ಪ್ರಶ್ನೆ: ಸದ್ಗುರುಗಳೇ, ವಿದ್ಯಾರ್ಥಿಗಳ ಜೀವನದಲ್ಲಿ ಆಧ್ಯಾತ್ಮಿಕತೆಯು ಯಾವ ರೀತಿಯಲ್ಲಿ ಮುಖ್ಯವಾಗುತ್ತದೆ?

ಸದ್ಗುರು: ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ ನೀವೊಬ್ಬ ಅನ್ವೇಷಕರಾಗಿದ್ದೀರಿ ಎಂದರ್ಥ. ’ಧಾರ್ಮಿಕ ವ್ಯಕ್ತಿ’ ಎಂದರೆ, ಯಾವುದೋ ಒಂದರಲ್ಲಿ ನಂಬಿಕೆಯಿಟ್ಟವರು ಎಂದರ್ಥ. ದುರದೃಷ್ಟವಶಾತ್, ಶಿಕ್ಷಣ ಮತ್ತು ವಿಜ್ಞಾನಿಗಳು ಸಹ ಇಂದು ’ನಂಬುವವ’ರಾಗಿಬಿಟ್ಟಿದ್ದಾರೆ. ಆದರೆ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ಆಧ್ಯಾತ್ಮಿಕ ಅನ್ವೇಷಕರದ್ದು ಒಂದು ಉತ್ತಮವಾದ ಜೋಡಿ, ಏಕೆಂದರೆ ಒಂದು ರೀತಿಯಲ್ಲಿ, ಲವಲವಿಕೆಯಿಂದ ಕೂಡಿದ ಯಾವುದೇ ಜೀವ ಸ್ವಾಭಾವಿಕವಾಗಿಯೇ ಆಧ್ಯಾತ್ಮಿಕ ಅನ್ವೇಷಕವಾಗಿರುತ್ತದೆ. ಅವರು ತಮ್ಮನ್ನು ತಾವು ಆ ರೀತಿಯಲ್ಲಿ ಗುರುತಿಸಿಕೊಳ್ಳಬೇಕಾಗಿಲ್ಲ - ಆಧ್ಯಾತ್ಮಿಕರಾದರೆ ಅವರು ಎಲ್ಲದರ ಅರ್ಥವನ್ನು ತಿಳಿಯಲು ಬಯಸುತ್ತಾರೆ - ಹಾಗಾದಾಗ ನೀವು ಆಧ್ಯಾತ್ಮಿಕ ಅನ್ವೇಷಕರಾಗಿದ್ದೀರಿ ಎಂದರ್ಥ. ಆದರೆ ನೀವು ನಿಮ್ಮ ಅನ್ವೇಷಣೆಯನ್ನು ಒಂದು ಫಲಿತಾಂಶಕ್ಕೆ ಬರುವಂತೆ ವ್ಯವಸ್ಥಿತಗೊಳಿಸಿದ್ದೀರೋ ಅಥವಾ ಕೇವಲ ಯುವಕರಾಗಿದ್ದಾಗ ಮಾತ್ರ ನೀವು ಪ್ರಶ್ನೆಗಳನ್ನು ಕೇಳಿ, ಮೂವತ್ತರ ವಯಸ್ಸಿಗೆಲ್ಲಾ ಎಲ್ಲವನ್ನೂ ಮರೆತು ನಿಮ್ಮ ಜೀವನವನ್ನು ಬರಿ ಹೊಟ್ಟೆಪಾಡಿನ ಹೋರಾಟವಾಗಿಸಿಕೊಂಡಿದ್ದೀರೋ ಎನ್ನುವುದೇ ಪ್ರಶ್ನೆ. ಆಹಾರಕ್ಕಾಗಿ ಹೋರಾಟ, ಹಣಕ್ಕಾಗಿ ಹೋರಾಟ, ಅಥವ ಮತ್ತಿನ್ಯಾವುದಕ್ಕಾದರೂ ಹೋರಾಟ - ಬಹುತೇಕ ಜನ ವಾಸಿಸುತ್ತಿರುವುದೇ ಹೀಗೆ.

ಪ್ರಶ್ನೆಗಳನ್ನು ಜೀವಂತವಾಗಿಟ್ಟುಕೊಳ್ಳುವುದು

 

ನೀವು ನಿಮ್ಮ ಪ್ರಶ್ನೆಗಳನ್ನು ಜೀವಂತವಾಗಿರಿಸಿಕೊಂಡರೆ, ನೀವು ಸ್ವಾಭಾವಿಕವಾಗಿಯೇ ಆಧ್ಯಾತ್ಮಿಕ ಅನ್ವೇಷಕರಾಗಿರುತ್ತೀರಿ. ಉತ್ತರಿಸದ ಪ್ರಶ್ನೆಯನ್ನು ಹಾಗೆಯೇ ಬಿಟ್ಟುಬಿಡಲು ನಿಮಗೆ ಹೇಗೆ ಸಾಧ್ಯ? ನಿಮ್ಮ ಜೀವನದ ಕುರಿತಾದ ಯಾವುದೇ ಪ್ರಶ್ನೆಗೆ ಉತ್ತರ ಸಿಗಲೇಬೇಕು. ನಿಮ್ಮ ಮನಸ್ಸು ಮತ್ತು ನಿಮ್ಮ ಬುದ್ಧಿಶಕ್ತಿಗೆ ಇದನ್ನು ಜೀವಂತವಾಗಿರಿಸುವ ಸಾಮರ್ಥ್ಯವಿರುವುದಿಲ್ಲ. ಸ್ವಲ್ಪ ಸಮಯದ ನಂತರ, ಅವು ನಿಮ್ಮನ್ನು ಮೋಸಗೊಳಿಸುತ್ತವೆ. ನೀವು ಹತ್ತು ವರ್ಷದವರಿದ್ದಾಗ ಹೇಗಿದ್ದಿರಿ ಮತ್ತು ಈಗ ನೀವು ಹೇಗಿದ್ದೀರಿ ಎಂದು ನೋಡಿದರೆ ನೀವು ಸ್ವಲ್ಪ ಹೆಚ್ಚೇ ಕಪಟಿಗಳಾಗಿದ್ದೀರಿ. ದುರದೃಷ್ಟವಶಾತ್, ನಿಮಗೆ ಮೂವತ್ತು ವರ್ಷವಾಗುವಷ್ಟರಲ್ಲಿ, ನೀವು ಇನ್ನೂ ಹೆಚ್ಚು ಕಪಟಿಗಳಾಗಿರುತ್ತೀರಿ. ನಿಮಗೇನೂ ತಿಳಿದಿಲ್ಲದಿದ್ದರೂ ಸಹ, "ಇಡೀ ವಿಶ್ವವನ್ನು ದೇವರು ಸೃಷ್ಟಿಸಿದ" ಎಂದು ಹೇಳಲು ಶುರುಮಾಡುತ್ತೀರಿ.

ತಾರುಣ್ಯವು ನೀವು ನಿಶ್ಚಿತತೆಯನ್ನು ಬಯಸುವ ಸಮಯ ಮತ್ತು ವಯಸ್ಸಲ್ಲ. ಅನಿಶ್ಚಿತತೆಯನ್ನು ನಿರ್ವಹಿಸಲು ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಬೇಕು. ಇದಕ್ಕಾಗಿ ನಿಮಗೆ ಆಧ್ಯಾತ್ಮಿಕ ಪ್ರಕ್ರಿಯೆಯ ಅಗತ್ಯವಿದೆ.

ಸಾಮಾನ್ಯವಾಗಿ, ಜಗತ್ತಿನಲ್ಲಿ, ವಯಸ್ಕರಾಗಿರುವುದು ಎಂದರೆ ನಿಮಗೆ ನಿಜವಾಗಿಯೂ ತಿಳಿದಿಲ್ಲದಿರುವ ಎಲ್ಲವನ್ನೂ ತಿಳಿದಿರುವಂತೆ ಭಾವಿಸುವುದು ಎಂದು ಜನ ಅರ್ಥಮಾಡಿಕೊಳ್ಳುತ್ತಾರೆ. ವಯಸ್ಕರು ಅವರಿಗೆ ತಿಳಿದಿಲ್ಲದ ಎಲ್ಲವೂ ’ತನಗೆ ತಿಳಿದಿದೆ’ ಎನ್ನುವಂತೆ ವರ್ತಿಸುತ್ತಾರೆ. ಆದರೆ, “ಈ ವಿಷಯಗಳು ನನಗೆ ಗೊತ್ತು, ಮಿಕ್ಕ ಏನೂ ನನಗೆ ಗೊತ್ತಿಲ್ಲ” ಎಂಬ ರೀತಿಯಲ್ಲಿ ನೀವಿರಬೇಕೆಂದು ನಾನು ಬಯಸುತ್ತೇನೆ. 

ನಿಮ್ಮ ಮರಣದ ಸಮಯ ಹತ್ತಿರವಾದಾಗಲೂ ಕೂಡ, ನೀವು ಇನ್ನೂ ಅನೇಕ ವಿಷಯಗಳನ್ನು ತಿಳಿದಿರುವುದಿಲ್ಲ. ಅದು ನಿಮಗೆ ಪರವಾಗಿಲ್ಲವೋ, ಅಥವಾ ನೀವು ಕೇವಲ ಊಹೆಗಳನ್ನು ಮಾಡಿಕೊಳ್ಳುತ್ತೀರೋ? ತಮ್ಮಿಡೀ ಜೀವಿತಾವಧಿಯಲ್ಲಿ ನಾಸ್ತಿಕರಾಗಿ ಉಳಿದ ಅನೇಕ ಜನ ಮರಣ ಸಮೀಪಿಸುವಾಗ ಪ್ರಾರ್ಥನೆಯನ್ನು ಮಾಡಲು ಆರಂಭಿಸುತ್ತಾರೆ. ಆಗ ಸ್ವಲ್ಪ ನಿಶ್ಚಿತತೆಯನ್ನು ಬಯಸುತ್ತಾರೆ. ಆದರೆ ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ ಅನಿಶ್ಚಿತತೆಯನ್ನು ಆಚರಿಸುವುದು ಎಂದರ್ಥ. ಈ ಜೀವನ ಅನಿಶ್ಚಿತವಾದುದು ಎನ್ನುವುದನ್ನು ನಾವು ತಿಳಿದಿದ್ದೇವೆ ಮತ್ತು ನಿಶ್ಚಿತತೆಯ ತಪ್ಪು ಭಾವವನ್ನು ಸೃಷ್ಟಿಸಿಕೊಳ್ಳುವುದಕ್ಕಿಂತ ನಾವು ಈ ಅನಿಶ್ಚಿತತೆಯನ್ನು ನಿಭಾಯಿಸಲು ನಮ್ಮನ್ನು ನಾವು ಹೇಗೆ ಸಜ್ಜುಗೊಳಿಸಬಹುದು ಎಂಬುದರತ್ತ ಗಮನಹರಿಸುತ್ತಿದ್ದೇವೆ. ಪ್ರತಿಯೊಬ್ಬರೂ ಸಹ ನಿಶ್ಚಿತತೆಯ ಸುಳ್ಳು ಪರಿಕಲ್ಪನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ – “ಒಹ್ ದೇವರು ಮೇಲೆ ಕುಳಿತು ಎಲ್ಲವನ್ನೂ ನೋಡುತ್ತಿದ್ದಾನೆ, ಚಿಂತಿಸಬೇಡ, ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ" ಎಂದವರು ಹೇಳುತ್ತಾರೆ. ಆದರೆ ಅಂಥದ್ದೇನೂ ಇದುವರೆಗೆ ಆಗಿಲ್ಲ. ನೀವು ಚೆನ್ನಾಗಿ ನಿರ್ವಹಿಸಿದ ಕೆಲಸ ಉತ್ತಮವಾದ ಫಲಿತಾಂಶವನ್ನು ನೀಡಿತು; ನೀವು ಚೆನ್ನಾಗಿ ನಿರ್ವಹಿಸದೇ ಇದ್ದ ಕೆಲಸ ಅಸ್ತವ್ಯಸ್ತವಾಯಿತು. ಆದರೆ ಬದುಕಿನ ಅನೇಕ ಅನಿಶ್ಚಿತತೆಗಳ ಕಾರಣದಿಂದಾಗಿ, ನಾವು ಎಲ್ಲವನ್ನೂ ಸರಿಯಾಗಿ ನಿರ್ವಹಿಸುತ್ತಿದ್ದರೂ ಸಹ, ನಾಳೆ ಬೆಳಿಗ್ಗೆ ನಾವು ಸತ್ತುಬೀಳಬಹುದು. ಅದು ಸಾಧ್ಯ.

ಅನಿಶ್ಚಿತತೆಯೊಂದಿಗೆ ಹೆಜ್ಜೆ ಹಾಕುವುದು

ಅನಿಶ್ಚಿತತೆಯಿಂದ ಕೂಡಿದ ಈ ಬ್ರಹ್ಮಾಂಡವು, ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ, ನಂಬಿಕೆ, ಮತ್ತು ಸಿದ್ಧಾಂತಗಳೊಂದಿಗೆ ನಿಶ್ಚಿತತೆಯ ತಪ್ಪು ಕಲ್ಪನೆಗಳನ್ನು ತರಲು ಪ್ರಯತ್ನಿಸುವ ಬದಲು, ಅನಿಶ್ಚಿತತೆಯನ್ನು ನಿರ್ವಹಿಸಲು ನಿಮ್ಮನ್ನು ಸಜ್ಜುಗೊಳಿಸುತ್ತದೆ. ನೀವು ನಿಶ್ಚಿತತೆಯ ಒಂದು ನಿರ್ದಿಷ್ಟ ಭಾವವನ್ನು ಸೃಷ್ಟಿಸಲು ಪ್ರಯತ್ನಿಸುವಾಗ, ನೀವು ನಿಮ್ಮ ಗಡಿಗಳನ್ನು ಮೊಟಕುಗೊಳಿಸಲು ಪ್ರಾರಂಭಿಸುತ್ತೀರಿ. ಜನರು ತಮ್ಮನ್ನು ತಾವು ಚಿಕ್ಕದಾಗಿರಿಸಿಕೊಳ್ಳಲು ಆರಂಭಿಸುತ್ತಾರೆ, ಏಕೆಂದರೆ ಕಾರ್ಯಕ್ಷೇತ್ರವು ಚಿಕ್ಕದಾದಷ್ಟೂ ನಿಶ್ಚಿತತೆ ಹೆಚ್ಚು. ನೀವು ನಿಮ್ಮ ಕೋಣೆಯೊಳಗೇ ಯಾವಗಲೂ ವಾಸಿಸಿದರೆ, ತೊಂಬತ್ತು ಪ್ರತಿಶತದಷ್ಟು ನೀವೆಂದುಕೊಂಡ ಹಾಗೆ ನಡೆಯತ್ತದೆ. ಆದರೆ ನೀವು ನಿಮ್ಮ ಕಾರ್ಯಕ್ಷೇತ್ರವನ್ನು ಒಂದು ಪಟ್ಟಣಕ್ಕೆ ವಿಸ್ತರಿಸಿದರೆ, ಐವತ್ತು ಪ್ರತಿಶತದಷ್ಟು ನೀವೆಂದುಕೊಂಡ ಹಾಗೆ ಸಂಭವಿಸುತ್ತದೆ ಮತ್ತು ಇನ್ನುಳಿದ ಐವತ್ತು ಪ್ರತಿಶತ ಅನಿಶ್ಚಿತವಾಗಿರುತ್ತದೆ. ನೀವೇನಾದರೂ ನಿಮ್ಮ ಕಾರ್ಯಕ್ಷೇತ್ರವನ್ನು ಇಡೀ ಜಗತ್ತಿಗೆ ವಿಸ್ತರಿಸಿಕೊಂಡರೆ, ಕೇವಲ ಹತ್ತು ಪ್ರತಿಶತದಷ್ಟೂ ಸಹ ನೀವೆಂದುಕೊಂಡಂತೆ ಸಂಭವಿಸುವುದಿಲ್ಲ, ಮತ್ತು ತೊಂಬತ್ತು ಪ್ರತಿಶತ ಅನಿಶ್ಚಿತತೆಯಿಂದ ಕೂಡಿರುತ್ತದೆ.

ಈ ಹದಿಹರೆಯದ ವಯಸ್ಸಿನಲ್ಲಿ, ನೀವು ಗಣನೀಯವಾಗಿ ದೈಹಿಕ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕು. ಏಕೆಂದರೆ ಸಮಯ ಬಂದಾಗ, ಜೀವನವು ನಿಮಗೆ ನೀವಂದುಕೊಂಡ ಕೆಲಸ ಮಾಡಲು ಅವಕಾಶವನ್ನು ನೀಡಿದಾಗ, ನಿಮ್ಮ ದೇಹ ಮತ್ತು ನಿಮ್ಮ ಮನಸ್ಸುಗಳು ನಿಮ್ಮನ್ನು ಯಾವುದೇ ರೀತಿಯಲ್ಲಿ ತಡೆಹಿಡಿಯಬಾರದು.

ನೀವು ಅನಿಶ್ಚಿತತೆಯೊಂದಿಗೆ ಆಡಲು ಕಲಿತರೆ ಮಾತ್ರ ನೀವು ಅಮೋಘವಾದ ಜೀವನವನ್ನು ನಡೆಸುತ್ತೀರಿ. ಇಲ್ಲದಿದ್ದರೆ, ಎಲ್ಲದರಲ್ಲೂ ನಿಶ್ಚಿತತೆಯನ್ನು ಪಡೆಯಲು ಹೋಗಿ, ನೀವು ನಿಮ್ಮ ಜೀವನವನ್ನು ಬಹಳ ಚಿಕ್ಕದಾಗಿ ಬದುಕುತ್ತೀರಿ. ಮತ್ತು ಬದುಕುವ ಎಲ್ಲಾ ಸಂಭಾವ್ಯತೆಗಳನ್ನು ನೀವು ತೆಗೆದು ಹಾಕುತ್ತೀರಿ.

ತಾರುಣ್ಯವು ನೀವು ನಿಶ್ಚಿತತೆಯನ್ನು ಬಯಸುವ ಸಮಯ ಮತ್ತು ವಯಸ್ಸಲ್ಲ. ಅನಿಶ್ಚಿತತೆಯನ್ನು ನಿರ್ವಹಿಸಲು ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಬೇಕು. ಇದಕ್ಕಾಗಿ ನಿಮಗೆ ಆಧ್ಯಾತ್ಮಿಕ ಪ್ರಕ್ರಿಯೆಯ ಅಗತ್ಯವಿದೆ.

ಜೀವನದ ಅವಕಾಶಗಳಿಗಾಗಿ ತಯಾರಾಗುವುದು

ಪ್ರತಿದಿನ, ನಾನೊಂದು ಹೊಸ ಸ್ಥಳದಲ್ಲಿರುತ್ತೇನೆ. ನಾನು ಎರಡು ರಾತ್ರಿಗಳು ಒಂದೇ ಕಡೆ ಮಲಗಿದರೆ, ಅದು ನನಗೆ ಒಂದು ಐಷಾರಾಮವಿದ್ದಂತೆ. ನಿಸ್ಸಂಶಯವಾಗಿ, ನನಗೆ ಯಾವುದೇ ರೀತಿಯ ಸರಿಯಾದ ವೇಳಾಪಟ್ಟಿಗಳಿಲ್ಲ, ಆದರೆ ಇನ್ನೂ ಸಹ, ನನ್ನ ದೇಹ -ಪ್ರಯಾಣ, ನಿದ್ರಾಹೀನತೆ ಮತ್ತು ಬಿಡುವಿಲ್ಲದ ಚಟುವಟಿಕೆಗಳನ್ನು ಹೆಚ್ಚಿನ ಯುವಜನರಿಗಿಂತ ಬಹಳ ಸಲೀಸಾಗಿ ನಿಭಾಯಿಸುತ್ತಿದೆ. ನಾನು ನನ್ನ ದೇಹಕ್ಕೆ ನೀಡಿದ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಸಂಪೂರ್ಣ ಸಾಧನೆಯಿಂದಾಗಿ ಈ ಪ್ರಯಾಸಗಳನ್ನು ನಾನು ಎಲ್ಲರಿಗಿಂತ ಉತ್ತಮವಾಗಿ ನಿಭಾಯಿಸುತ್ತಿದ್ದೇನೆ. ಅದೇ ಸಾಧನೆ ಇನ್ನೂ ನನ್ನನ್ನು ಹಿಡಿದಿಟ್ಟುಕೊಂಡಿದೆ ಮತ್ತು ಬೇರೆಯವರಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸಲು ನನಗೆ ಅನುವು ಮಾಡಿಕೊಡುತ್ತಿದೆ.

 

ನಿಮ್ಮ ದೇಹ ಮತ್ತು ನಿಮ್ಮ ಮನಸ್ಸು ನಿಮ್ಮೆಲ್ಲಾ ಆಕಾಂಕ್ಷೆಗಳಿಗೆ ಸುಗಮ ದಾರಿಯನ್ನು ಸೃಷ್ಟಿಸುವಂತಿರಬೇಕೇ ಹೊರತು ಅಡ್ಡಿಯಾಗಬಾರದು. ನಿಮ್ಮ ಮನಃಸ್ಥಿತಿಗಳು, ನಿಮ್ಮ ಇಷ್ಟಾನಿಷ್ಟಗಳು, ನಿಮ್ಮ ದೈಹಿಕ ತೊಂದರೆಗಳು, ನಿಮ್ಮ ಬೆನ್ನು ನೋವು, ತಲೆ ನೋವು - ಇವುಗಳೆಲ್ಲವೂ ನಿಮ್ಮ ಜೀವನದಲ್ಲಿ ನೀವು ನಿಜವಾಗಿಯೂ ಮಾಡಲು ಬಯಸುವ ಕೆಲಸಗಳನ್ನು ಮಾಡದಂತೆ ನಿಮ್ಮನ್ನು ತಡೆಯುತ್ತವೆ. ಹಾಗಾಗಬಾರದು.

ಹೆಚ್ಚಿನ ಜನರಿಗೆ, ಅವರ ಜೀವನದಲ್ಲಿ ಅವಕಾಶಗಳು ತೆರೆದುಕೊಂಡಾಗ, ಅವರದ್ದೇ ದೇಹ ಮತ್ತು ಮನಸ್ಸುಗಳು ಅವರನ್ನು ತಡೆಹಿಡಿಯುತ್ತವೆ. ಈ ಹದಿಹರೆಯದ ವಯಸ್ಸಿನಲ್ಲಿ, ನೀವು ಗಣನೀಯವಾಗಿ ದೈಹಿಕ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕು. ಏಕೆಂದರೆ ಸಮಯ ಬಂದಾಗ, ಜೀವನವು ನಿಮಗೆ ನೀವಂದುಕೊಂಡ ಕೆಲಸ ಮಾಡಲು ಅವಕಾಶವನ್ನು ನೀಡಿದಾಗ, ನಿಮ್ಮ ದೇಹ ಮತ್ತು ನಿಮ್ಮ ಮನಸ್ಸುಗಳು ನಿಮ್ಮನ್ನು ಯಾವುದೇ ರೀತಿಯಲ್ಲಿ ತಡೆಹಿಡಿಯಬಾರದು. ಅವುಗಳು ನಿಮ್ಮ ಜೀವನದ ನೌಕೆಗಳಾಗಿರಬೇಕು, ಹಡಗಿನ ಯಾಂಕರ್(anchor) ಆಗಬಾರದು.