ಈಶ ಸಂಸ್ಥೆಯು ಶಾಸ್ತ್ರೀಯ ಯೋಗವನ್ನು ಅದರ ಪರಿಶುದ್ಧ ರೂಪದಲ್ಲಿ ಮರಳಿ ತರಲು ಪ್ರಯತ್ನಿಸುತ್ತಿದೆ – ಸ್ಟುಡಿಯೋ ಯೋಗ, ಪುಸ್ತಕ ಯೋಗ ಅಥವಾ ಯೋಗದ ಮೂಲಭೂತ ತತ್ವಗಳ ಅರಿವೇ ಇಲ್ಲದೆ ಸೃಷ್ಟಿಸಲಾದ ಯೋಗ ಪದ್ಧತಿಗಳಂತಲ್ಲದೆ, ಸರಿಯಾದ ಶಾಸ್ತ್ರೀಯ ಯೋಗ ಪದ್ಧತಿಯು ಅತ್ಯಂತ ಶಕ್ತಿಯುತವಾದಂತಹ ಒಂದು ವಿಜ್ಞಾನವಾಗಿದೆ. ಉನ್ನತವಾದಂತಹ ಆಯಾಮಗಳನ್ನು ತಲುಪಲು ಒಂದು ಮಾರ್ಗವಾಗಿ ಈ ಪದ್ಧತಿಯನ್ನು ಅತ್ಯಂತ ನಿಖರವಾಗಿ ಮತ್ತು ಬಹಳ ಎಚ್ಚರಿಕೆಯಿಂದ ಒಟ್ಟುಗೂಡಿಸಲಾಗಿದೆ.

ಸದ್ಗುರು : ಅಂಗಮರ್ದನ ಎನ್ನುವುದು ಯೋಗದ ಒಂದು ವಿಶಿಷ್ಟ ಪದ್ಧತಿಯಾಗಿದ್ದು ಇತ್ತೀಚಿನ ದಿನಗಳಲ್ಲಿ ಇದು ಬಹುತೇಕ ಕಳೆದೇ ಹೋಗಿದೆ. ಸಾಂಪ್ರದಾಯಿಕವಾಗಿ ಶಾಸ್ತ್ರೀಯ ಯೋಗದಲ್ಲಿ, ಅಂಗಮರ್ದನವು ಯಾವಾಗಲೂ ಜೀವಂತವಾಗಿತ್ತು. ಅದು ಯೋಗಾಸನಗಳಂತಲ್ಲ. ಅದು ಯಾವುದೇ ಪರಿಕರಗಳಿಲ್ಲದೆ ಮಾಡಬಹುದಾದಂತಹ ಅತ್ಯಂತ ತೀವ್ರತರವಾದ ಒಂದು ವ್ಯಾಯಾಮವಾಗಿದೆ. ನೀವು ಕೇವಲ ನಿಮ್ಮ ಶರೀರವನ್ನು ಬಳಸುವ ಮೂಲಕ ಸಂಪೂರ್ಣವಾಗಿ ಬೇರೆಯದ್ದೇ ಮಟ್ಟದ ದೈಹಿಕ ಶಕ್ತಿ ಮತ್ತು ಸ್ಥಿರತೆಯನ್ನು ನಿರ್ಮಿಸುತ್ತೀರಿ.

ಅಂಗಮರ್ದನದಲ್ಲಿ, ನೀವು ನಿಮ್ಮ ಶರೀರದ ತೂಕ ಮತ್ತು ಚಲನಗತಿಯನ್ನು ಬಳಸಿ ಕಾಲಾಂತರದಲ್ಲಿ ಶರೀರದ ಮಾಂಸಖಂಡಗಳ ನಮ್ಯತೆಯನ್ನು ವೃದ್ಧಿಸುತ್ತೀರಿ. ನಾವು ಇಂದು ಹೇಳಿಕೊಡುತ್ತಿರುವ ರೀತಿಯಲ್ಲಿ, ಅದು ಕೇವಲ ಇಪ್ಪತ್ತೈದು ನಿಮಿಷಗಳ ಒಂದು ಪ್ರಕ್ರಿಯೆಯಾಗಿದ್ದು, ಆರೋಗ್ಯ ಮತ್ತು ಯೋಗಕ್ಷೇಮದ ವಿಷಯದಲ್ಲಿ ಪವಾಡಗಳನ್ನದು ಮಾಡಬಲ್ಲದು. ಅದೊಂದು ಅಸಾಧಾರಣ ಹಾಗೂ ಪರಿಪೂರ್ಣವಾದಂತಹ ಪ್ರಕ್ರಿಯೆಯಾಗಿದೆ. ಅದನ್ನು ಮಾಡಲು ನಿಮಗೆ ಬೇಕಾಗಿರುವುದು ಕೇವಲ ಆರಡಿ ಉದ್ದ ಆರಡಿ ಅಗಲದ ಸ್ಥಳ ಮಾತ್ರ; ನಿಮ್ಮ ಶರೀರವೇ ಎಲ್ಲವೂ ಆಗಿದೆ. ಹಾಗಾಗಿ ನೀವೆಲ್ಲಿದ್ದರೂ ಸಹ ಅದನ್ನು ಮಾಡಬಹುದು. ಅದು ಶರೀರವನ್ನು ವರ್ಧಿಸಲು ಬೇರೆ ಯಾವುದೇ ಭಾರ ಹೊರುವ ವ್ಯಾಯಾಮಗಳಷ್ಟೇ ಪರಿಣಾಮಕಾರಿಯಾಗಿದೆ, ಮತ್ತು ಅದು ಶರೀರದ ಮೇಲೆ ಅನಗತ್ಯವಾದ ಒತ್ತಡವನ್ನು ಸೃಷ್ಟಿಸುವುದಿಲ್ಲ.

ನೀವದನ್ನು ಕೇವಲ ಒಂದು ವ್ಯಾಯಾಮ ಪ್ರಕಾರವೆಂದು ತಿಳಿದರೂ ಕೂಡ, ಅಂಗಮರ್ದನವು ಆ ಪರೀಕ್ಷೆಯಲ್ಲಿ ಗೆಲ್ಲುತ್ತದೆ. ಆದರೆ ಮಾಂಸಖಂಡಗಳನ್ನು ಬಲಪಡಿಸುವುದು ಹಾಗೂ ಕೊಬ್ಬನ್ನು ಕಡಿಮೆ ಮಾಡುವುದು ಅಂಗಮರ್ದನದ ಸಣ್ಣ ಲಾಭಗಳಷ್ಟೇ ಆಗಿವೆ. ನೀವು ಮಾಡುವ ಯಾವುದೇ ರೀತಿಯ ಸಾಧನೆಯ ಅತಿ ಮುಖ್ಯವಾದ ವಿಷಯವೆಂದರೆ, ಅದು ಅಂಗಮರ್ದನ ಅಥವಾ ಇನ್ಯಾವುದೇ ಯೋಗಾಸನಗಳಿರಬಹುದು, ಪ್ರಾಣ ವ್ಯವಸ್ಥೆಯನ್ನು ಒಂದು ನಿರ್ದಿಷ್ಟ ಮಟ್ಟದ ಶಕ್ತಿಗೆ ಉತ್ತೇಜಿಸಲು ಮತ್ತು ಪ್ರಾಣದ ಸಮಗ್ರತೆಯನ್ನು ಸಾಧಿಸಲು ನಾವು ಆ ಮೂಲಕ ಪ್ರಯತ್ನಿಸುತ್ತಿರುತ್ತೇವೆ. ಪರಿಪೂರ್ಣವಾಗಿ ಕೆಲಸ ಮಾಡುವಂತಹ ಜೀವವ್ಯವಸ್ಥೆಯನ್ನು ನೀವು ಹೊಂದುವುದು ಮುಖ್ಯ, ಏಕೆಂದರೆ ಅದು ಸಂಪೂರ್ಣವಾಗಿ ಕೆಲಸ ಮಾಡುತ್ತಿದ್ದರೆ ಮಾತ್ರ ಅದನ್ನು ಉನ್ನತಮಟ್ಟದ ಗ್ರಹಿಕೆಗೆ ಕೊಂಡೊಯ್ಯಬಹುದು. ಅರ್ಧ ಶರೀರ ಅಥವಾ ಅರೆ ಜೀವವನ್ನು ಸಂಪೂರ್ಣವಾದ ಗ್ರಹಿಕೆಯ ಹಂತಕ್ಕೆ ಕೊಂಡೊಯ್ಯಲಾಗದು.

“ಅಂಗಮರ್ದನ” ಪದದ ಅರ್ಥ, ದೇಹದ ಭಾಗಗಳು ಅಥವಾ ಅವಯವಗಳ ಮೇಲೆ ನೈಪುಣ್ಯತೆಯನ್ನು ಸಾಧಿಸುವುದು ಎಂದಾಗಿದೆ. ನೀವು ಈ ಜಗತ್ತಿನಲ್ಲಿ ಯಾವುದೇ ಕ್ರಿಯೆಯನ್ನು ಮಾಡಬೇಕೆಂದರೂ ಸಹ, ನೀವು ನಿಮ್ಮ ಶರೀರದ ಅವಯವಗಳ ಮೇಲೆ ಎಷ್ಟರ ಮಟ್ಟಿಗಿನ ನಿಯಂತ್ರಣವನ್ನು ಹೊಂದಿದ್ದೀರಿ ಎಂಬುದು ಅದನ್ನು ನೀವು ಎಷ್ಟು ಚೆನ್ನಾಗಿ ಮಾಡುತ್ತೀರಿ ಎನ್ನುವುದನ್ನು ನಿರ್ಧರಿಸುತ್ತದೆ. ನಾನು ಕ್ರಿಯೆ ಎಂದಾಗ ಒಂದು ಕ್ರೀಡಾ ತಂಡವನ್ನು ಸೇರಿಕೊಳ್ಳುವುದು ಅಥವಾ ಇನ್ಯಾವುದೋ ಕೆಲಸದ ಬಗ್ಗೆ ಮಾತನಾಡುತ್ತಿಲ್ಲ. ನೀವು ನಿಮ್ಮ ಬದುಕುಳಿಯುವಿಕೆಗಾಗಿ ಮಾಡುವ ಕೆಲಸ ಮತ್ತು ನಿಮ್ಮ ಮುಕ್ತಿಗಾಗಿ ಮಾಡುವ ಕ್ರಿಯೆಯ ನಡುವಿನ ಭೇದವನ್ನು ನಾನಿಲ್ಲಿ ತಿಳಿಸುತ್ತಿದ್ದೇನೆ. ನೀವು ನಿಮ್ಮ ಮುಕ್ತಿಗೋಸ್ಕರ ಏನನ್ನಾದರೂ ಮಾಡಬೇಕಾದರೆ ಮತ್ತು ನಿರ್ದಿಷ್ಟವಾಗಿ ನಿಮ್ಮ ಸುತ್ತಲಿರುವ ಇತರರ ಮುಕ್ತಿಗಾಗಿ ಏನನ್ನಾದರೂ ಮಾಡುವುದಾದರೆ, ನೀವು ನಿಮ್ಮ ಅವಯವಗಳ ಮೇಲೆ ಸ್ವಲ್ಪ ಮಟ್ಟಿಗಿನ ನೈಪುಣ್ಯವನ್ನು ಸಾಧಿಸಬೇಕು. ಅವಯವಗಳ ಮೇಲೆ ನೈಪುಣ್ಯವನ್ನು ಸಾಧಿಸುವುದೆಂದರೆ ಮಾಂಸಖಂಡಗಳನ್ನು ಬೆಳೆಸುವುದು ಅಥವಾ ಬೆಟ್ಟವನ್ನೇರುವುದಷ್ಟೇ ಅಲ್ಲ. ಅಂಗಮರ್ದನದಿಂದ ಅದೂ ಸಹ ಸಾಧ್ಯವಾಗುತ್ತದೆಯಾದರೂ ಮೂಲಭೂತವಾಗಿ ಶರೀರದ ಪ್ರಾಣಶಕ್ತಿವ್ಯವಸ್ಥೆಯನ್ನು ಬಲಗೊಳಿಸುವುದು ಅದರ ಉದ್ದೇಶವಾಗಿದೆ.

ಒಂದು ಹೋಲಿಕೆಯನ್ನು ಇಲ್ಲಿ ನೀಡುವುದಾದರೆ, ಒಬ್ಬ ಮನುಷ್ಯ ನಡೆಯುವುದನ್ನು ನೋಡಿದರೆ, ಅವನ ಶರೀರಕ್ಕೆ ಸರಿಯಾಗಿ ವ್ಯಾಯಾಮ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು. ಅದೇ ನೀವೊಬ್ಬ ವ್ಯಕ್ತಿಯ ಮುಖವನ್ನು ನೋಡಿದರೆ, ಅವನ ಮನಸ್ಸಿಗೆ ಉತ್ತಮವಾದ ವ್ಯಾಯಾಮವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಹುದು. ಅದೇ ರೀತಿಯಲ್ಲಿ ನೀವು ಇನ್ನಷ್ಟು ಗಮನಕೊಟ್ಟು ನೋಡಿದರೆ, ಒಬ್ಬರ ಪ್ರಾಣಶಕ್ತಿಯು ಸರಿಯಾಗಿ ರೂಪುಗೊಂಡಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು. ಅವರು ಏನನ್ನು ಮಾಡಬಲ್ಲರು ಅಥವಾ ಏನನ್ನು ಮಾಡಲಾರರು ಎಂಬುದು ಇದರಿಂದ ನಿರ್ಧರಿತವಾಗುತ್ತದೆ. ಸಂಪೂರ್ಣವಾದ ಪ್ರಭುತ್ವವನ್ನು ಪಡೆಯುವುದೆಂದರೆ, ನೀವು ನಿಮ್ಮ ಪ್ರಾಣಶಕ್ತಿಯನ್ನು ಆಸ್ಫೋಟಗೊಳ್ಳುವಂತೆ ಮಾಡಬಹುದು. ನೀವೊಂದು ಕಡೆ ಸುಮ್ಮನೆ ಕುಳಿತರೆ ಸಾಕು, ನಿಮ್ಮ ಶರೀರ ಅನೇಕ ಸಂಗತಿಗಳನ್ನು ಮಾಡುತ್ತದೆ; ನೀವು ಹೋಗಿ ಮಾಡಬೇಕಾಗಿರುವುದಿಲ್ಲ.

ನಿಮಗೆ ಅನುಗ್ರಹ ಲಭ್ಯವಾಗಬೇಕಾದರೆ, ಅದಕ್ಕೆ ಸೂಕ್ತವಾದಂತಹ ಒಂದು ಶರೀರವನ್ನು ನೀವು ಹೊಂದಿರಬೇಕಾಗುತ್ತದೆ. ನಿಮ್ಮ ಬಳಿ ಸೂಕ್ತವಾದ ಶರೀರವಿಲ್ಲದಿದ್ದಾಗ ಅನುಗ್ರಹವು ನಿಮ್ಮನ್ನು ತಾಕಿದರೆ, ನೀವು ಸುಟ್ಟು ಕರಕಲಾಗುತ್ತೀರಿ. ಅನೇಕ ಜನ ದೊಡ್ಡ ದೊಡ್ಡ ಅನುಭವಗಳಿಗಾಗಿ ಹಾತೊರೆಯುತ್ತಿರುತ್ತಾರೆ, ಆದರೆ ಆ ಅನುಭವಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅವರು ತಮ್ಮ ಶರೀರವನ್ನು ಪರಿವರ್ತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಯೋಗದಲ್ಲಿ, ಯಾವುದೇ ಒಂದು ಅನುಭವವನ್ನು ಹಿಂಬಾಲಿಸಿಕೊಂಡು ನೀವು ಹೋಗುವುದಿಲ್ಲ, ನೀವು ಕೇವಲ ಅದಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುತ್ತೀರಿ ಅಷ್ಟೆ. ನಿಮ್ಮ ಆಧ್ಯಾತ್ಮಿಕ ಪ್ರಕ್ರಿಯೆ ಬರೀ ಕಾಡು ಹರಟೆಗಿಂತ ಹೆಚ್ಚಿನದಾಗಿದ್ದರೆ, ನೀವು ನಿಮ್ಮ ಅಂಗಗಳ ಮೇಲೆ ಸ್ವಲ್ಪ ಮಟ್ಟಿಗಿನ ನೈಪುಣ್ಯವನ್ನಾದರೂ ಸಾಧಿಸಬೇಕು.