ದೇಶದ ಜೀವನಾಡಿಗಳಾದ ನಮ್ಮ ನದಿಗಳು ಆತಂಕಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಜಲಕ್ಷಾಮವನ್ನು ಎದುರಿಸುವ ಮೊದಲು ಭಾರತದ ಜೀವನಾಡಿಗಳಲ್ಲಿ  ಜೀವ ತುಂಬಿಸಲು ನಾವೇನು ಮಾಡಬಹುದೆಂದು ಸದ್ಗುರುಗಳು ವಿವರಿಸುತ್ತಾರೆ.

Read in Telugu: భారతదేశంలోని నదులు…..

ಸದ್ಗುರು: ನಾವು ನಾವಾಗಿರುವುದೇ ನಮ್ಮ ನದಿಗಳಿಂದ. ಮೂಲಭೂತವಾಗಿ, ಭಾರತದ ವಿಕಾಸವಾಗಿದ್ದು ಪ್ರಮುಖ ನದಿಗಳ ದಡಗಳಲ್ಲಿ. ನಮ್ಮ ಪ್ರಾಚೀನ ನಾಗರಿಕತೆಗಳಾದ ಮೊಹೆಂಜೊ-ದಾರೊ ಮತ್ತು ಹರಪ್ಪಾ ಉಗಮವಾಗಿದ್ದು ನದಿತೀರದಲ್ಲಿ. ಈ ನದಿಗಳು ತಮ್ಮ ಹಾದಿಯನ್ನು ಬದಲಿಸಿದಾಗ ಆ ನಾಗರೀಕತೆಗಳು ಇಲ್ಲವಾದವು.

ನಮ್ಮ ನದಿಗಳು ಮುಂದಿನ 20 ವರ್ಷಗಳಲ್ಲಿ ಋತುಕಾಲಿಕ ನದಿಗಳಾಗುವ ರೀತಿಯಲ್ಲಿ ಇಂದವುಗಳು ಕ್ಷೀಣಿಸುತ್ತಿವೆ. ಕಳೆದ 10-12 ವರ್ಷಗಳಲ್ಲಿ, ತಮಿಳುನಾಡು ಒಂದರಲ್ಲೇ ಹತ್ತು ಹನ್ನೆರಡು ನದಿಗಳು ಬತ್ತಿ ಹೋಗಿರುವುದನ್ನು ನಾನು ನೋಡಿದ್ದೇನೆ. ಇಂದು, ದಕ್ಷಿಣ ಭಾರತದ ಪ್ರಮುಖ ನದಿಗಳಾದ ಕಾವೇರಿ, ಕೃಷ್ಣ ಮತ್ತು ಗೋದಾವರಿಯ ನೀರು ವರ್ಷದಲ್ಲಿ ಕೆಲ ತಿಂಗಳುಗಳು ಮಾತ್ರ ಸಮುದ್ರವನ್ನು ತಲುಪುತ್ತಿವೆ.

ಸಮಸ್ಯೆಯ ಇನ್ನೊಂದು ಮುಖ – ಅತಿವೃಷ್ಟಿ

ಜಾಗತಿಕ ತಾಪಏರಿಕೆ ತಾಪಮಾನವನ್ನು ಹೆಚ್ಚಿಸುತ್ತಿದ್ದಂತೆ, ಎರಡೂ ಕಡೆಗಳಲ್ಲಿ ಸಮುದ್ರವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ, ಸ್ವಾಭಾವಿಕವಾಗಿ ಹೆಚ್ಚಿನ ಮಳೆಯಾಗುತ್ತದೆ. ಮಳೆಗಾಲದಲ್ಲಿ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು ಹೆಚ್ಚಾಗಿ ನೀರಲ್ಲಿ ಮುಳುಗಡೆಯಾಗುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಅಲ್ಲದೇ ಚೆನ್ನೈನಲ್ಲಿ 2015-ರ ಡಿಸೆಂಬರ್ ಪ್ರವಾಹದ ನಂತರ, ಜನರು ಮಳೆಯ ಭಯದಲ್ಲಿದ್ದಾರೆ. ಎಲ್ಲಾ ಪಾರುಗಾಣಿಕಾ ದೋಣಿಗಳನ್ನು ಕಟ್ಟೆಚ್ಚರದ ಸಿದ್ಧತೆಯಲ್ಲಿಡಲು ಚೆನ್ನೈನಲ್ಲಿ ಎರಡು ದಿನಗಳ ಮಳೆ ಸಾಕು!

ಮಳೆಯ ಅಭಾವ ದಕ್ಷಿಣ ಭಾರತವನ್ನು ಮರುಭೂಮಿಯಾಗಿ ಪರಿವರ್ತಿಸುವುದಕ್ಕಿಂತ ತ್ವರಿತವಾಗಿ ಅತಿವೃಷ್ಟಿಯು ಅದನ್ನು ಮರುಭೂಮಿಯನ್ನಾಗಿ ಮಾರ್ಪಡಿಸುತ್ತದೆ. ಇದು ಮಣ್ಣಿನ ಸತ್ವವೆಲ್ಲಾ ಹರಿದುಹೋಗುವಂತೆ ಮಾಡಿ ಕೆಲವೇ ಸಮಯದಲ್ಲಿ ಮಣ್ಣು ಕೃಷಿಗೆ ಸೂಕ್ತವಲ್ಲದಂತೆ ಮಾಡುತ್ತದೆ. ಇದು ಈಗಾಗಲೇ ತಮಿಳುನಾಡಿನಲ್ಲಿ ಬಹಳ ವೇಗವಾಗಿ ಸಂಭವಿಸುತ್ತಿದೆ. ಕೊಳವೆ ಬಾವಿಗಳು ಇನ್ನೂರು ಅಡಿಗಳಿಗೆ ಕೊರೆದಾಗ ಸಿಗುತ್ತಿದ್ದ ನೀರು ಈಗ ಸಾವಿರ ಅಡಿಗಳಿಗೆ ಕೊರೆದಾಗಲೂ ಸಿಗುತ್ತಿಲ್ಲ!

Source: CC-BY – Factly.in

ನೀರನ್ನು ರೈಲುಗಳು ಮತ್ತು ಲಾರಿಗಳಲ್ಲಿ ಪೂರೈಕೆ ಮಾಡುತ್ತಾ ನಾವೆಷ್ಟು ದಿನ ಈ ದೇಶವನ್ನು ನಡೆಸುತ್ತೇವೆ? ರೈಲುಗಳು ಅಥವಾ ಪೈಪ್‌ಲೈನ್‌ಗಳಿಂದ ಈ ದೇಶದ ಬಾಯಾರಿಕೆಯನ್ನು ನೀಗಿಸಲು ಸಾಧ್ಯವಿಲ್ಲ. ನಾನು ಅನವಶ್ಯಕವಾಗಿ ಗಾಬರಿ ಹುಟ್ಟಿಸುವವನಾಗಲು ಬಯಸುವುದಿಲ್ಲ, ಆದರೆ ನದಿಗಳೊಂದಿಗೆ ನಾವು ನಡೆದುಕೊಳ್ಳುತ್ತಿರುವ ರೀತಿಯಿಂದ ನಾವು ಹುಟ್ಟುಹಾಕುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಒಂದು ಶತಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆಯಿರುವ ದೇಶದಲ್ಲಿ, ನದಿಗಳು ಬತ್ತಿಹೋದರೆ, ಜನರೇನು ಮಾಡುತ್ತಾರೆ?

ಈ ದೇಶದ ನದಿಗಳು ಮೂಲಭೂತವಾಗಿ ಅರಣ್ಯಪೋಷಿತ ನದಿಗಳು. ಗಂಗೆಯಂತಹ ಹಿಮಾಲಯದ ನದಿಯೂ ಹತ್ತು ಪ್ರತಿಶತದಷ್ಟು ಮಾತ್ರ ಹಿಮದಿಂದ ಪೋಷಿತವಾಗುವ ನದಿ; ಉಳಿದದ್ದು ಭೂಮಿ ಮತ್ತು ಕಾಡಿನಿಂದ ಬರುತ್ತದೆ. ಜನರಿಗೆ ತುರ್ತು ಪರಿಹಾರಗಳು ಬೇಕು;  ಈ ಕಾರಣಕ್ಕಾಗವರು ನದಿಗಳನ್ನು ಜೋಡಿಸಿ, ಹೆಚ್ಚಿನ ಪ್ರದೇಶಗಳಿಗೆ ನೀರನ್ನು ತಲುಪಿಸಲು ಜನ ಪ್ರತಿನಿಧಿಗಳ ಮೇಲೆ ಒತ್ತಾಯ ಹೇರಲು ಪ್ರಯತ್ನಿಸುತ್ತಿದ್ದಾರೆ. ನದಿ ಜೋಡಣೆ ಇನ್ನಷ್ಟು ಹಾನಿಕಾರಕವಾಗಲಿದೆ. ನಾವು ಕೇವಲ ಅಪಾರ ಪ್ರಮಾಣದ ಹಣವನ್ನು ವ್ಯಯಿಸಿ ಇನ್ನೂ ದೊಡ್ಡ ಪರಿಸರ ವಿಕೋಪವನ್ನು ಸೃಷ್ಟಿಸುತ್ತೇವಷ್ಟೆ.

ಜೀವನಕ್ಕಾಗಿ ಮರಗಳು!

ನಾವು ನದಿಗಳನ್ನು ಯಾವ ರೀತಿಯಲ್ಲಿ ದುರ್ಬಳಕೆ ಮಾಡುತ್ತಿದ್ದೇವೆ, ಮತ್ತು ಅದರ ಬದಲು ನಾವು ಏನನ್ನು ಮಾಡಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರಾರಂಭವಾಗುವ ವಿಸ್ತೃತವಾದ ಪರಿಹಾರ ಬೇಕಿದೆ. ಕ್ರಮ ಕೈಗೊಳ್ಳಲು ಜನರನ್ನು ಕೇವಲ ಪ್ರೇರೇಪಿಸುವುದು ಸಾಕಾಗುವುದಿಲ್ಲ. ನಾವು ಆರ್ಥಿಕವಾಗಿ ಲಾಭದಾಯಕ ಪರಿಹಾರಗಳನ್ನು ನೀಡಿದರಷ್ಟೆ ಮಾತ್ರ ನದಿಗಳನ್ನು ಉಳಿಸಲು ನಾವು ಜನರನ್ನು ಒಪ್ಪಿಸಬಹುದು.

ನೀರಿನಿಂದಾಗಿ ಮರಗಳಿವೆ ಎಂದು ಜನರು ಎಣಿಸುತ್ತಾರೆ. ತಪ್ಪು, ನೀರಿರುವುದು ಮರಗಳಿಂದ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನದಿಯುದ್ದಕ್ಕೂ ಇಕ್ಕೆಲೆಗಳಲ್ಲಿ, ಒಂದು ಕಿಲೋಮೀಟರ್ ವಿಸ್ತಾರಕ್ಕೆ ನಾವೊಂದು ಮರಗಳ ಬಫರ್-ಅನ್ನು ನದಿಗಳಿಗಾಗಿ ನಿರ್ಮಿಸಬೇಕು. ಸರ್ಕಾರಿ ಭೂಮಿಯಲ್ಲಿ ಮರು ಅರಣ್ಯೀಕರಣಕ್ಕೆ ಒತ್ತು ಕೊಡಬೇಕು. ಮರಗಳನ್ನು ನೆಟ್ಟು ಮುಂದಿನ ಹತ್ತು ವರ್ಷಗಳವರೆಗೆ ಅವುಗಳನ್ನು ಪೋಷಿಸಿ ಅಗಾಧ ವಿಸ್ತೀರ್ಣದ ಭೂಪ್ರದೇಶವನ್ನು ಹಸಿರು ಹೊದಿಕೆಯಡಿಯಲ್ಲಿ ತರಲು ನಾವು 100,000 ಜನರನ್ನು ನೇಮಿಸಬಹುದು. ಖಾಸಗಿ ಭೂಮಿಯಲ್ಲಿ, ರೈತರು ತೋಟಗಾರಿಕೆ ಮತ್ತು ಮರ ಆಧಾರಿತ ವ್ಯವಸಾಯವನ್ನು ಮಾಡಲಿ. ಈ ನಿಟ್ಟಿನಲ್ಲಿ ಸರ್ಕಾರಗಳು ಶಿಕ್ಷಣವನ್ನೊದಗಿಸಬಹುದು, ಮೂರರಿಂದ ಐದು ವರ್ಷಗಳವರೆಗೆ ಈ ಪ್ರಯತ್ನಗಳಿಗೆ ಸಬ್ಸಿಡಿ ನೀಡಬಹುದು, ಮತ್ತು ಉತ್ತಮ-ಗುಣಮಟ್ಟದ ಸಾವಯವ ತೋಟಗಾರಿಕೆಯ ಸಂಪೂರ್ಣ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು. ಆಗ ರೈತರು ತಾವು ನಿಯಮಿತವಾಗಿ ಬೆಳೆಯುವ ಬೆಳೆಗಳನ್ನು ಬಿಟ್ಟು ಬಿಡುವುದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ, ಅಥವಾ ಬೇರೆ ಕೆಲಸಗಳಿಗಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗುವುದಿಲ್ಲ, ಏಕೆಂದರೆ ಅವರ ಭೂಮಿಯು ಮೊದಲಿಗಿಂತ ಇನ್ನೂ ಹೆಚ್ಚು ಫಲವತ್ತಾಗಿರುತ್ತದೆ.

ಈ ರೀತಿಯಾಗಿ, ನಾವು ಮುಂಗಾರನ್ನು ಹೆಚ್ಚು ನಿಯಮಿತಗೊಳಿಸುತ್ತೇವೆ ಮತ್ತು ನಮ್ಮ ಭೂಪ್ರದೇಶದ ಮಣ್ಣು ಸವೆತಕ್ಕೆ ಕಡಿವಾಣ ಹಾಕುತ್ತೇವೆ. ಇದೊಂದು ಸಮಗ್ರ ಪರಿಹಾರವಾಗಿದ್ದು, ಇದಕ್ಕೆ ನದಿ ಜೋಡಣೆಯ ವೆಚ್ಚದ 10% ಗಿಂತ ಹೆಚ್ಚು ವೆಚ್ಚವೂ ತಗಲುವುದಿಲ್ಲ.

Source: CC-BY – Factly.in

ಗಿಡಮರಗಳ ಬಫರ್

ಸರ್ಕಾರಗಳು ನದಿ ಸ್ನೇಹಿ ನೀತಿಗಳನ್ನು ರಚಿಸಬೇಕು. ನಮ್ಮ ಮಾಹಿತಿಯ ಆಧಾರದ ಮೇರೆಗೆ ಮಧ್ಯಪ್ರದೇಶ ಸರ್ಕಾರ, ಮತ್ತು ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಮಹಾರಾಷ್ಟ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಉಪಕ್ರಮಗಳನ್ನು ಆರಂಭಿಸುತ್ತಿವೆ. ಈಗ ಹೆಚ್ಚಿನ ರೈತರು ತೊಡಗಿರುವ ವಿಧಾನಕ್ಕಿಂತ ಅರಣ್ಯಕೃಷಿ ವಿಧಾನವು ಹೇಗೆ ಹೆಚ್ಚು ಲಾಭದಾಯಕವಾಗಿದೆ ಎಂಬುದರ ಕುರಿತು ನಾವು ಭಾರತ ಸರ್ಕಾರಕ್ಕೆ ಪ್ರಸ್ತುತಪಡಿಸಲು ಯೋಜನೆಯ ಶಿಫಾರಸನ್ನು ಸಹ ಸಿದ್ಧಪಡಿಸುತ್ತಿದ್ದೇವೆ.

ಏನೇ ಮಾಡಿದರೂ ಏನೂ ಬದಲಾಗುವುದಿಲ್ಲವೆಂಬ ನಂಬಿಕೆಯಿಂದ ಭಾರತದಲ್ಲಿಂದು ಅನೇಕರು ಕೈಚೆಲ್ಲಿ ಸೋತಂತವರಾಗಿಬಿಟ್ಟಿದ್ದಾರೆ. ಆದರೆ, ಇದು ಬದಲಾವಣೆಯನ್ನು ತರುವ ಸಮಯ. ಹತ್ತು ವರ್ಷಗಳ ನಂತರ ಬಹಳ ತಡವಾಗಲಿದೆ. ನಮ್ಮ ಆರ್ಥಿಕತೆಯನ್ನು ಸಫಲಗೊಳಿಸುವ ವ್ಯಾಮೋಹದಲ್ಲಿ, ನಮ್ಮ ನೆಲ ಮತ್ತು ನದಿಗಳು ನಮ್ಮ ಜೀವದಾಸರೆಯೆಂದು ನಾವು ಮರೆಯಬಾರದು. ನಮ್ಮ ನದಿಗಳು ಲಕ್ಷಾಂತರ ವರ್ಷಗಳಿಂದ ಹರಿಯುತ್ತಿವೆ. ಅವುಗಳು ಬತ್ತಿಹೋಗುವಂತೆ ಮಾಡುವ ಪೀಳಿಗೆಯು ನಮ್ಮದಾಗದೇ ಇರಲಿ. ನಮ್ಮ ನದಿಗಳನ್ನು ಹೇಗೆ ಅತಿಯಾಗಿ ಬಳಸಿಕೊಳ್ಳುವುದು ಎಂದು ಯೋಚಿಸುವ ಬದಲು ಅವುಗಳನ್ನು ಹೇಗೆ ಪುನರುಜ್ಜೀವನಗೊಳಿಸಬೇಕು ಎಂದು ನಾವು ತುರ್ತಾಗಿ ಯೋಚಿಸಬೇಕಾಗಿದೆ. ನಮ್ಮ ನದಿಗಳನ್ನು ಉಳಿಸಲು ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ದೇಶದ ಪ್ರತಿಯೊಬ್ಬರಲ್ಲೂ ನಾವು ಅರಿವು ಮೂಡಿಸಬೇಕು.

ಸಂಪಾದಕರ ಟಿಪ್ಪಣಿ: ನಮ್ಮ ನದಿಗಳನ್ನು ಪುನರುಜ್ಜೀವನಗೊಳಿಸುವ ರಾಷ್ಟ್ರವ್ಯಾಪಿ ಅಭಿಯಾನ - ನೀವು ರ‍್ಯಾಲೀ ಫಾರ್ ರಿವರ್ಸ್-ನಲ್ಲಿ ಹೇಗೆ ಭಾಗವಹಿಸಬಹುದು ಮತ್ತು ತೊಡಗಿಸಿಕೊಳ್ಳಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ RallyForRivers.org ಪುಟವನ್ನು ನೋಡಿ.

“A Tree Can Save the World”, "ಒಂದು ಮರ ಜಗತ್ತನ್ನು ಉಳಿಸಬಹುದು" ಕೇವಲ ಒಂದು ಪುಸ್ತಕವಲ್ಲ! ಇದು ನಾವು ಕಾರ್ಯೋನ್ಮುಖರಾಗಲು ಸದ್ಗುರುಗಳ ಕರೆ. "ಪರಿಸರ ರಕ್ಷಣೆಯು ಯಾರೋ ಒಬ್ಬರ ಕೆಲಸವಲ್ಲ, ಅದು ಪ್ರತಿಯೊಬ್ಬರ ಕೆಲಸ" ಎಂದು ಸ್ಪಷ್ಟಪಡಿಸುತ್ತಾ, ಸಮಸ್ಯೆಯನ್ನು ಅಲ್ಪಾವಧಿಯ ಕ್ರಮದಿಂದ ಮತ್ತು ದೀರ್ಘಾವಧಿಯ ದೂರದೃಷ್ಟಿಯಿಂದ ಪರಿಹರಿಸಲು ಸದ್ಗುರುಗಳು ಜನರು, ವ್ಯವಹಾರ ಮತ್ತು ಆಡಳಿತದ ಜವಾಬ್ದಾರಿಗಳನ್ನು ಜೊತೆಗೂಡಿಸುತ್ತಾರೆ. ನಿಮಗೆ ಇಷ್ಟವಿದ್ದಷ್ಟು ಪಾವತಿಸಿ ಡೌನ್ ಲೋಡ್ ಮಾಡಿ.

ಈ ಲೇಖನವನ್ನು ಮೂಲತಃ ದಿ ವೀಕ್‌  ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.