"ಮಾಟಿ ಕಹೆ ಕುಮ್ಹಾರ್ ಕೋ - ಕಬೀರರ ಪದ್ಯ"

 

 

 “ಮಾಟಿ ಕಹೆ ಕುಮ್ಹಾರ್ ಕೋ , ತು ಕ್ಯಾ ರೂಂದೆ ಮೋಹೇ " 

ಏಕ್ ದಿನ್ ಐಸಾ ಆಯೇಗಾ, ಮೈ ರೂಂಧೂಂಗಿ  ತೊಹೆ

ಆಯೆ ಹೈ ಸೋ ಜಾಯೆಂಗೆ , ರಾಜ ರಂಕ್  ಫಕೀರ್

ಏಕ್ ಸಿಂಹಾಸನ್ ಚಡ್ ಚಲೇ, ಏಕ್ ಬಂಧೇ ಝಂಜೀರ್

ಕಬೀರರ ಸತ್ಯವನ್ನು ಕಳೆದುಕೊಂಡಿರುವುದು 

ಸಧ್ಗುರು : ಇಂದು ಕಬೀರರ ಜಯಂತಿ. ವೃತ್ತಿಯಿಂದ ಕಬೀರರು ಒಬ್ಬ ನೇಕಾರರಾಗಿದ್ದರು -  ಅನುಭಾವಿ ಕವಿಯಾದ ಅವರು ಇಂದಿಗೂ ತಮ್ಮ ಹಲವಾರು ಕವನಗಳ ಮೂಲಕ ಜೀವಂತವಾಗಿದ್ದಾರೆ.  ಅವರು ಬರೆದ ಅಥವಾ ಹಾಡಿದ ಕಾವ್ಯವು ಅವರ ಜೀವನದ ಸಣ್ಣ ಭಾಗವಾಗಿತ್ತಷ್ಟೆ.  ಬಹುತೇಕ ಸಮಯ ಅವರು ಬಟ್ಟೆ ನೇಯುತ್ತಿರುತ್ತಿದ್ದರು.   ಈಗ ಕೇವಲ ಕವಿತೆಗಳು ಮಾತ್ರ ಇರುವುದರಿಂದ, ಜನರು ಅವರು ಮಾಡಿದ್ದು ಅಷ್ಟೇ ಎಂದು ಭಾವಿಸಿಕೊಳ್ಳುತ್ತಾರೆ.  ಇಲ್ಲ, ಅವರ ಜೀವನ ನೇಯ್ಗೆಯೊಂದಿಗೆ ಗಾಢವಾಗಿ ಸಂಭಂದಿಸಿತ್ತು, ಕಾವ್ಯದೊಂದಿಗಲ್ಲ. ಬಟ್ಟೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ, ಆದರೆ ಆಗಾಗ ಅಲ್ಲಲ್ಲಿ, ಒಂದು ಕವಿತೆ ಅಥವಾ ಪದ್ಯ ಇನ್ನೂ ಜೀವಂತವಿದೆ. ಎಷ್ಟೊಂದು ಪದ್ಯಗಳು ಕಳೆದುಹೋಗಿವೆಯೋ ನನಗೆ ಗೊತ್ತಿಲ್ಲ, ಆದರೆ ಈಗ ಲಭ್ಯವಿರುವುವು ಅತ್ಯದ್ಭುತವಾಗಿವೆ

ಅವರು ಅಷ್ಟೊಂದು ಅದ್ಭುತ ಮನುಷ್ಯರಾಗಿದ್ದರೂ ನಮಗೆ ಅವರ ಕಾವ್ಯವನ್ನು ಬಿಟ್ಟರೆ ಹೆಚ್ಚೇನೂ ಗೊತ್ತಿಲ್ಲ. ಖಂಡಿತವಾಗಿಯೂ ಅವರೊಬ್ಬ ಅಗಾಧವಾದ ಅನುಭವವುಳ್ಳ ವ್ಯಕ್ತಿ, ಅದರಲ್ಲೇನೂ ಸಂಶಯವಿಲ್ಲ. ಆದರೆ ಅವರ ಅನುಭಾವ, ವಿವೇಕ, ಅಥವಾ ಅವರು ಜನರಿಗೆ ನೀಡಲು ಬಯಸಿದ ಸ್ಪಷ್ಟತೆಯ ಹೊಸ ದೃಷ್ಟಿಕೋನ ಯಾವುದೂ ಅವರ ದೇಹತ್ಯಾಗದ ಸಮಯದವರೆಗೂ ಮತ್ತು ನಂತರವೂ ಜನರಿಗೆ ಮುಖ್ಯವಾಗಲೇ ಇಲ್ಲ.  ಜನರಿಗೆ ಕೇವಲ ಅವರು ಹಿಂದುವೋ ಅಥವಾ ಮುಸಲ್ಮಾನನೋ ಎಂಬುದಷ್ಟೇ ಮುಖ್ಯವಾಗಿತ್ತು.  ಅದೇ ಮುಖ್ಯವಾದ ಪ್ರಶ್ನೆಯಾಗಿತ್ತು.  ನಿಮಗೆ ಗೊತ್ತಿಲ್ಲದಿದ್ದರೆ, ನಾನು ನಿಮಗೆ ಒಂದು ಅತ್ಯಂತ ಮುಖ್ಯವಾದ ವಿಷಯವನ್ನು ಹೇಳುತ್ತೇನೆ ಕೇಳಿ: ಯಾರೂ ಹಿಂದೂ ಅಥವಾ ಮುಸ್ಲಿಮನಾಗಿ ಅಥವಾ ಇನ್ನೇನೋ ಆಗಿ ಹುಟ್ಟುವುದಿಲ್ಲ.  ಯಾರೂ ಹಿಂದೂ, ಅಥವಾ ಮುಸ್ಲಿಂ ಅಥವಾ ಬೇರೇನೋ ಆಗಿ ಸಾಯುವುದಿಲ್ಲ.  ಆದರೆ ನಾವು ಇಲ್ಲಿರುವಾಗ, ಒಂದು ದೊಡ್ಡ ಸಾಮಾಜಿಕ ನಾಟಕ ನಡೆಯುತ್ತಿರುತ್ತದೆ.

ನೀವು ಮಾಡಿಕೊಂಡಿರುವ ಎಲ್ಲವೂ - ನಿಮ್ಮ ಬಗ್ಗೆ ನಿಮಗಿರುವ ಭಾವನೆಗಳು, ನಿಮ್ಮ ಮತಧರ್ಮ, ಯಾವುದು ನಿಮ್ಮದು, ಯಾವುದು ನಿಮ್ಮದಲ್ಲ - ಎಲ್ಲವೂ ಅಸತ್ಯವಾಗಿದೆ. ಸತ್ಯ ಇಲ್ಲೇ ಇದೆ ; ನೀವು ಅದಕ್ಕಾಗಿ ಏನನ್ನೂ ಮಾಡಬೇಕಾಗಿಲ್ಲ. ನಾವೆಲ್ಲಾ ಅಸ್ತಿತ್ವದಲ್ಲಿರುವುದು ಈ ಸತ್ಯದ ಮಡಿಲಲ್ಲೇ. ಸತ್ಯವೆಂದರೆ ನೀವು ನುಡಿಯುವುದಲ್ಲ; ಸತ್ಯವೆಂದರೆ ಈ ಜೀವನವನ್ನು ನಡೆಸುವ ಮತ್ತು ಎಲ್ಲವನ್ನು ಸಾಧ್ಯವಾಗಿಸುವ ತತ್ವ. ನೀವು ಅದರೊಂದಿಗೆ ಹೊಂದಿಕೊಂಡಿದ್ದೀರೋ ಅಥವ ಇಲ್ಲವೋ ಎಂಬುದಷ್ಟೇ ನಿಮಗಿರುವ ಆಯ್ಕೆ. ನೀವು ಸತ್ಯವನ್ನು ಕಂಡುಹಿಡಿಯಬೇಕಾಗಿಲ್ಲ.   ನೀವು ಸತ್ಯವನ್ನು ಅಧ್ಯಯನ ಮಾಡಬೇಕಾಗಿಲ್ಲ.  ನೀವದನ್ನು ಸ್ವರ್ಗದಿಂದ ಭೂಮಿಗೆ ತರಬೇಕಾಗಿಲ್ಲ.

ಒಂದು ಮರ ಬೆಳೆಯುತ್ತಿದೆ ಮತ್ತು ಅರಳುತ್ತಿದೆ ಎಂದರೆ ನಿಶ್ಚಿತವಾಗಿಯೂ  ಆ ಮರಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ಇಲ್ಲಿ ಲಭ್ಯವಿದೆ ಎಂದರ್ಥ- ಆದ್ದರಿಂದಲೇ ಅದು ಬದುಕಿದೆ. ನೀವಿಲ್ಲಿ ಇದ್ದೀರಿ ಎಂದರೆ, ಈ ಜೀವನ ನಡೆಯಲು ಬೇಕಾದ ಎಲ್ಲವೂ ಇಲ್ಲಿ ಲಭ್ಯವಿದೆ ಎಂದರ್ಥ. ಇಲ್ಲವಾದರೆ ನೀವಿಲ್ಲಿ ಇರಲು ಸಾಧ್ಯವಿಲ್ಲ.  ನೀವು ಈ ಶಕ್ತಿಗಳೊಂದಿಗೆ ಸಮರಸದಿಂದ ಇದ್ದೀರಾ ಅಥವಾ ನೀವು ಅವುಗಳ  ವಿರುದ್ದವಾಗಿದ್ದೀರಾ  ಎಂಬುದೇ ಈಗಿರುವ ಪ್ರಶ್ನೆ.

“ಒಹ್, ನಾನೇಕೆ ಜೀವನದ ಶಕ್ತಿಗಳ ವಿರುದ್ದವಾಗಿರಲಿ?” ಸರಿ, ಯಾವುದು ನೀವಲ್ಲವೋ ಅದನ್ನು ನೀವು ಎಂದುಕೊಂಡ ತಕ್ಷಣ, ನೀವು ಅದರ ವಿರುದ್ದವಾಗಿಬಿಡುತ್ತೀರಿ.  ನಿಮ್ಮನ್ನು ನೀವು ಧಾರ್ಮಿಕರು ಎಂದುಕೊಂಡಿರಬಹುದು, ಆದರೆ ನಿಜವಾಗಿಯೂ ಆಗಿರುವುದೇನೆಂದರೆ ನೀವು ಸಿಕ್ಕಿಹಾಕಿಕೊಂಡಿದ್ದೀರಿ ಅಷ್ಟೇ ; ನೀವು ಅಸ್ತಿತ್ವದ ನಾಟಕವನ್ನು ಮುಚ್ಚಿಟ್ಟು ಮಾನಸಿಕ ನಾಟಕವೊಂದನ್ನು ಸೃಷ್ಟಿಸುತ್ತಿದ್ದೀರಿ.  ನೀವು ಸೃಷ್ಟಿಕರ್ತನ ಸೃಷ್ಟಿಯನ್ನು ನೋಡುತ್ತಿಲ್ಲ, ಏಕೆಂದರೆ ನಿಮ್ಮದೇ ದಡ್ಡತನದ ಸೃಷ್ಟಿ ನಿಮ್ಮ ಮನಸ್ಸನ್ನು ಬ್ಯುಸಿಯಾಗಿಟ್ಟಿದೆ.

ಜ್ಞಾನೋದಯ - ಅಜ್ಞಾನದ ಒಂದು ಆಚರಣೆ 

“ನನಗೆ ಗೊತ್ತಿಲ್ಲ” ಎಂಬುದನ್ನು ತಿಳಿದಾಗ ಮಾತ್ರ ನೀವು ಸತ್ಯದ ಕಡೆಗೆ ಸಾಗುತ್ತೀರಿ.  ನಿಮಗೆ  ತಿಳಿದಿದೆ ಎಂದು ನೀವು ಭಾವಿಸಿಕೊಂಡರೆ, ನೀವು ಅಸತ್ಯದ ಕಡೆಗೆ ಸಾಗಲು ಪ್ರಾರಂಭಿಸುತ್ತೀರಿ - ಏಕೆಂದರೆ “ನನಗೆ ಗೊತ್ತು” ಎನ್ನುವುದು ಕೇವಲ ಒಂದು ಆಲೋಚನೆ ಅಷ್ಟೇ, “ನನಗೆ ಗೊತ್ತಿಲ್ಲ” ಎನ್ನುವುದು ಒಂದು ವಾಸ್ತವಾಂಶ, ಅದು ಸತ್ಯಸಂಗತಿಯಾಗಿದೆ.  ನೀವದನ್ನು ಬೇಗನೆ ತಿಳಿದಷ್ಟೂ ಒಳ್ಳೆಯದು.  ನಿಮಗೆ ಗೊತ್ತಿಲ್ಲ ಎನ್ನುವುದೇ ನಿಮ್ಮ ಜೀವನದ ಅತ್ಯಂತ ದೊಡ್ಡ ತಿಳುವಳಿಕೆಯಾಗಿದೆ.  “ನನಗೆ ಗೊತ್ತಿಲ್ಲ” ಎನ್ನುವುದು ಒಂದು ಬೃಹತ್ ಸಾಧ್ಯತೆ.  “ನನಗೆ ಗೊತ್ತಿಲ್ಲ” ಎನ್ನುವುದನ್ನು ನೀವು ತಿಳಿದುಕೊಂಡಾಗ ಮಾತ್ರ, ತಿಳಿದುಕೊಳ್ಳುವ ಹಂಬಲ ಮತ್ತು ಅರಸುವಿಕೆ ಮತ್ತು ತಿಳಿದುಕೊಳ್ಳುವ ಸಾಧ್ಯತೆ ನಿಜವಾಗುತ್ತದೆ.

ಈ ಸಂಸ್ಕೃತಿಯಲ್ಲಿ ನಾವು ಯಾವಾಗಲೂ ಅಜ್ಞಾನದೊಂದಿಗೆ ಗುರುತಿಸಿಕೊಳ್ಳುತ್ತೇವೆ ಏಕೆಂದರೆ ನಮ್ಮ ಜ್ಞಾನ ಬಹಳ ಚಿಕ್ಕದು - ನಮಗೆಷ್ಟು ತಿಳಿದಿದ್ದರೂ ಅದು ನಗಣ್ಯ - ಆದರೆ ನಮ್ಮ ಅಜ್ಞಾನ ಮಿತಿಯಿಲ್ಲದ್ದು. ಹಾಗಾಗಿ ನೀವು ಅಜ್ಞಾನದೊಂದಿಗೆ ಗುರುತಿಸಿಕೊಂಡರೆ, ನೀವು ಸಹ ಒಂದು ರೀತಿಯಲ್ಲಿ ಮಿತಿಯಿಲ್ಲದವರಾಗುತ್ತೀರಿ, ಏಕೆಂದರೆ ನೀವು ಯಾವುದರೊಂದಿಗೆ ಗುರುತಿಸಿಕೊಳ್ಳುತ್ತೀರೋ ಅದು ನಿಮ್ಮ ಗುಣವಾಗಿಬಿಡುತ್ತದೆ. ಒಂದು ರೀತಿಯಲ್ಲಿ, ಜ್ಞಾನೋದಯವೆನ್ನುವುದು ಒಂದು ಅಜ್ಞಾನದ ಆಚರಣೆಯಾಗಿದೆ, ಅದೊಂದು ಆನಂದಮಯ ಅಜ್ಞಾನ. ನೀವು ಪಾಂಡಿತ್ಯದಿಂದ ಗಲಿಬಿಲಿಗೊಂಡಿಲ್ಲ, ಹಾಗಾಗಿ ನೀವು ಎಲ್ಲವನ್ನು ಅದು ಇರುವಂತೆಯೇ ಕಾಣುತ್ತೀರಿ, ಅಷ್ಟೇ.  ನೀವು ಪಾಂಡಿತ್ಯದಿಂದ ಗಲಿಬಿಲಿಗೊಂಡಿದ್ದರೆ, ನೀವು ಯಾವುದನ್ನೂ ಅದು ಇರುವಂತೆಯೇ ನೋಡುವುದಿಲ್ಲ; ನೀವು ಎಲ್ಲದರ ಬಗ್ಗೆಯೂ ಪೂರ್ವಗ್ರಹೀತರಾಗಿರುತ್ತೀರಿ.

ಹಾಗಾಗಿ ಕಬೀರರು ಒಬ್ಬ ಜ್ಞಾನಿ ನೇಕಾರ, ಒಬ್ಬ ಅನುಭಾವಿ.  ಅನುಭಾವ ಎನ್ನುವುದು ಹಿಂದೆಂದೋ ಆಗಿಹೋದ ಒಬ್ಬ ವ್ಯಕ್ತಿಗೆ, ನೀವು ಓದುವ ಕೆಲವು ಪದ್ಯಗಳಿಗೆ ಸಂಭಂದಿಸಿದ್ದೆಂದು ಭಾವಿಸಿಕೊಳ್ಳಬಾರದು.  ಅನುಭಾವ ಎಂದರೆ ಪ್ರತಿದಿನವೂ ನೀವು ಜೀವನದ ಒಂದು ಹೊಸ ಕ್ಷೇತ್ರವನ್ನು ಪ್ರವೇಶಿಸುತ್ತಿರುತ್ತೀರಿ. ನಿಮಗೆ ಗೊತ್ತಿಲ್ಲದ ಏನೋ ಒಂದು ಹೊಸತು ಇಂದು ನಿಮ್ಮ ಅನುಭವಕ್ಕೆ ಬಂದಿದೆ.  ಅನುಭಾವ ಎಂದರೆ ಸಂಗ್ರಹಿಸಿದ ಮಾಹಿತಿಯ ರಾಶಿಯಲ್ಲ ; ಅನುಭಾವ ಎಂದರೆ ಅನ್ವೇಷಣೆ.  ಏನನ್ನಾದರೂ ನಂಬಿಕೊಂಡರೆ, ನೀವು ಏನನ್ನೂ ಅನ್ವೇಶಿಸುವುದಿಲ್ಲ.  ನಿಮಗೆ ಗೊತ್ತಿಲ್ಲ ಎಂಬುದನ್ನು ನೀವು ತಿಳಿದುಕೊಂಡಾಗ ಮಾತ್ರ ನೀವು ಪ್ರಾಮಾಣಿಕವಾಗಿ ಅನ್ವೇಷಿಸಬಹುದು.

ಸಂಪಾದಕರ ಟಿಪ್ಪಣಿ: ಇತರ ಅನುಭಾವಿಗಳ ಬಗ್ಗೆ ಸದ್ಗುರುಗಳ ವಿಚಾರವನ್ನು ಇನ್ನಷ್ಟು ಓದಿ