ಈ ಸೆಪ್ಟೆಂಬರ್‌ನಲ್ಲಿ, ಸದ್ಗುರುಗಳು ಭಾರತದಾದ್ಯಂತದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಯುವಜನರೊಂದಿಗೆ ಮಾತುಕತೆ ನಡೆಸುತ್ತಾರೆ. ಯಾವುದೇ ನಿರ್ಬಂಧಗಳಿಲ್ಲದೆ, ಅವರಾಯ್ಕೆಯ ಯಾವುದೇ ವಿಷಯಗಳ ಬಗ್ಗೆ ಯುವಜನರು ಸದ್ಗುರುಗಳಿಂದ ಸ್ಪಷ್ಟೀಕರಣವನ್ನು ಪಡೆಯಬಹುದು. ಇಲ್ಲಿ ಸದ್ಗುರುಗಳು "ಯುವಜನರೇ, ಸತ್ಯವು ನಿಮ್ಮದಾಗಲಿ" (Youth N Truth) ಆಂದೋಲನದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತ, ಇಂದಿನ ಯುವಜನತೆಯು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ತಮ್ಮ ಶಕ್ತಿಯನ್ನು ಧನಾತ್ಮಕ ರೀತಿಯಲ್ಲಿ ಬಳಸಿದಾಗ ಅವರು ಹೊಂದಬಹುದಾದ ಅದ್ಭುತವಾದ ಸಾಧ್ಯತೆಗಳನ್ನು ವಿವರಿಸುತ್ತಾರೆ.

Q: ದೇಶವನ್ನು ಮುನ್ನಡೆಸುವ ಶಕ್ತಿಯು ಯುವಜನರ ಕೈಯಲ್ಲಿದೆ. ಅವರ ದೈನಂದಿನ ಜೀವನದಲ್ಲಿ ಆದರ್ಶಪ್ರಾಯರಾದ ಅನುಕರಣೀಯ ವ್ಯಕ್ತಿಗಳ ಕೊರತೆಯಿದೆ. ಉದ್ವಿಗ್ನರು, ಹತಾಶರು ಹಾಗೂ ಉದ್ಯೋಗದಿಂದ ವಂಚಿತರಾಗುತ್ತಿರುವ ಯುವಜನರಿಗೆ ನಿಮ್ಮ ಸಲಹೆ ಏನು?

ಸದ್ಗುರು: ಯುವಜನರೆಂದರೆ ರಚನಾ ಪ್ರಕ್ರಿಯೆಯಲ್ಲಿರುವ ಮಾನವತೆ ಎಂದರ್ಥ. ಅವರುಗಳು ವಯಸ್ಕರಷ್ಟು ದುರಭಿಮಾನಿಗಳಲ್ಲದ ಕಾರಣ, ಜಗತ್ತಿನಲ್ಲಿ ಹೊಸದೊಂದು ಸಾಧ್ಯತೆಯನ್ನು ಸೃಷ್ಟಿಸಲು ಅವರಿಗಿನ್ನೂ ಅವಕಾಶವಿದೆ. ಆದರೆ, ಹಿರಿಯ ಪೀಳಿಗೆಯವರು ಸ್ವತಃ ತಮ್ಮಲ್ಲಿ ಯಾವುದೇ ಬದಲಾವಣೆಗಳನ್ನು ತರಲು ಒಪ್ಪದಿರುವಾಗ, ಯುವಜನರು ಏನಾದರೂ ಅದ್ಭುತವನ್ನು ಮಾಡಬಹುದೆಂದು ನಿರೀಕ್ಷಿಸುವುದು ಟೊಳ್ಳು ಕನಸು. 

ನಿಮ್ಮ ವಯಸ್ಸು ಎಷ್ಟೇ ಇರಲಿ, ನೀವು ಬದಲಾವಣೆಯನ್ನು ತರಬಹುದೆಂದು ಹುರುಪಿನಿಂದ ಮಾಡಿ ತೋರಿಸುವುದು ಬಹಳ ಮುಖ್ಯ.

ಸಾಮಾನ್ಯವಾಗಿ, ಯುವಕರ ಸ್ವಭಾವ ಎಂತಹದೆಂದರೆ, ಅವರು ಅಪಾರವಾದ ಶಕ್ತಿಯನ್ನು ಹೊಂದಿದ್ದರೂ, ಅವರು ಪ್ರತಿಕ್ರಿಯಾತ್ಮಕವಾಗಿರುತ್ತಾರೆ. ಹಾಗಾಗಿ, ಹಿರಿಯ ಪೀಳಿಗೆಯವರು, ಈ ಭೂಮಿಯಲ್ಲಿ ಅರ್ಥಪೂರ್ಣ ಹಾಗೂ ಪ್ರಜ್ಞಾವಂತಿಕೆಯ ಜೀವನ ಶೈಲಿಯ ಬಗ್ಗೆ ವಿವೇಚನೆ ಹಾಗೂ ಸ್ಫೂರ್ತಿಯನ್ನು ತೋರಿಸದಿದ್ದರೆ, ಮುಂದೆ, ಯುವಜನರು ನಮಗಿಂತ ಕೆಟ್ಟದಾಗಿ ಬದುಕುವರು. ನಿಮ್ಮ ವಯಸ್ಸು ಎಷ್ಟೇ ಇರಲಿ, ನೀವು ಬದಲಾವಣೆಯನ್ನು ತರಬಹುದೆಂದು ಹುರುಪಿನಿಂದ ಮಾಡಿ ತೋರಿಸುವುದು ಬಹಳ ಮುಖ್ಯ. 

ಸಾಧ್ಯತೆಯ ಹೊಸ್ತಿಲಿನಲ್ಲಿ

ಭಾರತದಲ್ಲಿ ಶೇ. ೫೦% ಕ್ಕೂ ಹೆಚ್ಚು ಯುವಜನರಿದ್ದಾರೆ. ಅಶಿಕ್ಷಿತ, ಏಕಾಗ್ರರಲ್ಲದ ಹಾಗೂ ಆರೋಗ್ಯವಂತರಲ್ಲದ ಯುವಜನರು ದುರಂತಕ್ಕೆ ಆಹ್ವಾನ ಕೊಟ್ಟಂತೆ. ಆದರೆ, ಅದೇ ಸಮಯದಲ್ಲಿ ಈ ಅರ್ಧ ಶತಕೋಟಿ ಯುವಜನರು, ಆರೋಗ್ಯವಂತ, ನುರಿತ ಹಾಗೂ ಯಾವುದಾದರೊಂದು ಲಕ್ಷ್ಯದತ್ತ ಏಕಾಗ್ರಚಿತ್ತರಾಗಿದ್ದರೆ, ಅವರುಗಳು ಒಂದು ಮಹತ್ತರ ಸಾಧ್ಯತೆಯಾಗಬಹುದು. 

ಅವರು ಎಷ್ಟು ಆರೋಗ್ಯವಂತ, ಏಕಾಗ್ರಚಿತ್ತ, ನುರಿತ ಹಾಗೂ ಸಮರ್ಥರಾಗಿರುತ್ತಾರೆನ್ನುವುದು ನಮ್ಮ ದೇಶದ ಮುನ್ನಡೆಯನ್ನು ನಿರ್ಧರಿಸುತ್ತದೆ.

ಈಗ, ಈ ರಾಷ್ಟ್ರವು ಸಾಧ್ಯತೆಯೊಂದರ ಹೊಸ್ತಿಲಿನಲ್ಲಿ ಸಿದ್ಧವಾಗಿ ನಿಂತಿದೆ. ಅನೇಕ ತಲೆಮಾರುಗಳ ಕಾಲ, ಜನರು ಒಂದೇ ಪರಿಸ್ಥಿತಿಯಡಿಯಲ್ಲಿ ಬದುಕಿದ್ದರು. ಈಗ, ಮೊದಲ ಬಾರಿಗೆ, ದೊಡ್ಡ ಸಂಖ್ಯೆಯಲ್ಲಿ ಜನರ ಜೀವನ ಮಟ್ಟವನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮೇಲೇರಿಸಬಹುದು. 

ನಾವು ಯುವಜನರ ಹಾದಿಯನ್ನು ಎಷ್ಟು ಸರಾಗಗೊಳಿಸುತ್ತೇವೆ ಎನ್ನುವುದು, ನಾವು ಈ ಸಾಧ್ಯತೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸುತ್ತೇವೋ ಇಲ್ಲವೋ ಎನ್ನುವುದನ್ನು ನಿರ್ಧರಿಸುತ್ತದೆ. ಅವರು ಎಷ್ಟು ಆರೋಗ್ಯವಂತ, ಏಕಾಗ್ರಚಿತ್ತ, ನುರಿತ ಹಾಗೂ ಸಮರ್ಥರಾಗಿರುತ್ತಾರೆನ್ನುವುದು ನಮ್ಮ ದೇಶದ ಮುನ್ನಡೆಯನ್ನು ನಿರ್ಧರಿಸುತ್ತದೆ. 

"ಯುವಜನರೇ, ಸತ್ಯವು ನಿಮ್ಮದಾಗಲಿ" (Youth N Truth) ಆಂದೋಲನದ ಆರಂಭ

ಯುವಜನರು, ಒಂದೋ, ಅಪಾರವಾದ ಹಾನಿಯನ್ನುಂಟು ಮಾಡಲು ಸಮರ್ಥರು, ಅಥವಾ, ತಮ್ಮ ಶಕ್ತಿಯನ್ನು ಧನಾತ್ಮಕ ಮತ್ತು ರಚನಾತ್ಮಕ ರೀತಿಯಲ್ಲಿ ಬಳಸಲು ಅಗತ್ಯವಾದ ಸ್ಥಿರತೆಯನ್ನು ಹೊಂದಿದ್ದಲ್ಲಿ, ಅಗಾಧವಾದ ರಚನಾತ್ಮಕ ಕೃತ್ಯಗಳನ್ನು ಮಾಡಲು ಸಮರ್ಥರು. ಜಗತ್ತಿನಲ್ಲಿ ಯುವಜನರಿಗೆ ಆಗಬೇಕಾದ ಅತೀ ಮುಖ್ಯ ವಿಷಯವೆಂದರೆ, ಅವರು ಧ್ಯಾನಾಸಕ್ತರಾಗುವುದು. ಅವರು ಶೈಕ್ಷಣಿಕ ತರಬೇತಿಯಲ್ಲಿರಲಿ, ವೃತ್ತಿಪರ ತರಬೇತಿಯಲ್ಲಿರಲಿ ಅಥವಾ ತಮ್ಮ ಜೀವನದಲ್ಲಿ ಅವರಿಗೆ ಇಷ್ಟವಿದ್ದುದನ್ನು ಮಾಡುತ್ತಿರಲಿ, ಅವರು ಸ್ವಲ್ಪ ಹೆಚ್ಚು ಸ್ಥಿರರಾದರೆ, ಯುವಶಕ್ತಿ ಎಂದು ಕರೆಯಲ್ಪಡುವ ಈ ಶಕ್ತಿಯನ್ನು ಉತ್ತಮ ಬಳಕೆಗೆ ವಿನಿಯೋಗಿಸಬಹುದು – ಅವರದೇ ಒಳಿತಿಗಾಗಿ ಮತ್ತು ಬೇರೆಲ್ಲರ ಒಳಿತಿಗಾಗಿಯೂ ಕೂಡ. 

ಜಗತ್ತಿನಲ್ಲಿ ಯುವಜನರಿಗೆ ಆಗಬೇಕಾದ ಅತೀ ಮುಖ್ಯ ವಿಷಯವೆಂದರೆ, ಅವರು ಧ್ಯಾನಾಸಕ್ತರಾಗುವುದು.

ಇದರ ಅಂಗವಾಗಿ, ನಮ್ಮ ಯುವಜನರಿಗೆ ಸ್ಫೂರ್ತಿ ನೀಡಲು ಮತ್ತು ಅವರನ್ನು ಸಶಕ್ತರನ್ನಾಗಿಸಲು, ದೇಶಾದ್ಯಂತ “ಯುವಜನರೇ, ಸತ್ಯವು ನಿಮ್ಮದಾಗಲಿ" (Youth N Truth) ಚಳುವಳಿಯನ್ನು ಪ್ರಾರಂಭಿಸುತ್ತಿದ್ದೇವೆ. ಇದು ಸೆಪ್ಟೆಂಬರ್ ೩ ರಂದು ಪ್ರಾರಂಭವಾಗುತ್ತದೆ. ನಾವು ವಿವಿಧ ರಾಜ್ಯಗಳಲ್ಲಿ, ಅನೇಕ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಆಹ್ವಾನಿಸಿ, ಅವರ ಯೋಗಕ್ಷೇಮಕ್ಕಾಗಿ ಸರಳ ಸಾಧನಗಳನ್ನು ಒದಗಿಸುತ್ತೇವೆ. 

ಅಂತೆಕಂತೆಗಳು ಬ್ರಹ್ಮಾಂಡವನ್ನೇ ತಲುಪಿದಾಗ

ಇದು ಅಂತೆಕಂತೆಮಯವಾಗಿರುತ್ತದೆ! ಪ್ರಾಚೀನ ಕಾಲದಿಂದಲೂ, ಯಾರಿಗಾದರೂ ಯಾವುದಾದರ ಕುರಿತಾಗಿ ಸತ್ಯವನ್ನು ತಿಳಿಯ ಬಯಸಿದರೆ, ಅವರು ಎಂದಿಗೂ ಅಂತೆಕಂತೆಗಳ ಮೇಲೆಯೇ ಅವಲಂಬಿತರಾಗಿರುತ್ತಿದ್ದರೆ ವಿನಃ ಹೊರಬಂದ ಅಧಿಕೃತ ವರದಿಯ ಮೇಲಲ್ಲ. ವೃತ್ತಪತ್ರಿಕೆಯಲ್ಲಿ ಏನೋ ಬರೆಯುತ್ತಾರೆ, ನೀವದನ್ನು ನಂಬುವುದಿಲ್ಲ – ಅದರ ಬಗ್ಗೆ ಸುತ್ತಮುತ್ತಲೂ ಕೇಳುವಿರಿ. ಯಾರೋ ಏನೋ ಹೇಳುವರು, ಅದೇ ಸತ್ಯವಾಗುತ್ತದೆ. ಹಾಗಾಗಿ, ಅಂತೆಕಂತೆಗಳೇ ಸತ್ಯದ ವಾಹಕರಾಗಿದ್ದವು.

ಸಾಮಾಜಿಕ ಜಾಲತಾಣಗಳ ಆವಿಷ್ಕರಣದಿಂದ, ಅಂತೆಕಂತೆಗಳು ಜಗತ್ತಿನಾದ್ಯಂತ ಹರಡಿದೆ – ಸ್ಥಳೀಯ ಅಂತೆಕಂತೆಗಳ ಕಾಲ ಮುಗಿಯಿತು. ಹಾಗಾಗಿ, ಇದನ್ನು ಮುಂದಿನ ಹಂತಕ್ಕೇರಿಸೋಣ ಎಂದೆಣಿಸಿದೆ. ಯೋಗಿಯೊಡನೆ ಅಂತೆಕಂತೆಗಳ ಬಗ್ಗೆ ಹರಟಿದರೆ, ನಿಮ್ಮ ಅಂತೆಕಂತೆ ವಿಶ್ವದೆಲ್ಲೆಡೆ ಹರಡುತ್ತದೆ. 

ಜನರು ನನ್ನ ಬಳಿ ಬಂದು, “ಸದ್ಗುರು, ನನಗೆ ಇಪ್ಪತ್ತೈದು ವರ್ಷವಾಗಿದ್ದಾಗ, ನಾನು ನಿಮ್ಮನ್ನು ಭೇಟಿಯಾಗಿದ್ದರೆ, ನಾನು ಏನೇನೆಲ್ಲ ಮಾಡಿರುತ್ತಿದ್ದೆ." ಎಂದು ಹೇಳುತ್ತಿರುತ್ತಾರೆ. ಹಾಗಾಗಿ, ಯುವಜನರೊಂದಿಗೆ ನನ್ನನ್ನು ತೊಡಗಿಸಿಕೊಂಡು, ಸತ್ಯಕ್ಕೆ ಅವರನ್ನು ಎಷ್ಟು ನಿಕಟವಾಗಿಸಬಹುದೆಂದು ನೋಡೋಣ ಎಂದುಕೊಂಡೆ. 

ಸತ್ಯಕ್ಕೆ ನೀವೆಷ್ಟು ಹತ್ತಿರವಿರುವಿರಿ ಎಂಬುದೊಂದೇ ಪ್ರಶ್ನೆ. ದಿನದಲ್ಲಿ, ಅಥವಾ ನಿಮ್ಮ ಜೀವಿತಾವಧಿಯಲ್ಲಿ, ನೀವು ಅದನ್ನು ಎಷ್ಟು ಬಾರಿ ಸ್ಪರ್ಶಿಸುತ್ತಿರುವಿರಿ? ಅದು ನಿಮ್ಮ ಜೀವನದ ಗುಣಮಟ್ಟ, ಸಂಗತಿಗಳು ಹಾಗೂ ಗಾಢತೆಯನ್ನು ನಿರ್ಧರಿಸುತ್ತದೆ. 

ಜೀವನ ಸ್ವಲ್ಪಮಟ್ಟಿಗೆ ಡೊಂಕು ಡೊಂಕಾಗಿ ಸಾಗುತ್ತದೆ, ಆದರೆ, ಸತ್ಯವು ಸರಳ ರೇಖೆಯಂತೆ. ಸತ್ಯಕ್ಕೆ ನೀವೆಷ್ಟು ಹತ್ತಿರವಿರುವಿರಿ ಎಂಬುದೊಂದೇ ಪ್ರಶ್ನೆ. ದಿನದಲ್ಲಿ, ಅಥವಾ ನಿಮ್ಮ ಜೀವಿತಾವಧಿಯಲ್ಲಿ, ನೀವು ಅದನ್ನು ಎಷ್ಟು ಬಾರಿ ಸ್ಪರ್ಶಿಸುತ್ತಿರುವಿರಿ? ಅದು ನಿಮ್ಮ ಜೀವನದ ಗುಣಮಟ್ಟ, ಸಂಗತಿಗಳು ಹಾಗೂ ಗಾಢತೆಯನ್ನು ನಿರ್ಧರಿಸುತ್ತದೆ. ಪ್ರತಿ ಬಾರಿ ಅದನ್ನು ಸ್ಪರ್ಶಿಸಿದಾಗ, ನಿಮ್ಮೊಳಗೆ ಏನೋ ಅದ್ಭುತವಾದುದು ಸಂಭವಿಸಿ, ಅದು ನಿಮ್ಮನ್ನು ಬದುಕಿನಲ್ಲಿ ಚುರುಕಾಗಿರಿಸುತ್ತದೆ.

Youth and Truth Banner Image