#1: ಭಾವನೆಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮವನ್ನು ಬಳಸುವುದು ಹೇಗೆ? 

ಸದ್ಗುರು: ನಕಲಿ ಫೇಸ್ಬುಕ್ ಮತ್ತು ಟ್ವಿಟ್ಟರ್ ಅಕೌಂಟ್-ಗಳನ್ನು ಬಳಸುತ್ತಿರುವವರು, ನಿಮ್ಮ ನಕಲಿ ಮಾಹಿತಿಯನ್ನು ಅವುಗಳಿಂದ ತೆಗೆದುಹಾಕಿ, ನಿಮ್ಮದೇ ಹೆಸರನ್ನು ಅಲ್ಲಿ ಹಾಕಿಕೊಳ್ಳಿ: "ಇದು ನಾನು, ಮತ್ತು ಇದು ನನ್ನ ಅಭಿಪ್ರಾಯ." ಎಂದು ಧೈರ್ಯವಾಗಿ ಹೇಳಿ. ನಿಮ್ಮ ಹೆಸರನ್ನು ಹಾಕುವ ಕನಿಷ್ಟ ಧೈರ್ಯ ನಿಮಗಿಲ್ಲದಿದ್ದ ಮೇಲೆ, ಯಾವುದರ ಕುರಿತಾಗಾಗಲಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಧಿಕಾರ ನಿಮಗಿಲ್ಲ. ಯಾವುದರ ಹಿಂದೆಯೋ ಅವಿತುಕೊಂಡು, ನಿಮಗಿಷ್ಟ ಬಂದಹಾಗೆ ಯಾರೆಂದರೆ ಅವರ ಬಗ್ಗೆ ಕಿರುಚಾಡುವುದು ಒಳ್ಳೆಯದಲ್ಲ, ಅಲ್ಲವೇ? ನಿಮಗೇನಾದರೂ ಹೇಳಬೇಕೆಂದಿದ್ದರೆ, ನೀವದರ ಬಗ್ಗೆ ಸ್ವಲ್ಪವಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.

 

 

#2: ನಿರಾಯಾಸವಾಗಿ ಬದುಕುವುದು ಹೇಗೆ?

ಸದ್ಗುರು: ಒಂದು ಸರಳವಾದ ವಿಷಯವೆಂದರೆ, ಎಂದಿಗೂ ಯಾರನ್ನೂ ಮೇಲಾಗಿ ಕಾಣಬೇಡಿ, ಯಾರನ್ನೂ ಕೀಳಾಗಿ ಕಾಣಬೇಡಿ. ಇದು ತುಂಬ ಸರಳ, ಮತ್ತು ಇದರರ್ಥ ಯಾವುದು ಒಳ್ಳೆಯದು ಯಾವುದು ಕೆಟ್ಟದು, ಯಾವುದು ಮೇಲು ಯಾವುದು ಕೀಳು, ಯಾವುದು ಪಾಪ ಯಾವುದು ಪುಣ್ಯ ಎನ್ನುವ ಬಗ್ಗೆ ನಿಮ್ಮ ತಲೆಯಲ್ಲಿ ಯಾವುದೇ ತೀರ್ಮಾನಗಳಿರುವುದಿಲ್ಲ. ಜೀವನವನ್ನು ಅದು ಇದ್ದಂತೆಯೇ ನೋಡಲು ನೀವು ಸಿದ್ಧರಿರುತ್ತೀರಿ. ನೀವು ಜೀವನವನ್ನು ಅದು ಇದ್ದಂತೆಯೇ ನೋಡಿದಾಗ, ನೀವು ಜೀವನದ ಮೂಲಕ ಅನಾಯಾಸವಾಗಿ ಸಾಗುವಿರಿ.

#3: ಮುಂಬರುವ ಚುನಾವಣೆಯಲ್ಲಿ ನಾನು ಯಾರಿಗೆ ಮತ ಹಾಕಬೇಕು?

ಸದ್ಗುರು: ನನ್ನ ಮಗಳೇ ಬಂದು, “ನಾನು ಯಾವ ಪಕ್ಷಕ್ಕೆ ಮತ ಹಾಕಬೇಕು?” ಎಂದು ನನ್ನನ್ನು ಕೇಳಿದರೂ, ನಾನವಳ ಪ್ರಶ್ನೆಗೆ ಉತ್ತರಿಸುವುದಿಲ್ಲ. ಅದರ ಬದಲು, “ನಿನಗೆ ಮತ್ತು ನಿನ್ನ ಸುತ್ತಮುತ್ತಲಿನ ಜನರಿಗೆ ಯಾವುದು ಒಳ್ಳೆಯದು ಎಂದು ವಿಚಾರ ಮಾಡಿ, ಅದನ್ನು ನೀಡಬಲ್ಲಂತಹ ಪಕ್ಷಕ್ಕೆ ಮತ ಹಾಕು, ನಾನು ಹೇಳಿದ ಪಕ್ಷಕ್ಕಲ್ಲ.” ಎಂದು ಹೇಳುತ್ತೇನೆ.

 ಯಾವುದೇ ಒಂದು ಪಕ್ಷಕ್ಕೆ ಬದ್ಧರಾಗದೆ, ಪ್ರತಿಯೊಬ್ಬ ಪ್ರಜೆಯೂ ಸಹ ಅವರಾಗಿಯೇ ವಿಚಾರ ಮಾಡಿ, ಹೊಸದಾಗಿ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವವು ಜೀವಂತವಾಗಿರುತ್ತದೆ. 

ಇಂದು ಜನ ಧರ್ಮ, ಜಾತಿ, ಮತ ಹಾಗೂ ಮತ್ಯಾವುದೋ ಅಸಂಬದ್ಧ ಕಾರಣಗಳನ್ನು ಆಧಾರವಾಗಿರಿಸಿಕೊಂಡು ಮತ ಚಲಾಯಿಸುತ್ತಿದ್ದಾರೆ. ಇದು ಬದಲಾಗಬೇಕಾದ ಅಗತ್ಯವಿದೆ. ಯಾವುದೇ ಒಂದು ಪಕ್ಷಕ್ಕೆ ಬದ್ಧರಾಗದೆ, ಪ್ರತಿಯೊಬ್ಬ ಪ್ರಜೆಯೂ ಸಹ ಅವರಾಗಿಯೇ ವಿಚಾರ ಮಾಡಿ, ಹೊಸದಾಗಿ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವವು ಜೀವಂತವಾಗಿರುತ್ತದೆ. ಯಾರೋ ಒಬ್ಬರು ಕೊಟ್ಟ ಕರೆಗೆ ಓಗೊಟ್ಟು ಲಕ್ಷಾಂತರ ಜನ ಅದರ ಪ್ರಕಾರವಾಗಿ ಮತ ಹಾಕಿದರೆ, ನೀವು ಪ್ರಜಾಪ್ರಭುತ್ವವನ್ನು ಜೀತಪದ್ಧತಿಯ ಪ್ರಕ್ರಿಯೆಗೆ ಮಾರ್ಪಡಿಸಿದ್ದೀರ ಎಂದು ಅರ್ಥ.

ಪ್ರಜಾಪ್ರಭುತ್ವದ ಅಮೂಲ್ಯವಾದ ವಿಷಯವೇನೆಂದರೆ, ಯಾವುದೇ ರಕ್ತಪಾತವಿಲ್ಲದೆ ಅಧಿಕಾರ ಹಸ್ತಾಂತರವಾಗುವುದು. ಮಾನವತೆಯ ಇತಿಹಾಸದಲ್ಲೆಂದೂ ಇದು ಸಂಭವಿಸಿರಲಿಲ್ಲ. ಸ್ವಂತ ಪರಿವಾರಗಳಲ್ಲಿ ಅಧಿಕಾರದ ಹಸ್ತಾಂತರವಾಗಬೇಕಿದ್ದರೂ ಸಹ ರಕ್ತಪಾತವಾಗುತ್ತಿತ್ತು. ಆದರೆ, ಕಳೆದ ನೂರರಿಂದ ನೂರೈವತ್ತು ವರ್ಷಗಳಲ್ಲಿ ಮೊದಲ ಬಾರಿಗೆ, ನಾವು ರಕ್ತಪಾತವಿಲ್ಲದೆಯೇ ನಾಯಕತ್ವದ ಬದಲಾವಣೆಯನ್ನು ಮಾಡುತ್ತಿದ್ದೇವೆ. ಇದನ್ನು ಕಡಿಮೆ ಅಂದಾಜು ಮಾಡಬೇಡಿ.
 

 

#4: ಆದರ್ಶವಾದ ಶಿಕ್ಷಣ ವ್ಯವಸ್ಥೆ ಯಾವುದು? 

ಸದ್ಗುರು: ಈ ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ನಾವು ಖಂಡಿತವಾಗಿಯೂ ಮರುಪರಿಶೀಲನೆ ಮಾಡಬೇಕಿದೆ. ಸದ್ಯದಲ್ಲಿ, ನಾವು ಪ್ರತಿಯೊಬ್ಬರನ್ನೂ ಸಹ ಒಂದೇ ತೆರನಾದ ಕಲಿಕೆಯ ಪ್ರಕ್ರಿಯೆಗೆ ಒಳಪಡಿಸುತ್ತಿದ್ದೇವೆ, ಆದರೆ, ಎಲ್ಲರೂ ಒಂದೇ ರೀತಿಯ ಶಿಕ್ಷಣ ಪದ್ಧತಿಯನ್ನು ಅರಗಿಸಿಕೊಳ್ಳಲು ಸಜ್ಜಾಗಿರುವುದಿಲ್ಲ. ಶೈಕ್ಷಣಿಕ ವಿಷಯಗಳಲ್ಲಿ ಆಸಕ್ತಿಯಿರುವವರು, ಅದೇ ದಿಕ್ಕಿನಲ್ಲಿ ತಮ್ಮ ಕಲಿಕೆಯನ್ನು ಮುಂದುವರಿಸಬಹುದು. ಕೇವಲ ಹೊಟ್ಟೆಪಾಡನ್ನು ಮಾತ್ರ ತಮ್ಮ ಗುರಿಯನ್ನಾಗಿ ಇರಿಸಿಕೊಂಡಂತವರು, ಇನ್ನೊಂದು ದಿಕ್ಕಿನಲ್ಲಿ ಹೋಗಬೇಕು. ಇನ್ಯಾವುದೋ ರೀತಿಯ ಕುಶಲತೆಯನ್ನು ಹೊಂದಿರುವವರು, ಮತ್ತೊಂದು ದಿಕ್ಕಿನಲ್ಲಿ ಸಾಗಬೇಕು.

ನಾವಿದನ್ನು ಆರಂಭದ ಹಂತಗಳಲ್ಲಿಯೇ ಮಾಡಬೇಕು – ಪ್ರತಿಯೊಬ್ಬರಿಗೂ ಹನ್ನೆರಡು ವರ್ಷವಾಗುವುದರೊಳಗೆ, ಅವರು ಎರಡು ಭಾಷೆಗಳಲ್ಲಿ ಸಮಂಜಸವಾಗಿ ಅಕ್ಷರಸ್ಥರಾಗಿರಬೇಕು. ನೀವು ಇಂಗ್ಲೀಷ್ ಮತ್ತು ನಿಮ್ಮ ಮಾತೃಭಾಷೆಯನ್ನು ಓದಿ ಅರ್ಥಮಾಡಿಕೊಳ್ಳಬಲ್ಲವರಾಗಿರಬೇಕು. ಹಲವಾರು ವಿಷಯಗಳನ್ನು ಮಕ್ಕಳ ಪಠ್ಯಕ್ರಮದಲ್ಲಿ ತುರುಕುವುದು ಬೇಡ. ಕೇವಲ ಭಾಷೆ ಮತ್ತು ಗ್ರಹಣಶಕ್ತಿ - ಓದಿದ್ದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದ್ದರೆ ಸಾಕು. ತದನಂತರ, ಹನ್ನೆರಡನೇ ವಯಸ್ಸಿನಲ್ಲಿ, ಯಾರು ಕೌಶಲ ಆಧಾರಿತ ತರಬೇತಿಯನ್ನು ಪಡೆಯಬೇಕು, ಯಾರು ಅದೇ ಕೌಶಲ್ಯಗಳಲ್ಲಿ ಉನ್ನತ ಮಟ್ಟದ ಪರಿಣತಿಯ ಶಿಕ್ಷಣವನ್ನು ಪಡೆಯಬೇಕು ಮತ್ತು ಯಾರು ಶೈಕ್ಷಣಿಕ ವಿಷಯಗಳನ್ನು ಕಲಿಯಬೇಕು ಎಂದು ನಿರ್ಧರಿಸಲು ನೀವೊಂದು ಮೌಲ್ಯಮಾಪನವನ್ನು ಮಾಡಬಹುದು.

#5: ನಾನೊಬ್ಬ ವಕೀಲನಾಗಿ ತಪ್ಪಿತಸ್ಥನಾದವನನ್ನು ರಕ್ಷಿಸಬೇಕೇ?

ಸದ್ಗುರು: ನಿಮ್ಮ ವೃತ್ತಿಯು ಸಾಂವಿಧಾನಿಕ ಬಾಧ್ಯತೆಯಾಗಿದೆ. ಸರಿ ಮತ್ತು ತಪ್ಪುಗಳೇನೆಂದು ನೋಡುವುದು ನಿಮ್ಮ ಕೆಲಸವಲ್ಲ. ನಿಮ್ಮ ಬಳಿ ಬರುವ ಪ್ರಜೆಗಳ ಒಳಿತಿಗಾಗಿ ಸಂವಿಧಾನವನ್ನು ವಿವರಿಸುವುದಷ್ಟೇ ನಿಮ್ಮ ಕೆಲಸ. ಬಹುಶಃ ಅವರು ಅಪರಾಧವನ್ನೆಸಗಿರಬಹುದು. ಕೆಲವೊಮ್ಮೆ ಅಪರಾಧಗಳು ಎಷ್ಟು ಘೋರವಾಗಿರುತ್ತವೆಂದರೆ "ನಾನು ಇಂತಹ ವ್ಯಕ್ತಿಯನ್ನು ರಕ್ಷಿಸಬೇಕೇ?” ಎನ್ನುವ ಮಾನವತೆಯ ಪ್ರಶ್ನೆ ಬಂದೇ ಬರುತ್ತದೆ. ಇದನ್ನೊಂದು ನೈತಿಕ ಬಿಕ್ಕಟ್ಟನ್ನಾಗಿ ಮಾಡಿಕೊಳ್ಳಬೇಡಿ. "ಈ ವ್ಯಕ್ತಿ ನನಗೆ ಇಷ್ಟವಿಲ್ಲದಿರುವುದೇನನ್ನೋ ಮಾಡಿದ್ದಾನೆ, ಅವನನ್ನು ನೇಣಿಗೇರಿಸಿಬಿಡಲಿ." ಎಂದು ನಿರ್ಧರಿಸುವುದು ನಿಮ್ಮ ಕೆಲಸವಲ್ಲ. ಎಲ್ಲರಿಗೂ ನ್ಯಾಯೋಚಿತವಾದ ಉಪಚಾರ ಸಿಗಲಿ ಎಂಬ ಸಲುವಾಗಿ ಕಾನೂನನ್ನು ವ್ಯಾಖ್ಯಾನಿಸುವುದಷ್ಟೇ ನಿಮ್ಮ ಕೆಲಸ.

#6: ಜೀವನದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುವುದು ಹೇಗೆ?

ಸದ್ಗುರು: ನಿಮ್ಮ ಆತಂಕಗಳು, ಹತಾಶೆಗಳು ಅಥವಾ ಕಳವಳಗಳು ನಿಮ್ಮನ್ನು ನಿಯಂತ್ರಿಸಬಾರದು. ನಿಮ್ಮ ಜೀವನದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುವುದು ಹೇಗೆ ಎಂಬ ಪ್ರಶ್ನೆ ಅತ್ಯಂತ ಗಂಭೀರವಾದಾಗ, ನೀವು ಕನಿಷ್ಠ ಮೂರರಿಂದ ಹತ್ತು ದಿನಗಳವರೆಗೆ ನಿಮ್ಮಷ್ಟಕ್ಕೆ ನೀವಿರಬೇಕು. ಕೆಲವರಿಗೆ ಮೂರು ದಿನ ಬೇಕಾಗಬಹುದು, ಇನ್ನು ಕೆಲವರಿಗೆ ಹೆಚ್ಚು ಸಮಯ ಬೇಕಾಗಬಹುದು. ನಿಮ್ಮ ಸ್ನೇಹಿತರು, ಅಧ್ಯಾಪಕರು, ಹೆತ್ತವರು ಅಥವಾ ಸಾಮಾಜಿಕ ಒತ್ತಡಗಳಿಂದ ದೂರವಿದ್ದು, ನೀವು ಮೂರರಿಂದ ಹತ್ತು ದಿನಗಳನ್ನು ಕಳೆಯಿರಿ. ನಿಮ್ಮ ಫೋನ್-ಅನ್ನು ಸ್ವಿಚ್ ಆಫ್ ಮಾಡಿಕೊಂಡು, ನಿಮ್ಮಷ್ಟಕ್ಕೇ ನೀವಿದ್ದು ನೋಡಿ.

ನಿಮಗೆ ನನ್ನದೊಂದು ಸರಳವಾದ ಪ್ರಶ್ನೆ - ನಿಮ್ಮ ಜೀವನ ನಿಮಗೆ ಅತ್ಯಮೂಲ್ಯವೆ? ಹೌದೆಂದಾದರೆ, ನೀವು ಈ ಜೀವನವನ್ನು ಯಾವುದಕ್ಕಾಗಿ ವಿನಿಯೋಗಿಸುತ್ತೀರಿ ಎನ್ನುವುದು ನಿಮ್ಮ ಕಾಳಜಿಯಾಗಿರಬೇಕಲ್ಲವೇ? ಬೇರೆಯವರು ಏನನ್ನೋ ಮಾಡುತ್ತಿದ್ದಾರೆಂಬ ಕಾರಣಕ್ಕೆ ನೀವೂ ಸಹ ಅದನ್ನೇ ಮಾಡಬಾರದು. ನಿಮಗೆ ನಿಮ್ಮ ಜೀವನವು ಅತ್ಯಮೂಲ್ಯವಾಗಿದ್ದಾದರೆ, ನಿಮಗೆ ನಿಜವಾಗಿಯೂ ಮುಖ್ಯವಾದ ವಿಷಯ ಯಾವುದೆಂದು ಅರ್ಥಮಾಡಿಕೊಂಡು, ಅದನ್ನೇ ಮಾಡಿ.

 

 

ಸಂಪಾದಕರ ಟಿಪ್ಪಣಿ: ಭಾರತದ ಯುವಜನತೆಯೊಂದಿಗೆ ಸದ್ಗುರುಗಳ ಇನ್ನೂ ಹೆಚ್ಚಿನ ಆಳವಾದ, ಆಸಕ್ತಿದಾಯಕ ಮತ್ತು ವಿನೋದದ ಸಂಭಾಷಣೆಗಳನ್ನು ನೋಡಲು ಬಯಸುತ್ತೀರಾ? Youth and Truth comprehensive playlist ಅನ್ನು ನೋಡಿ.