ಮಂತ್ರಗಳ ವಿಜ್ಞಾನದ ಬಗ್ಗೆ ಮತ್ತು ಒಂದು ಮಂತ್ರವು ಅಸ್ತಿತ್ವದ ಆಳವಾದ ಆಯಾಮಗಳನ್ನು ಪ್ರವೇಶಿಸಲು ಹೇಗೆ ಒಂದು ಕೀಲೀಕೈಯಾಗಬಹುದು ಎಂಬುದರ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ. ಐದು ಪವಿತ್ರ ಮಂತ್ರಗಳಿರುವ "ವೈರಾಗ್ಯ"ದ ಬಗ್ಗೆಯೂ ಸಹ ಅವರು ಮಾತನಾಡುತ್ತ, ನಾವು ಅದರಿಂದ ಯಾವ ರೀತಿ ಪ್ರಯೋಜನವನ್ನು ಪಡೆಯಬಹುದು ಎಂದು ವಿವರಿಸುತ್ತಾರೆ.

ಸದ್ಗುರು: ಮಂತ್ರವೆಂದರೆ ಒಂದು ಶಬ್ದ, ಒಂದು ನಿರ್ದಿಷ್ಟ ಉಚ್ಛಾರಣೆ ಅಥವಾ ಒಂದು ಅಕ್ಷರ. ಇಂದು, ಆಧುನಿಕ ವಿಜ್ಞಾನವು ಇಡೀ ಅಸ್ತಿತ್ವವನ್ನು ಶಕ್ತಿಯ ಮಾರ್ದನಿಯಂತೆ, ವಿವಿಧ ಮಟ್ಟಗಳ ಕಂಪನಗಳಂತೆ ನೋಡುತ್ತದೆ. ಎಲ್ಲಿ ಕಂಪನವಿರುತ್ತದೆಯೋ, ಅಲ್ಲಿ ಶಬ್ದವಿರಲೇಬೇಕು. ಇದರರ್ಥ, ಸಂಪೂರ್ಣ ಅಸ್ತಿತ್ವವು ಒಂದು ರೀತಿಯಾದ ಶಬ್ದ ಅಥವಾ ಶಬ್ದದ ಸಂಕೀರ್ಣ ಸಂಯೋಜನೆಯಾಗಿದೆ ಎಂದು. ಇಡೀ ಅಸ್ತಿತ್ವವು ಅನೇಕ ಮಂತ್ರಗಳನ್ನೊಳಗೊಂಡ ಒಂದು ಸಮ್ಮಿಲನವಾಗಿದೆ. ಇವುಗಳ ಪೈಕಿ, ಕೀಲಿಕೈಗಳಂತೆ ಕೆಲಸ ಮಾಡಬಹುದಾದ ಕೆಲ ಮಂತ್ರ ಅಥವಾ ಶಬ್ದಗಳನ್ನು ಗುರುತಿಸಲಾಗಿದೆ. ಅವುಗಳನ್ನು ನೀವು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಬಳಸಿದರೆ, ಆ ಮಂತ್ರಗಳು ನಿಮ್ಮೊಳಗೆ ಜೀವನದ ವಿಭಿನ್ನವಾದ ಆಯಾಮ ಮತ್ತು ಅನುಭವವನ್ನು ತೆರೆಯುವ ಕೀಲಿಕೈಯಾಗುತ್ತವೆ.


 

ಮಂತ್ರ - ಅಸ್ತಿತ್ವಕ್ಕೆ ಕೀಲಿಕೈಯಾಗುವ ರೀತಿ

ಮಂತ್ರವೆಂದರೆ ನೀವು ಏನನ್ನೋ ಉಚ್ಛರಿಸುವುದು ಎಂದಲ್ಲ. ನೀವೇ ಮಂತ್ರವಾಗಲು ಪ್ರಯತ್ನಿಸುತ್ತಿದ್ದೀರಿ ಎಂದು. ಏಕೆಂದರೆ, ನೀವು ಕೀಲಿಕೈಯಾಗದ ಹೊರತು, ಅಸ್ತಿತ್ವವು ನಿಮಗೆ ತೆರೆದುಕೊಳ್ಳುವುದಿಲ್ಲ. ನೀವು ಮಂತ್ರವಾಗುವುದರ ಅರ್ಥ ನೀವು ಕೀಲಿಕೈಯಾಗುತ್ತಿದ್ದೀರಿ ಎಂದು. ನೀವು ಕೀಲಿಕೈಯಾದರೆ ಮಾತ್ರ ನಿಮಗೆ ಬೀಗವನ್ನು ತೆರೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಬೇರೆ ಯಾರಾದರು ಅದನ್ನು ನಿಮಗಾಗಿ ತೆರೆಯಬೇಕಾಗುತ್ತದೆ ಮತ್ತು ಹಾಗಾದಾಗ, ನೀವವರು ಹೇಳಿದ್ದನ್ನು ಕೇಳಬೇಕಾಗುತ್ತದೆ.

ಮಂತ್ರಗಳು ಅಸ್ತಿತ್ವವನ್ನು ಅರಿಯುವ ಕಡೆಗೆ ಅತ್ಯುತ್ತಮವಾದ ಪೂರ್ವಸಿದ್ಧತೆಯ ಹೆಜ್ಜೆಗಳಾಗಬಹುದು. ಕೇವಲ ಒಂದು ಮಂತ್ರ ಜನರ ಮೇಲೆ ಅದ್ಭುತವಾದ ಪರಿಣಾಮಗಳನ್ನು ಬೀರಬಹುದು. ನಾದವಾಗಿರುವುದೆಲ್ಲದರ ಬಗ್ಗೆ ಸಂಪೂರ್ಣ ಅರಿವಿರುವಂತಹ ಮೂಲದಿಂದ ಮಂತ್ರಗಳು ಬಂದ್ದಿದ್ದರೆ ಮಾತ್ರ ಅವು ಏನನ್ನಾದರೂ ರಚಿಸುವಲ್ಲಿ ಪರಿಣಾಮಕಾರಿಯಾದ ಶಕ್ತಿಯಾಗಲು ಸಾಧ್ಯ. ನಾವು "ನಾದವಾಗಿರುವುದೆಲ್ಲ" ಎಂದು ಹೇಳಿದಾಗ, ನಾವು ಸೃಷ್ಟಿಯ ಬಗ್ಗೆಯೇ ಮಾತನಾಡುತ್ತಿದ್ದೇವೆ. ಒಂದು ಮಂತ್ರವು ಅಂತಹ ಮೂಲದಿಂದ ಬಂದಿದ್ದೇ ಆದರೆ ಹಾಗೂ ಅದರ ತಿಳುವಳಿಕೆಯ ಮಟ್ಟ ಮತ್ತು ಪ್ರಸಾರಣೆಯು ಪರಿಶುದ್ಧವಾಗಿದ್ದಾಗ, ಮಂತ್ರಗಳು ಪರಿಣಾಮಕಾರಿಯಾದ ಶಕ್ತಿಯಾಗಬಲ್ಲವು.
 

ಪ್ರಜ್ಞಾಪೂರ್ವಕವಾಗಿ ಮಂತ್ರಗಳ ಬಗ್ಗೆ ಅರಿಯುವುದು

ಮಂತ್ರಗಳಲ್ಲಿ ವಿವಿಧ ಬಗೆಗಳಿವೆ. ಪ್ರತಿಯೊಂದು ಮಂತ್ರವು ದೇಹದ ಒಂದು ವಿಭಿನ್ನ ಭಾಗದಲ್ಲಿ ನಿರ್ದಿಷ್ಟ ರೀತಿಯ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಅವಶ್ಯಕವಾದ ಪ್ರಜ್ಞೆಯಿಲ್ಲದೆ, ಕೇವಲ ಶಬ್ದವನ್ನು ಮಾತ್ರ ಪುನರಾವರ್ತಿಸುವುದು ಮನಸ್ಸಿಗೆ ಬೇಸರವನ್ನು ಮಾತ್ರ ತರಿಸುತ್ತದೆ. ಶಬ್ದದ ಪುನರಾವರ್ತನೆಯು ಯಾವಾಗಲೂ ನಿಮ್ಮ ಮನಸ್ಸನ್ನು ಮಂಕಾಗಿಸುತ್ತದೆ. ಆದರೆ ಅದೇನೆಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವ ಮೂಲಕ, ಸರಿಯಾದ ತಿಳುವಳಿಕೆಯೊಂದಿಗೆ ಅದನ್ನು ಮಾಡಿದಾಗ, ಒಂದು ಮಂತ್ರವು ಅತ್ಯಂತ ಶಕ್ತಿಯುತವಾದ ವಿಧಾನವಾಗಬಹುದು. ಇದು ಒಂದು ವಿಜ್ಞಾನವಾಗಿ, ಅತ್ಯಂತ ಶಕ್ತಿಯುತವಾದ ಆಯಾಮವಾಗಿದೆ. ಆದರೆ ಇದೊಂದು ವಸ್ತುನಿಷ್ಠ ವಿಜ್ಞಾನವಾಗಿರುವುದರಿಂದ, ಅವಶ್ಯಕವಾದ ಆಧಾರ ಮತ್ತು ಅಗತ್ಯ ಪರಿಸ್ಥಿತಿಗಳನ್ನು ರಚಿಸದೆಯೇ ಇದನ್ನು ಹೇಳಿಕೊಟ್ಟರೆ, ಇದು ಬಹಳಷ್ಟು ಹಾನಿಯನ್ನುಂಟುಮಾಡಬಹುದು. ಸರ್ವೇಸಾಮಾನ್ಯವಾದ ಗಾಯತ್ರಿ ಮಂತ್ರದ ತಪ್ಪಾದ ಉಚ್ಚಾರಣೆಯಿಂದಾಗಿ ತಮಗೆ ತಾವೇ ಅಪಾಯವನ್ನು ತಂದುಕೊಂಡಂತಹ ಜನರ ಬಗ್ಗೆ ನಮಗೆ ತಿಳಿದಿದೆ.

ಮಂತ್ರ ಮತ್ತು ಸಂಸ್ಕೃತ – ಇವೆರಡರ ನಡುವಿನ ಸಂಬಂಧವೇನು?

ಮಂತ್ರಗಳು ಯಾವಾಗಲೂ ಸಂಸ್ಕೃತದ ಆಧಾರದಿಂದ ಬರುತ್ತವೆ ಮತ್ತು ಸಂಸ್ಕೃತ ಭಾಷೆಯ ಮೂಲಭೂತ ಅಂಶಗಳು ಶಬ್ದಕ್ಕೆ ತುಂಬ ಸೂಕ್ಷ್ಮವಾಗಿರುವಂತವು. ಆದರೆ ಬೇರೆ ಬೇರೆ ಜನರು ಅದನ್ನು ಉಚ್ಛರಿಸಿದಾಗ, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಹೇಳುತ್ತಾರೆ. ಬಂಗಾಳಿಗಳು ಒಂದು ಮಂತ್ರವನ್ನು ಹೇಳಿದರೆ, ಅವರದನ್ನು ತಮ್ಮದೇ ರೀತಿಯಲ್ಲಿ ಹೇಳುತ್ತಾರೆ. ತಮಿಳರು ಹೇಳಿದರೆ,  ಅದನ್ನು ಮತ್ತೊಂದು ರೀತಿಯಲ್ಲಿ ಹೇಳುತ್ತಾರೆ. ಅಮೇರಿಕನ್ನರು ಹೇಳಿದರೆ, ಅವರದನ್ನು ಸಂಪೂರ್ಣವಾಗಿ ಬೇರೆಯೇ ರೀತಿಯಲ್ಲಿ ಹೇಳುತ್ತಾರೆ. ಹೀಗೆ, ನಾನಾ ಭಾಷೆಗಳನ್ನು ಮಾತನಾಡುವ ಬೇರೆ ಬೇರೆ ಜನರು, ನಿಜವಾದ ತರಬೇತಿಯನ್ನು ನೀಡದ ಹೊರತು, ಅವರವರ ಭಾಷೆಗೆ ಅನುಗುಣವಾಗಿ ಮಂತ್ರಗಳನ್ನು ತಿರುಚಿ ಹೇಳಬಹುದು. ಅಂತಹ ತರಬೇತಿಯು ಬಹಳ ಸಮಗ್ರವಾಗಿದ್ದು, ಇದಕ್ಕೆ ಧೀರ್ಘವಾದ ಸಮಯ ಮತ್ತು ತೊಡಗಿಕೊಳ್ಳುವಿಕೆಯ ಅಗತ್ಯವಿರುವ ಕಾರಣ ಇತ್ತೀಚಿನ ಜನರಿಗೆ ಆ ತರಬೇತಿಯನ್ನು ಮುಗಿಸುವ ತಾಳ್ಮೆ ಅಥವಾ ಸಮರ್ಪಣಾ ಮನೋಭಾವವಿಲ್ಲ.

ನಾದ ಯೋಗ – ನಾದ ಮತ್ತು ರೂಪದ ನಡುವಿನ ಸಂಬಂಧ

ಸಂಸ್ಕೃತ ಭಾಷೆಯು ಅವಶ್ಯಕವಾಗಿ ಒಂದು ಸಂವಹನ ಮಾಧ್ಯಮವಲ್ಲ, ಅದೊಂದು ಸಾಧನ. ಬೇರೆಲ್ಲಾ ಭಾಷೆಗಳನ್ನು ನಾವು ಯಾವುದರ ಕುರಿತಾಗಿಯಾದರೂ ಹೇಳಬೇಕಾಗಿದ್ದ ಕಾರಣ ರಚಿಸಲಾಯಿತು. ಆರಂಭದಲ್ಲಿ, ಕೇವಲ ಕೈಬೆರಳೆಣಿಕೆಯಷ್ಟು ಪದಗಳೊಂದಿಗೆ ಪ್ರಾರಂಭಿಸಿ ನಂತರದಲ್ಲಿ ಅವುಗಳನ್ನು ಜೋಡಿಸಿ ಸಂಕೀರ್ಣವಾದ ಪದಗಳನ್ನು ರೂಪಿಸಲಾಯಿತು. ಆದರೆ ಸಂಸ್ಕೃತವು ಕಂಡುಹಿಡಿಯಲಾದ ಭಾಷೆ ಏಕೆಂದರೆ ಇಂದು ನೀವು ಯಾವುದೇ ಶಬ್ದವನ್ನು ಆಸಿಲೋಸ್ಕೋಪ್-ನ ಮೂಲಕ ಹರಿಸಿ ನೋಡಿದರೆ, ಪ್ರತಿ ಶಬ್ದಕ್ಕೂ ತನ್ನದೇ ಆದ ರೂಪವಿರುವುದನ್ನು ನೀವು ಗಮನಿಸುತ್ತೀರಿ. ಅಂತೆಯೇ, ಪ್ರತಿ ರೂಪಕ್ಕೂ ಅದರದ್ದೇ ಆದ ಶಬ್ದವು ಹೊಂದಿಕೊಂಡಿದೆ. ಅಸ್ತಿತ್ವದ ಪ್ರತಿಯೊಂದು ರೂಪವೂ ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರತಿಧ್ವನಿಸುತ್ತ ಒಂದು ನಿರ್ದಿಷ್ಟ ಶಬ್ದವನ್ನು ಸೃಷ್ಟಿಸುತ್ತದೆ.

ನೀವೊಂದು ಶಬ್ದವನ್ನು ಉಚ್ಛರಿಸಿದಾಗ, ಒಂದು ರೂಪವು ಸೃಷ್ಟಿಯಾಗುತ್ತದೆ. ಶಬ್ದಗಳನ್ನು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಉಪಯೋಗಿಸಿ, ಅದು ಸರಿಯಾದ ರೂಪವನ್ನು ತಾಳುವಂತೆ ಮಾಡಲು ಒಂದಿಡೀ ವಿಜ್ಞಾನವೇ ಇದೆ. ಕೆಲವೊಂದು ಜೋಡಣೆಗಳನ್ನು ಮಾಡಿ ಶಬ್ದಗಳನ್ನು ಉಚ್ಛರಿಸುವ ಮೂಲಕ ನಾವು ಶಕ್ತಿಶಾಲಿಯಾದ ರೂಪಗಳನ್ನು ಸೃಷ್ಟಿಸಬಹುದಾಗಿದೆ. ಇದನ್ನು ನಾದ ಯೋಗ ಎಂದು ಕರೆಯಲಾಗುತ್ತದೆ. ನಿಮಗೆ ನಾದದ ಮೇಲೆ ಪ್ರಾವೀಣ್ಯತೆಯಿದ್ದರೆ, ಅದಕ್ಕೆ ಹೊಂದಿಕೊಂಡಿರುವ ರೂಪದ ಮೇಲೆಯೂ ಸಹ ನೀವು ಪ್ರಾವೀಣ್ಯತೆಯನ್ನು ಪಡೆಯುತ್ತೀರಿ.
 

ಸಂಸ್ಕೃತವನ್ನು ಕಲಿಸಿದಾಗ, ಅದನ್ನು ಕಂಠಪಾಠ ಮಾಡಿ ಕಲಿತುಕೊಳ್ಳಬೇಕು. ಇಲ್ಲಿ ಶಬ್ದ ಮುಖ್ಯ, ಅರ್ಥವಲ್ಲ.

ನನ್ನ ಬಾಲ್ಯದಲ್ಲಿ ನಡೆದ ಘಟನೆಯಿದು: ಯಾರಾದರೂ ಮಾತನಾಡುತ್ತಿದ್ದಾಗ, ನಾನು ಅವರ ಮುಖವನ್ನೇ ನೋಡುತ್ತಿರುತ್ತಿದ್ದೆ. ಮೊದಮೊದಲು ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆ. ನಂತರ, ಕೇವಲ ಶಬ್ದ ಮಾತ್ರ. ಸ್ವಲ್ಪ ಸಮಯದ ನಂತರ, ನಾನು ಅವರ ಸುತ್ತ ವಿಚಿತ್ರ ಚಿತ್ರಾಕೃತಿಗಳನ್ನು ನೋಡತೊಡಗಿದೆ. ಇವುಗಳು ಎಷ್ಟು ಮಂತ್ರಮುಗ್ಧ, ಅದ್ಭುತ ಹಾಗೂ ಆಶ್ಚರ್ಯಭರಿತವಾಗಿದ್ದವೆಂದರೆ, ಅವುಗಳ ಅರ್ಥ ತಿಳಿಯದೆಯೇ ನಾನವುಗಳನ್ನು ಸದಾ ನೋಡುತ್ತ ಕುಳಿತಿರಬಹುದಿತ್ತು. ನಾನು ಪದಗಳನ್ನು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ.

ರೂಪ ಮತ್ತು ಶಬ್ದಕ್ಕೆ ಸಂಬಂಧವಿರುವಂತಹ ಒಂದು ಭಾಷೆಯೆಂದರೆ ಸಂಸ್ಕೃತ. ಉದಾಹರಣೆಗೆ, ನೀವು ಇಂಗ್ಲಿಷ್ ಭಾಷೆಯಲ್ಲಿ "sun" ಅಥವಾ "son" ಎಂದರೆ, ಅದರ ಉಚ್ಛಾರಣೆ ಒಂದೇ, ಆದರೆ ಅದರಲ್ಲಿ ಬಳಸುವ ಅಕ್ಷರಗಳು ಬೇರೆ ಬೇರೆಯಷ್ಟೆ. ನೀವೇನು ಬರೆಯುತ್ತೀರೋ ಅದು ನಿರ್ಣಾಯಕ ಅಂಶವಲ್ಲ. ಅದು ಹೊರಹೊಮ್ಮಿಸುವ ನಾದವು ನಿರ್ಣಾಯಕ ಅಂಶ. ಒಂದು ನಿರ್ದಿಷ್ಟವಾದ ರೂಪಕ್ಕೆ ಯಾವ ನಾದ ಸಂಬಂಧ ಪಟ್ಟಿದೆಯೆಂದು ನಿಮಗೆ ತಿಳಿದಾಗ, ಆ ರೂಪಕ್ಕೆ ಆ ನಾದದ ಹೆಸರನ್ನಿಡುವಿರಿ. ಈಗ ನಾದ ಮತ್ತು ರೂಪ ಒಂದಕ್ಕೊಂದು ಹೊಂದಿಕೊಂಡಿದೆ. ನೀವು ಆ ಪದವನ್ನು ಉಚ್ಛರಿಸಿದಾಗ, ನೀವು ಆ ರೂಪದ ಜೊತೆ ಸಂಬಂಧ ಕಲ್ಪಿಸುತ್ತಿದ್ದೀರಿ - ಕೇವಲ ಮಾನಸಿಕವಾಗಲ್ಲ, ನಿಮ್ಮ ಇರುವಿಕೆಯ ದೃಷ್ಟಿಯಿಂದಲೂ ಸಹ ನೀವು ಆ ರೂಪದೊಂದಿಗೆ ಸೇರುತ್ತೀರಿ. ಸಂಸ್ಕೃತವು ಅಸ್ತಿತ್ವದ ಒಂದು ನೀಲನಕ್ಷೆಯ ಹಾಗೆ. ರೂಪದಲ್ಲಿ ಏನಿದೆಯೋ, ನಾವದನ್ನು ನಾದವಾಗಿ ಬದಲಿಸಿದ್ದೇವೆ. ಆದರೆ ಈಗ ಇವುಗಳು ಬಹಳವಾಗಿ ವಿರೂಪಗೊಂಡಿವೆ. ಅವಶ್ಯಕವಾದ ಜ್ಞಾನ, ತಿಳುವಳಿಕೆ ಮತ್ತು ಅರಿವು ಇಲ್ಲವಾಗಿರುವುದರಿಂದಾಗಿ ಅದನ್ನು ಸರಿಯಾದ ರೂಪದಲ್ಲಿ ಹೇಗೆ ಸಂರಕ್ಷಿಸುವುದು ಎನ್ನುವುದು ಇಂದಿಗೂ ಸಹ ಒಂದು ದೊಡ್ಡ ಸವಾಲಾಗಿ ಉಳಿದಿದೆ.
 

ಅರ್ಥಕ್ಕಿಂತ ನಾದ ಹೆಚ್ಚು ಮುಖ್ಯ

ಈ ಕಾರಣಕ್ಕಾಗಿಯೇ, ಸಂಸ್ಕೃತವನ್ನು ಕಲಿಸಿದಾಗ ಅದನ್ನು ಕಂಠಪಾಠ ಮಾಡಿ ಕಲಿತುಕೊಳ್ಳಬೇಕು. ಜನರು ಸಂಸ್ಕೃತ ಭಾಷೆಯನ್ನು ಕೊನೆಯಿಲ್ಲದಂತೆ ಉರು ಹೊಡೆಯುತ್ತಿರುತ್ತಾರೆ. ನಿಮಗದರ ಅರ್ಥ ತಿಳಿದಿದೆಯೋ ಇಲ್ಲವೋ ಎನ್ನುವುದು ಮುಖ್ಯವಾಗುವುದಿಲ್ಲ. ಅದರ ನಾದ ಮುಖ್ಯ, ಅರ್ಥವಲ್ಲ. ಅರ್ಥಗಳು ನಿಮ್ಮ ಮನಸ್ಸಿನಲ್ಲಿ ರೂಪುಗೊಳ್ಳುವಂತವುಗಳು. ಆದರೆ ನಿಮ್ಮೊಂದಿಗೆ ಸಂಪರ್ಕವನ್ನು ಹೊಂದುವುದು ನಾದ ಮತ್ತು ರೂಪ. ನಿಮ್ಮ ಸಂಪರ್ಕ ಅದರೊಂದಿಗಾಗಿದೆಯೋ, ಇಲ್ಲವೋ ಎನ್ನುವುದೇ ಪ್ರಶ್ನೆ. ಇದರಿಂದಾಗಿಯೇ ಸಂಸ್ಕೃತವು ಬಹುತೇಕ ಎಲ್ಲಾ ಭಾರತೀಯ ಮತ್ತು ಯುರೋಪಿಯನ್ ಭಾಷೆಗಳ ತಾಯಿಯಾಗಿದೆ. ತಮಿಳು ಭಾಷೆ ಇದಕ್ಕೆ ಹೊರತಾಗಿದೆ. ತಮಿಳು ಸಂಸ್ಕೃತದಿಂದ ಬಂದಿದ್ದಲ್ಲ, ಅದು ಸ್ವತಂತ್ರವಾಗಿ ಬೆಳೆಯಿತು. ಬೇರೆಲ್ಲಾ ಭಾರತೀಯ ಭಾಷೆಗಳ ಮತ್ತು ಬಹುತೇಕ ಎಲ್ಲಾ ಯುರೋಪಿಯನ್ ಭಾಷೆಗಳ ಮೂಲ ಸಂಸ್ಕೃತದಲ್ಲಿದೆ.

ಮಂತ್ರಗಳಿಂದ ಪ್ರಯೋಜನ ಪಡೆಯುವುದು ಹೇಗೆ

ಸಂಗೀತವು ಮಾಧುರ್ಯವನ್ನು ಸೃಷ್ಟಿಸುವ ಸಲುವಾಗಿರುವ ಶಬ್ದಗಳ ಜೋಡಣೆಯಾಗಿದೆ. ಸಂಗೀತವು ಉತ್ತಮವಾದ ವ್ಯವಸ್ಥೆಯಾದರೂ ಸಹ, ಅದು ಹರಿಯುತ್ತಿರುವ ನೀರಿನಂತೆ. ಮಂತ್ರ ಅಷ್ಟೇನೂ ಸುಂದರ ಹಾಗೂ ಆಕರ್ಷಕವಾಗಿಲ್ಲದಿದ್ದರೂ ಅದು ಹೆಚ್ಚು ಪರಿಣಾಮಕಾರಿಯಾಗಿದೆ. ನೀವಿದನ್ನು ಪ್ರಯತ್ನಿಸಿ ನೋಡಬೇಕು: ಸೌಂಡ್ಸ್ ಆಫ್ ಈಶ, "ವೈರಾಗ್ಯ" ಎಂಬ ಸಿಡಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಐದು ಮಂತ್ರಗಳಿವೆ - ನಿರ್ವಾಣ ಶತಕಮ್, ಗುರು ಪಾದುಕ ಸ್ತೋತ್ರಮ್, ಬ್ರಹ್ಮಾನಂದ ಸ್ವರೂಪ, ಆಉಮ್ ನಮಃ ಶಿವಾಯ ಮತ್ತು ಶಂಭೋ. ಇದನ್ನೊಂದು ವಿಶಿಷ್ಟವಾದ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಯಿತು. ಸಿಡಿಯಲ್ಲಿರುವ ಮಂತ್ರಗಳನ್ನು ಒಂದೊಂದಾಗಿ ಮತ್ತೆ ಮತ್ತೆ ಕೇಳಿ - ಪ್ರತಿಯೊಂದು ಮಂತ್ರವು ಹತ್ತು ನಿಮಿಷದಷ್ಟಿದೆ. ಇವುಗಳಲ್ಲಿ ಯಾವ ಮಂತ್ರವು ನಿಮ್ಮನ್ನು ಬಹಳವಾಗಿ ಸೆಳೆಯುತ್ತದೆ ಎಂದು ನೋಡಿ. "ಓಹ್! ನನಗೆ ಈ ಮಂತ್ರ ತುಂಬ ಇಷ್ಟವಾಯಿತು, ನೀವು ಯಾವ ಮಂತ್ರವನ್ನು ಆರಿಸಿಕೊಂಡಿರಿ? ಸರಿ, ನಾನು ಕೂಡ ಅದನ್ನೇ ಆರಿಸಿಕೊಳ್ಳುವೆ." ಈ ರೀತಿಯಾಗಿ ಮಂತ್ರವನ್ನು ಆಯ್ಕೆ ಮಾಡುವುದಲ್ಲ. ಸುಮ್ಮನೆ ಪದೇ ಪದೇ ಆ ಮಂತ್ರಗಳನ್ನು ಕೇಳುತ್ತಿರಿ. ಒಂದು ಮಂತ್ರ ನಿಮ್ಮನ್ನು ತನ್ನತ್ತ ಸೆಳೆಯುತ್ತಿದೆ ಎಂದೆನಿಸಿದರೆ, ಅದನ್ನು ಆಯ್ಕೆ ಮಾಡಿ. ಆ ಮಂತ್ರವನ್ನು ಸದಾ ಕಾಲ ಕೇಳುತ್ತಿರಿ - ನಿಮ್ಮ ಕಾರಿನಲ್ಲಿ, ಮನೆಯಲ್ಲಿ, ನಿಮ್ಮ ಐಪ್ಯಾಡ್, ಐಪಾಡ್, ಫೋನ್, ಎಲ್ಲಾ ಕಡೆ ಅದೇ ಮಂತ್ರ ಸಾಗುತ್ತಿರಲಿ. ಈ ಮಂತ್ರಗಳ ಒಂದು ಗಂಟೆ ಅವಧಿಯ ಆವೃತ್ತಿಗಳೂ ಸಹ ಲಭ್ಯವಿದೆ. ಸುಮ್ಮನೆ ಒಂದಷ್ಟು ಸಮಯದವರೆಗೆ ಆ ಮಂತ್ರವನ್ನು ಕೇಳುವುದನ್ನು ಮುಂದುವರೆಸಿ.

ಸ್ವಲ್ಪ ಸಮಯದ ನಂತರ ಅದು ನಿಮ್ಮ ವ್ಯವಸ್ಥೆಯ ಒಂದು ಭಾಗವೇ ಆಗಿಹೋಗುತ್ತದೆ ಮತ್ತು ನಿಮಗಾಗಿ ಒಂದು ನಿರ್ದಿಷ್ಟವಾದ ಪರಿಸರವನ್ನು ಸ್ಥಾಪಿಸುತ್ತದೆ. ಮಂತ್ರವೇ ಜಾಗೃತಾವಸ್ಥೆಯಲ್ಲ ಆದರೆ ಅದಕ್ಕೆ ಬೇಕಾದ ಸರಿಯಾದ ಸನ್ನಿವೇಶವನ್ನು ಮಂತ್ರವು ಸ್ಥಾಪಿಸುತ್ತದೆ. ಈ ದೈಹಿಕ ಮತ್ತು ಮಾನಸಿಕ ಚೌಕಟ್ಟಿನೊಳಗೆ ಹಾಗೂ ನಮ್ಮ ಸುತ್ತಲಿನ ವಾತಾವರಣದಲ್ಲಿ ನಾದವು ಸರಿಯಾದ ರೀತಿಯ ಪರಿಸರವನ್ನು ಸ್ಥಾಪಿಸುವುದರಿಂದಾಗಿ ನಾವದನ್ನು ನಮ್ಮ ಒಳಿತಿಗಾಗಿ ಬಳಸಿಕೊಳ್ಳಬಹುದು.
 

ವೈರಾಗ್ಯದಲ್ಲಿರುವ ಮಂತ್ರಗಳು

ಈ ಆಲ್ಬಮ್ ಉಚಿತ mp3 ಡೌನ್ಲೋಡ್  mp3 downloads ಹಾಗೂ android app ನಲ್ಲಿ ಲಭ್ಯವಿದೆ free mobile app

ನಾದ ಬ್ರಹ್ಮ – ಜಗತ್ತನ್ನು ನಾದವಾಗಿ ಅನುಭವಿಸುವುದು

ನಾದ ಎಂದರೆ ಶಬ್ದ. “ಬ್ರಹ್ಮ” ಎಂದರೆ “ದೈವಿಕ”, ಸರ್ವಾಂತರ್ಯಾಮಿ. ಮೂಲತಃ, ಅಸ್ತಿತ್ವದಲ್ಲಿ ಮೂರು ಶಬ್ದಗಳಿವೆ. ಈ ಮೂರು ಶಬ್ದಗಳಿಂದ ಯಾವುದೇ ಶಬ್ದವನ್ನು ರಚಿಸಬಹುದು. ನಿಮಗೆ ಕಲರ್ ಟಿವಿಯ ಬಗ್ಗೆ ಸ್ವಲ್ಪ ಗೊತ್ತಿದ್ದರೆ, ಅದರಲ್ಲಿರುವುದು ಕೇವಲ ಮೂರು ಬಣ್ಣಗಳು ಎಂದು ತಿಳಿದಿರುತ್ತದೆ. ಈ ಮೂರು ಬಣ್ಣಗಳಿಂದ ಯಾವುದೇ ಬಣ್ಣಗಳನ್ನಾದರೂ ರಚಿಸಬಹುದಾಗಿದೆ. ಅಂತೆಯೇ, ಈ ಮೂರು ಶಬ್ದಗಳನ್ನು ಬಳಸಿ ಎಷ್ಟು ಶಬ್ದಗಳನ್ನು ಬೇಕಾದರೂ ಸೃಷ್ಟಿಸಬಹುದು. ನೀವಿದನ್ನು ಒಂದು ಸರಳ ಪ್ರಯೋಗ ಮಾಡುವ ಮೂಲಕ ಗಮನಿಸಬಹುದು: ನಾಲಿಗೆಯನ್ನು ಬಳಸದೆಯೇ ನಿಮಗೆ ಕೇವಲ ಮೂರೇ ಶಬ್ದಗಳನ್ನು ಉಚ್ಛರಿಸಲಿಕ್ಕಾಗುವುದು, "ಆಽಽ", "ಊಽಽ" ಮತ್ತು "ಮ್ಽಽಽ". ನಿಮ್ಮ ನಾಲಿಗೆಯನ್ನು ಕತ್ತರಿಸಿ ಹಾಕಿದರೂ ಸಹ ನೀವೀ ಮೂರು ಶಬ್ದಗಳನ್ನು ಉಚ್ಛರಿಸಬಹುದು. ಬೇರಿನ್ಯಾವುದೇ ಶಬ್ದವನ್ನು ಉಚ್ಛಾರ ಮಾಡಬೇಕೆಂದರೂ ನಿಮಗೆ ನಾಲಿಗೆಯ ಸಹಾಯ ಬೇಕಾಗುತ್ತದೆ. ಈ ಮೂರು ಶಬ್ದಗಳನ್ನು ಹಲವಾರು ರೀತಿಯಲ್ಲಿ ಜೋಡಿಸಿ ಬೇರೆಲ್ಲ ಶಬ್ದಗಳನ್ನು ಸೃಷ್ಟಿಸಲು ಮಾತ್ರ ನೀವು ನಾಲಿಗೆಯನ್ನು ಬಳಸುತ್ತಿದ್ದೀರಿ. ನಿಮ್ಮ ಬಾಯಿಯಿಂದ ಸೃಷ್ಟಿಸಬಹುದಾದ ಲಕ್ಷಗಟ್ಟಲೆ ಶಬ್ದಗಳಿವೆ, ಆದರೆ ಒಬ್ಬ ಮೂಕ ವ್ಯಕ್ತಿಯು ಕೇವಲ "ಆಽಽ", "ಊಽಽ" ಮತ್ತು "ಮ್ಽಽಽ" ಶಬ್ದಗಳನ್ನು ಮಾತ್ರ ಉಚ್ಛರಿಸಬಹುದು. ನಾಲಿಗೆಯನ್ನು ಬಳಸಲು ಸಾಧ್ಯವಾಗದ ಕಾರಣ ಅವನಿಗೆ ಬೇರೇನನ್ನೂ ಹೇಳಲು ಬರುವುದಿಲ್ಲ.

ಆಊಮ್ – ಮೂಲಭೂತ ಶಬ್ದ

ಈ ಮೂರು ಶಬ್ದಗಳನ್ನು ಒಟ್ಟಿಗೆ ಹೇಳಿದರೆ ನಿಮಗೇನು ಕೇಳುತ್ತದೆ? ಆಊಮ್. ಆಊಮ್ ಎನ್ನುವುದು ಯಾವುದೇ ಮತಧರ್ಮದ ವಿಶಿಷ್ಟ ಸಂಕೇತವಲ್ಲ. ಇದು ಅಸ್ತಿತ್ವದಲ್ಲಿನ ಮೂಲಭೂತ ಶಬ್ದ. ಶಿವ ಕೇವಲ ಮೂರು ಬಾರಿ ಆಊಮ್ ಉಚ್ಛಾರ ಮಾಡುವ ಮೂಲಕ ಒಂದು ಹೊಸ ಅಸ್ತಿತ್ವವನ್ನೇ ರಚಿಸಬಹುದು ಎಂದು ಹೇಳಲಾಗುತ್ತದೆ. ಇದು ವಾಸ್ತವಾಂಶವಲ್ಲ, ಇದು ಸತ್ಯ. ವಾಸ್ತವಾಂಶಕ್ಕೂ ಸತ್ಯಕ್ಕೂ ಇರುವ ವ್ಯತ್ಯಾಸವಾದರೂ ಏನು? ನೀವೊಬ್ಬ ಸ್ತ್ರೀ ಎಂದೆಣಿಸೋಣ; ನಿಮ್ಮನ್ನು ಸೃಷ್ಟಿಸುವಲ್ಲಿ ನಿಮ್ಮ ತಂದೆಯ ಕೊಡುಗೆ ಏನೂ ಇಲ್ಲವೆಂದು ಇದರರ್ಥವೇ? ನಿಮ್ಮೊಳಗೆ ನಿಮ್ಮ ತಂದೆಯ ಅಂಶವಿಲ್ಲವೆಂದರ್ಥವೇ?  ಇಲ್ಲ. ನೀವೊಬ್ಬ ಪುರುಷ ಅಥವಾ ಸ್ತ್ರೀ ಎನ್ನುವುದು ವಾಸ್ತವಾಂಶ. ನೀವು ಇವೆರಡೂ ಆಗಿದ್ದೀರ ಎನ್ನುವುದು ಸತ್ಯ. ಶಿವ ಅಲ್ಲೆಲ್ಲೋ ಕುಳಿತು ಆಊಮ್ ಮಂತ್ರವನ್ನು ಪಠಿಸುತ್ತಿದ್ದಾನೆಂದಲ್ಲ. ಇಲ್ಲಿ ವಿಷಯ ಅದಲ್ಲ. ಎಲ್ಲವೂ ಒಂದು ಕಂಪನವೆಂಬ ವಿಷಯವನ್ನು ಇಲ್ಲಿ ವಿವರಿಸಲಾಗುತ್ತಿರುವುದು.

ಆ ಹಾಡಿಗೆ ನಿಮ್ಮನ್ನು ನೀವು ಸಮರ್ಪಿಸಿಕೊಂಡರೆ, ಅದಕ್ಕೊಂದು ರೀತಿಯ ಶಕ್ತಿಯಿದೆ. ನೀವದರೊಳಗೆ ನಿಜವಾಗಿಯೂ ತಲ್ಲೀನರಾದರೆ, ನಿಮ್ಮನ್ನು ಸಂಪೂರ್ಣವಾಗಿ ಕರಗಿಸುವ ಶಕ್ತಿ ಅದಕ್ಕಿದೆ.

ಇದನ್ನು ವಿವಿಧ ರೀತಿಗಳಲ್ಲಿ ಅರ್ಥೈಸಿಕೊಳ್ಳಬಹುದು. ಅನೇಕ ವರ್ಷಗಳ ಹಿಂದೆ, ನಾನು ಹಿಮಾಲಯ ಪ್ರದೇಶಗಳಲ್ಲಿ ಪ್ರತಿ ವರ್ಷ ಒಂದು ಅಥವಾ ಎರಡು ತಿಂಗಳುಗಳ ಮಟ್ಟಿಗೆ ಒಂಟಿಯಾಗಿ ಸಂಚರಿಸುತ್ತಿದ್ದೆ. ಒಮ್ಮೆ ಹೀಗೆ ನಾನು ಕೇದಾರನಾಥಕ್ಕೆ ಹೋಗಿದ್ದೆ. ಇದೊಂದು ಅತ್ಯಂತ ಶಕ್ತಿಯುತ ಮತ್ತು ಅದ್ಭುತವಾದಂತಹ ಕ್ಷೇತ್ರ. ಕೇದಾರಿನ ಮೇಲುಪಾತ್ರದಲ್ಲಿ "ಕಾಂತಿ ಸರೋವರ"ವೆಂಬ ಸ್ಥಳವಿದೆ. ಅಲ್ಲಿಗೆ ಹತ್ತಿ ಹೋಗುವುದು ಕಷ್ಟವಾದ್ದರಿಂದ ಜನರು ಸಾಮಾನ್ಯವಾಗಿ ಅಲ್ಲಿ ಹೋಗುವುದಿಲ್ಲ. ನಾನಲ್ಲಿಗೆ ಹತ್ತಿಕೊಂಡು ಹೋಗಿ ಒಂದು ಕಲ್ಲುಬಂಡೆಯ ಮೇಲೆ ಕುಳಿತುಕೊಂಡೆ.

ಇದನ್ನು ಮಾತುಗಳಲ್ಲಿ ಹೇಳುವುದು ಕಷ್ಟಸಾಧ್ಯ, ಆದರೆ ಸ್ವಲ್ಪ ಸಮಯದ ನಂತರ ನನ್ನ ಅನುಭವದಲ್ಲಿ ಎಲ್ಲವೂ ನಾದವಾಗಿ ಬದಲಾಯಿತು. ನನ್ನ ಶರೀರ, ಪರ್ವತ, ನನ್ನ ಮುಂದಿದ್ದ ಸರೋವರ, ಎಲ್ಲವೂ ನಾದವಾಗಿ ಹೋಗಿತ್ತು. ಅದು ನಾದರೂಪವನ್ನು ಪಡೆದುಕೊಂಡು ನನ್ನೊಳಗೆ ಸಂಪೂರ್ಣವಾಗಿ ಬೇರೆಯದ್ದೇ ರೀತಿಯಲ್ಲಿ ಸಾಗುತಿತ್ತು. ನನ್ನ ಬಾಯಿ ಮುಚ್ಚಿತ್ತೆಂದು ನನಗೆ ಸ್ಪಷ್ಟವಾಗಿ ಅರಿವಿತ್ತು, ಆದರೆ ನನ್ನದೇ ಧ್ವನಿ ಮೈಕ್ರೊಫೋನ್ ಹಿಡಿದು ಹಾಡುತ್ತಿದ್ದಂತೆ ಜೋರಾಗಿ ನುಡಿಯುತಿತ್ತು ಮತ್ತದು ಸಂಸ್ಕೃತದಲ್ಲಿತ್ತು.

ನಾದ ಬ್ರಹ್ಮ ವಿಶ್ವಸ್ವರೂಪ
ನಾದ ಹಿ ಸಕಲ ಜೀವರೂಪ
ನಾದ ಹಿ ಕರ್ಮ ನಾದ ಹಿ ಧರ್ಮ
ನಾದ ಹಿ ಬಂಧನ ನಾದ ಹಿ ಮುಕ್ತಿ
ನಾದ ಹಿ ಶಂಕರ ನಾದ ಹಿ ಶಕ್ತಿ
ನಾದಂ ನಾದಂ ಸರ್ವಂ ನಾದಂ
ನಾದಂ ನಾದಂ ನಾದಂ ನಾದಂ

ಅನುವಾದ: ನಾದವೆಂಬುದು ಬ್ರಹ್ಮ, ಬ್ರಹ್ಮಾಂಡದ ಅಭಿವ್ಯಕ್ತಿ. ನಾದವು ಎಲ್ಲಾ ಜೀವರಾಶಿಗಳ ರೂಪದಲ್ಲಿ ಪ್ರಕಟವಾಗುತ್ತದೆ. ನಾದವೇ ಕರ್ಮ, ನಾದವೇ ಧರ್ಮ. ನಾದವೇ ಬಂಧನ, ನಾದವೇ ಮುಕ್ತಿಗೆ ದಾರಿ. ನಾದವೇ ಎಲ್ಲರಿಗೂ ಎಲ್ಲವನ್ನು ಅನುಗ್ರಹಿಸುತ್ತದೆ, ನಾದವೇ ಎಲ್ಲದರ ಹಿಂದಿರುವ ಶಕ್ತಿ. ಸಕಲವೂ ನಾದಮಯ.

ಆ ಹಾಡಿಗೆ ನಿಮ್ಮನ್ನು ನೀವು ಸಮರ್ಪಿಸಿಕೊಂಡರೆ, ಅದಕ್ಕೊಂದು ರೀತಿಯ ಶಕ್ತಿಯಿದೆ. ನೀವದರೊಳಗೆ ನಿಜವಾಗಿಯೂ ತಲ್ಲೀನರಾದರೆ, ನಿಮ್ಮನ್ನು ಸಂಪೂರ್ಣವಾಗಿ ಕರಗಿಸುವ ಶಕ್ತಿ ಅದಕ್ಕಿದೆ.

ಆಊಮ್ ಪಠಣದ ಲಾಭಗಳು

ಸದ್ಗುರುಗಳ ಮಾತುಗಳಿಂದ ಪ್ರೇರೇಪಿತರಾದ ನವದೆಹಲಿಯ ಲೇಡಿ ಇರ್ವಿನ್ ಕಾಲೇಜಿನ ಸಂಶೋಧಕರು, ಆಊಮ್ ಪಠಣೆಯು ಕ್ರೀಡಾಪಟುಗಳಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಕೆಲವು ವರ್ಷಗಳ ಹಿಂದೆ ಅಧ್ಯಯನ ನಡೆಸಿದರು. ಈಶದ ಆಊಮ್‌ಕಾರ ಧ್ಯಾನಾಭ್ಯಾಸವನ್ನು ಮಾಡುತ್ತಿದ್ದ ಕ್ರೀಡಾಪಟುಗಳಲ್ಲಿ ದೇಹದ ಜಲಸಂಚಯನ ಮಟ್ಟದ ಬಗ್ಗೆ ಅರಿವು ಹೆಚ್ಚಾಗಿದ್ದು ಅಧ್ಯಯನದಲ್ಲಿ ಕಂಡುಬಂದಿತು. 2011ರಲ್ಲಿ ಎರಡು ತಿಂಗಳ ಕಾಲ ನಡೆಸಿದ ಈ ಅಧ್ಯಯನವು ಡಾ.ಪ್ರೀತಿ ರಿಷಿ ಲಾಲ್ ಅವರು ಚಿಕಿತ್ಸಕ ಮತ್ತು ಕ್ರೀಡಾ ಪೌಷ್ಟಿಕಾಂಶ ವಿಷಯದಲ್ಲಿ ನಡೆಸುತ್ತಿರುವ ಸಂಶೋಧನೆಯ ಒಂದು ಭಾಗವಾಗಿದೆ. ಮತ್ತು ಇದನ್ನು ಅಮೇರಿಕ ದೇಶದ ಇಲಿನಾಯ್ಸ್-ನಲ್ಲಿ ನಡೆಯಲಿರುವ ಆಹಾರ ಅಧ್ಯಯನಗಳ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಶ್ರೀ ಆಂಚಲ್ ಅಗರ್ವಾಲ್-ರವರ ಮಾಸ್ಟರ್ಸ್ಸ್ ಥೀಸೀಸ್-ನಲ್ಲಿಯೂ ಪ್ರಕಟವಾದ ಈ ಅಧ್ಯಯನವು "ಕಮ್ ಅಂಡ್ ಪ್ಲೇ" ಯೋಜನೆಯ ಒಂದು ಭಾಗವಾಗಿ ಭಾರತದ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿಯನ್ನು ಪಡೆಯುತ್ತಿರುವ ಯುವ, ಪುರುಷ ಹಾಕಿ ಆಟಗಾರರ ನೀರು ಕುಡಿಯುವ ರೂಢಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ.

ಆಟದ ಸಮಯದಲ್ಲಿ ಸಾಕಷ್ಟು ನೀರನ್ನು ಕುಡಿಯುವ ಪ್ರಾಮುಖ್ಯತೆಯ ಕುರಿತಾಗಿ ಕ್ರೀಡಾಪಟುಗಳಿಗೆ ತಿಳಿ ಹೇಳಿದ್ದರೂ ಸಹ, ಹೆಚ್ಚಿನ ಆಟಗಾರರು ಆಟದ ಸಮಯದಲ್ಲಿ ನೀರಿಳಿಕೆಯಿಂದ ಬಳಲುತ್ತಿದ್ದಾರೆ ಎಂದು ಶ್ರೀ ಅಗರ್ವಾಲ್ ಮತ್ತು ಡಾ.ಲಾಲ್ ಕಂಡುಕೊಂಡರು. ಶರೀರದ ನೀರಿನ ಮಟ್ಟವನ್ನು ಕಾಪಾಡದಿದ್ದರೆ ಅದು ಕಾರ್ಯಕ್ಷಮತೆ ಮತ್ತು ದೈಹಿಕ ಸಾಮರ್ಥ್ಯವನ್ನು ಕಡಿಮೆ ಮಾಡುವುದಲ್ಲದೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಡಾ.ಲಾಲ್ ಹೇಳುವ ಪ್ರಕಾರ, "ಆಟಗಾರರಿಗೆ ಈಗಾಗಲೇ ದೇಹದ ನೀರಿನ ಅವಶ್ಯಕತೆಗಳ ಬಗ್ಗೆ ತರಬೇತಿಯನ್ನು ನೀಡಲಾಗಿದೆ. ಅವರಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಿ, ಜೊತೆಗೆ ಡೆಮೋಗಳ ಮೂಲಕ ಪ್ರಾಯೋಗಿಕವಾಗಿಯೂ ತೋರಿಸಲಾಗಿದೆ. ನಾವು ಅವರ ದೇಹದ ಜಲಸಂಚಯನದ ಕುರಿತು ಒಂದು ಸರಳ ಲಿಖಿತ ಪರೀಕ್ಷೆಯನ್ನು ನೀಡಿದಾಗ, ಹೆಚ್ಚಿನವರು 100% ಗಳಿಸಿದರು. ಅವರಿಗೆ ಏನು ಮಾಡಬೇಕೆಂದು ತಿಳಿದಿದ್ದರೂ ಸಹ ಅವರದನ್ನು ಮಾಡುತ್ತಿರಲಿಲ್ಲ. ಕಲಿತ ಪಾಠ ಮತ್ತು ನಡುವಳಿಕೆಯಲ್ಲಿನ ನಿಜವಾದ ಸುಧಾರಣೆಗೆ ಯಾವುದಾದರೊಂದು ಸಂಪರ್ಕ ಬೇಕಾಗಿತ್ತು. ದೇಹದ ಬಾಯಾರಿಕೆಯ ಮಟ್ಟದ ಬಗ್ಗೆ ಜಾಗೃತವಾದ ಅರಿವಿನ ಅಗತ್ಯವಿತ್ತು. "ಆಊಮ್-ಕಾರದ ಪಠಣವು ಇದಕ್ಕೆ ಉತ್ತರವಾಗಬಹುದೆ?

ಜ್ಞಾನ ಮತ್ತು ನಡುವಳಿಕೆಯ ನಡುವಿನ ಅಂತರಕ್ಕೆ ಸೇತುವೆ

ಸಂಶೋಧನೆಯು ಈಗಾಗಲೇ ಆಊಮ್ ಧ್ಯಾನದ ಶಾರೀರಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಪರಿಶೋಧಿಸಿದೆ. ಈಶದ ಆಊಮ್ ಧ್ಯಾನವು ಹೇಗೆ ಬೇರೆಡೆ ಕಲಿಸುವುದಕ್ಕಿಂತ ಭಿನ್ನವಾಗಿದೆ ಎಂಬುದರ ಬಗ್ಗೆ ಶ್ರೀ ಅಗರ್ವಾಲ್ ಮತ್ತು ಡಾ.ಲಾಲ್ ವಿವರಿಸುತ್ತಾರೆ. "ಇತ್ತೀಚೆಗೆ ನಡೆದ ಭಾರತೀಯ ಅಧ್ಯಯನವು ಆಊಮ್-ಅನ್ನು ಒಂದು ಏಕಾಕ್ಷರ(ಓಂ) ಎಂದು ವಿಶ್ಲೇಷಿಸಿದೆ. ಆದರೆ ಈಶ ಫೌಂಡೇಶನ್-ನವರು ಇದನ್ನು ಮೂರು ಅಕ್ಷರಗಳ ಉಚ್ಛಾರಣೆಯಾಗಿ ಪರಿಗಣಿಸಿ ಅದರಂತೆಯೇ ಹೇಳಿಕೊಡುತ್ತಾರೆ. "ಶಾಂಭವಿ ಮಹಾಮುದ್ರೆಯ ಧನಾತ್ಮಕ ಪರಿಣಾಮಗಳ ಮೇಲೆ ನಡೆಸಿದ ಅಧ್ಯಯನವನ್ನು ಉಲ್ಲೇಖಿಸುತ್ತ, ಶ್ರೀ ಅಗರ್ವಾಲ್-ರವರು, "ಆಊಮ್ ಪಠಣೆಯನ್ನೊಳಗೊಂಡಿರುವ ಯೋಗಾಭ್ಯಾಸವು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಇತ್ತೀಚಿನ ದಿನಗಳಲ್ಲಿ ವರದಿಯಾಗಿದೆ." ಎಂದು ಹೇಳುತ್ತಾರೆ. ಶರೀರದ ಜಲಸಂಚಯನದ ಅಧ್ಯಯನದಲ್ಲಿ "ಜ್ಞಾನ ಮತ್ತು ನಡುವಳಿಕೆ ನಡುವಿನ ಅಂತರಕ್ಕೆ ಸೇತುವೆ"ಯಾಗಿ ಸಂಶೋಧಕರು ಆಊಮ್-ಕಾರದ ಧ್ಯಾನವನ್ನು ಸಾಧನವಾಗಿ ಆಯ್ಕೆ ಮಾಡಿಕೊಂಡಿರುವ ಕಾರಣಗಳಲ್ಲಿ ಇದೂ ಒಂದು.

ಅಧ್ಯಯನದಲ್ಲಿ ಭಾಗವಹಿಸಿದ್ದವರಲ್ಲಿ ಅನೇಕರು, ಅವರ ಆಟದ ಪ್ರದರ್ಶನವು ಸುಧಾರಿಸಿರುವುದು ಮಾತ್ರವಲ್ಲದೆ ಅದರಿಂದ ಬೇರೆ ಪ್ರಯೋಜನಗಳನ್ನು ಸಹ ಅವರು ಪಡೆದುಕೊಂಡಿರುವುದಾಗಿ ಹೇಳಿದರು.

ಪ್ರಯೋಗಾತ್ಮಕ ಅಧ್ಯಯನದಲ್ಲಿ, 30 ಆಟಗಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು: 1) ಶರೀರಕ್ಕೆ ಅವಶ್ಯವಿರುವಷ್ಟು ನೀರನ್ನು ಕುಡಿಯುವ ಬಗ್ಗೆ ಈಗಾಗಲೇ ಇರುವ ಪಠ್ಯಭಾಗದ ತರಬೇತಿಯನ್ನು ಪಡೆದ ಗುಂಪು. 2) ಪಠ್ಯಭಾಗದ ತರಬೇತಿಯ ಜೊತೆಗೆ ಪ್ರತಿದಿನ ಇಪ್ಪತ್ತೊಂದು ನಿಮಿಷಗಳು, ಇಪ್ಪತ್ತೊಂದು ದಿನಗಳ ಕಾಲ ಆಊಮ್-ಕಾರದ ಧ್ಯಾನವನ್ನು ಅಭ್ಯಾಸ ಮಾಡಿದ ಪ್ರಾಯೋಗಿಕ ಗುಂಪು. ಇಪ್ಪತ್ತೊಂದು ದಿನಗಳ ನಂತರ, ಮೊದಲನೆಯ ಗುಂಪಿನೊಂದಿಗೆ ಹೋಲಿಸಿದಾಗ ಆಊಮ್-ಕಾರದ ಧ್ಯಾನವನ್ನು ಅಭ್ಯಾಸ ಮಾಡಿದ ಆಟಗಾರರಲ್ಲಿ ಗಮನಾರ್ಹ ರೀತಿಯಲ್ಲಿ ಆರೋಗ್ಯಕರ ಜಲಸಂಚಯನದ ಮಟ್ಟವಿದೆ ಎಂದು ಆಟದ ನಂತರದ ಪರೀಕ್ಷೆಗಳು ಸಾಬೀತು ಪಡಿಸಿದವು. ಇದು ಹೃದಯದ ಬಡಿತ ಮತ್ತು ಶಾರೀರಿಕ ಚುರುಕುತನವನ್ನು ಅಳತೆ ಮಾಡುವ ಪರೀಕ್ಷೆಗಳಲ್ಲಿ ಕೂಡ ಉತ್ತಮ ಫಲಿತಾಂಶಕ್ಕೆ ಎಡೆ ಮಾಡಿಕೊಟ್ಟಿದೆ. ಆಟಗಾರರು ಹೆಚ್ಚು ಏಕಾಗ್ರತೆ, ಸಂತೋಷ ಮತ್ತು ಶಾಂತ ಮನಸ್ಥಿತಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ.

"ಅಧ್ಯಯನದಲ್ಲಿ ಭಾಗವಹಿಸಿದ್ದವರಲ್ಲಿ ಅನೇಕರು, ಅವರ ಆಟದ ಪ್ರದರ್ಶನವು ಸುಧಾರಿಸಿರುವುದು ಮಾತ್ರವಲ್ಲದೆ ಅದರಿಂದ ಬೇರೆ ಪ್ರಯೋಜನಗಳನ್ನು ಸಹ ಅವರು ಪಡೆದುಕೊಂಡಿರುವುದಾಗಿ ನನಗೆ ಹೇಳಿದರು. ಅಧ್ಯಯನದಲ್ಲಿ ಭಾಗವಹಿಸಿದ ಓರ್ವ ಆಟಗಾರನು ತನ್ನ ಕುಟುಂಬದೊಂದಿಗಿನ ಸಂಬಂಧವು ಉತ್ತಮವಾಗಿದೆಯೆಂದು ಹೇಳಿದನು. ಈ ಅಧ್ಯಯನದ ವೇಳೆಯಲ್ಲಿ ಆಟಗಾರರು ಸಾಕಷ್ಟು ಪ್ರಬುದ್ಧರಾದಂತೆ ತೋರುತ್ತಿತ್ತು. ಈ ಅಧ್ಯಯನವು ವಿಸ್ತೃತ ವ್ಯಾಪ್ತಿಯ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿದೆ. ಈಶದವರು ಹೇಳಿಕೊಡುವ ಇನ್ನು ಹಲವು ಬಗೆಯ ಧ್ಯಾನಗಳಿಂದಾಗುವ ಪ್ರಯೋಜನಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಸಲುವಾಗಿ ನಾವಿನ್ನೂ ಎರಡು ಆಧ್ಯಯನಗಳನ್ನು ನಡೆಸಲು ಯೋಚಿಸುತ್ತಿದ್ದೇವೆ." ಎಂದು ಡಾ.ಲಾಲ್ ಹೇಳಿದರು.

ಸಂಪಾದಕರ ಟಿಪ್ಪಣಿ: ಈ ಲೇಖನವು ಈಶ ಹಠ ಯೋಗ ಸ್ಕೂಲ್-ನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮದಲ್ಲಿ ಸದ್ಗುರುಗಳು ನೀಡಿದ ಪ್ರವಚನೆಯ ಆಯ್ದ ಭಾಗವಾಗಿದೆ. ಈ ಕಾರ್ಯಕ್ರಮವು ಯೋಗ ಪದ್ಧತಿಯ ಆಳವಾದ ತಿಳುವಳಿಕೆಯನ್ನು ಗಳಿಸಲು ಸಾಟಿಯಿಲ್ಲದ ಅವಕಾಶವನ್ನು ಹಾಗೂ ಹಠ ಯೋಗವನ್ನು ಹೇಳಿಕೊಡುವ ಕುಶಲತೆಯನ್ನು ನಿಮಗೆ ನೀಡುತ್ತದೆ. ಮುಂದಿನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮವು ಜುಲೈ 16, 2019ರಿಂದ ಡಿಸೆಂಬರ್ 11, 2019ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ www.ishahathayoga.com ವೆಬ್ಸೈಟ್-ಅನ್ನು ನೋಡಿ ಅಥವಾ info@ishahatayoga.com ಇಮೇಲ್ ವಿಳಾಸಕ್ಕೆ ಬರೆಯಿರಿ.