ಅನೈತಿಕ ಸಂಬಂಧಗಳ ಬಗೆಗಿನ ಮಾತು ಬಂದಾಗ ಪ್ರಶ್ನೆ ಸರಿ-ತಪ್ಪಿನದ್ದಲ್ಲ, ಬದಲಾಗಿ ವಿವೇಚನೆ ಮತ್ತು ಪರಿಣಾಮದ್ದು. ವ್ಯಭಿಚಾರಕ್ಕೆ ಸಮಾಜವು ಸಾಮಾನ್ಯವಾಗಿ ಕೊಡುವ ಸೀಮಿತವಾದ ನೈತಿಕ ಪರಿಭಾಷೆಯನ್ನು ಸದ್ಗುರುಗಳು ಮೀರಿ ಹೋಗಿ ಅದಕ್ಕೆ ವಿಶಾಲವಾದ ಅರ್ಥವನ್ನು ನೀಡುತ್ತಾರೆ. ಬರೀ ಸಂಬಂಧಗಳಲ್ಲಲ್ಲ, ನಾವು ಒಳಗೊಳ್ಳುವ ಪ್ರತಿಯೊಂದು ವಿಷಯದಲ್ಲೂ ಪ್ರೀತಿಪೂರ್ವಕವಾಗಿ ತೊಡಗಿಸಿಕೊಳ್ಳುವ ಬಗ್ಗೆ ಅವರು ಮಾತನಾಡುತ್ತಾರೆ.

ಜುಲೈ ೨೦೦೨ ರಲ್ಲಿ, ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ ಸ್ವಯಂ ಸೇವಕರ ಸತ್ಸಂಗ.

Anaitika sambandhavu tappe?

ಲಿಪ್ಯಂತರ:

ಪ್ರಶ್ನೆ: ಸದ್ಗುರು, ಅನೈತಿಕ ಸಂಬಂಧಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಧ್ಯಾತ್ಮದ ದಾರಿಯಲ್ಲಿ ಅದು ನಮ್ಮನ್ನ ಹೇಗ್ ಬಾಧಿಸುತ್ತೆ?

ಸದ್ಗುರು: ನಿಮ್ ಹೃದಯದಲ್ಲಿ ಪ್ರೀತಿಯಿಲ್ದಿದ್ರೆ, ನೀವ್ ಹೇಗಿದ್ರೂ ವ್ಯಭಿಚಾರಿಗಳು. ಬರೀ ಅನುಕೂಲತೆ ಮತ್ತು ಸುಖಕ್ಕಾಗಿ ನೀವು ನಿಮ್ಮನ್ನ ಜೀವನದ ಯಾವುದೇ ವಿಷ್ಯದಲ್ಲಿ ತೊಡಗಿಸ್ಕೊಂಡಿದ್ರೂಅದು ಬರೀ ಒಂದ್ ಗಂಡಸು, ಅಥ್ವಾ ಹೆಂಗಸಾಗಿರ್ಬೇಕಾಗಿಲ್ಲಹೃದಯದಲ್ಲಿ ಪ್ರೀತಿಯಿಲ್ದೇ ನೀವು ನಿಮ್ಮನ್ನು ಜೀವನದ ಯಾವುದೇ ವಿಷ್ಯದಲ್ಲಿ ತೊಡಗಿಸ್ಕೊಂಡ್ರೂ ನೀವು ಒಬ್ಬ ವ್ಯಭಿಚಾರೀನೇ, ಅಲ್ವಾ?

ಹಾಗಿದ್ರೆ ನಾನು ವ್ಯಭಿಚಾರವನ್ನ ವಿರೋಧಿಸ್ತೀನಾ? ಹೌದು, ಆ ಅರ್ಥದಲ್ಲಿ, ಹೌದು, ಸಂಪೂರ್ಣವಾಗಿ. ಆದ್ರೆ ನೀವು ಸಾಮಾಜಿಕವಾಗಿ ವ್ಯಭಿಚಾರ ಅಂತ ಕರೆಯೋದ್ರ್ ಬಗ್ಗೆ ಮಾತಾಡ್ತಿದ್ರೆ, ಅದು ವೈಯಕ್ತಿಕ. ನೀವು ಮಾಡೋ ಪ್ರತಿಯೊಂದು ಕರ್ಮಕ್ಕೂ ಒಂದ್ ಪರಿಣಾಮ ಇದ್ದೇ ಇರುತ್ತೆ. ನನಗ್ಗೊತ್ತಿರೋ ಹೆಚ್ಚಿನವರು, ಪರಿಣಾಮಗಳು ಬಂದಾಗ ಅವುಗಳನ್ನ ಎದುರಿಸೋದಿಕ್ಕೆ ತಯಾರಿಲ್ಲ. ಆದ್ರೆ ಪರಿಣಾಮಗಳನ್ನು ಎದುರಿಸ್ದೇನೇ ಸುಖ ಕೊಡೋಂತ ಸನ್ನಿವೇಶಗಳು ಅವ್ರಿಗೆ ಬೇಕು. ತಾನು ಮಾಡಿದಂತ ಕರ್ಮಗಳ ಪರಿಣಾಮಗಳು ಬಂದಾಗ ಸಂತೋಷದಿಂದ ಸ್ವೀಕರಿಸಲು ತಯಾರಾಗಿಲ್ದೇ ಇರೋಂತಾವ್ನು ಒಬ್ಬ ಮೂರ್ಖ ಅಷ್ಟೆ. ಮೂರ್ಖ ಅಂದ್ರೆ ಎಷ್ಟೋ ವಿಧದಲ್ಲಿ ತನಗೆ ತಾನೇ ವಿರೋಧಿಯಾಗಿರೋನು. ತನಗೆ ತಾನೇ ವಿರೋಧಿಯಾಗೋನು, ತನ್ನನ್ ತಾನೇ ಎದುರ್ ಹಾಕ್ಕೊಳೋನು, ಅಥ್ವಾ ಹಾಕ್ಕೊಳೋಳು - ಏನ್ ಹೇಳೋದು ಅಂಥವ್ರ್ ಬಗ್ಗೆ?

ಹಾಗಾಗಿ, ನಿಮ್ ಕರ್ಮಗಳಿಂದ, ನೀವು ನಿಮ್ಮನ್ನೇ ಎದುರು ಹಾಕ್ಕೊಳ್ತಿದೀರಿ. ಯಾಕಂದ್ರೆ ನೀವು ಅವನ್ನ ವಿವೇಚನೆಯಿಲ್ದೆ ಮಾಡ್ತಾ ಇದೀರ. ನೀವವನ್ನ ನಿಮ್ ಆಯ್ಕೆಯಿಂದ ಮಾಡ್ತಾ ಇಲ್ಲ. ವಿವೇಚನೆಯಿಲ್ದೆ ಮಾಡ್ತಾ ಇದೀರ. ಯಾಕಂದ್ರೆ ನೀವು ನಿಮ್ ದೇಹದ ಅಥ್ವಾ ಭಾವನೆಯ ಯಾವ್ದೋ ಉದ್ವೇಗಕ್ಕೆ ನಿಮ್ಮನ್ನ ಬಿಟ್ಕೊಟ್ಟಿದೀರ. ಇದು ಖಂಡಿತವಾಗ್ಲೂ ಉಚಿತವಲ್ಲ. ಯಾಕಂದ್ರೆ ನೀವು ನಿಮ್ಗೇನೆ ದುಃಖವನ್ನ ತರಿಸ್ಕೊಳ್ತೀರ. ಯಾವ್ದೇ ಮನುಷ್ಯನಿಗೆ ದುಃಖವನ್ನ ತರ್ಸೋವಂತಾದ್ದು, ವಿಶೇಷವಾಗಿ ಅವ್ನಿಗೇನೇ, ಅದು ಪರ್ವಾಗಿಲ್ವಾ? ಯಾರಾದ್ರೂ ತಮಗ್ ತಾವೇ ಸುಮ್ನೆ ದುಃಖವನ್ನ ತರಿಸ್ಕೊಳ್ತಾನೇ ಹೋದ್ರೆ, ಕಾರಣ ಏನೇ ಇರ್ಲಿ, ಅದು ಅವಿವೇಕ. ಅಲ್ವಾ?

ನಾನು ಯಾವ್ದಕ್ಕೂ ವಿರುದ್ಧ ಅಥ್ವಾ ಪರ ಅಲ್ಲ. ನೀವು ವಿವೇಚನೆಯಿಂದ ಜೀವಿಸ್ಬೇಕು ಅಷ್ಟೆ. ನಿಮಗ್ ಯಾವ್ದು ತೀರ ಉಚಿತ ಅನ್ಸುತ್ತೋ ನೀವದನ್ನ ಮಾಡ್ಬೇಕು. ಇದು ತಪ್ಪಾ, ಅದು ತಪ್ಪಾ? ಅದಲ್ಲ ವಿಷ್ಯ. ನೀವು ವಿವೇಚನೆಯಿಂದ ಜೀವಿಸ್ತಾ ಇದೀರ, ಅದೊಂದೇ ಪ್ರಶ್ನೆ. ಅಥ್ವಾ ಯಾವುದಕ್ಕೋ ಗುಲಾಮರಾಗಿದ್ದು, ನೀವು ಮಾಡುವ ಯಾವ್ದೋ ಅಸಂಬದ್ಧ ವಿಚಾರಕ್ಕೆ ನನ್ನಿಂದ ಸಮ್ಮತಿ ಪಡೆಯೋ ಪ್ರಯತ್ನ ಮಾಡ್ತಾ ಇದೀರ? ಇಲ್ಲ. ನಾನು ಯಾವ್ದಕ್ಕೂ ಸಮ್ಮತೀನೂ ನೀಡಿಲ್ಲ, ಅಸಮ್ಮತೀನೂ ನೀಡಿಲ್ಲ. ನೀವು ಮಾಡೋ ಎಲ್ಲಾದ್ರಲ್ಲೂ ವಿವೇಚನೆಯಿಂದ ವರ್ತಿಸ್ಬೇಕು ಅಷ್ಟೆ. ವಿವೇಚನೆ ಇಲ್ದೇ ಇರೋ ಜೀವ್ನ ಒಂದ್ ಪಾಪ. ಅಲ್ವಾ? ನೀವು ವಿವೇಚನೆಯಿಂದ ಜೀವ್ಸಿದ್ರೆ, ಸೃಷ್ಟಿಕರ್ತ ನಿಮ್ ಬಗ್ಗೆ ಹೆಮ್ಮೆ ಪಡೋ ತರ, ಒಳ್ಳೇದು. ಆದ್ರೆ ನೀವು ನಿಮ್ ದೇಹದ, ಭಾವನೆಗಳ ಅಥ್ವಾ ಮನಸ್ಸಿನ ಉದ್ವೇಗಗಳಿಗೆ ನಿಮ್ಮನ್ನ ಬಿಟ್ಕೊಟ್ಟಿದ್ರೆ, ನಿಮಗ್ ನೀವೇ ವಿರುದ್ಧವಾಗ್ ಹೋಗ್ತಿದ್ರೆ, ಅದು ಅವಿವೇಕ.

ಈ ಅವಿವೇಕ, ಇದು ತಪ್ಪಾ? ನಾನದು ತಪ್ಪೂಂತಾನೂ ಹೇಳ್ತಾ ಇಲ್ಲ. ಅದು ಬಹಳ ಸೀಮಿತ ಮತ್ತು ಪೆದ್ದುತನ ಅಷ್ಟೆ. ನಾನ್ಯಾವತ್ತೂ ನನ್ ಜೀವನ್ದಲ್ಲಿ ಏನನ್ನೂ ಸರಿ ಅಥ್ವಾ ತಪ್ಪು ಅಂತ ಕರ್ದಿಲ್ಲ. ಆದ್ರೆ ಸೀಮಿತವಾದ್ದು ಮತ್ತು ಮೂರ್ಖವಾದ್ದು ನೀವು ಮಾಡಲು ಯೋಗ್ಯವಾದದ್ದಲ್ಲ. ಅಷ್ಟೆ. ಹಾಗಾಗಿ ನಾನ್ ಹೇಳೋದು ವ್ಯಭಿಚಾರ ಮಾಡಲು ಅಯೋಗ್ಯವಾದದ್ದು ಅಂತ. ಅದು ಸರೀನೋ ತಪ್ಪೋ? ಜೀವನದ ಯಾವ್ದೇ ವಿಷ್ಯದ್ ಬಗ್ಗೆ ತೀರ್ಪು ನೀಡೋದಿಕ್ಕೆ ನಾನ್ಯಾರು? ನಾನು ಜೀವನದ್ ಮೇಲೆ ತೀರ್ಪುಗಳನ್ ನೀಡಲ್ಲ. ಆದ್ರೆ ಅದು ಪೆದ್ದುತನ ಮತ್ತು ಸೀಮಿತವಾದ್ದು, ನೀವು ನಿಮಗೇನೇ ದುಃಖವನ್ನ ಕೊಡೋವಂತದನ್ನ ಮಾಡಿದ್ರೆ. ಈವತ್ತು ಸರ್ವಸ್ವದ್ ತರ ಕಂಡು ನಾಳೆ ನಿಮ್ಮನ್ನ ಮೂರ್ಖರಂತಾಗಿಸೋದಿಕ್ಕೆ ನಿಮ್ಮನ್ ನೀವು ಬಿಟ್ಕೊಡೋದು ಪೆದ್ದುತನ ಮತ್ತು ಅವಿವೇಕಿತನ. ಅಲ್ವಾ? ಹಾಗ್ ಮಾಡೋದು ಪೆದ್ದುತನ, ಈವತ್ತು ನಿಮಗ್ ಅದೇ ಸರ್ವಸ್ವ ಅಂತನ್ಸಿ ನಾಳೆ ಬೆಳಿಗ್ಗೆ ನೀವು ಮೂರ್ಖರ್ ತರ ಕಂಡ್ರೆ, ನಿಮ್ ಕಣ್ಗೇನೇ, ಬೇರೆಯವ್ರಿಗಲ್ಲ. ಇದು ವಿವೇಚನೆಯಿಲ್ಲದ ಬಾಳು. ನೀವು ಯಾವ್ ರೀತಿ, ಎಷ್ಟು ವಿವೇಚನೆಯಿಂದ ಬಾಳ್ಬೇಕು ಅಂದ್ರೆ, ದೇವತೆಗಳು ನಿಮ್ಮನ್ ನೋಡಿ ಅಸೂಯೆ ಪಡ್ಬೇಕು. ನೀವು ಆ ಮಟ್ಟಿಗೆ ವಿವೇಚನೆಯನ್ನ ತೋರ್ಪಡ್ಸಿದ್ರೆ ನಿಮ್ ಜೀವನ್ದಲ್ಲಿ ಸರಿ ತಪ್ಪು ಅನ್ನೋದು ಇರಲ್ಲ. ಅಷ್ಟು ವಿವೇಚನೆ ನಿಮ್ಮಲ್ಲಿಲ್ದೇ ಇದ್ರೆ, ನಿಮ್ ಜೀವನ್ದಲ್ಲಿ ಎಲ್ಲಾ ತಪ್ಪೇ.