ಪ್ರಶ್ನೆ: ಸದ್ಗುರುಗಳೇ, ಅಮಾವಾಸ್ಯೆಯ ಮಹತ್ವವೇನು?

ಸದ್ಗುರು: ಅಮಾವಾಸ್ಯೆ ಎಂದರೆ ಚಂದ್ರನಿಲ್ಲದ ದಿನ ಎಂದರ್ಥ. ಯಾರಾದರೂ ಅಥವಾ ಏನಾದರೂ ಇಲ್ಲವಾದಾಗ, ಆ ಅನುಪಸ್ಥಿತಿಯ ಮೂಲಕ, ಅವರ ಉಪಸ್ಥಿತಿಯು ಇನ್ನೂ ಹೆಚ್ಚು ಶಕ್ತಿಯುತವಾಗುತ್ತದೆ. ನಿಮ್ಮ ಸ್ನೇಹಿತರು ಅಥವಾ ನಿಮ್ಮ ಆಪ್ತರು ನಿಮ್ಮ ಜೊತೆ ಇದ್ದಾಗ, ಅವರ ಉಪಸ್ಥಿತಿಯು ಅಷ್ಟಾಗಿ ನಿಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ಅವರು ಮರೆಯಾದಾಕ್ಷಣ, ಅವರ ಉಪಸ್ಥಿತಿಯ ಅರಿವು ಬಹಳವಾಗಿ ನಿಮ್ಮ ಅನುಭವಕ್ಕೆ ಬರುತ್ತದೆ - ಅದು ಬಹಳ ಪ್ರಬಲವಾಗಿರುತ್ತದೆ ಅಲ್ಲವೇ? ಭಾವನಾತ್ಮಕ ಸ್ತರದಲ್ಲೂ ಅದು ನಿಜ. ಅವರು ನಿಮ್ಮ ಸುತ್ತಲಿದ್ದಾಗ ಅವರ ಇರುವಿಕೆ ನಿಮಗೆ ಭಾಸವಾಗುವುದಿಲ್ಲ. ಅವರು ಇಲ್ಲದೇ ಹೋದಾಗ ಮಾತ್ರ, ಅವರು ಬಿಟ್ಟು ಹೋದ ಶೂನ್ಯತೆ ಅವರ ಇರುವಿಕೆಗಿಂತ ಶಕ್ತಿಯುತವಾಗುತ್ತದೆ. ಚಂದ್ರನೊಂದಿಗೂ ಹೀಗೆಯೇ - ಅವಳ ಅನುಪಸ್ಥಿತಿಯು ಅವಳ ಇರುವಿಕೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಮಾಡುತ್ತದೆ. ಬೇರೆ ಯಾವುದೇ ದಿನ ಮತ್ತು ಪೌರ್ಣಮಿಯ ದಿನದಂದೂ ಸಹ ಅವಳಿದ್ದೇ ಇರುತ್ತಾಳೆ. ಆದರೆ ಅಮಾವಾಸ್ಯೆಯಂದು, ಅವಳ ಇರುವಿಕೆ ಇನ್ನೂ ಹೆಚ್ಚಾಗಿ ಭಾಸವಾಗುತ್ತದೆ - ಆ ಗುಣ ಅಂದು ಇನ್ನೂ ಹೆಚ್ಚಿರುತ್ತದೆ.

ಅಮಾವಾಸ್ಯೆಯಂದು ಭೂಮಿಯು ಕೊರಗುತ್ತದೆ; ಭೂಮಿಯ ಮೇಲಿನ ಜೀವನ ಪ್ರಕ್ರಿಯೆ ನಿಧಾನವಾಗುತ್ತದೆ. ಮತ್ತದೊಂದು ಅಮೋಘವಾದ ಅವಕಾಶ, ಏಕೆಂದರೆ, ಆ ದಿನದಂದು ಜೀವದ ಸಮೀಕರಣವು ಹೆಚ್ಚು ಉತ್ತಮವಾಗಿ ನಡೆಯುತ್ತದೆ. ದೇಹದ ಪ್ರಕ್ರಿಯೆಗಳು ನಿಧಾನವಾದಗಲೇ ನೀವು ನಿಮ್ಮ ದೇಹವನ್ನು ಗಮನಿಸುವುದು. ಎಲ್ಲವೂ ಸರಿಯಿದ್ದು ನೀವು ಸಕ್ರಿಯರಾಗಿದ್ದರೆ, ನಿಮ್ಮ ದೇಹದೊಂದಿಗೆ ಏನಾಗುತ್ತಿದೆ ಎನ್ನುವುದು ನಿಮಗೆ ತಿಳಿದಿರುವುದೇ ಇಲ್ಲ; ದೇಹ ಎಂದರೆ ನೀವು, ಅಷ್ಟೆ. ಆದರೆ, ಒಂದು ಚಿಕ್ಕ ಕಾಯಿಲೆ ಬಂದಾಗ, ಇದ್ದಕ್ಕಿದಂತೆ, ದೇಹವೆನ್ನುವುದು ನೀವು ಗಮನ ನೀಡಬೇಕಾದ ಒಂದು ಸಮಸ್ಯೆಯಾಗಿ ಪರಿಣಮಿಸಿಬಿಡುತ್ತದೆ. ದೇಹದ ಆರೋಗ್ಯ ಕೆಟ್ಟಾಗ ಮಾತ್ರ, "ಇದು ನಾನಲ್ಲ, ನನ್ನ ದೇಹ ನನಗೆ ತೊಂದರೆ ಕೊಡುತ್ತಿರುವುದು ಅಷ್ಟೆ." ಎಂದು ನಿಮಗೆ ತಿಳಿಯುತ್ತದೆ. ನಿಮ್ಮ ಹಾಗೂ ನಿಮ್ಮ ದೇಹದ ನಡುವೆ ತುಂಬಾ ಸ್ಪಷ್ಟವಾಗಿ ಒಂದು ಅಂತರ ಸೃಷ್ಟಿಯಾಗುತ್ತದೆ.

"ಯಾವುದು ನಾನು, ಯಾವುದು ನಾನಲ್ಲ" ಎನ್ನುವುದು ಸುಲಭವಾಗಿ ಅರಿವಾಗುವ ದಿನವದು. ಮತ್ತು ಅಲ್ಲಿಂದ, ಅಸತ್ಯದಿಂದ ಸತ್ಯದೆಡೆಗಿನ ಪಯಣವು ಆರಂಭವಾಗುತ್ತದೆ.

ಹಾಗಾಗಿ, ಇದೇ ಅಮಾವಾಸ್ಯೆಯ ಮಹತ್ವ. ಆ ದಿನದಂದು, ಮೂಲಾಂಶಗಳ ಒಂದು ನಿರ್ದಿಷ್ಟ ಸಮೀಕರಣವು ನಡೆಯುವುದರಿಂದ, ಎಲ್ಲವೂ ಮಂದಗತಿಯಲ್ಲಿ ಸಾಗುತ್ತಿರುತ್ತದೆ. ನೀವು ನಿಮ್ಮ ಸೌಖ್ಯವನ್ನು ಅರಸುತ್ತಿದ್ದರೆ, ಪೌರ್ಣಮಿಯು ಶ್ರೇಷ್ಠ. ನೀವು ಮುಕ್ತಿಯನ್ನು ಅರಸುತ್ತಿದ್ದಾದರೆ, ಅಮಾವಾಸ್ಯೆಯು ಶ್ರೇಷ್ಠ. ಅದಕ್ಕನುಸಾರವಾಗಿ, ಜೀವನದ ಆ ಎರಡು ಆಯಾಮಗಳಿಗೆ ವಿಭಿನ್ನ ರೀತಿಯ ಆಚರಣೆಗಳು ಮತ್ತು ಸಾಧನೆಗಳಿವೆ. "ಯಾವುದು ನಾನು, ಯಾವುದು ನಾನಲ್ಲ." ಎನ್ನುವುದು ಸುಲಭವಾಗಿ ಅರಿವಾಗುವ ದಿನವದು. ಮತ್ತು ಅಲ್ಲಿಂದ, ಅಸತ್ಯದಿಂದ ಸತ್ಯದೆಡೆಗಿನ ಪಯಣವು ಆರಂಭವಾಗುತ್ತದೆ. ಅಮವಾಸ್ಯೆಯಿಂದ ಪೌರ್ಣಮಿಯವರೆಗೆ, ಪ್ರತಿ ತಿಂಗಳು ನೈಸರ್ಗಿಕವಾಗಿಯೇ ಈ ಸದವಕಾಶ ಸೃಷ್ಟಿಯಾಗುತ್ತದೆ. ಪ್ರತಿ ಅಮಾವಾಸ್ಯೆಯಿಂದ ಆರಂಭವಾಗಿ ಮುಂದುವರೆಯುವ ಈ ಪ್ರಾಕೃತಿಕವಾದ ಅವಕಾಶವು, ಅದರ ಪರಿವೆಯೇ ಇಲ್ಲದವರಿಗೂ ಕೂಡ ಲಭ್ಯವಿರುತ್ತದೆ.

ಪೌರ್ಣಮಿಯ ಗುಣಲಕ್ಷಣವು ಇಡಾ ನಾಡಿಗೆ ಅಥವಾ ಸ್ತ್ರೀ ಅಂಶಕ್ಕೆ ಸಂಬಂಧಪಟ್ಟದ್ದಾಗಿದೆ. ಅಮಾವಾಸ್ಯೆಯು ತುಂಬಾ ಮೂಲ ಸ್ಥಿತಿಯಲ್ಲಿ ಇರುವಂತಹದ್ದು. ಅಮಾವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ, ಏಕೆಂದರೆ, ಅದು ಶಿವನ ರಾತ್ರಿ. ಅದರ ಗುಣಲಕ್ಷಣವು ಆದಿಸ್ವರೂಪದ್ದಾಗಿರುತ್ತದೆ. ಎಲ್ಲವೂ ಗಾಢಾಂಧಕಾರದಲ್ಲಿ ಮುಳುಗಿದ್ದಾಗ, ಸೃಷ್ಟಿಯೇ ಕರಗಿಹೋದಂತೆ ತೋರುತ್ತದೆ. ಅಮಾವಾಸ್ಯೆಯಂದು ಲಯಕರ್ತನ ಛಾಯೆ ಇರುತ್ತದೆ. ಸಾಮಾನ್ಯವಾಗಿ, ಅಮಾವಾಸ್ಯೆಯ ರಾತ್ರಿಯಂದು, ಪ್ರಬಲವಾದಂತಹ ಸ್ತ್ರೀ ಶಕ್ತಿಗೆ ಇವೆರಡರಲ್ಲಿ ಒಂದು ಸಂಭವಿಸಬಹುದು: ಅಮಾವಾಸ್ಯೆಯು ಅವಳಲ್ಲೊಂದು ಭಯ ಮತ್ತು ಕ್ಷೋಭೆಯನ್ನು ಉಂಟುಮಾಡುವುದರಿಂದ, ಅವಳು ಗೊಂದಲಕ್ಕೊಳಗಾಗಬಹುದು, ಅಥವಾ ಆ ಶಕ್ತಿಯ ವರ್ತನೆಯು ಪುಂಡಾಟಕ್ಕೆ ತಿರುಗಿ, ಗಂಡಸಿನಂತೆ ವರ್ತಿಸಬಹುದು.

ಪೌರ್ಣಮಿಯು ಸ್ತ್ರೀ ಶಕ್ತಿಗೆ ಹೆಚ್ಚು ಅನುಕೂಲಕರವಾದದ್ದು. ಹಾಗಾಗಿ, ಪೌರ್ಣಮಿಯನ್ನು ಮಹಿಳೆಯರು ಬಳಸಿಕೊಳ್ಳುತ್ತಾರೆ. ಮತ್ತು ಮುಕ್ತಿಯನ್ನು ಅರಸುತ್ತಿರುವ ಪುರಷರಿಗೆ ಪೌರ್ಣಮಿಯ ರಾತ್ರಿ ಅಷ್ಟೇನೂ ಒಳ್ಳೆಯದಲ್ಲ. ಅವರು ತಮ್ಮ ಸುಖ-ಸೌಖ್ಯವನ್ನು ಅರಸುತ್ತಿದ್ದರೆ, ಪುರುಷರೂ ಸಹ ಪೌರ್ಣಮಿಯ ರಾತ್ರಿಯನ್ನು ಬಳಸಿಕೊಳ್ಳಬಹುದು. ಆದರೆ, ಅವರು ವಿಮೋಚನೆ ಅಥವಾ ಮುಕ್ತಿಯನ್ನು ಅರಸುತ್ತಿದ್ದೇ ಆದರೆ, ಅಮಾವಾಸ್ಯೆಯು ಉತ್ತಮವಾದ ದಿನ. ಪರಮ ಮುಕ್ತಿಯನ್ನು ಅರಸುತ್ತಿರುವ ಎಲ್ಲರಿಗೂ ಅಮಾವಾಸ್ಯೆಯು ಅತ್ಯಮೋಘವಾದುದು.

ಯಾರಾದರೂ ತಮ್ಮ ಮಾನಸಿಕ ಸ್ತಿಮಿತವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿದ್ದರೆ, ಪೌರ್ಣಮಿ ಮತ್ತು ಅಮಾವಾಸ್ಯೆಯ ದಿನಗಳಂದು ಅದು ಇನ್ನಷ್ಟು ಏರುಪೇರಾಗುತ್ತದೆ ಎನ್ನುವುದನ್ನು ನೀವು ಕೇಳಿರಬಹುದು. ಇದರ ಕಾರಣವೇನೆಂದರೆ, ಚಂದ್ರನ ಗುರುತ್ವಾಕರ್ಷಣೆಯ ಪರಿಣಾಮ ಭೂಮಿಯ ಮೇಲೆ ಆಗುತ್ತಿರುತ್ತದೆ. ಹಾಗಾಗಿ, ಅದು ಎಲ್ಲವನ್ನೂ ಮೇಲಕ್ಕೆ ಸೆಳೆಯುತ್ತಿರುತ್ತದೆ. ಇಡೀ ಸಮುದ್ರವೇ ಮೇಲುಕ್ಕಲು ಪ್ರಯತ್ನಿಸುತ್ತಿರುತ್ತದೆ. ಅಂತೆಯೇ, ನಿಮ್ಮ ರಕ್ತವೂ ಸಹ ಚಂದ್ರನ ಗುರುತ್ವಾಕರ್ಷಣೆಯತ್ತ ಏರಲು ಪ್ರಯತ್ನಿಸುತ್ತಿರುತ್ತದೆ. ಹಾಗಾಗಿ, ನೀವು ಮಾನಸಿಕವಾಗಿ ಕೊಂಚ ಅಸಮತೋಲನವನ್ನು ಹೊಂದಿದ್ದಲ್ಲಿ, ಆ ದಿನದಂದು ನಿಮ್ಮ ಮಿದುಳಿನಲ್ಲಿ ಹೆಚ್ಚಾದ ರಕ್ತಪರಿಚಲನೆಯಿಂದಾಗಿ, ನೀವು ಹೆಚ್ಚು ಅಸಮತೋಲನಕ್ಕೆ ಒಳಗಾಗುತ್ತೀರಿ. ನೀವು ಸಂತೋಷವಾಗಿದ್ದರೆ,  ಅಂದು ಇನಷ್ಟು ಸಂತೋಷವಾಗಿರುತ್ತೀರಿ. ನೀವು ದುಃಖದಲ್ಲಿದ್ದರೆ, ನಿಮ್ಮ ದುಃಖ ಮತ್ತಷ್ಟು ಹೆಚ್ಚಾಗುತ್ತದೆ. ನಿಮ್ಮ ಗುಣಲಕ್ಷಣಗಳೇನೇ ಇರಲಿ, ಆ ದಿನಗಳಂದು ಅದು ಸ್ವಲ್ಪ ಹೆಚ್ಚಾಗುತ್ತದೆ, ಏಕೆಂದರೆ, ನಿಮ್ಮ ರಕ್ತವು ಮೇಲ್ಮುಖವಾಗಿ ಸೆಳೆಯಲ್ಪಡುತ್ತಿರುತ್ತದೆ. ಹಾಗಾಗಿ, ಒಂದು ರೀತಿಯಲ್ಲಿ ನಿಮ್ಮ ಸಂಪೂರ್ಣ ಶಕ್ತಿಯು ಮೇಲಕ್ಕೆಳೆಯಲ್ಪಡುತ್ತಿರುತ್ತದೆ. ತಮ್ಮ ಶಕ್ತಿಗಳನ್ನು ಊರ್ಧ್ವಮುಖವಾಗಿಸಲು ಇರುವ ಪ್ರತಿಯೊಂದು ಸಾಧನಗಳನ್ನು ಸದಾ ಬಳಸಿಕೊಳ್ಳಲು ನೋಡುವಂತಹ ಆಧ್ಯಾತ್ಮಿಕ ಸಾಧಕರುಗಳಿಗೆ, ಆ ಎರಡು ದಿನಗಳು ಪ್ರಕೃತಿದತ್ತವಾದ ವರಗಳಿದ್ದಂತೆ.