನು ಪ್ರಸ್ತಾಪಿಸಬೇಕಿಲ್ಲ. ಜಗತ್ತಿನಲ್ಲಿ ಘಟಿಸಿರುವ ದೊಡ್ಡ ತಪ್ಪು ಇದೇ. ಎಲ್ಲರೂ ಯಾವಾಗಲೂ ಪರಮ-ಸತ್ಯದ ಬಗ್ಗೆಯಷ್ಟೇ ಮಾತನಾಡುತ್ತಾರೆ. ಅವರು ಜನರನ್ನು ಉದ್ದೇಶಿಸಿ ಎಂದೂ ಮಾತನಾಡಿಲ್ಲ. ಅವರ ಕಲ್ಪನೆಯಲ್ಲಿ ಅಂತಿಮವೆಂದರೆ ದೇವರು, ಯಾವಾಗಲೂ ದೇವರ ಬಗ್ಗೆಯೇ ಮಾತನಾಡುತ್ತಾರೆ. ಅದರ ಬಗ್ಗೆ ಮಾತನಾಡಿದ ಕ್ಷಣದಿಂದಲೇ ನೀವು ಎಲ್ಲಾ ತರಹದ ಕಾಲ್ಪನಿಕ ವಿಕೃತಗಳಿಗೆ ಜಾರುತ್ತೀರಿ.

ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಉದ್ದೇಶಿಸುವುದೇ ಯೋಗದ ಮೂಲೋದ್ದೇಶವೇ ಹೊರತು ಪರಮ-ಸತ್ಯವನ್ನಲ್ಲ.

ಯೋಗ ವ್ಯವಸ್ಥೆಯು ಎಂದೂ ಪರಮ-ಸತ್ಯದ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಜನರನ್ನಷ್ಟೇ ಉದ್ದೇಶಿಸುತ್ತದೆ. ಪರಮ-ಸತ್ಯದ ಬಗ್ಗೆ ಏನೂ ಮಾಡಬೇಕಾಗಿಲ್ಲ - ಅದೇ ಪರಮ-ಸತ್ಯ. ನೀವು ವೈದ್ಯರ ಬಳಿ ಹೋದರೆ, ಅವರು ನಿಮ್ಮನ್ನು ಪರಿಶೀಲಿಸಬೇಕು. ಅದು ಬಿಟ್ಟು ಅವರು ಕಣ್ಣು ಮುಚ್ಚಿ ಪ್ರಾರ್ಥಿಸಿದರೆ ಸಾಕೆಂದು ನೀವು ಬಯಸುವುದಿಲ್ಲ. ನೀವು ಅವರ ಬಳಿ ಹೋಗುವುದು ಅವರು ನಿಮ್ಮ ಶರೀರವನ್ನು ಪರಿಶೀಲಿಸಿ ನಿಮಗೇನಾಗಿದೆ ಎಂದು ಹೇಳಲಿ ಎಂದು. ನೀವು ಅದನ್ನೇ ಬಯಸುತ್ತೀರಿ.

ಹಾಗೆಯೇ ಜನರು ಕೂಡ ನಾನಾ ರೀತಿಯ ಕಷ್ಟ-ಕೋಟಲೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಪರಮ-ಸತ್ಯದವು ಹಾಗೆ ಒದ್ದಾಡುವುದಿಲ್ಲ. ಸಾಮಾನ್ಯ ಜನರಷ್ಟೇ ಒದ್ದಾಡುತ್ತಿರುವುದು. ಈ ಜನರು ಏನೇ ಒಂದು ಸಣ್ಣ ಘಟನೆ ಘಟಿಸಿದರೂ ಅದನ್ನೇ ಪರಮ ಕಷ್ಟವೆಂದು ಒದ್ದಾಡುತ್ತಾರೆ. ಆದ್ದರಿಂದ ಈ ಜನರನ್ನಷ್ಟೇ ಉದ್ದೇಶಿಸಬೇಕು. ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಉದ್ದೇಶಿಸುವುದೇ ಯೋಗದ ಮೂಲೋದ್ದೇಶವೇ ಹೊರತು ಪರಮ-ಸತ್ಯವನ್ನಲ್ಲ.

ಸಂಪಾದಕರ ಟಿಪ್ಪಣಿ: ಮತ್ತಷ್ಟು ಒಳನೋಟವನ್ನು ಸದ್ಗುರುಗಳ “From Creation to Creator”ಎಂಬ ಡಿಜಿಟಲ್-ಪುಸ್ತಕದಲ್ಲಿ ಕಾಣಬಹುದು. ಇದು ಈಶ ಡೌನ್ ಲೋಡ್ಸ್ ನಲ್ಲಿ ಲಭ್ಯವಿದೆ. ನಿಮ್ಮ ಇಷ್ಟದ ಪ್ರಕಾರ ಪಾವತಿಸಿ ಡೌನ್ ಲೋಡ್ ಮಾಡಿಕೊಳ್ಳಿ. ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು “0” ಅಥವಾ “Claim for free” ಎಂದು ಟೈಪ್ ಮಾಡಿ.

ಈ ಲೇಖನದ ಒಂದು ಆವೃತ್ತಿ ಮೂಲತಃ ಈಶ ಫಾರೆಸ್ಟ್ ಪ್ಲವರ್ ಅಕ್ಟೊಬರ್ 2007 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.