ನಾವು ಹೇಗೆ ತಿನ್ನುತ್ತೀವಿ ಎಂಬುವುದು ನಾವು ಏನನ್ನು ತಿನ್ನುತ್ತೀವಿ ಅನ್ನುವುದರಷ್ಟೇ ಮುಖ್ಯ. ಸರಿಯಾಗಿ ತಿನ್ನುವುದು ಹೇಗೆ ಎಂದು ತೋರಿಸುವ ಈ ೫ ಸರಳವಾದ ಆಹಾರ ಸಲಹೆಗಳು, ನಾವು ತಿನ್ನುವ ಆಹಾರದಿಂದ ಉತ್ತಮವಾದದನ್ನು ಪಡೆಯುವುದಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ.

#೧: ಎಷ್ಟು ಪ್ರಮಾಣದಲ್ಲಿ ತಿನ್ನಬೇಕು?

ಹೊಟ್ಟೆ ಖಾಲಿಯಾಗಿರುವಾಗ ಮಾನವನ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಹೊಟ್ಟೆ ಹಸಿದಿದೆ ಎಂಬ ಸಂದೇಶವನ್ನು ಮೆದುಳಿಗೆ ಕೊಂಡೊಯ್ಯುವ ghrelin  ಎಂಬ ಹಾರ್ಮೋನನ್ನು ಖಾಲಿ ಹೊಟ್ಟೆಯು ಉತ್ಪಾದಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಕುತೂಹಲಕಾರಿ ವಿಷಯವೇನೆಂದರೆ, ಈ ಹಾರ್ಮೋನು ಇತರೆ ಕೆಲಸವನ್ನು ಸಹ ಮಾಡುವಂತೆ ತೋರುತ್ತದೆ. Ghrelin, ಕಲಿಕೆ, ಜ್ಞಾಪಕ ಶಕ್ತಿ ಮತ್ತು ಪ್ರಾದೇಶಿಕ ವಿಶ್ಲೇಷಣೆಯನ್ನು ನಿಭಾಯಿಸುವ; ಹಾಗೂ ನಮ್ಮನ್ನು ಎಚ್ಚರ, ಸಕ್ರಿಯ ಮತ್ತು ಕೇಂದ್ರೀಕೃತರನ್ನಾಗಿಸುವ ಹಿಪ್ಪೋಕಾಂಪಸ್-ನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ನಾವು ಏನನ್ನೂ ತಿನ್ನಬಾರದು ಎಂದು ಇದರ ಅರ್ಥವಲ್ಲ, ಬದಲಾಗಿ, ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ನಾವು ಜಾಗರೂಕರಾಗಿರಬೇಕು ಎನ್ನುವುದನ್ನು ಸೂಚಿಸುತ್ತದೆ. ಯೋಗಿ ಮತ್ತು ದಾರ್ಶನಿಕರಾದ, ಸದ್ಗುರುಗಳು ನಮ್ಮ ಆಹಾರ ಸೇವನೆಯನ್ನು ಸರಿಪಡಿಸಿಕೊಳ್ಳುವ ಮೂಲಕ ನಮ್ಮ ದಿನವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ವಿವರಿಸುತ್ತಾರೆ.

“ನೀವು ದಿನಪೂರ್ತಿ ತಿನ್ನುತ್ತಾ ಇರಬಾರದು. ನೀವು ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ದಿನಕ್ಕೆ ಮೂರು ಬಾರಿ ಊಟ ಮಾಡುವುದು ನಿಮ್ಮ ಜೀವನಕ್ಕೆ ಸರಿಹೊಂದುತ್ತದೆ. ನಿಮ್ಮ ವಯಸ್ಸು ಮೂವತ್ತಕ್ಕಿಂತ ಹೆಚ್ಚಿದ್ದರೆ, ದಿನಕ್ಕೆ ಎರಡು ಬಾರಿ ಊಟ ಮಾಡುವುದು ಉತ್ತಮ. ಹೊಟ್ಟೆ ಖಾಲಿಯಾಗಿದ್ದಾಗ ಮಾತ್ರ ನಮ್ಮ ದೇಹ ಮತ್ತು ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ಎರಡೂವರೆ ಗಂಟೆಗಳ ಒಳಗೆ ಆಹಾರವು ಹೊಟ್ಟೆಯ ಚೀಲದಿಂದ ಆಚೆ ಹೋಗುವ ರೀತಿಯಲ್ಲಿ, ಹಾಗೂ ಹನ್ನೆರಡರಿಂದ ಹದಿನೆಂಟು ಗಂಟೆಗಳೊಳಗೆ, ಇದು ಸಂಪೂರ್ಣವಾಗಿ ನಿಮ್ಮ ವ್ಯವಸ್ಥೆಯಿಂದ ಆಚೆ ಹೋಗುವ ರೀತಿಯಲ್ಲಿ, ಅರಿವಿನಿಂದ ತಿನ್ನಿರಿ. ನೀವು ಈ ಸರಳ ಅರಿವನ್ನು ಕಾಪಾಡಿಕೊಂಡರೆ, ಹೆಚ್ಚು ಶಕ್ತಿ, ಚುರುಕುತನ ಮತ್ತು ಎಚ್ಚರವನ್ನು ಅನುಭವಿಸುತ್ತೀರಿ." - ಸದ್ಗುರು

#೨: ಅಗಿಯಲು ಮರೆಯದಿರಿ!

ಆರೋಗ್ಯವಾಗಿ ತಿನ್ನುವುದರ ಬಗ್ಗೆ ನಮ್ಮ ಎರಡನೆಯ ಸಲಹೆಯನ್ನು ನೀವು ಸಣ್ಣವರಿದ್ದಾಗ, ಪ್ರಾಯಶಃ ಸಾವಿರಾರು ಸಲ ನಿಮ್ಮ ಹೆತ್ತವರಿಂದ ನೀವು ಹೇಳಿಸಿಕೊಂಡಿರುವ ಸಂಗತಿ: ಆಹಾರವನ್ನು ಸರಿಯಾಗಿ ಅಗಿಯುವುದು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ಟಾರ್ಚ್ ಹೊಂದಿರುವ ಆಹಾರಕ್ಕೆ, ಜೀರ್ಣಕ್ರಿಯೆಯು ಶೇ. ೩೦%ನಷ್ಟು ಎಂಜಲಿನ ಮೂಲಕ ಉಂಟಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಊಟದ ನಂತರ, ಮಲಗುವ ಮೊದಲು, ಕನಿಷ್ಟ ಎರಡು ಗಂಟೆಗಳ ವಿರಾಮವನ್ನು ನೀಡಿ. ಜೀರ್ಣಕ್ರಿಯೆಯು ನಿಮ್ಮ ಚಯಾಪಚಯ (metabolic) ಚಟುವಟಿಕೆಯನ್ನು ಹೆಚ್ಚಿಸುತ್ತದೆ. ನೀವು ಅಂತಹ ಸ್ಥಿತಿಯಲ್ಲಿ ಮಲಗಿದರೆ, ನೀವು ಚೆನ್ನಾಗಿ ನಿದ್ದೆಯನ್ನೂ ಮಾಡುವುದಿಲ್ಲ ಹಾಗೂ ತಿಂದಿದ್ದನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ ಸಹ! ನೀವು ಏನನ್ನು ತಿಂದಿರೋ, ಅದನ್ನು ಅವಲಂಬಿಸಿ, ತಿಂದ ತಕ್ಷಣ ಮಲಗಿದರೆ, ಆಹಾರದ ಹೆಚ್ಚಿನ ಭಾಗವು ಜೀರ್ಣವಾಗದೆ ಉಳಿಯಬಹುದು. 

ಆಹಾರವನ್ನು ಅಗಿಯುವ ಬಗ್ಗೆ ಯೋಗ ವಿಜ್ಞಾನದ ದೃಷ್ಟಿಕೋನವನ್ನು ಕೂಡ ಸದ್ಗುರುಗಳು ನೀಡುತ್ತಾರೆ. 

ಯೋಗ ವಿಜ್ಞಾನವು ಹೀಗೆ ಹೇಳುತ್ತದೆ, “ನೀವು ಒಂದು ತುತ್ತನ್ನು ತಿಂದರೆ, ಅದನ್ನು ೨೪ ಬಾರಿ ಅಗಿಯಬೇಕು” ಎಂದು. ಇದರ ಹಿಂದೆ ಭಾರಿ ವಿಜ್ಞಾನವೇ ಇದೆ, ಆದರೆ ಮುಖ್ಯವಾಗಿ, ನಿಮ್ಮ ಆಹಾರವು ನಿಮ್ಮ ಬಾಯಿಯಲ್ಲಿಯೇ ಜೀರ್ಣವಾಗುತ್ತದೆ ಹಾಗೂ ನಿಮ್ಮ ವ್ಯವಸ್ಥೆಯಲ್ಲಿ ಜಡತೆಯನ್ನು ಉಂಟುಮಾಡುವುದಿಲ್ಲ. ಮತ್ತೊಂದು ವಿಷಯವೇನೆಂದರೆ, ನೀವು ೨೪ ಬಾರಿ ಅಗಿದರೆ, ಆ ಆಹಾರದ ಮಾಹಿತಿಯು, ನಿಮ್ಮ ವ್ಯವಸ್ಥೆಯಲ್ಲಿ ನಿಯತವಾಗುತ್ತದೆ. ನಿಮ್ಮ ದೇಹದಲ್ಲಿನ ಪ್ರತಿ ಕೋಶವು, ನಿಮಗೆ ಯಾವುದು ಸರಿ, ಯಾವುದು ಸರಿಯಿಲ್ಲ ಎಂಬುದರ ಬಗ್ಗೆ ತೀರ್ಮಾನಿಸುವುದನ್ನು ಪ್ರಾರಂಭಿಸುತ್ತದೆ – ನಿಮ್ಮ ನಾಲಿಗೆಯ ಪ್ರಕಾರ ಅಲ್ಲ, ಆದರೆ, ಇಡೀ ವ್ಯವಸ್ಥೆಗೆ ಯಾವುದು ಸೂಕ್ತ ಎನ್ನುವುದರ ಬಗ್ಗೆ. ಇದನ್ನು ಸ್ವಲ್ಪ ಸಮಯದವರೆಗೆ ಮಾಡಿದರೆ, ದೇಹದಲ್ಲಿನ ಪ್ರತಿ ಜೀವಕೋಶವೂ, ಅದಕ್ಕೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಎಂಬುದರ ಬಗ್ಗೆ ಮಾಹಿತಿ ಹೊಂದಿರುತ್ತದೆ.” – ಸದ್ಗುರು

ಊಟದ ಸಮಯದಲ್ಲಿ ನೀರನ್ನು ಕುಡಿಯಬಾರದೆಂದು ಸಲಹೆ ನೀಡಲಾಗುತ್ತದೆ. ಊಟಕ್ಕೆ ಕೆಲವು ನಿಮಿಷಗಳ ಮೊದಲು ಅಥವಾ ಊಟದ ನಂತರ ಮೂವತ್ತರಿಂದ ನಲವತ್ತು ನಿಮಿಷಗಳ ನಂತರ ಸ್ವಲ್ಪ ನೀರನ್ನು ಕುಡಿಯಿರಿ. ಕುಡಿಯುವ ನೀರನ್ನು ರಾತ್ರಿ ತಾಮ್ರದ ಪಾತ್ರೆಯಲ್ಲಿ ಬಿಡಬಹುದು. ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಹಾಗೂ ನೀರನ್ನು ಶಕ್ತಿಯುತವಾಗಿ ಜೀವಂತಗೊಳಿಸುತ್ತದೆ. ಆಸ್ಪತ್ರೆಯ ತೀವ್ರತರ ಆರೈಕೆ ಘಟಕಗಳಲ್ಲಿ (ICU) ಪರೀಕ್ಷಿಸಲ್ಪಟ್ಟ ತಾಮ್ರದ ಮೇಲ್ಮೈಗಳು, “ಆಸ್ಪತ್ರೆ ಸೋಂಕನ್ನು” ಉಂಟುಮಾಡುವ ಸಾಮರ್ಥ್ಯ ಹೊಂದಿರುವ ಶೇ. ೯೭% ನಷ್ಟು ಬ್ಯಾಕ್ಟೀರಿಯಾವನ್ನು ನಾಶಮಾಡುವುದಾಗಿ ಕಂಡುಬಂದಿದೆ. 

#೩: ಸರಿಯಾದ ಸಮಯಕ್ಕೆ ಸರಿಯಾದ ಆಹಾರ

ಬೇರೆಬೇರೆ ಋತುಗಳಲ್ಲಿ ವಿವಿಧ ಆಹಾರಗಳನ್ನು ತಿನ್ನುವ ಸಂಪ್ರದಾಯವನ್ನು ಹಾಗೂ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಈ ಅಭ್ಯಾಸವು ಹೇಗೆ ಸಹಾಯ ಮಾಡುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ. 

“ಭಾರತದಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಬೇಸಿಗೆಯಲ್ಲಿ ಅಡುಗೆಯನ್ನು ಒಂದು ರೀತಿಯಲ್ಲಿ ಮಾಡಲಾಗುತ್ತದೆ, ಮಳೆಗಾಲದ ಸಮಯದಲ್ಲಿ ಮತ್ತೊಂದು ರೀತಿಯಲ್ಲಿ ಹಾಗೂ ಚಳಿಗಾಲದಲ್ಲಿ ಮಗದೊಂದು ರೀತಿಯಲ್ಲಿ ಅಡುಗೆಯನ್ನು ಮಾಡಲಾಗುತ್ತದೆ. ಆಯಾ ಸಮಯದಲ್ಲಿ ಲಭ್ಯವಿರುವ ತರಕಾರಿಗಳ ಪ್ರಕಾರ ಹಾಗೂ ದೇಹಕ್ಕೆ ಯಾವುದ ಸೂಕ್ತವಾದದ್ದು ಎಂಬುದನ್ನು ನೋಡಿ, ತದನುಸಾರವಾಗಿ ಅಡುಗೆಯನ್ನು ಮಾಡಲಾಗುತ್ತದೆ. ದೇಹದ ಅಗತ್ಯಗಳ ಪ್ರಕಾರ ಹಾಗೂ ವಾಸಿಸುವ ಹವಾಮಾನ / ವಾತಾವರಣಕ್ಕನುಗುಣವಾಗಿ ತಿನ್ನುವ ಆ ವಿವೇಕವನ್ನು ನಮ್ಮಲ್ಲಿ ತರುವುದು ಒಳ್ಳೆಯದು. 

ಉದಾಹರಣೆಗೆ, ಡಿಸೆಂಬರ್ ತಿಂಗಳಿನಲ್ಲಿ, ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವ ಎಳ್ಳು, ಗೋಧಿಯಂತಹ ಕೆಲವು ಆಹಾರಗಳನ್ನು ತಿನ್ನುವ ಪದ್ಧತಿ ಇದೆ. ಚಳಿಗಾಲದಲ್ಲಿ, ಚರ್ಮವು ಸಾಮಾನ್ಯವಾಗಿ ಚಳಿಯಿಂದ ಒಡೆಯುತ್ತದೆ; ಸಾಂಪ್ರದಾಯಿಕವಾಗಿ, ಜನರು ಕ್ರೀಮ್ ಮತ್ತು ಲೋಶನ್-ಗಳನ್ನು ಬಳಸುತ್ತಿರಲಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ಪ್ರತಿದಿನವೂ ಎಳ್ಳನ್ನು ತಿನ್ನುತ್ತಿದ್ದರು, ಇದು ದೇಹವನ್ನು ಬೆಚ್ಚಗಾಗಿರಿಸುತ್ತಿತ್ತು ಹಾಗೂ ಚರ್ಮವನ್ನು ಕೋಮಲವಾಗಿರಿಸುತ್ತಿತ್ತು. ದೇಹದಲ್ಲಿ ಸಾಕಷ್ಟು ಶಾಖವಿದ್ದರೆ ನಿಮ್ಮ ಚರ್ಮ ಒಡೆಯುವುದಿಲ್ಲ. ಬೇಸಿಗೆಯಲ್ಲಿ ದೇಹವು ಬಿಸಿಯಾಗಿರುತ್ತದೆ. ಆದ್ದರಿಂದ, ತಂಪಾಗಿಸುವ ಆಹಾರಗಳನ್ನು ತಿನ್ನಲಾಗುತ್ತದೆ. ಉದಾಹರಣೆಗೆ, ತಮಿಳುನಾಡಿನಲ್ಲಿ ಸಜ್ಜೆಯನ್ನು ತಿನ್ನುತ್ತಾರೆ. ನಮ್ಮ ದೇಹವು ಆಯಾ ಋತುವಿಗೆ ಹೊಂದಿಕೊಳ್ಳಲು, ಈ ವಿಷಯಗಳನ್ನು ನಿಗದಿಪಡಿಸಲಾಗಿತ್ತು." - ಸದ್ಗುರು

#೪: ಸಮತೋಲಿತ ಆಹಾರ

“ಸರಿಯಾಗಿ ತಿನ್ನುವುದು ಹೇಗೆ” ಬಗೆಗಿನ ನಮ್ಮ ಸಲಹೆಗಳ ಪೈಕಿ ನಾಲ್ಕನೆಯದು ಬಹಳ ಸ್ಪಷ್ಟವಾಗಿದೆ: ಸಮತೋಲಿತ ಆಹಾರಕ್ರಮವನ್ನು ಪಾಲಿಸುವುದು. ಆದರೆ ನೀವು ವಿಟಮಿನ್, ಕಾರ್ಬೋಹೈಡ್ರೇಟ್, ಪ್ರೊಟೀನ್ ಹಾಗೂ ಮತ್ತಿನ್ಯಾವುದರ ಬಗ್ಗೆಯೋ ಗೊಂದಲಗೊಂಡು, ಅದನ್ನೆಲ್ಲ ಸಮತೋಲನ ಮಾಡಲು ಪ್ರಯತ್ನಿಸಿ,  ತಬ್ಬಿಬ್ಬಾಗುವುದು ಬೇಡ. ಸಮತೋಲಿತ ಆಹಾರಕ್ರಮವನ್ನು ಪಾಲಿಸಲು ಕೆಲವು ಮೂಲಭೂತ ಅಂಶಗಳನ್ನು ಸದ್ಗುರುಗಳು ವಿವರಿಸುತ್ತಾರೆ. ನಮ್ಮ ಆಹಾರಕ್ರಮದಲ್ಲಿ ಸಾಕಷ್ಟು ತರಕಾರಿಗಳು, ಮಸೂರಗಳು, ಬೇಳೆಕಾಳುಗಳು ಮತ್ತು ಅನೇಕ ವಿಧದ ಧಾನ್ಯಗಳನ್ನು ತರುವ ಪ್ರಾಮುಖ್ಯತೆಯನ್ನು ಅವರು ವಿವರಿಸುತ್ತಾರೆ.

"ಇಂದು ೮೦ ದಶಲಕ್ಷ ಭಾರತೀಯರು ಮಧುಮೇಹದ (diabetes) ಕಡೆಗೆ ಹೋಗುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ಒಂದು ಕಾರಣವೆಂದರೆ, ಹೆಚ್ಚಿನ ಭಾರತೀಯರು ಏಕ-ಕಾಳಿನ (single cereal) ಆಹಾರಕ್ರಮದಲ್ಲಿದ್ದಾರೆ. ಜನರು ಕೇವಲ ಅಕ್ಕಿ ಅಥವಾ ಗೋಧಿಯನ್ನು ಮಾತ್ರ ತಿನ್ನುತ್ತಿದ್ದಾರೆ. ಇದು ಖಂಡಿತವಾಗಿಯೂ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೀವನದಲ್ಲಿ ಬಹುಧಾನ್ಯ ಆಹಾರಕ್ರಮವನ್ನು ತರುವುದು ಮುಖ್ಯವಾಗಿದೆ.

ಸಾಂಪ್ರದಾಯಿಕವಾಗಿ, ಜನರು ಯಾವಾಗಲೂ ಸಾಕಷ್ಟು ದ್ವಿದಳ ಧಾನ್ಯಗಳು, ಕಾಳುಗಳು ಮತ್ತು ಅನೇಕ ವಿಧದ ಧಾನ್ಯಗಳನ್ನು ತಿನ್ನುತ್ತಿದ್ದರು, ಆದರೆ ನಿಧಾನವಾಗಿ ಆವೆಲ್ಲ ಹೋಗಿಬಿಟ್ಟಿವೆ. ನೀವು ಇಂದು ದಕ್ಷಿಣ ಭಾರತದಲ್ಲಿ ಉಟದ ತಟ್ಟೆಯನ್ನು ನೋಡಿದರೆ, ಅನ್ನ ಸಾಕಷ್ಟಿದ್ದು, ತರಕಾರಿಗಳು ಕಡಿಮೆ ಇರುತ್ತದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ. ಆಹಾರಕ್ರಮವು ಕಳೆದ ಇಪ್ಪತ್ತೈದು ಅಥವಾ ಮೂವತ್ತು ವರ್ಷಗಳಲ್ಲಿ ಪೂರ್ಣ ಕಾರ್ಬೋಹೈಡ್ರೇಟ್ ಆಧಾರಿತ ಆಹಾರಕ್ರಮವಾಗಿ ಬದಲಾವಣೆಗೊಂಡಿದೆ. ಇದನ್ನು ಹಿಂದಿನ ಸ್ಥಿತಿಗೆ ತರಬೇಕಾಗಿದೆ, ಏಕೆಂದರೆ, ಬೇರೆ ತರಹದ ಆಹಾರವನ್ನು ತಿನ್ನದೇ, ಬರಿ ಕಾರ್ಬೋಹೈಡ್ರೇಟ್ಸನ್ನು ತಿನ್ನುತ್ತಿದ್ದರೆ, ಜನರ ದೀರ್ಘಕಾಲೀನ ಆರೋಗ್ಯವು ಗಂಭೀರವಾಗಿ ಬಾಧೆಗೊಳಗಾಗುತ್ತದೆ. ಇದು, ಜನರ ಮನಸ್ಸಿನಲ್ಲಿ ಸಂಭವಿಸಬೇಕಾದ ಒಂದು ಮೂಲ ವೈಚಾರಿಕ ಬದಲಾವಣೆಯಾಗಿದೆ. ನಮ್ಮ ಆಹಾರಕ್ರಮದಲ್ಲಿ ಬಹುಪಾಲು ಅಕ್ಕಿ ಇರದೆ, ಇತರೆ ಎಲ್ಲಾ ಆಹಾರವಸ್ತುಗಳು ಇರಬೇಕು. ಅಕ್ಕಿ ತಿನ್ನುವುದು ನಿಮ್ಮ ಆಯ್ಕೆಯಾಗಿದೆ - ನೀವು ತಿನ್ನಲು ಬಯಸುವಿರೋ, ಇಲ್ಲವೋ, ನಿಮ್ಮ ಹಸಿವಿನ ಮಟ್ಟದ ಪ್ರಕಾರ ನೀವು ನಿರ್ಧರಿಸಿ." - ಸದ್ಗುರು

#೫ ಉತ್ತಮ ಆಹಾರ ಪದ್ಧತಿಗಳಿಲ್ಲ!

ಸರಿಯಾಗಿ ತಿನ್ನುವುದು ಹೇಗೆ ಎಂಬುದರ ಬಗ್ಗೆ ನಮ್ಮ ಸಲಹೆಗಳ ಪಟ್ಟಿಯಲ್ಲಿ ಕೊನೆಯದು - ಆಹಾರವನ್ನು ಸೇವಿಸುವುದು ನಮ್ಮ ದೇಹಕ್ಕೋಸ್ಕರವಾದ್ದರಿಂದ, ಏನನ್ನು ತಿನ್ನುವುದೆಂದು ತಿಳಿಯುವ ಉತ್ತಮ ಮಾರ್ಗವು ದೇಹವನ್ನೇ ಕೇಳುವುದು ಎಂದು ಸದ್ಗುರುಗಳು ನೆನಪಿಸುತ್ತಾರೆ. ನಮಗೆ ರೂಢಿಯ ಅನುಸಾರವಾಗಿ ತಿನ್ನುವುದ್ದಕ್ಕಿಂತ ನಮ್ಮ ಬುದ್ಧಿವಂತಿಕೆಯ ಮೂಲಕ ನಮ್ಮ ಆಹಾರವನ್ನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುವುದು ಉತ್ತಮ ಎಂದು ಅವರು ವಿವರಿಸುತ್ತಾರೆ.

ನಾವಿಲ್ಲಿ ಕೊಟ್ಟಿರುವ ಸಲಹೆಗಳು ಹೆಚ್ಚಿನ ಜನರಿಗೆ ಅನ್ವಯವಾಗುತ್ತವೆ. ಆದರೆ ಸಹಜವಾಗಿ, ಪ್ರತಿಯೊಬ್ಬರ ದೇಹವು ವಿಶಿಷ್ಟವಾಗಿ ರಚನೆಯಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಆರೋಗ್ಯ ಸಮಸ್ಯೆಗಳಿರುವ ಜನರು ಆಹಾರಕ್ರಮದಲ್ಲಿ ಅಥವಾ ಆಹಾರ ಸೇವನೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

ಸಂಪಾದಕರ ಟಿಪ್ಪಣಿ: ನಿಮ್ಮ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಸುಳಿವುಗಳನ್ನು ಹುಡುಕುತ್ತಿದ್ದರೆ, ನಮ್ಮ ಅತ್ಯಂತ ಜನಪ್ರಿಯ ebooklet “ಫುಡ್ ಬಾಡಿ” ಓದಿ. ಪುಸ್ತಕವು "ಪೇ ಆಸ್ ಯು ಲೈಕ್" ಅಡಿಯಲ್ಲಿ ಲಭ್ಯವಿದೆ. (ಉಚಿತವಾಗಿ ಪಡೆದುಕೊಳ್ಳಲು ’ಅಮೌಂಟ್’ನಲ್ಲಿ ’೦’ ಎಂಟರ್ ಮಾಡಿ)

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್‍ಗೆ ಭೇಟಿ ನೀಡಿ

ಸದ್ಗುರುಗಳ ಪ್ರವಚನಗಳನ್ನು ಕನ್ನಡದಲ್ಲಿ ಕೇಳಲು ನಮ್ಮ ಯೂಟ್ಯೂಬ್  ಚಾನೆಲ್‍ಗೆ ಭೇಟಿ ನೀಡಿ - youtube.com/SadhguruKannada