ಸಾವನ್ನು ಒಂದು ರಹಸ್ಯವಾಗಿ ಪರಿಗಣಿಸಲಾಗಿದೆ. ಡೋಂಗಿಗಳು, ತತ್ವಜ್ಞಾನಿಗಳು, ವೈದ್ಯರು, ಮತ್ತು ಕವಿಗಳು ಸಾವಿನ ಆಳ ವಿವರಿಸುವ ಪ್ರಯತ್ನದಲ್ಲಿದ್ದರೂ ಸಹ ಸಾವು ಎಲ್ಲರಿಗೂ ಅಜ್ಞಾತ ಹಾಗು ಅರಿಯದಾಗದ ಒಂದು ಕಡ್ಡಾಯವಾದ ಗುರಿಯಾಗಿ ಉಳಿದು ಹೋಗಿದೆ. ಆಧ್ಯಾತ್ಮಿಕರು, ಯಾರು ಪ್ರಜ್ಞಾಪೂರ್ವಕವಾಗಿ ಹುಟ್ಟು ಮತ್ತು ಸಾವಿನ ನಡುವೆ ಇರುವ ಎಳೆಯನ್ನು ಅರಿತಿರುತ್ತಾರೋ ಅವರು ಮಾತ್ರ ಇವೆರಡರನ್ನು ಪರಿವರ್ತಿಸಲು ಬೇಕಾದದ್ದೇನೆಂದು ವಿವರಿಸಲು ಮತ್ತು ನಮಗೆ ಇದರೆಡೆಗೆ ಮೊದಲ ಹೆಜ್ಜೆಯಿಡಲು ಬೇಕಾಗುವ ಪ್ರಕ್ರಿಯೆಯನ್ನು ನೀಡಲು ಸಾಧ್ಯ.

ಸದ್ಗುರು: ನೀವು ಯಾವುದೆಲ್ಲವನ್ನು ಅನುಭವಿಸುತ್ತಿರೋ ಅದೇ ಜೀವನ, ನೀವು ಇದನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ನೀವು ಯಾವುದನ್ನು ಮರಣ ಎಂದು ಕರೆಯುತ್ತೀರೋ ಅದೂ ಜೀವನವೇ. ಆದ್ದರಿಂದ, ಮರಣದ ಬಗೆಗೆ ಆಯ್ಕೆಗಳಿವೆಯೇ? ಖಂಡಿತವಾಗಿ ಆಯ್ಕೆಗಳಿವೆ. ನೀವು ಯಾವುದನ್ನು ಮರಣ ಎಂದು ಉಲ್ಲೇಖಿಸುತ್ತಿರುವಿರೋ ಅದು ಕೇವಲ ಜೀವನದ ಕೊನೆಯ ಕ್ಷಣ. ಆ ಕೊನೆಯ ಕ್ಷಣವು ನೀವು ಯಾವಾಗ ನಿಮ್ಮ ಭೌತಿಕ ದೇಹದ ಮಿತಿಗಳನ್ನು ಮೀರುತ್ತಿರೋ ಆ ಕ್ಷಣದಲ್ಲಿ ಮತ್ತು ಅದೂ ಕೂಡ ಜೀವನದಲ್ಲಿ ಒಂದು ಬಾರಿ ಮಾತ್ರ ಸಂಭವಿಸುತ್ತದೆ. ನಿಮ್ಮ ಜೀವನದಲ್ಲಿ ಸಂಭವಿಸುವ ಎಲ್ಲಾ ಘಟನೆಗಳು ಅನೇಕ ಬಾರಿ ಪುನರಾವರ್ತನೆಗೊಳ್ಳಬಹುದು. ಆದರೆ ಮರಣವು ಒಂದೇ ಒಂದು ಬಾರಿ ಸಂಭವಿಸುತ್ತದೆ ಮತ್ತು ಅದೇ ನಿಮ್ಮಿಂದ ಆಗುವ ಕೊನೆಯ ಕೆಲಸವಾಗಿರುತ್ತದೆ. ನನಗೆ ಬೇಕಾಗಿರುವುದು ಇಷ್ಟೇ, ನೀವು ಮರಣವನ್ನು ಜೀವನವಾಗಿ ಸ್ವೀಕರಿಸುವುದು, ಮತ್ತಿನೇನನ್ನೋ ಆಗಿಯಲ್ಲ. ಮರಣವೇ ನಿಮ್ಮ ಜೀವನದ ಕೊನೆಯ ಕಾರ್ಯ. ಇದನ್ನು ಅನುಗ್ರಹದಿಂದ ಮತ್ತು ಅತ್ಯದ್ಭುತವಾಗಿ ಮಾಡಬೇಕೆಂದು ನಿಮಗೆ ಅನಿಸುವುದಿಲ್ಲವೆ? ಮರಣದ ಬಗೆಗೆ ಭಯ, ಜೀವನದ ಆಗು ಹೋಗುಗಳ ಬಗೆಗೆ ನಿರ್ಲಕ್ಷ್ಯ ಮತ್ತು ಪ್ರತಿರೋಧದಿಂದ ವರ್ತಿಸಿದರೆ ನೈಸರ್ಗಿಕವಾಗಿ ನೀವು ಮರಣದ ಅತ್ಯದ್ಭುತವಾದ ಸಾಧ್ಯತೆಯನ್ನು ಕಳೆದುಕೊಳ್ಳುವಿರಿ.

ಆಧ್ಯಾತ್ಮದ ಹಾದಿಯಲ್ಲಿ ಇರುವವರು ಮರಣಕ್ಕೆ ದಿನ, ದಿನಾಂಕ ಮತ್ತು ಸ್ಥಳವನ್ನು ಗುರುತಿಸಿಕೊಂಡಿರುತ್ತಾರೆ. ಯೋಗಿಯು ಯಾವಾಗಲೂ ಮರಣದ ದಿನ ಮತ್ತು ಗಂಟೆಯನ್ನು ಮುಂಚಿತವಾಗಿ ತಿಳಿದುಕೊಳ್ಳಲು ಇಚ್ಛಿಸುತ್ತಾನೆ ಮತ್ತು ಅವನೇ ಅದನ್ನು ಗೊತ್ತು ಮಾಡುತ್ತಾನೆ. ದೇಹ ಬಿಡುವ ಎಷ್ಟೊ ವರ್ಷಗಳ ಮುಂಚಿತವಾಗಿ "ಇಂತಹ ದಿವಸ,ಈ ಸಮಯಕ್ಕೆ ದೇಹತ್ಯಾಗ ಮಾಡುವುದಾಗಿ ತಿಳಿಸುತ್ತಾನೆ" ಮತ್ತು ದೇಹತ್ಯಾಗ ಮಾಡುತ್ತಾನೆ. ಏಕೆಂದರೆ ದೇಹ ತ್ಯಾಗ ಮಾಡಲು ಬೇಕಾಗುವ ಮುಂಜಾಗ್ರತಾ ಕ್ರಮಗಳನ್ನು ಅರಿವಿನಿಂದ ಮಾಡಿಕೊಂಡಿರುವುದರಿಂದ ಪ್ರಜ್ಞಾಪೂರ್ವಕವಾಗಿ ದೇಹತ್ಯಾಗ ಮಾಡಲು ಸಾಧ್ಯವಾಗುತ್ತದೆ. ಬಟ್ಟೆ ಕಳಚಿಟ್ಟು ಹೋಗುವ ಹಾಗೆ ದೇಹಕ್ಕೆ ಹಾನಿಯುಂಟು ಮಾಡದೆ ಅರಿವಿನಿಂದ ದೇಹತ್ಯಾಗ ಮಾಡಲಾಗುವುದಾದರೆ ಅದೇ ನಿಮ್ಮ ಜೀವನದ ಅಂತಿಮ ಸಾಧ್ಯತೆಯಾಗಿರುತ್ತದೆ. ನಿಮ್ಮ ಅಸ್ತಿತ್ವ ಮತ್ತು ಸಂಗ್ರಹ ಮಾಡಿಕೊಂಡಿರುವಂತಹ ಭೌತಿಕ ದೇಹಕ್ಕಿರುವ ಸಂಪರ್ಕದ ಅರಿವು ನಿಮಗೆ ಯಾವಾಗ ಆಗುತ್ತದೆಯೋ ಆಗ ಸರಿಯಾದ ಸಮಯಕ್ಕೆ ನೀವು ನಿಮ್ಮಿಂದ ಬಿಡುಗಡೆಗೊಳ್ಳಬಹುದು.

ಈ ಆಯ್ಕೆಯನ್ನು ಬಳಸಬೇಕಾದರೆ ನಿರ್ದಿಷ್ಟ ಮಟ್ಟದ ಸಿದ್ಧತೆಯ ಅಗತ್ಯವಿರುತ್ತದೆ. ಸಾವನ್ನು ಸಿದ್ಧಿಸಲು ನೀವು ಜೀವನವನ್ನು ವ್ಯರ್ಥಮಾಡಿಕೊಳ್ಳುವುದು ಸೂಕ್ತವಲ್ಲ.

ಇದು ಆತ್ಮಹತ್ಯೆಯೇ? ಖಂಡಿತವಾಗಿಯೂ ಅಲ್ಲ. ಆತ್ಮಹತ್ಯೆಯಾಗುವುದು ಹತಾಶೆ, ಕೋಪ, ಭಯ ಮತ್ತು ಬಾಧೆಯನ್ನು ತಡೆದುಕೊಳ್ಳುವ ಶಕ್ತಿ ಕುಂದಿದಾಗ. ದೇಹತ್ಯಾಗವು ಆತ್ಮಹತ್ಯೆಯೋ ಅಥವಾ ದಯಾಮರಣವೋ ಅಲ್ಲ. ಇದು ಜೀವನಚಕ್ರ ಮುಗಿದದ್ದು ಅರಿವಾಗಿ ದೇಹದಿಂದ ಹೊರ ಹೋಗುವುದು. ಇದು ಮರಣ ಕೂಡ ಅಲ್ಲ, ಸಮಾಧಿ ಎಂದು ಕರೆಯಲಾಗುತ್ತದೆ. ಯಾವಾಗ ಮನುಷ್ಯನು ಸಂಗ್ರಹ ಮಾಡಿಕೊಂಡಿರುವ ಭೌತಿಕ ದೇಹದ ಮತ್ತು ಅವನ ಅಸ್ತಿತ್ವದ ನಡುವಿನ ಅಂತರದ ಬಗ್ಗೆ ಸಾಕಷ್ಟು ಅರಿವು ಮೂಡಿಸಿಕೊಂಡು ಅದರಿಂದ ಬೇರ್ಪಡಲು ಇಚ್ಚಿಸುತ್ತಾನೋ ಆಗ ಮಾತ್ರ ಅವನು ದೇಹತ್ಯಾಗ ಮಾಡಲು ಅನುಕೂಲವಾಗುವಾಗುತ್ತದೆ. ನಿಮಗೆ ಆ ಮಟ್ಟದ ಜಾಗರೂಕತೆಯನ್ನು ಸಾಧಿಸಲು ಅಸಾಧ್ಯವಾದಲ್ಲಿ ಕನಿಷ್ಠ ಪಕ್ಷ ಕೆಲವು ನಿರ್ದಿಷ್ಟ ಸಾಧನೆಗಳನ್ನು ನಿರ್ವಹಿಸಿದರೆ ಕೊನೆಯ ಗಳಿಗೆಯನ್ನು ಸುಲಲಿತ, ಆಹ್ಲಾದಕರ, ಸಂತೋಷದಾಯಕ ಮತ್ತು ಆನಂದಮಯವಾಗಿಸಬಹುದು.

ಈ ಆಯ್ಕೆಯನ್ನು ಬಳಸಬೇಕಾದರೆ ಒಂದು ನಿರ್ದಿಷ್ಟ ಮಟ್ಟದ ತಯಾರಿಯ ಅಗತ್ಯವಿರುತ್ತದೆ. ಸಾವನ್ನು ಸಿದ್ದಿಸಲು ನೀವು ಜೀವನವನ್ನು ವ್ಯರ್ಥಮಾಡಿಕೊಳ್ಳುವುದು ಸೂಕ್ತವಲ್ಲ. ನಿಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಮಟ್ಟದ ಅರಿವನ್ನು ಪೋಷಿಸಿಕೊಂಡು ಬಂದರೆ ಜೀವನದ ಕೊನೆ ಕ್ಷಣವೂ ಅರಿವಿನಿಂದ ಉಂಟಾಗುತ್ತದೆ. ನೀವು ಜೀವನವನ್ನು ಅರಿವಿಲ್ಲದೆ ಕಳೆದು ಮರಣವು ಅರಿವಿನಿಂದ ಸಂಭವಿಸಬೇಕೆಂದು ನಿರೀಕ್ಷಿಸಿದರೆ ಅಂತಹ ಘಟನೆಗಳು ಸಂಭವಿಸುವುದಿಲ್ಲ.

ಈ ರಾತ್ರಿ ನಿದ್ರೆಗೆ ಹಾದುಹೋಗುವ -ನಾನು ಇದನ್ನು ಹಾದುಹೋಗುವ ಎಂದು ಕರೆಯುತ್ತೇನೆ ಏಕೆಂದರೆ ನೀವು ಎಚ್ಚರದಿಂದ ನಿದ್ರೆಗೆ ಆ ಕೊನೆಯ ಕ್ಷಣದಲ್ಲಿ ಹಾದುಹೋಗುತ್ತಿದ್ದೀರಿ - ಆ ಕ್ಷಣದಲ್ಲಿ ಅರಿವಿನಿಂದ ಇರುವುದನ್ನು ಸಾಧಿಸಿ ಮತ್ತು ಗಮನಿಸಿ. ಇದು ನಿಮ್ಮ ಜೀವನವನ್ನುಅಸಾಧಾರಣವಾಗಿ ಬದಲಾಯಿಸುತ್ತದೆ. ಇದನ್ನು ಒಂದು ವಿಧಾನವಾಗಿ ಪರಿಗಣಿಸಿ ದೃಢ ನಿಷ್ಠೆಯಿಂದ ನಿರ್ವಹಿಸಿದರೆ ಕೆಲವೇ ದಿನಗಳಲ್ಲಿ ನೀವು ಕೊನೆಯ ಕ್ಷಣದ ಬಗ್ಗೆ ಜಾಗರೂಕರಾಗುವಿರಿ. ಈ ಸರಳವಾದ ವಿಧಾನವನ್ನು ದಿನನಿತ್ಯ ಮಾಡುವುದರಿಂದ ಇದ್ದಕ್ಕಿದ್ದಂತೆ ನಿಮ್ಮ ಜೀವನದ ಪ್ರತಿಯೊಂದು ಅಂಶಗಳಲ್ಲಿ ಮತ್ತು ಜೀವನದ ಮೂಲಭೂತ ಗುಣಮಟ್ಟದಲ್ಲಿ ಬದಲಾವಣೆಯಾಗುತ್ತದೆ. ನೀವು ಅರಿವಿನಲ್ಲಿದ್ದು ಎಚ್ಚರದಿಂದ ನಿದ್ರೆಗೆ ಜಾರಲು ನಿಭಾಯಿಸಿದರೆ, ನಿಮ್ಮ ಜೀವನದ ಕೊನೆಯ ಗಳಿಗೆ ಅಂದರೆ ಜೀವನದಿಂದ ಸಾವಿಗೆ ಹಾದುಹೋಗುವ ಕ್ಷಣವು ಅತ್ಯಂತ ಸುಲಲಿತವಾಗಿ ಸಂಭವಿಸುತ್ತದೆ. ಇದೊಂದೇ ಅಲ್ಲದೆ ಕೊನೆಯ ಕ್ಷಣದಲ್ಲಿ ಜಾಗುರುಕರಾಗಲು ಬೇರೆ ವಿಧಾನಗಳು ಕೂಡ ಇವೆ.

ಸಾಂಪ್ರದಾಯಿಕವಾಗಿ, ಭಾರತದಲ್ಲಿ ಜನರು ತಮ್ಮ ಪ್ರೀತಿಪಾತ್ರರ ಜೊತೆ ಸಾಯದಿರಲು ಆಯ್ಕೆ ಮಾಡುತ್ತಾರೆ. ಏಕೆಂದರೆ ಕುಟುಂಬದೊಟ್ಟಿಗೆ ಬಾಂಧವ್ಯ ಬೆಸೆದುಕೊಳ್ಳುವುದರಿಂದ ಜೀವನಕ್ಕೆ ಕಟ್ಟುಬಿದ್ದು ಜೀವನದ ಕೊನೆಯ ಕ್ಷಣವನ್ನು ಸುಲಲಿತವಾಗಿ ಸಂಭವಿಸಲು ಸಾಧ್ಯವಾಗುವುದಿಲ್ಲ. ಆದುದ್ದರಿಂದ ಇಂದಿಗೂ ಜನರು ಆಧ್ಯಾತ್ಮಿಕವಾಗಿ ಶಕ್ತಿಯುತವೆಂದು ಪರಿಗಣಿಸಲ್ಪಟ್ಟ ಸ್ಥಳಗಳಿಗೆ ಹೋಗಿ ತಮ್ಮ ದೇಹವನ್ನು ತ್ಯಜಿಸಲು ಬಯಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದನ್ನು ಯೋಚಿಸಲು ಕೂಡಾ ಅಸಾಧ್ಯ ಏಕೆಂದರೆ ಇಲ್ಲಿನ ಜನರು ತಮ್ಮ ಕುಟುಂಬದ ಆರಾಮದಾಯಕ ಜೀವನಶೈಲಿಯಲ್ಲಿ ಸಾಯಲಿಚ್ಚಿಸುತ್ತಾರೆ. ಅದು ಅಸೂಕ್ತವಾದ ವಿಷಯ. ವ್ಯಕ್ತಿಯು ಆಧ್ಯಾತ್ಮಿಕವಾಗಿ ಶಕ್ತಿಯುತವಾದ ಸ್ಥಳವನ್ನು ಆರಿಸಿಕೊಳ್ಳುವುದು ಸೂಕ್ತ ಏಕೆಂದರೆ ದೇಹದಿಂದ ಹೊರ ನಡೆಯುವುದು ಅನುಗ್ರಹಯುಕ್ತವಾಗಿರುತ್ತದೆ. ನೀವು ನಿಮ್ಮ ಜೀವನವನ್ನು ಅನುಗ್ರಹದಿಂದ ಜೀವಿಸಿದ್ದೇ ಆದರೆ ಅದೇ ಅನುಗ್ರಹದಿಂದ ಸಾಯುವುದು ಕೂಡ ಬಹಳ ಮುಖ್ಯವಾಗುತ್ತದೆ.

Editor's Note: This article is based on an excerpt from Isha’s monthly English magazine, Forest Flower. Twenty-three issues of Forest Flower from the years 2011 and 2012 are available for download. Pay what you want and download. (set ‘0’ for free). Print subscriptions are also available.