ಆಧ್ಯಾತ್ಮಿಕ ಪಥದಲ್ಲಿ ಸಾಗುವಾಗ ನಮ್ಮ ಮನಸ್ಸು ನಿಜವಾಗಿಯೂ ಯಾವಾಗಲೂ ನಮ್ಮ ವಿರುದ್ಧ ಕೆಲಸ ಮಾಡುತ್ತದೆಯೇ? ಹೌದೆಂದಾದರೆ, ಅದು ಹಾಗೇಕೆ?

ಪ್ರಶ್ನೆ: ಆಧ್ಯಾತ್ಮಿಕ ಪಥದಲ್ಲಿ ಸಾಗುವಾಗ ನಮ್ಮ ಮನಸ್ಸು ನಿಜವಾಗಿಯೂ ಯಾವಾಗಲೂ ನಮ್ಮ ವಿರುದ್ಧ ಕೆಲಸ ಮಾಡುತ್ತದೆಯೇ? ಹೌದೆಂದಾದರೆ, ಅದು ಹಾಗೇಕೆ? 

ಸದ್ಗುರು: ಈಗ ನೀವು ಆಧ್ಯಾತ್ಮವೆಂಬ ಪದವನ್ನು ಕೇಳಿಸಿಕೊಂಡಿದ್ದು ನಿಮ್ಮ ಮನಸ್ಸಿನ ಕಾರಣದಿಂದಾಗಿಯೇ ಅಲ್ಲವೆ? ನಾನೀಗ ಮಾತನಾಡುತ್ತಿರುವುದನ್ನು ನೀವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರುವುದು ನಿಮ್ಮ ಮನಸ್ಸಿನ ಸಹಾಯದಿಂದ ಮಾತ್ರ. ನಿಮ್ಮ ಸ್ನೇಹಿತನಾಗಿರುವವನನ್ನು ನಿಮ್ಮ ಶತ್ರುವನ್ನಾಗಿ ಮಾಡಿಕೊಳ್ಳಬೇಡಿ. ನಿಮ್ಮ ಮನಸ್ಸು ನಿಮ್ಮ ಸ್ನೇಹಿತನೋ ಅಥವಾ ಶತ್ರುವೋ ಎನ್ನುವುದನ್ನು ದಯವಿಟ್ಟು ನಿಮ್ಮ ಬದುಕನ್ನೊಮ್ಮೆ ಗಮನಿಸಿಕೊಂಡು ನನಗೆ ಹೇಳಿ. ನೀವಿಂದು ನೀವಾಗಿರುವುದಕ್ಕೆ ಕಾರಣ ನಿಮ್ಮ ಮನಸ್ಸು ಮಾತ್ರ, ಹೌದು ತಾನೆ? ನೀವದರ ಜೊತೆ ಫಜೀತಿ ಮಾಡಿಕೊಂಡಿದ್ದರೆ, ಅದು ನಿಮಗೆ ಬಿಟ್ಟ ವಿಚಾರ. ಮನಸ್ಸಿಲ್ಲದೆಯೇ ನೀವಿರಬೇಕೆಂದರೆ, ಅದು ತುಂಬ ಸರಳ; ನಿಮ್ಮ ತಲೆಗೆ ದೊಡ್ಡ ದೊಣ್ಣೆ ಏಟೊಂದನ್ನು ಕೊಟ್ಟರೆ ಸಾಕು. ಏನಂತೀರ? ಇಲ್ಲಿ ಸಮಸ್ಯೆ ನಿಮ್ಮ ಮನಸ್ಸಿನದ್ದಲ್ಲ. ಅದನ್ನು ಬಳಸಲು ಮತ್ತು ನಿಭಾಯಿಸಲು ನಿಮಗೆ ಬರುವುದಿಲ್ಲ ಎನ್ನುವುದೇ ಸಮಸ್ಯೆ. ಆದ್ದರಿಂದ ಮನಸ್ಸಿನ ಬಗ್ಗೆ ಮಾತನಾಡಬೇಡಿ. ನೀವದನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವ ಅಸಮರ್ಪಕ ರೀತಿಗಳತ್ತ ನಿಮ್ಮ ಗಮನವನ್ನು ಹರಿಸಿ. ಯಾವುದೇ ವಿಷಯ ಅಥವಾ ವಸ್ತುವಿನ ಬಗ್ಗೆ ತಿಳುವಳಿಕೆ ಮತ್ತು ಹಿಡಿತವಿಲ್ಲದೆಯೇ ಅದನ್ನು ಮುನ್ನಡೆಸಲು ಹೋದರೆ, ಅದು ಅವ್ಯವಸ್ಥೆಯ ಗೂಡಾಗುತ್ತದೆ.

ಇಲ್ಲಿ ಸಮಸ್ಯೆ ನಿಮ್ಮ ಮನಸ್ಸಿನದ್ದಲ್ಲ. ಅದನ್ನು ಬಳಸಲು ಮತ್ತು ನಿಭಾಯಿಸಲು ನಿಮಗೆ ಬರುವುದಿಲ್ಲ ಎನ್ನುವುದೇ ಸಮಸ್ಯೆ.

ಈಗ ಉದಾಹರಣೆಗೆ, ಭತ್ತವನ್ನು ಬೆಳೆಯುವುದು ಒಂದು ದೊಡ್ಡ ಸಾಹಸದ ಕೆಲಸವೆಂದು ನಿಮಗನಿಸುತ್ತದೆಯೆ? ಓದು ಬರಹವಿಲ್ಲದ ಒಬ್ಬ ಸಾಮಾನ್ಯ ರೈತ ಅದನ್ನು ಬೆಳೆಯುತ್ತಿದ್ದಾನೆ. ನಾನು ನಿಮಗೆ ನೂರು ಗ್ರಾಂ ಭತ್ತ, ಅದನ್ನು ಬೆಳೆಯಲು ಬೇಕಾದ ಜಾಗ ಮತ್ತು ಅದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಕೊಡುತ್ತೇನೆ. ಕೇವಲ ಒಂದು ಎಕರೆಯಷ್ಟು ಭತ್ತವನ್ನು ನನಗೆ ಬೆಳೆದು ತೋರಿಸಿ ನೋಡೋಣ. ಅದಕ್ಕಾಗಿ ನೀವೆಷ್ಟು ಅವಸ್ಥೆ ಪಡುತ್ತೀರಿ ಎಂದು ನಿಮಗಾಗ ಗೊತ್ತಾಗುತ್ತದೆ. ಭತ್ತವನ್ನು ಬೆಳೆಯುವುದು ಮಹಾ ಕಷ್ಟದ ಕೆಲಸವೆಂದೇನಲ್ಲ, ಆದರೆ ನಿಮಗದರ ಬಗ್ಗೆ ಏನೂ ತಿಳಿಯದ ಕಾರಣ, ಅದು ತುಂಬ ಕಷ್ಟಕರವೆನ್ನಿಸುತ್ತದೆ. ಅಂತೆಯೇ, ಮನಸ್ಸನ್ನು ಅಂತರಿಕ್ಷದ ಹಾಗೆ ಖಾಲಿಯಾಗಿಟ್ಟುಕೊಳ್ಳುವುದು ಕಠಿಣವಾದ ವಿಷಯವೇನಲ್ಲ, ಅದು ತುಂಬ ಸರಳವಾದ ವಿಚಾರ. ಆದರೆ ನಿಮಗದರ ಬಗ್ಗೆ ಒಂದು ಎಳ್ಳುಕಾಳಿನಷ್ಟೂ ಸಹ ತಿಳಿದಿಲ್ಲದ ಕಾರಣ, ಅದು ಬಹಳ ಕಷ್ಟವೆನ್ನಿಸುತ್ತದೆ. ನೀವು ಏನನ್ನಾದರೂ ಚೆನ್ನಾಗಿ ನಿಭಾಯಿಸುವ ಸಾಮರ್ಥ್ಯವನ್ನು ಪಡೆಯಬೇಕೆಂದಾದರೆ, ಅದು ಏನು ಮತ್ತು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ, ನೀವದನ್ನು ಕೇವಲ ಆಕಸ್ಮಿಕವಾಗಿ, ಕೆಲವೇ ಕೆಲವು ಸಂದರ್ಭಗಳಲ್ಲಿ ನಿಭಾಯಿಸಬಹುದಷ್ಟೆ. ಪ್ರತಿಬಾರಿ ಅದು ಕೆಲಸ ಮಾಡುವುದಿಲ್ಲ.


ನೀವು ಪಡೆದ ಬಹುತೇಕ ಶಿಕ್ಷಣವು ಯಾವುದು ಸರಿ ಯಾವುದು ತಪ್ಪು, ಯಾವುದು ಒಳ್ಳೆಯದು ಯಾವುದು ಕೆಟ್ಟದು, ಯಾವುದು ದೇವರು ಯಾವುದು ಸೈತಾನ ಎನ್ನುವುದನ್ನು ಸುಮ್ಮನೆ ನಿಮ್ಮ ತಲೆಗೆ ತುಂಬಿಸುವ ಪ್ರಕ್ರಿಯೆ ಆಗಿತ್ತಷ್ಟೆ. ಈ ರೀತಿಯಾದ ನಿಮ್ಮ ಕಲಿಕೆ ಮತ್ತು ತಿಳುವಳಿಕೆಗಳಾವುವು ನಿಮ್ಮದೇ ಆದ ಜೀವವಾನುಭವದಿಂದ ಬಂದಂತವುಗಳಲ್ಲ.

ಒಮ್ಮೆ ನೀವು ನೀವಲ್ಲದ ವಸ್ತು ಮತ್ತು ವಿಷಯಗಳ ಜೊತೆ ಗುರುತಿಸಿಕೊಂಡಾಗ, ನಿಮ್ಮ ಮನಸ್ಸು ನಿಲ್ಲಿಸಲು ಬಾರದಂತಹ ಒಂದು ಎಕ್ಸ್‌ಪ್ರೆಸ್ ರೈಲಿನಂತಾಗುತ್ತದೆ. ನೀವೇನೇ ಮಾಡಿದರೂ ಸಹ ಅದು ನಿಲ್ಲುವುದಿಲ್ಲ.

ಹಾಗಾದರೆ ಈ ಮನಸ್ಸನ್ನು ಹೇಗೆ ಹಿಡಿತಕ್ಕೆ ತಂದುಕೊಳ್ಳುವುದು? ನೀವು ನೀವಲ್ಲದ ವಸ್ತು ಮತ್ತು ವಿಷಯಗಳ ಜೊತೆ ಗುರುತಿಸಿಕೊಂಡಿದ್ದೀರಿ. ನೀವು ನೀವಲ್ಲದೇ ಇರುವಂತದ್ದರ ಜೊತೆ ಗುರುತಿಸಿಕೊಂಡಾಕ್ಷಣ, ನಿಮ್ಮ ಮನಸ್ಸು ಹುಚ್ಚು ಕುದುರೆಯಂತೆ ಓಡತೊಡಗುತ್ತದೆ. ಇದು ಹೇಗೆಂದರೆ, ನೀವು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ, ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಆಗ ನೀವದನ್ನು ತಡೆಯುವ ಪ್ರಯತ್ನ ಮಾಡಿದರೆ, ಅದು ಅಸಾಧ್ಯ. ಅದೇ ನೀವು ಸರಿಯಾದ ಆಹಾರ ತಿನ್ನುತ್ತಿದ್ದೇ ಆದರೆ, ನೀವೇನನ್ನೂ ತಡೆಹಿಡಿದುಕೊಳ್ಳಬೇಕಾಗಿ ಬರುವುದಿಲ್ಲ. ದೇಹ ಆರಾಮವಾಗಿರುತ್ತದೆ. ನಿಮ್ಮ ಮನಸ್ಸಿಗೂ ಸಹ ಇದೇ ಅನ್ವಯಿಸುತ್ತದೆ - ನೀವು ನೀವಲ್ಲದ ವಿಷಯಗಳ ಜೊತೆ ಗುರುತಿಸಿಕೊಂಡಿದ್ದೀರಿ. ಒಮ್ಮೆ ನಿಮ್ಮನ್ನು ನೀವು ತಪ್ಪಾಗಿ ಗುರುತಿಸಿಕೊಂಡರೆ, ನಿಮ್ಮ ಮನಸ್ಸನ್ನು ನಿಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.


ನೀವಲ್ಲದಿರುವಂತಹ ವಿಷಯಗಳಿಂದ ನಿಮ್ಮನ್ನು ನೀವು ಬಿಡಿಸಿಕೊಂಡಾಗ, ನಿಮ್ಮ ಮನಸ್ಸು ತಿಳಿಯಾಗಿ, ಖಾಲಿಯಾಗಿರುತ್ತದೆ ಎನ್ನುವುದನ್ನು ನೀವು ಗಮನಿಸುತ್ತೀರಿ. ನಿಮಗೆ ಬಳಸಬೇಕೆಂದಾಗ ನೀವದನ್ನು ಬಳಸಬಹುದು; ಇಲ್ಲವಾದಲ್ಲಿ ಅದು ತನ್ನ ಶುಭ್ರವಾದ ಸಹಜ ಸ್ಥಿತಿಯಲ್ಲಿರುತ್ತದೆ. ಅದು ಇರಬೇಕಾದದ್ದು ಹಾಗೆ, ಬೇರಿನ್ಯಾವ ರೀತಿಯಲ್ಲೂ ಅಲ್ಲ. ಆದರೆ ಸದ್ಯದಲ್ಲಿ, ನೀವು ನಿಮ್ಮನ್ನು ನೀವಲ್ಲದಂತಹ ಬಹಳಷ್ಟು ವಿಷಯಗಳಿಂದ ಗುರುತಿಸಿಕೊಂಡಿದ್ದೀರಿ. ನಿಮ್ಮ ದೇಹವನ್ನೂ ಸೇರಿದಂತೆ, ಅದೆಷ್ಟು ವಿಷಯಗಳೊಂದಿಗೆ ನಿಮ್ಮನ್ನು ನೀವು ಗುರುತಿಸಿಕೊಂಡಿದ್ದೀರಿ ಎನ್ನುವುದನ್ನು ಸ್ವಲ್ಪ ಗಮನಿಸಿ ನೋಡಿ. ಹೀಗಿರುವಾಗ ನೀವದನ್ನು ನಿಲ್ಲಿಸುವ ಮತ್ತು ಧ್ಯಾನ ಮಾಡುವ ಪ್ರಯತ್ನವನ್ನು ಮಾಡುತ್ತೀರಿ ? ಅದು ಕೆಲಸ ಮಾಡುವುದಿಲ್ಲ. ಒಂದೋ ನೀವಾಗಿ ನೀವೇ ನಿಮ್ಮ ಗುರುತುಗಳನ್ನು ಅಳಿಸಿಹಾಕಬೇಕು ಅಥವಾ ಬದುಕು ಹೇಗಿದ್ದರೂ ನಿಮಗದನ್ನು ಮಾಡಿ ತೋರಿಸುತ್ತದೆ. ಸಾವು ನಿಮ್ಮನ್ನು ಎದುರಾದಾಗ, ನೀವೇನೇ ಗುರುತುಗಳನ್ನು ಇಟ್ಟುಕೊಂಡಿದ್ದರೂ ಸಹ ಅವೆಲ್ಲವೂ ಕಳಚಿಬೀಳುತ್ತವೆ ಅಲ್ಲವೇ? ಹಾಗಾಗಿ, ಈಗ  ನೀವಿದನ್ನು ಕಲಿಯದಿದ್ದರೆ, ಸಾವು ಬಂದು ನಿಮಗೆ ನಿಜ ಸಂಗತಿಯನ್ನು ಕಲಿಸುತ್ತದೆ ಅಷ್ಟೆ. ನಿಮ್ಮಲ್ಲಿ ಸ್ವಲ್ಪವಾದರೂ ಬುದ್ಧಿ ಎನ್ನುವುದಿದ್ದರೆ, ಈ ತಕ್ಷಣವೇ ನೀವು ಶೇಖರಿಸಿಕೊಂಡ ವಿಷಯಗಳೊಂದಿಗೆ ನಿಮ್ಮನ್ನು ನೀವು ಗುರುತಿಸಿಕೊಳ್ಳಬಾರದು ಎಂಬುದನ್ನು ಕಲಿಯುತ್ತೀರಿ. ಇಲ್ಲದೇ ಹೋದರೆ, ಸಾವು ಬಂದು ನಿಮ್ಮೆಲ್ಲಾ ಗುರುತುಗಳನ್ನೂ ಹೊಡೆದುರುಳಿಸುತ್ತದೆ. 


ಹಾಗಾಗಿ ನೀವು ನಿಮ್ಮ ಗುರುತುಗಳನ್ನು ಅಳಿಸಿಹಾಕಬೇಕು. ನೀವು ನೀವಲ್ಲದ ಯಾವ್ಯಾವ ವಿಷಯ ಮತ್ತು ವಸ್ತುಗಳಿಂದ ಗುರುತಿಸಿಕೊಂಡಿದ್ದೀರ ಎನ್ನುವುದನ್ನು ಗಮನಿಸುವುದಕ್ಕಾಗಿ, ಪ್ರತಿದಿನ ಬೆಳಗ್ಗೆ ಕೇವಲ ಹತ್ತು ನಿಮಿಷಗಳನ್ನು ಮೀಸಲಿಡಿ. ಎಷ್ಟೊಂದು ಹಾಸ್ಯಾಸ್ಪದ ರೀತಿಗಳಲ್ಲಿ ಮತ್ತು ಎಷ್ಟೊಂದು ಹಾಸ್ಯಾಸ್ಪದ ವಸ್ತುಗಳ ಜೊತೆ ನೀವು ನಿಮ್ಮನ್ನು ಗುರುತಿಸಿಕೊಂಡಿದ್ದೀರ ಎನ್ನುವುದನ್ನು ನೋಡಿದರೆ ಆಶ್ಚರ್ಯಪಡುತ್ತೀರ. ನಿಮ್ಮ ಮನೆಯಲ್ಲಿರುವ ನಿಮ್ಮ ಸುತ್ತಲಿನ ಎಲ್ಲಾ ವಸ್ತುಗಳನ್ನು ಸುಮ್ಮನೆ ಹಾಗೆ, ನಿಮ್ಮ ಮನಸ್ಸಿನಲ್ಲೇ ಒಡೆದು ಹಾಕಿ ನೋಡಿ. ನೀವು ನಿಮ್ಮೊಂದಿಗೆ ಗುರುತಿಸಿಕೊಂಡ ಎಲ್ಲ ವಿಷಯಗಳು ಮತ್ತು ವಸ್ತುಗಳ ಬಗ್ಗೆ ಆಗ ತಿಳಿಯುವಿರಿ. ಸಣ್ಣ ವಿಷಯಗಳು, ದೊಡ್ಡ ವಿಷಯಗಳು, ನಿಮ್ಮ ಸ್ವಂತ ಮನೆ, ನಿಮ್ಮ ಕುಟುಂಬ, ಎಲ್ಲವನ್ನೂ ಮಾನಸಿಕವಾಗಿ ದೂರಾಗಿಸಿಕೊಂಡು ನೋಡಿ. ಹಾಗೆ ಮಾಡಿದಾಗ ನಿಮಗೆ ನೋವನ್ನುಂಟುಮಾಡಿದ ಎಲ್ಲಾ ವಿಷಯಗಳ ಜೊತೆ ನೀವು ಗುರುತಿಸಿಕೊಂಡಿದ್ದೀರ ಎನ್ನುವುದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಹೀಗಿದ್ದಾಗ, ನಿಮ್ಮ ಮನಸ್ಸು ನಿಲ್ಲಿಸಲು ಬಾರದಂತಹ ಒಂದು ಎಕ್ಸ್‌ಪ್ರೆಸ್ ರೈಲಿನಂತಾಗುತ್ತದೆ. ನೀವೇನೇ ಮಾಡಿದರೂ ಸಹ ಅದು ನಿಲ್ಲುವುದಿಲ್ಲ. ಮನಸ್ಸು ಹೀಗೆ ವೇಗವಾಗಿ ಓಡುತ್ತಿರುವಾಗ ನೀವದಕ್ಕೆ ಬ್ರೇಕ್ ಹಾಕಲು ಹೋದರೆ ಅದು ಕೆಲಸ ಮಾಡುವುದಿಲ್ಲ. ನೀವು ಯಾವುದೇ ವಾಹನಕ್ಕೆ ಬ್ರೇಕ್ ಹಾಕುವ ಮೊದಲು, ಅದರ ವೇಗವನ್ನು ಹತೋಟಿಗೆ ತಂದುಕೊಳ್ಳುವುದು ಅತ್ಯವಶ್ಯಕ.  
 

ಸಂಪಾದಕರ ಟಿಪ್ಪಣಿ: ಮನುಷ್ಯರ ಮನಸ್ಸು ಹೊಂದಿರುವ ಅಗಾಧ ಸಾಧ್ಯತೆಗಳ ಬಗ್ಗೆ ಸದ್ಗುರುಗಳು ನೀಡಿರುವ ಹೆಚ್ಚಿನ ಒಳನೋಟಗಳನ್ನು ಈ ಪುಸ್ತಕದಲ್ಲಿ ಓದಿ "Mind is Your Business".