ಜನರು ನಿಮ್ಮ ಮೇಲಿರಿಸುವ ನಿರೀಕ್ಷೆಗಳಿಂದ ನಿಮಗೆ ಹಿಂಸೆಯಾಗುತ್ತಿದ್ದರೆ, ಬಹುಶಃ ಅವುಗಳನ್ನು ಬೇರೆಯದ್ದೇ ದೃಷ್ಟಿಕೋನದಿಂದ ನೋಡುವ ಸಮಯ ಬಂದಿದೆ. ನಮಗಿರುವ ಮಿತಿಗಳನ್ನು ಮೀರಿ ಹೋಗುವಲ್ಲಿ ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸುವಲ್ಲಿ ನಿರೀಕ್ಷೆಗಳು ನಮಗೆ ಸುವರ್ಣಾವಕಾಶವನ್ನು ನೀಡಬಹುದು ಎಂದು ಸದ್ಗುರುಗಳು ಹೇಳುತ್ತಾರೆ.

ಸದ್ಗುರು: ಬೇರೆ ಬೇರೆ ಜನರಿಗೆ ನಿಮ್ಮ ಕುರಿತು ಬೇರೆ ಬೇರೆ ನಿರೀಕ್ಷೆಗಳಿರುತ್ತವೆ, ಮತ್ತು ಈ ನಿರೀಕ್ಷೆಗಳು ಒಂದನ್ನೊಂದು ತುಳಿಯುತ್ತಿರುತ್ತವೆ. ನಿಮ್ಮ ಹೆಂಡತಿಗೆ ನೀವು ಸಂಜೆ 5:30 ಕ್ಕೆ ಮನೆಗೆ ಬರಬೇಕು ಎಂಬ ನಿರೀಕ್ಷೆ ಇದ್ದರೆ, ನಿಮ್ಮ ಬಾಸ್‌ಗೆ ನೀವು ರಾತ್ರಿ 7:30 ರವರೆಗೆ ಆಫೀಸಿನಲ್ಲಿರಬೇಕು ಎಂಬ ನಿರೀಕ್ಷೆ ಇರುತ್ತದೆ. ದಿನದಲ್ಲಿ ಇರುವುದು ಕೇವಲ ಇಪ್ಪತ್ನಾಲ್ಕು ಗಂಟೆಗಳಾದರೂ, ನೀವು ನಿಮ್ಮ ತಂದೆತಾಯಂದಿರ, ನಿಮ್ಮ ಮಕ್ಕಳ, ನಿಮ್ಮ ಬಾಸ್‌ನ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಸಂಗಾತಿಯ ನಿರೀಕ್ಷೆಗಳನ್ನು ಪೂರೈಸಬೇಕಾದರೆ, ನಿಮಗೆ ವಾಸ್ತವದಲ್ಲಿ ದಿನಕ್ಕೆ ಅರವತ್ತು ಗಂಟೆಗಳು ಬೇಕಾಗುತ್ತವೆ. "ಈ ಹೆಚ್ಚುವರಿ ಸಮಯವನ್ನು ನಾನು ಎಲ್ಲಿಂದ ತರಲಿ?" ಎನ್ನುವುದೇ ಈಗಿರುವ ಪ್ರಶ್ನೆ.

ಸದ್ಯದಲ್ಲಿ, ನಿಮ್ಮ ಸಾಮರ್ಥ್ಯಗಳಿಗೆ ಮೀರಿದ ನಿರೀಕ್ಷೆಗಳನ್ನು ಜನರು ನಿಮ್ಮ ಮೇಲೆ ಇರಿಸಿಕೊಂಡಿದ್ದಾರೆ. ಅದನ್ನು ಶಪಿಸದಿರಿ. ಜನರು ನಿಮ್ಮಿಂದ ದೊಡ್ಡ ಸಂಗತಿಗಳನ್ನು ನಿರೀಕ್ಷಿಸುತ್ತಿರುವುದು ಒಂದು ಬಹುದೊಡ್ಡ ವರವೇ ಸರಿ. ಜನರು ನಿಮ್ಮನ್ನು ನೋಡಿ,"ಓಹ್! ಇವನಿಂದ ನಾವು ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲು ಸಾಧ್ಯವಿಲ್ಲ." ಎಂದುಕೊಂಡು, ನಿಮ್ಮಿಂದ ಯಾವುದೇ ನಿರೀಕ್ಷೆಗಳನ್ನು ಹೊಂದದೇ ಇದ್ದರೆ ಅದು ನಿಮಗೆ ಒಳ್ಳೆಯದು ಎಂದುಕೊಂಡಿದ್ದೀರೇನು? ನಿಮ್ಮ ಬಾಸ್‌ಗೆ ನಿಮ್ಮಿಂದ ಯಾವ ನಿರೀಕ್ಷೆಯೂ ಇರದಿದ್ದರೆ,ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಅವರೆಲ್ಲರೂ ನಿಮ್ಮಿಂದ ಹಲವಾರು ವಿಷಯಗಳನ್ನು ನಿರೀಕ್ಷಿಸುತ್ತಿದ್ದಾರೆ. ಇದು ನಿಮಗಿರುವ ಮಿತಿಗಳನ್ನು ಮೀರಿ ಹೋಗಲು ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಲು ಒಂದು ಸುವರ್ಣಾವಕಾಶ. ಇದರರ್ಥ ನೀವು ಎಲ್ಲರ ನಿರೀಕ್ಷೆಗಳನ್ನು ಪೂರೈಸಲು ಏನಾದರೂ ಅತ್ಯುತ್ತಮವಾದುದನ್ನು ಮಾಡುತ್ತೀರಿ ಎಂದೇ? ಅದೆಂದಿಗೂ ಸಾಧ್ಯವಿಲ್ಲ. ಆದರೆ,ಅವರೆಲ್ಲರೂ ಸಹ ನೀವು ನೀಡಬಹುದಾದಕ್ಕಿಂತ ಹೆಚ್ಚಿನದನ್ನು ನಿರಂತರವಾಗಿ ನಿಮ್ಮಿಂದ ನಿರೀಕ್ಷಿಸುತ್ತಿದ್ದರೆ, ಅದರರ್ಥ ನಿಮ್ಮ ಜೀವನ ಚೆನ್ನಾಗಿ ನಡೆಯುತ್ತಿದೆ ಎಂದು. ನಿಮ್ಮ ಅಭ್ಯುದಯವನ್ನು ಆನಂದಿಸಿ,ಅದನ್ನು ದೂಷಿಸಬೇಡಿ. ನಿಮ್ಮಿಂದ ಮಾಡಲು ಸಾಧ್ಯವಾಗುವುದನ್ನು ಅತ್ಯುತ್ತಮವಾಗಿ ಮಾಡಿ ಅಷ್ಟೆ.

ನೀವು ಯಾವುದೇ ನ್ಯೂನತೆಗಳನ್ನು ಹೊಂದಿಲ್ಲದ ಕಾರಣದಿಂದ ಜೀವನವು ಸುಂದರವಾಗುವುದಿಲ್ಲ. ಜೀವನವು ಸುಂದರವಾಗುವುದು ನೀವು ಮಾಡುವ ಎಲ್ಲವನ್ನೂ ಮನಃಪೂರ್ವಕವಾಗಿ ಮಾಡುತ್ತೀರಿ ಎಂಬ ಕಾರಣಕ್ಕಾಗಿ.

ಇದು ನಿಮ್ಮ ಚಟುವಟಿಕೆಯಲ್ಲಿ ನಿಖರವಾಗಿರುವುದರ ಬಗ್ಗೆಯಲ್ಲ. ಜೀವನದಲ್ಲಿ ನಿಖರತೆ ಎನ್ನುವಂತದ್ದೇನೂ ಇಲ್ಲ. ನಿಖರವಾಗಿ ಆಗುವ ಒಂದೇ ಒಂದು ವಿಷಯವೆಂದರೆ, ಅದು ಸಾವು. ನೀವು ನಿಖರತೆಯನ್ನು ಬಯಸಿದರೆ, ಅರಿವಿಲ್ಲದಂತೆಯೇ ನೀವು ಸಾವನ್ನು ಹುಡುಕುತ್ತಿರುತ್ತೀರಿ. ಜೀವನದಲ್ಲಿ ನಿಖರತೆಯನ್ನು ಅರಸಬೇಡಿ. ನೀವು ಯಾವುದೇ ನ್ಯೂನತೆಗಳನ್ನು ಹೊಂದಿಲ್ಲದ ಕಾರಣದಿಂದ ಜೀವನವು ಸುಂದರವಾಗುವುದಿಲ್ಲ. ಜೀವನವು ಸುಂದರವಾಗುವುದು ನೀವು ಮಾಡುವ ಎಲ್ಲವನ್ನೂ ಮನಃಪೂರ್ವಕವಾಗಿ ಮಾಡುತ್ತೀರಿ ಎಂಬ ಕಾರಣಕ್ಕಾಗಿ. ಜೀವನವು ಎಂದಿಗೂ ಅತ್ಯುತ್ತಮವಾಗುವುದಿಲ್ಲ, ಏಕೆಂದರೆ ನೀವೀಗ ಎಂಥದ್ದೇ ರೀತಿಯಲ್ಲಾದರೂ ಕಾರ್ಯನಿರ್ವಹಿಸುತ್ತಲಿರಿ, ಆದರೆ ಅದನ್ನು ನೀವು ಇನ್ನೂ ಸ್ವಲ್ಪ ಉತ್ತಮವಾಗಿ ಮಾಡಬಹುದು, ಅಲ್ಲವೇ? ಆದ್ದರಿಂದ ಇಲ್ಲಿ ಅತ್ಯುತ್ತಮ ಎನ್ನುವ ಪ್ರಶ್ನೆಯಿಲ್ಲ. ದೊಡ್ಡ ನಿರೀಕ್ಷೆಗಳಿರುವಾಗ ಮಾತ್ರ, ನೀವು ನಿಮ್ಮ ಮಿತಿಗಳನ್ನು ಮೀರಿ ವಿಸ್ತರಿಸಿ ಹೋಗುತ್ತೀರಿ. ನೀವು ವಿಸ್ತರಿಸಿಕೊಳ್ಳಬಹುದು ಎಂದಾದರೆ, ನೀವಿನ್ನೂ ನಿಮ್ಮ ಮಿತಿಯನ್ನು ತಲುಪಿಲ್ಲ ಎಂದರ್ಥ. ಯಾವುದೇ ನಿರೀಕ್ಷೆಗಳು ಇಲ್ಲದೇ ಹೋದರೆ, ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಎಂದಿಗೂ ಕಂಡುಕೊಳ್ಳುವುದಿಲ್ಲ.

ಯಾರ ನಿರೀಕ್ಷೆಗಳೂ ಇಲ್ಲದೆಯೇ ನಿಮ್ಮನ್ನು ನೀವು ನಿಮ್ಮ ಪರಮ ಮಿತಿಗೆ ವಿಸ್ತರಿಸಿಕೊಳ್ಳಲು ಸಂಪೂರ್ಣವಾಗಿ ಬೇರೆಯದ್ದೇ ರೀತಿಯ ಪ್ರಜ್ಞೆ ಮತ್ತು ಜಾಗೃತಿಯ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ನಿಮ್ಮೊಳಗಿನ ಬೇರೆ ಒಂದು ಅಂಶ ಬೇಕಾಗುತ್ತದೆ. ಸದ್ಯಕ್ಕೆ ನೀವು ಹಾಗಿಲ್ಲ. ಜನರ ನಿರೀಕ್ಷೆಗಳಿಂದ ಮಾತ್ರ ನೀವು ಮುನ್ನಡೆಯುತ್ತಿದ್ದೀರಿ. ಹಾಗಾಗಿ ಅವರು ನಿಮ್ಮಿಂದ ದೊಡ್ಡ ದೊಡ್ಡ ವಿಷಯಗಳನ್ನು ನಿರೀಕ್ಷಿಸಲು ಬಿಡಿ. ನೀವು ಪರಿಸ್ಥಿತಿಗಳನ್ನು ನಿಮ್ಮ ಕೈಲಾದ ಮಟ್ಟಕ್ಕೆ ನಿಭಾಯಿಸಿ. ಕೆಲವೊಂದು ಸಂಗತಿಗಳು ಯಾವಾಗಲೂ ನಿಮ್ಮ ನಿಯಂತ್ರಣದಿಂದ ಹೊರಗಿರುತ್ತವೆ. ನೀವು ಹೆಚ್ಚು ಹೆಚ್ಚು ವಿಷಯಗಳಲ್ಲಿ ತೊಡಗಿಸಿಕೊಂಡಂತೆಲ್ಲಾ, ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ವಿಷಯಗಳು ತಪ್ಪಾಗುತ್ತವೆ. ಆದರೆ ಅದಕ್ಕಿಂತ ಹೆಚ್ಚು ವಿಷಯಗಳು ಸರಿಯಾಗಿ ನಡೆಯುತ್ತವೆ. ಯಾವುದನ್ನಾದರೂ ಪೂರೈಸುವೆನೋ ಇಲ್ಲವೋ ಎಂಬ ಪರಿಭಾಷೆಯಲ್ಲಿ ನೀವು ನಿಮ್ಮ ಜೀವನದ ಗುಣಮಟ್ಟ ಅಥವಾ ನಿಮ್ಮ ಜೀವನದ ಯಶಸ್ಸನ್ನು ಅಳೆಯಬಾರದು. ನಿಮ್ಮನ್ನು ನೀವು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದೀರೇ ಎನ್ನುವುದರ ಮೇಲೆ ಅದನ್ನು ಅಳೆಯಬೇಕು. ನಿಮ್ಮ ಸಾಮರ್ಥ್ಯ, ಪರಿಸ್ಥಿತಿಗಳು ಮತ್ತು ಇನ್ನಿತರೆ ಸಂಗತಿಗಳು ಹೇಗೆ ಕೂಡಿಬರುತ್ತವೆ ಎನ್ನುವುದಕ್ಕನುಸಾರವಾಗಿ ಏನಾಗಬೇಕೋ ಅದು ಆಗುತ್ತದೆ. ಅದರಲ್ಲಿ ಅನೇಕ ವಿಷಯಗಳು ಒಳಗೊಂಡಿರುತ್ತವೆ. ಆದರೆ ನಿಮ್ಮ ಜೀವನದಲ್ಲಿ ನಿಮಗೇನು ಮುಖ್ಯವೋ ಅದಕ್ಕಾಗಿ ನಿಮ್ಮನ್ನು ನೀವು ನೂರಕ್ಕೆ ನೂರರಷ್ಟು ಸಮರ್ಪಿಸಿಕೊಂಡಿದ್ದೀರೇ? ಅದೇ ಪ್ರಶ್ನೆ.

ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿರುವಂತದ್ದೇನನ್ನೂ ನೀವು ಕೈಗೆತ್ತಿಕೊಂಡಿಲ್ಲ. ನೀವೇನಿದ್ದರೂ ಕೆಲಸಕ್ಕೆ ಹೋಗುತ್ತೀರಿ, ನಿಮ್ಮ ಕುಟುಂಬವನ್ನು ನಿರ್ವಹಿಸುತ್ತೀರಿ - ಇದು ಕೇವಲ ಬದುಕುಳಿಯುವಿಕೆ ಅಷ್ಟೆ, ಅದೇನೂ ಅಂತಹ ದೊಡ್ಡ ವಿಷಯವಲ್ಲ. ಇದನ್ನು ಮಾಡಲು ವಿಶೇಷವಾದದ್ದೇನೂ ಬೇಕಿಲ್ಲ. ಆದರೆ, ಬಹಳಷ್ಟು ಜನರು ಇದನ್ನು ತಮ್ಮ ಜೀವಿತಾವಧಿಯ ಪ್ರಯಾಸವನ್ನಾಗಿಸಿಕೊಂಡಿದ್ದಾರೆ. ಅವರ ಇಡೀ ಜೀವನದ ಉದ್ದೇಶ ಹೊಟ್ಟೆಪಾಡಿಗಾಗಿ ಕೆಲಸ ಮಾಡಿ ಹೇಗೋ ಒಂದು ಬದುಕುಳಿಯುವುದೇ ಆಗಿದೆ. ಅದು ಹಾಗೆಯೇ ಇರಬೇಕು ಎಂದೇನಿಲ್ಲ. ಒಬ್ಬ ಮನುಷ್ಯ ಇದಕ್ಕಿಂತ ಬಹಳಷ್ಟು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾನೆ. ಈ ಸಾಮರ್ಥ್ಯವು ಅಭಿವ್ಯಕ್ತವಾಗಬೇಕಾದರೆ, ನಿಮ್ಮ ಮನಸ್ಸು ಸಾಕಷ್ಟು ತಿಳಿಯಾಗಬೇಕು. ಇದನ್ನು ಮಾಡಲು ಸರಳ ಸಾಧನ ಮತ್ತು ಅಭ್ಯಾಸಗಳಿವೆ. ಅವುಗಳನ್ನು ನೀವು ನಿಶ್ಚಿತ ಅವಧಿಯವರೆಗೆ ಮಾಡಿದರೆ, ನಿಮ್ಮ ಮನಸ್ಸು ತಿಳಿಯಾಗುವುದನ್ನು ನೀವೇ ನೋಡುತ್ತೀರಿ ಮತ್ತು ನೀವು ಯಾವುದೇ ವಿಷಯಗಳನ್ನು ಸ್ಪಷ್ಟವಾಗಿ ನೋಡಬಲ್ಲವರಾಗುತ್ತೀರಿ, ಏಕೆಂದರೆ ಇದು ನಿಮ್ಮ ಸಾಮರ್ಥ್ಯದಿಂದಾಚೆಗೆ ಇರುವಂತದ್ದಲ್ಲ. ಇದು ನೀವು ಮಾಡಬಹುದಾದಂತಹ ವಿಷಯವಾಗಿದ್ದು ಅದನ್ನು ನಿಮಗಾಗಿ ಸಾಧ್ಯವಾಗಿಸಿಕೊಳ್ಳಲು ನೀವು ಬದ್ಧರಾಗಬೇಕು. 

ಈ ಲೇಖನವು "Ambition to Vision" ಎಂಬ ಪುಸ್ತಕದಿಂದ ಆಯ್ದ ಭಾಗವಾಗಿದೆ. ಈ ಪುಸ್ತಕವನ್ನು ಖರೀದಿಸಿ ಮತ್ತು ಡೌ‌ನ್‌ಲೋಡ್ ಮಾಡಿ ishadownloads.com