ಕರ್ನಾಟಕದ ನಂಜನಗೂಡಿನ ಬಳಿಯಿದ್ದ ಮಲ್ಲ ಎಂಬ ಒಬ್ಬ ಕಳ್ಳನ ಕುತೂಹಲಕಾರಿ ಕಥೆಯನ್ನು ಸದ್ಗುರುಗಳು ಹೇಳುತ್ತಾರೆ. ಕಳ್ಳನಾಗಿದ್ದರೂ ಹೇಗೆ ಅವನು ನಿಜದಲ್ಲಿ ಶಿವನ ಖೈದಿಯಾಗಿದ್ದ ಒಬ್ಬ ಭಕ್ತನಾಗಿದ್ದನು ಎಂಬುದನ್ನು ಅವರಿಲ್ಲಿ ವಿವರಿಸುತ್ತಾರೆ

ಸದ್ಗುರು: ನಾನು ಹುಟ್ಟಿದ ಸ್ಥಳಕ್ಕೆ ಬಹಳ ಹತ್ತಿರದಲ್ಲಿದ್ದ ಓರ್ವ ಯೋಗಿಯ ಬಗ್ಗೆ ಹೇಳುತ್ತೇನೆ ಕೇಳಿ. ನಾನು ಈ ವ್ಯಕ್ತಿ ಮತ್ತು ಅಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಕೇಳಿದ್ದೆ, ಆದರೆ ಯುವಕನಾಗಿ ನಾನು ಅದಕ್ಕೆ ಹೆಚ್ಚು ಗಮನ ಕೊಡಲಿಲ್ಲ. ಅದು ನನಗೆ ಒಂದು ರೀತಿಯ ರೋಮಾಂಚನವನ್ನು ನೀಡಿತು, ಆದರೆ ಆ ಸಮಯದಲ್ಲಿ ನಾನದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಿಲ್ಲ.

ಮೈಸೂರುನಿಂದ ಸುಮಾರು 16 ಕಿ.ಮೀ ದೂರದಲ್ಲಿರುವ, ಈಗ ಸುಪ್ರಸಿದ್ಧವಾಗಿರುವ ನಂಜನಗೂಡಿನ ಹೊರವಲಯದಲ್ಲಿ ಒಬ್ಬ ಭಕ್ತನು ವಾಸವಿದ್ದನು. ಅವನ ಹೆಸರು ಮಲ್ಲ. ಮಲ್ಲ ಯಾವುದೇ ಸಂಪ್ರದಾಯಕ್ಕೆ ಸೇರಿದವನಲ್ಲ ಅಥವಾ ಅವನಿಗೆ ಯಾವುದೇ ಔಪಚಾರಿಕ ಪೂಜೆ ಅಥವಾ ಧ್ಯಾನ ತಿಳಿದಿರಲಿಲ್ಲ. ಆದರೆ ತನ್ನ ಬಾಲ್ಯದಿಂದಲೇ, ಅವನು ತನ್ನ ಕಣ್ಣುಗಳನ್ನು ಮುಚ್ಚಿದರೆ, ಅವನಿಗೆ ಕಾಣುತ್ತಿದದ್ದು ಕೇವಲ ಶಿವನ ರೂಪ ಮಾತ್ರ. ಬಹುಶಃ ಭಕ್ತ ಎನ್ನುವ ಪದ ಅವನನ್ನು ವರ್ಣಿಸಲು ಸಾಲುವುದಿಲ್ಲ. ಅವನಂತೆಯೇ ಈ ಜಗತ್ತಿನಲ್ಲಿ ಲಕ್ಷಾಂತರ ಜನರಿದ್ದಾರೆ. ಅವರೆಲ್ಲಾ ಶಿವನ ಖೈದಿಗಳಾಗಿದ್ದಾರೆ. ಅವರಿಗೆ ಯಾವುದೇ ಆಯ್ಕೆಗಳಿಲ್ಲ. ಬಹುಶಃ ನಾನು ಸಹ ಅವನ ಬಲೆಗೆ ಸಿಕ್ಕಿಹಾಕಿಕೊಂಡವನೇ. ನಾವು ಆತನನ್ನು ಅರಸಿಕೊಂಡು ಹೋಗಲಿಲ್ಲ - ನಾವು ಏನನ್ನಾದರೂ ಹುಡುಕಲು ತೀರಾ ಜಂಬದವರು, ಆದರೆ ಶಿವನ ಪಾಶಕ್ಕೆ ಸಿಕ್ಕಿಬಿದ್ದವರು. ಶಿವ ಒಬ್ಬ ಬೇಟೆಗಾರನಾಗಿದ್ದ. ಅವನು ಕೇವಲ ಪ್ರಾಣಿಗಳನ್ನಷ್ಟೇ ಅಲ್ಲ, ಮನುಷ್ಯರನ್ನೂ ಕೂಡಾ ಬಲೆಗೆ ಬೀಳಿಸಿದ್ದಾನೆ. ಅದರಲ್ಲಿ ಈ ಮಲ್ಲನೂ ಒಬ್ಬ.

ಮಲ್ಲನಿಗೆ ಶಿವನನ್ನು ಬಿಟ್ಟು ಬೇರಿನ್ನೇನೂ ತಿಳಿದಿರಲಿಲ್ಲ ಮತ್ತು ಅವನು ಒರಟನಾಗಿ ಬೆಳೆದನು - ಅವನು ಯಾವುದೇ ನಿರ್ದಿಷ್ಟವಾದ ವ್ಯಾಪಾರ ಅಥವಾ ಕಲೆಯನ್ನು ಕಲಿಯಲಿಲ್ಲ. ಯಾರನ್ನಾದರೂ ತಡೆದು ನಿಲ್ಲಿಸಿ ಅವನಿಗೆ ಬೇಕಾಗಿದ್ದನ್ನು ಅವರಿಂದ ತೆಗೆದುಕೊಳ್ಳುವುದು ತಪ್ಪು ಎಂದವನಿಗೆ ಅನ್ನಿಸಲೇ ಇಲ್ಲ. ಆದ್ದರಿಂದ ಅವನು ಅದನ್ನೇ ಮುಂದುವರಿಸುತ್ತ ಒಬ್ಬ ಡಕಾಯಿತನೆಂಬ ಕುಖ್ಯಾತಿಯನ್ನು ಪಡೆದನು.

ಜನರು ಬಳಸುತ್ತಿದ್ದ ಕಾಡಿನ ದಾರಿಯಲ್ಲಿ ಅವನು ವ್ಯವಸ್ಥಿತವಾದ ಡಕಾಯಿತನಾದ. ಅವನು ತನ್ನ ಸುಂಕವನ್ನು ಸಂಗ್ರಹಿಸಲು ಬಳಸುತ್ತಿದ್ದ ಸ್ಥಳವು "ಕಳ್ಳನ ಮೂಲೆ" ಎಂದು ಕರೆಯಲ್ಪಟ್ಟಿತು. ಆರಂಭದಲ್ಲಿ ಜನರು ಅವನನ್ನು ಶಪಿಸಿದರು, ಆದರೆ ವರ್ಷದ ಕೊನೆಯಲ್ಲಿ, ಅವನು ಜನರಿಂದ ಸಂಗ್ರಹಿಸಿದ ಪ್ರತಿಯೊಂದು ಪೈಸೆಯನ್ನೂ ಸಹ ಮಹಾಶಿವರಾತ್ರಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಖರ್ಚು ಮಾಡುತ್ತಿದ್ದನು. ಆದ್ದರಿಂದ ಕೆಲವು ವರ್ಷಗಳ ನಂತರ ಜನ ಅವನನ್ನು ಒಬ್ಬ ಮಹಾನ್ ಶಿವ ಭಕ್ತನನ್ನಾಗಿ ಗುರುತಿಸಿ, ತಮ್ಮ ಸ್ವಪ್ರೇರಣೆಯಿಂದ ದೇಣಿಗೆ ನೀಡಲು ಶುರುಮಾಡಿದರು. ಏನನ್ನೂ ನೀಡದ ಜನರನ್ನು ಪ್ರೋತ್ಸಾಹಿಸಲು ಅವನು ಹಿಂದೆ ಮುಂದೆ ನೋಡುತ್ತಿರಲಿಲ್ಲ...

ನಂತರ, ಸಹೋದರರಾಗಿದ್ದ ಇಬ್ಬರು ಯೋಗಿಗಳು ಅವನಿದ್ದ ದಾರಿಯಲ್ಲಿ ಬಂದರು, ಮತ್ತು ಡಕಾಯಿತನಾಗಿದ್ದರೂ ಒಬ್ಬ ಅಸಾಧಾರಣ ಭಕ್ತನಾಗಿದ್ದ ಅವನನ್ನು ನೋಡಿದರು. "ನಿನ್ನ ಭಕ್ತಿ ಅದ್ಭುತವಾದದ್ದು, ಆದರೆ ನಿನ್ನ ಮಾರ್ಗಗಳು ಜನರನ್ನು ನೋಯಿಸುತ್ತಿವೆ" ಎಂದವರು ಅವನಿಗೆ ಹೇಳಿದರು. ಅದಕ್ಕವನು "ನಾನು ಶಿವನಿಗಾಗಿಯೇ ಇದನ್ನೆಲ್ಲಾ ಮಾಡುತ್ತಿದ್ದೇನೆ, ಇದರಲ್ಲೇನು ಸಮಸ್ಯೆ?" ಎಂದು ಕೇಳಿದನು. ಅವರು ಅವನಿಗೆ ಮನವರಿಕೆ ಮಾಡಿಸಿ, ಅವನನ್ನು ಇತರ ವ್ಯವಸ್ಥೆಗಳಿಗೆ ಪರಿಚಯಿಸಿದರು ಮತ್ತು ಅವನಿದ್ದ ಸ್ಥಳವನ್ನು “ಕಳ್ಳನ ಮೂಲೆ”ಯಿಂದ “ಮಲ್ಲನ ಮೂಲೆ”ಗೆ ಮರುನಾಮಕರಣ ಮಾಡಿದರು. ಇಂದಿಗೂ ಅದನ್ನು ಮಲ್ಲನ ಮೂಲೆ ಎಂದು ಕರೆಯಲಾಗುತ್ತದೆ. ಮತ್ತು ಅವನು ಅಲ್ಲಿ ಆಚರಿಸುತ್ತಿದ್ದ ಮಹಾಶಿವರಾತ್ರಿಯು ಈಗ ಮಲ್ಲನ ಮೂಲೆ ಮಠ ಎಂಬ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.

ಇದಾದ ಸುಮಾರು ಒಂದೂವರೆ ವರ್ಷಗಳಲ್ಲಿ ಅವನು ತನ್ನ ಡಕಾಯಿತಿಯನ್ನು ತೊರೆದು ಆ ಯೋಗಿಗಳೊಂದಿಗೆ ಕುಳಿತನು ಹಾಗೂ ಮಹಾಸಮಾಧಿಯನ್ನು ಹೊಂದಿದನು. ಈ ರೀತಿ ಅವನನ್ನು ಬಿಡುಗಡೆ ಮಾಡಿದ ನಂತರ, ಆ ಇಬ್ಬರು ಯೋಗಿಗಳೂ ಕೂಡ ಅದೇ ದಿನದಂದು ತಮ್ಮ ದೇಹವನ್ನು ತೊರೆದರು. ಅವರಿಗಾಗಿ ಕಬಿನಿ ನದಿಯ ದಂಡೆಯ ಮೇಲೆ ಮಲ್ಲನ ಮೂಲೆ ಎಂದು ಕರೆಯಲ್ಪಡುವ ಬಹಳ ಸುಂದರವಾದ ದೇವಾಲಯವನ್ನು ಇಂದು ನಿರ್ಮಿಸಲಾಗಿದೆ.

ಸಂಪಾದಕರ ಟಿಪ್ಪಣಿ: "ಹಿಮಾಲಯನ್ ಲಸ್ಟ್" ಎಂಬ ಪುಸ್ತಕದಲ್ಲಿ ಸದ್ಗುರುಗಳ ಜೊತೆ ಪಯಣಿಸಿ. ಹಿಮಾಲಯದ ಯಾತ್ರೆಯ ಸಮಯದಲ್ಲಿ ಸದ್ಗುರುಗಳು ನೀಡಿದ ಉಪನ್ಯಾಸಗಳನ್ನು ಈ ಪುಸ್ತಕ ಹೊಂದಿದೆ. ಈಶ ಡೌನ್‌ಲೋಡ್ ‌ನಲ್ಲಿ ಇಬುಕ್ ಅನ್ನು ಖರೀದಿಸಿ.