ಅಕ್ಟೋಬರ್ 18 2015ರಂದು ನಡೆದ ಇನ್ ಕಾನ್ವರ್ಸೇಷನ್ ವಿಥ್ ದ ಮಿಸ್ಟಿಕ್ ಸಂವಾದ ಸರಣಿ ಕಾರ್ಯಕ್ರಮದಲ್ಲಿ ಭಾರತೀಯ ಸಂಜಾತ ಅಮೆರಿಕನ್ ಲೇಖಕ, ವಾಗ್ಮಿ ಮತ್ತು ವೈದ್ಯರಾದ ದೀಪಕ್ ಚೋಪ್ರಾ ಅವರು ಸದ್ಗುರುಗಳೊಂದಿಗೆ ““Ancient Wisdom in Modern Times(ಆಧುನಿಕ ಕಾಲಘಟ್ಟದಲ್ಲಿ ಪ್ರಾಚೀನ ಜ್ಞಾನ)” ಎಂಬ ವಿಷಯದ ಕುರಿತಾದ ಸಂವಾದದಲ್ಲಿ ಭಾಗವಹಿಸಿದ್ದರು.  ಆ ಮಾತುಕತೆಯ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ. 

Read in Hindi: सद्गुरु और दीपक चोपड़ा - बिचारों का आधार

ಚರ್ಚಾನಿರ್ವಾಹಕಿ : ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಂದು ಸುಯೋಗವೇ ಸರಿ, ಮತ್ತು ಈ ಇಬ್ಬರೂ ಅದ್ಭುತ ವ್ಯಕ್ತಿಗಳು ಜ್ಞಾನವನ್ನು ಸಂಪೂರ್ಣ ವಿಭಿನ್ನ ದೃಷ್ಟಿಕೋನದಿಂದ ಪ್ರಸ್ತುತಪಡಿಸುತ್ತಿದ್ದಾರೆ.  ಡಾ|| ಚೋಪ್ರಾ ರವರು ಒಬ್ಬ ವೈದ್ಯರಾಗಿ, ವಿಜ್ಞಾನಿಯಾಗಿ ಮತ್ತು ಒಬ್ಬ ವಾಕ್ಪಟುತ್ವವುಳ್ಳ ಅನ್ವೇಷಕನಾಗಿ ವಿಷಯವನ್ನು ಪ್ರಸ್ತುತಪಡಿಸುತ್ತಾರೆ.  ಸದ್ಗುರುಗಳು ಒಬ್ಬ ಅನುಭಾವಿಯಾಗಿ, ತಿಳಿಯಲಾಗದ ಆಯಾಮವನ್ನು ಕಂಡವರಾಗಿ ಅ ಮಗ್ಗುಲಿನಿಂದ ನಮಗೆ ಜ್ಞಾನವನ್ನು ನೀಡಲು ಇಲ್ಲಿಗೆ ಬಂದಿದ್ದಾರೆ.

ಕಾಲಾಂತರದಲ್ಲಿ ನಿಮ್ಮ ಆಲೋಚನೆ ಬದಲಾಗಿದೆಯೇ? ನೀವಿಬ್ಬರೂ ಈ ಪ್ರಶ್ನೆಗೆ ಉತ್ತರಿಸಬಹುದೇ? 

ದೀಪಕ್ ಚೋಪ್ರಾ : ಸದ್ಗುರುಗಳೇ, ಬಹಳ ವರ್ಷಗಳ ನಂತರ ನಿಮ್ಮನ್ನು ಭೇಟಿಯಾಗುತ್ತಿರುವುದು ನನಗೆ ಅತ್ಯಂತ ಗೌರವನೀಯ ಸಂಗತಿ.  ಪೋರ್ಟೋ ರಿಕೋ ದಲ್ಲಿ ನಿಮ್ಮೊಡನೆ ಫ್ರಿಸ್ಬೀ ಆಡಿದ್ದು ನನಗೆ ನೆನಪಿದೆ.  ಹಾ, ಹೌದು, ನನ್ನ ಆಲೋಚನೆ ಬದಲಾಗಿದೆ, ನಾನು ಮುಖ್ಯವಾಹಿನಿಯಿಂದ, ತಥಾಕಥಿತ ವೈಜ್ಞಾನಿಕ ಆಲೋಚನಾಕ್ರಮದಿಂದ ದೂರಹೋಗಲು ಪ್ರಾರಂಭಿಸಿದಾಗ, ನಾನು ನನ್ನ ಮನಸ್ಸಿನಲ್ಲಿ, ಶರೀರ ಮತ್ತು ಮನಸ್ಸಿನ ನಡುವೆ ಇರುವ ಸಂಬಂಧದ ಕುರಿತಾಗಿ ಒಂದು ಖಚಿತ ನಿಲುವನ್ನು ಹೊಂದಲು ಪ್ರಯತ್ನಿಸುತ್ತಿದ್ದೆ.  ಮತ್ತು ಕಳೆದ ನಾಲ್ಕು ದಶಕಗಳಲ್ಲಿ, ಹಲವಾರು ಶತಮಾನಗಳಿಂದ ಮಹಾನ್ ಋಷಿಗಳು ತಿಳಿದಿದ್ದ,  ಯಾವ ಆಲೋಚನಾಕ್ರಮವೂ ಸತ್ಯ ಅಥವಾ ಯಥಾರ್ಥತೆಯನ್ನು ತಿಳಿಯಲಾಗದು ಎಂಬ ಸತ್ಯವನ್ನು ಅರಿತುಕೊಂಡೆ.   ಅದು ವೈಜ್ಞಾನಿಕ ಆಲೋಚನಾಕ್ರಮವಾಗಿರಬಹುದು, ಗಣಿತೀಯ ಆಲೋಚನಾಕ್ರಮವಾಗಿರಬಹುದು, ಅಥವಾ ಕ್ಞಾಂಟಮ್ ಭೌತಶಾಸ್ತ್ರವಾಗಿರಬಹುದು – ಇಂತಹ ಯಾವುದೇ ಆಲೋಚನಾಕ್ರಮಗಳೂ ನಮಗೆ ಸತ್ಯದ ಅನುಭವವನ್ನು ನೀಡಲಾರವು, ಏಕೆಂದರೆ ಸತ್ಯವು ಆಲೋಚನೆಯನ್ನು ಮೀರಿದ್ದಾಗಿದೆ.

ಅದು ವೈಜ್ಞಾನಿಕ ಆಲೋಚನಾಕ್ರಮವಾಗಿರಬಹುದು, ಗಣಿತೀಯ ಆಲೋಚನಾಕ್ರಮವಾಗಿರಬಹುದು, ಅಥವಾ ಕ್ಞಾಂಟಮ್ ಭೌತಶಾಸ್ತ್ರವಾಗಿರಬಹುದು – ಇಂತಹ ಯಾವುದೇ ಆಲೋಚನಾಕ್ರಮಗಳೂ ನಮಗೆ ಸತ್ಯದ ಅನುಭವವನ್ನು ನೀಡಲಾರವು, ಏಕೆಂದರೆ ಸತ್ಯವು ಆಲೋಚನೆಯನ್ನು ಮೀರಿದ್ದಾಗಿದೆ.

ಸತ್ಯವೆನ್ನುವುದು ಮನಸ್ಸಿಗೆ ನಿಲುಕದ ಸಂಗತಿಯಾಗಿದೆ.  ಈ ಆಲೋಚನಾಕ್ರಮಗಳು – ವೈಜ್ಞಾನಿಕವಾದವೂ ಸಹ – ಕೇವಲ ಸತ್ಯದ ಮಾದರಿಗಳನ್ನು ಸೃಷ್ಟಿಸುತ್ತವೆ, ಸತ್ಯವನ್ನಲ್ಲ.  ಮತ್ತು ನಮಗೆ ಅವುಗಳ ಮೇಲೆ ವಿಶ್ವಾಸವಿದೆ ಏಕೆಂದರೆ ಒಮ್ಮೆ ನಾವು ಆ ಮಾದರಿಯನ್ನು ಅರ್ಥಮಾಡಿಕೊಂಡರೆ, ತಂತ್ರಜ್ಞಾನವನ್ನು ಸೃಷ್ಟಿಸಬಹುದು.  ನಾವು ಯುದ್ಧವಿಮಾನಗಳು, ಬಾಂಬುಗಳು ಮತ್ತು ಯಾಂತ್ರೀಕೃತ ಸಾವು, ಅಂತರ್ಜಾಲ ಮತ್ತಿತರ ಅದ್ಭುತ ಸಂಗತಿಗಳನ್ನು ಸೃಷ್ಟಿಸಲು ಸಮರ್ಥರಾಗಿದ್ದೇವೆ.  ವಿಜ್ಞಾನವು ನಮಗೆ ಸತ್ಯಕ್ಕೆ ಪ್ರವೇಶವನ್ನು ನೀಡುತ್ತದೆ, ಆದರೆ ವಿಜ್ಞಾನವೂ ಸಹ ಮನಸ್ಸಲ್ಲದ, ವಸ್ತುವೂ ಅಲ್ಲದ ಏನೋ ಒಂದರಲ್ಲಿ ಮಾಡುವ ಚಟುವಟಿಕೆಯಾಗಿದೆ.  ಪದಗಳ ಕೊರತೆಯಿಂದ, ಅದನ್ನು ಅರಿವಿನ ಕ್ಷೇತ್ರ ಎನ್ನಬಹುದು – ಅದನ್ನು ಮಹಾನ್ ಋಷಿಗಳು ಬ್ರಹ್ಮನ್ ಎಂದು ಕರೆಯುತ್ತಾರೆ.  ಈ ವಿಶ್ವವು ಅದರ ಪರಿವರ್ತಿತ ರೂಪವಾಗಿದೆ. ನಿಮ್ಮ ಮನಸ್ಸು, ನಿಮ್ಮ ಶರೀರ ಮತ್ತು ಹೊರಗಿನ ವಿಶ್ವ ಎಲ್ಲವೂ ಸ್ಥಳೀಯವಲ್ಲದ, ಸೃಷ್ಟಿಸಲಾಗದ, ಆಯಾಮರಹಿತವಾದ, ದೇಶಕಾಲಗಳನ್ನು ಮೀರಿದ ಸತ್ಯವೊಂದರಿಂದ ಪರಿಭಾವಿಸಲ್ಪಟ್ಟಿದೆ, ನಿರ್ಮಿಸಲ್ಪಟ್ಟಿದೆ ಮತ್ತು ನಿರ್ದೇಶಿಸಲ್ಪಟ್ಟಿದೆ.

ಆಧುನಿಕ ಮನುಷ್ಯರಿಗೆ ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ.  ಆದರೆ ನಾವು ಪ್ರಾಚೀನ ಜ್ಞಾನ ಪರಂಪರೆಗಳ ಬಗ್ಗೆ ಮಾತನಾಡುತ್ತಿದ್ದೇವೆ, ನೀವು ಯೋಗವಾಸಿಷ್ಠವನ್ನು ಓದಿದರೆ, ಬ್ರಹ್ಮನ್ ಎನ್ನುವುದನ್ನು ನೋಡಲಾಗುವುದಿಲ್ಲ ಆದರೆ ಅದಿಲ್ಲದೇ ನೋಡುವಿಕೆ ಎನ್ನುವುದೇ ಇಲ್ಲ, ಅದನ್ನು ಗ್ರಹಿಸಲಾಗುವುದಿಲ್ಲ ಆದರೆ ಅದಿಲ್ಲದೆ ಗ್ರಹಿಕೆ ಸಾಧ್ಯವಿಲ್ಲ, ಅದನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಆದರೆ ಅದಿಲ್ಲದೇ ಕಲ್ಪನೆ ಸಾಧ್ಯವಿಲ್ಲ, ಅದಿಲ್ಲದೇ ಸೃಜನಶೀಲತೆ, ಅಂತರ್ದೃಷ್ಠಿ, ಸಾಕ್ಷಾತ್ಕಾರ, ಆಯ್ಕೆ, ಯಾವುದೂ ಸಾಧ್ಯವಿಲ್ಲ.  ನಾವು “ಸತ್ಯ” ಎಂದು ಕರೆಯುವ ಎಲ್ಲವೂ ಸೃಷ್ಟಿಸಲಾಗದ, ಆಯಾಮರಹಿತ, ಸ್ಥಳೀಯವಲ್ಲದ, ದೇಶಕಾಲರಹಿತ ತತ್ವದಿಂದ ಉಂಟಾಗುತ್ತದೆ.  ನೀವು ಕೇಳಿರಬಹುದು,, ಕೃಷ್ಣನು ಹೇಳುವಂತೆ – ಅದನ್ನು ನೀರು ತೋಯಿಸಲಾರದು, ಗಾಳಿ ಒಣಗಿಸಲಾರದು, ಆಯುಧಗಳು ಭೇದಿಸಲಾರವು, ಬೆಂಕಿ ಸುಡಲಾರದು, ಅದು ಅನಾದಿ, ಅವ್ಯಕ್ತ, ಅದಕ್ಕೆ ಸಾವಿಲ್ಲ.”  ಅದನ್ನು ಮನಸ್ಸು ಗ್ರಹಿಸಲಾರದು, ಆದರೆ ನೀವು ಅರಿವಿನಲ್ಲಿ ಸ್ಥಿರಗೊಂಡಾಗ, ನೀವು ನಿಮ್ಮಲ್ಲಿ ನೆಲೆಗೊಂಡಾಗ, ನೀವು ಅಸ್ತಿತ್ವದಲ್ಲಿ ನೆಲೆಗೊಂಡಾಗ, ಅದು ಅನುಭವವೇದ್ಯ, ಅದನ್ನು ಸಚ್ಚಿದಾನಂದ ಅಥವಾ ತತ್ವಮಸಿ ಎನ್ನುವರು.  ಅದೊಂದು ಬೌದ್ಧಿಕ ಅನುಭವವಲ್ಲ – ಅದೊಂದು ಅತೀಂದ್ರಿಯ ಅನುಭವ. 

ಚರ್ಚಾನಿರ್ವಾಹಕಿ : ಸದ್ಗುರುಗಳೇ, ನೀವು ಅದನ್ನು ನಿಮ್ಮ ಅನುಭವದಿಂದ ಪ್ರಸ್ತುತಪಡಿಸುತ್ತೀರಿ.  ನಿಮ್ಮ ಆಲೋಚನೆ ಬದಲಾದ ಬಗೆಯನ್ನು ನಮಗೆ ಹೇಳಿ.

ಸದ್ಗುರು: ನಾನು ಆಲೋಚನೆಯ ಬಗ್ಗೆ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ, ಯಾಕೆಂದರೆ ನನ್ನಲ್ಲಿ ಹೆಚ್ಚು ಆಲೋಚನೆಯಿಲ್ಲ.  ನನ್ನ ಮಟ್ಟಿಗೆ ಹೇಳುವುದಾದರೆ, ನನ್ನಲ್ಲಿ ನಡೆಯುತ್ತಿರುವ ಜೀವನವೆಂಬ ಸಂಘಟನೆಯು ಬೇರೆ ಎಲ್ಲಕ್ಕೂ ಮಿಗಿಲಾಗಿ ನನ್ನನ್ನು ಪರವಶಗೊಳಿಸುತ್ತದೆ. ನಾನು ಏನನ್ನಾದರೂ ಕೆಲಸ/ಕಾರ್ಯಗಳನ್ನು ಮಾಡಬೇಕೆಂದಾಗ ಅಥವಾ ನನ್ನ ಸುತ್ತಲೂ ಏನನ್ನಾದರೂ ವ್ಯವಸ್ಥಿತಗೊಳಿಸಲು ಮಾತ್ರ ನನ್ನಲ್ಲಿ ಆಲೋಚನೆ ಉಂಟಾಗುತ್ತದೆ – ಅಲ್ಲವಾದರೆ, ಒಂದೇ ಒಂದು ಆಲೋಚನೆಯೂ ಇಲ್ಲದೇ ಅನೇಕ ದಿನಗಳೇ ಕಳೆದುಹೋಗುತ್ತವೆ.  “ನಿಮ್ಮ ಸಾಧನಾಕ್ರಮ ಏನು?” ಎಂದು ಜನರು ನನ್ನನ್ನು ಕೇಳುತ್ತಾರೆ.  ಚಿಕ್ಕವಯಸ್ಸಿನಿಂದ ನಾನು ಮಾಡಿದ ’ಸಾಧನೆ’ ಎಂದರೆ, ನಾನು ಯಾವುದರೊಂದಿಗೂ ಗುರುತಿಸಿಕೊಳ್ಳಲಿಲ್ಲ – ಕುಟುಂಬ, ಸಂಸ್ಕೃತಿ, ಮತ, ಸಮಾಜ ಅಥವಾ ನನ್ನ ಸುತ್ತಲಿದ್ದ ಯಾವ ಸಂಗತಿಯೊಟ್ಟಿಗೂ ಗುರುತಿಸಿಕೊಳ್ಳಲಿಲ್ಲ.  ನನ್ನ ತಂದೆ ತಾಯಿಗಳು ಅಥವಾ ನನ್ನ ಒಡಹುಟ್ಟಿದವರೊಂದಿಗೂ ಸಹ – ನಾನು ಅವರೊಂದಿಗೆ ತೊಡಗಿಸಿಕೊಂಡಿದ್ದೆ ಆದರೆ ಎಂದೂ ಯಾವುದರೊಂದಿಗೂ ಗುರುತಿಸಿಕೊಳ್ಳಲಿಲ್ಲ.

ಆಲೋಚನೆ ಎನ್ನುವುದು ಕೇವಲ ನೀವು ಈಗಾಗಲೇ ಸಂಗ್ರಹಿಸಿದ ಮಾಹಿತಿಯ ಮರುಬಳಕೆಯಷ್ಟೆ.  ನೀವೀಗಲೇ ಅದನ್ನು ತಿಳಿದುಕೊಂಡರೆ, ನಿಮ್ಮ ಜೀವನವು ನೀವು ಊಹಿಸಿಕೊಳ್ಳಲಾಗದಂತಹ ರೀತಿಗಳಲ್ಲಿ ಪರಿವರ್ತಿತವಾಗುವುದು.

ನಿಮ್ಮ ಬುದ್ಧಿಶಕ್ತಿ ’ತನ್ನನ್ನು ತಾನು’ ಗುರುತಿಸಿಕೊಳ್ಳುವಿಕೆಯಿಂದ ಕಟ್ಟಿಹಾಕಿಕೊಳ್ಳದಿದ್ದರೆ, ಪ್ರತಿಯೊಬ್ಬ ಮನುಷ್ಯನಿಗೂ ಜೀವನದದ ಸ್ವರೂಪವನ್ನು ತಿಳಿಯುವ ಸಾಮರ್ಥ್ಯವಿದೆ.  ನಾನು ಬುದ್ಧಿಶಕ್ತಿ ಎಂದಾಗ, ದೀಪಕರು ಸೂಚಿಸಿದಂತೆ, ಅದು ಆಲೋಚನಾ ಪ್ರಕ್ರಿಯೆಯನ್ನು ಮೀರಿದುದು.  ದುರಾದೃಷ್ಟವಷಾತ್, ನಾವು ಇಂದು ಅನುಸರಿಸುತ್ತಿರುವ ಶೈಕ್ಷಣಿಕ ವ್ಯವಸ್ಥೆಗಳಿಂದ, ನಾವು ಸಂಪೂರ್ಣವಾಗಿ ಬುದ್ಧಿಶಕ್ತಿಯ ಒಂದು ಆಯಾಮಕ್ಕೆ ಕಟ್ಟುಬಿದ್ದಿದ್ದೇವೆ, ನಾವದನ್ನು ಬುದ್ಧಿ( intellect) ಎನ್ನುತ್ತೇವೆ, ಅದೊಂದು ಆಲೋಚನಾ ಪ್ರಕ್ರಿಯೆ ಅಷ್ಟೆ.  ಕೇವಲ ನೀವು ಐದು ಇಂದ್ರಿಯಗಳಿಂದ ಸಂಗ್ರಹಿಸಿದ ಮಾಹಿತಿಯಿಂದ ಆಲೋಚನೆ ಉಂಟಾಗುತ್ತದೆ, ಹಾಗಾಗಿ ಅದು ಬಹಳ ಸೀಮಿತ ಪ್ರಕ್ರಿಯೆ.  ಮತ್ತೊಂದು ವಿಷಯವೆಂದರೆ ಇಂದ್ರಿಯಗಳಿಂದ ಸಂಗ್ರಹಿಸಿದ ಮಾಹಿತಿಯು ಕೇವಲ ಬದುಕುಳಿಯಲು ಮಾತ್ರ ಉಪಯುಕ್ತ ಅಷ್ಟೆ.  ನೀವು ನೋಡುವ, ಕೇಳುವ, ಆಘ್ರಾಣಿಸುವ, ಸ್ಪರ್ಶಿಸುವ ಮತ್ತು ರುಚಿ ನೋಡುವ ರೀತಿಯು ಕೇವಲ ಬದುಕುಳಿಯಲು ಪ್ರಸ್ತುತವಾಗುತ್ತದೆ ಅಷ್ಟೆ.  ನಿಮಗೆ ಜೀವನವನ್ನೇ ತಿಳಿಯಬೇಕೆಂದಿದ್ದರೆ,  ಆಗ ಗ್ರಹಿಕೆಯ ಈ ಉಪಕರಣಗಳು ಸೂಕ್ತವಲ್ಲ.

ಪ್ರಕೃತಿಯು ನಮಗೆ ಬದುಕುಳಿಯಲು ಅಗತ್ಯವಿರುವಷ್ಟು ಇಂದ್ರಿಯ ಗ್ರಹಣಸಾಮರ್ಥ್ಯವನ್ನು ನೀಡಿದೆ.  ಹಾಗೆಯೇ, ಅದು ಬೇರೆ ಬೇರೆ ಜೀವಿಗಳಿಗೆ ಅವುಗಳು ಬದುಕುಳಿಯಲು ಅಗತ್ಯವಿರುವಷ್ಟು ಇಂದ್ರಿಯ ಗ್ರಹಣಸಾಮರ್ಥ್ಯವನ್ನು ನೀಡಿದೆ.  ಬದುಕುಳಿಯುವುದಷ್ಟೇ ನಿಮ್ಮ ಉದ್ಧೇಶವಾದರೆ, ನಿಮಗೆ ಐದು ಇಂದ್ರಿಯಗಳು ಸಾಕು.  ಆದರೆ ನೀವು ಒಮ್ಮೆ ಮನುಷ್ಯರಾಗಿ ಹುಟ್ಟಿದ ಮೇಲೆ, ಬದುಕುಳಿಯುವುದು ಅಷ್ಟೇನೂ ಮುಖ್ಯವಲ್ಲ.  ನಿಮ್ಮ ಹೊಟ್ಟೆ ಖಾಲಿಯಾಗಿದ್ದರೆ, ನಿಮಗೆ ಕೇವಲ ಒಂದೇ ಒಂದು ಸಮಸ್ಯೆ – ಅದು ಆಹಾರ.  ಆದರೆ ನಿಮ್ಮ ಹೊಟ್ಟೆ ತುಂಬಿದ ನಂತರ, ನಿಮಗೆ ನೂರು ಸಮಸ್ಯೆಗಳು ಶುರುವಾಗುತ್ತವೆ.  ಮನುಷ್ಯನ ಸ್ವಭಾವ ಹೇಗೆಂದರೆ, ನೀವು ಏನೇ ಮಾಡಿದರೂ, ನೀವೀಗ ಇರುವುದಕ್ಕಿಂತ ಹೆಚ್ಚಿನದೇನನ್ನೋ ಬಯಸುತ್ತಿರುತ್ತೀರಿ. ಮತ್ತು ಆ “ಹೆಚ್ಚಿನದು” ಸಿಕ್ಕರೆ, ನೀವು ಮತ್ತೂ ಹೆಚ್ಚಿನದಕ್ಕೆ ಪ್ರಯತ್ನಿಸುತ್ತೀರಿ – ಅದೊಂದು ಅಂತ್ಯವಿಲ್ಲದ ಬೆಂಬತ್ತುವಿಕೆ. ಎಲ್ಲೋ ಒಂದು ಕಡೆ, ಮನುಷ್ಯರು ಮಿತಿಯಿಲ್ಲದ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದಾರೆ ಆದರೆ ಅದನ್ನು ಭೌತಿಕ ವಿಧಾನಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ. 

ಭೌತಿಕತೆಯ ಮೂಲ ಸ್ವಭಾವವೇ ಒಂದು ಸೀಮಿತ ಪರಿಧಿಯಾಗಿದೆ.  ಸೀಮಿತ ಪರಿಧಿಯಿಲ್ಲದಿದ್ದರೆ, ವಿಶ್ವದಲ್ಲಿ ಯಾವುದೇ ಭೌತಿಕ ವಸ್ತುವಿನ ಸಾಧ್ಯತೆಯೇ ಇರುತ್ತಿರಲಿಲ್ಲ.  ಆದರೆ ಈಗ, ಮನುಷ್ಯನು ಮಿತಿಯಿಲ್ಲದ ಅನುಭವಕ್ಕಾಗಿ ಹಂಬಲಿಸುತ್ತಿದ್ದಾನೆ – ಅದೂ ಕಂತುಗಳಲ್ಲಿ, ಮತ್ತು ಭೌತಿಕ ವಿಧಾನಗಳ ಮೂಲಕ.  ನೀವು ಮಿತಿಯ ಮೂಲಕ ಅಮಿತರಾಗಲು ಪ್ರಯತ್ನಿಸುತ್ತಿದ್ದೀರಿ.  ಬಯಕೆಯೇನೋ ಅದ್ಭುತವಾದದ್ದೇ, ಆದರೆ ವಿಧಾನ ಮಾತ್ರ ನಿರಾಶಾದಾಯಕವಾದದ್ದು, ಏಕೆಂದರೆ ನೀವು ಏನೋ ಒಂದರೊಂದಿಗೆ ಗುರುತಿಸಿಕೊಂಡಕೂಡಲೇ, ನಿಮ್ಮ ಬುದ್ಧಿ ಆ ಗುರುತನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.  ನಿಮ್ಮ ಗುರುತಿಸಿಕೊಳ್ಳುವಿಕೆ ಯಾವುದಾದರೂ ಆಗಿರಬಹುದು – ಅದು ದೇಶ, ಕುಟುಂಬ, ಲಿಂಗ, ಜನಾಂಗ, ಮತ, ಅಥವಾ ಏನಾದರೂ ಆಗಿರಬಹುದು – ನಿಮ್ಮ ಬುದ್ಧಿ ಕೇವಲ ಈ ಗುರುತಿನ ಸುತ್ತಲೂ ಕೆಲಸಮಾಡುತ್ತಿರುತ್ತದೆ. ಯಾವುದೇ ಗುರುತು ಒಂದು ರೀತಿಯ ಪೂರ್ವಗ್ರಹಿಕೆಯಾಗುತ್ತದೆ.  ಹಾಗಾಗಿ ನಾನು ಮಾಡಿದ ಒಂದು ಸಂಗತಿಯೆಂದರೆ, ನಾನು ಯಾವುದರೊಂದಿಗೂ ಗುರುತಿಸಿಕೊಳ್ಳಲಿಲ್ಲ, ಮತ್ತು ನನ್ನಲ್ಲಿನ ಜೀವನವು, ಆಲೋಚನೆಗಳು ಅತ್ಯಂತ ದುರ್ಬಲವೆನಿಸುವ ರೀತಿಗಳಲ್ಲಿ ಸ್ಫೋಟಗೊಂಡದ್ದರಿಂದ, ಬಹುತೇಕ ಸಮಯ ನಾನು ಅವುಗಳಲ್ಲಿ ವ್ಯಸ್ತನಾಗುವುದಿಲ್ಲ.  

ಆಲೋಚನೆ ಎನ್ನುವುದು ಕೇವಲ ನೀವು ಈಗಾಗಲೇ ಸಂಗ್ರಹಿಸಿದ ಮಾಹಿತಿಯ ಮರುಬಳಕೆಯಷ್ಟೆ.  ನೀವೀಗಲೇ ಅದನ್ನು ತಿಳಿದುಕೊಂಡರೆ, ನಿಮ್ಮ ಜೀವನವು ನೀವು ಊಹಿಸಿಕೊಳ್ಳಲಾಗದಂತಹ ರೀತಿಗಳಲ್ಲಿ ಪರಿವರ್ತಿತವಾಗುವುದು. ಅಲ್ಲವಾದರೆ, ಎಂದೋ ಒಂದು ದಿನ ನೀವದನ್ನು ಹುಳುಗಳಿಂದ ತಿಳಿಯಬೇಕಾದೀತು.  ಆಗ ನೀವು ಯಾವುದಕ್ಕೂ ಸಂಬಂಧಿಸಿಲ್ಲವೆಂಬುದನ್ನು ಕಾಣುತ್ತೀರಿ !

ಸಂಪಾದಕರ ಟಿಪ್ಪಣಿ: ಈಶ ಡೌನ್‌ಲೋಡ್‌ಗಳಲ್ಲಿ ಲಭ್ಯವಿರುವ “Of Mystics and Mistakes” ಎಂಬ ಪುಸ್ತಕದಲ್ಲಿ ಸದ್ಗುರು ಅವರ ಹೆಚ್ಚಿನ ಒಳನೋಟಗಳನ್ನು ಪಡೆಯಿರಿ.

ಈ ಲೇಖನದ ಆವೃತ್ತಿಯನ್ನು ಮೂಲತಃ Isha Forest Flower ಡಿಸೆಂಬರ್ 2015 ರಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಯಿತು. “name your price, no minimum” ಆಧಾರದ ಮೇಲೆ PDF ಆಗಿ ಡೌನ್‌ಲೋಡ್ ಮಾಡಿ ಅಥವಾ ಮುದ್ರಣ ಆವೃತ್ತಿಗೆ ಚಂದಾದಾರರಾಗಿ.