ಪ್ರಶ್ನೆ: ನಮಸ್ಕಾರ ಸದ್ಗುರು. ನಮ್ಮ ಸುತ್ತಮುತ್ತ ಇಷ್ಟೆಲ್ಲಾ ಜನರಿದ್ದರೂ ಸಹ, ನಮ್ಮ ಜೊತೆ ಹತ್ತಿರದ ಒಡನಾಟ ಇರುವವರ, ನಮ್ಮನ್ನು ಒಪ್ಪಿಕೊಳ್ಳುವವರ, ನಮ್ಮನ್ನು ಪ್ರೀತಿಸುವವರ ಕೊರತೆಯಿದೆ. ಈ ಅತೃಪ್ತಿ ಮತ್ತು ಒಂಟಿತನವನ್ನು ನಿಭಾಯಿಸುವುದು ಹೇಗೆ?

ಸದ್ಗುರು: ಸ್ವಾತಂತ್ರ್ಯ ಅಥವಾ ಬಂಧನ - ಇವೆರಡರಲ್ಲಿ ನಿಮ್ಮ ಜೀವನದಲ್ಲಿ ಯಾವುದಕ್ಕೆ ಅತ್ಯಂತ ಹೆಚ್ಚಿನ ಮೌಲ್ಯವಿದೆ ಎಂದು ನೀವು ನಿರ್ಧರಿಸಬೇಕು. ಸಮಸ್ಯೆ ಏನೆಂದರೆ, ಬಹಳಷ್ಟು ಜನರಿಗೆ ಅವರು ಸ್ವತಂತ್ರರಾಗಿದ್ದರೆ, ಕಳೆದುಹೋದಂತಹ ಅನುಭವವಾಗುತ್ತದೆ. ಉದಾಹರಣೆಗೆ, ಯಾರೂ ಇಲ್ಲದ ನಿರ್ಜನ ಬೆಟ್ಟದ ಮೇಲೆ ನೀವಿದಿದ್ದೇ ಆದರೆ, ನೀವು ಸ್ವತಂತ್ರರೆಂದು ನಿಮಗನಿಸುವುದಿಲ್ಲ - ಬದಲಾಗಿ ನೀವು ಕಳೆದುಹೋಗಿದ್ದೀರಿ ಎಂದು ನೀವು ಭಾವಿಸುತ್ತೀರಿ.

ಬಹಳಷ್ಟು ಜನರಿಗೆ ಸ್ವಾತಂತ್ರ್ಯವನ್ನು ನಿಭಾಯಿಸಲು ಬರುವುದಿಲ್ಲ ಏಕೆಂದರೆ ಸ್ವಾತಂತ್ರ್ಯವನ್ನು ನಿಭಾಯಿಸಲು ನಿಮಗೆ ಒಂದು ವಿಶಿಷ್ಟವಾದ ಸ್ಪಷ್ಟತೆ ಮತ್ತು ಶಕ್ತಿ ಬೇಕಾಗುತ್ತದೆ. ಜನರು ಯಾವಾಗಲೂ ತಮ್ಮನ್ನು ತಾವು ಬಂಧಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ, ಆದರೆ ಸದಾಕಾಲ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಹಾಗೊಂದು ವೇಳೆ, ನೀವು ಅವರನ್ನು ನಿಜವಾಗಿಯೂ ಸ್ವತಂತ್ರಗೊಳಿಸಿದರೆ, ಅವರು ತೀವ್ರವಾಗಿ ಬಾಧೆಪಡುತ್ತಾರೆ. ಒಂದು ರೀತಿಯಲ್ಲಿ ಇದು ವಿಕಾಸ ಪ್ರಕ್ರಿಯೆಯ ಸಮಸ್ಯೆ, ಹೇಗೆಂದರೆ, ಮನುಷ್ಯರು ಸದ್ಯದಲ್ಲಿ ಪಂಜರದಲ್ಲಿರುವ ಹಕ್ಕಿ ಇದ್ದಂತೆ. ನೀವು ಒಂದು ಹಕ್ಕಿಯನ್ನು ಬಹಳ ಕಾಲದವರೆಗೆ ಪಂಜರದಲ್ಲಿಟ್ಟು, ಒಂದು ದಿನ ಪಂಜರದ ಬಾಗಿಲನ್ನು ತೆರೆದರೂ ಸಹ, ಆ ಹಕ್ಕಿಯು ಹಾರಿಹೋಗುವುದಿಲ್ಲ. ಒಳಗಿನಿಂದ, ತಾನು ಸ್ವತಂತ್ರವಾಗಿಲ್ಲವೆಂದು ಅದು ಪ್ರತಿಭಟಿಸುತ್ತದೆ ಆದರೆ ಅದು ಹಾರಿಹೋಗುವುದಿಲ್ಲ. ಮನುಷ್ಯನ ಪರಿಸ್ಥಿತಿಯೂ ಅದರಂತೆಯೇ ಆಗಿದೆ. 

ಸದ್ಯದಲ್ಲಿ, ನೀವು “ನಾನು” ಎಂದು ಕರೆಯುವುದು ಒಂದು ರಸಾಯನವಷ್ಟೆ. ನೀವು ಒಳ್ಳೆಯ ರಸಾಯನವೋ ಅಥವಾ ಕಳಪೆ ರಸಾಯನವೋ ಎನ್ನುವುದೇ ಪ್ರಶ್ನೆ.

ನೀವು ಸ್ವತಂತ್ರರಾಗಬೇಕೆಂದು ಬಯಸಿದರೆ ಏನಾಗಬೇಕೆಂದು ನಾವು ನೋಡೋಣ. ಎಲ್ಲ ರೀತಿಯ ಮಾನವ ಅನುಭವಗಳಿಗೆ ಒಂದು ರಾಸಾಯನಿಕ ತಳಹದಿ ಇದೆಯೆಂದು ನೀವು ಅರ್ಥಮಾಡಿಕೊಳ್ಳಬೇಕು. ನೀವು ಏನನ್ನು ಸಂತೋಷ, ದುಃಖ, ಒತ್ತಡ, ಆತಂಕ, ಯಾತನೆ, ಪರಮಾನಂದ ಎಂದು ಕರೆಯುತ್ತೀರೋ, ಅವೆಲ್ಲವೂ ಸಹ ಬೇರೆ ಬೇರೆ ರೀತಿಯ ರಾಸಾಯನಿಕ ಪ್ರಕ್ರಿಯೆಗಳು. ಕನಿಷ್ಟಪಕ್ಷ, ’ಪರಮ ಸುಖ’ ಎನ್ನುವುದು ಬೇರೆಯದ್ದೇ ಒಂದು ರೀತಿಯ chemistry ಎಂದು ನಿಮಗೆ ತಿಳಿದಿದೆಯಲ್ಲವೆ? ನಿಮ್ಮ ಜೀವನದ ಅನುಭವಕ್ಕೆ ಒಂದು ರಾಸಾಯನಿಕ ತಳಹದಿಯಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸದ್ಯದಲ್ಲಿ, ನೀವು “ನಾನು” ಎಂದು ಕರೆಯುವುದು ಒಂದು ರಸಾಯನವಷ್ಟೆ. ನೀವು ಒಳ್ಳೆಯ ರಸಾಯನವೋ ಅಥವಾ ಕಳಪೆ ರಸಾಯನವೋ ಎನ್ನುವುದೇ ಪ್ರಶ್ನೆ.

ಈ ಕ್ಷಣದಲ್ಲಿ, ನಿಮ್ಮಲ್ಲಿ ಪರಮಾನಂದದ chemistry ಇದ್ದರೆ, ನಿಮ್ಮ ಸುತ್ತ ಯಾರಿದ್ದರೂ ಇಲ್ಲದಿದ್ದರೂ, ಅದು ಅದ್ಭುತವಾಗಿರುತ್ತದೆ ಏಕೆಂದರೆ ನಿಮ್ಮ ಜೀವನದ ಅನುಭವವು ಇನ್ನು ಮುಂದೆ, ನಿಮ್ಮ ಬಳಿ ಏನಿದೆ ಏನಿಲ್ಲವೆಂಬುದರಿಂದ ನಿರ್ಧಾರವಾಗುವುದಿಲ್ಲ. ಒಮ್ಮೆ ನೀವಿರುವ ರೀತಿಯನ್ನು ನಿಮ್ಮ ಹೊರಗಿರುವ ವಿಷಯಗಳು ನಿರ್ಧರಿಸುವುದಿಲ್ಲವೆಂದಾದರೆ, ನಿಮ್ಮಲ್ಲಿ ಒಂಟಿತನವೆನ್ನುವುದೆಲ್ಲ ಇರುವುದಿಲ್ಲ.

ನೀವು ನಿಮ್ಮೊಳಗೆ ಹೇಗಿದ್ದೀರಿ ಎನ್ನುವುದೇ ಮುಖ್ಯವಾದ ಸಂಗತಿ. ಕೇವಲ ನಿಮ್ಮ ಅಗತ್ಯತೆಗಳಿಂದ ಮಾತ್ರ ನೀವು ನಿಮ್ಮ ಜೀವನವನ್ನು ಮುನ್ನಡೆಸುತ್ತಿದ್ದರೆ, ನೀವು ತುಂಬ ಸಣ್ಣ ರೀತಿಯಲ್ಲಿ ಬದುಕುತ್ತೀರಿ. ಆದರೆ, ಯಾವುದೇ ಅಗತ್ಯತೆಗಳಿಲ್ಲದೆ ನೀವಿಲ್ಲಿ ಕುಳಿತುಕೊಳ್ಳಬಹುದಾದರೆ ಮತ್ತು ಆವಶ್ಯಕತೆಯಿರುವುದನ್ನು ಮಾಡಿದರೆ, ನೀವೊಂದು ಭವ್ಯವಾದ ಬದುಕನ್ನು ಬದುಕುತ್ತೀರಿ. ನೀವೆಲ್ಲರೂ ಸಹ ಒಂದು ಅದ್ಭುತವಾದ ಬದುಕನ್ನು ಬಾಳಬೇಕೆನ್ನುವುದು ನನ್ನ ಹಾರೈಕೆ ಮತ್ತು ಆಶೀರ್ವಾದ. ನಿಮಗಾಗಿ ಇದನ್ನು ಸಾಧ್ಯವಾಗಿಸಿಕೊಳ್ಳಿ.