ಸದ್ಗುರು: ನಾನು ಆದಿಯೋಗಿ, ಶಿವನನ್ನು ಪದೇ ಪದೇ ಏಕೆ ಆಹ್ವಾನಿಸುತ್ತೇನೆ? ನನ್ನನ್ನು ಆಗಾಗ್ಗೆ ಕೇಳಲಾಗುವ ಪ್ರಶ್ನೆಯಿದು. ಅದಕ್ಕೆ ಉತ್ತರವು ಸರಳ. ನಾನು ದೈವವನ್ನು ಮಾನವರೂಪಕ್ಕೆ ತರಲು ಬಯಸುತ್ತಿದ್ದೇನೆ ಎಂದಲ್ಲ. ನಾನು ಯಾವುದೇ ಮೋಸಗೊಳಿಸುವ ಅಸಂಸ್ಕೃತ ಆರಾಧನೆಯ ಪದ್ಧತಿಯನ್ನು ಪರಿಚಯಿಸಲು ಬಯಸುತ್ತಿದ್ದೇನೆ ಎಂದಲ್ಲ. ನಾನು ಇಲ್ಲಿನ ಯಾವುದೇ ಸಂಸ್ಕೃತಿಯನ್ನು ಹೊರತರಲು ಬಯಸುತ್ತಿದ್ದೇನೆ ಎಂಬ ಕಾರಣವೂ ಅಲ್ಲ. ಅವನು ನಮ್ಮ ಕಾಲಕ್ಕೆ ಮುಖ್ಯವಾಗಿರುವುದರಿಂದ ಮಾತ್ರ ನಾನು ಅವನನ್ನು ಆಹ್ವಾನಿಸುತ್ತೇನೆ. ಅವನು ಮುಖ್ಯವಾಗಿದ್ದಾನೆ, ಏಕೆಂದರೆ ಮನುಷ್ಯನ ಜಾಗೃತಿಯನ್ನು ಮೇಲಕ್ಕೇರಿಸುವುದಕ್ಕಿಂತ ಹೆಚ್ಚು ಮಹತ್ವವಾದದ್ದು ಸದ್ಯದಲ್ಲಿ ಏನೂ ಇಲ್ಲ. ಇಂದು ನಮ್ಮ ಕೈಯಲ್ಲಿ ಎಂಥೆಂಥ ರೀತಿಯ ಸಾಧನ ಮತ್ತು ತಂತ್ರಜ್ಞಾನಗಳಿವೆ ಎಂದರೆ ಅವುಗಳಿಂದ ನಾವು ಈ ಜಗತ್ತನ್ನು ಸ್ವರ್ಗವನ್ನಾಗಿಸಬಹುದು ಅಥವಾ ಜೀವಂತ ನರಕವನ್ನಾಗಿಸಲೂಬಹುದು ಅಥವಾ ನಮ್ಮದೇ ಸಾಮರ್ಥ್ಯಗಳಿಂದಾಗಿ ಜಗತ್ತನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಲೂಬಹುದಾಗಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಾವು ಎಂಥಹ ಸ್ಥಿತಿಗೆ ತಲುಪಿದ್ದೇವೆಂದರೆ, ನಾವು ಮನುಷ್ಯರಲ್ಲಿನ ಜಾಗೃತಿಯನ್ನು ಮೇಲ್ಮಟ್ಟಕ್ಕೆ ಏರಿಸದಿದ್ದಲ್ಲಿ, ನಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವು ನಮ್ಮ ವಿರುದ್ಧವೇ ಕೆಲಸ ಮಾಡಲಿದೆ. ಸ್ವಯಂ-ವಿಧ್ವಂಸದತ್ತ ನಾವು ಬಹಳ ವೇಗವಾಗಿ ಓಡುತ್ತಿದ್ದೇವೆ. ನಾವಾಗಿ ನಾವೇ ಈ ಅವ್ಯವಸ್ಥೆಯೊಳಗೆ ಹೇಗೆ ಸೇರಿಕೊಂಡೆವು? ನಾವು ನಮ್ಮ ಬುದ್ಧಿಯನ್ನು ನಮ್ಮ ಅಂತರಂಗದ ವೆಚ್ಚದಲ್ಲಿ ಬೆಳೆಸಿಕೊಂಡಿದ್ದರಿಂದ ನಾವು ಈ ಸ್ಥಿತಿಗೆ ತಲುಪಿದ್ದೇವೆ. https://www.youtube.com/watch?v=pDLW0NC49Dg

ಚಾಕುವಿನಿಂದ ಹೊಲಿಗೆ 

ಪ್ರಸ್ತುತದಲ್ಲಿ, ಬುದ್ಧಿಶಕ್ತಿಯ ಒಂದೇ ಸಾಮರ್ಥ್ಯವನ್ನು ನಾವು ಬಳಸುತ್ತಿದ್ದೇವೆ ಮತ್ತು ಅದನ್ನೇ ಎಲ್ಲವೆಂದು ತಪ್ಪುತಿಳಿದಿದ್ದೇವೆ. ನಮ್ಮ ಮೆದುಳು ಅದಕ್ಕಿಂತ ಬಹಳಷ್ಟು ಹೆಚ್ಚಿನದ್ದೆಂಬುದನ್ನು ನಾವು ಮರೆತಿದ್ದೇವೆ. ಬುದ್ಧಿಶಕ್ತಿಯು ಒಂದು ಪ್ರಚಂಡವಾದ ಸಾಧನ. ಆದರೆ, ಪ್ರತ್ಯೇಕತೆಯಲ್ಲಿ, ಅದೊಂದು ವಿಪತ್ತು, ಏಕೆಂದರೆ ಮೆದುಳಿನ ಬೇರೆ ಆಯಾಮಗಳು ವಿಷಯಗಳನ್ನು ವರ್ಧಿಸಿದರೆ, ಬುದ್ಧಿಶಕ್ತಿಯು ಕೇವಲ ವಿಭಜಿಸುತ್ತದೆ. ಅದು ಸಲೀಸಾಗಿ ನಿಮ್ಮನ್ನು ಯಾವುದರ ಜೊತೆಯೂ ಸಹ ಸಂಪೂರ್ಣವಾಗಿರಲು ಬಿಡುವುದಿಲ್ಲ. ಆದರೆ ನಮ್ಮ ಜಾಗೃತಾವಸ್ಥೆಯ ಸ್ವಭಾವವು ಒಳಗೂಡಿಸಿಕೊಳ್ಳುವುದಾಗಿದೆ. ಜಾಗೃತಾವಸ್ಥೆ ಎಂದರೆ ವಿಶ್ವವನ್ನು ದೊಡ್ಡ ರೀತಿಯಲ್ಲಿ ಆಲಂಗಿಸಿಕೊಳ್ಳುವುದು. ಅಧಿಕಾರವನ್ನು ಹೊಂದಿರುವಂತಹ ಬುದ್ಧಿಶಕ್ತಿಗೆ ಈ ಅನುಭವವಾಗದಿದ್ದರೆ, ಆ ಒಂದು ಬುದ್ಧಿಶಕ್ತಿಯು ಜಗತ್ತನ್ನೇ ನಾಶಪಡಿಸುತ್ತದೆ. ನಮ್ಮಲ್ಲಿ ಜನಗಳು ವಿಪರೀತ ಬುದ್ಧಿಯ ಲಕ್ಷಣಗಳನ್ನು ತೋರಿದರೆ, ಅವರು ವಿನಾಶದ ಕಡೆಗೆ ಸಾಗುತ್ತಿದ್ದಾರೆ ಎಂದು ಹೇಳುವ ಹಲವಾರು ಗಾದೆಗಳಿವೆ. ಪ್ರತ್ಯೇಕತೆಯಲ್ಲಿ, ಬುದ್ಧಿಶಕ್ತಿಯು ವಿಭಜಿಸುತ್ತದೆ: ಅದು ತನ್ನನ್ನು ತಾನೆ ಹಲವಾರು ಭಾಗಗಳಾಗಿ ಬೇರ್ಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ! ಇಂದಿನ ಜಗತ್ತಿನಲ್ಲಿ ಏಕತೆಯನ್ನು ಸಾಧಿಸಲು ಬಹಳಷ್ಟು ಪ್ರಯತ್ನ ನಡೆಯುತ್ತಿದೆ. ಆದರೆ ನಾವು ಎಲ್ಲವನ್ನೂ ಸಹ ಬುದ್ಧಿಶಕ್ತಿಯಿಂದ ಒಂದು ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದು ಹೇಗೆಂದರೆ, ನೀವು ಜಗತ್ತನ್ನು ಒಂದು ಚಾಕುವಿನಿಂದ ಸೇರಿಸಿ ಹೊಲಿಗೆ ಹಾಕಲು ಯತ್ನಿಸುತ್ತಿದ್ದೀರ – ಅದು ಎಲ್ಲವನ್ನೂ ಚೂರುಚೂರಾಗಿಸುತ್ತದೆ.

ಕಾಣೆಯಾಗಿರುವ ಅಂಶ

ಇಂದಿನ ಜಗತ್ತಿನಲ್ಲಿ ಕಾಣೆಯಾಗಿರುವ ಮಹತ್ವವಾದ ಅಂಶವೆಂದರೆ, ಯೋಗದಲ್ಲಿ ಚಿತ್ತವೆಂದು ಕರೆಯಲಾಗುವ ಮೆದುಳಿನ ಅತ್ಯಂತ ಆಳವಾದ ಆಯಾಮ. ಅದು ಸ್ಮೃತಿಕೋಶದಿಂದ ಕೆಡಿಸದೇ ಇರುವಂತಹ, ನಿಮ್ಮನ್ನು ಸೃಷ್ಟಿಯ ಮೂಲಕ್ಕೆ ಬೆಸೆಯುವಂತಹ ಬುದ್ಧಿವಂತಿಕೆ. ಚಿತ್ತವೆಂದರೆ ಜಾಗೃತಿ, ಅಸ್ತಿತ್ವದ ಜಾಣ್ಮೆ, ಜೀವಂತ ಮನಸ್ಸಿನಲ್ಲಿ ಬ್ರಹ್ಮಾಂಡವೇ ಇದ್ದಂತೆ. ಒಮ್ಮೆ ನೀವು ನಿಮ್ಮನ್ನು ನಿಮ್ಮ ಅನುವಂಶಿಕ ಮತ್ತು ಕರ್ಮದ softwareನ ಪ್ರಚೋದನೆಗಳಿಂದ ಹಾಗೂ ನಿಮ್ಮ ಸ್ವಹಿತಾಸಕ್ತಿ ಮತ್ತು ನಿಮ್ಮ ಬುದ್ಧಿವಂತಿಕೆಯ ಗುರುತಿಸುವಿಕೆಗಳಿಂದ ಅಂತರವನ್ನು ಕಾಯ್ದುಕೊಂಡರೆ, ನೀವು ಚಿತ್ತದೊಂದಿಗೆ, ಅಂದರೆ, ಮುಚ್ಚುಮರೆಯಿಲ್ಲದ ಒಂದು ಜಾಗೃತಾವಸ್ಥೆಯ ಸಂಪರ್ಕದಲ್ಲಿದ್ದೀರಿ ಎಂದು ಯೋಗ ಸಂಪ್ರದಾಯದಲ್ಲಿ ಹೇಳಲಾಗುತ್ತದೆ. ಈಗ, ನಿಮ್ಮ ಬದುಕು ಅದು ಯಾವಾಗಲೂ ಉದ್ದೇಶಿಸಲಾದ ರೀತಿಗೆ ಮರಳುತ್ತದೆ – ಪ್ರಖರವಾಗಿ ಜೀವಂತ, ನೂತನ, ನಿಷ್ಕಲ್ಮಷ. ನಿಮ್ಮನ್ನು ಉಪಚರಿಸುವುದನ್ನು ಬಿಟ್ಟು ದೈವಕ್ಕೂ ಯಾವುದೇ ಆಯ್ಕೆಗಳಿರುವುದಿಲ್ಲ. ಮೊದಲ ಯೋಗಿಯಾದ ಆದಿಯೋಗಿಯು, ಈ ಒಂದು ಸಂದರ್ಭದಲ್ಲಿ ಅತಿ ಹೆಚ್ಚು ಮಹತ್ವವುಳ್ಳವನಾಗುತ್ತಾನೆ ಏಕೆಂದರೆ ಅವನಷ್ಟು ಅನ್ವೇಷಣೆಯನ್ನು ಮಾಡಿದವರು ಮತ್ತು ತಿಳಿಯಪಡಿಸಿದವರು ಈ ಭೂಮಿಯ ಮೇಲೆ ಯಾರೂ ಇಲ್ಲ. ಮನುಷ್ಯನ ಸ್ವಯಂ-ತಿಳುವಳಿಕೆಗಾಗಿ ಬಹಳಷ್ಟು ವಿಸ್ತಾರವಾದ ಮತ್ತು ನುರಿತ ವ್ಯವಸ್ಥೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ, ಮನುಷ್ಯರು ಅನ್ವೇಷಿಸಬಹುದಾದ ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ಬೆಳೆಯಲು 112 ವಿಧಾನಗಳನ್ನು ನೀಡಿರುವ ಪ್ರಕಾರದಲ್ಲಿ – ಆದಿಯೋಗಿಯ ಕೊಡುಗೆಯನ್ನು ಮೀರಿಸುವವರು ಯಾರೂ ಇಲ್ಲ.

ಜ್ಞಾನವಲ್ಲ, ಅರಿವನ್ನು ಹೊಂದುವುದು

ಆದಿಯೋಗಿಯು ಜೀವನವನ್ನು ಅದರೊಂದಿಗೆ ಒಂದಾಗುವ ಮೂಲಕ ತಿಳಿದಿದ್ದನು – ಮೆದುಳಿನ ಮುಖಾಂತರವಲ್ಲ, ಆದರೆ ಅನುಭವದ ಮೂಲಕ. ಒಬ್ಬ ಯೋಗಿಯೆಂದರೆ ಇಡೀ ವಿಶ್ವದೊಂದಿಗೆ ಐಕ್ಯತೆಯನ್ನು ಅನುಭವಿಸಿದವನು. ಆದಿಯೋಗಿಯು ಅರಿವನ್ನು ಪ್ರತಿಬಿಂಬಿಸುತ್ತಾನೆ, ಜ್ಞಾನವನ್ನಲ್ಲ. ಜ್ಞಾನವು ಬೌದ್ಧಿಕವಾದ ಶೇಖರಣೆ. ಮತ್ತೊಂದೆಡೆ, ಅರಿವೆನ್ನುವುದು ಬೌದ್ಧಿಕವೂ ಅಲ್ಲ ಶೇಖರಣೆಯೂ ಅಲ್ಲ. ನೀವೊಂದು ಹೂವಿನ ಗಿಡವನ್ನು ಹಾದುಹೋದಾಗ ನಿಮಗೆ ಅದರ ಸುಗಂಧದ chemistryಯು ತಿಳಿದಿದ್ದರೆ,  ಅದು ಜ್ಞಾನದ ಒಂದು ಆಯಾಮ. ಆ ಸುಗಂಧದ ಅನುಭವ ಮತ್ತು ಆನಂದ ನಿಮಗೆ ಗೊತ್ತಿದ್ದರೆ, ಅದು ಜ್ಞಾನದ ಮತ್ತೊಂದು ಆಯಾಮ. ಆದರೆ ನೀವು ಸುಗಂಧವೇ ಆಗಿಹೋದರೆ, ಅದು ಅರಿವು. ಇಲ್ಲಿ, ಈಗ, ನೂರಕ್ಕೆ ನೂರರಷ್ಟು ಅನುಭವಕ್ಕೆ ಬರುವಂತಹ, ಜೀವಂತವಾದ ಅರಿವು. ಇದನ್ನೇ ಆದಿಯೋಗಿಯು ಪ್ರತಿಬಿಂಬಿಸುವುದು. ಇದೇ ಕಾರಣಕ್ಕಾಗಿ ಅವನನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನಗಳ ಹೊರತಾಗಿಯೂ ಯಾವುದೇ ಗ್ರಂಥ, ತತ್ವ ಅಥವಾ ಸಿದ್ಧಾಂತಗಳಿಂದ ಅವನನ್ನು ಕಟ್ಟಿಹಾಕುವುದು ಸಾಧ್ಯವಿಲ್ಲ. ಆದಿಯೋಗಿಯು ಅನ್ವೇಷಿಸಿದಂತಹ ಆಧ್ಯಾತ್ಮಿಕ ಪ್ರಕ್ರಿಯೆಯ ತಳಹದಿ ಎಂದರೆ, ಭೌತಿಕ ಪ್ರಕೃತಿಯ ಆವರ್ತದ ನಿಯಮಗಳನ್ನು ಮುರಿದು ಹೊರಬರುವುದು. ಆ ಅರ್ಥದಲ್ಲಿ, ಯಾರು ಗಡಿಗಳನ್ನು ಮೀರಲು ಬಯಸುತ್ತಾರೋ ಅಂಥವರಿಗೆ ಯೋಗವು ಒಂದು ವಿಜ್ಞಾನ. ಅದನ್ನೇ ಆದಿಯೋಗಿಯು ಪ್ರತಿಬಿಂಬಿಸುತ್ತಾನೆ: ಅಂತಿಮ ಗಡಿಪಾರು. 

Editor’s Note: Mahashivratri, a night of tremendous spiritual possibilities, will be celebrated at Isha Yoga Center on February 13. Visit the Mahashivratri webpage for info on the many ways you can participate. A version of this article was originally published in gfiles.