ಪ್ರಶ್ನೆ: ಆದಿ ಶಂಕರರು ಒಬ್ಬ ರಾಜನ ಶರೀರದೊಳಗೆ ಪರಕಾಯ ಪ್ರವೇಶ ಮಾಡಿ ಅಲ್ಲಿ ಒಂದಷ್ಟು ಸಮಯವಿದ್ದರು ಎಂದು ಹೇಳಲಾಗುತ್ತದೆ. ಇದು ವಾಸ್ತವದಲ್ಲಿ ಸಾಧ್ಯವೇ? ಹೌದೆಂದರೆ, ಹೇಗೆ? ಯಾವ ರೀತಿಯ ಯೋಗದ ಪಾಂಡಿತ್ಯವು ಇಂತಹ ಚಮತ್ಕಾರವನ್ನು ಸಾಧ್ಯವಾಗಿಸುತ್ತದೆ?

ಸದ್ಗುರು: ಆದಿ ಶಂಕರರು ಒಬ್ಬ ವ್ಯಕ್ತಿಯೊಂದಿಗೆ ವಾದಕ್ಕಿಳಿದು ಗೆದ್ದರು. ನಂತರ, ಆ ವ್ಯಕ್ತಿಯ ಹೆಂಡತಿ, ಆದಿ ಶಂಕರರಿಗೆ ತನ್ನ ಜೊತೆ ವಾದ ಮಾಡಿ ಎಂದಳು - ಮಹಿಳೆಯರ ವಿಷಯ ನಿಮಗೆ ಗೊತ್ತಲ್ಲವೇ! ಆದಿ ಶಂಕರರ ತರ್ಕ ಒಂದು ಮಟ್ಟದ್ದು; ಅಂತಹವರೊಂದಿಗೆ ನೀವು ವಾದಿಸಲು ಹೋಗಬಾರದು. ಹೀಗಿದ್ದರೂ, ಆಕೆ, "ನೀವು ನನ್ನ ಗಂಡನನ್ನು ಸೋಲಿಸಿದರಿ. ಆದರೆ, ಆತ ಪರಿಪೂರ್ಣನಲ್ಲ. ನಾವಿಬ್ಬರೂ ಒಂದರ ಎರಡು ಭಾಗಗಳು. ಹಾಗಾಗಿ, ನೀವು ನನ್ನೊಂದಿಗೂ ವಾದಿಸಬೇಕು." ಎಂದು ಹೇಳಿ ತನ್ನನ್ನು ವಾದದಲ್ಲಿ ಸೇರಿಸಿಕೊಂಡಳು. ಈ ತರ್ಕವನ್ನು ತಳ್ಳಿಹಾಕುವುದು ಹೇಗೆ? ಆದಿ ಶಂಕರರೊಂದಿಗೆ ಅವಳ ವಾದ ಆರಂಭವಾಯಿತು. ವಾದಿಸುತ್ತ, ವಾದಿಸುತ್ತ,  ತಾನು ಸೋಲುತ್ತಿದ್ದೇನೆಂದು ಆಕೆಗೆ ಮನವರಿಕೆಯಾದಾಗ, ಅವಳು ಮಾನವ ಲೈಂಗಿಕತೆಯುನ್ನು ಕುರಿತು ಪ್ರಶ್ನೆಗಳನ್ನು ಕೇಳಲಾರಂಭಿಸಿದಳು. ಆದಿ ಶಂಕರರು ತಮಗೆ ತಿಳಿದಿದ್ದನ್ನು ಹೇಳಿದರು. ಅವಳಿನ್ನು ಹೆಚ್ಚಿನ ಆಳಕ್ಕಿಳಿದು, "ನಿಮ್ಮ ಅನುಭವದಿಂದ ನಿಮಗೇನು ತಿಳಿದಿದೆ?" ಎಂದು ಪ್ರಶ್ನಿಸಿದಳು. ಆದಿ ಶಂಕರರು ಬ್ರಹ್ಮಚಾರಿಗಳು. ತನ್ನನ್ನು ಸೋಲಿಸಲು ಇದೊಂದು ಉಪಾಯವೆಂದು ಅವರಿಗೆ ತಿಳಿದಿತ್ತು. ಅದಕ್ಕಾಗಿ, ಅವರು, "ನನಗೆ ಒಂದು ತಿಂಗಳ ಕಾಲಾವಕಾಶ ಬೇಕು. ಒಂದು ತಿಂಗಳಿನ ನಂತರ, ನಾವು ವಾದವನ್ನು ಎಲ್ಲಿ ಬಿಟ್ಟಿದ್ದೆವೋ, ಅಲ್ಲಿಂದಲೇ ಪುನಃ ಆರಂಭಿಸೋಣ." ಎಂದರು.

ನಂತರ ಅವರು ಒಂದು ಗುಹೆಯೊಳಕ್ಕೆ ಹೋಗಿ, ತಮ್ಮ ಶಿಷ್ಯರುಗಳಿಗೆ ಹೀಗೆ ಹೇಳಿದರು, "ಏನೇ ಆಗಲಿ, ಈ ಗುಹೆಯೊಳಗೆ ಬರಲು ಯಾರಿಗೂ ಅನುಮತಿಸಬೇಡಿ, ಏಕೆಂದರೆ ನಾನು ನನ್ನ ದೇಹವನ್ನು ಬಿಟ್ಟು ಸ್ವಲ್ಪ ಸಮಯದವರೆಗೆ ಇನ್ನೊಂದು ಸಾಧ್ಯತೆಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ."

ಜೀವಶಕ್ತಿ ಅಥವಾ ಪ್ರಾಣವು ಐದು ಆಯಾಮಾಗಳಲ್ಲಿ ವ್ಯಕ್ತವಾಗುತ್ತದೆ: ಪ್ರಾಣ ವಾಯು, ಸಮಾನ, ಅಪಾನ, ಉದಾನ ಮತ್ತು ವ್ಯಾನ. ಪ್ರಾಣದ ಈ ಐದು ಅಭಿವ್ಯಕ್ತಿಗಳು ಪ್ರತ್ಯೇಕವಾದ ಕಾರ್ಯಗಳನ್ನು ಹೊಂದಿವೆ. ಪ್ರಾಣ ವಾಯು ಉಸಿರಾಟದ ಕ್ರಿಯೆಯ ಉಸ್ತುವಾರಿ, ಆಲೋಚನಾ ಪ್ರಕ್ರಿಯೆ ಮತ್ತು ಸ್ಪರ್ಶ ಸಂವೇದನೆಯ ಕಾರ್ಯವನ್ನು ನಿರ್ವಹಿಸುತ್ತದೆ. ಯಾರಾದರೂ ಜೀವಂತವಾಗಿದ್ದಾರೋ ಅಥವಾ ಸತ್ತಿದ್ದಾರೋ ಎಂದು ನೀವು ಹೇಗೆ ಪರೀಕ್ಷಿಸುತ್ತೀರಿ? ಅವರ ಉಸಿರಾಟವು ನಿಂತಿದ್ದರೆ, ಅವರು ಸತ್ತಿದ್ದಾರೆಂದು ಹೇಳಲಾಗುತ್ತದೆ. ಪ್ರಾಣ ವಾಯು ನಿರ್ಗಮಿಸಲು ಆರಂಭಿಸಿರುವ ಕಾರಣ ಉಸಿರು ನಿಂತುಹೋಗಿರುತ್ತದೆ. ಪ್ರಾಣ ವಾಯು ಸಂಪೂರ್ಣವಾಗಿ ನಿರ್ಗಮಿಸಲು ಒಂದೂವರೆ  ಗಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.

ಅದಕ್ಕಾಗಿಯೇ, ಸಾಂಪ್ರದಾಯಿಕವಾಗಿ ಈ ಪದ್ಧತಿಯು ರೂಢಿಯಲ್ಲಿತ್ತು: ಉಸಿರಾಟವು ನಿಂತ ಮೇಲೆ, ಆ ಶವವನ್ನು ಸುಡುವ ಮೊದಲು, ಕನಿಷ್ಠವೆಂದರೂ ಒಂದೂವರೆ ಗಂಟೆಗಳ ಕಾಲ ನೀವು ಕಾಯಬೇಕಿತ್ತು - ಏಕೆಂದರೆ ಅವರಿನ್ನೂ ಬೇರೆ ಅನೇಕ ರೀತಿಗಳಲ್ಲಿ ಬದುಕಿರುತ್ತಾರೆ. ಅವರ ಆಲೋಚನೆಯ ಪ್ರಕ್ರಿಯೆ, ಅವರ ಉಸಿರಾಟದ ಕ್ರಿಯೆ ಮತ್ತು ಅವರ ಸಂವೇದನೆಗಳು ನಿಂತುಹೋದಾಗ, ಅವರು ದೇಹ ಸುಡುವುದರ ವೇದನೆಯನ್ನು ಅನುಭವಿಸುವುದಿಲ್ಲ ಎಂಬ ಕಾರಣಕ್ಕೆ ನಾವು ಒಂದೂವರೆ ಗಂಟೆಗಳ ಕಾಲ ಕಾಯುತ್ತೇವೆ. ಪ್ರಾಣದ ಉಳಿದ ಭಾಗವು ಇನ್ನೂ ಇರುತ್ತದೆ. ಪ್ರಾಣದ ಕೊನೆಯ ಆಯಾಮವಾದ ವ್ಯಾನವು, ಹನ್ನೆರಡರಿಂದ ಹದಿನಾಲ್ಕು ದಿನಗಳವರೆಗೆ ಇರಬಹುದು. ನಮ್ಮ ದೇಹದ ರಕ್ಷಣೆ ಮತ್ತು ಸಮಗ್ರತೆಯು ಹೆಚ್ಚಾಗಿ ವ್ಯಾನ ಪ್ರಾಣವಾಯುವಿನ ಕಾರ್ಯಭಾರದಿಂದಾಗಿ ಆಗಿದೆ. ಆದಿ ಶಂಕರರು ತಮ್ಮ ದೇಹವನ್ನು ತೊರೆದಾಗ, ದೇಹವನ್ನು ಕಾಪಾಡಿಕೊಳ್ಳುವ ಸಲುವಾಗಿ ವ್ಯಾನ ವಾಯುವನ್ನು ಜೀವವ್ಯವಸ್ಥೆಯಲ್ಲಿ ಇರುವಂತೆ ನೋಡಿಕೊಂಡಿದ್ದರು.

ಹೀಗಿರಬೇಕಾದರೆ, ಒಬ್ಬ ರಾಜನಿಗೆ ಹಾವು ಕಡಿದು ಅವನ ಸಾವಾಗಿತ್ತು. ನಾಗರಹಾವಿನ ವಿಷವು ನಿಮ್ಮ ಶರೀರದೊಳಗೆ ಸೇರಿದಾಗ, ರಕ್ತವು ಹೆಪ್ಪುಗಟ್ಟಿ, ಉಸಿರಾಟವು ಕಷ್ಟವಾಗುತ್ತದೆ, ಏಕೆಂದರೆ, ರಕ್ತಪರಿಚಲನೆಯು ತ್ರಾಸದಾಯಕವಾದಾಗ, ಉಸಿರಾಡಲು ಬಹಳ ಕಷ್ಟವಾಗುತ್ತದೆ. ನಿಮ್ಮ ಪ್ರಾಣ ವಾಯು ನಿರ್ಗಮಿಸುವ ಮುನ್ನವೇ ನಿಮ್ಮ ಉಸಿರಾಟವು ನಿಂತುಹೋಗುತ್ತದೆ. ಅನೇಕ ವಿಧದಲ್ಲಿ, ಪರಕಾಯ ಪ್ರವೇಶಕ್ಕೆ ಇದು ಸೂಕ್ತವಾದ ಪರಿಸ್ಥಿತಿ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿ ಸತ್ತಾಗ ನಿಮಗೆ ಒಂದೂವರೆ ಗಂಟೆಯಷ್ಟು ಸಮಯಾವಕಾಶ ಸಿಗುತ್ತದೆ. ಆದರೆ, ಶರೀರದಲ್ಲಿ ನಾಗರಹಾವಿನ ವಿಷವಿದ್ದಾಗ, ನಿಮಗೆ ನಾಲ್ಕೂವರೆ ಗಂಟೆಯಷ್ಟು ಸಮಯ ದೊರೆಯುತ್ತದೆ.

ಆದಿ ಶಂಕರರಿಗೆ ಈ ಅವಕಾಶ ದೊರೆಯಿತು, ಮತ್ತು ಅವರು ಬಹಳ ಸಲೀಸಾಗಿ ಮೃತ ರಾಜನ ಶರೀರವನ್ನು ಪ್ರವೇಶಿಸಿದರು. ಅನುಭವಾತ್ಮಕವಾಗಿ ಪ್ರಶ್ನೆಗಳಿಗೆ ಉತ್ತರಿಸಲು ಆ ಪ್ರಕ್ರಿಯೆಯನ್ನು ಸ್ವತಃ ಅನುಭವಿಸಿದರು. ರಾಜನ ವಲಯದಲ್ಲಿ ಕೆಲ ಬುದ್ಧಿವಂತರಿದ್ದರು. ಸತ್ತ ರಾಜ ಇದ್ದಕ್ಕಿದಂತೆ ಸಂಪೂರ್ಣ ಶಕ್ತಿಯಿಂದ ಎದ್ದು ಕುಳಿತಿದ್ದನ್ನು ಕಂಡ ಅವರು, ರಾಜನ ವರ್ತನೆಯನ್ನು ಗಮನಿಸಿ ಅವನು ರಾಜನಲ್ಲವೆಂದು, ಮತ್ತು ಅವನ ದೇಹದಲ್ಲಿ ಬೇರೆ ಯಾರೋ ಇದ್ದಾರೆ ಎನ್ನುವುದನ್ನು ಗುರುತಿಸಿದರು. ಆದ್ದರಿಂದ, ಅವರು ನಗರದಾದ್ಯಂತ ಸೈನಿಕರನ್ನು ಕಳುಹಿಸಿ, ಎಲ್ಲೆಲ್ಲಿ ಮೃತದೇಹವು ಕಾಣಸಿಗುತ್ತದೆಯೋ, ಅದನ್ನು ಅಲ್ಲಿಯೇ ತಕ್ಷಣ ಸುಟ್ಟುಹಾಕುವಂತೆ ಹೇಳಿದರು. ಹಾಗೆ ಮಾಡಿದರೆ, ಆ ಸುಟ್ಟ ಶವವು ರಾಜನ ಶರೀರವನ್ನು ಹೊಕ್ಕಿರುವ ವ್ಯಕ್ತಿಯದ್ದಾಗಿದ್ದರೆ, ಆತನಿಗೆ ಮರಳಿ ತನ್ನ ಶರೀರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂಬುದು ಅವರ ಉಪಾಯವಾಗಿತ್ತು. ಬೇರೆ ವ್ಯಕ್ತಿಯಾದರೆ ಏನಂತೆ, ರಾಜ ಬದುಕಿ ಬಂದಿದ್ದಾನೆ ಮತ್ತವನು ರಾಜನ ಹಾಗೆಯೇ ಕಾಣುತ್ತಾನಲ್ಲವೆ ಎಂದು ಅವರ ಎಣಿಕೆ. ಆದರೆ ಅವರು ಅದರಲ್ಲಿ ಯಶಸ್ವಿಯಾಗಲಿಲ್ಲ, ಮತ್ತು ಆದಿ ಶಂಕರರು ತಮ್ಮ ಶರೀರಕ್ಕೆ ಹಿಂತಿರುಗಿದರು.

ಇಂತಹದ್ದೊಂದು ಕ್ರಿಯೆ ಸಾಧ್ಯವೇ? ಹೌದು, ಇದು ಸಾಧ್ಯ. ಇದೊಂದು ಚಮತ್ಕಾರವೇ? ಇದೇನೂ ಅಂತಹ ಚಮತ್ಕಾರವಲ್ಲ. ನಿಮ್ಮೊಳಗಿನ ಜೀವಶಕ್ತಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸ್ವಲ್ಪ ತಿಳಿವಳಿಕೆ ಬೇಕಾಗುತ್ತದೆಯಷ್ಟೆ. ಬದುಕಿರುವವರ ದೇಹದೊಳಕ್ಕೆ ಪರಕಾಯ ಪ್ರವೇಶ ಮಾಡುವುದು ಕಷ್ಟಸಾಧ್ಯವಾಗಬಹುದು. ಆಗ ತಾನೇ ಮರಣ ಹೊಂದಿದವರ ದೇಹವನ್ನು ಪ್ರವೇಶಿಸುವುದು ಬಹಳ ಸರಳ. ಇದನ್ನು ಮಾಡಲು ಮರಣಾನಂತರದ ಒಂದೂವರೆ ಗಂಟೆಗಳು ಸೂಕ್ತವಾದ ಸಮಯವಾಗಿರುತ್ತವೆ, ಏಕೆಂದರೆ, ಅಲ್ಲಿ ಅಗತ್ಯವಿರುವ ನಿರ್ವಾತವು ಏರ್ಪಟ್ಟಿರುತ್ತದೆ, ಮತ್ತು ಅದೇ ಸಮಯದಲ್ಲಿ ಬೇರೆಲ್ಲಾ ಕೆಲಸವು ನಡೆಯತ್ತಲೇ ಇರುತ್ತದೆ. ಇದೇ ಕಾರಣಕ್ಕಾಗಿ, ಭಾರತದಲ್ಲಿ, ಯಾರಾದರೂ ಸಾವಿನ ಅಂಚಿನಲ್ಲಿದ್ದರೆ, ಅವರನ್ನು ಮನೆಯ ಹೊರಗೆ ಮಲಗಿಸುತ್ತಿದ್ದರು. ಸಾಂಬ್ರಾಣಿಯನ್ನು ಹಚ್ಚಿ, ಮಂತ್ರವನ್ನು ಪಠಿಸುತ್ತಿದ್ದರು. ಕೊನೆಯುಸಿರು ಎಳೆಯುತ್ತಿರುವವರಿಗೆ ಸಾಂತ್ವನ ನೀಡಲು ಮತ್ತು ಇನ್ಯಾರೋ ದೇಹವನ್ನು ಆಕ್ರಮಿಸುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ಹಾಗೆ ಮಾಡಲಾಗುತ್ತಿತ್ತು. 

ಹಾಗಾಗಿ ಇಂತಹ ಸಂಗತಿಗಳು ನಡೆಯಬಾರದೆಂದು ಅನೇಕ ವಿಧಿಗಳು ಮತ್ತು ರಕ್ಷಣಾವಿಧಾನಗಳನ್ನು ಹಿಂದೆಲ್ಲಾ ರಚಿಸಲಾಗಿತ್ತು. ಆದರೆ, ಇಂದು, ಇದು ಎಂತಹ ಅಪರೂಪದ ಘಟನೆಯಾಗಿದೆ ಎಂದರೆ, ಜನರು ಇದನ್ನು ಅತ್ಯದ್ಭುತ ಚಮತ್ಕಾರವೆಂದು ಬಣ್ಣಿಸಲು ಆರಂಭಿಸಿದ್ದಾರೆ.