ಪ್ರಶ್ನೆ: ನನ್ನ ಕನಸುಗಳ ಬೆನ್ನಟ್ಟಲು, ನಾನು ಕೆಲವು ಬಾರಿ, ಕೆಲವು ನಿಯಮಗಳನ್ನು ಮುರಿಯಬೇಕಾಗುತ್ತದೆ. ಆದರೆ ನಾನದನ್ನು, ನನ್ನ ಹೆತ್ತವರಿಗೆ ಅಥವಾ ಪ್ರೀತಿಪಾತ್ರರಿಗೆ ಅವಮಾನವಾಗುವ ಅಥವಾ ಅಗೌರವವನ್ನು ತರುವ ವೆಚ್ಚದಲ್ಲಿ ಮಾಡಲು ಬಯಸುವುದಿಲ್ಲ. ನನ್ನ ತಂದೆತಾಯಿಗಳಿಗೆ ವಿಧೇಯಳಾದ ಮಗಳಾಗಿದ್ದೇ, ನನ್ನ ಸ್ವಂತ ನಿಯಮಗಳ ಅನುಸಾರವಾಗಿ ಬದುಕುವ ಸ್ವತಂತ್ರ ಮಹಿಳೆಯಾಗುವುದು ಹೇಗೆ ಎಂಬುದನ್ನು ನಾನು ತಿಳಿಯಬೇಕು.

ಸದ್ಗುರು: ನೀವು ಹೇಳುತ್ತಿರುವುದು ಏನೆಂದರೆ: “ನನಗೆ ಬೇಕಾಗಿರುವುದನ್ನು ನಾನು ಮಾಡಲು ಬಯಸುತ್ತೇನೆ, ಮತ್ತು ನಾನದನ್ನು ಎಲ್ಲರ ಒಪ್ಪಿಗೆ ಪಡೆದು ಮಾಡಲು ಬಯಸುತ್ತೇನೆ, ಮತ್ತು ಅದಕ್ಕಾಗಿ ನಾನು ಯಾವ ಬೆಲೆಯನ್ನೂ ತೆರಲು ಸಿದ್ಧವಿಲ್ಲ.” ಜೀವನ ಈ ರೀತಿಯಾಗಿ ನಡೆಯುವುದಿಲ್ಲ. ನಮಗೆ ನಿಜವಾಗಿಯೂ ಬೇಕಾಗಿರುವುದನ್ನು ನಾವು ಮಾಡಿದಾಗ, ಅದಕ್ಕೆ ಒಂದು ಬೆಲೆ ನಿಗದಿಯಾಗಿರುತ್ತದೆ. ಜೀವನದ ಸ್ವರೂಪವೇ ಹೀಗೆ. ನೀವು ಮಾಡುವ ಎಲ್ಲಾ ಕೆಲಸಕ್ಕೂ ಸಹ ಒಂದು ಬೆಲೆ ಅಥವಾ ಕರವನ್ನು ತೆರಬೇಕಾಗುತ್ತದೆ. ಎಷ್ಟು ಬೆಲೆ ಅಥವಾ ಯಾವ ಮಟ್ಟದಲ್ಲಿ ಕರವನ್ನು ತೆರಬೇಕು ಎನ್ನುವುದು ನಿಮ್ಮ ಉದ್ದೇಶ ಎಷ್ಟು ಕ್ರಾಂತಿಕಾರಿಯಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 

 

“ನನ್ನ ಕನಸುಗಳನ್ನು ನನಸಾಗಿಸಬೇಕು, ಆದರೆ ನನ್ನ ತಂದೆ, ನನ್ನ ತಾಯಿ......” ಹೀಗೆ ಯೋಚಿಸುವುದು ಅವಾಸ್ತವಿಕ. ಅವರು ನಿಮಗೆ ಜನ್ಮ ನೀಡಿ, ನಿಮ್ಮನ್ನು ಈ ಜಗತ್ತಿಗೆ ಕರೆತಂದಿರುವುದಕ್ಕೆ ನಿಮಗೆ ಸಂತೋಷವಿರಬೇಕು. ಅದರಿಂದ ಹೊರತಾಗಿ ಯಾವ ದೂರನ್ನೂ ಹೇಳಬೇಡಿ. ನಿಮ್ಮ ತಂದೆತಾಯಿಗೆ ಏನು ಉತ್ತಮವಾಗಿ ತಿಳಿದಿದೆಯೋ ಅದನ್ನವರು ಮಾಡುತ್ತಿದ್ದಾರೆ. ನಿಮಗೆ ಅವರಿಗಿಂತ ಏನಾದರು ಉತ್ತಮವಾದದ್ದು ತಿಳಿದಿದೆಯೆಂದು ನಿಮಗೆ ನಂಬಿಕೆಯಿದ್ದರೆ, ಮೊದಲನೆಯದಾಗಿ ಅವರಿಗೆ ಅದನ್ನು ಮನವರಿಕೆ ಮಾಡಿಕೊಡಲು ನಿಮಗೆ ಸಾಧ್ಯವಾಗಬೇಕು.

ನಿಮಗೆ ಬೇಕಾಗಿರುವುದನ್ನು ನೀವು ಮಾಡಬೇಕು ಆದರೆ ಅದಕ್ಕೆ ಯಾವ ಬೆಲೆಯನ್ನೂ ಕಟ್ಟದಂತಿರಬೇಕು, ಆ ತರಹದ ಜೀವನ ಎಲ್ಲಿಯೂ ಇಲ್ಲ – ಇಲ್ಲಿಯೂ ಇಲ್ಲ, ಎಲ್ಲಿಯೂ ಇಲ್ಲ.

ಆದರೆ, ಒಂದು ವೇಳೆ ನಿಮ್ಮ ಆಲೋಚನೆ ಹಾಗೂ ವಿಚಾರಗಳನ್ನು ಗ್ರಹಿಸಲು ಅವರಿಗೆ ಸಾಧ್ಯವಾಗದೇ ಇದ್ದರೆ, ಅವರಿಗದು ಮನದಟ್ಟಾಗುವುದಿಲ್ಲ. ಆಗ ನಿಮ್ಮ ಆಸೆ, ಕನಸುಗಳು ಎಷ್ಟು ತೀವ್ರವಾಗಿವೆ ಎನ್ನುವುದರ ಮೇಲೆ ನೀವೇನು ಮಾಡುತ್ತೀರಿ ಎನ್ನುವುದು ನಿರ್ಧಾರವಾಗುತ್ತದೆ. ನಿಮ್ಮ ಕನಸುಗಳಿಗೆ ನಿಮ್ಮ ತಂದೆತಾಯಿಗಳ ನಿಯಮಗಳನ್ನು ಮೀರಿ ಹೋಗುವಷ್ಟು ಮೌಲ್ಯವಿದೆಯೇ? ಹೌದೆಂದು ನೀವು ನಿರ್ಧರಿಸಿದರೆ – ನೀವು ಹೇಗಿದ್ದರೂ ಸಹ ಅದನ್ನು ಮಾಡಬೇಕೆಂದು ಬಯಸಿದರೆ, ನೀವದಕ್ಕೆ ಎಷ್ಟೇ ಬೆಲೆ ಕಟ್ಟಬೇಕಿದ್ದರೂ, ಅದನ್ನು ಮಾಡುತ್ತೀರಿ, ಆದರೆ ಅದಕ್ಕೆ ಬೆಲೆಯಂತು ಇದ್ದೇ ಇರುತ್ತದೆ. ನಿಮಗೆ ಬೇಕಾಗಿರುವುದನ್ನು ನೀವು ಮಾಡಬೇಕು ಆದರೆ ಅದಕ್ಕೆ ಯಾವ ಬೆಲೆಯನ್ನೂ ಕಟ್ಟದಂತಿರಬೇಕು, ಆ ತರಹದ ಜೀವನ ಎಲ್ಲಿಯೂ ಇಲ್ಲ – ಇಲ್ಲಿಯೂ ಇಲ್ಲ, ಎಲ್ಲಿಯೂ ಇಲ್ಲ. 

ಸಂಪಾದಕರ ಟಿಪ್ಪಣಿ: Read this article, ಈ ಲೇಖನದಲ್ಲಿ ಸದ್ಗುರುಗಳು ಸಂಸಾರದಲ್ಲಿನ ತೊಂದರೆಗಳು ಮತ್ತು ಪಾಲಕರ ನಡುವಿನ ಭಿನ್ನಾಭಿಪ್ರಾಯ, ಮಕ್ಕಳು ಮತ್ತು ಒಡಹುಟ್ಟಿದವರನ್ನು ನಿಭಾಯಿಸುವುದರ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾರೆ ಮತ್ತು ಈ “ಕದನ ಭೂಮಿ”ಯು ಹೇಗೆ ಪರಿವರ್ತನೆಯ ಕಡೆಗೆ ಒಂದು ಸಾಧ್ಯತೆಯಾಗಬಹುದು ಎಂಬುದನ್ನು ಅವರು ಅವಲೋಕಿಸುತ್ತಾರೆ.